Sunday, February 22, 2009

ಕುವೆಂಪು ಮತ್ತು ಮತಾಂತರ

ಡಾ||ಎಸ್.ಎಲ್.ಭೈರಪ್ಪನವರಿಂದ ಪ್ರಣೀತಗೊಂಡ ಮತಾಂತರದ ಚರ್ಚೆಯನ್ನು ಈಚೆಗೆ ನಾವೆಲ್ಲ ಗಮನಿಸಿದ್ದಾಯಿತು. ಪ್ರಸಿದ್ಧರು, ಪಂಡಿತರು, ಪ್ರಗತಿಪರರೂ ಭಾಗವಹಿಸಿದ್ದ ಈ ಚರ್ಚೆ ತುಂಬಾ ತೆಳುವಾದ ಪರ-ವಿರೋಧಗಳ ನೆಲೆಯಲ್ಲಿ ನಡೆಯಿತು. ಭಾರತದಲ್ಲಿ ಮಾತ್ರ ಮತಾಂತರ ನಡೆಯುತ್ತಿಲ್ಲ, ನಡೆದಿಲ್ಲ. ಇದೊಂದು ಜಾಗತಿಕ ವಿದ್ಯಮಾನ. ಏಷ್ಯಾ, ಆಫ್ರಿಕಾದ ದೇಶಗಳು ಇತಿಹಾಸದ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಮತಾಂತರದ ಪ್ರಭಾವಕ್ಕೆ ಒಳಗಾಗಿವೆ. ವಸಾಹತುಶಾಹಿ ವಾಣಿಜ್ಯ ನೀತಿ, ವಿಜ್ಞಾನ ಇವುಗಳ ಮೂಲಕ ಮಾತ್ರವಲ್ಲದೆ ಪಶ್ಚಿಮವು ಮತಾಂತರದ ಮೂಲಕವೂ ಈ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಹಾಗಾಗಿ ಇಂತಹ ವಿದ್ಯಮಾನವೊಂದನ್ನು ಪರ-ವಿರೋಧಗಳ ಸರಳೀಕೃತ ನೆಲೆಯಲ್ಲಿ ಗ್ರಹಿಸಲಾಗುವುದಿಲ್ಲ. ಪಶ್ಚಿಮದ ಪ್ರಯತ್ನ-ಪ್ರಯೋಗಗಳನ್ನು ಬದಿಗಿಟ್ಟರೂ ಈ ದೇಶದ ಇತಿಹಾಸದಲ್ಲೇ ಬೇರೆ ಬೇರೆ ಧರ್ಮ-ಮತ-ಜಾತಿಗಳ ನಡುವೆ ಮತಾಂತರ, ಕಿತ್ತಾಟ ನಡೆದಿವೆ. ಈ ಪ್ರಕ್ರಿಯೆಗೆ ಆಧುನಿಕತೆಯ ಸಂದರ್ಭದಲ್ಲಿ ಬೇರೆ ಬೇರೆ ಆಯಾಮಗಳು ಪ್ರಾಪ್ತವಾಗಿವೆ. ಇದನ್ನೆಲ್ಲ ಭೈರಪ್ಪ ಪ್ರಣೀತ ಚರ್ಚೆ ಗಮನಿಸಲೇ ಇಲ್ಲ.

ಈ ಹಿನ್ನೆಲೆಯಲ್ಲಿ ನಮ್ಮ ಕುವೆಂಪು ಈ ಸಮಸ್ಯೆಯನ್ನು ಹೇಗೆ ಗ್ರಹಿಸಿದರು ಎಂಬ ಕುತೂಹಲಕ್ಕಾಗಿ ನಾನು "ಮದುಮಗಳು" ಕಾದಂಬರಿಯನ್ನು ಮತ್ತೆ ಓದಿದೆ. ಕುವೆಂಪು ಬ್ರಾಹ್ಮಣ್ಯದ ಬಗ್ಗೆ, ಜಾತಿಪದ್ಧತಿಯ ಬಗ್ಗೆ, ಹಿಂದೂಧರ್ಮದ ಬಗ್ಗೆ ಇದ್ದ ನಿಲುವು ನಮಗೆಲ್ಲ ಗೊತ್ತೇ ಇದೆ. ಆದರೂ ಕುವೆಂಪು ರೀತಿಯ ಕಲಾವಿದರೊಬ್ಬರು ಸೃಜನಶೀಲ ಒತ್ತಡ-ಚೌಕಟ್ಟಿನಲ್ಲಿ ಈ ವಿದ್ಯಮಾನವನ್ನು ಗ್ರಹಿಸುವ ರೀತಿಯನ್ನು ಓದುಗರ ಗಮನಕ್ಕೆ ತರಬೇಕೆಂದು ನನಗನ್ನಿಸಿತು.

ಕುವೆಂಪುಗೆ ಮತಾಂತರ ಕುರಿತಂತೆ ಪರ-ವಿರೋಧದ ಸರಳೀಕೃತ ನೆಲೆಗಳಿಲ್ಲ. ಈ ವಿದ್ಯಮಾನದ ಸಂಕೀರ್ಣತೆಯನ್ನು ಕುವೆಂಪು ಎಲ್ಲ ಸ್ತರಗಳಲ್ಲೂ ಗಮನಿಸಲು ಪ್ರಯತ್ನಿಸುತ್ತಾರೆ. ಆಮಿಷಗಳ ಮೂಲಕ ದುರ್ಬಲ ಮನಸ್ಸಿನ ಜನರನ್ನು ಮತಾಂತರಗೊಳಿಸುವುದನ್ನು ಕುವೆಂಪು ಒಪ್ಪುವುದಿಲ್ಲ. ಆದರೆ ಮತಾಂತರದಿಂದ ಮೂಡಿಬರುವ ಸಾಮಾಜಿಕ ಚಲನೆ-ತಿಳುವಳಿಕೆ, ಹೊಸ ರೀತಿಯ ಜ್ಞಾನದ ಪ್ರವೇಶ ಇವುಗಳನ್ನು ಸ್ವಾಗತಿಸುತ್ತಾರೆ. ರಾಮಕೃಷ್ಣ-ವಿವೇಕಾನಂದರ ದರ್ಶನವನ್ನು ಒಪ್ಪುವ ಕುವೆಂಪು ಮೂಢನಂಬಿಕೆ, ಜಾತಿಪದ್ಧತಿಯನ್ನು ವಿರೋಧಿಸುತ್ತಾರೆ. ಮತಾಂತರದ ಪ್ರಯತ್ನಗಳು ಇತಿಹಾಸದ
ಒಂದು ಘಟ್ಟದಲ್ಲಿ ಅನಿವಾರ್ಯವೂ, ಅಪೇಕ್ಷಣೀಯವೂ ಆದಂತಹ ಒಂದು ಪ್ರಕ್ರಿಯೆ ಎಂಬುದನ್ನು ಕೂಡ ಸೂಚಿಸುತ್ತಾರೆ. ಇಂತಹ ಸಂಕೀರ್ಣ ನಿಲುವುಗಳನ್ನು ಕಾದಂಬರಿಯ ವಿವರಗಳಿಂದಲೂ ತಿಳಿಯಬಹುದು. ಈ ವಿವರಗಳ ವಿಶೇಹವೆಂದರೆ ಮತಾಂತರದ ಮೌಲಿಕತೆ-ಅನಿವಾರ್ಯತೆಯ ಕಡೆಗೇ ಗಮನ ಕೊಡದೆ ಒಂದು ಕಾಲದ ದೈನಿಕ ಬದುಕಿನ ವಿವರಗಳು, ಆ ಕಾಲದ ಮನುಷ್ಯರ ಆಸೆ-ಆಕಾಂಕ್ಷೆಗಳ ಬಗ್ಗೆ ಕೂಡ ಕಾದಂಬರಿ ಗುಟ್ಟುಗಳನ್ನು ಬಿಟ್ಟುಕೊಡುತ್ತದೆ. ಮತಾಂತರಕ್ಕೆ ಪ್ರಯತ್ನಿಸುವವರ ಆತಂಕ, ಕಷ್ಟಗಳನ್ನು ಕೂಡ ಕುವೆಂಪು ಗಮನಿಸುತ್ತಾರೆ. ಮನುಷ್ಯರ ಚರಿತ್ರೆಗಳಿಂದ ತಪ್ಪಿಸಿಕೊಂಡಾಗ ಇಲ್ಲ ಮನುಷ್ಯರ ಚರಿತ್ರೆಯನ್ನು ಗಮನಿಸದೆ ಹೋದಾಗ ಮಾತ್ರ ನಾವು ಪರ-ವಿರೋಧದ ಸರಳೀಕೃತ ನೆಲೆಗಳಲ್ಲಿ ಮಾತನಾಡುತ್ತೇವೆ. ನಮಗೆ ಇರುವ ತೊಂದರೆಯೆಂದರೆ, ಮನುಷ್ಯ ಚರಿತ್ರೆಯ ಬಗ್ಗೆ ನಮ್ಮ ಗಮನಸೆಳೆಯುವಂತಹ ವೈಯಕ್ತಿಕ ಚರಿತ್ರೆಗಳು ನಮ್ಮಲ್ಲಿ ಇಲ್ಲದೆ ಇರುವುದು. ಕುವೆಂಪು ಕಾದಂಬರಿ, ಕಾರಂತರ `ಚೋಮನ ದುಡಿ' ಯಂತಹ ಕೃತಿಗಳ ಮೂಲಕ ಮಾತ್ರವೇ ನಾವು ಇಂತಹ ವೈಯಕ್ತಿಕ ಚರಿತ್ರೆಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ.

****

ಕ್ರೈಸ್ತಧರ್ಮದ ಪ್ರವೇಶ-ಪ್ರಭಾವವು ಈ ಕಾದಂಬರಿಯ ಒಟ್ಟು ವಿನ್ಯಾಸದೊಂದಿಗೆ ಬೇರೆ ಬೇರೆ ಸ್ತರಗಳಲ್ಲಿ ಹಾಸುಹೊಕ್ಕಾಗಿದೆ. ಸುಮಾರು ೧೮ನೇ ಅಧ್ಯಾಯದಿಂದ ಇದರ ವಿವರಗಳು ನಮಗೆ ಸಿಗುತ್ತವೆ. ಪಾದ್ರಿ ಜೀವರತ್ನಯ್ಯನ ಬೈಸಿಕಲ್ ಸವಾರಿಯ ಬಗ್ಗೆ ಗುತ್ತಿಯೂ ಸೇರಿದಂತೆ ಕೆಳಸ್ತರದ ಜನರಿಗೆ ಕುತೂಹಲ, ವ್ಯಂಗ್ಯ, ತಮಾಷೆ ತುಂಬಿದ ನಿಲುವುಗಳಿವೆ. ಸೈಕಲ್‌ನ ವಿವರಗಳು, ನಾನಾ ಭಾಗವು ಹುಟ್ಟಿಸುವ ಕೌತುಕ, ಸವಾರಿ ಮಾಡುವ ರೀತಿ ಎಲ್ಲವನ್ನೂ ಕುತೂಹಲ-ಅನುಮಾನದಿಂದ ನೋಡುತ್ತಾರೆ. ದೇವಯ್ಯಗೌಡನಿಗೆ "ಕುಡಿಸಿ, ಕುಣಿಸಿ, ಬುದ್ಧಿ ಕೆಡಿಸಿರುವುದು" ಕೂಡ ಇವರಿಗೆ ಗೊತ್ತಿದೆ. ಈ ಪಾದ್ರಿಯ ಪ್ರಭಾವದಿಂದಾಗಿ ಗೌಡನೊಬ್ಬ ಹೊಲೆಯನನ್ನು ಗಾಡಿ ಹೊಡೆಯುವುದಕ್ಕೆ ಇಟ್ಟುಕೊಳ್ಳುವುದು, ಹೊಲೆಯನನ್ನು ಮುಟ್ಟುವುದು ಕೂಡ ಸಾಧ್ಯವಾಗಿರುವುದು ಕೂಡ ಗೊತ್ತಾಗಿದೆ. ಈ ವಿದ್ಯಮಾನದ ಬಗ್ಗೆ ಗುತ್ತಿಯಂಥವರಿಗೆ ಖಚಿತವಾದ ನಿಲುವಿಲ್ಲ ಅಷ್ಟೇ. ದೇವಯ್ಯ ಗೌಡ ಪಾದ್ರಿಯ "ಮಂಕುಬೂದಿ"ಗೆ ಒಳಗಾಗಿರುವುದು, ಪಾದ್ರಿಯ ಮಗಳ ಜೊತೆ ಸಖ್ಯ ಬೆಳೆಸಿ ಲಂಪಟನಾಗಿರುವುದು ಕೂಡ ಇವರ ಚರ್ಚೆಗಳಲ್ಲಿ ಬರುತ್ತದೆ.

ಪಾದ್ರಿ ತರುವ ಬೀಸೋಕಲ್ಲು ನಾಗರಿಕತೆ ತರುವ ಒಂದು ಹೊಸ ವಿವರ-ದೃಷ್ಟಿಕೋನ. ಹಾಗೆಯೇ ಪಾದ್ರಿಯ ವ್ಯಕ್ತಿತ್ವ ಕೂಡ. ಕುವೆಂಪು ಪಾದ್ರಿಯನ್ನು ಇದ್ದಲಿನಷ್ಟು ಕಪ್ಪಗಿದ್ದವನು, ನೇಟಿವ್ ಪಾದ್ರಿಯೆಂದೆಲ್ಲಾ ವಿವರಿಸುತ್ತಾರೆ. ಆತನ ವೇಷ-ಭೂಷಣ, ಚಹರೆಯೆಲ್ಲವೂ ಮೇಲುಜಾತಿಯ ಗೌಡರದ್ದಕ್ಕಿಂತಲೂ ವಿಭಿನ್ನವಾಗಿರುವುದರ ಜೊತೆಗೆ ಆಕರ್ಷಣೀಯವೂ ಕೂಡ ಆಗಿದೆ. ಹೊಲೆಯರ ಬಚ್ಚ ಈಗಾಗಲೇ ಹೊಸ ವ್ಯಕ್ತಿತ್ವ ಪಡೆದ ಸಂಭ್ರಮದಲ್ಲಿದ್ದಾನೆ. ತಮ್ಮ ಜೊತೆ ವಾಸಿಸುವ ಮನುಷ್ಯರನ್ನು ಮುಟ್ಟಲಾಗದವರು ಬೈಸಿಕಲ್‌ಅನ್ನು "ಮುಟ್ಟುತ್ತಾರೆ". ಈ "ಮುಟ್ಟುವ" ಪ್ರಸಂಗ ಮುಂದಿನ ದಿನಗಳಲ್ಲಿ ಕನ್ನಡದ ಬಹುತೇಕ ಕಥನಕಾರರು, ಕವಿಗಳು ಬಹುವಾಗಿ ಹಚ್ಚಿಕೊಂಡ ಒಂದು ವಿದ್ಯಮಾನದ ಆಗಮನವನ್ನು ಮುನ್ನೋಟದಿಂದ ಸೂಚಿಸುತ್ತದೆ. ದೇವರ ವಿಗ್ರಹವನ್ನು, ಸಾಲಿಗ್ರಾಮವನ್ನು ಮುಟ್ಟುವುದು, ಮೇಲುಜಾತಿಯವರನ್ನು ಮೊದಲು ಮುಟ್ಟುವುದು, ನಂತರ ಲೈಂಗಿಕವಾಗಿ, ವೈವಾಹಿಕವಾಗಿ ಒಳಗೊಳ್ಳುವುದು - ಆಕ್ರಮಿಸುವುದು. ಇದೆಲ್ಲಕ್ಕಿಂತ ಮುಂಚೆ ಕೆಳಸ್ತರದವರು ಈ ಕಾದಂಬರಿಯಲ್ಲಿ ಒಂದು "ಯಂತ್ರ"ವನ್ನು ಮುಟ್ಟುವುದು ಕುತೂಹಲಕರವಾಗಿದೆ. ಈ ಬೈಸಿಕಲ್ ಸವಾರಿಯನ್ನು ಹೊಲಗೇರಿಯ ಮುಕ್ಕಾಲುಮೂರುವಾಸಿ ಜನ-ಹೆಂಗಸರೂ-ಮಕ್ಕಳೂ ಸೇರಿದಂತೆ - ನೋಡುತ್ತಾರೆ. ಇಡೀ ಪ್ರಕರಣವನ್ನು ಕುವೆಂಪು, ವ್ಯಂಗ್ಯ, ತಮಾಷೆಯ ಜೊತೆಗೆ ವಸ್ತುನಿಷ್ಠತೆಯಿಂದ ಗಮನಿಸುತ್ತಾರೆ. ವ್ಯಂಗ್ಯ ತಮಾಷೆ ಪಾದ್ರಿಯನ್ನು ಕುರಿತಂತೆ ಮಾತ್ರವಲ್ಲ, ಅದನ್ನು ನೋಡುತ್ತಿರುವವರನ್ನು ಕುರಿತಂತೆಯೂ ಇದೆ. ಪಾದ್ರಿಯನ್ನೂ, ಆತನ ಜೀವನ ದೃಷ್ಟಿಯನ್ನೂ ಕೂಡ ಈ ಹೊಲೆಯರು ಮೌಲ್ಯಮಾಪನ ಮಾಡುತ್ತಾರೆ.

"ಇದು ಎಂಥಾದ್ದೋ ಇವರು ಹೇಳುವುದು? ಕಾಡಿಗೆ ಕೈ ಮುಗಿದು! ಒಂದು ದೇವರಿಲ್ಲ! ಗುಡಿಯಿಲ್ಲ! ನಮ್ಮ ಪೆರಡೂರು ಮೇಳದವರು ಇದಕ್ಕಿಂತಲೂ ಚೆನ್ನಾಗಿ ಹೇಳುತ್ತಾರಲ್ಲ ಭಾಗವತರಾಟದಲ್ಲಿ?" (ಪುಟ ೧೫೯)


೨೨ನೇ ಅಧ್ಯಾಯದಲ್ಲಿ ಕುವೆಂಪು ಕ್ರೈಸ್ತಧರ್ಮದ ಆಗಮನವನ್ನು ಇತಿಹಾಸದ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಇಟ್ಟು ನೋಡಲು ಪ್ರಯತ್ನಿಸುತ್ತಾರೆ. ಪಾದ್ರಿಯ ಚಟುವಟಿಕೆಗಳು-ವಿವೇಕಾನಂದರ ಧಾರ್ಮಿಕ ಪುನರ್‌ಜೀವನದ ಕನಸು-ಇವುಗಳ ನಡುವೆ ಒಂದು ಅಸಮ ಸ್ಪರ್ಧೆಯಿದೆಯೆಂಬುದು ಕುವೆಂಪು ಮಂಡಿಸುವ ಚೌಕಟ್ಟು. ಮತಾಂತರವೆನ್ನುವುದು ಒಂದು ಸ್ಪರ್ಧೆಯೆನ್ನುವ ಭಾವನೆ ಓದುಗರಲ್ಲಿ ಮೂಡುವಂತೆ ಪ್ರತಿಸ್ಪರ್ಧಿ, ಸಿಂಹಕಂಠ, ಖೆಡ್ಡಾ, ಬೇಟೆ - ಇಂತಹ ಪದಗಳನ್ನು ಬಳಸುತ್ತಾರೆ. ಆದರೆ ಇದಕ್ಕೆಲ್ಲ ಕಾರಣವಾಗಿರುವುದು ಇಲ್ಲಿಯ ಬ್ರಾಹ್ಮಣರ ಜೀವನ ರೀತಿ, ಸನಾತನ ಧರ್ಮದ ತಪ್ಪುಗ್ರಹಿಕೆ, ಮೂಢನಂಬಿಕೆ, ಕಂದಾಚಾರವೆಂಬುದನ್ನು ಗುರುತಿಸಿ ಭರ್ತ್ಸನಾಮಯವಾದ ಭಾಷೆಯಲ್ಲಿ ಟೀಕಿಸುತ್ತಾರೆ. ಆದರೆ ಪಾದ್ರಿಯ "ಉಪಯೋಗ" ಮತ್ತು "ಪ್ರಭಾವ" ಚಿನ್ನಪ್ಪ ಗೌಡ, ದೇವಯ್ಯ ಗೌಡರಂತಹ ಹೊಸಕಾಲದ ತರುಣರ ಕ್ರಾಪು, ಬಟ್ಟೆ, ವೇಷಭೂಷಣಗಳಷ್ಟಕ್ಕೆ ಸೀಮಿತವಾಗಿಲ್ಲ. ಪಾದ್ರಿಯ ಇಂಗ್ಲೀಷ್ ಜ್ಞಾನದಿಂದಾಗಿ ಕೂಡ ಆತ ಗೌಡರ ಮನೆಗಳಲ್ಲಿ ಸ್ವಾಗತಾರ್ಹ. ತಕ್ಕಮಟ್ಟಿಗೆ ಇಂಗ್ಲೀಷ್ ಬಲ್ಲ ಪಾದ್ರಿ ಹೊಸ ಕಾನೂನು, ಸರ್ಕಾರದ ವಿವರಗಳನ್ನು ಸಹ್ಯಗೊಳಿಸಬಲ್ಲ, ಪರಿಚಯ ಮಾಡಿಕೊಡಬಲ್ಲ ಏಜೆಂಟ್ ಕೂಡ. ಈ ಅಧ್ಯಾಯದಲ್ಲಿ ಬರುವ ಪಾದ್ರಿಯನ್ನು ಎಲ್ಲಿ, ಯಾರ ಜೊತೆ ಊಟಕ್ಕೆ ಕೂರಿಸಬೇಕು, ಹೇಗೆ ಆತಿಥ್ಯ ನೀಡಬೇಕು ಎಂಬ ಪ್ರಶ್ನೆ ಜಾತಿಪದ್ಧತಿಯಿಂದ ಹೊರಗಿರುವವರನ್ನು ಕೂಡ ಮುಟ್ಟಲು, ಒಳಗು ಮಾಡಿಕೊಳ್ಳಲು ಇರುವ್ ಆಯಾಮಗಗಳ ಕಡೆ ಗಮನ ಸೆಳೆಯುತ್ತದೆ. ಈ ವಿವರಗಳೆಲ್ಲವೂ ತಮ್ಮಷ್ಟಕ್ಕೆ ತಾವೇ ಮತನಾಡುವುದರಿಂದ ಹೆಚ್ಚು ಬರೆಯುವ ಅಗತ್ಯವಿಲ್ಲ.

ಈ ಅಧ್ಯಾಯದ ವಿಶೇಷವೆಂದರೆ ನಮಗೆ ಸಿಗುವ ದೇವಯ್ಯಗೌಡನ ಒಂದು ದಿನದ ವೈಯಕ್ತಿಕ ಇತಿಹಾಸ ಕಾದಂಬರಿ ಪ್ರಕಾರದಲ್ಲಿ ಮಾತ್ರ ಸಾಧ್ಯವಾಗುವಂತಹದು. ಪಾದ್ರಿಯ ಪ್ರಭಾವದಿಂದಾಗಿ ದೇವಯ್ಯನಿಗೆ ತನ್ನ ಜಾತಿಯವರ ರೀತಿ ನೀತಿ ಆಚರಣೆಗಳ ಬಗ್ಗೆ ತಿರಸ್ಕಾರ ಮೂಡಿದೆ. ಆದರೆ ಇಡೀ ಕುಟುಂಬವನ್ನು ಹೊಸ ವಿಚಾರಗಳ ಕಡೆ ಒಲಿಸುವಷ್ಟು ಬೌದ್ಧಿಕ ಸಾಮರ್ಥ್ಯ, ಪ್ರೀತಿ, ವಿವೇಚನೆ ಅವನಿಗಿಲ್ಲ. ಇತರರನ್ನು ಆತ ಕೀಳಾಗಿ ನೋಡಬಲ್ಲ ಮಾತ್ರವಷ್ಟೇ. ಇಂತಹ ದೇವಯ್ಯ ಚೆಲುವು ತುಂಬಿದ ತನ್ನ ಮೋಹದ ಹೆಂಡತಿಯ ಜೊತೆ ಹೇಗೆ ಸೆಟೆದುಕೊಂಡ, ಸೋತ, ಪ್ರೀತಿ ಮಾಡಿದ, ಇಂತಹ ಗಂಡನನ್ನು ಒಲಿಸಿಕೊಳ್ಳಲು ದೇವಮ್ಮ ಯಾವ ರೀತಿ ಆತಂಕಕ್ಕೊಳಗಾದಳು ಎಂಬುದನ್ನು ಸೂಚಿಸುವ ವಿವರಗಳು ಮನೋಜ್ಞವಾಗಿವೆ. ನಮ್ಮ ವೈಚಾರಿಕತೆ-ಆದರ್ಶ ಎಲ್ಲವೂ ಒಂದು ಆಪ್ತ ಭಾವನಾತ್ಮಕ ಸನ್ನಿವೇಶದಲ್ಲಿ ಹೇಗೆ ಪರೀಕ್ಷೆಗೊಳಗಾಗುತ್ತದೆ ಎಂಬುದು ಮುಖ್ಯ. ಎಲ್ಲ ವೈಚಾರಿಕತೆಗಳಿಂದಾಚೆಗೂ ಉಳಿಯುವ ಮನುಷ್ಯ ಪ್ರೀತಿಯ ಸಂಬಂಧದ ಲಯಗಳನ್ನು, ಧ್ವನಿಗಳನ್ನು ಈ ವಿವರಗಳು ಸೂಚಿಸುತ್ತವೆ.

ಇಂತಹ ವಲಯವೊಂದನ್ನು ಪ್ರವೇಶಿಸುವುದಕ್ಕೆ ಕಾದಂಬರಿಕಾರರಿಗೆ ಸಾಧ್ಯವಾಗಿರುವುದರಿಂದಲೇ ಮತಾಂತರದ ವ್ಯಾಪ್ತಿ, ಪ್ರಭಾವ, ಸಾರ್ಥಕತೆ ಬಗ್ಗೆ ಇದಮಿತ್ಥಂ, ಇದು ಸರಿ, ಅದೇ ತಪ್ಪು ಎನ್ನುವ ಧೋರಣೆ ತಳೆಯುವುದು ಸಾಧ್ಯವಾಗುವುದಿಲ್ಲ. ಆಸಕ್ತ ಓದುಗರು ಇಂತಹದೇ ಸಂದರ್ಭಗಳನ್ನು ಕಾರಂತರು ತಮ್ಮ `ಮೈಮನಗಳ ಸುಳಿಯಲ್ಲಿ' , ಭೈರಪ್ಪನವರು `ಆವರಣ' ಕಾದಂಬರಿಯಲ್ಲಿ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಬಹುದು. ನನ್ನ ಸೀಮಿತ ಓದನ್ನೇ ಆಧಾರವಾಗಿಟ್ಟುಕೊಂಡು ಸ್ವಲ್ಪ ಧೈರ್ಯ ಮಾಡಿ ಹೇಳಬಹುದಾದರೆ ಹೊಸ ತಲೆಮಾರಿನ ಬರಹಗಾರರಿಗೆ ಇಂತಹ ಆಪ್ತ ಸನ್ನಿವೇಶಗಳ ನಿರ್ವಹಣೆ ಇಷ್ಟೊಂದು ಧ್ವನಿಪೂರ್ಣವಾಗಿ ಇನ್ನೂ ಸಾಧ್ಯವಾಗಿಲ್ಲ. ಬೇರೆ ಬೇರೆ ಹಿನ್ನೆಲೆಗಳ-ಸಂಸ್ಕೃತಿಗಳ ಗಂಡು ಹೆಣ್ಣುಗಳ ಸಂಬಂಧವನ್ನು ಬಹುಪಾಲು ನಮ್ಮಲ್ಲಿ ಆಶಯಗಳ ಮಟ್ಟದಲ್ಲಿ ಇಲ್ಲ, ಆಸೆಯ ಪೂರೈಕೆ ನೆಲೆಗಳಲ್ಲೇ ಗ್ರಹಿಸಲಾಗುತ್ತದೆ. `ಕುಸುಮಬಾಲೆ' ಕೂಡ ಇದಕ್ಕೆ ಅಪವಾದವೇನಲ್ಲ.

೨೮ನೇ ಅಧ್ಯಾಯವು ಮತಾಂತರಕ್ಕೆ ಸಂಬಂಧಿಸಿದ ಹಾಗೆ ಇನ್ನೊಂದು ನೆಲೆಯನ್ನು ನಮಗೆ ಪರಿಚಯಿಸುತ್ತದೆ. ಕ್ರೈಸ್ತಧರ್ಮೀಯರಿಗೆ ಇಲ್ಲಿಯ ಸಂಸ್ಕೃತಿಯ, ಸ್ಥಾನಿಕ ಜೀವನ ಶೈಲಿ-ಮೌಲ್ಯ ಪದ್ಧತಿಗಳ ಪರಿಚಯವಿರಲಿಲ್ಲ. ಮೇಲು ಜಾತಿಯವರಿಗೆ ಮಾತ್ರ ಸಂಸ್ಕೃತಿ-ನಾಗರಿಕತೆಯಿದೆ, ಉಳಿದವರಿಗೆ ಇಲ್ಲ. ಹಾಗಾಗಿ ಅವರನ್ನೂ ತಮ್ಮ ಪ್ರಭಾವದ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬುದು ಮತಪರಿವರ್ತನಕಾರರಿಗೆಲ್ಲ ಇರುವ ಒಂದು ಗ್ರಹೀತ. ಆದರೆ ಈ ವರ್ಗದ ಜನರಲ್ಲೂ ಇರುವ ಲೋಕದೃಷ್ಟಿ, ಆಚರಣೆಗಳನ್ನು ಕೂಡ ಗಮನಿಸಿ ಮುಖಮುಖಿಯಾಗಬೇಕಾಗುತ್ತದೆ. ಆಫ್ರಿಕಾದ ದೇಶಗಳ ಉದಾಹರಣೆಯನ್ನು ಗಮನಿಸುವುದಾದರೆ ಕ್ರೈಸ್ತಧರ್ಮಕ್ಕೆ ಪರಿವರ್ತನೆಗೊಂಡೂ ಕೂಡ ಜನಾಂಗಗಳು, ಬುಡಕಟ್ಟುಗಳು ತಮ್ಮ ತಮ್ಮ ವಿಶಿಷ್ಟತೆಯನ್ನು ಉಳಿಸಿಕೊಂಡಿವೆ. ನಮ್ಮಲ್ಲು ಇಸ್ಲಾಂ, ಬೌದ್ಧ, ಕ್ರೈಸ್ತಧರ್ಮಕ್ಕೆ ಪರಿವರ್ತನೆಗೊಂಡವರೆಲ್ಲರೂ ತಮ್ಮ ತಮ್ಮ ಸಾಂಸ್ಕೃತಿಕ ವಿಶಿಷ್ಟತೆಯನ್ನು ಉಳಿಸಿಕೊಂಡೇ ಇದ್ದಾರೆ. ಇದೊಂದು ಸಂಕೀರ್ಣವಾದ ಪ್ರಕ್ರಿಯೆ. ಹೊಸದನ್ನು "ಪಡೆಯುವ" "ಒಪ್ಪಿಕೊಳ್ಳುವ" "ಒಳಗೊಳ್ಳುವ" ರೀತಿನೀತಿಗಳು ಒಂದೇ ರೀತಿಯಿರಬೇಕಾಗಿಲ್ಲ. ಮತಾಂತರಗೊಳ್ಳದವರೂ ಕೂಡ ತಮ್ಮ ದಿನನಿತ್ಯದ ಬದುಕಿನಲ್ಲಿ, ಜೀವನಶೈಲಿಯಲ್ಲಿ ಇತರ ಧರ್ಮ-ಸಂಸ್ಕೃತಿಗಳ ವಿವರಗಳನ್ನು ರೂಢಿಸಿಕೊಂಡಿರಬಹುದಲ್ಲವೇ! ಈ ಕುರಿತು ರೊವೆನಾ ರಾಬಿನ್‌ಸನ್ ಎಂಬ ಲೇಖಕಿ: Conversion-Continuity and Change ಎನ್ನುವ ಕೃತಿಯಲ್ಲಿ ವಿಶಿಷ್ಟವಾದ ಒಳನೋಟಗಳನ್ನು ನೀಡಿದ್ದಾರೆ.


ಹಿಂಸೆ, ಬಲವಂತದಿಂದ ಮಾತ್ರವೇ ಜನ ಮತಾಂತರಗೊಳ್ಳುತ್ತಾರೆ ಎಂದು ಭಾವಿಸುವುದು ತಪ್ಪು. ಇದು ಒಂದು ಕಾರಣವಾಗಿರಬಹುದು ಮಾತ್ರವಷ್ಟೇ. ಮತಾಂತರಗೊಳಿಸುವವರು ನೀಡುವ ಸೇವೆ, ಪ್ರಲೋಭನೆಗಳೆಲ್ಲವನ್ನು ಇವರು ನಿಸ್ಸಹಾಯಕತೆಯಿಂದಲೇ ನಿಷ್ಕ್ರಿಯವಾಗಿಯೇ ಸ್ವೀಕರಿಸುತ್ತಾರೆ ಎಂದು ಭಾವಿಸುವುದು ಕೂಡ ತಪ್ಪು. ಏನೇ ಆದರೂ ಮತಾಂತರಗೊಳ್ಳುವವರದು ಕೂಡ ಒಂದಲ್ಲ ಒಂದು ಹಂತದಲ್ಲಿ "ಆಯ್ಕೆ" ಇದ್ದೇ ಇರುತ್ತದೆ. ಮತಾಂತರಕ್ಕೆ ಬೇಕಾದ ಲೌಕಿಕ/ಸಾಂದರ್ಭಿಕ ಒತ್ತಡಗಳನ್ನು ಪರಿವರ್ತನಕಾರರು ಸೃಷ್ಟಿಸುತ್ತಾರೆ ಎಂಬುದನ್ನು ಗಮನಿಸಿಯೂ ಮತಾಂತರದ ಹಿಂದಿರುವ ಆಯ್ಕೆ, ಸಾಮಾಜಿಕ-ಸಾಂಸ್ಕೃತಿಕ ಅಭೀಪ್ಸೆಗಳನ್ನು ಗಮನಿಸಬೇಕಾಗುತ್ತದೆ. ಮಿಷನರಿಗಳ ಉದ್ದೇಶವೂ ಕೂಡ ಹೀಗೇ ಸಂಕೀರ್ಣವಾಗಿರುತ್ತದೆ. ಇವರ ಯೋಜನೆ-ಕಾರ್ಯಕ್ರಮಗಳಲ್ಲಿ ಕೂಡ ಧಾರ್ಮಿಕ, ಆರ್ಥಿಕ, ಸಾಮಾಜಿಕ ಆಯಾಮಗಳ ಕಲಸುಮೇಲೋಗರವಿರುತ್ತದೆ. ಇದನ್ನೆಲ್ಲ ಹಿನ್ನೆಲೆಯಾಗಿಟ್ಟುಕೊಂಡು ಮತಾಂತರದ ಇತಿಹಾಸವನ್ನು ಗಮನಿಸಿದಾಗ ಮಾತ್ರ ನಮಗೆ ಸತ್ಯಕ್ಕೆ ಹತ್ತಿರವಾದ ಚಿತ್ರ ಸಿಗುತ್ತದೆ. ( ಈ ಒಳನೋಟಗಳನ್ನು ಗಮನಿಸಿ ಗೋವಾದ ಸಾಂಸ್ಕೃತಿಕ ಇತಿಹಾಸವನ್ನು ಕುರಿತು ಬರೆದ ಪುಸ್ತಕ -A Daughter's Story-Maria Aurorra Couto ವನ್ನು ಓದುಗರು ಗಮನಿಸಬಹುದು.)

ಈ ಅಧ್ಯಾಯದಲ್ಲಿ ಕುವೆಂಪು ಪಾದ್ರಿಗೆ ಸ್ಥಾನಿಕ ವೈಶಿಷ್ಟ್ಯ ವಿವರಗಳ ಬಗ್ಗೆ ಇರುವ ಮೇಲುಸ್ತರದ ತಿಳುವಳಿಕೆಯನ್ನು ಕೆಳವರ್ಗದವರ ತಿಳುವಳಿಕೆಯೊಡನೆ ಮುಖಾಮುಖಿ ಮಾಡಿ ಗೇಲಿ ಮಾಡುತ್ತಾರೆ. ಈ ಗೇಲಿಯನ್ನು ಮೀರಿದ ಇನ್ನೊಂದು ಆಯಾಮವೆಂದರೆ ಪಾದ್ರಿಗೂ ಇರುವ ಕಷ್ಟ ಮತ್ತು ಹೆಣಗಾಟದ ಸೂಚನೆಗಳು ಇಲ್ಲಿ ನಮಗೆ ಸಿಗುವುದು. ದೇವಯ್ಯ ಪಾದ್ರಿಯನ್ನು ಒಪ್ಪುವುದು, ಮತಾಂತರಗೊಳ್ಳಲು ಸಿದ್ಧವಾಗುವುದು ಇದರ ಹಿಂದಿರುವ ಉದ್ದೇಶಗಳು ಕೂಡ ಪ್ರಾಮಾಣಿಕವಾದುದಲ್ಲ, ಘನವಾದುದಲ್ಲ. ದೇವಯ್ಯ ಕೂಡ ಪಾದ್ರಿಯನ್ನು "ಉಪಯೋಗಿಸಿ"ಕೊಳ್ಳುತ್ತಿರುತ್ತಾನೆ. ನಾವೆಲ್ಲರೂ ಸಮಾನ್ಯವಾಗಿ ಪರಿವರ್ತನಕಾರರ ಉದ್ದೇಶ, ಉಪಾಯ ತಂತ್ರಗಾರಿಕೆಯನ್ನು ಕುರಿತು ಮಾತನಾಡುತ್ತೇವೆ, ಮತಾಂತರಗೊಳ್ಳುವವರೆಲ್ಲ ಮುಗ್ಧರು ಅಮಾಯಕರು ಎಂಬಂತೆ. ಇಂತಹ ತಪ್ಪು ಕಲ್ಪನೆಯನ್ನು ಕೂಡ ಈ ವಿವರಗಳು ಒಡೆದು ಹಾಕುತ್ತವೆ. ಇತಿಹಾಸದಲ್ಲಿ ಮುನ್ನುಗ್ಗುವ, ಮೇಲೆ ಬರುವ ಆಸೆಯಲ್ಲಿ, ಯೋಜನೆಯಲ್ಲಿ ಮತಾಂತರವು ಕೂಡ ಮತಾಂತರಗೊಳ್ಳುವವರಿಗೆ ಒಂದು ಸಾಧನವಾಗಿರಬಹುದು, ಅಸ್ತ್ರವಾಗಿರಬಹುದು.

ನೇಟಿವ್ ಪಾದ್ರಿ, ಕರಿಪಾದ್ರಿಯೆಂದೆಲ್ಲ ಕುವೆಂಪುವಿನಿಂದ ಕರೆಸಿಕೊಳ್ಳುವ ಪಾದ್ರಿಯ ನಿತ್ಯ ಜೀವನದ ಕಷ್ಟಗಳು ಕೂಡ ಕಡಮೆಯೇನಲ್ಲ. ಈತನ ಬಗ್ಗೆ ಕಾದಂಬರಿಕಾರರ ವ್ಯಂಗ್ಯವೇನಿದ್ದರೂ, ಕೃತಿಯ ವಿವರಗಳು ಆತನ ಕಷ್ಟಗಳನ್ನು ಕೂಡ ಗಮನಿಸುತ್ತದೆ. ನೇಟಿವ್ ಪಾದ್ರಿಯಾದ್ದರಿಂದ ಜನರಿಗೆ ಆತನ ಬಗ್ಗೆ ವಿಶೇಷ ಗೌರವಾದರಗಳಿಲ್ಲ. ಅದೆಲ್ಲವೂ `ದೊಡ್ಡಪಾದ್ರಿ', `ಬಿಳಿಪಾದ್ರಿ'ಗೆ ಮೀಸಲು. ಉಪದೇಶಿಯಿಂದ ರೆವರೆಂಡ್ ಸ್ಥಾನಕ್ಕೆ ಬಡ್ತಿ ಪಡೆಯಲು ಹಳ್ಳಿಗರ ಜೊತೆ ಆತ (ಜೀವರತ್ನಯ್ಯ) ಏಗಬೇಕು. ಎಲ್ಲಕ್ಕಿಂತ ಆತನೂ ಮುಖ್ಯವಾಗಿ ಹೆಣ್ಣುಮಗಳೊಬ್ಬಳ ತಂದೆ. ದೇವಯ್ಯನಿಗೆ ಪಾದ್ರಿಯ ಮಗಳೊಡನೆ ಒಡನಾಟ ಆತನ ಲಂಪಟತನದ ಇನ್ನೊಂದು ಭಾಗ. ಮಗಳನ್ನೂ, ಅವಳ ದೇಹವನ್ನೂ, ಪಾದ್ರಿ ತನ್ನ ತಂದೆಯ ಕರ್ತವ್ಯ ನಿರ್ವಹಿಸಲು, ವೃತ್ತಿಯಲ್ಲಿ ಮುಂದೆ ಬರಲು ಮತ ಪರಿವರ್ತನೆಯ ಪುಣ್ಯ ಸಂಪಾದನೆ ಮಾಡಲು ಉಪಯೋಗಿಸಿಕೊಳ್ಳಬೇಕಾದ ಸಂಕಟದಲ್ಲಿದ್ದಾನೆ. ಲೇಖಕರ ಪ್ರಕಾರವೇ "ಆ ಜಾತಿಗೆ ಸೇರಿಸೋ ಹುಚ್ಚು ಬಿಡಿಸದೆ ಇದ್ರೆ ಆಗೋದಿಲ್ಲ ಆ ಪಾದ್ರಿಗೆ! ಬಾಕಿ ಎಲ್ಲ ಒಳ್ಳೆ ಮನುಷ್ಯನೇ!" (ಪುಟ ೪೮೨).

ಕಾದಂಬರಿಯ ಕೊನೆ ಕೊನೆಯ ಅಧ್ಯಾಯದ ವಿವರಗಳು ಕಲಾವಿದ ಕುವೆಂಪುಗಿಂತಲೂ ಹೆಚ್ಚಾಗಿ ವೈಚಾರಿಕ ಕುವೆಂಪುವನ್ನೇ ಮುನ್ನೆಲೆಗೆ ತರುತ್ತವೆ. ಜೊತೆಗೆ ಕತೆಯನ್ನೂ, ಕೃತಿಯನ್ನು ಮುಗಿಸುವ ಒತ್ತಾಯವು ಸೇರಿಕೊಂಡು ಕುವೆಂಪುರವರು ತಮ್ಮ ದರ್ಶನ-ಸಂದೇಶವನ್ನು ನೀಡುವ ಕಡೆಗೇ ಗಮನಕೊಟ್ಟಂತಿದೆ. ರೆವರೆಂಡ್ ಲೇಕ್‌ಹಿಲ್ ಹೇಳುವ ಮಾತುಗಳೆಲ್ಲ ಅಕ್ಷರಶಃ ಕುವೆಂಪು ಮಾತುಗಳೇ. ಲೇಕ್‌ಹಿಲ್ ಬಗ್ಗೆ ಅವರು ಹೇಳುವ ಮಾತುಗಳು ಹೀಗಿವೆ:

"ಕರೀ ಪಾದ್ರಿಯಂತಲ್ಲೋ; ನಿಜವಾಗಿಯೂ ದೊಡ್ಡ ಮನುಷ್ಯನೇ ಕಣೋ ಈ ಬಿಳಿ ಪಾದ್ರಿ" (ಪುಟ ೬೯೮). ಪುಟ ೬೯೭-೬೯೮ರಲ್ಲಿ ರೆವ್‌ರೆಂಡ್ ನೀಡುವ ಪುಟ ಪೂರ್ಣ ಉಪದೇಶ ಕುವೆಂಪು ವಿಚಾರಗಳೇ. ಇಷ್ಟೇ ಅಲ್ಲ ರೆವರೆಂಡ್‌ಗೆ ಮುಕುಂದಯ್ಯ ಕಾಣಿಸಿಕೊಳ್ಳುವ ರೀತಿ ಕೂಡ ಕಾದಂಬರಿಕಾರರ ಪಕ್ಷಪಾತವನ್ನು ಓದುಗರಿಗೆ ನಿವೇದಿಸುತ್ತದೆ:

"ಆದರೆ ಅವನ ಮುಖದಲ್ಲಿ ಅಲ್ಲಿದ್ದವರಾರಲ್ಲಿಯೂ ಇಲ್ಲದಿದ್ದ ಒಂದು ಸತ್ವಪೂರ್ಣ ತೇಜಸ್ಸನ್ನೂ ಸರಳ ಸುಂದರ ಪ್ರಸನ್ನತೆಯನ್ನೂ ದರ್ಶಿಸಿದ "ಲೇಕ್‌ಹಿಲ್"‌ರಿಗೆ (ಪುಟ ೬೯೬).

ಕುವೆಂಪು ಕಾದಂಬರಿಯ ಓದು ಮತಾಂತರದ ಸಂಕೀರ್ಣ ನೆಲೆಗಳನ್ನು ಗ್ರಹಿಸಲು ನಮಗೆ ನೆರವಾಗಬಹುದೆಂದು ನನ್ನ ಇಂಗಿತ. ಪರ-ವಿರೋಧದ ಸರಳ ನೆಲೆಗಳಲ್ಲಿ ನಾವು ಮಾತನಾಡುತ್ತಿದ್ದರೆ ಪರಿವರ್ತನಕಾರರ-ಮತಾಂತರಗೊಳ್ಳುವವರ - ಇಬ್ಬರ ಮನೋಭೂಮಿಕೆಗಳು ನಮಗೆ ತಿಳಿಯುವುದೇ ಇಲ್ಲ. ಸರಿಯಾಗಿ ಹೇಳಬೇಕಾದರೆ, ಕುವೆಂಪು ಮಲೆನಾಡಿನಲ್ಲಿ, ಕಾರಂತ ಕರಾವಳಿಯಲ್ಲಿ ಕಂಡು ಕೃತಿಯಲ್ಲಿ ಶೋಧಿಸಿದ ನೆಲೆಗಳಿಗಿಂತಲೂ ಈವತ್ತು ಮತಾಂತರ ಇನ್ನೂ ಸಂಕೀರ್ಣವಾಗಿದೆ. ಪರಿವರ್ತನಕಾರರು ಮತ್ತು ಮತಾಂತರಗೊಳ್ಳುವವರು - ಎರಡು ದೃಷ್ಟಿಯಿಂದಲೂ ಪರಿವರ್ತನಕಾರರಿಗೆ ಹಿಂದೆಂದೂ ಇಲ್ಲದಷ್ಟು ಹಣ-ಪ್ರಭಾವ- ಸಂಪನ್ಮೂಲಗಳಿವೆ. ಮತಾಂತರಗೊಳ್ಳುವವರಿಗೆ ಮತಾಂತರದ ಜೊತೆಗೆ ಹೆಚ್ಚಿನ ಶಿಕ್ಷಣ-ಉದ್ಯೋಗಾವಕಾಶಗಳ ಆಯ್ಕೆ ಮತ್ತು ಸ್ವಾತಂತ್ರ್ಯವಿದೆ, ಪ್ರಗತಿಯ ಆಸೆಯಿದೆ, ಪ್ರಜಾತಾಂತ್ರಿಕ ಚೌಕಟ್ಟಿದೆ.

ಇಷ್ಟೇ ಮುಖ್ಯವಾಗಿ ಮತಾಂತರವನ್ನು ವಿರೋಧಿಸುವ ಜನರೇ ಪುನರ್‌ಮತಾಂತರ, ಹಿಂಮತಾಂತರ (Reconversion)ದ ಪರವಾಗಿದ್ದಾರೆ. ಪುನರ್‌ಮತಾಂತರವೂ ಕೂಡ ಮತಾಂತರವೇ. ಮತಾಂತರ ತಪ್ಪೆನ್ನುವುದಾದರೆ ಪುನರ್ ಮತಾಂತರ ಕೂಡ ತಪ್ಪೇ ಎಂದು ವಾದಿಸಿ ತೃಪ್ತಿ ಪಡುವಹಾಗಿಲ್ಲ. ಪುನರ್ ಮತಾಂತರದ ವಕ್ತಾರರು ಉಪಯೋಗಿಸುವ ತಂತ್ರ-ಕಾರ್ಯಕ್ರಮಗಳು ಹೆಚ್ಚು ಕಡಮೆ ಮತಾಂತರದ ವಕ್ತಾರರ ಕ್ರಮಗಳಂತೆಯೇ ಇರುತ್ತವೆ. ಇಬ್ಬರಿಗೂ ಮತಾಂತರಗೊಳಿಸಬೇಕಾದ ಜನ ಒಂದು ರೀತಿಯ "ವಸ್ತು".

ಮತಾಂತರವನ್ನು ಗಾಂಧಿ ಕೂಡ ವಿರೋಧಿಸಿದ್ದರು. ರಾಮಕೃಷ್ಣ-ವಿವೇಕಾನಂದರು ಕೂಡ. ಇವರೆಲ್ಲ ಪ್ರಶ್ನಿಸಿದ್ದು ಮತಾಂತರದ ಉದ್ದೇಶಗಳನ್ನು, ನಿರರ್ಥಕತೆಯನ್ನು, ಮತಾಂತರದ ಹಕ್ಕನ್ನಲ್ಲ. ಆಧ್ಯಾತ್ಮಿಕ ಸಾಕ್ಷಾತ್ಕಾರದಲ್ಲಿ, ಮತ ಪರಿವರ್ತನೆಯಿಂದ ಪಡೆಯುವಂತಹದ್ದು ಏನೂ ಇಲ್ಲ ಎಂಬುದು ಇವರ ನಿಲುವಾಗಿತ್ತು. ಇಂಗ್ಲೆಂಡಿನಲ್ಲಿದ್ದಾಗ ಪ್ರೊಫೆಸರ್ ಮೈಟ್‌ಲ್ಯಾಂಡ್‌ರ ಸಂಪರ್ಕಕ್ಕೆ ಬಂದ ಗಾಂಧಿಗೆ ಹೊಸ ಧರ್ಮಗಳ, ಮತಾಂತರದ ನಿರರ್ಥಕತೆ ಗೊತ್ತಾಗಿತ್ತು. ಎಲ್ಲ ಧರ್ಮಗಳ ಮೂಲ ತಿರುಳನ್ನು ಹೊಸ ಕಾಲಕ್ಕೆ ಹೊಂದಿಸುವುದರ ಬಗ್ಗೆ ಅವರಿಗಿದ್ದ ಕಾಳಜಿಯ ಮುಂದೆ ಮತಾಂತರ ದೊಡ್ಡ ಸಮಸ್ಯೆಯಾಗಿ ಕಂಡಿರಲಾರದು. ಧರ್ಮದ, ಸಂಸ್ಕೃತಿಯ ಮೂಲಬೇರುಗಳಿಗೆ, ಆಶಯಗಳಿಗೆ ಹಿಂದಿರುಗುವುದು-ಸಮಾಜವನ್ನು ಮೂಢನಂಬಿಕೆ, ಜಾತಿಪದ್ಧತಿಯಿಂದ ಬಿಡುಗಡೆಗೊಳಿಸುವುದು - ಎರಡೂ ಕನಸನ್ನು ಒಟ್ಟಿಗೇ ಕಂಡಿದ್ದ ವಿವೇಕಾನಂದರಿಗೆ ಕೂಡ ಮತಾಂತರದ ಬಗ್ಗೆ ಕಡು ವಿರೋಧವಿತ್ತು. ಈವತ್ತು ಮತಾಂತರವನ್ನು ವಿರೋಧಿಸುತ್ತಿರುವವರ ನೆಲೆಗಳನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸಬೇಕು. ಧಾರ್ಮಿಕ-ಸಾಂಸ್ಕೃತಿಕ ಕಾರಣಗಳಿಗಿಂತಲೂ ಹೆಚ್ಚಾಗಿ ಮತಾಂತರಗೊಳ್ಳುತ್ತಿರುವವರ "ಆಯ್ಕೆ"ಯ ಹಕ್ಕಿನ ಬಗ್ಗೆಯೇ ಒಂದು ಪ್ರಮಾಣದ ಅಸಹನೆ ಈವತ್ತಿನ ವಿರೋಧದಲ್ಲಿ ಎದ್ದು ಕಾಣುತ್ತದೆ. ಮತಾಂತರಗೊಳ್ಳುತ್ತಿರುವವರಲ್ಲಿ ಸೂಕ್ಷ್ಮರಾದವರು ಕೂಡ ತಮ್ಮ ತಮ್ಮ ಮನೋಲೋಕದ ಆಧ್ಯಾತ್ಮಿಕ ಲೌಕಿಕ ಪ್ರೇರಣೆಗಳ ಬಗ್ಗೆ ಬಿಚ್ಚು ಮನಸ್ಸಿನಿಂದ ಹೇಳಿಕೊಳ್ಳುವುದಿಲ್ಲ. ಹೇಳಿಕೊಳ್ಳುವಂತಹ ಸಾಂಸ್ಕೃತಿಕ ವಾತಾವರಣವೂ ಇಲ್ಲ. ಮತಾಂತರದಿಂದ ಮೇಲುಜಾತಿ ಹಿಂದೂಗಳ ಮನಸ್ಸಿನ ಮೆಲುಂಟಾಗುವ ಗಾಯವನ್ನು ಕಂಡು ಸಂತೋಷಪಡುವುದು ಮಾತ್ರವೇ ಇವರ ಉದ್ದೇಶವಾಗಿರಲಾರದು.


ಒಂದಲ್ಲ ಒಂದು ಕಾರಣಕ್ಕಾಗಿ ಇತಿಹಾಸದಲ್ಲಿ ಮೇಲುಜಾತಿಯವರು ಕೂಡ ಬೇರೆ ಬೇರೆ ಸಂದರ್ಭಗಳಲ್ಲಿ `ಮತಾಂತರ'ಗೊಂಡಿದ್ದಾರೆ. ಜೈನರು, ಕ್ರೈಸ್ತರು, ಸಾರಸ್ವತರು, ವೀರಶೈವರು, ವೈಷ್ಣವರು, ರಜಪೂತರು - ಹೀಗೇ. ಈವತ್ತು ನಾವು ಕೆಳಸ್ತರದ, ದಲಿತರ ಬಗ್ಗೆ ಏನು ಹೇಳುತ್ತೇವೋ ಅಂತಹ ಆ ಲೌಕಿಕ ಪ್ರಯೋಜನಗಳನ್ನೆಲ್ಲ ಮತಾಂತರದಿಂದ ಮೇಲುಜಾತಿಯವರು ಕೂಡ ಪಡೆದಿದ್ದಾರೆ. ಮಿಷನರಿಗಳ, ಪರಿವರ್ತನಕಾರರ ಗಮನವೂ ಮೊದಮೊದಲು ಇದ್ದದ್ದು ಮೇಲುಜಾತಿಗಳ ಕಡೆಗೇ. ಹೀಗೆಲ್ಲ ಇರುವಾಗ ಕೆಳಜಾತಿಗಳು-ವರ್ಗಗಳ ಮತಾಂತರದ ಬಗ್ಗೆ ಮಾತ್ರ ಹುಯಿಲೆಬ್ಬಿಸುವುದು ವಿಚಿತ್ರವಾಗಿ ಕಾಣುತ್ತದೆ.

ಭೈರಪ್ಪ ಪ್ರಣೀತ ಚರ್ಚೆಯನ್ನು ಕಾರಣವಾಗಿಟ್ಟುಕೊಂಡು ಈ ಲೇಖನವನ್ನು ರಚಿಸಿದ್ದರೂ ಪ್ರಗತಿಪರರು, ಜಾತ್ಯತೀತವಾದಿಗಳು ಮತಾಂತರದ ಸಂಕೀರ್ಣ ನೆಲೆಗಳನ್ನು ಗ್ರಹಿಸಿದ್ದಾರೆಂದು ನನ್ನ ಇಂಗಿತವಲ್ಲ. ಇವರ ಆಶಯಗಳು, ಉದ್ದೇಶಗಳ ಪ್ರಾಮಾಣಿಕತೆ-ಜನಪ್ರೀತಿಯಿಂದಲೇ ಕೂಡಿರಬಹುದಾದರೂ ಸಾರ್ವಜನಿಕರ ವಿಶ್ವಾಸಾರ್ಹತೆಯನ್ನು ಇವರಿಗೇಕೆ ಪಡೆಯಲು ಸಾಧ್ಯವಾಗುತ್ತಿಲ್ಲ, ಜಾತಿವಾದಿಗಳು-ಕೋಮುವಾದಿಗಳಲ್ಲದವರು ಕೂಡ ಇವರನ್ನೇಕೆ ಒಪ್ಪುವುದಿಲ್ಲ ಎಂಬುದು ಯೋಚಿಸಬೇಕಾದ ವಿಚಾರ.

ಮತಾಂತರ ಕುರಿತಂತೆ ಚರ್ಚೆಯನ್ನು ನಾವು ಸಾಹಿತಿಗಳಿಗೆ - ಸಾಹಿತ್ಯ ಕೃತಿಗಳಿಗೇ ಮೀಸಲಾಗಿಟ್ಟರೆ ಕೆಲವು ತೊಂದರೆಗಳಾಗುತ್ತವೆ. ಕುವೆಂಪು ಅವರಾಗಲೀ, ಭೈರಪ್ಪನವರಾಗಲೀ ಒಂದು ಐತಿಹಾಸಿಕ ಸಂದರ್ಭದಲ್ಲಿ ಬರೆಯುವ ಲೇಖಕರಷ್ಟೇ. ಇಂತಹ ಸಂದರ್ಭದ ಒತ್ತಾಯಗಳನ್ನು ಮೀರಿ ಕೂಡ ಕೆಲವು ಪ್ರಶ್ನೆಗಳಿರುತ್ತವೆ. ತಾತ್ವಿಕವಗಿ ಮತಾಂತರ ಕುರಿತಂತೆ ಹಿಂದೂಧರ್ಮದ ನಿಲುವೇನು? ಹಿಂದೂಧರ್ಮ ಮತಾಂತರವನ್ನು ಒಪ್ಪುವುದಿಲ್ಲ, ಆಧ್ಯಾತ್ಮಿಕ ಹುಡುಕಾಟದಲ್ಲಿ ಅಗತ್ಯವೆಂದು ಭಾವಿಸುವುದೂ ಇಲ್ಲ. ಇದಕ್ಕೆ ಹಿಂದೂ ಧರ್ಮದ ಲೋಕದೃಷ್ಟಿಯೇ ಕಾರಣ. ಈ ನೋಟವನ್ನು ತತ್ವಶಾಸ್ತ್ರದ ಹಿನ್ನೆಲೆ-ಪರಿಭಾಷೆಯಲ್ಲಿ ಸಮರ್ಥವಾಗಿ ವಿವರಿಸುವ ಉತ್ತಮ ಲೇಖನವೊಂದು ಕನ್ನಡದಲ್ಲಿದೆ. ಶ್ರೀ ಜಿ.ಹನುಮಂತರಾವ್‌ರ ಈ ಬರಹವನ್ನು `ಪುಸ್ತಕ ಮನೆ' ಮಾಸಿಕವು ತನ್ನ ನವೆಂಬರ್ ಸಂಚಿಕೆಯಲ್ಲಿ ಪುನರ್‌ಮುದ್ರಿಸಿದೆ (ಪುಟ ೫-೧೮). ಈ ಬರಹದಲ್ಲೂ ಶ್ರೀ ಹನುಮಂತರಾವ್ ಗಾಂಧಿ ನಿಲುವುಗಳನ್ನು, ಪ್ರೊ||ಮೈಟ್‌ಲ್ಯಾಂಡ್‌ರ ಗಾಂಧಿ ಮೇಲಿನ ಪ್ರಭಾವವನ್ನು ಗಮನಿಸುತ್ತಾರೆ. ಇಂತಹದೊಂದು ಉತ್ತಮ ಲೇಖನ ಓದುಗರ ಗಮನಕ್ಕೆ - ಪುನರ್ ಓದಿಗೆ ಅರ್ಹವಾಗಿದೆ.

ಕರಾವಳಿ ಸೀಮೆಯಲ್ಲಿರುವ ಗೋವಾ ಪ್ರದೇಶವೂ ನಾಲ್ಕೈದು ಶತಮಾನಗಳಿಂದ ಮತಾಂತರವನ್ನು ಬೇರೆ ಬೇರೆ ಸ್ತರಗಳಲ್ಲಿ ಎದುರಿಸಿ ಈವತ್ತಿಗೆ ವಿಶಿಷ್ಟವಾದ ಸಾಂಸ್ಕೃತಿಕ ಚಹರೆಯನ್ನು ರೂಢಿಸಿಕೊಂಡು ಆಧುನಿಕವಾಗಿದೆ. ಈ ಇತಿಹಾಸವನ್ನು ಹೇಗೆ ನೋಡಬೇಕು? ಮಿಷನರಿಗಳ ದೃಷ್ಟಿಯಿಂದಲೇ, ಮತಾಂತರಗೊಂಡವರ ದೃಷ್ಟಿಯಿಂದಲೇ, ಗಮನಿಸಬೇಕಾದ ದಾಖಲೆಗಳು ಯಾವುವು, ಯಾವ ರೀತಿಯ ಅಧ್ಯಯನ ಕ್ರಮದಿಂದ ಸತ್ಯಕ್ಕೆ ಹತ್ತಿರವಾಗಬಹುದು - ಇಂತಹ ಸಮಸ್ಯೆಗಳನ್ನೆಲ್ಲ ತಮ್ಮೆದುರಿಗಿಟ್ಟುಕೊಂಡು Maria Aurora Coutoಬರೆದಿರುವ ಕೃತಿ "A Daughter's Story" ಕೂಡ ಮತಾಂತರ ಕುರಿತ ನಮ್ಮ ತಿಳುವಳಿಕೆಯನ್ನು ಇನ್ನಷ್ಟು ಸೂಕ್ಷ್ಮಗೊಳಿಸಬಹುದು, ಮಾನವೀಯಗೊಳಿಸಬಹುದು. ಈ ಪುಸ್ತಕವನ್ನು ಓದಲು ಕಾರಣರಾದ ಶ್ರೀ ಜಿ.ರಾಜಶೇಖರ್‌ರವರ ಪ್ರೀತಿ-ಪ್ರೋತ್ಸಾಹವನ್ನು ಇಲ್ಲಿ ನೆನೆಯುತ್ತೇನೆ.
(ಫೆಬ್ರವರಿ ತಿಂಗಳ ಹೊಸತು ಪತ್ರಿಕೆಯಲ್ಲಿ ಪ್ರಕಟಿತ ಲೇಖನ)
(ಚಿತ್ರಗಳು: ವಿಕ್ರಾಂತ ಕರ್ನಾಟಕ - ಕನ್ನಡ ವಾರಪತ್ರಿಕೆಯ ಕೃಪೆ)

1 comment:

KALADAKANNADI said...

ಅಧ್ಭುತವಾದ ವಿಮರ್ಶೆ! ಮತಾ೦ತರದ ಬಗ್ಗೆ ಬಹಳಷ್ಟು ತಿಳಿದುಕೊ೦ಡೆ.
ನಮಸ್ಕಾರ, ನನ್ನಿ.