Sunday, June 28, 2009

ಪುಸ್ತಕಗಳ ಪುನರ್ಜನ್ಮ

ಪುನರ್ಜನ್ಮದ ಕಲ್ಪನೆಯಲ್ಲಿ ನಂಬಿಕೆಯಿಲ್ಲದವರು ಕೂಡ ವಯಸ್ಸಾಗುತ್ತಿದ್ದಂತೆ ಪುನರ್ಜನ್ಮದ ಬಗ್ಗೆ ಆಸೆ ಪಡುತ್ತಾರೆ. ಮತ್ತೆ ತಾವು ಹುಟ್ಟಲು ಸಾಧ್ಯವಾಗುವುದಾದರೆ ಪ್ರಿಯರಾದವರ ಜೊತೆ, ಬಂಧುಗಳ ಜೊತೆ, ಶತ್ರು-ಹಿತ ಶತ್ರುಗಳ ಜೊತೆ ಹೇಗೆ ವ್ಯವಹರಿಸಬೇಕು ಎಂದೆಲ್ಲ ಲೆಕ್ಕ ಹಾಕುತ್ತಾರೆ. ಪುನರ್ಜನ್ಮದ ಕಲ್ಪನೆಯ ಬಗ್ಗೆಯೆ ಮನುಷ್ಯನಿಗೆ ಅದೇಕೆ ಅಷ್ಟೊಂದು ಆಸೆಯೆಂದರೆ ಅಮರತ್ವದ ಅವನ ಬಯಕೆಯನ್ನು ಅದು ಪೂರೈಸುತ್ತದೆ. ಮನುಷ್ಯ ಪುನರ್ಜನ್ಮದ ಸಂಬಂಧ ತುಂಬಾ ಗಹನವಾದ ವಿಷಯ, ತಾತ್ವಿಕರಿಗೆ, ಧರ್ಮಭೀರುಗಳಿಗೆ. ಅದನ್ನು ಬಿಟ್ಟು ಅಮರತ್ವ ಬಯಸದ, ನಿರ್ಲಿಪ್ತವಾಗಿ ನಿರುಪದ್ರವಿಯಾಗಿ ಗ್ರಂಥಾಲಯದ ಮೂಲೆಯಲ್ಲೋ, ಮನೆಯ ಅಟ್ಟದಲ್ಲೋ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯ ಬಿಕರಿ ವಸ್ತುವಾಗಿ ಫುಟ್‌ಪಾತ್ ಮೇಲೋ ಪುಸ್ತಕವೊಂದು ತಾನು ಬಯಸದೆ ಕೂಡ ಪುನರ್ಜನ್ಮ ಪಡೆಯುವ ಬಗೆ ಸೋಜಿಗವಾದದ್ದು.

ವರ್ಜೀನಿಯಾ ವೂಲ್ಫ್‌ದು ಒಂದು ಮಾತಿದೆ. `ನಿನ್ನ ಬರವಣಿಗೆಗೆ ಸಮಕಾಲೀನರಿಂದ ಬರುವ ಪ್ರತಿಕ್ರಿಯೆ, ಮೆಚ್ಚುಗೆ, ಪ್ರಶಸ್ತಿ ಇದೆಲ್ಲ ಸಾಕಾಗುತ್ತಿಲ್ಲವೆಂದು ನೀನು ತಲೆ ಕೆಡಿಸಿಕೊಳ್ಳಬೇಡ. ನಿಜಕ್ಕೂ ನೀನು ಪ್ರತಿಭಾವಂತನಾಗಿದ್ದರೆ, ಅದೃಷ್ಟವಂತನಾಗಿದ್ದರೆ, ಮುಂದೆಂದೋ ಒಂದು ದಿನ, ಒಬ್ಬ ಓದುಗ, ಕೇವಲ ಒಬ್ಬ ಓದುಗ ನಿನಗೆ ಪುನರ್ಜನ್ಮ ಕೊಡುತ್ತಾನೆ.' ಈ ಮಾತು ಎಷ್ಟು ಸತ್ಯ ಎಂಬುದು ಪ್ರತಿಯೊಬ್ಬ ಓದುಗನ ಅನುಭವಕ್ಕೂ ಬಂದಿರುತ್ತದೆ. ಅಪ್ರಜ್ಞಾಪೂರ್ವಕವಾಗಿ, ಅಸ್ಪಷ್ಟವಾಗಿ.

ದೊಡ್ಡ ಗ್ರಂಥಾಲಯವೊಂದಕ್ಕೆ ನೀವು ಪ್ರವೇಶಿಸುತ್ತೀರಿ. ಹಲವು ಅಂತಸ್ತುಗಳ ಕಟ್ಟಡ ಅದು. ಲಕ್ಷಾಂತರ ಪುಸ್ತಕಗಳು, ಮನುಷ್ಯನಾದವನು ನೂರಾರು ಜನ್ಮವೆತ್ತಿ, ಹತ್ತಾರು ದೇಶಗಳಲ್ಲಿ ಹುಟ್ಟಿ ಬರೆದ ಪುಸ್ತಕಗಳವು. ಒಂದು, ಒಂದೇ ಒಂದು ಪುಸ್ತಕವನ್ನು ನೀವು ಕೈಗೆತ್ತಿಕೊಳ್ಳುತ್ತೀರಿ. ಕತೆಯೋ, ಕಾದಂಬರಿಯೋ, ಜೀವನ ಚರಿತ್ರೆಯೋ, ಪ್ರವಾಸ ಕಥನವೋ, ಅದು ನಿಮ್ಮ ಮನಸ್ಸಿಗೆ ಪ್ರಿಯವಾಗುತ್ತದೆ. ಎಂದೋ, ಎಲ್ಲೋ, ಯಾರೋ ಬರೆದದ್ದು. ನಿಮ್ಮ ಅನುಭವಕ್ಕೆ, ಚಿಂತನೆಗೆ ಹೊಂದಿಕೆಯಾಗುವಂತಿರುತ್ತದೆ. ಆ ಕತೆ, ಆ ಚರಿತ್ರೆ, ಆ ಸನ್ನಿವೇಶ, ನಿಮ್ಮೆದುರಿಗೆ ನಡೆದಂತಾಗುತ್ತದೆ. ಮೆಚ್ಚಿ ನೀವು ಸುಮ್ಮನಿರುವುದಿಲ್ಲ. ನಿಮ್ಮ ಗೆಳೆಯರಿಗೆ, ಆಪ್ತರಿಗೆ ಹೇಳುತ್ತೀರಿ. ಕೃತಿ, ಅದರ ಲೇಖಕ, ಅವನ ಅನುಭವ, ಅವನ ಕಾಣ್ಕೆ, ಎಲ್ಲವೂ ನಿಮ್ಮಿಂದ ಪುನರ್ಜನ್ಮ ಪಡೆದು ಮತ್ತೆ ಚಾಲ್ತಿಗೆ ಬಂದು ಬಿಡುತ್ತದೆ. ನೀವು ಲೇಖಕರಾಗಿದ್ದು, ಸಾಹಿತ್ಯ ವಲಯದಲ್ಲಿದ್ದರೆ ಆ ಕೃತಿಯ ಬಗ್ಗೆ ಲೇಖನವನ್ನು, ವಿಮರ್ಶೆಯನ್ನೂ ಬರೆದು ಆ ಕೃತಿಯನ್ನು, ಆ ಲೇಖಕನನ್ನು ಸಮಕಾಲೀನ ಕೃತಿ-ಲೇಖಕನನ್ನಾಗಿ ಪರಿವರ್ತಿಸಿ ಬಿಡುತ್ತೀರಿ.

ಇದೆಲ್ಲವೂ ನಮಗೆ ಸ್ಥೂಲವಾಗಿ ಅನುಭವಕ್ಕೆ ಬಂದಿರುವಂಥದ್ದೆ. ನನ್ನ ಅನುಭವದ ಒಂದೆರಡು ಪ್ರಸಂಗಗಳನ್ನು ಹೇಳುತ್ತೇನೆ. ವರ್ಷಗಳ ಹಿಂದೆ ನಡುರಾತ್ರಿಯಲ್ಲಿ ಎಚ್ಚರವಾಯಿತು. ನೀರವತೆ, ಆದರೂ ಏನೋ ಹವಣಿಕೆಯ ವಾಸನೆ, ತಹತಹ. ಏನೆಂದೂ ನನಗೂ ತಿಳಿಯುತ್ತಿಲ್ಲ. ಇಡೀ ಕೋಣೆಯೆಲ್ಲ ಯಾರದೋ ಆಗಮನಕ್ಕೆ, ಯಾರದೋ ಕಾಂತಿಗೆ ಸಿದ್ಧವಾಗುತ್ತಿರುವಂತಿದೆ. ನಡುರಾತ್ರಿಯಲ್ಲಿ ಯಾರು ಬರಬೇಕು. ನನಗೆ ದೆವ್ವ ಪ್ರೇತಗಳಲ್ಲಿ ನಂಬಿಕೆ ಕಡಿಮೆ, ನಂಬಲು ಆಸೆಯಿದ್ದರೂ. ಏನು ಮಾಡಿದರೂ ನಿದ್ದೆ ಬಾರದೆ ಶೆಲ್ಫ್‌ನಿಂದ ಒಂದು ಪುಸ್ತಕ ತೆಗೆದೆ. ಮಾಸ್ತಿಯವರ ಕತೆಗಳ ಸಂಗ್ರಹ ಅದು. ಪೂರ್ವಾಪರ ಯೋಚನೆಯಿಲ್ಲದೆ `ಹೇಮಕೂಟದಿಂದ ಬಂದ ಮೇಲೆ' ಕತೆಯನ್ನು ಓದಲು ಪ್ರಾರಂಭಿಸಿದೆ. ಎಷ್ಟೋ ಸಲ ಓದಿದ್ದು, ಆದರೆ ಆ ಕತೆ ಆ ನೀರವತೆಯಲ್ಲಿ ಮತ್ತೆ ಹುಟ್ಟಿದ ಬಗೆಯೇ ಬೇರೆ. ಕತೆ ಮುಗಿಸಿದ ತಕ್ಷಣ ಶಕುಂತಲೆ, ದುಷ್ಯಂತ, ಪ್ರಿಯಂವದೆ, ಅನಸೂಯ ಎಲ್ಲರೂ ನನ್ನೆದುರಿಗೆ ಬಂದು ಕೂತುಕೊಂಡ ಹಾಗೆ, ಶಕುಂತಲೆಯ ಪ್ರೇಮದ ವಿರಹದ ನೋವಿನ ಕತೆಯನ್ನು ಅವರವರ ದೃಷ್ಟಿಕೋನದಿಂದ ಬೆಳಗಾಗುವ ತನಕವೂ ಹೇಳಿದ ಹಾಗೆ. ಸುತ್ತಮುತ್ತಲ ವಾತಾವರಣದಲ್ಲಿದ್ದ ಹವಣಿಕೆ ಯಾವುದೋ ಅತಿಥಿಗಳ ಆಗಮನದ ಸೂಚನೆಯೆಂದು ನನಗೆ ಆಮೇಲೆ ಅರ್ಥವಾಯಿತು. ಮಾರನೆ ದಿನ ಬೆಳಿಗ್ಗೆಯಿಂದ ನನ್ನನ್ನು ಇಡಿಯಾಗಿ ಬೆನ್ನು ಹತ್ತಿದ ಈ ಕತೆಯನ್ನು ಹೊತ್ತುಕೊಂಡೇ ಇಡೀ ಬೆಂಗಳೂರು ನಗರದಲ್ಲಿದ್ದ ಸ್ನೇಹಿತರಿಗೆಲ್ಲ ತೋರಿಸಿ,ಅವರೆಲ್ಲರೂ ಕತೆಯನ್ನು ಓದುವಂತೆ ಮಾಡಿದೆ. ಶಕುಂತಲೆ, ಅವಳ ಕತೆ, ಎಲ್ಲವೂ ಮತ್ತೆ ನಮ್ಮೊಡನೆ ಬದುಕಲು ಪ್ರಾರಂಭಿಸಿದವು. ಆ ಕತೆಯ ಮೇಲೆ ನಾನು ಟಿಪ್ಪಣಿಯೊಂದನ್ನು ಕೂಡ ಬರೆದದ್ದುಂಟು.

ಸಾಹಿತ್ಯ ವಲಯದ ವಾತಾವರಣ, ಜೀವಂತವಾಗಿರಬೇಕಾದರೆ ಈ ರೀತಿ ಕೃತಿಗಳು, ಲೇಖಕರು ದಿನವೂ ಓದುಗರ ಮನೆಗಳಲ್ಲಿ, ಮನಸ್ಸಿನಲ್ಲಿ, ಲೇಖಕರ ಕಲ್ಪನೆಗಳಲ್ಲಿ ಪುನರ್ಜನ್ಮ ಪಡೆಯುತ್ತಿರಲೇಬೇಕು. ವೈಯಕ್ತಿಕವಾಗಿ ನಮಗೆ ಹೀಗೆಲ್ಲ ಆಗುತ್ತಿರಬಹುದೇನೋ, ಆದರೆ ಉತ್ಸಾಹದಿಂದ, ಸಂಭ್ರಮದಿಂದ ನಾವು ಹಂಚಿಕೊಳ್ಳುವ, ಸಾಂಕ್ರಾಮಿಕಗೊಳಿಸಿರುವ ಉದಾಹರಣೆಗಳು ತೀರಾ ಕಡಿಮೆ. ಕನ್ನಡದ ಯಾವ ದಿನಪತ್ರಿಕೆಗಳೂ, ಸಾಹಿತ್ಯ ಪತ್ರಿಕೆಗಳೂ, ಇಂತಹ ಪುನರ್ಜನ್ಮದ ಅನುಭವವನ್ನು, ಅದರಿಂದ ಅನುಭವಿಸಿದ ಉತ್ಸಾಹವನ್ನು ದಾಖಲಿಸಿದ ಉದಾಹರಣೆಗಳು ಕಡಿಮೆ. ಶತಮಾನೋತ್ಸವ, ದಶಮಾನೋತ್ಸವ ಸಂದರ್ಭಗಳಲ್ಲೋ, ಸೆಮಿನಾರು ಸಂಕಿರಣದ ಸಂಕಷ್ಟದ ಸಮಯದಲ್ಲೋ ಹಿಂದಿನ ಲೇಖಕರ, ಕೃತಿಗಳ ಬಗ್ಗೆ ಲೇಖನಗಳು, ಪರಿಚಯ ಪ್ರಕಟವಾದರೂ ಇಂತಹ ಲೇಖನಗಳಲ್ಲೆಲ್ಲ ಸಾಂದರ್ಭಿಕ ಕೆಲಸವೊಂದನ್ನು ನಿರ್ವಹಿಸಿದ ಅಚ್ಚುಕಟ್ಟುತನ ಇರುತ್ತದೆಯೆ ಹೊರತು, ಮನುಷ್ಯರಾಗಿ, ಓದುಗರಾಗಿ ನಾವೇ ಅನುಭವಿಸಿದ ಸಂತೋಷ, ಪುಳಕ ಇರುವುದಿಲ್ಲ. ನನಗೆ ತಿಳಿದ ಮಟ್ಟಿಗೆ ಈ ರೀತಿಯ ಅಂಕಣ ಇರುವುದು ಹಿಂದೂ ಪತ್ರಿಕೆಯಲ್ಲಿ ಮಾತ್ರ. ಪ್ರತಿ ತಿಂಗಳಿಗೊಮ್ಮೆ ಪ್ರಕಟವಾಗುವ Classics Revisited ಅನ್ನುವ ಅಂಕಣದಲ್ಲಿ ರವಿ ವ್ಯಾಸ್ ಎನ್ನುವವರು ಹಳೆಯ ಪುಸ್ತಕಗಳ ಓದಿನ ಅನುಭವದಿಂದ ಸಿಗುವ ಸಂತೋಷವನ್ನು, ಆ ಪುಸ್ತಕಗಳು ನಮ್ಮ ಜೀವನಕ್ಕೆ ಹೇಗೆ ಪ್ರಸ್ತುತವೆಂಬುದನ್ನು ಪಂಡಿತ, ಪಾಮರರಿಬ್ಬರಿಗೂ ಪ್ರಿಯವಾಗುವಂತೆ ಸರಳ, ನೇರ, ವಿದ್ವತ್ಪೂರ್ಣ ಶೈಲಿಯಲ್ಲಿ ಹಂಚಿಕೊಳ್ಳುತ್ತಾರೆ. ಆ ಅಂಕಣವನ್ನು ಪ್ರತಿ ಸಲ ಓದುವಾಗಲೂ ಕನ್ನಡದಲ್ಲಿ ಇಂತಹದೊಂದು ಅಂಕಣವಿಲ್ಲದ್ದರ ಬಗ್ಗೆ ಬೇಸರವಾಗುತ್ತದೆ.

ಲಕ್ಷಾಂತರ, ಕೋಟ್ಯಾಂತರ ಪುಸ್ತಕಗಳು ನಾವು ಹುಟ್ಟುವುದಕ್ಕೆ ಮುಂಚೆಯೆ ಪ್ರಕಟವಾಗಿ ಬಿಟ್ಟಿರುವುದರಿಂದ ಯಾವ ಪುಸ್ತಕಕ್ಕೆ ನಮ್ಮ ಮೂಲಕ ಪುನರ್ಜನ್ಮದ ಅದೃಷ್ಟ ಎಂಬುದನ್ನು ನಿರ್ಧರಿಸುವ ಸಂಗತಿ ಯಾವುದು? ಎಲ್ಲ ಹಳೆಯ ಪುಸ್ತಕಗಳಿಗೂ, ಪುರಾತನ ಹಸ್ತಪ್ರತಿಗಳಿಗೂ ಇಂತಹ ಅದೃಷ್ಟವಿರುವುದಿಲ್ಲ. ಗ್ರಂಥಾಲಯದಿಂದ ನಮ್ಮ ಮನೆಗೆ ಬರುತ್ತವೆ. ಅನಪೇಕ್ಷಿತ ಅತಿಥಿಗಳಂತೆ ನಮ್ಮೊಡನೆ ಇದ್ದು ಬಂದ ದಾರಿಗೆ ಸುಂಕವಿಲ್ಲದಂತೆ ಮತ್ತೆ ಗ್ರಂಥಾಲಯಕ್ಕೆ ವಾಪಸ್ಸಾಗುತ್ತವೆ. ಒಂದು ಕೃತಿ ನಮ್ಮಿಂದ ಪುನರ್ಜನ್ಮ ಪಡೆಯಬೇಕಾದರೆ, ಆ ಕೃತಿಯ ಆಕೃತಿಯಲ್ಲೋ, ಅನುಭವದಲ್ಲೋ, ಸನ್ನಿವೇಶ ವಿನ್ಯಾಸದಲ್ಲೋ, ಆ ಪುಸ್ತಕವನ್ನು ಎತ್ತಿಕೊಂಡ ಕ್ಷಣದಲ್ಲಿ ನಮ್ಮ ಮನಸ್ಸಿನ ಒಳತೋಟಿಗೆ, ಹಸಿವಿಗೆ ತಾಳೆಯಾಗುವಂತಹ ಸಂಗತಿ ಮತ್ತು ಕಾಂತಿಯಿರಬೇಕು. ಆವಾಗ ಮಾತ್ರ ಆ ಕೃತಿ ನಮ್ಮ ಒಳಗನ್ನು ಪ್ರವೇಶಿಸಿ ಕ್ಷಣಮಾತ್ರದಲ್ಲಿ ನವಮಾಸ ಧರಿಸಿ! ವ್ಯಾಸನ ಮಹಾಭಾರತವೋ, ಅದರ ಪ್ರಸಂಗಗಳೋ ನಮ್ಮದಾಗುವುದು ಹೀಗೆ. ಇವು ಪ್ರಸಿದ್ಧ ಕೃತಿಗಳ ಉದಾಹರಣೆಗಳು. ಹೀಗೆ ಪ್ರಸಿದ್ಧವಾಗದ ಎಷ್ಟೋ ಕೃತಿಗಳು ಕೂಡ ಒಬ್ಬ ಓದುಗನಿಂದ ಪುನರ್ಜನ್ಮ ಪಡೆಯಬಹುದು. ನಿಖರವಾಗಿ ಹೇಳಬೇಕೆಂದರೆ ಪ್ರಸಿದ್ಧವಾದ ಕೃತಿಗಳ ಪುನರ್ಜನ್ಮಕ್ಕೆ ಸಾಂಸ್ಕೃತಿಕ ವಾತಾವರಣದಲ್ಲೆ ನಾನಾ ರೀತಿಯ ಪರಿಕರಗಳಿರುತ್ತವೆ. ಪುರಾಣಗಳ ಪಾರಾಯಣವಾಗಬಹುದು, ಪಠ್ಯಪುಸ್ತಕಗಳ ಮೂಲಕವಾಗಬಹುದು. ಸಂಘ ಸಂಸ್ಥೆಗಳಿಂದ ಪುನರ್ಮುದ್ರಣದ ಅವಕಾಶವಾಗಬಹುದು, ಹೇಗೋ ಅವು ನಮ್ಮನ್ನು ತಲುಪಿಬಿಡುತ್ತವೆ. ನನ್ನ ಆಸಕ್ತಿಯಿರುವುದು ಅಂತಹ ಕೃತಿಗಳ ಪುನರ್ಜನ್ಮದಲ್ಲಲ್ಲ. ಮನುಷ್ಯರಾಗಿ, ಓದುಗರಾಗಿ ನಾವೇ ಖುದ್ದಾಗಿ ಆಯ್ಕೆ ಮಾಡಿ ಪುನರ್ಜನ್ಮ ಕೊಟ್ಟ ಕೃತಿಗಳಲ್ಲಿ.

ಪುಸ್ತಕಕ್ಕೆ ಮಾತ್ರ ಪುನರ್ಜನ್ಮವೆಂದು ತಿಳಿದರೆ ತಪ್ಪಾಗುತ್ತದೆ. ಪುಸ್ತಕಕ್ಕೆ ಪುನರ್ಜನ್ಮ ಕೊಡುವ ಪ್ರಕ್ರಿಯೆಯಲ್ಲಿ, ನಾವೂ, ನಮ್ಮ ಅನುಭವ ಚಿಂತನೆಗಳು ಕೂಡ ಪುನರ್ಜನ್ಮ ಪಡೆಯುತ್ತವೆ. ಹೆಣ್ಣಿನ ಜೀವನ, ದೃಷ್ಟಿಕೋನ ಕುರಿತಂತೆ ನಮ್ಮಲ್ಲಿರುವ ಬಹುಪಾಲು ಕೃತಿಗಳು ಆಕೆಯನ್ನು ತಾಯಿಯಂತೆ ಮಾತ್ರ ನೋಡಿ ಆಕೆಯ ಪಾಲನಾ ಪ್ರವೃತ್ತಿಗೆ ಮಾತ್ರ ಒತ್ತು ನೀಡಿವೆ. ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ ಎಲ್ಲರ ಬಹುತೇಕ ಸ್ತ್ರೀ ಪಾತ್ರಗಳು ಮಾತೃ ಕಲ್ಪನೆಗೆ, ಪಾಲನಾ ಪ್ರವೃತ್ತಿಗೆ ಹತ್ತಿರವಾದವು. ನಂತರದ ಲೇಖಕಿಯರು ಹೆಂಗಸರಲ್ಲಿರುವ ಪ್ರತಿಭಟನೆ, ಬಂಡಾಯ, ಜೀವಂತಿಕೆಯ ಅಂಶಕ್ಕೆ ಒತ್ತುಕೊಟ್ಟರು. ಹೀಗೆಲ್ಲ ಅಲ್ಲದೆ ಹೆಂಗಸನ್ನು ಬೇರೊಂದು ದೃಷ್ಟಿಯಿಂದ ಕೂದ ನೋಡಬಹುದೆಂಬುದನ್ನು ಮಹಾಶ್ವೇತಾದೇವಿಯವರ `1084 ತಾಯಿ' ಕಾದಂಬರಿ ತೋರಿಸಿಕೊಡುತ್ತದೆ. ಸ್ವಂತ ಮಗನನ್ನೆ ರಾಜಕೀಯ ಕಾರಣಕ್ಕಾಗಿ ಕಳೆದುಕೊಂಡ ತಾಯಿ, ತನ್ನ ಮಗನಂತಹ ಬಂಡಾಯಗಾರರನ್ನು, ಅವರ ಮೂಲಕ ಸಮಾಜವನ್ನು ಪ್ರೀತಿಸುವುದು, ಅರ್ಥ ಮಾಡಿಕೊಳ್ಳುವುದು, ಈ ಕಾದಂಬರಿಯ ವಿನ್ಯಾಸದಲ್ಲಿದೆ. ಹೆಂಗಸಿನ ಎಲ್ಲ ಗುಣಗಳನ್ನು, ಮಾತೃ ಕಲ್ಪನೆಯನ್ನು, ಪಾಲನಾ ಪ್ರವೃತ್ತಿಯನ್ನು ಹೊಸ ದೃಷ್ಟಿಕೋನದಿಂದ ನೋಡಬಹುದೆಂಬುದನ್ನು, ತಾಯಿಯ ಕಲ್ಪನೆಯೇ ಸಾಮಾಜಿಕವಾದಾಗ ಆಧ್ಯಾತ್ಮಿಕ ಆಯಾಮವನ್ನು ಕೂಡ ಪಡೆಯಬಹುದೆಂಬುದನ್ನು ಈ ಕೃತಿ ತೋರಿಸಿಕೊಟ್ಟಿದೆ. ಈ ಕಾದಂಬರಿ ಓದಿ ಮುಗಿಸಿದ ಮೇಲೆ ಒಂದಷ್ಟು ದಿನ ನಾನು ಅದರ ಗುಂಗಿನಲ್ಲೇ ಇದ್ದೆ. ದಿನ ಕಳೆದಂತೆ ಈ ಗುಂಗು ಒಂದು ರೀತಿಯ ಅನುಮಾನಕ್ಕೆ ಕಾರಣವಾಯಿತು. ಇಷ್ಟೊಂದು ಉದಾತ್ತವಾದ ಪಾತ್ರವನ್ನು, ಕಲ್ಪನೆಯನ್ನು ಮಾತ್ರವೇ ನಾವೇಕೆ ಮೆಚ್ಚಿಕೊಳ್ಳಬೇಕು. ಹೆಂಗಸು ನಮ್ಮ ತಾಯಂದಿರಂತೆ, ಹೆಂಡತಿಯರಂತೆ, ಸೋದರಿಯರಂತೆ, ಒಂದೇ ಕಾಲದಲ್ಲಿ ಎಲ್ಲ ಆಯಾಮಗಳನ್ನೊಳಗೊಂಡಿರಬಹುದಲ್ಲವೆ? ಸಾಧಾರಣ ಹೆಂಗಸರಲ್ಲೂ ಪಾಲನಾ ಪ್ರವೃತ್ತಿ, ಕನಸುಗಾರಿಕೆ, ಬಂಡುಕೋರತನ, ಜೀವನ ಪ್ರೀತಿ, ವ್ಯಾವಹಾರಿಕತೆ, ಜಿಗುಟುತನ, ಸೌಂದರ್ಯಾರಾಧನೆ, ಎಲ್ಲವೂ ಇರುತ್ತದಲ್ಲ. ಹಾಗಾದರೆ ಮಹಾಶ್ವೇತಾದೇವಿಯವರ ಉದಾತ್ತ ಕಲ್ಪನೆ ಮತ್ತು ಅದನ್ನು ನಾನು ಇಷ್ಟಪಟ್ಟಿದ್ದು ಸುಳ್ಳೆ.

ಈ ಗೊಂದಲದಲ್ಲಿರುವಾಗ ನನಗೆ ಆಕಸ್ಮಿಕವಾಗಿ ಸಿಕ್ಕಿದ್ದು ಹಿಂದಿ ಲೇಖಕಿ ಕೃಷ್ಣಾ ಸೋಬತಿಯವರ `ವಾಯ್ ಲಡಕಿ' ಕಿರುಕಾದಂಬರಿಯ ಇಂಗ್ಲೀಷ್ ಅನುವಾದ. ಈ ಕಾದಂಬರಿಯ ನಾಯಕಿ ನಮಗೆ ನಿಮಗೆ ಗೊತ್ತಿರುವ ಸಾಮಾನ್ಯ ಹೆಂಗಸಿನ ಎಲ್ಲ ಗುಣ ಸ್ವಭಾವಗಳನ್ನು ಒಳಗೊಂಡಿದ್ದಾಳೆ. ಹಾಗೆ ಸಾಮಾನ್ಯ ಹೆಂಗಸಾಗಿರುವುದರಲ್ಲೇ ವಿಶಿಷ್ಟವಾಗಿದ್ದಾಳೆ. ಈಕೆ ಸಾವನ್ನು ಸಮೀಪಿಸುತ್ತಿದ್ದು ತೀವ್ರವಾದ ಅನಾರೋಗ್ಯವನ್ನು ಅನುಭವಿಸುತ್ತಿದ್ದಾಳೆ. ಸಿಂಹಾವಲೋಕನದ ಕ್ರಮದಲ್ಲಿ ಅವಳ ಬಾಲ್ಯ, ಯೌವನ, ಕಾಮ ಜೀವನ, ಗಂಡನೊಡನೆ ಜೀವನ, ಅತೃಪ್ತಿ, ಕೌಟುಂಬಿಕ ಬಯಕೆ, ಮುಂದಿನ ಪೀಳಿಗೆಗೆ ಹೊಂದಿಕೊಳ್ಳುವ ಕಷ್ಟ, ಹೆಂಗಸರಿಗೆ ವಿಶಿಷ್ಟವಾಗಿರುವ ಜೀವನ ವಿವರಗಳ ಕಕ್ಕುಲಾತಿ, ಬಂಡಾಯದ ಆಸೆ, ಆತ್ಮಜ್ಞಾನ, ದೈವದ ಬಯಕೆ - ಏನುಂಟು, ಏನಿಲ್ಲ ಅನ್ನುವಂತೆ, ಎಲ್ಲವೂ ಸೇರಿಕೊಂಡಿವೆ. ಈ ಕಾದಂಬರಿಯನ್ನು ಓದಲು ಕೊಟ್ಟಿದ್ದ ಸ್ನೇಹಿತರು ಕೃತಿಯ ಬಗ್ಗೆ ಬಹಳ ಶಿಫಾರಸ್ ಮಾಡಿದ್ದರು. ಹಾಗಾಗಿ ಒಂದು ರೀತಿಯ ಅನುಮಾನದಿಂದ ನಾನು ಕೃತಿಯನ್ನು ಕೆಲದಿನ ತಡೆದೇ ಓದಿದೆ. ಒಂದು ಸಲ, ಎರಡು ಸಲ, ಮೂರು ಸಲ ಓದಿ, ಒಳಗಡೆ ಇಳಿದ ಮೇಲೆ ಒಂದು ರೀತಿಯ ರಿಲೀಸ್ ಭಾವನೆಯನ್ನು ಅನುಭವಿಸಿದೆ. ನನ್ನ ಇದುವರೆಗಿನ ಜೀವನದಲ್ಲಿ ನನ್ನ ಅನುಭವಕ್ಕೆ ಬಂದ ಹೆಂಗಸರೆಲ್ಲರೂ ತಾಯಿ, ತಂಗಿ, ಹೆಂಡತಿ, ಗೆಳತಿ, ಸಹೋದ್ಯೋಗಿಗಳು ತೀರಾ ಸಾಧಾರಣದವರು - ಎಲ್ಲರೂ ಹೊಸ ಪ್ರಭೆಯಲ್ಲಿ, ಹೊಸ ಸಾರ್ಥಕ ರೂಪದಲ್ಲಿ ಕಾಣತೊಡಗಿದರು. ಮಹಾಶ್ವೇತಾದೇವಿಯವರ ಉದಾತ್ತ ಪಾತ್ರದ ಕಲ್ಪನೆಯ ನೆರವಿಲ್ಲದೆಯೂ. ಕೃಷ್ಣಾ ಸೋಬತಿಯವರ ಕೃತಿ ನಾನು ಓದಿದ್ದರಿಂದ ಆ ಕೃತಿ ಅದರಿಂದ ಮೂಡಿದ ಉತ್ಸಾಹದಿಂದಾಗಿ ನನ್ನ ಮತ್ತು ಸ್ನೇಹಿತರ ವಲಯದಲ್ಲಿ ಪುನರ್ಜನ್ಮ ಪಡೆದದ್ದು ಮಾತ್ರವಲ್ಲ ಅದರ ಮೂಲಕ ನನ್ನ ಇದುವರೆಗಿನ ಅನುಭವ ಚಿಂತನೆಗಳು ಪುನರ್ಜನ್ಮ ಪಡೆದದ್ದು ಕೂಡ ಅಷ್ಟೇ ನಿಜ. ಹೀಗೆ ಪುಸ್ತಕಗಳಿಗೆ ಪುನರ್ಜನ್ಮ ಕೊಡಲು ಹೋಗಿ ನಾವೇ ಪುನರ್ಜನ್ಮ ಪಡೆಯುವುದು ಎಷ್ಟು ಅದೃಷ್ಟವಲ್ಲವೆ?

(`ಬಿಸಿಲ ಬದುಕು' ಮಾಸಿಕ ಬೆಂಗಳೂರು-೨೦೦೦)

("ಮನೋಧರ್ಮ - ವಿಮರ್ಶಾ ಲೇಖನಗಳ ಸಂಗ್ರಹ" ಕೃತಿಯಲ್ಲಿ ಪ್ರಕಟಿತ.)

(ರೇಖಾಚಿತ್ರ: ನಾಡಿನ ಖ್ಯಾತ ಚಿತ್ರಕಲಾವಿದ ಶ್ರೀ ಬಿ.ಕೆ.ಎಸ್.ವರ್ಮಾ, ಮಾಸ್ತಿಯವರ `ಹೇಮಕೂಟದಿಂದ ಬಂದಮೇಲೆ' ಕತೆಗಾಗಿ ಬಿಡಿಸಿದ್ದನ್ನು ಕೃತಜ್ಞತಾಪೂರ್ವಕ ಬಳಸಿಕೊಳ್ಳಲಾಗಿದೆ.)
ಮುಂದೆ ಓದಿ....