Sunday, October 5, 2008

ಲೋಹೀಯಾರ ಪುಸ್ತಕ ಸಮೀಕ್ಷೆಯ ಒಂದು ಮಾದರಿ

ಸರ್ ಎಂ.ವಿ.ಅವರ ವೃತ್ತಿಜೀವನ - ಲೋಹಿಯಾ
ಪುಸ್ತಕ:Memories of my working life:
ನನ್ನ ವೃತ್ತಿ ಜೀವನದ ನೆನಪುಗಳು
ಲೇ:ಸರ್. ಎಂ.ವಿಶ್ವೇಶ್ವರಯ್ಯ
ಪ್ರ: ಲೇಖಕರು, ಅಪ್‌ಲ್ಯಾಂಡ್ಸ್, ಹೈಗ್ರೌಂಡ್ಸ್, ಬೆಂಗಳೂರು
ಬೆಲೆ: ಆರು ರೂ.

ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಿಗೆ ಈಗ ತೊಂಬತ್ತಾರು ವರ್ಷ. ಅವರು ಈ ಕಾಲದಲ್ಲಿ ದೇಶದಲ್ಲೇ ಅತ್ಯುನ್ನತರಾದ ಯಂತ್ರಶಿಲ್ಪಿಯಾಗಿದ್ದಾರೆ. ಕೊಂಚ ಬೇರೆ ರೀತಿಯಲ್ಲಿ ಪಾಲಿತವಾಗಿದ್ದರೆ, ಮಹಾತ್ಮಗಾಂಧಿಯವರ ಅನಂತರ ದೇಶದಲ್ಲಿ ಎರಡನೆಯ ಮಹಾವ್ಯಕ್ತಿಯಾಗಿ ಪರಿಗಣಿಸಲ್ಪಡಬಹುದಾಗಿದ್ದಂಥ ವ್ಯಕ್ತಿದ್ರವ್ಯ ಪಡೆದಿದ್ದವರು ಇವರು. ಕೆಲವೇ ವಾರಗಳ ಹಿಂದೆ ನಾವು ಅವರ ಜೊತೆ ಸುಮಾರು ನೂರು ನಿಮಿಷಗಳಷ್ಟು ದೀರ್ಘ ಮಾತನಾಡಿದ್ದೆವು. ಆ ಸುದೀರ್ಘ ಮಾತುಕತೆಯಲ್ಲಿ ಅವರು ಒಮ್ಮೆಯಾದರೂ ನೆನಪು ಸೋತು ವಾಕ್ಯವನ್ನು ಅರ್ಧಕ್ಕೆ ಮುರಿದದ್ದಿಲ್ಲ. ಮಾತಿನಲ್ಲಿ ಅನೇಕ ವಿಷಯಗಳು ಹೆಣೆದು ಬಂದಾಗ ಮಾತ್ರ ಒಂದಕ್ಕೊಂದಕ್ಕೆ ಸಂಬಂಧ ತಪ್ಪಿದಂತಾಗುತ್ತಿತ್ತು. ಆದರೆ ಅವರಿಗಿಂತ ಎಷ್ಟೋ ಎಳಸೆನ್ನುವ ಪ್ರಾಯದಲ್ಲೇ ನಮಗೆ ಹಾಗಾಗುತ್ತದಲ್ಲ. ಅಂಥ ಹರಿತವಾದ ಬುದ್ಧಿಮತ್ತೆ, ಅಂಥ ಅಸಾಧ್ಯ ಶ್ರಮದ ಬದುಕು, ಅಂಥ ಸುದೀರ್ಘವಾದ ಜೀವನ ಇವುಗಳನ್ನು ಪಡೆದು ನಮ್ಮೆದುರಿದ್ದ ಒಬ್ಬ ಮನುಷ್ಯನ ಜೀವನ ಸ್ಮೃತಿಗಳು, ಈ ವಿಶಿಷ್ಟಕಾಲದ ಪರಿಚಯ ಅಷ್ಟಿಷ್ಟಾದರೂ ಇರುವಂಥ ಓದುಗರಿಗೆ ನಿಜವಾಗಿ ರೋಮಾಂಚಕವಾಗಬಲ್ಲವು.

1886ರಲ್ಲಿ ಅವರು ಖಾನ್ ದೇಶದ ಧುಲಿಯಾ ಎಂಬಲ್ಲಿಗೆ ನೀರು ಸರಬರಾಜು ಯೋಜನೆಯನ್ನು ತಯಾರಿಸಿ ಕೊಟ್ಟಾಗಿನಿಂದ ಮೊದಲು ಮಾಡಿ, 1908ರಲ್ಲಿ ಪೂನಾ ನಗರಕ್ಕೆ ಕೊಳಚೆ ನೀರನ್ನು ನಳಿಕೆಗಳಲ್ಲಿ ಪಂಪ್ ಮಾಡಿ ಹೊರ ಸಾಗಿಸುವ ಆಧುನಿಕ ಒಳಚರಂಡಿ ಯೋಜನೆಯನ್ನು ನಿರ್ಮಿಸಿಕೊಡುವಲ್ಲಿನ ತನಕ, ಪಶ್ಚಿಮ ಹಾಗೂ ದಕ್ಷಿಣ ಇಂಡಿಯಾದ ಹೆಚ್ಚು ಕಡಿಮೆ ಎಲ್ಲಾ ನೀರು ಸರಬರಾಜು ಮತ್ತು ಚರಂಡಿ ಯೋಜನೆಗಳಲ್ಲಿಯೂ ಶ್ರೀ ವಿಶ್ವೇಶ್ವರಯ್ಯ ಭಾಗವಹಿಸಿದ್ದಾರೆ. ಇಷ್ಟೇ ಅಲ್ಲ, ತನ್ನ ಕಾಲದ ಎಂಜಿನಿಯರ್‌ಗಳಲ್ಲೆ ಪ್ರಪ್ರಥಮ ಗಣ್ಯರಾಗಿದ್ದ ಈತ ದೇಶದ ಪ್ರತಿಯೊಂದು ಎಂಜಿನಿಯರಿಂಗ್ ಸಮಸ್ಯೆಗಳಲ್ಲೂ ತೀವ್ರ ಆಸಕ್ತಿ ತಾಳಿದ್ದರು. 1925ರಲ್ಲೇ ಅವರು ಒಂದು ಅಟೊಮೊಬಾಯಿಲ್ (ಮೋಟಾರು ವಾಹನ) ಕಾರ್ಖಾನೆಯ ಯೋಜನೆಯನ್ನು ಸಿದ್ಧಗೊಳಿಸಿದ್ದರು ಮತ್ತು ಈ ಉದ್ಯಮದ ನಿರ್ಮಾಣದಲ್ಲಿ ಪಾಲುಗೊಳ್ಳುವಂತೆ ಅಮೆರಿಕಾದ ಕ್ರಿಸ್‌ಲರ್ ಕಾರ್ಪೊರೇಶನ್ನನ್ನು ಒಪ್ಪಿಸಿದ್ದರು. ಆದರೆ ಬ್ರಿಟಿಷರು ಮೈಸೂರಿನ ಮಹರಾಜರನ್ನು ಒತ್ತಾಯಿಸಿ ಈ ಯೋಜನೆಯನ್ನು ರದ್ದುಗೊಳಿಸಿದರು. ಅದೇ 1935ರಲ್ಲಿ ನಡೆದ ಒಂದು ಕಥೆಯನ್ನು ಶ್ರೀ ವಿಶ್ವೇಶ್ವರಯ್ಯ ಹೇಳಿದ್ದಾರೆ: ಆ ಕಾಲದಲ್ಲೆ ನ್ಯೂಯಾರ್ಕಿನಲ್ಲಿ ಅವರಿಗೆ ಒಬ್ಬ ರಷ್ಯನ್ ಇಂಜಿನಿಯರ್ ಭೇಟಿಯಾಗಿದ್ದನಂತೆ. ಅಮೆರಿಕದ ಮಾದರಿಯಲ್ಲೇ ರಷ್ಯಾದಲ್ಲೂ ಆಟೋಮೊಬೈಲ್ ವಾಹನಗಳನ್ನು ಇಡೀ ಉತ್ಪಾದಿಸುವ ದೃಷ್ಟಿಯಿಂದ ಅಗತ್ಯವಾದ ತಾಂತ್ರಿಕ ಹಾಗೂ ಇನ್ನಿತರ ಮಾಹಿತಿಗಳನ್ನು ತಾನು ಮತ್ತು ಇತರ ನಲ್ವತ್ತು ರಷ್ಯನ್ ಎಂಜಿನಿಯರ್‌ಗಳು ಇಲ್ಲೂ ಸಂಗ್ರಹಿಸುತ್ತಿರುವುದಾಗಿ ಆತ ಹೇಳಿದ್ದನಂತೆ. ಕುಶಲತೆ, ಸಂಪನ್ಮೂಲ ಮತ್ತು ಸಾಹಸ ಇವೇ ಒಂದು ದೇಶವನ್ನು ಕಟ್ಟುವಂಥವಾಗಿದ್ದರೆ, ನಮಗೂ ಇವೆಲ್ಲ ಇತ್ತು; ನಾವು ರಷ್ಯಾದ ಜೊತೆಯಲ್ಲೇ ಅದೇ ಸಾಮರ್ಥ್ಯ ಹಾಗೂ ಅದೇ ಸ್ಥಾಪತ್ಯವಿರುವ ಆಟೋಮೊಬೈಲ್ ಉದ್ಯಮವನ್ನು ಮತ್ತು ಅದಕ್ಕೆ ಸಂಬಂಧಿಸಿದ ಮತ್ತೆಲ್ಲವನ್ನೂ ಪಡೆದುಕೊಂಡಿರಬಹುದಿತ್ತು. ರಷ್ಯಾಕ್ಕೆ ಸಮಸಮವಾಗಿರಬಹುದಿತ್ತು. ಮತ್ತೆ ಅಲ್ಲಿ ವಾಷಿಂಗ್ಟನ್‌ನಲ್ಲಿನ ಫೆಡರಲ್ ರಿಸರ್ವ್ ಬೋರ್ಡ್‌ನ ಪ್ರಧಾನಾಧಿಕಾರಿಯನ್ನು ಭೇಟಿಮಾಡಿದ್ದರ ಬಗ್ಗೆ ಅವರು ಹೇಳುತ್ತಾರೆ. ವಿಶ್ವೇಶ್ವರಯ್ಯ ಭಾರತದ ಆರ್ಥಿಕತೆಯ ಬಗ್ಗೆ ಆತನ ಸಲಹೆ ಕೇಳಿದಾಗ ಆತ ಆ ಪ್ರಶ್ನೆಯನ್ನೇ ತಪ್ಪಿಸಿಕೊಂಡು ಬಿಟ್ಟರಂತೆ; ಆ ಬಗ್ಗೆ ಆತನಿಗೆ ಮಾತಾಡಲು ಇಚ್ಛೆಯೇ ಇಲ್ಲದ ಹಾಗೆ ಕಾಣಿಸಿತು ಎಂದು ದೂರಿಕೊಂಡಿದ್ದಾರೆ. ಅಮೆರಿಕದ ಅರ್ಥ ಕ್ಷೇತ್ರದ ಅಂಥ ಪರಮಾಧಿಕಾರಿಗೆ ಕೂಡಾ ಇಷ್ಟು ದೊಡ್ಡ ದೇಶವಾದ ಭಾರತದ ಆರ್ಥಿಕತೆಯನ್ನು ತಿಳಿದುಕೊಳ್ಳುವುದು ಸಾಧ್ಯವಿರಲಿಲ್ಲ. ಶ್ರೀ ವಿಶ್ವೇಶ್ವರಯ್ಯನವರು ಹೀಗೆ ಬರೆಯುತ್ತಾರೆ: "ನನ್ನ ಜೊತೆ ಬುದ್ಧಿವಂತನಾದ ಒಬ್ಬ ಮಾರ್ಗದರ್ಶಿ ಇದ್ದ. ಆ ಆರ್ಥಿಕ ತಜ್ಞ ಈ ನನ್ನ ಮಾರ್ಗದರ್ಶಿಯನ್ನು ಪಕ್ಕಕ್ಕೆ ಕರೆದು ಹೇಳಿದರಂತೆ, `ಈ ಮನುಷ್ಯನಿಗೆ ತನ್ನ ದೇಶಕ್ಕೆ ಹಿಂತಿರುಗಿ ಅಲ್ಲಿನ ಆಡಳಿತ ರಾಷ್ಟ್ರೀಯ ಸರಕಾರದ ಕೈಗೆ ಸಿಕ್ಕಿದ ಮೇಲೆ ಇಲ್ಲಿಗೆ ಬರುವುದಕ್ಕೆ ಹೇಳು. ಆಗ ನಾನು ಏನಾದರೂ ಸೂಚನೆಗಳನ್ನು ಕೊಟ್ಟೇನು ಎಂದು'. ಆಗ ಅಲ್ಲಿನ ಉದ್ಯಮ ಕಾರ್ಯದರ್ಶಿಯಾಗಿದ್ದ ಹೆರ್ಬರ್ಟ್ ಹೂವರ್ ಕೂಡಾ " ನಿಮ್ಮ ಜನರಲ್ಲಿ ನುಗ್ಗುವ ಸಾಹಸವೇ ಇಲ್ಲ. ಎಂದರಂತೆ.

ಇವೊತ್ತಿಗೆ ಕೂಡಾ ರಾಜಕೀಯ ಪರಿಸ್ಥಿತಿ ಬದಲಾಗದೆ ಉಳಿದುಬಿಟ್ಟಿದೆ. "ಮುಂಬೈ ಸರಕಾರಕ್ಕೆ ಆ ಪ್ರಾಂತ್ಯದಲ್ಲಿ ಉನ್ನತ ತಾಂತ್ರಿಕ ಶಿಕ್ಷಣವನ್ನು ರೂಪಿಸಬೇಕೆಂಬ ಇಚ್ಛೆಯೇ ಕಾಣುವುದಿಲ್ಲ" ಎಂದು ವಿಶ್ವೇಶ್ವರಯ್ಯ ಆಗಿನ ಗೌರ್ನರ್ ಲಾರ್ಡ್ ಲಾಯ್ಡ್‌ರನ್ನು ಆಕ್ಷೇಪಿಸುತ್ತಾರೆ. ಆ ಮಾತು ಇವತ್ತಿಗೂ ಅನ್ವಯಿಸುತ್ತದೆ. ಪ್ರಾಯಶಃ ನಿರುದ್ಯೋಗದ ಹೆದರಿಕೆಯಿಂದ ಇರಬಹುದು, ಅಂತೂ ರಾಷ್ಟ್ರೀಯ ಸರಕಾರ ಕೂಡ ಉನ್ನತ ತಾಂತ್ರಿಕ ಶಿಕ್ಷಣಕ್ಕೆ ತಡೆ ಹಾಕುತ್ತಿದೆ ಎಂಬ ಮಾತನ್ನು ಅವರು ಮುಖತಃ ಹೇಳುತ್ತಾರೆ, ಕಾಗದದ ಮೇಲೆ ಬರೆದಿಲ್ಲ ಅಷ್ಟೆ. ಅಲ್ಲದೆ, ನಮ್ಮದೇ ರಾಷ್ಟ್ರೀಯ ಸರಕಾರವು ಜನರು ತಮ್ಮ ತಮ್ಮ ವ್ಯಕ್ತಿತ್ವದ ಪರಮೋನ್ನತಿಗೆ ಏರುವುದಕ್ಕೆ ಅವಕಾಶ ಕೊಡುತ್ತಿಲ್ಲ; ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿ ಜನಪ್ರಸಿದ್ಧಿ ಪಡೆದು ತಮ್ಮ ಪ್ರಸಿದ್ಧಿಗೇ ಮುಳುವಾಗಿ ಬಿಟ್ಟಾರು ಎಂದು ನಮ್ಮ ಆಡಳಿತಗಾರರಿಗೆ ಹೆದರಿಕೆಯೋ ಎನ್ನಿಸುತ್ತದೆ. ಭಧ್ರಾವತಿಯ ಕಬ್ಬಿಣ ಕಾರ್ಖಾನೆ ವಿಶ್ವೇಶ್ವರಯ್ಯನವರ ಎಂಜಿನಿಯರಿಂಗ್ ಕೌಶಲ್ಯದ, ಅದಕ್ಕಿಂತ ಹೆಚ್ಚಾಗಿ ಸಾಹಸಬುದ್ಧಿಯ ಫಲ. ಮೈಸೂರಿನ ಗಣ್ಯ ನಾಗರಿಕರೊಬ್ಬರು 1925 ಮೇ 22ರಂದು ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನಲ್ಲಿ ಈ ಸಾಹಸದ ಬಗ್ಗೆ ಮಾತನಾಡುತ್ತ, "ಈ ಅದೃಷ್ಟಹೀನ ಸಾಹಸಕ್ಕೆ ಈಗ ಮುಚ್ಚಬೇಕಾದ ಕಾಲ ಬಂದಿದೆ" ಎಂದು ವಿಷಾದಿಸಿದ್ದರು. ಇಂಡಿಯಾಕ್ಕೆ ಆ ಕಾಲದಲ್ಲಿ ಅಂಥ ಸಾಹಸ ಪ್ರವೃತ್ತಿಯ ಅಗತ್ಯ ಎಷ್ಟಿತ್ತು ಎಂಬುದನ್ನು ಮೇಲಿನ ಗಣ್ಯರ ಮಾತು ಸ್ಪಷ್ಟಗೊಳಿಸುತ್ತದೆ. 1927 ಫೆಬ್ರವರಿ 12ರಂದು ಮೈಸೂರು ಮಹಾರಾಜರು ವಿಶ್ವೇಶ್ವರಯ್ಯನವರಿಗೆ ಹೀಗೆ ಬರೆದಿದ್ದರು: "ನೀವು ಅಮೆರಿಕನ್ ಸಿಬ್ಬಂದಿಯೆಲ್ಲವನ್ನೂ ಕೈಬಿಟ್ಟು ಕಾರ್ಖಾನೆಯನ್ನು ಪೂರಾ ನಮ್ಮ ಜನಗಳಿಂದಲೇ ನಡೆಸಿಕೊಂಡು ಹೋಗುತ್ತಿದ್ದೀರಿ. ಈ ಸಂಸ್ಥಾನವೇ ಹೆಮ್ಮೆಪಟ್ಟುಕೊಳ್ಳಬೇಕಾದ ಸಾಧನೆ ಇದು." ಯಾವುದೇ ಒಂದು ಅವಕಾಶ ಪ್ರಾಪ್ತವಾಯಿತೆಂದರೆ ಅದೇ ತನ್ನ ಪೂರೈಕೆಗೆ ಬೇಕಾದ ಜನಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಇಂಡಿಯಾದ ಎಂಜಿನಿಯರ್‌ಗಳು ಮೂವತ್ತು ವರ್ಷಗಳ ಹಿಂದೆ ಎಂಥದೇ ಸಾಹಸಕ್ಕೂ ಸಾಕಷ್ಟು ಸಮರ್ಥರಿದ್ದರು, ಮತ್ತು ಈಗ ಕೂಡಾ ಅವರು ಸಮರ್ಥರೇ ಇದ್ದಾರೆ. ಅವರಲ್ಲಿ ವಿಶ್ವಾಸವಿಡಬೇಕಾದ್ದು ಮುಖ್ಯ. ಒಮ್ಮೊಮ್ಮೆ ತೀರಾ ವಿಶೇಷ ಸಂದರ್ಭಗಳಲ್ಲಿ ಸಮಾಲೋಚನೆಗಾಗಿ ಹೊರದೇಶದ ಕೆಲವರು ಬೇಕಾದೀತು. ಇವೊತ್ತಿನ ಸರಕಾರ ಅಸಾಮಾನ್ಯ ಸಾಹಸ ಎಂದು ತಾನು ನಂಬುವಂಥ ಯೋಜನೆಗಳಲ್ಲಿ ಇವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿದೇಶಿ ಎಂಜಿನಿಯರುಗಳನ್ನು ಅವಲಂಬಿಸಿದರೆ, ಯಾವ ಅವಕಾಶ ನಮ್ಮ ಎಂಜಿನಿಯರುಗಳಿಗೆ ಸಿಕ್ಕು ಅವರು ಅದಕ್ಕೆ ತಕ್ಕುದಾಗಿ ಬೆಳೆಯಬಹುದಿತ್ತೋ ಅದು ತಪ್ಪಿ ನಮ್ಮ ಜನ ತಮ್ಮ ಸಹಜ ಔನ್ನತ್ಯಕ್ಕೆ ಏರಿಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ. ಅಷ್ಟೇ ಅಲ್ಲದೆ, ಎಂಜಿನಿಯರುಗಳೂ ಮನುಷ್ಯರೇ ತಾನೇ. ರಾಜಕಾರಣಿಗಳು ಯಾವಾಗಲೂ ತಮ್ಮ ಗೂಡಿಗೇ ಗರಿ ಸಿಕ್ಕಿಸಿಕೊಳ್ಳುತ್ತ ಕೂತರೆ ಇವರೂ ಅವರನ್ನೆ ಅನುಕರಿಸಲು ತೊಡಗುತ್ತಾರೆ.

ಸುಮಾರು ನೂರುವರ್ಷಗಳ ಹಿಂದೆ ಇಂಡಿಯಾದ ಉಕ್ಕು ಗ್ಲಾಸ್ಗೋದಲ್ಲಿ ಮಾರಾಟವಾಗುತ್ತಿದ್ದುದನ್ನು ವಿಶ್ವೇಶ್ವರಯ್ಯನವರು ನಮಗೆ ತಿಳಿಸಿದರು. ಇದನ್ನು ಅವರು ತಮ್ಮ ಪುಸ್ತಕದಲ್ಲಿ ಹೇಳಿಲ್ಲ. ಆದರೆ ಈ ಸಂಗತಿ ತುಂಬಾ ಕುತೂಹಲದ್ದಾಗಿದೆ. ಅತ್ಯುನ್ನತ ದರ್ಜೆಯ ಅಥವಾ ಯಾವುದೇ ದರ್ಜೆಯ ಉಕ್ಕನ್ನಾಗಲೀ ಕಬ್ಬಿಣವನ್ನಾಗಲೀ ಗೃಹಕೈಗಾರಿಕೆಯ ಮಟ್ಟದ ಸಾಧನ ವ್ಯವಸ್ಥೆಗಳಲ್ಲೇ ತಯಾರಿಸಲು ಸಾಧ್ಯ. ಡೆಲ್ಲಿಯ ರಾಯ್ ಪೀಠೋರಾದಲ್ಲಿರುವ ಮೌರ್ಯರ ಕಾಲದ ಕಬ್ಬಿಣದ ಸ್ತಂಭಗಳೇ ಅದನ್ನು ಸ್ಪಷ್ಟಗೊಳಿಸುತ್ತವೆ. ಗೃಹಕೈಗಾರಿಕೆ-ಬೃಹತ್ ಉದ್ಯಮಗಳ ನಡುವಣ ಸಮಸ್ಯೆಯನ್ನು ಚರ್ಚೆಗೆತ್ತಿಕೊಳ್ಳುವುದು ನನ್ನ ಪ್ರಸ್ತುತ ಉದ್ದೇಶವಲ್ಲ. ಆದರೆ ವಾಸ್ತವ ಸಂಗತಿ ಹೀಗಿದೆ - ಭಾರತಕ್ಕೆ ವಿದೇಶೀ ಉಕ್ಕನ್ನು ಆಮದು ಮಾಡಿಕೊಳ್ಳಲಾಗುತ್ತಿದೆ, ಸ್ಥಳೀಯವಾದ ಬೆಲೆಗಿಂತ ಹೊರಗಿನ ಬೆಲೆ ಟನ್ನಿಗೆ ಸುಮಾರು ನೂರು ರೂಪಾಯಿಗಳಷ್ಟು ಹೆಚ್ಚಿದ್ದರೂ ಈ ದುಬಾರಿ ಬೆಲೆ ತೆರುತ್ತಿದ್ದೇವೆ. ಸ್ಥಳೀಯ ಕ್ರಮಗಳಲ್ಲಿ ಅದೇ ಮಾಲನ್ನು ಅದಕ್ಕಿಂತ ಕಡಿಮೆ ಬೆಲೆಗೆ ಅಥವಾ ಕನಿಷ್ಠ ಅದೇ ಬೆಲೆಗೆ ಉತ್ಪಾದಿಸುವುದು ಸಾಧ್ಯವಿರುವಾಗಲೂ ದುಬಾರಿಯಲ್ಲಿ ಆಮದು ಮಾಡುವುದನ್ನೇ ಮುಂದುವರಿಸುತ್ತಿರುವವರನ್ನು ಏನೆನ್ನಬೇಕು?

ಇದೇ ಈಗ ಈಜಿಪ್ಟ್ ಕೈಗೊಂಡ ಸೂಯೆಜ್ ಕಾಲುವೆಯ ರಾಷ್ಟ್ರೀಕರಣ ವರ್ಣೀಯ ಜನರೆಲ್ಲರ ಕಾರ್ಪಣ್ಯರಾಶಿಯನ್ನೂ ಅವರ ಐಕ್ಯಮತ್ಯದ ಅಗತ್ಯವನ್ನೂ ಅನಿವಾರ್ಯವೆನ್ನಿಸುವಂತೆ ಎದುರೆತ್ತಿ ತೋರಿಸಿಕೊಟ್ಟಿದೆ. ಸುಮಾರು ನಲವತ್ತು ವರ್ಷಗಳಿಗೂ ಹಿಂದೆ ಕೂಡ ಇಂಥ ಕ್ರಿಯಾತ್ಮಕ ಐಕ್ಯಮತ್ಯ ತನ್ನ ಹೊಳಹು ಕಾಣಿಸಿತ್ತು ಎಂಬುದು ಕುತೂಹಲಕರವಾದ ಅಂಶ. ಶ್ರೀವಿಶ್ವೇಶ್ವರಯ್ಯನವರು ಬರೆದಿದ್ದಾರೆ: "ನಾನು ಈಜಿಪ್ಟ್‌‌ನಲ್ಲಿನ ಆಸ್ವಾನ್‌ನಂಥ ಬೃಹತ್ ನೀರಾವರಿ ಆಣೆಕಟ್ಟುಗಳನ್ನು ನೋಡಿಕೊಂಡು ಬಂದಿದ್ದೇನಾದ್ದರಿಂದ ಮೈಸೂರಿನ ಕಾವೇರಿ ಕಣಿವೆಯ ಅಗತ್ಯಗಳಿಗೆ ತಕ್ಕ ನಕ್ಷೆ ಸಿದ್ಧಮಾಡಲು ಹೆಚ್ಚು ಕಾಲ ಬೇಕಾಗಲಿಲ್ಲ."
ಹಿಂದುಳಿದ ಜಾತಿಗಳನ್ನು ಓಲೈಸುವ ಬಗ್ಗೆ ಮೈಸೂರು ಮಹಾರಾಜರಿಗಿದ್ದ ತವಕದ ವಿಷಯದಲ್ಲಿ ತಾವು ಅವರ ಜೊತೆ ವಾದ ವಿವಾದ ಮಾಡಿದ್ದನ್ನು ಕೂಡಾ ಶ್ರೀ ವಿಶ್ವೇಶ್ವರಯ್ಯನವರು ತುಂಬ ಸೂಕ್ಷ್ಮನಯವಂತಿಕೆಯಿಂದ ನಿರೂಪಿಸಿದ್ದಾರೆ. ಮುಂದುವರಿದು ಜಾತಿಯನ್ನು ಎತ್ತಿಕಟ್ಟುವುದು ಆಮೇಲೆ ಆ ಜಾತಿ ತಮ್ಮ ಹತೋಟಿ ಮೀರಿ ಹೋಗಿಬಿಟ್ಟಂಥ ಸಂದರ್ಭದಲ್ಲಿ ಅದಕ್ಕಿಂತ ಕೊಂಚ ಕಡಿಮೆ ಜಾತಿಯ ಜನರನ್ನು ಎತ್ತಿ ಹುರಿಗೊಳಿಸುವುದು - ಇದೇ ಉಪಾಯದಿಂದ ಬ್ರಿಟಿಷರು ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಮುಂದುವರಿಸಿಕೊಂಡು ಹೋಗಲು ಯತ್ನಿಸುತ್ತಿದ್ದರು ಎಂಬುದನ್ನು ನಾವು ತಿಳಿದಿರಬೇಕು. ಹೀಗೆ ಮೈಸೂರಲ್ಲೂ ಬ್ರಾಹ್ಮಣರ ಮೇಲೆ ಬ್ರಾಹ್ಮಣೇತರರನ್ನು ಎತ್ತಿಕಟ್ಟುವುದಕ್ಕೆ ಹವಣಿಸಿ ಅವರು ಒಂದು ಸಮಿತಿಯನ್ನು ನೇಮಕ ಮಾಡಿದರು. ವಿವಿಧ ಜಾತಿಗಳ ದೃಷ್ಟಿಯಿಂದ ಶಿಕ್ಷಣದ ಸಾಧ್ಯತೆಗಳನ್ನು ಪರಿಶೀಲಿಸುವುದು ಈ ಸಮಿತಿಯ ಉದ್ದೇಶವಾಗಿತ್ತು. ಇದನ್ನು ವಿಶ್ವೇಶ್ವರಯ್ಯ ವಿರೋಧಿಸಿದ್ದರು. ಆಗಲೆ ವಿಶ್ವೇಶ್ವರಯ್ಯನವರು ತಮ್ಮ ದಿವಾನ್ ಪದವಿಗೆ 1918ರ ಎಪ್ರಿಲ್‌ನಲ್ಲಿ ರಾಜೀನಾಮೆ ಕೊಡುವುದಾಗಿ ತಿಳಿಸಿ ಅದಕ್ಕೆ ಮಹಾರಾಜರಿಂದ ಗುಪ್ತವಾಗಿ ಒಪ್ಪಿಗೆ ಪಡೆದುಕೊಂಡಿದ್ದರು. ಆಮೇಲೆ 1918ರ ಡಿಸೆಂಬರ್ 9ರಂದು ಅವರು ಬೆಂಗಳೂರಿನ ಕೇಂದ್ರ ಹಾಗೂ ರೆವಿನ್ಯೂ ಸೆಕ್ರೆಟರಿಯೆಟ್ ಗೆ ಹೀಗೆ ತಿಳಿಸಿದ್ದರು: "ಖಾಸಗಿ ವಲಯಗಳಲ್ಲಿ ಆಗಾಗ ನಾನು ಆ ಜಾತಿಯ ಪರ, ಈ ಜಾತಿಯ ವಿರೋಧಿ ಮುಂತಾಗಿ ಹೇಳುತ್ತಿರುವುದುಂಟು; ಯಾವಾಗಲೂ ನಾನು ತಕ್ಕಡಿಯನ್ನು ಪೇರಿಲ್ಲದೆ ಹಿಡಿದಿದ್ದೇನೆಂಬುದನ್ನು ಕಾಲವೆ ತೋರಿಸಿಕೊಡುತ್ತದೆ." ಇವರು ಮುಂಚಿನ ಕಾಲದ ಹಾಗೂ ಐರೋಪ್ಯ ಶಿಕ್ಷಣದ ಚಿಂತನ ಕ್ರಮವನ್ನು ರೂಢಿಸಿಕೊಂಡವರು; ತಕ್ಕಡಿಯನ್ನು ನೇರ ಹಿಡಿದಿರಬೇಕೆಂಬ ನಿಷ್ಠೆಯಲ್ಲಿ, ಖಾಸಗಿ ಬದುಕಿನಲ್ಲೂ ನಿಷ್ಠುರ ಪ್ರಾಮಾಣಿಕತೆಯನ್ನು ಪಾಲಿಸಿಕೊಂಡವರು. ಆದರೆ ಹೀಗೆ ತಕ್ಕಡಿಯನ್ನು ಪೇರಿಲ್ಲದೆ ನೇರ ಹಿಡಿಯುವುದೇ ಕೆಲವು ಸಂದರ್ಭಗಳಲ್ಲಿ ಅನ್ಯಾಯವಾಗುತ್ತದೆ ಎಂಬುದನ್ನು ಅವರು ಅರಿತಿರಲಿಲ್ಲ, ಅಥವಾ ಹಾಗೆ ತಿಳಿಯುವುದೇ ಅವರಿಗೆ ಸಾಧ್ಯವಿರಲಿಲ್ಲ.

ಉತ್ತರಪ್ರದೇಶದಲ್ಲಿ 1951ರ ಜನಗಣತಿಯ ಪ್ರಕಾರ ಕಾಣುವ ಆರು ಕೋಟಿ ಮುವ್ವತ್ತೆರಡು ಲಕ್ಷ ಜನಸಂಖ್ಯೆಯಲ್ಲಿ ಉತ್ತಮ ಜಾತಿಯವರು ಒಂದು ಕೋಟಿ ಇಪ್ಪತ್ತು ಲಕ್ಷ ಮತ್ತು ವಿಧಾನಸಭೆಯಲ್ಲಿ ಆ ಜಾತಿಯ ಸದಸ್ಯರ ಸಂಖ್ಯೆ 260; ಮುಸ್ಲಿಮರು ಅರವತ್ತು ಲಕ್ಷ ಮತ್ತು ಅವರ ಸದಸ್ಯರ ಸಂಖ್ಯೆ 43; ಹರಿಜನರು ಒಂದು ಕೋಟಿ ಇಪ್ಪತ್ತಾರು ಲಕ್ಷ, ಸದಸ್ಯರು 84. ಹಿಂದುಳಿದ ಕೋಮಿನವರು ಮೂರು ಕೋಟಿ ಇಪ್ಪತ್ತಾರು ಲಕ್ಷ; ಅವರ ಶಾಸಕರು 43; ಇಡೀ ದೇಶದಲ್ಲೂ ಇಂಥದೇ ಒಂದು ಸ್ಥಿತಿ ಕಾಣಸಿಗುತ್ತದೆ. ಆಯ್ಕೆಯಲ್ಲಾಗಲೀ ನೇಮಕಗಳಲ್ಲಾಗಲೀ ಯೋಗ್ಯತೆ ಮತ್ತು ನ್ಯಾಯತಕ್ಕಡಿಯೇ ಏಕೈಕ ನಿರ್ಣಾಯಕ ಅಂಶವಾಗುವುದಾದರೆ ಸುಮಾರು ಐದುಸಾವಿರ ವರ್ಷಗಳ ಮನಸ್ಸಂಸ್ಕಾರದ ಪೂರ್ವಪರಂಪರೆಯಿಂದ ವಿಶೇಷ ಸಿದ್ಧಿಪಡೆದುಕೊಂಡಿರುವ ಮೇಲು ಜಾತಿಯವರನ್ನು ಬೇರೆ ಯಾವ ಜಾತಿಯವರೂ ಗೆಲ್ಲಲು ಸಾಧ್ಯವಾಗುವುದಿಲ್ಲ. ಹಿಂದುಳಿದ ಜಾತಿಗಳಿಗೆ ಮತ್ತು ಆ ಮೂಲಕ ಇಂಡಿಯಾ ದೇಶಕ್ಕೇ ನ್ಯಾಯ ದೊರಕಿಸಿಕೊಡುವ ಸಲುವಾಗಿ ಉತ್ತಮ ಜಾತಿಗಳಿಗೆ ತಾತ್ಕಾಲಿಕ ಅನ್ಯಾಯ ಮಾಡಲೇಬೇಕಾಗುತ್ತದೆ.

`ರಾಜಕೀಯ ಹಾಗೂ ಮತ್ತಿತರ ಸಮ್ಮೇಳನಗಳು' ಎಂಬ ಅಧ್ಯಾಯದಲ್ಲಿ ವಿಶ್ವೇಶ್ವರಯ್ಯನವರು ತಮಗೆ ಮಹಾತ್ಮ ಗಾಂಧಿ ಬಗ್ಗೆಯೂ ಸ್ವಾತಂತ್ರ್ಯ ಚಳವಳಿಯ ಬಗ್ಗೆಯೂ ಇದ್ದ ಸಹಾನುಭೂತಿಯನ್ನು ಅಡಗಿಸಿಡಲಾರದೆ ಹೋಗಿದ್ದಾರೆ. "ನಮ್ಮ ದೇಶದ ಜನ ಸಾಕಷ್ಟು ನೋವು ಅನುಭವಿಸಿದವರಲ್ಲ. ಅದಕ್ಕೇ ನನಗೆ ಇವರ ಶಕ್ತಿಯ ಬಗ್ಗೆ ಕಡಿಮೆ ವಿಶ್ವಾಸ" ಎಂಬ ಗಾಂಧೀಜಿಯ ಮಾತನ್ನು ಅವರು ಉದ್ಧರಿಸಿದ್ದಾರೆ. ವಿಶ್ವೇಶ್ವರಯ್ಯ ನೋವು ಅನುಭವಿಸಿದ್ದಾರೆ, ವಾಸ್ತವವಾಗಿ ಮಹತ್ತರವಾದ ನೋವುಗಳನ್ನೇ ಅನುಭವಿಸಿದ್ದಾರೆ. ಈ ಬಗ್ಗೆ ತಮ್ಮ ನೆನಪುಗಳಲ್ಲಿ ಅವರು ಪ್ರಸ್ತಾಪಿಸುವುದಿಲ್ಲ. ಹಾಗಿದ್ದರೂ, ತಮ್ಮ ಪತ್ನಿ ಕೈಬಿಟ್ಟಾಗ ಅವರು ತೋರಿದ ಘನವಂತಿಕೆ ಇಂಡಿಯಾದ ಪ್ರತಿಯೊಬ್ಬರೂ ತಿಳಿದಿರಬೇಕಾದ್ದು. ವಿಶಾಖಪಟ್ಟಣದ ಬಂದರಿಗೆ ಸಂಬಂಧಿಸಿದ ಒಂದು ಕತೆಯನ್ನು ಕೂಡ ಅವರು ಇಲ್ಲಿ ಹೇಳಿಲ್ಲ. ಆದರೆ ಐತಿಹ್ಯದಿಂದ ತಿಳಿಯುವ ಹಾಗೆ, ಈ ಬಂದರನ್ನು ಹತೋಟಿಗೆ ತಂದುಕೊಳ್ಳುವುದಕ್ಕೆ ಮೊದಲಲ್ಲಿ ಬೇಕಂತಲೇ ಕೆಲವು ಹಡಗುಗಳನ್ನು ಅದರಲ್ಲಿ ಮುಳುಗಿಸಿದರು; ಹಾಗೆ ಮಡಲು ಯೋಚಿಸಿದ ಪ್ರಪಂಚದ ಮೊತ್ತ ಮೊದಲ ಎಂಜಿನಿಯರ್ ಈತ. ವೈಯಕ್ತಿಕ ನೋವುಗಳನ್ನು ಹೇಳುವುದಾದರೆ ಪ್ರಾಯಶಃ ಅನೇಕ ಪ್ರಸಿದ್ಧ ಹುತಾತ್ಮರಿಗಿಂತ ಹೆಚ್ಚಾಗಿ ನೋವು ತಿಂದವರು ಇವರು. ಆದರೆ ಅವರಿಗೆ ರಾಜಕೀಯವಾದ ಅಥವಾ ಜನಸಾಮಾನ್ಯರಿಗಾಗಿ ನಿರ್ವೈಯಕ್ತಿಕವಾದ ನೋವು ತಿಂದ ಅನುಭವ ಅಷ್ಟಾಗಿ ಇರಲಾರದು. ಒಮ್ಮೆ ಅವರಿಗೆ ಅಂಥ ಸ್ವಂತಿಕೆಯನ್ನು ಮೀರಿದ ಶೋಕ, ಆರ್ತತೆಯ ಅನುಭವ ಇದ್ದಿದ್ದೇ ಆಗಿದ್ದರೆ ದೇಶದ ಈಚಿನ ಇತಿಹಾಸದಲ್ಲಿ ಅವರು ಮಹಾತ್ಮ ಗಾಂಧಿಯ ಪಕ್ಕದಲ್ಲೇ ಹತ್ತಿರ ಕೂತಿರುತ್ತಿದ್ದರು. ರಾಜಕೀಯ ಅಥವಾ ಸಾಧಾರಣೀಕೃತ ಸಂಕಷ್ಟಗಳನ್ನು ಅನುಭವಿಸಬಲ್ಲ ಸಾಮರ್ಥ್ಯ ದಕ್ಷಿಣ ಇಂಡಿಯಾದ ನಾಯಕಮಂದಿಯಲ್ಲಿ ಕೊಂಚ ತಣ್ಣಗಾಗಿಬಿಟ್ಟಿದೆ ಎಂಬುದೂ ನಿಜವಿರಬಹುದು. ಶ್ರೀ ಸಿ. ರಾಜಗೋಪಾಲಾಚಾರಿಯವರು ಕಾಂಗ್ರೆಸ್ ಪಕ್ಷದಲ್ಲೇ ನಿಸ್ಸಂಶಯವಾಗಿ ಅತ್ಯಂತ ಸಮರ್ಥರೂ ಅತ್ಯಂತ ಬುದ್ಧಿಶಾಲಿಯೂ ಆಗಿರುವವರು ಮತ್ತು ಅದೇ ಏಕೈಕ ಅರ್ಹತೆಯಾಗಿದ್ದರೆ ಸ್ವತಂತ್ರ ಭಾರತದ ಪ್ರಧಾನಿಯಾಗಲು ಅವರಿಗಿಂತ ಉತ್ತಮರು ಬೇರೆ ಇರಲಿಲ್ಲ. ಆದರೆ ಅವರು ಎಂದೂ ಆ ದರ್ಜೆಗೆ ಏರಲು ಶಕ್ತರಾಗಿರುವುದಿಲ್ಲವೆಂಬುದನ್ನು ಸೂಕ್ಷ್ಮ ಮನಸ್ಸಿನ ಜನ 1923-24ರಲ್ಲಾಗಲೇ ತಿಳಿದುಕೊಂಡು ಬಿಡಬಹುದಿತ್ತು. ಆ ಕಾಲದಲ್ಲಿ ಇಡೀ ದೇಶ ಮತ್ತು ಕಾಂಗ್ರೆಸ್ ಪಕ್ಷ ಅವರ ಕಾಲಿಗೆ ಎರಗಿತ್ತು; ಆಗ ಅವರಿಗೂ ಗುರುವಾದ ಗಾಂಧೀಜಿ ಸೆರೆಯಲ್ಲಿದ್ದರು, ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ದೊಡ್ಡ ಜನರೆಲ್ಲರ ಏಕೀಕೃತ ಶಕ್ತಿಯನ್ನೂ ಕೂಡಾ ಇವರು ಹೆಚ್ಚು ಕಡಿಮೆ ಏಕಹಸ್ತರಾಗಿಯೇ ಸೋಲಿಸಿ ಚೆಲ್ಲಲು ಶಕ್ತರಾಗಿದ್ದರು. ಆದರೆ ಎದುರ್ಗೊಂಡು ಬಂದ ಅಂಥ ವಿಜಯಮಾಲಿಕೆಯನ್ನೇ ಅವರು ಸೋಲಿನ ಸರವಾಗಿ ಮಾಡಿಕೊಂಡರು. ಆ ಕಾಲದಲ್ಲಿ ಕಾಯಿದೆ ನಿರೋಧದ ಚಳವಳಿಯನ್ನು ನೇರ ಆರಂಭಿಸುವುದು ಬಿಟ್ಟು ಅವರು ಚಳುವಳಿಯ ಸಾಧ್ಯತೆಗಳನ್ನು ತನಿಖೆ ಮಾಡುವುದಕ್ಕೆ ಒಂದು ಸಮಿತಿಯನ್ನು ನೇಮಿಸಿ ಕೂತರು. ದಕ್ಷಿಣ ಇಂಡಿಯಾದ ಎಲ್ಲ ಸಮರ್ಥ ತರುಣರೂ, ಅದರಲ್ಲೂ ಮುಖ್ಯವಾಗಿ ಬಡವರ್ಗಗಳಿಗೆ ಸೇರಿದಂಥವರು, ಇತ್ತೀಚಿನ ಇತಿಹಾಸದ ಈ ಘಟನೆಗಳನ್ನು ಕುರಿತು ತೀವೃ ಆಲೋಚಿಸಬೇಕು ಮತ್ತು ಬೌದ್ಧಿಕತೆಯ ವೇದಿಕೆಯ ಮೇಲೆ ಕ್ರಿಯಾಶೀಲತೆ ಬಲಿಯಾಗಿ ಹೋಗದಂಥ ಸಂಭಾವಿತ ಜೀವನ ಕ್ರಮವನ್ನು ರೂಪಿಸಿಕೊಳ್ಳಬೇಕು.


(ಚಿತ್ರಗಳು ವಿಕ್ರಾಂತ ಕರ್ನಾಟಕ, ಕನ್ನಡ ವಾರಪತ್ರಿಕೆಯ ಸೌಜನ್ಯ.) ಮುಂದೆ ಓದಿ....