Saturday, March 21, 2009

ತನಗೆ ತಾನೇ ಹೇಳಿಕೊಂಡ ಕತೆಗಳು

ಪಿ. ಲಂಕೇಶ್ ಕೊನೆಯ ಕತೆಗಳ ಒಂದು ಸಾಂಸ್ಕೃತಿಕ ಓದು

Action is common to both reason and imagination. And in art each ougut to borrow from other. Technique is imagination aspiring to reason. Form is reason aspiring to imagination.
- Edward Said

ಈ ಸಂಕಲನದ ಕತೆಗಳ ಬಗ್ಗೆ ಮೊದಲಿಗೇ ಹೇಳಬೇಕಾದ ಮಾತೆಂದರೆ ಇದೆಲ್ಲವೂ ಲೇಖಕ ತನಗೆ ತಾನೇ ಹೇಳಿಕೊಂಡ, ಇನ್ನೂ ಹೇಳಿಕೊಳ್ಳುತ್ತಿರುವಂತೆ ಅನಿಸುವ ಕತೆಗಳು. ಸೃಜನಶೀಲ ಬರಹಗಾರನ ಜೀವನದಲ್ಲಿ ಇದೊಂದು ಅಪೂರ್ವ ಹಂತ. ಓದುಗರಿಗೆ, ಲೋಕಕ್ಕೆ, ಸಮಕಾಲೀನರಿಗೆ ಬರೆಯುವುದು ಎಂದಿಗೂ ಇದ್ದದ್ದೇ. ಕತೆಗಾರ ಕತೆಗಳನ್ನು ತನಗೆ ತಾನೇ ಹೇಳಿಕೊಳ್ಳುವುದಕ್ಕೆ ಇರುವ ಕಾರಣಗಳು ಪ್ರತಿಯೊಬ್ಬ ಲೇಖಕನ ಸಂದರ್ಭದಲ್ಲೂ ಭಿನ್ನವಾದ್ದು. ಈ ಕಾರಣಗಳ ಬಗ್ಗೆ ನಾವು ಊಹಿಸಬಹುದು ಮಾತ್ರ. ಹೀಗೆ ಊಹೆ ಮಾಡುವುದನ್ನು ಬಿಟ್ಟು ಇಲ್ಲಿಯ ಕತೆಗಳ ವಿಶಿಷ್ಟತೆಯನ್ನು ಗಮನಿಸಿದರೆ ಲಂಕೇಶರ ಬರವಣಿಗೆಯ ಬಗ್ಗೆ, ಕನ್ನಡ ಸಂಸ್ಕೃತಿಯ ಬಗ್ಗೆ ನಮಗೆ ತಿಳಿಯುವ ಸಂಗತಿಗಳಿಂದಾಗಿ, ಕತೆಗಾರ ತನಗೆ ತಾನೇ ಕತೆ ಹೇಳಿಕೊಳ್ಳುತ್ತಿರುವುದಕ್ಕೆ ಸತ್ಯಕ್ಕೆ ಹತ್ತಿರವಾದ ಕೆಲವು ಕಾರಣಗಳನ್ನಾದರೂ, ತಿಳಿಯಲು ನೆರವಾಗುತ್ತದೆಂದು ನನ್ನ ನಂಬಿಕೆ.

ಲೋಕದ ಕನ್ನಡಿಯಲ್ಲಿ ತನ್ನನ್ನು ಕಾಣುವುದು - ಪರಿಶೀಲಿಸಿಕೊಳ್ಳುವುದು, ತನ್ನ ಕನ್ನಡಿಯಲ್ಲಿ ಲೋಕವನ್ನು ಕಾಣುವುದು - ಪರಿಶೀಲಿಸುವುದು; ಈ ಎರಡು ರೀತಿಯ ನೋಡುವಿಕೆಗಳು ಬೇರೆಬೇರೆಯಲ್ಲ ಎನ್ನುವಂತೆ ಇಲ್ಲಿಯ ಕತೆಗಳಿವೆ. ಇಂತಹ ನೋಡುವಿಕೆ ಒಂದು ರೀತಿಯ ತಹತಹವನ್ನು ಒಳಗುದಿಯನ್ನು ಬರವಣಿಗೆಗೆ ನೀಡುತ್ತದೆ. ಈ ತಹತಹ ಒಳಗುದಿಯ ಅನುಭವ ಯಾವ ಸ್ಥರದ ಓದುಗನಿಗಾದರೂ ತಕ್ಷಣವೆ ತಟ್ಟುತ್ತದೆ. ತಕ್ಷಣವೇ ನೆನಪಿಗೆ ಬರುವುದು ಮಾಸ್ತಿಯವರ ಕೊನೆಯ ಕತೆ `ಮಾಯಣ್ಣನ ಕನ್ನಡಿ'. ಆ ಕತೆಯಲ್ಲೂ ಕೂಡ ಲೇಖಕ ಮಾತ್ರವಲ್ಲ ಮನುಷ್ಯ ಕೂಡ ಎರಡೂ ಕನ್ನಡಿಗಳಲ್ಲಿ ಕಾಣುವುದನ್ನು ಒಟ್ಟಿಗೇ ನೋಡಬೇಕೆಂಬ ಸೂಚನೆಯಿದೆ. ಸೂಚಿಸುವ ಕ್ರಮ ಮಾತ್ರ ಉದ್ವಿಗ್ನತೆಯದಲ್ಲ. ವಿಷಾದ ಮತ್ತು ಅನಿವಾರ್ಯತೆಯ ಸ್ಥಾಯಿಯಲ್ಲಿ ಮಾಸ್ತಿ ಕತೆಯನ್ನು ನಡೆಸುತ್ತಾರೆ. ಲಂಕೇಶರ ಬರವಣಿಗೆಯಲ್ಲಿ ಈ ರೀತಿಯ ನೋಡುವಿಕೆ ತನಗೇ ವಿಶಿಷ್ಟವಾದದ್ದು ಎಂದು ಒತ್ತಾಯದಿಂದ ಸೂಚಿಸುವಷ್ಟು `ಸ್ವಪ್ರಜ್ಞೆ' ಮತ್ತು ತೀವ್ರತೆಯಿದ್ದರೆ ಮಾಸ್ತಿಯವರ ಬರವಣಿಗೆಯಲ್ಲಿ ಈ ಸೂಚನೆಯೆಂಬುದು ಲೋಕವು ಇರುವ, ಇರಬೇಕಾದ ರೀತಿಯ ಮನೆವಾರ್ತೆಯ ಧಾಟಿಯಲ್ಲಿ ಪ್ರಕಟವಾಗುತ್ತದೆ. ನನ್ನ ಒಲವು ಮತ್ತು ಆಯ್ಕೆ ಮಾಸ್ತಿಯವರ ಕ್ರಮದ ಪರವಾಗಿ ಇದ್ದರೂ ಲಂಕೇಶರ ಬರವಣಿಗೆಯ ಕ್ರಮವನ್ನು ಪರಿಶೀಲಿಸುವುದು ನಮ್ಮ ಸಾಂಸ್ಕೃತಿಕ ಸನ್ನಿವೇಶ ಮೂಡಿಸುವ ಜವಾಬ್ದಾರಿ. ಲಂಕೇಶರ ಕತೆಗಳ ಸದ್ಯತನ ಇಂತಹ ಒತ್ತಾಯವನ್ನು ಓದುಗರ ಮೇಲೆ ಹಾಕುತ್ತದೆ.



`ಡಿಸೋಜಾನ ಊವಿನ ವೃತ್ತಿ' ಮತ್ತು `ಒಂದು ಸಂಬಂಧದ ದಾಖಲೆ' ಈ ಎರಡೂ ಕತೆಗಳನ್ನು ವಿವರವಾಗಿ ಪರಿಶೀಲಿಸಬಹುದು.

ಡಿಸೋಜಾ ಕತೆಯ ಶೇಷಗಿರಿ ವೈಯಕ್ತಿಕವಾಗಿ ಒಳ್ಳೆಯವನೇ. ಶೇಷಗಿರಿಯ ಸಲಹೆಗಳನ್ನು ಒಪ್ಪುವುದರಿಂದ ಡಿಸೋಜಾಗು ಲಾಭವಿದೆ. ಆದರೆ ಇದರಿಂದಾಗಿ ಡಿಸೋಜಾನ ವ್ಯಕ್ತಿತ್ವ ಪ್ರಕಟವಾಗಲಾರದು, ಅರಳಲಾರದು. ಆತ್ಮವಿಶ್ವಾಸ ತುಂಬಲಾರದು. ಶೇಷಗಿರಿಯ ಮೊದಲ ಸಲಹೆ - ಆರೆಸೆಸ್ ತಂಡದವರಿಗೆ ವ್ಯಾಯಾಮ ಹೇಳಿಕೊಡುವುದನ್ನು ಡಿಸೋಜಾ ನೇರವಾಗಿಯೇ ಒಪ್ಪುವುದಿಲ್ಲ. ಡಿಸೋಜಾ ಕ್ರಿಶ್ಚಿಯನ್ ಆದದ್ದರಿಂದ ಹಿಂದೂ ಜಾತಿಗಳ ಸಾಂಪ್ರದಾಯಿಕ ವೃತ್ತಿಗಳ ಬಂಧನವೂ ಆತನಿಗಿಲ್ಲ. ಹೂವಿನ ಮಾರಾಟವನ್ನು ಆತ ನಾಗರೀಕತೆಯ, ಆಧುನಿಕ ಪರಿಭಾಷೆ, ಲಯದಲ್ಲಿ ಮಾಡಲು ಸಿದ್ಧನಿದ್ದಾನೆ, ಉತ್ಸಾಹದಿಂದ್ದಾನೆ. ಸಮಾಜ, ಜನ ಮಾತ್ರ ಹೂ ಮಾರಾಟದ ವೃತ್ತಿಯನ್ನು ಡಿಸೋಜಾನ ಆಧುನಿಕತೆಯ ಪರಿಭಾಷೆಯಲ್ಲಿ ಪರಿಭಾವಿಸಲಾರರು. ಡಿಸೋಜಾನ ಮಾರಾಟದ ಶೈಲಿ, ಪರಿಭಾಷೆ ಸಾರ್ವಜನಿಕರಿಗೆ ಹೇಗೆ ಗೇಲಿಯ ವಸ್ತುವೋ, ಡಿಸೋಜಾಗೆ ಒಳ್ಳೆಯದನ್ನು ಬಯಸುವ ಶೇಷಗಿರಿಗೆ ಕೂಡ ಕುತೂಹಲದ ವಸ್ತುವೇ. ಡಿಸೋಜಾ ಎರಡೂ ರೀತಿಯ ಪ್ರತಿಕ್ರಿಯೆಗಳಿಂದಲೂ ಕಂಗಾಲು. ಶೇಷಗಿರಿಯ ಸೂಚನೆ ಮಾತ್ರ ಜಾತಿಪದ್ಧತಿಗೆ ತಕ್ಕ ಹಾಗೆಯೇ ಇದೆ. ಈ ಸೂಚನೆ ತಕ್ಷಣದ ಹುಮ್ಮಸ್ಸಿಗೆ ಕಾರಣವಾದರೂ ಡಿಸೋಜಾಗೆ ಯಾವುದೋ ವಿಚಿತ್ರ ಯಂತ್ರಕ್ಕೆ ಸಿಕ್ಕಿಹಾಕಿಕೊಂಡ ನೋವು ಮೂಡುತ್ತದೆ.

ಶೇಷಗಿರಿಯ ಗ್ರಹಿಕೆಯಲ್ಲಿರುವ ಮಿತಿಗಳನ್ನು ಈ ಕತೆ ವಿಶೇಷವಾದ ವ್ಯಂಗ್ಯವಿಲ್ಲದೆ ನಿರ್ಲಿಪ್ತ ಧಾಟಿಯಲ್ಲಿ ತಣ್ಣಗೆ ಹೇಳಲು ಪ್ರಯತ್ನಿಸುತ್ತದೆ ಎನ್ನುವುದಷ್ಟೇ ಈ ಕತೆಯ ವಿಶೇಷವಲ್ಲ. ದಲಿತರು, ಹಿಂದುಳಿದವರು ಜಾತಿಪದ್ಧತಿಗೆ ಸಂಬಂಧಿಸದ ವೃತ್ತಿಗಳನ್ನು ಯಾವ ಶೈಲಿಯಲ್ಲಿ, ಯಾವ ಪರಿಭಾಷೆ ಲಯದಲ್ಲಿ ಮಾಡಿದರೆ ಸಮಾಜವು ಅದನ್ನು ಒಪ್ಪಿಕೊಳ್ಳುತ್ತದೆ, ದಲಿತರು `ದಲಿತತನ'ದಿಂದ ಯಾವಾಗ ಸಮಾಜದ ಕಣ್ಣಲ್ಲಿ ಪಲ್ಲಟಗೊಳ್ಳುತ್ತಾರೆ, ಪಲ್ಲಟಗೊಳ್ಳಬೇಕು ಎಂಬ ಸಂದಿಗ್ಧದ ಕಡೆ ಕತೆ ನಮ್ಮ ಗಮನ ಸೆಳೆಯುತ್ತದೆ. ಕಲ್ಕತ್ತದ ಬಾಟಾ ಕಂಪನಿಗೆ ನಾನು ಹೋಗಿದ್ದಾಗ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ಮೇಲ್ವಿಚಾರಕರು ಮಾತ್ರವಲ್ಲ, ಚರ್ಮದ processing ಮುಂತಾದ ಕೆಲಸಗಳಲ್ಲೂ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿಯ ಹಿಂದೂಗಳು ನಿರತರಾಗಿದ್ದರು. ಹೀಗೆ ಮಾಡಿಯೂ ಕೂಡ ಅವರೆಲ್ಲ `ತಮ್ಮತನ'ದಿಂದ ಮನಸ್ಸಿನೊಳಗಡೆ ಪಲ್ಲಟಗೊಳ್ಳದೇ ಹೋಗಿರಬಹುದು. ಹಾಗೆ ಪಲ್ಲಟಗೊಳ್ಳಬೇಕೆಂಬ ಒತ್ತಾಯವನ್ನು ಕೂಡ ಸಮಾಜ ಹೇರದಿರಬಹುದು. ದಲಿತರು ಇದುವರೆಗೆ ಮುಂದುವರೆದ ವರ್ಗದವರು ಮಾಡುತ್ತಿದ್ದ ವೃತ್ತಿಗಳನ್ನು, ಹಿಂದಿನ ಶೈಲಿ, ಪರಿಭಾಷೆಯಲ್ಲಿ ಮಾತ್ರ ಮಾಡಿದಾಗಲೇ, ಸಮಾಜವು ಅವರನ್ನು `ಯಶಸ್ವಿ'ಯೆಂದು ಭಾವಿಸಬಹುದು. ಹಾಗಾದಾಗ ಅವರ `ದಲಿತತನ'ಕ್ಕೆ ಏನಾಗುತ್ತದೆ, ಏನಾಗಬೇಕು? ದಲಿತರಿಗೆ ಆಗಮಶಾಸ್ತ್ರದಲ್ಲಿ ತರಬೇತಿ ನೀಡಿ ಪೂಜಾರಿಗಳಾಗಿ ನೇಮಿಸಬೇಕೆಂಬ ಸರಕಾರದ ಯೋಜನೆಗಳೇ ಇವೆಯಲ್ಲ. ದಲಿತರಿಗೆ ಉದ್ಯೋಗಾವಕಾಶಗಳ, ಜೀವನಾವಕಾಶಗಳ ವಿಸ್ತರಣೆಯನ್ನು ಮಾತ್ರವೇ ಕುರಿತು ಯೋಚಿಸುವುದಿದ್ದರೆ ಈ ಕತೆಯ ಸಂದಿಗ್ಧಗಳು ಮುಖ್ಯವಲ್ಲ. ಇಂತಹ ಸನ್ನಿವೇಶವನ್ನು ಸಮಾಜಶಾಸ್ತ್ರಜ್ಞರು ಚರಿತ್ರಕಾರರು ಗಮನಿಸುವ ರೀತಿಯೇ ಬೇರೆ. `ಸಂವಾದ' ಮಾಸಿಕದಲ್ಲಿ ಪ್ರಕಟವಾದ ಚಂದ್ರಭಾನ್ ಪ್ರಸಾದ್‌ರ `ದಲಿತ್ ಡೈರಿ' ಯ ವಿಚಾರಗಳನ್ನು ಈ ಕತೆಯ ನಿಲುವು, ದಿಟ್ಟತನಗಳೊಂದಿಗೆ ಹೋಲಿಸಿ ನೋಡಬಹುದು. ಹೊಸ ಸನ್ನಿವೇಶದ ಸಂಕೀರ್ಣತೆಯನ್ನು ಚಂದ್ರಪ್ರಸಾದ್ ಗಮನಿಸುತ್ತಾರೆ. ಗಮನಿಸುವ ಸ್ತರ ಮಾತ್ರ ಬೇರೆ. ಆಗಸ್ಟ್ ೨೦೦೮ರ ಸಂಚಿಕೆಯಲ್ಲಿ ಬರೆದ ಈ ಮಾತುಗಳು ಈ ಕತೆಯ ಸಂದರ್ಭದಲ್ಲಿ ಗಮನಿಸಬೇಕಾದ್ದು. `ಎರಡು ಕಾರಣಗಳಿಗಾಗಿ ಈಗ ಸಮಯ ದಲಿತರ ಪರವಾಗಿದೆ. ಮೊದಲನೆಯದಾಗಿ ಅಭೂತಪೂರ್ವವಾದ ಆರ್ಥಿಕ ವಿಸ್ತರಣೆಯ ಪರಿಣಾಮವಾಗಿ ಜಾತಿಯ ಹಂಗಿಲ್ಲದ ಸಾವಿರಾರು ವೃತ್ತಿಗಳು ಅಸ್ತಿತ್ವಕ್ಕೆ ಬರುತ್ತಿವೆ. ಎರಡನೆಯದಾಗಿ ದಲಿತರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಗಣನೀಯವಾಗಿ ಆಸ್ತಿಯ ಒಡೆತನ ಇಲ್ಲದಿರುವುದರಿಂದ ನಗರ ಪ್ರದೇಶಗಳಿಗೆ ಅವರು ಸುಲಭವಾಗಿ ವಲಸೆ ಬರಬಹುದಾಗಿದೆ.' (ಸಂವಾದ, ಆಗಸ್ಟ್ ೨೦೦೮, ಪುಟ ೪೬) ಈ ವಿಶ್ಲೇಷಣೆಯ ಭರದಲ್ಲಿ ನಾವು ಮರೆಯಬಾರದ ಇನ್ನೂ ಒಂದು ಸಂಗತಿಯಿದೆ. ಮನುಷ್ಯನ ಶ್ರಮವನ್ನು ಬೇಡುವ, ಒಪ್ಪಿಕೊಳ್ಳುವ ಎಲ್ಲ ರೀತಿಯ ವೃತ್ತಿಗಳಿಗೂ ತನ್ನದೇ ಆದ ಒಂದು ಸೌಂದರ್ಯ, ಘನತೆ ಇದೆ. ಈ ಸೌಂದರ್ಯ, ಘನತೆ, ಜಾತಿಪದ್ಧತಿ ಮತ್ತು ಸಂಸ್ಕೃತಿ ನಿರ್ದಿಷ್ಟತೆಯನ್ನು ಮೀರಿದ್ದು ಕೂಡ ಆಗಿರುತ್ತದೆ. ಸದ್ಯದ ವಾತಾವರಣದ ತಹತಹದಲ್ಲಿ ಇದನ್ನು ಗಮನಿಸುವ ವ್ಯವಧಾನ ನಮಗಿಲ್ಲದೆ ಇರಬಹುದು.

`ಒಂದು ಸಂಬಂಧದ ದಾಖಲೆ' ಇನ್ನೊಂದು ರೀತಿಯ ಸಾಂಸ್ಕೃತಿಕ ಸಂದಿಗ್ಧವನ್ನು ಇನ್ನೂ ಸಂಕೀರ್ಣ ನೆಲೆಗಳಲ್ಲಿ ಪರಿಶೀಲಿಸುತ್ತದೆ. ಕೆಳವರ್ಗದ ಜನರ ಒಡನಾಟವನ್ನು, ಜೀವನಶೈಲಿಯನ್ನು, ಅವರ ಕತೆಗಳನ್ನು, ಅವರು ಹೇಳುವ ಕತೆಗಳನ್ನು ಮೇಲುವರ್ಗದವರು ತಮ್ಮ Psychological ಮತ್ತು Moral fillingಗಾಗಿ ಉಪಯೋಗಿಸಿಕೊಳ್ಳುವ ಸೂಕ್ಷ್ಮ ದುರಂತವನ್ನು ಮತ್ತು ಈ ರೀತಿಯ `ತುಂಬಿಕೊಳ್ಳುವಿಕೆ'ಯನ್ನು ಕೆಳವರ್ಗದವರು ಹಿಂತಿರುಗಿಸಿದಾಗ ಮೇಲುವರ್ಗದವರಲ್ಲಿ ಮೂಡುವ ಕಂಗಾಲುತನವನ್ನು ಈ ಕತೆ ಶೋಧಿಸುತ್ತದೆ. ಈ ತುಂಬಿಕೊಳ್ಳುವಿಕೆ ನಮ್ಮ ಸಾಮಾಜಿಕ ಸನ್ನಿವೇಶದ ಬೇರೆ ಬೇರೆ ಅವಸ್ಥೆಗಳಲ್ಲಿ ಯಾವ ರೀತಿ ನಡೆಯುತ್ತದೆ ಎಂಬುದರ ದಾಖಲೆ ಕೂಡ ಇಲ್ಲಿದೆ. ಮೊದಲನೆಯ ಪೀಳಿಗೆಯಲ್ಲಿ ಕೂಡ ಅನುಚರನಂತೆ ಕಾಣುವ ಕರಿಯಣ್ಣನ ತಂದೆ ನಿರೂಪಕನ ತಂದೆಗೆ ಆತ್ಮವಿಶ್ವಾಸ ತುಂಬುತ್ತಾನೆ. ಆದರೆ ಈ ತುಂಬುವಿಕೆ Psychological filling ಎಂದು ಗೊತ್ತಾಗದಷ್ಟು ಸರಳಗ್ರಹಿಕೆ ಆ ಕಾಲಮಾನದ್ದು. ಕರಿಯಣ್ಣ- ನಿರೂಪಕ - ರುದ್ರಮೂರ್ತಿಯ ಪೀಳಿಗೆಯಲ್ಲೂ ಕೂಡ ಕರಿಯಣ್ಣನ ವ್ಯಕ್ತಿತ್ವದ ಮಾತುಕತೆಯೇ ನಿರೂಪಕನಿಗೆ ಆಕರ್ಷಣೆ. `ತುಂಬಿತ್ತು, ಹಬ್ಬಿಹೋಗುತ್ತಿದ್ದ, ಆವರಿಸಿದ್ದಕ್ಕೆ' ಇಂತಹ ಪದಗಳ ಬಳಕೆಯನ್ನು ಗಮನಿಸಬಹುದು. ಈ ಸಾಲುಗಳನ್ನು ಗಮನಿಸಿ:

`ಈ ಗಮಾರನನ್ನೇಕೆ ಇಷ್ಟೊಂದು ಇಷ್ಟಪಡ್ತಿದೇನೆ ಎಂದು ನಾನು ಚಿಂತಿಸಿದೆ. ಕರಿಯಣ್ಣನ ಮಾತು, ಕತೆ, ಕನ್ನಡ ಗಾದೆಗಳ, ನುಡಿಕಟ್ಟಿನ ಗತ್ತು ಎಲ್ಲವನ್ನು ಮೀರಿದ್ದು ಅವನ ಆಳದಲ್ಲಿದ್ದ ನೆಮ್ಮದಿಯ ಚೇತನ..... ನಮ್ಮ ಎಲ್ಲ ಉದ್ವಿಗ್ನತೆಯನ್ನು ನೇವರಿಸಿ ಇಲ್ಲವಾಗಿಸಿ ಪ್ರೀತಿಯನ್ನು ಸ್ಫುರಿಸುವ ಯಕ್ಷಿಣಿ.....ದಪ್ಪ ಮೂಗಿನ ಪಕ್ಕದ ಕೆನ್ನೆ, ಕತ್ತಿನ ಸುಕ್ಕು, ಕಣ್ಣಿನ ಹೊಳಪು.....ನಿರಿಗೆಯ ರೆಕ್ಕೆಗಳು.'

`ಕರಿಯಣ್ಣನ ಕತೆಗಳಿಲ್ಲದೆ ನಾನು ಕಾಲ ಕಳೆಯುವುದೇ ಕಷ್ಟ ಎನಿಸಿತು.'

ಕರಿಯಣ್ಣನ ಮಗನ ಬೆಳವಣಿಗೆಯಿಂದ ಕರಿಯಣ್ಣ ಮತ್ತು ನಿರೂಪಕ ಇಬ್ಬರೂ ಕಂಗಾಲು. ಮಗ ಸುರೇಶ ಈ `ತುಂಬಿಕೊಳ್ಳುವಿಕೆ'ಯನ್ನು Reverseಮಾಡುವಷ್ಟು ಸಮಾಜ ಬದಲಾಗುತ್ತದೆ. ಮೇಲುವರ್ಗದವರನ್ನು ಕೀಳಂದಾಜಿನಲ್ಲಿ ಕಾಣುವುದು, ಗೇಲಿ ಮಾಡುವುದು, ಹಿಂಸೆಗೆ ಒಳಪಡಿಸುವುದು, ಇದುವರೆಗೆ ಶೋಷಣೆಗೆ ಒಳಗಾಗಿದ್ದವರು moral and psychological filling ಮಾಡಿಕೊಳ್ಳುವ ರೀತಿ. ಈ ಸುರೇಶ ನಿರೂಪಕನಿಗೆ ಕಪ್ಪಗೆ, ಕ್ರೂರವಾಗಿ ಕಾಣುತ್ತಾನೆ. ಸುರೇಶ `ತುಂಬಿಕೊಳ್ಳುವಿಕೆ'ಯನ್ನು Reverse ಮಾಡುತ್ತಾನೆ ಮಾತ್ರವಲ್ಲ - ತಂದೆಯ ತುಂಬಿಕೊಳ್ಳುವಿಕೆಯ ಬಗ್ಗೆ ಅಸಹ್ಯ ಪಟ್ಟುಕೊಂಡು ಪ್ರತಿಭಟಿಸುತ್ತಾನೆ ಕೂಡ.

ವಿಚಿತ್ರ ಸೆಳವುಗಳನ್ನುಳ್ಳ ಗಟ್ಟಿ ನಿಲುವಿನ ಕತೆಯಿದು. ಇಂತಹುದೇ ಸಂದರ್ಭವನ್ನು ಲಂಕೇಶ್ ಕಲ್ಲು ಕರಗುವ ಸಮಯ ಮತ್ತು ಉಲ್ಲಂಘನೆಯಂತಹ ಕತೆಗಳಲ್ಲಿ ಗ್ರಹಿಸಲು ಪ್ರಯತ್ನಿಸಿದ್ದಿದೆ. ಗ್ರಹಿಕೆ ಮಾತ್ರ ಭಾವನಾತ್ಮಕ ಲಯಗಳಿಂದ ಕೂಡಿದ್ದು ಕತೆಗಳ ಆಶಯ ನಮ್ಮ ಕಾಲದ ಸಾಮಾಜಿಕ ಅಪೇಕ್ಷೆಗಳಿಗನುಗುಣವಾಗಿ ಇರುವುದರಿಂದ ನಾವು ಒಪ್ಪಿರಬಹುದು. ಈ ಎರಡೂ ಕತೆಗಳಲ್ಲೂ ಇರುವ wish fulfilment- ಓದುಗನದ್ದು ಮತ್ತು ಲೇಖಕನದ್ದು - ಗುಣವನ್ನು ಕೂಡ ಗಮನಿಸಬೇಕು. ಆದರೆ ಈ ಕತೆ ಇಂತಹ wish fulfilmentನ್ನು ಪ್ರಶ್ನಿಸುತ್ತದೆ. ಈ ಪ್ರಶ್ನಿಸುವ ಛಾತಿ ಕತೆಯ ಒಡಲಿನಿಂದಲೇ ಮೂಡಿ ಬಂದಿದೆ.

ನಮ್ಮ ಕುತೂಹಲಕ್ಕಾಗಿ ಸಾಂಪ್ರದಾಯಿಕ ಸಂವೇದನೆಯವರೆಂದು ನಾನು ತಿಳಿದಿರುವ ಮಾಸ್ತಿಯಂತಹ ಲೇಖಕರು ಈ ಸನ್ನಿವೇಶವನ್ನು ಹೇಗೆ ಗ್ರಹಿಸುತ್ತಾರೆಂದು ನೋಡಬಹುದು. ಕರಿಯಣ್ಣನಂತವರ ಪಾತ್ರಗಳನ್ನು ಮಾಸ್ತಿ ಪ್ರತಿನಿಧೀಕರಣಕ್ಕೆ ಒಳಪಡಿಸುವುದೇ ಇಲ್ಲ. ವೆಂಕಟಿಗ, ವೆಂಕಟಶಾಮ, ಬೈಚೇಗೌಡ, ಜೋಗ್ಯೋರ ಅಂಜಪ್ಪ ಇವರೆಲ್ಲರನ್ನು ಮಾಸ್ತಿ ಒಂದು ವರ್ಗದ ಪ್ರತಿನಿಧಿಗಳಾಗಿ ಕಾಣುವುದಕ್ಕಿಂತ ಮನುಷ್ಯ ಮಾತ್ರರಾದವರು ಕಷ್ಟ ಸುಖವನ್ನು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಎದುರಿಸುವ ವ್ಯಕ್ತಿಗಳನ್ನಾಗಿ ನೋಡುತ್ತಾರೆ. ನವ್ಯ ಚಳುವಳಿಯ ನಂತರ ಪಾತ್ರಗಳನ್ನು ಪ್ರಾತಿನಿಧಿಕವಾಗಿ, ಸಾಂಕೇತಿಕವಾಗಿ, ರೂಪಕವಾಗಿ ಗ್ರಹಿಸುವುದು ಪ್ರಾರಂಭವಾಯಿತು. `ಭಾರತೀಪುರ'ದಂತಹ ಕಾದಂಬರಿ ಹೊಸ ಸನ್ನಿವೇಶವನ್ನು ಪ್ರತಿನಿಧೀಕರಣವನ್ನು (representataion) ಗೃಹೀತವಾಗಿ ಸ್ವೀಕರಿಸಿ ಇದರಿಂದಾಗಿ ಪ್ರಜ್ಞೆಯ ಮೇಲಾಗುವ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಶೋಧಿಸಲು ಪ್ರಯತ್ನಿಸುತ್ತದೆ. ಇಂತಹ ಪ್ರಯತ್ನಗಳಿಗೆ ಅಪವಾದವಿಲ್ಲವೆಂದಲ್ಲ. ರಾಘವೇಂದ್ರ ಖಾಸನೀಸರ `ತಬ್ಬಲಿಗಳು' ಓದುವಾಗ ಅಪ್ಪಿತಪ್ಪಿ ಕೂಡ ನಮ್ಮ ಮನಸ್ಸಿನಲ್ಲಿ ಪ್ರತಿನಿಧೀಕರಣದ ಛಾಯೆ ಜಾಗೃತವಾಗುವುದಿಲ್ಲ. ನಮ್ಮಂತಹ ಸಾಂಸ್ಕೃತಿಕ ಸಂದಿಗ್ಧದಲ್ಲಿ ಬದುಕುತ್ತಿರುವ ದಕ್ಷಿಣ ಆಫ್ರಿಕಾದ ಬರಹಗಾರ ಕುತ್ಸೆಯ Disgrace ಕಾದಂಬರಿ ಕೂಡ ಪ್ರತಿನಿಧೀಕರಣದಿಂದಾಚೆ ಕೈ ಚಾಚುತ್ತದೆ. ಕನ್ನಡದ ಮಟ್ಟಿಗೆ ಈಗ ಇದೆಲ್ಲ ಹಳೆಯ ಸಮಾಚಾರ. ನಿಜಜೀವನದಲ್ಲೂ, ಸಾಹಿತ್ಯ ಕೃತಿಗಳ ಓದಿನಲ್ಲೂ ಮನುಷ್ಯರು ಈಗ ನಮಗೆ ಸಾಮಾಜಿಕ ಚಹರೆಗಳಾಚೆ ಕಾಣುವುದೇ ಇಲ್ಲ. ಬ್ರಿಟಿಷರನ್ನು ಕೂಡ ಬ್ರಿಟಿಷರನ್ನಾಗಿ ನೋಡಲು ನಿರಾಕರಿಸುತ್ತಿದ್ದ ಗಾಂಧಿ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಲಂಕೇಶರ ಈ ಕತೆಗೆ ಇನ್ನೂ ಹೆಚ್ಚಿನ ಓದಿನ ಸಾಧ್ಯತೆಗಳಿವೆಯೆಂದು ನಾನು ತಿಳಿದಿದ್ದೇನೆ.

ಲಂಕೇಶರ ಜೀವನ ದೃಷ್ಟಿಕೋನದ ಬಗ್ಗೆ ಇಲ್ಲಿಯ ಎಲ್ಲಾ ಕತೆಗಳನ್ನು ಒಟ್ಟಾಗಿಯೇ ನೋಡುತ್ತಾ ಕೆಲವು ಪ್ರಶ್ನೆಗಳನ್ನು ಎತ್ತಬೇಕೆನಿಸುತ್ತದೆ. ಈ ಕತೆಗಳು ಲೇಖಕರ ಕೊನೆಯ ಕತೆಗಳಾಗಿರುವುದರಿಂದ, ಜೀವನದ ಕೊನೆ ಮತ್ತು ನಾವು ಬರಹದ ಹಿಂದೆ ಎಲ್ಲೋ ಹೊಂಚುಹಾಕುತ್ತಿರುವ ಭಾವವನ್ನು ಓದುಗರಲ್ಲಿ ಹುಟ್ಟಿಸುವುದರಿಂದ ಈ ಪ್ರಶ್ನೆಗಳನ್ನು ಕೇಳಲೇಬೇಕಾದ್ದು ಅನಿವಾರ್ಯ.

ಇಲ್ಲಿಯ ಕತೆಗಳ ನಾಯಕರು, ನಿರೂಪಕರು - ಎಲ್ಲರೂ ನಿವೃತ್ತರು, ಇಳಿವಯಸ್ಸಿನವರು. ಪದೇ ಪದೇ ಇದರ ಪ್ರಸ್ತಾಪ ಬರುತ್ತದೆ. ಬದುಕಿನ ಸಂದಿಗ್ಧತೆಯ ತೀವ್ರ ಅರಿವು ಇರುವಂತೆಯೇ ಬದುಕಿನಿಂದ ಸುಸ್ತಾದ, ಖೇದಗೊಂಡ, ಹತಾಶೆಗೊಂಡ ಭಾವನಾವಿನ್ಯಾಸ ಎಲ್ಲ ಕತೆಗಳ ಹಿಂದೂ ಇದೆ. ದೇಹದ ವಿಹ್ವಲತೆ, ವಯಸ್ಸಾಗುವಿಕೆಯ ಬಗ್ಗೆ ಇಳಿವಯಸ್ಸಿಗೂ ಹೆಚ್ಚೆನ್ನುವಷ್ಟು ಹಚ್ಚಿಕೊಳ್ಳಲಾಗಿದೆ. ಶೋಧನೆಗೆ ಭೂಮಿಕೆಯನ್ನು ಸೃಷ್ಟಿಸಿಕೊಳ್ಳಲು ಈ ರೀತಿಯ ಭಾವವಿನ್ಯಾಸವನ್ನು ಲೇಖಕ ಪೂರ್ವಪಕ್ಷವಾಗಿ ಸೃಷ್ಟಿಸುತ್ತಿದ್ದಾನೆ ಎಂಬ ಮಾತನ್ನು ಒಪ್ಪುವುದು ಕಷ್ಟ. ಏಕೆಂದರೆ ಒಂದೇ ರೀತಿಯ ಗ್ರಹಿಕೆ ನಿಲುವು ಎಲ್ಲ ಕತೆಗಳಲ್ಲೂ ವ್ಯಕ್ತವಾಗುತ್ತದೆ. ಈ ಮಾತುಗಳನ್ನು ಗಮನಿಸಿ:

ಎಲ್ಲ ಸಂಬಂಧಗಳು ಉಂಟು ಮಾಡುವ ವೇದನೆ (ಪುಟ ೬೧)

ಆಲಿಂಗನದ ಮಹಾ ಕಿಚ್ಚಿನಲ್ಲಿ ಮಾತ್ರ ಸಂಸಾರದ ತಣ್ಣನೆಯ ಸ್ಪರ್ಶದ ನರಕ ತಿಳಿಯುತ್ತಿದೆ. ಹುಟ್ಟಿಸಲಾರದ, ರೂಪಿಸಲಾರದ ನಿಷ್ಠೆ ಮನುಕುಲದ ಅನೇಕಾನೇಕ ಅನಗತ್ಯ ಗಂಟೆಗಳಂತೆ ಕಾಣತೊಡಗುತ್ತದೆ. ಪ್ರೇಮ, ಕಾಮ, ಮಿಥುನ ಎಲ್ಲವೂ ಬರೀ ಮಾತುಗಳು (ಪುಟ ೫)

ಹೆಸರು ಹಿನ್ನೆಲೆ ನೆನಪು ಎಲ್ಲವನ್ನೂ ತೊಳೆದು ಹಾಕಿ ದೇಹದ ಮಟ್ಟದಲ್ಲಿ ಬದುಕಿದರೆ.....(ಪುಟ ೧೮)

ನಾಗರೀಕತೆಯ ಕ್ಲಿಷ್ಟ ಹಂದರ ವಿಸ್ಮಯಗೊಳಿಸುತ್ತಿತ್ತು (ಪುಟ ೩೭)

ಎಲ್ಲದರಿಂದ ತಪ್ಪಿಸಿಕೊಳ್ಳಬೇಕೆಂದು ಮಾಡಿದ್ದ ನಿರ್ಧಾರ (ಪುಟ ೫೮)

ಇಂಥ ಮಹಾವೃದ್ಧಾಪ್ಯ ಜಟಿಲವಾದ್ದು. ಅಲ್ಲಿ ಸುಸ್ತಿನಿಂದಾಗಿಯೇ ಬಂದ ಮಹಾ ವಸ್ತುನಿಷ್ಠೆ ಇರುವಂತೆಯೇ ಅಚ್ಚರಿಗೊಳಿಸುವ ಹೊಸ ವಿಷಯಗಳನ್ನು ಕೇಳಲು ಆಶಯವಿರುತ್ತದೆ. (ಪುಟ ೭೭)

ಈ ಧೋರಣೆ ಮತ್ತೆ ಮತ್ತೆ ಎನ್ನುವಂತೆ ಮರುಕಳಿಸುವುದರಿಂದ ಬದುಕಿನ ಸಾರ್ಥಕತೆ ಮತ್ತು ಪೂರ್ಣತೆ ಬಗ್ಗೆ ಇದು ಏನನ್ನು ಸೂಚಿಸುತ್ತದೆ? ದೇಹ ಮನಸ್ಸು ತಾನು-ಅನ್ಯರು, ಸಾವು-ಬದುಕು, ಕ್ಷಣ-ಅನಂತ ಇವುಗಳ ನಡುವೆ ಇರುವ ವೈರುಧ್ಯವನ್ನು ಪ್ರತಿಯೊಬ್ಬ ಮನುಷ್ಯನೂ ತನ್ನ ಅನುಭವದ ಹಿನ್ನೆಲೆಯಲ್ಲಿ ಅರ್ಥೈಸಿಕೊಂಡು ಮಾಗುತ್ತಾ ಹೋಗುತ್ತಾನೆ. ಇಂತಹ ಮಾಗುವಿಕೆಯ ಬಗ್ಗೆ ಲಂಕೇಶರಿಗೆ ನಂಬಿಕೆಯಿಲ್ಲವೆನಿಸುತ್ತದೆ. ಈ ಮಾಗುವಿಕೆಗೆ ಅಗತ್ಯವಾದ ಒಂದು ನಿರ್ದಿಷ್ಟ ವ್ಯಕ್ತಿತ್ವವನ್ನು ಇವರ ಪಾತ್ರಗಳು ಇಳಿವಯಸ್ಸಾದರೂ ತಲುಪದೇ ಇರುವುದು, ಇನ್ನೂ ಇವರ ವ್ಯಕ್ತಿತ್ವಗಳು ನಿರ್ಮಾಣಗೊಳ್ಳುವ ಹಪಾಹಪಿಯಲ್ಲೇ ಇರುವುದು ಆಶ್ಚರ್ಯ ಹುಟ್ಟಿಸುತ್ತದೆ. ಇವರ ಪಾತ್ರಗಳಿಗೆ ಸೃಜನಶೀಲ ಮಾಗುವಿಕೆಯೆಂಬುದು ಇಲ್ಲ. ಒಟ್ಟು ಸಂಕಲನದಲ್ಲಿ ಮುಂದಿನ ಪೀಳಿಗೆಯೆಂಬುದೇ ಇಲ್ಲವೇನೋ ಅನಿಸುತ್ತದೆ. ತನ್ನ ಜೊತೆಯೂ, ಮುಂದಿನ ಪೀಳಿಗೆಯ ಜೊತೆಯೂ, ಸುತ್ತಲ ಬದುಕಿನ ಜೊತೆಗೂ ಆತ್ಮೀಯತೆಯನ್ನು ಅನುಭವಿಸಲಾಗದ ಸ್ಥಿತಿಯಲ್ಲಿ ಸ್ಥಾಯಿಯಾಗಿ ನಿಂತ ಪಾತ್ರಗಳು ಇವು. ಲೇಖಕನೊಬ್ಬನ ದೃಷ್ಟಿಕೋನ ಹೀಗೇ ಇರಬಹುದಾದರೆ ತಪ್ಪೇನು ಎಂಬ ಪ್ರಶ್ನೆ ಸರಿಯೇ. ಆದರೆ ಈ ದೃಷ್ಟಿಕೋನ ಬದುಕಿನ ಪೂರ್ಣತೆ, ಸಾರ್ಥಕತೆ ಮತ್ತು ಒಟ್ಟಾರೆ ಜೀವನ ಸಫಲತೆಯ ಬಗ್ಗೆ ಏನನ್ನು ಹೇಳುತ್ತದೆ ಎಂದು ಗಮನಿಸಬೇಕಾದ್ದು ಕೂಡ ವಿಮರ್ಶೆಯ ವ್ಯಾಪ್ತಿಯಲ್ಲಿ ಬರುತ್ತವೆಂದು ನಾನು ನಂಬಿದ್ದೇನೆ.

ಮೇಲಿನ ಸಂಗತಿಗೂ ಲಂಕೇಶರಿಗೆ epiphancy(ಸತ್ಯದರ್ಶನ, ಸಾಕ್ಷಾತ್ಕಾರ)ಯ ಸ್ವರೂಪದ ಬಗ್ಗೆ ಇರುವ ನಂಬಿಕೆಗೂ ಸಂಬಂಧವಿದೆಯೆನಿಸುತ್ತದೆ. ಸತ್ಯದರ್ಶನವೆಂಬುದು ಲಂಕೇಶರಲ್ಲಿ ಚಿಂತಾಮಣಿಯಲ್ಲಿ ಯಾವುದೋ ಒಂದು ದಿವ್ಯ ಘಳಿಗೆಯಲ್ಲಿ ಕಾಣುವ ಮುಖವಲ್ಲ. ಕ್ರಮೇಣವಾಗಿ ಪ್ರಜ್ಞೆ ವಿಕಾಸವಾಗುವ ಹನುಮದ್ವಿಕಾಸವೂ ಅಲ್ಲ. ಒಂದು ಒತ್ತಡದಲ್ಲಿ, ಒಂದು ಒತ್ತಾಯದಲ್ಲಿ ಮನುಷ್ಯ ತನ್ನ ನಿಜಸ್ವಭಾವವನ್ನು, ವ್ಯಕ್ತಿತ್ವವನ್ನು ತಿಳಿಯುತ್ತಾನೆ. ಈ ರೀತಿಯ ಒತ್ತಡ, ಒತ್ತಾಯವನ್ನು ಸೃಷ್ಟಿಸಿ ಮನುಷ್ಯನನ್ನು ಅದಕ್ಕೆ ಮುಖಾಮುಖಿಯಾಗಿಸುವುದು ಅದಕ್ಕಾಗಿ ಅನಾವರಣಗೊಳಿಸುತ್ತಾ ಹೋಗಬೇಕಾದ್ದು ಲಂಕೇಶರ, ಅವರ ನಿರೂಪಕರ, ನಾಯಕರ ಗುರಿ. ಜೊತೆಗೆ ಇಂತಹ ವಾತಾವರಣವನ್ನು, ಒತ್ತಡವನ್ನು ಸೃಷ್ಟಿ ಮಾಡುವವನು ನೈತಿಕ ಉತ್ತಮಿಕೆಯಿಂದಲೂ ಕೂಡಿರುತ್ತಾನೆ. ಈ ಮಾದರಿ ಲಂಕೇಶರ `ತೆರೆಗಳು' ನಾಟಕದಿಂದ, ಪ್ರಾರಂಭದ ಕತೆಗಳಿಂದ, ಕೊನೆತನಕದ ಎಲ್ಲ ಬರಹಗಳಲ್ಲೂ ವ್ಯಕ್ತವಾಗುತ್ತದೆ. ಕತೆಗಳು ಹೀಗೆ ಸೃಷ್ಟಿಯಾಗುವ ಒತ್ತಡ-ಒತ್ತಾಯಗಳನ್ನು ನಿರೂಪಿಸುತ್ತಾ ಹೋಗಿ ಕೊನೆಯಲ್ಲಿ ಪಡೆಯುವ ತಿರುವಿನಲ್ಲಿ ಸತ್ಯದ ಕಡೆಗೆ ಮುಖ ಮಾಡುತ್ತವೆ. ಜೊತೆಗಾರ, ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ ಇಂತಹ ಕತೆಗಳಲ್ಲಿ ಈ ಅನಾವರಣ ವ್ಯವಧಾನದಲ್ಲಿ, ಧ್ವನಿಪೂರ್ಣವೂ ವಿವರವೂ ಆದ ನಿರೂಪಣೆಯಲ್ಲಿ ನಡೆದರೆ ಇಲ್ಲಿನ ಕತೆಗಳ ಓಘಕ್ಕೆ ಅಂತಹ ವ್ಯವಧಾನವಿಲ್ಲವೆನಿಸುತ್ತದೆ. ಲಂಕೇಶರ ಈ ಮಾದರಿಗೆ ನಾವು ಈಗಾಗಲೇ ಒಗ್ಗಿ ಹೋಗಿರುವುದರಿಂದ ಕತೆಯ ನಿರ್ದಿಷ್ಟ ರೀತಿಯ ಕೊನೆಗೆ ಕತೆಗಳು ರೂಢಿಯಿಂದ ಚಲಿಸುತ್ತಿವೆಯೇನೋ ಎಂಬ ಭಾವನೆ ಬರುತ್ತದೆ. ಸಂಕಲನದ ಕೊನೆಯಲ್ಲಿರುವ ಕ್ಷೀಜುವಿನ ಹಠ ಮತ್ತು ಪ್ರೇಮ ಎಂಬ ವಿಸ್ಮಯ - ಈ ಎರಡೂ ಪುನರ್ ಸೃಷ್ಟಿಸಿದ ಕತೆ/ಬರಹಗಳ epiphancyಯ ಸ್ವರೂಪಕ್ಕೆ ಕತೆಯ ವಿವರಗಳಲ್ಲೇ ಒಂದು ರೀತಿಯ ಸಾವಯವ ಸಿದ್ಧತೆಯಿದೆಯೆನಿಸುತ್ತದೆ. ಮತ್ತೆ ಇವೆರಡೂ ಬರಹಗಳು ಮಂಡಿಸುವ ದರ್ಶನ ಇತರ ಕತೆಗಳಿಗೆ ಹೋಲಿಸಿದರೆ open ended ಎನಿಸುತ್ತದೆ.

ಒಂದು ಒತ್ತಡದಲ್ಲಿ ಒತ್ತಾಯದಲ್ಲಿ ಮಾತ್ರ ಮನುಷ್ಯ ಸತ್ಯಕ್ಕೆ ಹತ್ತಿರವಾಗಬಲ್ಲ ಎಂಬ ನಂಬಿಕೆಗೂ ಲಂಕೇಶರಿಗೆ ಪ್ರವೃತ್ತಿಯ ಬಗ್ಗೆ ಇರುವ ಒಲವಿಗೂ ಸಂಬಂಧವಿದೆಯೆನಿಸುತ್ತದೆ. ಈ ಕತೆಯ ಕಲಿತವರು, ನಾಗರೀಕರು ಯಾರೂ ಧ್ಯಾನದಲ್ಲಿ, ಏಕಾಂತದಲ್ಲಿ ಸಾಮಾಜಿಕ ಸಾಹಚರ್ಯದಲ್ಲಿ ಸತ್ಯಕ್ಕೆ ಹತ್ತಿರವಾಗಲಾರರು. ತಟಕ್ಕನೆ ಅವರನ್ನು ಸತ್ಯದ ಕಡೆಗೆ ಹೊರಳಿಸುವಂತಹ ಒತ್ತಾಯವನ್ನು ನಿರ್ಮಾಣ ಮಾಡಬೇಕು. ಮನುಷ್ಯ ತನ್ನ ಪ್ರವೃತ್ತಿಗಳಿಗೆ ಹತ್ತಿರವಾಗಿದ್ದಾಗ ಮಾತ್ರವೇ ಸತ್ಯವನ್ನು ಕಾಣಬಲ್ಲ ಎಂಬ ನಿಲುವಿದು. ಮಂಜು ಕವಿದ ಸಂಜೆ ಕತೆಯ ಮಂಜು ಪ್ರಭುದೇವರ ಕೂಡುವಿಕೆಯ ನಿರೂಪಣೆಯನ್ನು ಗಮನಿಸಿ. A Suicide Note ಕತೆಯ ಈ ಮಾತುಗಳನ್ನು ನೋಡಿ: `ನಾನು ಮನುಷ್ಯಳಾಗಿ ನನ್ನಲ್ಲಿ ಪಶುವನ್ನು ಕಂಡದ್ದು ಆ ಕಾಲದಲ್ಲಿ ಮಾತ್ರ. ನನ್ನಲ್ಲಿನ ಪಶು ನನ್ನ ಹರೆಯದಲ್ಲಿ ಹುಮ್ಮಸ್ಸಿನಿಂದ ಕೂಡಿರುತ್ತದೆ. ನನ್ನ ದಾಹ ಸೂಚಿಸಿದ್ದನ್ನೆಲ್ಲ ಸ್ವೀಕರಿಸುತ್ತದೆ. ಅದಕ್ಕೆ ಪಾಪಪ್ರಜ್ಞೆ ಎನ್ನುವುದಿಲ್ಲ' ಕತೆಯ ಉದ್ದಕ್ಕೂ ಚಿರತೆಯ ಕಣ್ಣು, ಮೃಗ, ರಾಕ್ಷಸ ಇಂತಹ ಪದಗಳು ಸಿಗುತ್ತವೆ. ದೇಹದ ಮಟ್ಟದಲ್ಲಿ ಮಾತ್ರವೇ ಬದುಕುವ ಆಸೆ ವ್ಯಕ್ತವಾಗುತ್ತದೆ ಕತೆಯುದ್ದಕ್ಕೂ.

ಲಂಕೇಶರಲ್ಲಿ ನಾಗರೀಕತೆಯ, ವಿದ್ಯೆಯ, ಹೊಸ ಕಾಲದ ಸಮಾಜದ ಹಂಬಲದ ಜೊತೆಗೇ ಪ್ರಜ್ಞಾವಂತಿಕೆಯ ಜೀವಂತಿಕೆಯ ಬಗ್ಗೆ ಇರುವ ಅನುಮಾನ, ಪ್ರವೃತ್ತಿಯ ಸ್ವಭಾವ ಮತ್ತು ಶಕ್ತಿಯ ಬಗ್ಗೆ ಇರುವ ಒಲವು ಇನ್ನೂ ವಿವರವಾದ ಅಧ್ಯಯನಕ್ಕೆ ವಸ್ತುವಾಗಬಲ್ಲದು. ಲೇಖಕರ ಸಮಗ್ರ ಬರವಣಿಗೆಯ ಹಿನ್ನೆಲೆಯಲ್ಲಿ ಈ ದ್ವಂದ್ವ, ಬಿಕ್ಕಟ್ಟಿನ ಸ್ಥಿತಿಯ ಅರಿವು ಲಂಕೇಶರಿಗೇ ಇರಲಿಲ್ಲವೆಂದಲ್ಲ.

`ಯಾವುದೇ ಧ್ಯೇಯದ ಬಗ್ಗೆ ಮಹಾಏಕಾಗ್ರತೆಯನ್ನು ಅರ್ಪಣಾ ಭಾವವನ್ನು ಸಾಧಿಸಿದರೆ ಮಾತ್ರ ಒಬ್ಬಂಟಿತನ ಸಹ್ಯವಾಗುತ್ತದೆ.' (ಪುಟ ೬೯)

ಆದರೆ ಈ ಅರಿವು ನಾಲ್ಕು ಕಾಲ ನಿಲ್ಲಬಲ್ಲ ಬಲವಾಗಲಾರದೆಂಬುದೇ ಅವರ ನಂಬಿಕೆ.

ನಿರೂಪಿಸಿದ್ದೆಲ್ಲ ಕತೆ ಎಂದು ಭಾವಿಸಿರುವ ಈವತ್ತಿನ ಕಥನ ಸಂದರ್ಭದಲ್ಲಿ ಲಂಕೇಶರ ಕೊನೆಯ ಕತೆಗಳಿಗೆ ತುಂಬಾ ಮಹತ್ವವಿದೆ. ತಲ್ಲಣಗಳನ್ನು, ಹೊಸ ರೀತಿಯ ಅನುಭವಗಳನ್ನು ಎದುರು ಹಾಕಿಕೊಳ್ಳುವ, ಮೇಲೆ ಎಳೆದುಕೊಳ್ಳುವ, ಹಾಗೆ ಮಾಡುವುದರ ಮೂಲಕ ಜೀವನಾನುಭವವನ್ನು ಮೌಲ್ಯಮಾಪನ ಮಾಡುವುದಕ್ಕೆ ಮಾತ್ರ, ಅಂತಹ ಶಕ್ತಿ-ಛಾತಿಯಿದ್ದರೆ ಮಾತ್ರ ಕತೆ ಬರೆಯಬೇಕೆಂಬ ಅವರ ನಂಬಿಕೆಯಿಂದ ಈವತ್ತಿನ ಕತೆಗಾರರು ಕಲಿಯುವುದು ಬಹಳವಿದೆ. ನಿರೂಪಣೆ, ವರ್ಣನೆಯಲ್ಲಿ ಶೋಧನೆಯೂ ಹಾಸು ಹೊಕ್ಕಾಗಿರುತ್ತದಲ್ಲವೇ ಎಂಬ ಪೆದ್ದ ಪ್ರಶ್ನೆ ಕೇಳುವವರಿಗೆ ಇಲ್ಲಿಯ ಕತೆಗಳ ಮಹತ್ವ ದಕ್ಕುವುದಿಲ್ಲ.

(ದೇಶಕಾಲ ತ್ರೈಮಾಸಿಕ ಪತ್ರಿಕೆಯ ಹದಿಮೂರನೆಯ ಸಂಚಿಕೆ (ಅಕ್ಟೋಬರ್-ಡಿಸೆಂಬರ್ ೨೦೦೮)ಯಲ್ಲಿ ಪ್ರಕಟಿತ ಲೇಖನ)
ಚಿತ್ರಗಳು: ಅವಧಿ ಅಂತರ್ಜಾಲ ತಾಣ ಮತ್ತು ವಿಕ್ರಾಂತ ಕರ್ನಾಟಕ ವಾರಪತ್ರಿಕೆಗಳ ಕೃಪೆ.

No comments: