ಬರಹಗಾರನಾಗಿ ನನಗಿರುವ ಆತಂಕಗಳು-ತಲ್ಲಣಗಳು ಈ ಸಮಾಜದ ನಾಗರೀಕನಾಗಿ, ಗೃಹಸ್ಥನಾಗಿ ನನಗಿರುವ ಆತಂಕಗಳಿಗಿಂತ ಭಿನ್ನವಾಗೇನಿಲ್ಲ, ಇರಲೂ ಕೂಡದು. ಒಂದು ಕಾಲಘಟ್ಟದಲ್ಲಿ ಬದುಕುವ ಎಲ್ಲ ಮನುಷ್ಯರಿಗಿರುವ ಆತಂಕ ನೋವುಗಳು ಬರಹಗಾರನಿಗೂ ಇರುತ್ತವೆ. ಹೆಚ್ಚೆಂದರೆ ಇಂತಹ ತಲ್ಲಣಗಳ ಬಗ್ಗೆ ಬರಹಗಾರ ಕೊಂಚ ಹೆಚ್ಚು ಸಂವೇದನಾಶೀಲನಾಗಿರಬಹುದು; ಅಷ್ಟೇ. ಸಮಕಾಲೀನ ಜಗತ್ತಿನ ಬಗ್ಗೆ ಹೆಚ್ಚು ಬರೆಯುವ ನನ್ನ ವಿಷಯದಲ್ಲಂತೂ ಈ ಮಾತು, ನೋಟ ಇನ್ನೂ ಹೆಚ್ಚು ನಿಚ್ಚಳ. ಇಂತಹ ಆತಂಕಗಳಲ್ಲಿ ಒಂದೆರಡನ್ನು ಇಲ್ಲಿ ಚರ್ಚಿಸಬಯಸುತ್ತೇನೆ.
ಈಗ ನನಗೆ 55 ವರ್ಷ. ನಾನು ವ್ಯಕ್ತಿಯಾಗಿ ಬರಹಗಾರನಾಗಿ ರೂಪುಗೊಳ್ಳಲು ಕಾರಣವಾದ ಸಂದರ್ಭದಲ್ಲಿ ಇದ್ದ ಜಗತ್ತಿಗೂ ಈವತ್ತಿಗೂ ತುಂಬಾ ವ್ಯತ್ಯಾಸವಿದೆ. ತಂತ್ರಜ್ಞಾನ, ಜಾಗತೀಕರಣ, ಮಾಧ್ಯಮದ ಆಕ್ರಮಣ ಇವುಗಳ ಜೊತೆಗೆ ಈವತ್ತಿನ ಸಂದರ್ಭದಲ್ಲಿ ಹಿಂದೆ ಇದ್ದದ್ದಕ್ಕಿಂತಲೂ ಹೆಚ್ಚು ಜನ ವರ್ಗಗಳು, ಸಮುದಾಯಗಳು ಕ್ರಿಯಾಶೀಲವಾಗಿವೆ. ಸಮಾಜದ ಅಧಿಕಾರದಲ್ಲಿ, ಅವಕಾಶಗಳಲ್ಲಿ, ಪ್ರಭಾವದಲ್ಲಿ ಹೆಚ್ಚು ಹೆಚ್ಚು ಸ್ಥಾನವನ್ನು ಪಡೆದಿವೆ, ಪಡೆಯುತ್ತಿವೆ. ಸಮಾಜದಲ್ಲಿ ಆದರ್ಶವಾದದ ನೊಗ ಹೊತ್ತು ಇಡೀ ಬದುಕನ್ನು ಅದಕ್ಕಾಗಿ ಮೀಸಲಿಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ನಮ್ಮ ನಮ್ಮ ಜಾತಿಗಳ ಸಮುದಾಯಗಳ ವಿಶಿಷ್ಟತೆಯನ್ನು ಸ್ಥಾಪಿಸುವುದರಲ್ಲಿರುವಷ್ಟು ನಮಗಿರುವ ಆಸಕ್ತಿ ಒಟ್ಟು ಸಮಾಜವನ್ನು ಕಾಡುವ ಸಮಸ್ಯೆಗಳ ಬಗ್ಗೆ ಇಲ್ಲ. ಹೀಗೆ ಹೇಳುತ್ತಾ ಹೋಗಬಹುದು. ಇದನ್ನೆಲ್ಲ ನಾವು ಹೇಗೆ ಗ್ರಹಿಸುತ್ತೇವೆ, ಅಭಿವ್ಯಕ್ತಗೊಳಿಸುತ್ತೇವೆ ಎಂಬುದೇ ಮುಖ್ಯ.
ಕಾಲಧರ್ಮಕ್ಕನುಗುಣವಾಗಿ ನಾವು ಗ್ರಹಿಸುವ ವಿವರಗಳು ಹೊಸದಾಗಿವೆ, ಭಿನ್ನವಾಗಿವೆ. ಆದರೆ ಈ ವಿವರಗಳ ಹಿಂದಿರುವ ಗ್ರಹಿಕೆಯ ಕ್ರಮ, ತಾತ್ವಿಕ ಭಿತ್ತಿ ಮಾತ್ರ ಎಪ್ಪತ್ತು-ಎಂಭತ್ತರ ದಶಕದಲ್ಲಿ ರೂಪುಗೊಂಡದ್ದೆ ಎನಿಸುತ್ತದೆ. ನಾಲಿಗೆ, ತಲೆ ನಮ್ಮದಾದರೂ ಮೆದುಳು ಹಿಂದಿನವರದು. ಚರ್ಮ ನಮ್ಮದಾದರೂ ಹೃದಯ ಹಿಂದಿನವರದು. ಗಾಂಧಿಯ ಉತ್ತರಗಳು, ಮಾರ್ಕ್ಸ್‌ನ ಪರಿಹಾರಗಳನ್ನು ಕುರಿತು ಇನ್ನೂ ಸಂಭ್ರಮಿಸುವ ನಾವು ಸಮಾಜದ ಆರೋಗ್ಯ-ನೆಮ್ಮದಿ ಕುರಿತಂತೆ ಈ ಮಹನೀಯರು ಕೇಳಿದ ಪ್ರಶ್ನೆಗಳನ್ನು, ಪ್ರಶ್ನೆಗಳ ಹಿಂದಿನ ತುರ್ತನ್ನು ಮರೆತು ಬಿಟ್ಟಿದ್ದೇವೆ. ಈ ಚಿಂತಕರ ಮಹತ್ವವಿರುವುದು ಅವರು ಕೇಳಿಕೊಂಡ ಪ್ರಶ್ನೆಗಳಲ್ಲಿ, ಪ್ರಶ್ನೆಗಳನ್ನು ಕೇಳುತ್ತಿದ್ದ ಧೀಮಂತಿಕೆಯಲ್ಲಿ. ಇದನ್ನೆಲ್ಲ ಹಿನ್ನೆಲೆಗೆ ಸರಿಸಿ ಈ ಮಾನ್ಯರ ಉತ್ತರಗಳ ಆಸರೆಯಲ್ಲೇ ಮಾತನಾಡುತ್ತಿದ್ದರೆ ನಮ್ಮ ಗ್ರಹಿಕೆ ಸ್ಥೂಲವಾಗಿರುತ್ತದೆ. ಆಗ ನಮಗೆ, ಮನಸ್ಸಿಗೆ, ಯೋಚಿಸಿದ ಸುಖ, ಸಮಾಧಾನ ಸಿಗಬಹುದೇ ಹೊರತು, ನಿಜವಾಗಿಯೂ ನಾವು ಯೋಚಿಸುತ್ತಿರುವುದಿಲ್ಲ, ಗಿಳಿಪಾಠ ಹೇಳುತ್ತಿರುತ್ತೇವೆ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಹೇಳುವುದಾದರೆ ನವ್ಯ ಚಳುವಳಿಯವರು ಚಿಂತನಾ ಕ್ರಮದಲ್ಲಿ ತಂದ ಹೊಸ ಪಲ್ಲಟ ನಂತರ ಕಂಡುಬರಲಿಲ್ಲ. ಕಂಡು ಬಂದದ್ದೇನಿದ್ದರೂ ಹೊಸ ವಿವರಗಳು, ಆಶಯಗಳು, ಆಕಾಂಕ್ಷೆಗಳು.
ಈ ಬಿಕ್ಕಟ್ಟಿನಿಂದ ದೂರವುಳಿಯಲು ನಾನು ನನ್ನ ಪ್ರತಿಭೆ-ಸ್ವಭಾವಕ್ಕನುಗುಣವಾಗಿ ನನಗೆ ಗೊತ್ತಿಲ್ಲದೇ ಬೇರೆ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು. ನವ್ಯ ಚಳುವಳಿಯಿಂದಾದ ಒಂದು ದೊಡ್ಡ ತಪ್ಪೆಂದರೆ ರೂಪಕ ಪ್ರತಿಭೆಯನ್ನು ಬರವಣಿಗೆಯ ಶಿಖರ ಸಾಧನೆ ಎಂಬ ನಂಬಿಕೆಯನ್ನು ಚಾಲ್ತಿಗೆ ತಂದದ್ದು. ಈ ನಂಬಿಕೆಗನುಗುಣವಾಗಿ ನವ್ಯರು ಇತರ ಸಾಹಿತ್ಯ ಮಾರ್ಗದಲ್ಲಿ ಬಂದ ಕೃತಿಗಳನ್ನು ಓದುತ್ತಾ ಹೋದರು, ಅರ್ಥೈಸುತ್ತಾ ಹೋದರು. ಎಲ್ಲ ಘಟನೆಗಳು, ವ್ಯಕ್ತಿಗಳು, ವಿದ್ಯಮಾನಗಳು ರೂಪಕಗಳೇ ಆಗಬೇಕೆ? ಪ್ರಾತಿನಿಧಿಕತೆ, ಸಾಂಕೇತಿಕತೆಯೆಂಬುದು ನಾವೆಲ್ಲ ನಂಬಿರುವಷ್ಟು ಅನಿವಾರ್ಯವೇ? ನಾವಾಗಲೀ, ನೀವಾಗಲೀ, ನನ್ನ ಬದುಕಾಗಲೀ ನಿಮ್ಮ ಬದುಕಾಗಲೀ ಇರುವುದು ಕೇವಲ ಅರ್ಥವಾಹಕವಾಗುವುದಕ್ಕೆ ಮತ್ತು ರೂಪಕವಾಗುವುದಕ್ಕೆ ಮಾತ್ರವೇ? ನಮಗೆ ನಾವೇ ವಿಶಿಷ್ಟ ಮಾನಸಿಕ ಘಟಕಗಳಾಗಿ, ಸ್ವತಂತ್ರ ಜೀವಗಳಾಗಿ ಬದುಕುವ ಸಾಧ್ಯತೆ, ಹಕ್ಕಿಲ್ಲವೇ? ಈ ಪ್ರಶ್ನೆಗಳನ್ನು ಕೇಳಿಕೊಳ್ಳುವಾಗ ನನಗಿರುವ ನಿಸ್ಸಹಾಯಕತೆಯಲ್ಲಿ ನಾನು ಸಾಹಿತ್ಯ-ಸಂಸ್ಕೃತಿ, ಚಿಂತನೆಯಲ್ಲಿ ಅಡಕವಾಗಿರುವ ಮೂಲ ಮಾದರಿ (Arche Types)ಗಳ ಅಗತ್ಯವನ್ನು ವಿರೋಧಿಸುತ್ತಿದ್ದೇನೆಂದು ತಪ್ಪು ತಿಳಿಯಬಾರದು.
ಕತೆ-ಕಾದಂಬರಿಗಳನ್ನು ಬರೆಯುವ ಸಂದರ್ಭದಲ್ಲಿ ನಾನು ಕಾಣುವುದು, ಕಾಣಿಸಲು ಪ್ರಯತ್ನಿಸುವುದು ಆದಷ್ಟೂ ದಿಗಂಬರವಾದ ಮನುಷ್ಯರನ್ನು. ಎಲ್ಲರಿಗೂ ಸಾಮಾಜಿಕ ಕವಚಗಳಿರುತ್ತವೆ, ಮುಖವಾಡಗಳಿರುತ್ತವೆ, ಚಹರೆಗಳಿರುತ್ತವೆ. ಇದನ್ನೆಲ್ಲ ಹೊರ ತೆಗೆದು ಬೇರ್ಪಡಿಸಿದ ನಂತರ ನಮಗೆ ಸಿಗುವ ನಾವು ಮತ್ತು ಇತರರೇ ನಿಜವಾದ ವ್ಯಕ್ತಿಗಳು/ಮನುಷ್ಯರು. ಇದು "ಸಾಮಾಜಿಕತೆ"ಗೆ ವಿರೋಧವಾದ ನಿಲುವಲ್ಲ. ಸಾಮಾಜಿಕತೆಯ ಹೆಸರಿನಲ್ಲಿ ಕಾಣುವ ಸ್ಥೂಲ ಗ್ರಹಿಕೆ, ಮೇಲು ಮೇಲು ನೋಟಗಳನ್ನು ನಿರಾಕರಿಸಿ ಇನ್ನೂ ಅರ್ಥಪೂರ್ಣವಾಗಿ ಸಾಮಾಜಿಕವಾಗುವ ಕ್ರಮವಿದು. ಕೊನೆಗೂ ನಾವು ಸೃಜನಶೀಲ ಬರವಣಿಗೆಯಲ್ಲಿ ಮಾಡಬೇಕಾಗಿರುವುದು ಸಾಮಾಜಿಕ-ರಾಜಕೀಯ ಚರಿತ್ರೆಯ ನಿರ್ಮಾಣವನ್ನಲ್ಲ. ಈ ಚರಿತ್ರೆಗಳಿಗೆ, ಇಂತಹ ಚರಿತ್ರೆಗಳಿಗೆ ಕಿಂಚಿತ್ತೂ ಆಸಕ್ತಿಯಿಲ್ಲದ ಮನುಷ್ಯ ಚರಿತ್ರೆಯ ನಿರ್ಮಾಣವನ್ನು.
ಕತೆಯ ಕೇಂದ್ರಶಿಲ್ಪಕ್ಕಿಂತ ಹೆಚ್ಚಾಗಿ ನನಗೆ ಆತ್ಮೀಯವಾಗುವುದು ಕತೆಯೇ ಇನ್ನೊಂದು ಕತೆಯಾಗಿ, ಇನ್ನೊಂದು ಕತೆಯೇ ಉಪಕತೆಯಾಗಿ ‘ಕಥಾಜಾಲ’ವು ವಿಸ್ತಾರವಾಗುತ್ತಾ ಹೋಗುವ ಕ್ರಮ. ಒಂದೇ ದೃಷ್ಟಿ ಕೋನದಿಂದ ಒಂದು ಕತೆ ಅಥವಾ ಅನುಭವವನ್ನು ನೋಡುವುದಕ್ಕಿಂತ, ಕಾಣಿಸುವುದಕ್ಕಿಂತ ‘ಕಥಾಜಾಲ’ದ ಮೂಲಕ ನನ್ನನ್ನು, ಓದುಗರನ್ನು ಹೆಚ್ಚು ಹೆಚ್ಚು ದೃಷ್ಟಿಕೋನದ ಸಾಧ್ಯತೆಗಳಿಗೆ ತೆರೆಯುವ ಕ್ರಮವನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ನನ್ನ ಸ್ವಭಾವ-ಪ್ರತಿಭೆಯ ಜಾಯಮಾನಕ್ಕೆ ಸಾಧ್ಯವಾಗುವುದು ಈ ರೀತಿಯ ಬರವಣಿಗೆಯೇ. ನವ್ಯರ ನಂತರದ ಅವರ ಹಿಂಬಾಲಕರು ತಂದ ವಿಮರ್ಶಾ ಕ್ರಮ ಕಥನದ ಬರವಣಿಗೆ ಮತ್ತು ಓದಿನಲ್ಲಿ ದೃಷ್ಟಿಕೋನವು ಸ್ಥಾಯಿಯಾಗಿರಬೇಕೆಂದು ಬಯಸುತ್ತದೆ, ಒತ್ತಾಯಿಸುತ್ತದೆ. ಇಂತಹ ಬಯಕೆ, ಒತ್ತಾಯಗಳನ್ನು ಪ್ರಶ್ನಿಸುವುದು, ನಿರಾಕರಿಸುವುದು ಕೂಡ ನನ್ನ ಬರವಣಿಗೆಯ ಉದ್ದೇಶಗಳಲ್ಲೊಂದು. ಕತೆಯೆಂಬುದು ಯಾವಾಗಲೂ ಒಂದೇ ಕತೆಯಾಗಿರುವುದಿಲ್ಲ. ಹಲವು ಕತೆಗಳನ್ನು ಏಕಕಾಲಕ್ಕೆ ಹೇಳುವ ಕಥನವಾಗಿರುತ್ತದೆ. ಬರೆಯುವಾಗ ಓದುವಾಗಲೇ ನಮ್ಮ ಗ್ರಹಿಕೆ ಮತ್ತು ದೃಷ್ಟಿಕೋನದಲ್ಲಿ ಚಲನಶೀಲತೆಯನ್ನು ತರಲಾರದ ಕತೆಗಳ ಬಗ್ಗೆ ನನಗೆ ಆದರವಿಲ್ಲ. ದೃಷ್ಟಿಕೋನದ ಎಷ್ಟು ಎಷ್ಟು ಪಲ್ಲಟಗಳಿಗೆ ಓದುವಾಗ ಕತೆ ಓದುಗನನ್ನು ತೆರೆಯುತ್ತದೋ ಅಷ್ಟರಮಟ್ಟಿಗೆ ಕತೆ ಹೆಚ್ಚು ಸಾರ್ಥಕವೆಂದು ನಾನು ನಂಬುತ್ತೇನೆ. ನಂಬಿ ಬರೆಯಲು ಪ್ರಯತ್ನಿಸಿದ್ದೇನೆ. ಈ ರೀತಿಯ ಭಿನ್ನ ಕತೆಗಾರಿಕೆಗೆ ಓದುಗರು ತೆರೆದ ಮನಸ್ಸಿನವರೇ ಆಗಿದ್ದಾರೆ ಎಂಬುದು ನನ್ನ ತಿಳುವಳಿಕೆ. ತೊಂದರೆಯಿರುವುದು ನವ್ಯರು ಚಾಲ್ತಿಗೆ ತಂದ ರೂಪಕಾರ್ಥ ಮತ್ತು ಆಕೃತಿ ಹಠದಿಂದ ಹೊರಬರಲಾರದ ಕತೆಗಾರರ ಗುಂಪಿನಿಂದ ಮತ್ತು ವಿಮರ್ಶಕರಿಂದ. ಇದು ಬರವಣಿಗೆಗೆ ಸಂಬಂಧಪಟ್ಟ ತೊಂದರೆಯಲ್ಲ. (not a writing problem) ಜೊತೆ ಬರಹಗಾರರು ವಿಮರ್ಶಕರು ಬೇರೆ ರೀತಿಯ ಬರವಣಿಗೆಯ ಕ್ರಮಗಳ ಬಗ್ಗೆ ಸಂವೇದನಾ ಶೂನ್ಯರಾಗಿದ್ದಾಗ ಅಥವಾ ಹಾಗೆ ನಟಿಸಿದಾಗ ಹುಟ್ಟು ಹಾಕುವ ಬರಹಗಾರರ ಸಮಸ್ಯೆಗಳು. (writers problem)
ವೃತ್ತಿ ತಿರುಗಾಟ, ಹಿನ್ನೆಲೆಯೇ ಕಾರಣವಾಗಿ ಬರೆಯಲಿ, ಬರೆಯದೆ ಇರಲಿ ಯಾವಾಗಲೂ ನನ್ನನ್ನು ಕತೆಗಳ ಮಹಾಪೂರವೇ ಕಾಡುತ್ತಿರುತ್ತದೆ. ಯಾವ ಕತೆಗಾರನು ತನಗೆ ದಕ್ಕಿದ, ಕಂಡ ಎಲ್ಲ ಕತೆಗಳನ್ನು ಒಂದು ಜೀವಮಾನದಲ್ಲಿ ಬರೆದು ಪೂರೈಸಲು ಸಾಧ್ಯವಾಗುವುದಿಲ್ಲ. ಕತೆ ಬರೆಯಲಿ ಕಾದಂಬರಿ ಬರೆಯಲಿ, ಬರೆಯದೆ ಇರಲಿ ಕಥನಕಾರರಾದ ಮೇಲೆ ಕತೆಗಳನ್ನಂತೂ ನಾವು ಅನುಭವಿಸುತ್ತಲೇ ಇರಬೇಕು. ಕತೆಗಳಲ್ಲಿ ಭಾಗಿಯಾಗುತ್ತಲೇ ಇರಬೇಕು. ಕತೆಗಳ ಮಹಾಪೂರದ ದೆಸೆಯಿಂದಾಗಿಯೇ ನನ್ನಲ್ಲಿ ಹಲವು ದೃಷ್ಟಿಕೋನಗಳನ್ನು ಒಟ್ಟಿಗೆ ಮಂಡಿಸುವ ಸಾಧ್ಯತೆ, ದೃಷ್ಟಿಕೋನದಲ್ಲಿ ಪಲ್ಲಟಗಳನ್ನು ಓದಿನ ಹಂತದಲ್ಲಿ ಪ್ರಚೋದಿಸುವ ಕತೆಗಾರಿಕೆ ಅನಿವಾರ್ಯವಾಗಿರಬಹುದು. ಹೀಗಾಗಿ ನನ್ನದು ನಾನೇ ರೂಢಿಸಿಕೊಂಡ ಒಂಟಿ ದನಿ, ವಿಶಿಷ್ಟ ಧ್ವನಿ.
ಯಾವುದೇ ಬರಹಗಾರನು ಬರೆಯುವುದರಿಂದ ಮಾತ್ರವೇ ಬರಹಗಾರನಾಗುವುದಿಲ್ಲ. ಹಾಗೆ ಬರಹಗಾರನಾಗುವುದೆಂದರೆ ಇನ್ನೊಬ್ಬರನ್ನು ಓದುವ ಕ್ರಮವನ್ನು ಹಾಗೆ ಓದುವುದರಿಂದ ಪಡೆಯುವ ಕ್ರಮವನ್ನು ಕೂಡ ಸೂಚಿಸುವುದಾಗಿರುತ್ತದೆ. ಮಾಸ್ತಿ, ಕಾರಂತ, ಕುವೆಂಪು ಇಂತಹ ಸಮೃದ್ಧ ಕಥನಕಾರರನ್ನು ನಿರಂತರವಾಗಿ ಮತ್ತೆ ಮತ್ತೆ ಎಂಬಂತೆ ಓದುವ ನನಗೆ ಈ ಲೇಖಕರ ಬರವಣಿಗೆಯ ಕ್ರಮದ ಬಗ್ಗೆ ಇನ್ನೂ ನಿಖರವಾದ ಅಧ್ಯಯನಗಳು ನಡೆದೇ ಇಲ್ಲವೆನ್ನಿಸುತ್ತದೆ. ಕತೆಗಾರರಿಂದಲೂ ವಿಮರ್ಶಕರಿಂದಲೂ, ಈ ಮಹಾನ್ ಕಥನಕಾರರು ಬರವಣಿಗೆಯ ವೈವಿಧ್ಯದಲ್ಲಿ, ಸಮೃದ್ಧಿಯಲ್ಲಿ ಎಷ್ಟೊಂದು ಭಿನ್ನ, ಎತ್ತರ. ನವ್ಯರು ಮತ್ತು ನವ್ಯೋತ್ತರ ಕತೆಗಾರರು, ನನ್ನ ಸಮಕಾಲೀನ ಕತೆಗಾರರೆಲ್ಲರನ್ನು ಒಟ್ಟಿಗೇ ಗಮನದಲ್ಲಿಟ್ಟುಕೊಂಡು ನೋಡಿದಾಗಲೂ ಈ ರೀತಿಯ ಸಮೃದ್ಧಿ ಮತ್ತು ವೈವಿಧ್ಯ ಕಂಡುಬರುವುದಿಲ್ಲ. ಕೆಲವು ಕತೆಗಾರರ ಬರವಣಿಗೆಯಲ್ಲಿ flourish ಇರಬಹುದು, ಮೋಹಕತೆ ಇರಬಹುದು. ಇದು ಸುಳ್ಳು ವೈವಿಧ್ಯ, ಸಮೃದ್ಧಿ. ಈ ರೀತಿಯ ವೈವಿಧ್ಯ ಮತ್ತು ಸಮೃದ್ಧಿಯನ್ನು ಸಾಧಿಸಲು ಎಲ್ಲ ಮುಖ್ಯ ಲೇಖಕರು ತಾವೇ ರೂಢಿಸಿಕೊಂಡ ರೂಪಕ ನಿಷ್ಠೆ, ಆಕೃತಿ ಇಕ್ಕಟ್ಟಿನ ಜತೆಗೆ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ತೇಜಸ್ವಿಯವರಿಗೆ ಅನುವಾದಗಳಿರಬಹುದು, ಲಂಕೇಶರಿಗೆ ಪತ್ರಿಕೋದ್ಯಮವಿರಬಹುದು, ಅನಂತಮೂರ್ತಿಯವರಿಗೆ ಭಾಷಣಗಳು, ಅಂಕಣಗಳು ಇರಬಹುದು. ಇಲ್ಲೆಲ್ಲಾ ಈ ಬರಹಗಾರರು ಪೂರೈಸಿಕೊಳ್ಳುತ್ತಿರುವುದು ತಮ್ಮ ಕಥನದ ಆಕಾಂಕ್ಷೆಗಳನ್ನು. ಹಾಗೆಂದು ಹೇಳುವುದಿಲ್ಲ ಅಷ್ಟೇ. ಆದರೆ ತಮಗಿಂತ ಭಿನ್ನ ಕ್ರಮದಲ್ಲಿ ಬರೆಯುವ ಕಥನಕಾರರನ್ನು ಬೆಲೆಕಟ್ಟುವಾಗ ಮಾತ್ರ ಒಂದು ಕಾಲದಲ್ಲಿ ತಮ್ಮದಾಗಿದ್ದ ಪುರಾತನ ಮಾನದಂಡಗಳನ್ನು ಬಳಸುತ್ತಾರೆ.
ಕಾವ್ಯ ಕೇಂದ್ರಿತ ಮತ್ತು ರೂಪಕ ಪ್ರಣೀತ ಮಾನದಂಡಗಳು ಎಲ್ಲ ಪ್ರಕಾರಕ್ಕೂ ಅನ್ವಯಿಸುವುದಿಲ್ಲ. ಸಣ್ಣಕತೆಗೂ ಕೂಡ. ಹೀಗೆ ಅನ್ವಯಗೊಳಿಸಲು ಹೋಗಿದ್ದರಿಂದಲೇ ಮಾಸ್ತಿಯವರ ಕಥಾಲೋಕದಲ್ಲಿರುವ ಭಿನ್ನ ಭಿನ್ನ ಸ್ವರೂಪಗಳ ಪತ್ತೆ ನಮಗೆ ಸಿಗಲೇ ಇಲ್ಲ. ಕುವೆಂಪು ಸಮೃದ್ಧಿಯೂ, ಕಾರಂತ ವೈವಿಧ್ಯವೂ ಕೂಡ. ಪ್ರಬಂಧವೆಂಬ ಪ್ರಕಾರವಂತೂ ಸೊರಗೇ ಹೋಯಿತು. ಬರವಣಿಗೆಯಲ್ಲಿ ಮುಖ್ಯವಾಗಿ ಸಾಧಿತವಾಗಬೇಕಾದ್ದು ಸ್ವಚ್ಛಂದತೆ, ನಿರರ್ಗಳತೆ ಮತ್ತು ಜೀವಂತಿಕೆ. ಆಕೃತಿಯನ್ನು ಇದಕ್ಕಾಗಿ ಮುರಿಯುವುದೇ, ಮುರಿದು ಕಟ್ಟುವುದೇ ಸೃಜನಶೀಲತೆಯ ಲಕ್ಷಣ ಮತ್ತು ಮುರಿಯುವುದು-ಕಟ್ಟುವುದು ಬೇರೆ ಬೇರೆ ಅಲ್ಲ. ಇದನ್ನು ತಿಳಿಯದವರು ಪ್ರಬಂಧ ಪ್ರಕಾರವನ್ನು ಉಪೇಕ್ಷೆಗೆ ಅರ್ಹವಾದ ಬರವಣಿಗೆಯೆಂದು ತಿಳಿದು ಪ್ರತಿಕ್ರಿಯಿಸುವುದು ಕಂಡಾಗ ನಗೆ ಬರುತ್ತದೆ. ನನ್ನ ಮಟ್ಟಿಗಂತೂ ಕತೆಗಳಲ್ಲಿ ನಾನು ಸಾಧಿಸಲು ಯತ್ನಿಸುವ ಕಥಾಜಾಲ, ದೃಷ್ಟಿಕೋನಗಳ ಬಾಹುಳ್ಯತೆ, ತೆರೆದ ಧ್ವನಿ - ಈ ಎಲ್ಲ ಪ್ರಯತ್ನಗಳನ್ನು ಪ್ರಬಂಧದಲ್ಲೂ ಮಾಡಲು ಪ್ರಯತ್ನಿಸುತ್ತಿದ್ದೇನೆನಿಸುತ್ತದೆ. ಪ್ರಬಂಧ ಪ್ರಕಾರವೇ ತನ್ನ ಸ್ವಭಾವದಿಂದಾಗಿ ನವ್ಯರು ಚಾಲ್ತಿಗೆ ತಂದ ಕಾವ್ಯಾತಿ ನಿಷ್ಠೆ, ರೂಪಕ ಪ್ರಣೀತಿ ಇದೆಲ್ಲವನ್ನೂ ತನ್ನ ನಿರರ್ಗಳತೆ ಮತ್ತು ವೈವಿಧ್ಯಮಯತೆಯಿಂದ ಪ್ರಶ್ನಿಸುವಂತದು. ಕತೆ ಮತ್ತು ಪ್ರಬಂಧಗಳು ಮಾತ್ರವಲ್ಲ, ಪ್ರತಿಯೊಂದು ವಿವರಗಳಿಗೂ ಸಾಂಕೇತಿಕ ಮಹತ್ವ ಮಾತ್ರವಲ್ಲದೆ ತನ್ನದೇ ಆದ ಸ್ವತಂತ್ರ ವ್ಯಕ್ತಿತ್ವ, ಅಸ್ತಿತ್ವವೊಂದಿದೆಯೆಂಬುದನ್ನು ಮತ್ತೆ ಮತ್ತೆ ನೆನಪಿಸುವುದೇ ಬರವಣಿಗೆಯ ಉದ್ದೇಶವಾಗಬೇಕು.
ಬರಹದ ಪ್ರಾರಂಭದಲ್ಲಿ ನಮ್ಮ ಕಾಲದ ಮಾನಸಿಕ ಬಿಕ್ಕಟ್ಟು ಇಕ್ಕಟ್ಟುಗಳ ಬಗ್ಗೆ ಹೇಳಿದೆ. ಇದೆಲ್ಲಕ್ಕೂ ಉತ್ತರವೆಂಬಂತೆ ನನ್ನ ಬರವಣಿಗೆಯಿದೆ ಎಂಬ ಧ್ವನಿ ಈ ಬರಹದಿಂದ ಮೂಡಿದ್ದರೆ ನನ್ನ ಉದ್ದೇಶವು ಖಂಡಿತ ಅದಲ್ಲ. ನಾನು ಬರವಣಿಗೆಯ ಮೂಲಕ ಈ ಬಿಕ್ಕಟ್ಟುಗಳಿಗೆ ಸ್ಪಂದಿಸಲು ನಾನು ಕಂಡುಕೊಂಡ ನನ್ನದೇ ಹಾದಿಯಿದು. ನಮ್ಮ ಕಾಲದ ಬಿಕ್ಕಟ್ಟುಗಳಿಗೇ ಕಾರಣವಾಗಿಯೋ ಇಲ್ಲ ಬಿಕ್ಕಟ್ಟೇ ಪರಿಣಾಮವಾಗಿಯೋ ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಪ್ರತಿ ಕುಟುಂಬದಲ್ಲೂ ಕಾರ್ಖಾನೆ, ಕಛೇರಿಗಳಲ್ಲೂ ಪ್ರೀತಿ ಸಹನೆ ಮತ್ತು ಇನ್ನೊಬ್ಬರ ತಿಳಿದುಕೊಳ್ಳುವ ತಾಳ್ಮೆ-ವ್ಯವಧಾನವೇ ಕಡಿಮೆಯಾಗುತ್ತಿದೆ. ನಮ್ಮನ್ನಲ್ಲದೆ ಇನ್ನೊಬ್ಬರನ್ನು ಪ್ರೀತಿಸುವುದು ಈ ಕಾಲದಲ್ಲಿ ತುಂಬಾ ಕಷ್ಟ. ನಾವು ಪ್ರೀತಿಸುತ್ತಿದ್ದೇವೆಂದು ತಿಳಿದುಕೊಂಡಿರುವವರು ಕೂಡ ನಮ್ಮ ವ್ಯಕ್ತಿತ್ವದ - ಸ್ವಾರ್ಥದ ಹೊರ ಚಾಚುಗಳೇ ಆಗಿರುತ್ತಾರೆ. ಇನ್ನೊಬ್ಬರ ಬಗ್ಗೆ ನಮಗಿರುವ ಪ್ರೇಮವೂ ಈಗ ಸ್ವಪ್ರೇಮದ ಒಂದು ಭಾಗವೇ ಆಗಿರುತ್ತದೆ. ಹೀಗಿರುವಾಗ ಬರಹಗಾರನೊಬ್ಬ ಏನನ್ನು ನಿರೀಕ್ಷಿಸಬಹುದು? ನನ್ನ ಬರವಣಿಗೆ ಓದುಗರ ಮನಸ್ಸಿಗೆ ಹೊರೆಯಾಗದಿರಲಿ, ಕಾಲಹರಣವಾಗದಿರಲಿ, ಮನಸ್ಸಿನ ನಿರಾಳತೆಗೆ ವಿರಾಮಕ್ಕೆ ಕಾರಣವಾಗಲಿ, ಬರವಣಿಗೆಯಲ್ಲಿ ಕಾಣುವವರ ಬಗ್ಗೆಯು, ಹಾಗೆ ಕಂಡವರ ಹಿಂದೆ ಇರುವವರ ಬಗ್ಗೆಯೂ ಸಹನೆ, ಪ್ರೀತಿಯನ್ನು ಕಿಂಚಿತ್ತಾದರೂ ಹೆಚ್ಚಿಸಲಿ. ಆತಂಕ, ತಲ್ಲಣ, ಸೃಜನಶೀಲ ಬರಹಗಾರನಿಗೆ ಉಸಿರಾಟದಷ್ಟೇ ನಿರಂತರ ಒಡನಾಡಿ. ಈ ಆತಂಕ - ತಲ್ಲಣ ಮುಖ ಮಾಡಿರುವುದು ಮಾತ್ರ ಇನ್ನೊಂದಿಷ್ಟು ಪ್ರೀತಿಯ ಕಡೆಗೇ!
(ಶೂದ್ರ ಪತ್ರಿಕೆಯ ವಿಶೇಷಾಂಕದಲ್ಲಿ (ಲೇಖಕನಾಗಿ ನನ್ನ ತಲ್ಲಣಗಳು) ಪ್ರಕಟಿತ ಲೇಖನ)
ಮುಂದೆ ಓದಿ....
ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.
-
ಜಿ ಎನ್ ಮೋಹನ್ ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ
ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ
ಸಮ್ಮೇಳನ. ನಾನು ಮ...
7 years ago