Thursday, December 25, 2008

ಒಳನೋಟ, ಕಳಕಳಿ, ಬುದ್ಧಿವಾದ, ಪುನರುಕ್ತಿ...


ನಾಗಭೂಷಣರ ಈ ಸಮಾಜವಾದಿ ಸಂಕಥನಗಳು ಉದ್ದೇಶದಲ್ಲಿ ಸಮಾಜವೈದ್ಯನೊಬ್ಬನು ರೋಗಿಯ ನಿರಂತರ ಕಾಯಿಲೆ-ಕಸಾಲೆಯಿಂದ ಕೊಂಚವೂ ವಿಚಲಿತಗೊಳ್ಳದೆ ಪ್ರತಿದಿನವೂ ನೀಡುವ ಔಷಧಿ ಮತ್ತು ಕಷಾಯದ ಟಿಪ್ಪಣಿಗಳಂತಿವೆ. ಸಮಕಾಲೀನ ಕರ್ನಾಟಕಕ್ಕೆ, ಭಾರತಕ್ಕೆ, ಜಾಗತಿಕ ವಿದ್ಯಮಾನಗಳಿಗೆ ಗಾಂಧಿ-ಲೋಹಿಯಾ ವೈಚಾರಿಕತೆಯ ಚೌಕಟ್ಟಿನಲ್ಲಿ ಸಂವೇದನಾಶೀಲ ಬರಹಗಾರನೊಬ್ಬ ನೀಡಿದ ಕಳಕಳಿಯ ಪ್ರತಿಕ್ರಿಯೆಯಾಗಿ ಈ ಬರಹಗಳನ್ನು ಗಮನಿಸಬೇಕು.

`ಇದು ಭಾರತ! ಇದು ಭಾರತ!!' ಎಂಬ ಬರಹದಲ್ಲಿ ನಾಗಭೂಷಣ ಸಮಕಾಲೀನ ಕರ್ನಾಟಕದ ಸಮಾಜದ ಬಹುಪಾಲು ವಿಸಂಗತಿಗಳನ್ನು ಕರಾರುವಾಕ್ಕಾಗಿ ನಮೂದಿಸುತ್ತಾರೆ. ಈ ಬರಹದಲ್ಲಿ ನಮೂದಿಸಿರುವ ವಿಸಂಗತಿಗಳ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಇವೆಲ್ಲ ವಿಸಂಗತಿಯನ್ನು ಸೂಚಿಸುವುದರ ಜೊತೆಗೆ ಸದ್ಯದ ತಳಮಳ, ಬದಲಾವಣೆಯ ದಿಕ್ಕನ್ನು ಕೂಡ ಸೂಚಿಸುತ್ತದೆಂಬುದು ಮುಖ್ಯ. ಹೆಚ್ಚಾಗಿ ಸಾಮಾಜಿಕ-ರಾಜಕೀಯ ಜೀವನಕ್ಕೆ, ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವುದೇ ನಾಗಭೂಷಣರ ಉದ್ದೇಶದಂತಿದೆ. ಇದು ಬರಹದ ವ್ಯಾಪ್ತಿಗೆ-ಹರವಿಗೆ ನಾಗಭೂಷಣ ಹಾಕಿಕೊಂಡಿರುವ ಚೌಕಟ್ಟು. ಆದರೆ ಅಂಕಣಕಾರನೊಬ್ಬ ಬದುಕಿನ ವೈವಿಧ್ಯಗಳಿಗೂ ಸ್ಪಂದಿಸಬೇಕಾಗುತ್ತದೆ. ಡಿವಿಜಿ, ಪಿ.ಲಂಕೇಶ್-ಇಂತಹವರ ಬರಹಗಳಲ್ಲಿ ಈ ವೈವಿಧ್ಯವನ್ನೂ ನಾವು ಕಾಣುತ್ತೇವೆ. ನಾಗಭೂಷಣ್‌ಗೆ ಇದು ಗೊತ್ತಿಲ್ಲವೆಂದಲ್ಲ. ಈ ಸಂಗ್ರಹದಲ್ಲಿಲ್ಲದ, ಆದರೆ ನಂತರದ ಪತ್ರಿಕೆಯ ಸಂಚಿಕೆಗಳಲ್ಲಿ ನಾಗಭೂಷಣರೇ ತಮ್ಮ ತಂದೆ ಮತ್ತು ಬೆಕ್ಕನ್ನು ಕುರಿತ ಬರಹಗಳಲ್ಲಿ ತೀರಾ ಸಾರ್ವಜನಿಕ ವಿಷಯಗಳಾಚೆಗೂ ಕೈಚಾಚುವುದನ್ನು ಕಾಣಬಹುದು. ಇಂತಹ ಬರಹಗಳು ಹೆಚ್ಚಾದಷ್ಟು ಓದುಗ ನಾಗಭೂಷಣರ ಸಾಮಾಜಿಕ-ರಾಜಕೀಯ ವಿಶ್ಲೇಷಣೆಯನ್ನು ಇನ್ನೂ ವಿಶ್ವಾಸದಿಂದ, ಸಾವಧಾನದಿಂದ ಗಮನಿಸುತ್ತಾನೆ. ಸ್ವತಃ ಲೋಹಿಯಾರ ಬರಹಗಳಲ್ಲಿರುವ ಸಾಂಸ್ಕೃತಿಕ ವೈವಿಧ್ಯ-ಶ್ರೀಮಂತಿಕೆ ಮತ್ತು ನಾಗಭೂಷಣ ಮೂಲಭೂತವಾಗಿ ವಿಜ್ಞಾನ-ಗಣಿತಶಾಸ್ತ್ರದ ಹಿನ್ನೆಲೆಯಿಂದ ಬಂದವರಾದ್ದರಿಂದ ಈ ಮಾತು.

ಇಲ್ಲಿಯ ಬರಹಗಳನ್ನು ಓದುತ್ತಿದ್ದರೆ ನಾಗಭೂಷಣ ನಮ್ಮ ಸಮಕಾಲೀನ ಜೀವನದಲ್ಲಿ ನಿರಾಶೆ, ಹತಾಶೆ, ಕ್ಷುದ್ರತೆಗಳನ್ನು ಮಾತ್ರ ಗಮನಿಸುತ್ತಿರುವರೇನೋ ಎಂಬ ಭಾವ ಓದುಗರಲ್ಲಿ ಮೂಡಬಹುದು. ರಾಮದಾಸರನ್ನು ಕುರಿತ ಎರಡು ಬರಹಗಳು, ಬಿಹಾರದ ಕಾರ್ಮಿಕ-ಚಿಂತಕ ದಶರಥರನ್ನು ಕುರಿತ ಬರಹದಲ್ಲಿ ನಾಗಭೂಷಣ ಈ ಕಾಲದಲ್ಲಿ ನಿರೀಕ್ಷಿಸುವ ಕ್ರಿಯಾಶೀಲತೆಯ, ವ್ಯಕ್ತಿಚಾರಿತ್ರ್ಯದ ಸ್ವರೂಪದ ರೀತಿ ಯಾವುದಿರಬೇಕೆಂಬ ಸೂಚನೆ ನಮಗೆ ಸಿಗುತ್ತದೆ. ಇದೇ ರೀತಿಯ ಕ್ರಿಯಾಶೀಲತೆ-ಸಾಧನೆಯ ಸ್ವರೂಪವನ್ನು ನಾಗಭೂಷಣ, ಕ್ರೀಡೆ, ಉದ್ಯಮ, ಸಂಗೀತ, ವಿಜ್ಞಾನ ಕ್ಷೇತ್ರಗಳಲ್ಲೂ ಗುರುತಿಸುವುದಾದರೆ, ಎನ್.ಎಸ್.ಶಂಕರ್ ಹಿನ್ನುಡಿಯಲ್ಲಿ ಪರೋಕ್ಷವಾಗಿ ಸೂಚಿಸಿರುವಂತೆ ಓದುಗನ ವೈವಿಧ್ಯಮಯ ಭಾವಸ್ತರಗಳನ್ನು ಮೀಟಲು ಸಾಧ್ಯವಾಗಬಹುದು.

ಬರಹದುದ್ದಕ್ಕೂ ನಾಗಭೂಷಣ ಸೂಚಿಸುವ ಔಷಧಿ-ಕಷಾಯ ಒಂದೇ ರೀತಿಯದು, ಸಮಾಜವಾದಿ ಹಿನ್ನೆಲೆಯದು ಎಂಬ ಕಾರಣಕ್ಕೆ ಬರವಣಿಗೆಯ ಮಹತ್ವ ಕಡಿಮೆಯಾಗುವುದಿಲ್ಲ. ಗಾಂಧಿ-ಲೋಹಿಯಾರ ನಿರ್ದಿಷ್ಟ ತಾತ್ವಿಕ ಹಿನ್ನೆಲೆಯಲ್ಲಿಯೇ ವಿಶ್ಲೇಷಣೆ ನಡೆಯುವುದರಿಂದ ಹೀಗನ್ನಿಸಬಹುದು. ಸೂಚನೆಗಳ ಪುನರಾವರ್ತನೆಯಿದೆ ಎನ್ನಿಸಬಹುದು. ಆದರೆ ತಾತ್ವಿಕ ನಿರ್ದಿಷ್ಟತೆಯನ್ನು ಭಿತ್ತಿಯಾಗಿಟ್ಟುಕೊಂಡ ಎಲ್ಲ ಬರಹಗಳಲ್ಲೂ ಈ ಮಿತಿ ಇದ್ದೇ ಇರುತ್ತದೆ. ಈ ಮಿತಿಯ ಹೊರತಾಗಿಯೂ ನಾವು ಈ ಬರಹಗಳಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಪುಸ್ತಕದುದ್ದಕ್ಕೂ ಸ್ಥಾಯಿಯಾಗಿರುವ ನೈತಿಕ ತೀವ್ರತೆ, ಸಾತ್ವಿಕ ಸಿಟ್ಟು ಮತ್ತು ಮನಸ್ಸಿನ ಆರ್ದ್ರತೆ.

ಸಂವಾದ-ವಾಗ್ವಾದ ಸಂಸ್ಕೃತಿಯೆ ನಮ್ಮಲ್ಲಿ ಕ್ಷೀಣಿಸುತ್ತಿರುವುದನ್ನು ಖೇದದಿಂದ ಗುರುತಿಸುವ ನಾಗಭೂಷಣ ನೇರವಾಗಿಯೇ, ಆದರೆ ಪ್ರಚೋದಕವಾಗಿಯೇ ಬರೆಯುತ್ತಾರೆ. ತನ್ನ ವಿಚಾರ ಕುರಿತಂತೆ ಇನ್ನೊಬ್ಬರು ಎತ್ತುವ ಪ್ರಶ್ನೆಗಳನ್ನು ಕ್ಷುಲ್ಲಕವಾಗಿ ಪರಿಗಣಿಸದೆ ಉತ್ತರ, ಸ್ಪಷ್ಟನೆ ನೀಡುತ್ತಾರೆ. ಈ ಮನೋಭಾವ ಸುಪ್ರೀತ್ ಎಂಬ ಓದುಗರೊಬ್ಬರಿಗೆ ಹೆಚ್ಚಿನ ಓದಿಗೆ ಸೂಚನೆಗಳನ್ನು ಮಾತ್ರ ನೀಡುವುದಿಲ್ಲ, ತಾನು ಬರಹ ಮಾಡುತ್ತಿರುವ ಪತ್ರಿಕೆಯ ಸಂಪಾದಕರೊಡನೆ ಕೂಡ ಭಿನ್ನಮತವನ್ನು ಸೂಚಿಸುತ್ತದೆ. ಇದನ್ನು ಮೆಚ್ಚುತ್ತಲೇ ನಾಗಭೂಷಣ್‌ಗೆ ಇರುವ ಬುದ್ಧಿವಾದವನ್ನು ಮತ್ತೆ ಮತ್ತೆ ಹೇಳುತ್ತಲೇ ಹೋಗುವ ಪ್ರವೃತ್ತಿಯನ್ನು ಕೂಡ ಸೂಚಿಸಬೇಕು. ಪುಟ 97-99ರಲ್ಲಿ ಬಂಜಗೆರೆ ಜಯಪ್ರಕಾಶರಿಗೆ ಬರಹದುದ್ದಕ್ಕೂ ನೀಡುತ್ತಲೇ ಹೋಗುವ ಸೂಚನೆ-ಬುದ್ಧಿವಾದದಲ್ಲಿರುವ ಪುನರುಕ್ತಿಯನ್ನು ಓದುವಾಗ ಯಾರಿಗಾದರೂ ಬೇಸರವಾಗುತ್ತದೆ. ಬುದ್ಧಿವಾದ ಹೇಳುವುದು ಸಂವಾದ-ವಾಗ್ವಾದವನ್ನು ಬೆಳೆಸುವ ಸರಿಯಾದ ಕ್ರಮವಲ್ಲ.

ನಾಗಭೂಷಣರ ಕಾಳಜಿಯ ಸ್ವರೂಪ ಮತ್ತು ಅಧ್ಯಯನದ ಹರವು ಅಂಕಣ ಬರಹದ ವ್ಯಾಪ್ತಿಯನ್ನು ಮೀರಿದ್ದು. ಇಂತಹ ಕಡೆ ನಾಗಭೂಷಣರ ಶಕ್ತಿ ಚೆನ್ನಾಗಿ ಗೊತ್ತಾಗುತ್ತದೆ. ಮುಖ್ಯವಾಗಿ ನಾಗಭೂಷಣ್ ಅಕಾಡೆಮಿಕ್ ಸ್ವಭಾವದವರಲ್ಲವಾದ್ದರಿಂದ ಒಂದು ವಿದ್ಯಮಾನ, ಒಂದು ವಿಚಾರ-ಇವೆಲ್ಲವೂ ಸಮಾಜ ಜೀವನದಲ್ಲಿ ಹೇಗೆ ವ್ಯಕ್ತವಾಗುತ್ತವೆ ಎಂಬುದನ್ನೇ ಗಮನಿಸುತ್ತಾರೆ. ಸಾಮಾಜಿಕ ಚಳುವಳಿಗಳನ್ನು ಕುರಿತಂತೆ ಹೇಳುವ `ಒಂದು ಚಳುವಳಿ ಸಾಮಾಜಿಕ ಚಳುವಳಿ ಅನ್ನಿಸಿಕೊಳ್ಳಬೇಕಾದರೆ ಅದು ಜಾತಿ-ವರ್ಗಗಳನ್ನು ಮೀರಿ ಇಡೀ ಸಮಾಜವನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನ ತಾತ್ವಿಕತೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ ಹಾಗೂ ಅದರ ಆಧಾರದ ಮೇಲೆ ತನ್ನ ಹೋರಾಟವನ್ನು ಕಟ್ಟಿಕೊಳ್ಳಬೇಕಾಗುತ್ತದೆ' (ಪು.19) ಮಾತಿನಲ್ಲಿ ಸದ್ಯದ ಎಲ್ಲ ಚಳುವಳಿಗಳ ಮಿತಿಗಳನ್ನು ಗುರುತಿಸುವ ನೋಟವಿದೆ, ನೋವಿದೆ.

ಹೆಸರು ಹೇಳಿದರೆ ಸಾಕು. ಯಾರು ಏನು ಹೇಳುತ್ತಾರೆಂದು, ಬರೆಯುತ್ತಾರೆಂದು ಊಹಿಸಬಹುದು. ಈ ಹಿನ್ನೆಲೆಯಲ್ಲಿ ಈ ಸಂಪುಟದ ಉತ್ತಮ ಲೇಖನಗಳಲ್ಲೊಂದಾದ "ಬುದ್ಧ ಮತ್ತು ಹಿಂದೂ ಧರ್ಮ" ವನ್ನು ಗಮನಿಸಬೇಕು.

ಇದೇ ಸ್ವರೂಪದ ಇನ್ನೆರಡು ಬರಹಗಳು: `ಮೈ ಮರೆತಂತಿರುವ ನಮ್ಮ ಸೆಕ್ಯುಲರ್ ರಾಜಕಾರಣ' ಮತ್ತು `ಹಿಂದೂ ಕೋಮುವಾದ ಮತ್ತು ಬುದ್ಧಿಜೀವಿಗಳ ಪೀಕಲಾಟ'. ಕೋಮುವಾದಿಗಳ ಹಿಂಸೆ ಮತ್ತು ದುರುದ್ದೇಶ ಮತ್ತು ಸೆಕ್ಯುಲರ್‌ವಾದಿಗಳ ಸೀಮಿತ ಸಾಂಸ್ಕೃತಿಕ ಗ್ರಹಿಕೆ ಎರಡನ್ನೂ ಒಟ್ಟಿಗೇ ತರಾಟೆಗೆ ತೆಗೆದುಕೊಳ್ಳುವ ಬರಹಗಳು ಇವು. ಈ ಬರಹಗಳಲ್ಲಿ ವ್ಯಕ್ತವಾಗಿರುವ ವಿಚಾರಗಳ ಹಿನ್ನೆಲೆಯಲ್ಲಿ ಧರ್ಮ-ಸಂಸ್ಕೃತಿ-ರಾಜಕಾರಣಕ್ಕಿರುವ -ಇರಲೇಬೇಕಾದ ಸಂಬಂಧ, ಒತ್ತಾಸೆಗಳನ್ನು ಕುರಿತು ಮುಕ್ತಮನಸ್ಸಿನ ಚರ್ಚೆ ನಡೆಯುವುದಾದರೆ ಮತಾಂತರ ಕುರಿತಂತೆ ಈವತ್ತು ನಡೆಯುತ್ತಿರುವ ರೂಕ್ಷ ಸಂವಾದಕ್ಕೆ ಹೊಸ ದಿಕ್ಕು ತೋರಿದಂತಾಗುತ್ತದೆ.

ಸಂವಾದ ಪತ್ರಿಕೆ, ಆಕಾಶವಾಣಿಯಲ್ಲೆಲ್ಲ ಕ್ರಿಯಾಶೀಲರಾಗಿದ್ದಾಗ, ಸಾಹಿತ್ಯ ವಿಮರ್ಶೆ ನಾಗಭೂಷಣರ ಮುಕ್ತ ಆಸಕ್ತಿಗಳಲ್ಲೊಂದಾಗಿತ್ತು. ಇಲ್ಲಿಯ ಬರಹಗಳನ್ನು ಗಮನಿಸಿದರೆ ಅದು ಪ್ರಾಸಂಗಿಕವಾದಂತಿದೆ. ಈ ಬದಲಾವಣೆ ನಾಗಭೂಷಣರ ಬಗ್ಗೆಯೂ, ನಮ್ಮ ಸಾಂಸ್ಕೃತಿಕ ವಾತಾವರಣದ ಬಗ್ಗೆಯೂ ಏನನ್ನು ಹೇಳುತ್ತದೆ!?
(ವಾರಪತ್ರಿಕೆ `ವಿಕ್ರಾಂತ ಕರ್ನಾಟಕ' ಡಿಸೆಂಬರ್ 26 ಸಂಚಿಕೆಯಲ್ಲಿ ಪ್ರಕಟಿತ. ಚಿತ್ರಗಳು ಪತ್ರಿಕೆಯ ಕೃಪೆ.)

ಇದು ಭಾರತ! ಇದು ಭಾರತ!! (ಸಮಾಜವಾದಿ ಸಂಕಥನಗಳು-2)
ಲೇ: ಡಿ.ಎಸ್.ನಾಗಭೂಷಣ
ಪುಟ:296, ಬೆಲೆ:150 ರೂ.
ಪ್ರ: ರೂಪ ಪ್ರಕಾಶನ, ಮೈಸೂರು ಮುಂದೆ ಓದಿ....