Tuesday, September 29, 2009

ಗಾಂಧಿ ಮುನ್ನೋಟದಲ್ಲಿ ನವ್ಯೋತ್ತರ

ನಾವೆಲ್ಲರೂ ಮನುಷ್ಯರಾಗಿಯೂ, ಸಮುದಾಯಗಳಾಗಿಯೂ ನಿರ್ದಿಷ್ಟ ಸ್ಥಳವೊಂದರಲ್ಲಿ ವಾಸಿಸುತ್ತೇವೆ. ಈ ಸ್ಥಳಕ್ಕೆ (Place)ಮಾನಸಿಕ ಮತ್ತು ಭೌತಿಕ ಆಯಾಮಗಳಿರುತ್ತವೆ. ನೆರೆಹೊರೆ, ಬಂಧು-ಬಳಗ, ವೃತ್ತಿ-ವ್ಯಾಪಾರ, ಸಾಂಸ್ಕೃತಿಕ-ದೈವಿಕ ಚಟುವಟಿಕೆಗಳು, ಸ್ಮೃತಿ, ಸ್ವಾತಂತ್ರ್ಯ ಎಲ್ಲವೂ ಸೇರಿಕೊಂಡು ಈ ‘ಸ್ಥಳ’ ನಿರ್ಮಾಣವಾಗಿರುತ್ತದೆ. ನಮ್ಮಲ್ಲಿರುವ ‘ಸ್ಥಳವಂದಿಗ’ರೆಂಬ ಕಲ್ಪನೆಯ ಹಿಂದಿರುವುದು ಈ ಮನೋಭಾವವೇ. ಈ ‘ಸ್ಥಳ’ವೆಂಬ ಕಲ್ಪನೆ, ಭಾವನೆ ಹುಟ್ಟಲು ಶತಮಾನಗಳೇ ಬೇಕಾಗುತ್ತದೆ. ಒಮ್ಮೆಮ್ಮೆ ಹುಟ್ಟಲೂ ಹೋಗದೆ ಹೋಗಬಹುದು. ದಲಿತರ ಉದಾಹರಣೆಯನ್ನೇ ತೆಗೆದುಕೊಂಡರೆ ನೂರಾರು ವರ್ಷಗಳಿಂದ ಸಮುದಾಯವಾಗಿ ಒಂದೇ ಸ್ಥಳದಲ್ಲಿದ್ದರೂ ಗ್ರಾಮೀಣ ಚೌಕಟ್ಟಿನಲ್ಲಿ ಸಿಗದೇ ಹೋದ ಸ್ವಾತಂತ್ರ್ಯ-ಸಮಾನತೆಯಿಂದಾಗಿ ಅವರಿಗೆ ಸಾಂಪ್ರದಾಯಿಕವಾಗಿ ಸಿಕ್ಕಿದ್ದ ಸ್ಥಳದ ಬಗ್ಗೆ ಒಲವಿಲ್ಲ. ಹೊಸ ಹೊಸ ಸ್ಥಳಗಳನ್ನು ಮಾನಸಿಕವಾಗಿ, ಭೌತಿಕವಾಗಿ ಸದಾ ಹುಡುಕಲು, ಸ್ಥಾಪಿಸಲು ದಲಿತವರ್ಗದಿಂದ ಪ್ರಯತ್ನ ಮುಂದುವರೆದೇ ಇದೆ. ಯಹೂದಿಗಳು ತಮ್ಮದೆಂದು ಭಾವಿಸಿದ್ದ ‘ಸ್ಥಳ’ವನ್ನು ಮತ್ತೆ ಪಡೆಯಲು ನಡೆಸಿದ-ನಡೆಸುತ್ತಿರುವ ಪ್ರಯತ್ನ, ಯುದ್ಧ, ರಾಜಕೀಯ ತಂತ್ರಗಾರಿಕೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೇ ಯಹೂದಿಗಳು ಪ್ಯಾಲೇಸ್ತೀನಿಯರ ‘ಸ್ಥಳ’ದ ಆಕಾಂಕ್ಷೆಗಳನ್ನು ಗುರುತಿಸಲಾರರು, ಗೌರವಿಸಲಾರರು.

ಇಪ್ಪತ್ತು-ಇಪ್ಪತ್ತೊಂದನೆ ಶತಮಾನದ ಬಂಡವಾಳಶಾಹಿ, ಜಾಗತೀಕರಣ, ನಗರೀಕರಣದ ವಿದ್ಯಮಾನಗಳು ಈ ‘ಸ್ಥಳ’ ಎಂಬ ಕಲ್ಪನೆಯನ್ನು ಗೌರವಿಸುವುದಿಲ್ಲ. ಲೆಕ್ಕಕ್ಕೆ ಕೂಡ ತೆಗೆದುಕೊಳ್ಳುವುದಿಲ್ಲ. ನಮ್ಮ ಕಾಲದಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ Space - ಪ್ರದೇಶ, ಜಾಗ ಎಂಬ ಅರ್ಥದಲ್ಲಿ ಗೆ ಆಕಾರವಿಲ್ಲ, ಆಕೃತಿಯಿಲ್ಲ, ಸಂಸ್ಕೃತಿ, ಸ್ಮೃತಿಗಳ ವಾಸನೆಯಿಲ್ಲ. ಈ ಬೆಳವಣಿಗೆ ಮನುಷ್ಯನ ಸಮುದಾಯ ಪ್ರಜ್ಞೆಯನ್ನು ಗೌರವಿಸುವುದಿಲ್ಲ.

ಈ ಹಿನ್ನೆಲೆಯಲ್ಲಿ ನಾನು ಈ ಲೇಖನದಲ್ಲಿ ಎರಡು ವಿದ್ಯಮಾನಗಳನ್ನು ಪರಿಶೀಲಿಸಲು ಪ್ರಯತ್ನಿಸಿದ್ದೇನೆ.

ಮೊದಲನೆಯದು - ನಮ್ಮ ಕಾಲದಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ Spaceನ ಸ್ವರೂಪ ಎಂತಹುದು ಮತ್ತು ಇದರ ಹಿಂದಿರುವ ಸಾಂಸ್ಕೃತಿಕ - ರಾಜಕೀಯ ಲೆಕ್ಕಾಚಾರ ಮತ್ತು ಕನಸುಹೀನತೆ ಎಂತಹುದು.

ಗಾಂಧಿ ದೇಶದ ವಿಭಜನೆಯನ್ನು ವಿರೋಧಿಸಿದಾಗ ಹೇಗಾದರೂ ಸರಿ ಬೇರೆ ಬೇರೆ ಧರ್ಮಗಳಿಗೆ, ಜಾತಿಗಳಿಗೆ, ನಂಬಿಕೆಗಳಿಗೆ ಸೇರಿದವರು ಹೊಂದಿಕೊಂಡು ಬದುಕಲೇಬೇಕು ಎಂದೆಲ್ಲಾ ಹೆಣಗಾಡಿದಾಗ, ರಾಜಕೀಯ ನಿರ್ಧಾರಗಳಿಂದ ನಿರ್ಮಾಣಗೊಳ್ಳುವ ದೇಶ, ರಾಷ್ಟ್ರ ಇಂತಹ ಕಲ್ಪನೆಗಳಿಗೆ, ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದಾದ ಸ್ಥಳ -Placeನ ಮಹತ್ವವನ್ನು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಪಟ್ಟಾಗ - ಈ ಎಲ್ಲ ಹೆಣಗಾಟಾ ಪ್ರಯತ್ನಗಳ ಹಿಂದೆ ಇದ್ದ ನಾಗರಿಕತೆಯ ಕಲ್ಪನೆ ಎಷ್ಟು ಕ್ರಾಂತಿಕಾರಿಯಾದದ್ದು, ನವೀನವಾದದ್ದು ಎಂಬುದರ ವಿಶ್ಲೇಷಣೆ ಗಾಂಧಿಯವರ ಈ ಹೆಣಗಾಟಕ್ಕೆ ‘ರಾಷ್ಟ್ರ’ದ ಕಲ್ಪನೆಗೆ ಗಂಟುಬಿದ್ದಿದ್ದ ಕಾಂಗ್ರೆಸ್, ಹಿಂದೂ ಮಹಾಸಭಾವಾದಿಗಳು ಮತ್ತು ಆಧುನಿಕವಾದಿಗಳಿಂದ ಏಕೆ ಬೆಂಬಲ-ಒತ್ತಾಸೆ ಸಿಗಲಿಲ್ಲ ಎಂಬುದರ ಪರಿಶೀಲನೆ ಕೂಡ ಈ ವಿಶ್ಲೇಷಣೆಯ ಒಂದು ಭಾಗ.

ಈ ಎರಡು ವಿದ್ಯಮಾನಗಳನ್ನು ಪರಿಶೀಲಿಸಲು ನಾನು ಈ ಕೆಳಗೆ ಸೂಚಿಸಿರುವ ಬರಹಗಳಲ್ಲಿನ ಒಳನೋಟಗಳನ್ನು ಬಳಸಿಕೊಂಡಿದ್ದೇನೆ.

Julian Murphet - ಇವರ Post Modernism and Space-ಲೇಖನ
Lloyd Rudolph ಮತ್ತು Susanne Rudolph ಇವರ Post Modern Gandhi ಎಂಬ ಕೃತಿಯThe Road not Taken - The Modernist Roots of Partition ಎರಡನೆಯ ಅಧ್ಯಾಯ.


ಒಂದು, ಎರಡು ತಲೆಮಾರಿನಷ್ಟು ಕಾಲಚಕ್ರದಲ್ಲಿ ಹಿಂದಕ್ಕೆ ಹೋಗಿ ನಾವು ನಮ್ಮ ಮತ್ತು ನಮ್ಮ ಕುಟುಂಬಗಳ ಹಿನ್ನೆಲೆ ಬಗ್ಗೆ ಯೋಚಿಸಿದರೆ, ಒಂದಂಶ ತಿಳಿಯುತ್ತದೆ. ನಮ್ಮ ವಂಶಜರೆಲ್ಲರೂ ಬಹುಕಾಲ ಒಂದೇ ಸ್ಥಳದಲ್ಲಿ ವಾಸಿಸಿದವರಾಗಿರುತ್ತಾರೆ. ವಿದ್ಯೆ, ಉದ್ಯೋಗ, ಸಾಮಾಜಿಕ ಆಕಾಂಕ್ಷೆಗಳಿಂದಾಗಿ ನಾವೆಲ್ಲರೂ ಈ ‘ಸ್ಥಳ’ಗಳಿಂದ ಪಲ್ಲಟಗೊಳ್ಳುತ್ತೇವೆ. ಬಹುಪಾಲು ಸ್ವ ಇಚ್ಛೆಯಿಂದಲೇ ನಾವು ಬಯಸಿದ ವಿದ್ಯೆ, ಉದ್ಯೋಗ, ಸ್ವಾತಂತ್ರ್ಯ, ಎಲ್ಲವೂ ನಮಗೆ ಸಿಗುತ್ತದೆ. ಸ್ವಂತ ‘ಸ್ಥಳ’ವೆಂಬುದು ಮಾತ್ರ ಸಿಗುವುದಿಲ್ಲ.

ನಾವು ಕೊಳ್ಳುವ ಸೈಟು, ಮನೆ, ಸರ್ಕಾರಗಳು ನಮಗಾಗಿ ನಿರ್ಮಿಸುವ ಫ್ಲೈಓವರ್, ಟೌನ್‌ಶಿಪ್, ನೈಸ್ ರಸ್ತೆಗಳು, ಮಾಲ್‌ಗಳು ಇವೆಲ್ಲ Space ಆಗುತ್ತದೆಯೇ ಹೊರತು Place ಆಗಲಾರದು. ಈ ರೀತಿಯ Space ನಿರ್ಮಾಣದ ಹಿಂದೆ ಜನರು, ಸಮುದಾಯಗಳು ವಾಸಿಸಲು ಬೇಕಾಗುವಂತಹ ಆತ್ಮೀಯ, ಖಾಸಗಿ ಸ್ಥಳಗಳನ್ನು ನಿರ್ಮಿಸಬೇಕೆಂಬ ಆಸೆಗಿಂತ ಹೆಚ್ಚಾಗಿ ಹೆಚ್ಚು ಹೆಚ್ಚು ಬಂಡವಾಳದ ಮೊತ್ತವನ್ನು ಹೊಸ ಹೊಸ ತಾಂತ್ರಿಕತೆಯನ್ನು ನಗರ ಪ್ರದೇಶಗಳಿಗೆ ಆಹ್ವಾನಿಸುವ ತಂತ್ರವಿರುತ್ತದೆ. ಹೀಗಾಗಿ ನಗರ ಪ್ರದೇಶಗಳಲ್ಲಿ Space ನ ನಿರ್ಮಾಣವಾಗುವ ಸಂದರ್ಭದಲ್ಲಿ ಸರ್ಕಾರದ ಹಣದ ಹೂಡಿಕೆಯು ಇರುವುದಿಲ್ಲ. ಹೋಗಲೆಂದರೆ ನಮ್ಮ ಸ್ವಂತ ಹಣದ ಹೂಡಿಕೆಯೂ ಇರುವುದಿಲ್ಲ. ಕೈಗಾರಿಕೋದ್ಯಮಿಗಳ ಬೃಹತ್ ಹಣದ ಹೂಡಿಕೆ ಇರುತ್ತದೆ. ಇವರ ಗಮನ ಹೆಚ್ಚು ಲಾಭ ತರುವ ಬೃಹತ್ Spaceಗಳಾದ ಮಾಲ್, ಫ್ಲೈಓವರ್, ಟೌನ್‌ಶಿಪ್, ಕಾರಿಡಾರ್ ರಸ್ತೆಗಳ ಕಡೆಗಳಿಗಿರುತ್ತದೆ. ಸ್ಥಳ ನಿರ್ಮಾಣದ ಕಡೆಗಲ್ಲ.

ಸ್ಥಳ ನಿರ್ಮಾಣ, ಸ್ಥಳ ಪುರಾಣಗಳ ಹಿಂದೆ ನಮ್ಮ ನಮ್ಮ ವೈಯಕ್ತಿಕ ಸಾಮುದಾಯಿಕ ಆಕಾಂಕ್ಷೆಗಳಿಗೆ, ಆಶಯಗಳಿಗೆ ಸಾಮಾಜಿಕ ಗುರಿಗಳಿಗೆ ತಳುಕು ಹಾಕಿಕೊಳ್ಳುವ ಪ್ರಯತ್ನವಿರುತ್ತದೆ. Spaceನ ನಿರ್ಮಾಣದಲ್ಲಿ ಈ ಪ್ರಯತ್ನವಿರುವುದಿಲ್ಲ. ವೈಯಕ್ತಿಕವಲ್ಲದ, ಸಾಮುದಾಯಿಕವಲ್ಲದ Space ನಿರ್ಮಾಣ, ವೈಯಕ್ತಿಕವಾದ ಸಾಮುದಾಯಿಕವಾದ ಸ್ಥಳವನ್ನು ಕಬಳಿಸಲು ಪ್ರಯತ್ನಿಸುತ್ತದೆ. ಈ ಕಬಳಿಕೆಯ ಪ್ರಯತ್ನ ಕೇವಲ ಭೂ ಆಕ್ರಮಣದ ಸ್ವರೂಪದ್ದಲ್ಲ. ಸ್ಥಳವಂದಿಗರಿಗೆ ಸೇರಿದ ಕಥನಗಳು, ನಿರೂಪಣೆಗಳು, ಕಾದಂಬರಿಗಳು, ಐತಿಹ್ಯ ಎಲ್ಲವನ್ನೂ ಹಿಂಬದಿಗೆ, ಮರೆವಿಗೆ ಸರಿಸುತ್ತದೆ. ಮನುಷ್ಯರು, ಸಮುದಾಯದ ತಮ್ಮ ಕಥನ ಸ್ವಾತಂತ್ರ್ಯವನ್ನು, ನಿರೂಪಣಾ ಕೌಶಲವನ್ನು ಕಥಾಸಮೃದ್ಧಿಯನ್ನು ಕಳೆದುಕೊಂಡು ನಿರಾಕಾರ ಜೀವಿಗಳಾಗಿ ಬದುಕಬೇಕಾಗುತ್ತದೆ. ನಾವು ದಿನನಿತ್ಯವೂ ವಾಸಿಸುವ ಬದುಕುವ ಸ್ಥಳದೊಂದಿಗೆ ನಮ್ಮ ಸಂಬಂಧ ಆತ್ಮೀಯವಾಗುವ ಬದಲು ಅಮೂರ್ತವಾಗುತ್ತದೆ.

ಸ್ವಾತಂತ್ರ್ಯ ಬಂದ ಹೊಸದರಲ್ಲಿ ಜರುಗಿದ ನಗರೀಕರಣ ಹಂತಹಂತದಲ್ಲಿ ಕ್ರಮೇಣವಾಗಿ ಜರುಗುವ ಸ್ವರೂಪದ್ದಾಗಿತ್ತು. ಹೀಗಾಗಿ ನಗರೀಕರಣದಿಂದ ಉಂಟಾಗುವ ಅನಾಥಪ್ರಜ್ಞೆಯ ಬಗ್ಗೆ ಮಾತ್ರ ನಾವು ಮಾತನಾಡುತ್ತಿದ್ದೆವು. ಕಳೆದೆರಡು ದಶಕಗಳ ಬೆಳವಣಿಗೆಗಳು, ಜಾಗತೀಕರಣ, ಬಂಡವಾಳಶಾಹಿಯ ದಿಡೀರ್ ವಿಸ್ತಾರ Space ನಿರ್ಮಾಣದ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ವಸತಿಹೀನರು, ಭೂಹೀನರನ್ನು ಕುರಿತು ನಾವು ಮಾತನಾಡುವಾಗಲೆಲ್ಲ ವಿಶೇಷ ಆರ್ಥಿಕವಲಯಗಳ ನಿರ್ಮಾಣದಿಂದಾಗಿ ಕೈಗಾ, ನರ್ಮದಾಗಳಿಂದಾಗಿ ನೆಲೆ ಕಳೆದುಕೊಂಡವರ ಬಗ್ಗೆ ಮಾತ್ರ ಮಾತನಾಡುತ್ತೇವೆ. ನಗರಗಳಲ್ಲಿ, ಒಳ್ಳೊಳ್ಳೆಯ ಫ್ಲಾಟ್‌ಗಳಲ್ಲಿ ವಾಸಿಸುತ್ತ ಫ್ಲೈಓವರ್‌ಗಳ ಮೇಲೆ ವಾಹನಗಳನ್ನು ಓಡಿಸುತ್ತ, ಮಾಲ್‌ಗಳಲ್ಲಿ ಸಂಗೀತವನ್ನು ಕೇಳಿಸಿಕೊಳ್ಳುತ್ತ, ದೊಡ್ಡ ದೊಡ್ಡ ಸ್ಟೇಡಿಯಂಗಳಲ್ಲಿ ಪಂದ್ಯಾವಳಿಗಳನ್ನು ನೋಡುತ್ತ ನಾವು ಕೂಡ ಸ್ಥಳಹೀನರಾಗುತ್ತಿರುತ್ತೇವೆ. ನೆಲೆ ಕಳೆದುಕೊಳ್ಳುತ್ತಿರುತ್ತೇವೆ. ಇದು ನಮ್ಮ ಅರಿವಿಗೆ ಬರಲಾರದು. ಸ್ವಂತವಾಗಿ ಅನುಭವಿಸುತ್ತಿರುವುದೇ ನಮ್ಮ ಪ್ರಜ್ಞೆಗೆ ತಟ್ಟದೇ ಹೋದಾಗ ಇನ್ನು ಚಿಂತನೆಯ ರೂಪದಲ್ಲಿ, ಅಮೂರ್ತ ಗ್ರಹಿಕೆಯ ರೂಪದಲ್ಲಿ ನಮಗೆ ಈ ವಿದ್ಯಮಾನವೆಲ್ಲ ಗ್ರಹಿಕೆಗೆ ಬರಬಹುದೆಂದು ಊಹಿಸುವುದು ಕೂಡ ತಪ್ಪಾಗುತ್ತದೆ.


ನವ್ಯೋತ್ತರ ಕಾಲಮಾನದಲ್ಲಿ Space,Place ಪರಿಕಲ್ಪನೆಗಳು ಚಾಲ್ತಿಗೆ ಬರುತ್ತಿರುವ ರೀತಿಯನ್ನು ಈ ಬೆಳವಣಿಗೆಯ ಹಿಂದಿರುವ ದೃಷ್ಟಿಕೋನವನ್ನು ಸ್ಥೂಲವಾಗಿ ಗಮನಿಸಿದ ಮೇಲೆ ನಾವು ಎದುರಿಸಬೇಕಾದ ಪ್ರಶ್ನೆಯೆಂದರೆ ದೇಶಕ್ಕೆ ಸ್ವಾತಂತ್ರ್ಯ ಬರದೇ ಹೋದರೂ ಪರವಾಗಿಲ್ಲ, ತಡವಾಗಿ ಬಂದರೂ ಚಿಂತೆಯಿಲ್ಲ. ದೇಶವು ಒಂದಾಗಿರುವುದರ ಜೊತೆಗೆ ಹೀಗೆ ಒಂದಾಗಿರುವ ದೇಶದಲ್ಲಿ ಬಹುಸಂಖ್ಯಾತರಿಗಿಂತ ಅಲ್ಪಸಂಖ್ಯಾತರುಗಳಿಗೆ ಹೆಚ್ಚು ಹಕ್ಕು, ಅವಕಾಶಗಳಿರಬೇಕೆಂದು ವಾದಿಸುತ್ತಾ ಬಂದ ಗಾಂಧಿಯ ಗ್ರಹಿಕೆಗಳು ನವ್ಯೋತ್ತರ ಚಿಂತನಾ ಕ್ರಮಕ್ಕೆ ಎಷ್ಟು ಮತ್ತು ಹೇಗೆ ಹತ್ತಿರವಾಗಿದ್ದವು ಎಂಬುದು.

ಎಲ್ಲ ಸ್ವಾತಂತ್ರ್ಯ ಹೋರಾಟಗಾರರಂತೆ ಗಾಂಧಿಗೂ ಭಾರತವು ಒಂದು ದೇಶವಾಗಬೇಕಾಗಿತ್ತು, ರಾಷ್ಟ್ರವಾಗಬೇಕಾಗಿತ್ತು. ಆದರೆ, ಈ ದೇಶ ಮತ್ತು ರಾಷ್ಟ್ರವೆಂಬುದು ಒಂದು ರಾಜಕೀಯ ಅಥವಾ ಭೌಗೋಳಿಕ ಕಲ್ಪನೆಯಾಗುವ ಬದಲಿಗೆ, ದೇಶ ಅಥವಾ ರಾಷ್ಟ್ರದೊಳಗೆ ಇರುವ ಎಲ್ಲ ಸಮುದಾಯಗಳ, ಆ ಸಮುದಾಯಗಳ ಜೀವಂತಿಕೆಯ ಒಂದು ಮೊತ್ತವಾಗಬೇಕಾಗಿತ್ತು. ಸಮುದಾಯಗಳು ವಾಸಿಸುವುದು, ಜೀವನ ಸಾಗಿಸುವುದು ನೆನಪು - ಕ್ರಿಯಾಶೀಲತೆ, ಕನಸುಗಾರಿಕೆ ಎಲ್ಲದಕ್ಕೂ ಇಂಬುಗೊಡುವ Placeನಲ್ಲಿ, ಸ್ಥಳಗಳಲ್ಲಿ - ನಿರಾಕಾರವಾದ ಬೃಹತ್ Spaceನಲ್ಲಲ್ಲ. ದೇಶವೆಂಬುದು ಸಮುದಾಯಗಳ ಮೊತ್ತವೆಂಬ ಗಾಂಧಿಯ ಕಲ್ಪನೆಯಲ್ಲಿ ಸಮುದಾಯಗಳ ನಡುವೆ ನಿರಂತರ ಕೊಡುಕೊಳ್ಳುವಿಕೆ ಸಂವಾದವೆಲ್ಲ ಇರುತ್ತದೆ. ಈ ಕೊಡುಕೊಳ್ಳುವಿಕೆ ಮತ್ತು ಸಂವಾದಗಳು ಸಮುದಾಯಗಳ ನಡುವೆ ನಿರಂತರವಾಗಿ ನಡೆಯುತ್ತಿರಬೇಕಾದರೆ ಸರ್ಕಾರವು ತುಂಬಾ ಬಲಿಷ್ಠವಾಗಿರಬೇಕಾಗಿಲ್ಲ. ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವಷ್ಟು ಶಕ್ತಿಶಾಲಿಯಾಗಿದ್ದರೆ ಸಾಕು. ಈ ಕಾರಣಕ್ಕಾಗಿ ಗಾಂಧಿ ಪೂರ್ಣ ಸ್ವಾತಂತ್ರ್ಯಕ್ಕಿಂತಲೂ ಹೆಚ್ಚಾಗಿ Dominion Statusನ್ನು ಇಷ್ಟಪಟ್ಟರು. ನೆಹರು, ಕಾಂಗ್ರೆಸ್, ಹಿಂದೂ ಮಹಾಸಭಾವಾದಿಗಳು, ಆಧುನಿಕವಾದಿಗಳು - ಎಲ್ಲರೂ ಬಯಸುತ್ತಿದ್ದುದು ಬಲಿಷ್ಠ ರಾಷ್ಟ್ರವನ್ನು. ಸಮುದಾಯಗಳ ನಡುವೆ ಕೊಡುಕೊಳ್ಳುವಿಕೆಯೇ ಇಲ್ಲದೆ ಬಲಿಷ್ಠ ಸರ್ಕಾರವೇ ಎಲ್ಲವನ್ನೂ ನಿಯಂತ್ರಿಸುವ, ನಿರ್ಧರಿಸುವ ಸನ್ನಿವೇಶವನ್ನು ಮುಸ್ಲಿಮರಿಗೆ, ಪಾಕಿಸ್ಥಾನದ ಪರವಾಗಿ ವಾದಿಸುತ್ತಿದ್ದವರಿಗೆ ಇಂತಹದೊಂದು ಸನ್ನಿವೇಶದ ಬಗ್ಗೆ ಭಯವಿತ್ತು, ಆತಂಕವಿತ್ತು. ಇದನ್ನರಿತಿದ್ದ ಗಾಂಧಿ ಪೂರ್ಣ ಸ್ವಾತಂತ್ರ್ಯದ ಬದಲಾಗಿ Dominion Status ಒಪ್ಪಿಕೊಂಡು ನಿರಂತರ ಕೊಡುಕೊಳ್ಳುವಿಕೆ, ಸಂವಾದದ ಮೂಲಕ ಎರಡೂ ಸಮುದಾಯಗಳು ಒಟ್ಟಾಗಿ ಬದುಕುತ್ತಾ ವಿಕಾಸಗೊಳ್ಳುವುದಾದರೆ, ಇಂತಹದೊಂದು ಸ್ಥಿತಿ ಪೂರ್ಣ ಸ್ವಾತಂತ್ರ್ಯ ಬಂದು ಸಮುದಾಯಗಳು ಮಾನಸಿಕವಾಗಿ ಸದಾ ದೂರವಿದ್ದು, ಸದಾ ಕಿತ್ತಾಡುವ ಸನ್ನಿವೇಶಕ್ಕಿಂತ ಉತ್ತಮ ಎಂದು ಭಾವಿಸಿದ್ದರು.

ಇದು ಗಾಂಧಿಯ ಹಗಲುಗನಸಾಗಿರಲಿಲ್ಲ, ಆದರ್ಶ ಕಲ್ಪನೆಯಾಗಿರಲಿಲ್ಲ. ಒಂದು ಹಂತದಲ್ಲಿ ಕಾಂಗ್ರೆಸ್ ಕಾರ್ಯಕ್ರಮ, ನೀತಿಯಾಗಿಯೇ ಇತ್ತು ಎಂಬುದನ್ನು ಗಮನಿಸಬೇಕು.

ಈ ದೃಷ್ಟಿಯಿಂದ ೧೯೨೯ರ ಲಾಹೋರ್ ಕಾಂಗ್ರೆಸ್ ಸಮ್ಮೇಳನ ತುಂಬಾ ಮಹತ್ವಪೂರ್ಣವಾದದ್ದು. ಈ ಸಮ್ಮೇಳನದಲ್ಲಿ ಜವಹರಲಾಲ್‌ರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆರಿಸಲಾಯಿತು. ಮತ್ತು ಇದುವರೆಗೆ Dominion Status ಪರವಾಗಿ ವಾದಿಸುತ್ತಿದ್ದ ಕಾಂಗ್ರೆಸ್ ಈಗ ಪೂರ್ಣ ಸ್ವಾತಂತ್ರ್ಯದ ಪರವಾಗಿ ವಾದಿಸಲು, ಹೋರಾಡಲು ಪ್ರಾರಂಭಿಸಿತು. ಈ ಪರಿವರ್ತನೆಯ ಹಿಂದೆ ಒಂದು ದೊಡ್ಡ ಇತಿಹಾಸವೇ ಇದೆ. ಲಾಹೋರ್ ಸಮ್ಮೇಳನಕ್ಕೆ ಮುಂಚೆ ಕಾಂಗ್ರೆಸ್ ಚಳುವಳಿಯ ಧ್ಯೇಯ ಹೇಗಾದರೂ ಸರಿ ಹಿಂದೂ ಮುಸ್ಲಿಂ ಐಕ್ಯತೆಯನ್ನು ಉಳಿಸಿಕೊಳ್ಳಬೇಕು, ರೂಢಿಸಿಕೊಳ್ಳಬೇಕು ಎಂಬುದಾಗಿತ್ತು. ಇದಕ್ಕಾಗಿ ಗಾಂಧಿ ಒಂದು ಹಂತದಲ್ಲಿ ಜವಹಾರ್ ಲಾಲರನ್ನು ತಕ್ಷಣವೇ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಮೋತಿಲಾಲರ ಸೂಚನೆಯನ್ನು ಕೂಡ ಬದಿಗೆ ತಳ್ಳಿ ಸಾಂಕೇತಿಕವಾಗಿ ಎ.ಎಂ. ಅನ್ಸಾರಿಯವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿ, ಜವಹರಲಾಲರನ್ನು ಮಹಾಕಾರ್ಯದರ್ಶಿಯಾಗಿ ನೇಮಿಸಿದ್ದರು. ತನಗೆ ಬೇಕಾದ ಮುಸ್ಲಿಂ ಕಾಂಗ್ರೆಸ್ ಅಧ್ಯಕ್ಷನನ್ನು ನೇಮಿಸುವ ಮೂಲಕ ಗಾಂಧಿಗಿದ್ದ ಯೋಚನೆಯೆಂದರೆ ೧೯೧೬ತ ಲಕ್ನೋ ಒಪ್ಪಂದಕ್ಕೆ ಹಿಂದೂ ಮುಸ್ಲಿಂ ಸಮುದಾಯಗಳ ಬೆಂಬಲವನ್ನು ಸಂಪಾದಿಸುವುದಾಗಿತ್ತು. ಲಕ್ನೋ ಒಪ್ಪಂದದ ಪ್ರಕಾರ ಹಿಂದೂ ಮುಸ್ಲಿಂ ಸಮುದಾಯಗಳು ಪಾರ್ಲಿಮೆಂಟರಿ ಪ್ರಜಾಪ್ರಭುತ್ವವನ್ನು ದೇಶೀಯ ಸರ್ಕಾರವನ್ನು ಬ್ರಿಟಿಷರಿಂದ ಒತ್ತಾಯಿಸುವುದರ ಜೊತೆಗೆ ಅಲ್ಪಸಂಖ್ಯಾತರಿಗೆ ದೇಶದಲ್ಲಿ ಅವರ ಜನಸಂಖ್ಯೆಯ ಪ್ರಮಾಣವನ್ನು ಮೀರಿ ಕೂಡ ಪ್ರಾತಿನಿಧ್ಯವಿರಬೇಕೆಂಬ ಸೂಚನೆಯನ್ನು ಕೂಡ ಒಪ್ಪಲಾಗಿತ್ತು. ಕಾಂಗ್ರೆಸ್‌ನಲ್ಲಿದ್ದ ಉದಾರವಾದಿಗಳು ಈ ಸೂಚನೆಯ ಪರವಾಗೇ ಇದ್ದರು. ಜವಹರಲಾಲ್‌ರಂತಹ ಕಾಂಗ್ರೆಸ್ಸಿಗರು ಮತ್ತು ಹಿಂದೂ ಮಹಾಸಭಾವಾದಿಗಳು ಮುಸ್ಲಿಮರಿಗೆ ಜನಸಂಖ್ಯೆಯ ಪ್ರಮಾಣಕ್ಕಿಂತ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವ ಅಗತ್ಯವನ್ನು ಒಪ್ಪಲಿಲ್ಲ. ಹೀಗೆಲ್ಲ ಇದ್ದರೂ ೧೯೨೮ರ ತನಕ ಮೋತಿಲಾಲ್, ಜಿನ್ನ ಎಲ್ಲರೂ ದೇಶವು ಒಡೆಯಕೂಡದು, ಹಿಂದು ಮುಸಲ್ಮಾನರು ಒಗ್ಗಟ್ಟಾಗಿಯೇ ಇರಬೇಕು ಎಂದು ವಾಸಿಸುತ್ತಿದ್ದರು, ಚಿಂತಿಸುತ್ತಿದ್ದರು. ಮೊದಲೇ ಹೇಳಿದಂತೆ ಈ ಒಗ್ಗಟ್ಟಿನ ಆಶಯಕ್ಕನುಗುಣವಾಗಿ ಸಮುದಾಯಗಳು ಒಟ್ಟಾಗಿ ಬದುಕುತ್ತಾ ನಿರಂತರ ಸಂವಾದ ಕೊಡುಕೊಳ್ಳುವಿಕೆ ಸಾಧ್ಯವಾಗಿಸುವ ಯತ್ನ Dominion Statusನ್ನೇ ಪ್ರತಿಪಾದಿಸಲಾಗುತ್ತಿತ್ತು.

ಈ ಮಧ್ಯೆ ೧೯೨೭ರಲ್ಲಿ ಜವಹಾರ್‌ಲಾಲ್ ನಡೆಸಿದ ಯೂರೋಪು ಮತ್ತು ರಷ್ಯಾ ಪ್ರವಾಸ ಆತನ ದೃಷ್ಟಿಕೋನವನ್ನು ಪೂರ್ತಿಯಾಗಿ ಬದಲಾಯಿಸಿತು. ರಷ್ಯಾದ ಬಲಿಷ್ಠ ಕೇಂದ್ರ ಸರ್ಕಾರ, ಬ್ರಸೆಲ್ ಸಮ್ಮೇಳನದಲ್ಲಿ ವಸಾಹತುಶಾಹಿ ಶೋಷಣೆಯ ವಿರುದ್ಧ ಕಂಡುಬಂದ ಪ್ರಖರ ವಿರೋಧ ಜವಹಾರ್‌ಲಾಲ್‌ರನ್ನು ಪೂರ್ಣ ಸ್ವಾತಂತ್ರ್ಯ, ಬಲಿಷ್ಠ ದೇಶೀ ಸರ್ಕಾರದ ಪರವಾಗಿ ಪರಿವರ್ತಿಸಿತು. ಮಧು ಲಿಮೆಯೆ ಪ್ರಕಾರ ಯೂರೋಪಿನಿಂದ ಹಿಂದಿರುಗಿದ ಜವಾಹಾರ್‌ಲಾಲ್ ಇಡಿಯಾಗಿ ಬೇರೆ ಮನುಷ್ಯರೇ ಆಗಿದ್ದರು. ಮಾರ್ಕ್ಸ್‌ವಾದದ ಕಾರಂಜಿಯಲ್ಲಿ ಸಿಕ್ಕ ಜಲಪಾನದಿಂದಾಗಿ ಉನ್ಮತ್ತರಾಗಿದ್ದರು. ಜವಹಾರ್‌ಲಾಲ್‍ರಲ್ಲಾದ ಈ ಬದಲಾವಣೆಯನ್ನು ಗಾಂಧಿ ಬಹು ನೊಂದುಕೊಂಡು ವಿರೋಧಿಸಿದರು. ಪೂರ್ಣ ಸ್ವಾತಂತ್ರ್ಯದ ಕಲ್ಪನೆ, ಬಲಿಷ್ಠ ಸರ್ಕಾರದ ಕಲ್ಪನೆ ಭಾರತದ ವಿಶಿಷ್ಟ ಸಾಂಸ್ಕೃತಿಕ ಸನ್ನಿವೇಶವನ್ನು - ಇತಿಹಾಸವನ್ನು ಪರಿಗಣಿಸುತ್ತಿಲ್ಲ. ಹಾಗಾಗಿ ಆ ಬೇಡಿಕೆ ತುಂಬಾ ಆತುರದಿಂದ ಕೂಡಿದೆ ಎಂದು ಮತ್ತೆ ಮತ್ತೆ ನೆಹರೂಗೆ ಬರೆದರು. ನೆಹರೂ ೧೯೨೨-೧೯೨೯ರ ನಡುವೆ ಗಾಂಧಿಗೆ ಬರೆದ ಪತ್ರಗಳಲ್ಲಿ ತೀವ್ರವಾಗಿ, ಖಾರವಾಗಿ ಗಂಧಿಯ ಕಾರ್ಯವೈಖರಿ, ಸೀಮಿತ ಸ್ವಾತಂತ್ರ್ಯದ ಕಲ್ಪನೆ, ಹಿಂದ್ ಸ್ವರಾಜ್ ಕೃತಿಯ ಆಶಯಗಳು ಎಲ್ಲವನ್ನು ವಿರೋಧಿಸಿದರು. ಈ ಗುರುಶಿಷ್ಯರ ನಡುವೆ ನಡೆದ ಪತ್ರವ್ಯವಹಾರದಲ್ಲಿ ಇಬ್ಬರೂ ಆರೋಪ - ಪ್ರತ್ಯಾರೋಪಗಳನ್ನು ಮಾಡುವ ಹಂತಕ್ಕೂ ಹೋದರು. ನಂತರದ ಎಲ್ಲ ಬೆಳವಣಿಗೆಗಳನ್ನು ಇಲ್ಲಿ ವಿವರವಾಗಿ ನಮೂದಿಸುವ ಅಗತ್ಯವಿಲ್ಲ. ೧೯೩೭ರ ತನಕವು ದೇಶದ ವಿಭಜನೆ ಅನಿವಾರ್ಯವಾಗಿ ಕಂಡಿರಲಿಲ್ಲ. ಸ್ವಾತಂತ್ರ್ಯ ಚಳವಳಿ ತೀವ್ರವಾಗುತ್ತಿದ್ದಂತೆ, ಬ್ರಿಟಿಷರ ನಿರ್ಗಮನ ಖಚಿತವಾಗುತ್ತಿದ್ದಂತೆ ಆಧುನಿಕತೆಯ ಬಲಿಷ್ಠ ರಾಷ್ಟ್ರದ ಕನಸು ಹೆಚ್ಚಾಗುತ್ತಿದ್ದಂತೆ, ಅಲ್ಪಸಂಖ್ಯಾತರು ಬೇರೆಯೇ ಕಾರ್ಯಕ್ರಮಗಳನ್ನು ರೀತಿನೀತಿಗಳನ್ನು ಮಂಡಿಸಬೇಕಾದ್ದು ಅನಿವಾರ್ಯವಾಯಿತು. ಸಮುದಾಯಗಳು ಒಟ್ಟಿಗೇ ಹೊಂದಿಕೊಂಡು ಕೊಡುಕೊಳ್ಳುತ್ತ ಬದುಕುವ ಸಾಮಾಜಿಕ-ರಾಜಕೀಯ ವ್ಯವಸ್ಥೆಗೆ ಗಾಂಧಿ ಎಷ್ಟು ಒತ್ತುಕೊಟ್ಟರೆಂದರೆ ಹರಿಜನರಿಗಾಗಿ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಕೂಡ ಅವರು ಒಪ್ಪಲಿಲ್ಲವೆಂಬುದನ್ನು ಗಮನಿಸಬೇಕು. ಗಾಂಧಿಯ ಈ ನಿರ್ಧಾರದ ಬಗ್ಗೆ ಈವತ್ತಿಗೂ ಸಾಕಷ್ಟು ದಲಿತರಿಗೆ ವಿರೋಧವಿದೆ, ಸಿಟ್ಟಿದೆ. ಆದರೆ ಗಾಂಧಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒಂದು ಸಮುದಾಯದ ಬಗ್ಗೆ ಮಾತ್ರ ಯೋಚಿಸುತ್ತಿರಲಿಲ್ಲ. ಒಟ್ಟು ಸಮಾಜ ಮತ್ತು ನಾಗರೀಕತೆಯ ಕಲ್ಪನೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದರು ಎಂಬುದನ್ನು ಯಾರೂ ಮರೆಯಬಾರದಷ್ಟೇ.

ಗಾಂಧಿಯ ಹಿಂದ್ ಸ್ವರಾಜ್ ಕೃತಿಯ ಹಿಂದಾಗಲೀ, ಉಳಿದ ಕಲ್ಪನೆಗಳ ಹಿಂದಾಗಲೀ ಇದ್ದದ್ದು ಇಲ್ಲಿಯ ಜನಸಮುದಾಯ ಸಾಂಪ್ರದಾಯಿಕವಾಗಿ ರೂಢಿಸಿಕೊಂಡು ಬಂದಿದ್ದ ನೆಮ್ಮದಿ, ಜೀವನಪ್ರೀತಿ ಮತ್ತು ಸಮುದಾಯಪ್ರಜ್ಞೆ ಸಾವಿರಾರು ವರ್ಷ ರಾಜಕೀಯವಾಗಿಯಲ್ಲದಿದ್ದರೂ ಸಾಂಸ್ಕೃತಿಕವಾಗಿಯೂ ಜೀವನ ವಿಧಾನದಲ್ಲಿಯೂ ಒಟ್ಟಾಗಿ ಬದುಕಿಕೊಂಡು ಬಂದ ಸಮುದಾಯದ ಕಲ್ಪನೆಯನ್ನು ಗಾಂಧಿ ‘ದೇಶ’, ‘ರಾಷ್ಟ್ರ’ ಇಂತಹ ಅಮೂರ್ತ ಕಲ್ಪನೆಗಳ ಪರವಾಗಿ ಬಿಟ್ಟುಕೊಡಲು ತಯಾರಿರಲಿಲ್ಲ. ‘ದೇಶ’ ಮತ್ತು ‘ರಾಷ್ಟ್ರ’ದ ಕಲ್ಪನೆ ಹುಟ್ಟಿದ್ದೇ ಯೂರೋಪಿನ ಆಧುನಿಕತೆಯ - ವಸಾಹತುಶಾಹಿಯ ಚಿಂತನೆಯ ಒಂದು ಭಾಗವಾಗಿ. ಈ ಚಿಂತನೆ ಪ್ರೇರೇಪಿಸಿದ ಬಲಿಷ್ಠ ರಾಷ್ಟ್ರ, ಮಿಲಿಟರಿ ವ್ಯವಸ್ಥೆ, ನಗರೀಕರಣ, ಕೈಗಾರೀಕರಣ, ವಸಾಹತುಶಾಹಿ ಎಲ್ಲವನ್ನೂ ನಾವು ಕಂಡಿದ್ದೇವೆ. ಅದರ ವ್ಯಾಮೋಹಕ್ಕೆ ಒಳಗಾಗಿದ್ದೇವೆ. ನಮ್ಮ ಸ್ವಾತಂತ್ರ್ಯ ಚಳುವಳಿಯ ಹಿಂದಿನ ಪ್ರೇರಣೆ ಕೂಡ ಈ ಆಧುನಿಕ ಸಾಕ್ಷಾತ್ಕಾರವೇ. ಈ ಆಧುನಿಕತೆಯ ವ್ಯಾಮೋಹವೇ ದೇಶ ವಿಭಜನೆಯಲ್ಲಿ ಪರ್ಯಾವಸಾನಗೊಂಡಿತಷ್ಟೆ.

ಈ ದೃಷ್ಟಿಯಿಂದ ಗಾಂಧಿ ನವ್ಯೋತ್ತರ, ನವ್ಯದ ಆಧುನಿಕರ ತೀವ್ರ ಕಾಲದಲ್ಲಿ ಬದುಕಿ ಕೂಡ ಅದರಿಂದಾಚೆಗೆ ಯೋಚಿಸಿದವರು. ಸ್ವಾತಂತ್ರ್ಯ ಬಂದ ನಂತರ ಕಳೆದ ಆರೇಳು ದಶಕಗಳ ಉಪಖಂಡದ ವಿದ್ಯಮನಗಳು ಗಾಂಧಿಯ ಚಿಂತನೆಯ ದೂರಗಾಮಿತನವನ್ನು ತೋರಿಸಿವೆ.

ಭಾರತ-ಪಾಕಿಸ್ಥಾನ, ಬಾಂಗ್ಲಾವನ್ನು ತನ್ನ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಈ ದೇಶಗಳ ನಿರ್ಮಾಣವೇ ರಾಜಕೀಯ ನಿರ್ಧಾರವಾಗಿತ್ತು. ಗಡಿ ವಿಭಜನೆ, ಜನರ ವಲಸೆ, ಹಿಂಸೆ, ದೇಶಗಳ ನಡುವೆ ಇರುವ ಓಡಾಟಕ್ಕೆ ಇರುವ ಕೃತಕ ನಿಯಮಗಳು ಇದ್ಯಾವುದಕ್ಕೂ ಇತಿಹಾಸದ - ಸಂಸ್ಕೃತಿಯ ಒತ್ತಾಸೆಯಿರಲಿಲ್ಲ. ಏಕೆಂದರೆ ಸಾವಿರಾರು ವರ್ಷ ಇದೇ ನೆಲದಲ್ಲಿ ಇದೇ ಜನ ತಮ್ಮೆಲ್ಲ ವೈವಿಧ್ಯ, ಭಿನ್ನತೆಗಳ ನಡುವೆ ಬದುಕಿಕೊಂಡು ಬಂದಿದ್ದರು. ಧರ್ಮದ ಅಥವಾ ರಾಜಕೀಯದ ಕಾರಣಕ್ಕೂ ಈ ವೈವಿಧ್ಯ, ಭಿನ್ನತೆಯನ್ನು ಬದಿಗಿಟ್ಟು ‘ದೇಶ’ ‘ರಾಷ್ಟ್ರ’ದ ಕಲ್ಪನೆಯನ್ನು ಒಪ್ಪಿಕೊಂಡಿದ್ದರಿಂದ ಮೊದಲನೆಯದಾಗಿ ಮೂರೂ ದೇಶಗಳು ನಿರಂತರ ರಾಜತಾಂತ್ರಿಕ-ಮಿಲಿಟರಿ -ರಾಜಕೀಯ ಸಂಘರ್ಷದಲ್ಲಿರಬೇಕಾಯಿತು. ಭಾರತ-ಪಾಕಿಸ್ಥಾನ ಎರಡೂ ದೇಶಗಳಲ್ಲೂ ಬುಡಕಟ್ಟು ಜನಾಂಗಗಳಿಗೆ, ಧಾರ್ಮಿಕ ಅಲ್ಪಸಂಖ್ಯಾತರಿಗೆ ನೆಮ್ಮದಿಯಿಲ್ಲ. ಬಲೂಚಿಸ್ಥಾನ, ಸಿಂದ್, ಕಾಶ್ಮೀರ, ಅಸ್ಸಾಮ್, ಪೂರ್ವ ಬಾಂಗ್ಲಾ ಎಲ್ಲ ಕಡೆಯೂ ಇದೇ ಕಥೆ. ಈ ಭಾಗಗಳಲ್ಲಿ ವಾಸಿಸುವ ಜನರ ಸ್ವಯಂ ನಿರ್ಧಾರದ ಹಕ್ಕು ಭಾರತಕ್ಕೂ, ಪಾಕಿಸ್ಥಾನಕ್ಕೂ, ಬಾಂಗ್ಲಾ ದೇಶಕ್ಕೂ ಎಂದಿನಿಂದಲೂ ದೇಶವಿರೋಧಿ ಚಟುವಟಿಕೆಯಾಗಿಯೇ ಕಂಡುಬಂದಿದೆ. ಈ ದೇಶಗಳ ಮಿಲಿಟರಿ, ಅಣುವ್ಯವಸ್ಥೆಗಳು ಬಲಿಷ್ಠವಾದಂತೆಲ್ಲ ಸಮುದಾಯಗಳು, ವಿಶೇಷವಾಗಿ ಆಧುನಿಕತೆಯ ತೆಕ್ಕೆಗೆ ಪ್ರವೇಶಿಸಲಾರದಂತಹ ಗುಂಪುಗಳು ನೆಲೆ ಕಳೆದುಕೊಂಡಿವೆ, ಅನಾಥವಾಗಿವೆ. ಶ್ರೀಲಂಕಾ, ಬರ್ಮಾ, ಅಫ್ಘಾನಿಸ್ಥಾನದ ಪರಿಸ್ಥಿತಿ ಕೂಡ ಭಿನ್ನವಾಗೇನಿಲ್ಲ.

ಇತಿಹಾಸದ, ಪುರಾಣದ ಬೇರೆ ಬೇರೆ ಘಟ್ಟಗಳಲ್ಲಿ ಈ ಎಲ್ಲ ಪ್ರದೇಶಗಳು ಒಂದಾಗಿದ್ದವು. ದಿನನಿತ್ಯದ ಜೀವನದ ಲಯದಲ್ಲಿ, ಸಾಂಸ್ಕೃತಿಕವಾಗಿ, ಕೃಷಿ, ಕೈಗಾರಿಕೆಯ ವಿಶಿಷ್ಟತೆಯಲ್ಲಿ, ಆದರೆ ರಾಜಕೀಯವಾಗಿ ಈ ಪ್ರದೇಶಗಳು ಯಾವಾಗಲೂ ‘ಅಖಂಡ’ವಾಗಿರಲಿಲ್ಲ. ಗಾಂಧೀಜಿ ಬಯಸಿದ್ದು ರಾಜಕೀಯ, ಮಿಲಿಟರಿ ಅಖಂಡತೆಯನ್ನಲ್ಲ. ಸಮುದಾಯಗಳಿಗೆ ಹೆಚ್ಚಿನ ಸ್ವಾತಂತ್ರ್ಯ, ಜೀವನಾವಕಾಶಗಳಿರುವಂತಹ ಅಖಂಡತೆಯನ್ನು. ಈ ರೀತಿಯ ‘ಅಖಂಡತೆ’ಯ ಕಲ್ಪನೆಯನ್ನು ಭಾರತ ಮತ್ತು ಪಾಕಿಸ್ಥಾನದಲ್ಲಿರುವ ಮೂಲಭೂತವಾದಿಗಳು ಒಪ್ಪುವುದಿಲ್ಲ.

ಇಷ್ಟೆಲ್ಲ ಹೇಳಿದ ಮೇಲೂ ಗಾಂಧಿ ನಮಗೆ ಭಾವನಾತ್ಮಕವಾಗಿ, ವೈಚಾರಿಕವಾಗಿ ಆತ್ಮೀಯರಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರ ಆಳದ ಒಲವಿರುವುದೇ ಆಧುನಿಕತೆ ಮತ್ತು ಬಲಿಷ್ಠ ರಾಷ್ಟ್ರದ ಪರವಾಗಿ. ಇದರಿಂದ ನಾವೆಲ್ಲರೂ ಒಂದು ದಿನ ನಾಶವಾಗುವ, ಅನಾಥವಾಗುವ ಸಾಧ್ಯತೆ ಇದ್ದರೂ ಇರಬಹುದು ಎಂಬುದು ಗೊತ್ತಿದ್ದರೂ ಈ ಕಾರಣಕ್ಕಾಗಿಯೇ ಬಲಿಷ್ಠ ರಾಷ್ಟ್ರದ ಕಲ್ಪನೆಯನ್ನು ಒಪ್ಪುವಂತಹ, ಹಿಂದೂ ಮಹಾಸಭಾವಾದಿಯಂತಹ ಸಂಘಟನೆಗಳನ್ನು ನಾವು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದೇವೆ.

ಈ ರೀತಿಯ ಆಯ್ಕೆಗೆ ಕಾರಣ ಪ್ರಾಯಶಃ ನಾವೆಲ್ಲರೂ ಹೆಚ್ಚಾಗಿ ಸಮಕಾಲೀನತೆ ಮತ್ತು ಚರಿತ್ರೆಗೆ ಹೆಚ್ಚು ಹೆಚ್ಚು ಪ್ರತಿಕ್ರಿಯಿಸುವುದರಿಂದ. ಗಾಂಧಿ ಕೂಡ ಪ್ರತಿಕ್ರಿಯಿಸುತ್ತಿದ್ದುದು ಸಮಕಾಲೀನತೆ ಮತ್ತು ಚರಿತ್ರೆಗೇ. ಆದರೆ ಹಾಗೆ ಪ್ರತಿಕ್ರಿಯಿಸುವಾಗ ನಾವು ಯಾವ ರೀತಿಯ ನಾಗರೀಕತೆಯ ಪರವಾಗಿರಬೇಕು ಎಂಬುದು ಕೂಡ ಅವರ ಕಾಳಜಿಯಾಗಿತ್ತು. ಈ ರೀತಿಯ ಕಾಳಜಿಯನ್ನು ಗಾಂಧಿಯವರ ಮತ್ತ್ಯಾವ ಸಮಕಾಲೀನರಲ್ಲಿಯೂ ಕಾಣಲಾರೆವು ಎಂಬುದರಿಂದಲೇ ಗಾಂಧಿ ನವ್ಯ ಮತ್ತು ಆಧುನಿಕತೆಯ ತೀವ್ರ ಸಂದರ್ಭದಲ್ಲಿ ತೀವ್ರವಾಗಿ ಬದುಕಿಯೂ ಕೂಡ, ಮುಂದೆಂದೋ ಯೂರೋಪಿನಲ್ಲಿ ಚಿಂತನಾರೂಪಿಯಾಗಿ ಮಾತ್ರ ಕಾಣಿಸಿಕೊಂಡ ನವ್ಯೋತ್ತರ - ಆಧುನಿಕೋತ್ತರ ಪರಿಕಲ್ಪನೆ-ಆಶಯಗಳೆಲ್ಲವನ್ನೂ ಬಹು ಹಿಂದೆಯೇ ಇನ್ನೂ ಹೆಚ್ಚು ಸಮಗ್ರತೆಯಿಂದಲೂ, ಜೀವಂತಿಕೆಯಿಂದಲೂ ಒಳಗೊಂಡಿದ್ದರು.

ಹಿಂದ್ ಸ್ವರಾಜ್‌ನ ಈವತ್ತಿನ ಹೊಸ ಮತ್ತು ಮರು ಓದು ಈ ಹಿನ್ನೆಲೆಯಲ್ಲೇ ಜರುಗಬೇಕು.

ಸಂಚಯ ದ್ವೈಮಾಸಿಕ ಸಾಹಿತ್ಯ-ಸಾಂಸ್ಕೃತಿಕ ಪತ್ರಿಕೆಯ ಜುಲೈ ಅಗಸ್ಟ್ ೨೦೦೯ರ ೮೧ನೇ ವಿಶೇಷ ಸಂಚಿಕೆ (ನೂರರ ಹಿಂದ್ ಸ್ವರಾಜ್)ಯಲ್ಲಿ ಪ್ರಕಟಿತ.
ಮುಂದೆ ಓದಿ....