Monday, October 26, 2009

ಮುಂದಿನ ಶತಮಾನಕ್ಕೆ ಮಾಸ್ತಿ ಕತೆಗಳು

ಕನ್ನಡದಲ್ಲಿ ಸಣ್ಣಕಥೆಯ ಪ್ರಕಾರವು ಹುಟ್ಟಿ, ವಿಕಾಸಗೊಂಡು ಪ್ರವರ್ಧಮಾನಕ್ಕೆ ಬಂದುದು ಇನ್ನೇನು ಮುಗಿಯುತ್ತಿರುವ ಇಪ್ಪತ್ತನೆಯ ಶತಮಾನದಲ್ಲೆ. ಒಂದು ಶತಮಾನದ ಅವಧಿಯಲ್ಲೆ ಈ ಪ್ರಕಾರದ ಸಾಧನೆ ಅದೆಷ್ಟು ಅಸಾಧಾರಣವಾಗಿದೆಯೆಂದರೆ ಅತಿ ಸಂಕೀರ್ಣವಾದ ಆಧುನಿಕ ಬದುಕಿನ ಯಾವುದೇ ಸ್ತರವನ್ನಾದರೂ ಸರಿಯೇ, ಆಯಾಮವನ್ನಾದರೂ ಸರಿಯೇ ಸಣ್ಣಕತೆಯಲ್ಲಿ ಅಭಿವ್ಯಕ್ತಿಸಬಹುದು ಎಂಬ ಆತ್ಮವಿಶ್ವಾಸ ಇದೀಗ ಹೊಸದಾಗಿ ಬರೆಯುತ್ತಿರುವ ಕತೆಗಾರರ ಬರವಣಿಗೆಯಲ್ಲು ಎದ್ದು ಕಾಣುತ್ತದೆ. ಇಂತಹ ಆತ್ಮವಿಶ್ವಾಸ ಕತೆಗಾರರೆಲ್ಲರಿಗೂ ದಕ್ಕಲು ಕಾರಣರಾದವರಲ್ಲಿ ಹೆಚ್ಚು ಕಡಿಮೆ ಈ ಶತಮಾನದುದ್ದಕ್ಕೂ (ಸುಮಾರು ೧೯೧೦ರಿಂದ ೧೯೮೫ರ ತನಕ) ಸಣ್ಣಕಥೆಗಳನ್ನು ಬರೆದುಕೊಂಡು ಬಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಮುಖರು. ಈ ಶತಮಾನದ ಸಣ್ಣಕಥೆಗಳನ್ನು ಚರ್ಚಿಸುವಾಗ ಮತ್ತೆ ಮತ್ತೆ ನಾವು ಮಾಸ್ತಿಯನ್ನು ಎದುರಾಗಲೇ ಬೇಕೆಂಬುದು ಮಾತ್ರ ಅವರ ಸಾಧನೆಯ ಹೆಗ್ಗಳಿಕೆಯಲ್ಲ. ಕತೆಗಾರಿಕೆಯ ಉದ್ದೇಶವೇನು, ಕತೆಗೂ ಕತೆಗಾರನಿಗೂ, ಕತೆಗೂ ಜೀವನಕ್ಕೂ ಇರುವ ಇರಬೇಕಾದ ಸಂಬಂಧ ಯಾವ ಸ್ವರೂಪದ್ದು ಎಂಬೆಲ್ಲ ಪ್ರಶ್ನೆಗಳ ಅರ್ಥಪೂರ್ಣ ಚರ್ಚೆಗೆ ಮಾಸ್ತಿ ಕತೆಗಳು ನೆರವಿಗೆ ಬರುವ ಹಾಗೆ ಮತ್ತ್ಯಾವ ಕತೆಗಾರರ ಬರವಣಿಗೆಯೂ ಬರುವುದಿಲ್ಲ. ಪ್ರಸಿದ್ಧ ನವ್ಯ ಕತೆಗಾರರಾದ ಚಿತ್ತಾಲರು ಮಾಸ್ತಿಯವರ ಮೂವತ್ತು ಕತೆಗಳನ್ನು ಆಯ್ದು, ಅಧ್ಯಯನಪೂರ್ಣವಾದ ಪ್ರಸ್ತಾವನೆಯೊಂದನ್ನು ಬರೆದು ಪ್ರಕಟಿಸಿರುವ ‘ಮಾಸ್ತಿ: ಮೂವತ್ತು ಕತೆಗಳು’ ಎಂಬ ಸಂಗ್ರಹ ಮಾಸ್ತಿಯವರ ಕತೆಗಾರಿಕೆಯನ್ನು ಕುರಿತು ಚರ್ಚಿಸುವುದಕ್ಕೆ ಮತ್ತೊಂದು ಅವಕಾಶವನ್ನು ಕಲ್ಪಿಸಿದಂತಾಗಿದೆ. ಇದೊಂದು ಸಾಂದರ್ಭಿಕ ಕಾರಣ ಮಾತ್ರ. ಇಂದು ನಾವು ಒಂದು ಸಮಾಜವಾಗಿ, ಸಂಸ್ಕೃತಿಯಾಗಿ ಆತ್ಮವಿಶ್ವಾಸ ಕಳೆದುಕೊಂಡು ಅನಾಥರಾಗುತ್ತಿದ್ದೇವೆ. ನಮ್ಮ ಚರಿತ್ರೆಯನ್ನು, ಬದುಕನ್ನು ನಾವೇ ರೂಪಿಸಿಕೊಳ್ಳುವ ಹಕ್ಕು ಮತ್ತು ಅವಕಾಶಗಳೆರಡನ್ನೂ ಉದಾರೀಕರಣ ಪ್ರತಿನಿಧಿಸುತ್ತಿರುವ ಹೊಸ ಆರ್ಥಿಕ ಶಕ್ತಿಗಳು ಹೊಸಕಿ ಹಾಕುತ್ತಿವೆ. ನಮ್ಮ ಸಂಸ್ಕೃತಿಗೆ, ಜನಜೀವನಕ್ಕೆ ಇದೊಂದು ಮರಣಾಂತಿಕ ಸಂದರ್ಭವೇ ಸರಿ. ನಮ್ಮ ಜನಪದರ ಜೀವನ ಸಂಸ್ಕೃತಿಯ ಜಾಣ್ಮೆಯನ್ನು, ಧಾರಣಾ ಶಕ್ತಿಯನ್ನು ಅರ್ಥಪೂರ್ಣವಾಗಿ ಹೀರಿಕೊಂಡು ಬರೆದ ಮಾಸ್ತಿ ಕತೆಗಳು ಇಂತಹ ಸಂದರ್ಭದಲ್ಲಿ ಹೇಗೆ ನೆರವಿಗೆ ಬರಬಲ್ಲವು ಎಂಬುದು ಮುಖ್ಯ ಪ್ರಶ್ನೆ. ಮಾಸ್ತಿಯಂತಹ ದೊಡ್ಡ ಲೇಖಕರ ಬರವಣಿಗೆ ಎದುರಿಸಲೇಬೇಕಾದ ಪ್ರಶ್ನೆ.

ಮಾಸ್ತಿಯವರು ಕತೆಗಳನ್ನು ಬರೆಯಲು ಪ್ರಾರಂಭಿಸಿದಾಗಲೂ ನಮಗೆ ನಮ್ಮ ಸಂಸ್ಕೃತಿಯ ಬಗ್ಗೆ, ಅದರ ಧಾರಣಾಶಕ್ತಿಯ ಬಗ್ಗೆ ಅಂತಹ ಆತ್ಮವಿಶ್ವಾಸವೇನಿರಲಿಲ್ಲ. ನಮ್ಮನ್ನು ನಾವು ಹೇಗೆ ನೋಡಿಕೊಳ್ಳಬೇಕು ನಮ್ಮ ಕತೆಗಳನ್ನು, ನಮ್ಮ ಚರಿತ್ರೆಯನ್ನು ನಾವು ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತು ಸ್ಪಷ್ಟ ಕಲ್ಪನೆಯಿರಲಿಲ್ಲ. ಹೆಚ್ಚೆಂದರೆ ಏಳೆಂಟು ನೂರು ವರ್ಷಗಳ ಇತಿಹಾಸ ಮಾತ್ರವಿರುವ ಪಶ್ಚಿಮದ ನಾಗರಿಕತೆ ತಿಳಿದಿರುವಂತೆ ಕತೆ ಮತ್ತು ಚರಿತ್ರೆ ಎರಡೂ ಭಿನ್ನ ಭಿನ್ನ ಸಂಗತಿಗಳೆಂದು ನಾವು - ಅಂದರೆ ಸುಮಾರು ನಾಲ್ಕೈದು ಸಾವಿರ ವರ್ಷಗಳ ನಾಗರಿಕತೆಯ ವಾರಸುದಾರರು - ಗ್ರಹಿಸಬೇಕೆ ಎಂಬ ಪ್ರಶ್ನೆಯು ಕೂಡ ನಮ್ಮೆದುರಿಗಿತ್ತು. ಸಾರ್ವಜನಿಕ ಜೀವನದಲ್ಲಿ ಗಾಂಧಿ ಇಂತಹ ಪ್ರಶ್ನೆಗಳನ್ನು ಎದುರಿಸಿದರೆ ಮಾಸ್ತಿಯಂತವರು ಬರವಣಿಗೆಯಲ್ಲಿ ಈ ಪ್ರಶ್ನೆಗಳನ್ನು ಎದುರಿಸಿದರು. ಸಮರ್ಪಕವಾದ ಉತ್ತರಗಳನ್ನು ಕಂಡುಕೊಂಡರು.

ನಮ್ಮನ್ನು ನಾವು ನಮ್ಮ ಕಣ್ಣುಗಳಿಂದಲೇ ನೋಡಿಕೊಳ್ಳಬೇಕು ಎಂಬುದು ಮಾಸ್ತಿಯವರಿಗೆ ಅವರ ಮೊದಲ ಕತೆ ‘ರಂಗನ ಮದುವೆ’ ಬರೆದಾಗಲೇ ಸ್ಪಷ್ಟವಾಗಿ ಹೋಗಿತ್ತೆಂದು ಕಾಣುತ್ತದೆ. ಈ ಮಾತುಗಳನ್ನು ಗಮನಿಸಿ "ನಮ್ಮೂರು ಹೊಸಹಳ್ಳಿ. ಅದರ ಹೆಸರನ್ನು ನೀವು ಕೇಳಿರುವಿರಲ್ಲವೆ? ಇಲ್ಲವೇ? ಅಯ್ಯೋ ಪಾಪ? ಅದು ನಿಮ್ಮ ತಪ್ಪಲ್ಲ. ಭೂವಿವರಣೆಗಳಲ್ಲಿ ಅದರ ಹೆಸರಿಲ್ಲ. ಇಂಗ್ಲೀಷಿನಲ್ಲಿ ಭೂವಿವರಣೆ ಬರೆಯುವ ಸಾಹೇಬು ಜನಗಳಿಗೆ ಹೊಸಹಳ್ಳಿ ಗೊತ್ತಿಲ್ಲದೆ ಅವರು ಸುಮ್ಮನಿದ್ದರೂ ಇರಬಹುದು. ನಮ್ಮ ಜನರೂ ಭೂವಿವರಣೆ ಬರೆಯುವಾಗ ಹೊಸಹಳ್ಳಿಯ ಹೆಸರನ್ನೇ ಮರೆಯುವರು. ಸರಿ ಕುರಿ ಹಿಂಡಿನ ಸಮಾಚಾರ.......ಇಂಗ್ಲೆಂಡಿನ ಸಾಹೇಬರೂ ನಮ್ಮ ಗ್ರಂಥಕರ್ತರೂ ಮರೆತ ಮೇಲೆ ಪಾಪ ಭೂಪಟ ಬರೆಯುವವನು ಅದನ್ನು ನೆನೆಯುವನೇ? ನಕ್ಷೆಯಲ್ಲಿ ನಮ್ಮೂರಿನ ನೆಲೆಯೇ ಇಲ್ಲ" ನಕ್ಷೆಯಲ್ಲಿ ನೆಲೆಯಿಲ್ಲದಿದ್ದರೇನು, ಹೊಸಹಳ್ಳಿಯಲ್ಲೇ ಬಾಳಿ ಬದುಕಿಕೊಂಡು ಬಂದ ಜನರಿಲ್ಲವೆ, ಅವರ ಜೀವನಕ್ರಮವಿಲ್ಲವೇ, ಹೊರಗಿನವರು ನೋಡಲು ನಿರಾಕರಿಸಿದ ಮಾತ್ರಕ್ಕೇ, ನೋಡಿದರೂ ಇಲ್ಲಿಯ ಜೀವನಕ್ರಮದ ಮಹತ್ವ ತಿಳಿಯಲು ನಿರಾಕರಿಸಿದ ಮಾತ್ರಕ್ಕೇ ನಾವೂ ಕುರುಡರಾಗಬೇಕೆ ಎನ್ನುವ ಪ್ರಶ್ನೆಗೆ ಮಾಸ್ತಿ ಉತ್ತರಿಸಿದ್ದು ಹೀಗೆ ".....ಏನೇ ಇರಲಿ ಇತರರ ಮಾತನ್ನು ಕೇಳಿ ನಾವು ನಿರ್ಣಯಗಳನ್ನು ತೆಗೆದುಕೊಳ್ಳಬಾರದು. ಹೊರಗಿನ ಜನ ಪಂಡಿತರೇ ಆದರೂ ಈ ದೇಶದ ಸಂಸ್ಥೆ ಸಂಸ್ಕೃತಿಗಳನ್ನು ನಿಷ್ಮಲ್ಮಶವಾದ ದೃಷ್ಟಿಯಿಂದ ನೋಡಲಾರರು.....ಈ (ಇಲ್ಲಿಯ) ಪ್ರತಿಬಿಂಬ ತಾನೊಂದು ಬಿಂಬವಾಗುವುದು ಎಂತು? ಎಂದು? ಪ್ರತಿಬಿಂಬ ಪ್ರತಿಬಿಂಬವಾಗಿಯೇ ಮುಗಿಯುತ್ತದೆ." (ಜೆ ಎಸ್ ವುಡ್‌ರೋಪ್‌ನ Shakti and Shakta ಎಂಬ ಪುಸ್ತಕದಿಂದ ಮಾಸ್ತಿ ಉದ್ಧರಿಸಿದ ಮಾತುಗಳಿವು.)

ನಮ್ಮನ್ನು ನಾವು ನಮ್ಮ ಕಣ್ಣುಗಳ ಮೂಲಕವೇ ನೋಡಿಕೊಳ್ಳಬೇಕು ಎಂಬ ದೃಷ್ಟಿಕೋನವೇನೋ ಯಾವ ಕಾಲಕ್ಕೂ ಉದಾತ್ತವಾದುದೇ ಸರಿ. ಆದರೆ ಹಾಗೆ ನೋಡಿದಾಗ, ಹೇಗೆ ನೋಡಿಕೊಳ್ಳಬೇಕು ಎಂಬ ಪ್ರಶ್ನೆಯು ಇರುತ್ತದಲ್ಲ. ನಮ್ಮ ರಾಷ್ಟ್ರೀಯವಾದಿ ಲೇಖಕರು, ನವೋದಯದ ಲೇಖಕರೆಲ್ಲ ಈ ಸಮಸ್ಯೆಯನ್ನು ಎದುರಿಸಿದವರೆ. ಅವರೆಲ್ಲರಿಗಿದ್ದ ಸುಲಭದ ದಾರಿಯೆಂದರೆ ಇಲ್ಲಿಯ ಇತಿಹಾಸವನ್ನು, ಸಂಸ್ಕೃತಿಯನ್ನು, ಸಂಘಟನೆಗಳನ್ನು ಉದಾತ್ತೀಕರಿಸುವುದು. ಈ ಉದಾತ್ತೀಕರಣಕ್ಕೆ ಪ್ರೇರಕವಾಗಿ ಅವರಿಗೆ ಇಲ್ಲಿಯ ಸನಾತನ ಧರ್ಮವಿತ್ತು. ರಾಮಕೃಷ್ಣ, ಅರಬಿಂದೋ, ವಿವೇಕಾನಂದರಂತಹ ಚಿಂತಕರಿದ್ದರು. ಮಾಸ್ತಿಯವರ ಗಮನ ಈ ಕಡೆಗೆ ಹೋಗಲೇ ಇಲ್ಲ. ಅವರು ಇಲ್ಲಿಯ ಜನಪದರು ತಮ್ಮ ತಮ್ಮ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಜೀವನದ ಸಂಘರ್ಷಗಳನ್ನು ಎದುರಿಸುವಲ್ಲಿ ತೋರಿದ ಜಾಣ್ಮೆಯನ್ನು, ಧಾರಣಾಶಕ್ತಿಯನ್ನು ಮಾತ್ರವೇ ಮತ್ತೆ ಮತ್ತೆ ಎಂಬಂತೆ ತಮ್ಮ ಕತೆಗಳಲ್ಲಿ ಪ್ರತಿನಿಧೀಕರಿಸುತ್ತ ಹೋದರು. ಎಕೆಂದರೆ ಇಂತಹ ಜಾಣ್ಮೆ, ಧಾರಣಾಶಕ್ತಿ ಮಾತ್ರ ಇಲ್ಲಿಯ ನಾಗರಿಕತೆಗೆ ಬಹುಕಾಲ ಬದುಕುಳಿಯುವ ಗುಣ ಸ್ವಭಾವವನ್ನು ತಂದುಕೊಟ್ಟಿದೆಯೆಂದು ಅವರು ನಂಬಿದ್ದರು. ಈ ಕಾರಣಕ್ಕಾಗಿಯೇ ಮಾಸ್ತಿಯವರಿಗೆ ವೆಂಕಟಿಗ, ಬೈಚೇಗೌಡ, ಗೌತಮಿ, ಉಪನಿಷದ್ ಋಷಿ, ಯುಗಪುರುಷ ಶ್ರೀಕೃಷ್ಣ - ಇವರೆಲ್ಲರನ್ನು ಒಂದೇ ತೂಕದಲ್ಲಿ ನೋಡುವುದು ಸಾಧ್ಯವಾಯಿತು. ಈಶೋಪನಿಷದ್ ಋಷಿ ಇಲ್ಲಿಯ ವಿವೇಕಕ್ಕೆ ಕಾರಣನಾಗಿರುವಷ್ಟೆ ವೆಂಕಟಿಗನು ಕಾರಣ, ಅವನ ಆಯ್ಕೆಯು ಕಾರಣ ಎಂಬುದು ಮಾಸ್ತಿಯ ನಿಲುವು.

ಈ ನಿಲುವಿನಿಂದಾಗಿಯೇ ಮಾಸ್ತಿಯವರಿಗೆ ಕಾಲವನ್ನು, ಪಾತ್ರಗಳನ್ನು ಸಾಮಾಜಿಕ, ಐತಿಹಾಸಿಕ, ಪೌರಾಣಿಕ - ಪಶ್ಚಿಮದವರಿಗೂ ಅವರನ್ನು ನೆಮ್ಮಿ ಬರೆಯುವ ವಿಮರ್ಶಕ ಪಟುಗಳಿಗೂ ಆದಂತೆ - ವೆಂದು ವಿಂಗಡಿಸಿ ನೋಡುವ ಅಗತ್ಯ ಕಂಡುಬರಲಿಲ್ಲ. ಅವರ ಕಥನ ಪ್ರತಿಭೆಯಲ್ಲಿ ಅವರ ಕತೆಗಳು ಏಕಕಾಲಕ್ಕೆ ಸಾಮಾಜಿಕ, ಐತಿಹಾಸಿಕ, ಪೌರಾಣಿಕ - ವೆಂಕಟಿಗನ ಕತೆಯನ್ನಾಗಲೀ, ವೆಂಕಟಶಾಮಿಯ ಪ್ರಣಯ ಕತೆಯನ್ನಾಗಲೀ ಕೇವಲ ವರ್ತಮಾನದ ಕತೆಯೆಂದು ಮಾತ್ರ ಓದಲು ಸಾಧ್ಯವೇ? ಈ ಕತೆಯ ಪಾತ್ರಗಳಿಗೆ, ಅವು ಎದುರಿಸುವ ಸನ್ನಿವೇಶಗಳಿಗೆ, ಮನುಷ್ಯನ ಮೂಲಭೂತ ಸ್ವಭಾವದ ಮಾದರಿಗಳನ್ನು ಪ್ರಕಟಿಸುವ ಧಾರ್ಷ್ಟ್ಯ ಮಾತ್ರವಲ್ಲ, ಪುರಾಣದ ಹೀರೋಗಳಾಗುವಷ್ಟು, ಇತಿಹಾಸದ ಸಂಧಿಕಾಲದ ಪರಿವರ್ತನಾ ಪಟುಗಳಾಗುವಷ್ಟು ಧಾರ್ಷ್ಟ್ಯವೂ ಇದೆ. ನಾವು ಯಾವ ನೆಲೆಯಲ್ಲಿ ನಿಂತು ಈ ಕತೆಗಳನ್ನು ಓದುತ್ತೇವೆ, ಓದುತ್ತಿದ್ದೇವೆ ಎಂಬಂಶದ ಮೇಲೆ ಈ ಕತೆಗಳು ಸಾಮಾಜಿಕ ಕತೆಗಳಾಗೋ, ಪೌರಾಣಿಕ ಕತೆಗಳಾಗೋ ಕಾಣಬೇಕಷ್ಟೆ. ಗೌತಮಿ ಹೇಳಿದ ಪುರಾಣದ ಕತೆಗೆ ಈವತ್ತೂ ಪ್ರತಿದಿನವೂ ಅಜ್ಜಿಯರು, ತಾಯಂದಿರು ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ಹೇಳುವ ವಿವೇಕದ ಮಾತಿನ ವರ್ತಮಾನದ ತುರ್ತಿದೆಯಲ್ಲವೆ? ಏಳೆಂಟು ನೂರು ವರ್ಷಗಳ ಹಿಂದಿನ ಮತಾಚಾರ್ಯ ರಾಮಾನುಜಾಚಾರ್ಯರ ಸಿಟ್ಟು ವರ್ತನೆಯೆಲ್ಲವೂ ನಿನ್ನೆ ಮೊನ್ನೆ ತಾನೇ ಹೆಂಡತಿಯೊಡನೆ ವಿನಾ ಕಾರಣ ಜಗಳವಾಡಿ ಸೆಟೆದುಕೊಂಡು ಹೋಗಿ ಸನ್ಯಾಸ ತೆಗೆದುಕೊಂಡಿದ್ದ ನಮ್ಮ ತಾತಮುತ್ತಾತಂದಿರ ವರ್ತನೆಯಂತೆಯೇ ಕಾಣುತ್ತದಲ್ಲ. ದೂರದೇಶದ ಗಯಟೆಯ ದಣಿವರಿಯದ ವಿಕೃತ ಕಾಮ ನಮ್ಮ ಹೊಸ ತಲೆಮಾರಿನ ಲೇಖಕರನ್ನೇ ಜ್ಞಾಪಿಸುವುದಿಲ್ಲವೇ?

ಇಂತಹ ಪಾತ್ರ ಸೃಷ್ಟಿ - ಕಾಲದ ಕಲ್ಪನೆಯಿಂದಲೇ ಮಾಸ್ತಿ ಚರಿತ್ರೆ ಮತ್ತು ನಾಗರಿಕತೆಗಳ ನಡುವೆ ಪ್ರತಿಯೊಬ್ಬ ದೊಡ್ಡ ಲೇಖಕನು ಮಾಡಲೇ ಬೇಕಾದ ಆಯ್ಕೆಗೆ ಸರಿಯಾದ ಉತ್ತರವನ್ನು ಕಂಡುಕೊಂಡಂತೆ ಕಾಣುತ್ತದೆ. ಲೇಖಕ ತಾನು ಬದುಕುವ ಕಾಲದ ಸಮಕಾಲೀನತೆಯ ಒತ್ತಡಗಳನ್ನು ಬಿಡಲಾರ, ಬಿಡಲೂಬಾರದು, ಬಿಟ್ಟರೆ ಅವನದು ರೂಪಹೀನವಾದ ವಿಶ್ವಸ್ತ ಸತ್ಯ-ಸುಭಾಷಿತವಾಗಿ ಬಿಡಬಹುದು. ಹಾಗೆಂದು ತೀರಾ ಸಮಕಾಲೀನವಾದಕ್ಕೆ ಗಂಟುಬಿದ್ದರೂ ಅವನಿಗೆ ಅಪಾಯ ತಪ್ಪಿದ್ದಲ್ಲ. ಅಖಂಡವೂ - ಅನಂತವೂ ಆದ ಕಾಲ ಪ್ರವಾಹದಲ್ಲಿ ನಮ್ಮ ಕಾಲದ ಅನುಭವಗಳು ಹಿಂದಿನ ಅನುಭವಗಳಿಂದ ಪಡೆದಿರುವುದು ಎಷ್ಟು, ಪಡೆಯಬೇಕಾದ್ದು ಎಷ್ಟು, ಮುಂದಿನ ಅನುಭವಗಳಿಗೆ ಸೇರಿಸಬೇಕಾದ್ದು ಎಷ್ಟು ಎಂಬ ದೃಷ್ಟಿಕೋನವು ತೀರಾ ಸಮಕಾಲೀನವಾದ್ದಕ್ಕೆ ಮಾತ್ರ ಗಂಟುಬೀಳಲಾರದು. ಮುಂದುವರೆಸಿ ಹೇಳುವುದಾದರೆ ಚರಿತ್ರೆಯ ಪುರಾಣಗಳ ಅನುಭವವನ್ನು ಅದು ಸಮಕಾಲೀನದ ಬೆಳಕಿನಲ್ಲೇ ಪರಿಶೀಲಿಸುತ್ತದೆ ಮತ್ತು ಸಮಕಾಲೀನವಾದ್ದನ್ನು ಚರಿತ್ರೆ - ಪುರಾಣಗಳ ಬೆಳಕಿನಲ್ಲಿ ನೋಡುತ್ತದೆ. ಹೀಗೆ ಮಾಡುವುದರ ಮೂಲಕ ಭೂತ - ಭವಿಷ್ಯ -ವರ್ತಮಾನವೆಂಬುದರ ಕಾಲದ ಕೃತಕ ವಿಂಗಡಣೆಯನ್ನು ನಿರಾಕರಿಸುತ್ತದೆ. ಕಾಲಬದ್ಧವಾದ ಚರಿತ್ರೆಯ ಕಲ್ಪನೆಯನ್ನು ನಿರಾಕರಿಸುತ್ತಾ ಮನುಷ್ಯಲೋಕದ ಅನುಭವಗಳ ಮೊತ್ತವನ್ನು ಪ್ರಕಟಿಸುವ ನಾಗರಿಕತೆಯ ಕಲ್ಪನೆಯ ಕಡೆಗೇ ಮಾಸ್ತಿಯವರ ಸಾರಿಪುತ್ರ, ಶ್ರೀಕೃಷ್ಣ, ವೆಂಕಟಿಗ, ಟಾಲ್‌ಸ್ಟಾಯ್ ಎಲ್ಲರೂ ಹೊರಟಿರುವುದು. ಇತಿಹಾಸವನ್ನು ಒಂದು Notion ಆಗಿ ಗ್ರಹಿಸುವವರಿಗೆ ಮಾಸ್ತಿಯ ಕತೆಗಳು ನಮ್ಮ ಚರಿತ್ರೆಯ ಒಂದು ಘಟ್ಟದಲ್ಲಿ ಪ್ರಕಟವಾಗುವ ನಮ್ಮ ಸಾಮಾಜಿಕ ಸನ್ನಿವೇಶದ ಸಾರಾಂಶ. ಚರಿತ್ರೆಯೆಂಬುದು ಅನುಭವಗಳ ಮೊತ್ತ ಎಂದು ನೋಡುವವರಿಗೆ ಮಾಸ್ತಿಯ ಕತೆಗಳು ನಮ್ಮ ಕಾಲಕ್ಕೂ ಪ್ರಸ್ತುತವಾಗುವಂತಹ ಅನುಭವವನ್ನು ಪ್ರಕಟಿಸುತ್ತವೆ.

ಮಾಸ್ತಿಯವರ ಈ ಆಯ್ಕೆ ಅವರ ಬರವಣಿಗೆಯ ಸಂಯಮ, ನಿರುದ್ವಿಗ್ನತೆಗೆ ಸರಿಯಾದ ಕಾರಣವನ್ನು ಸೂಚಿಸುತ್ತದೆ ಎಂದು ನನ್ನ ಅಭಿಪ್ರಾಯ. ಬರವಣಿಗೆಯ ಸಂಯಮ, ನಿರುದ್ವಿಗ್ನತೆ ಕೇವಲ ಭಾಷೆಯ ಮೇಲಿನ, ಕಥಾವಸ್ತುವಿನ ಮೇಲಿನ ಹಿಡಿತದಿಂದ ಬರುವಂತದ್ದಲ್ಲ. ನಾನೇ ಮುಖ್ಯ, ನಾನು ಬದುಕುತ್ತಿರುವ ಕಾಲವೇ ನಾಗರಿಕತೆಯ ಚಲನೆಯಲ್ಲಿ ಮುಖ್ಯ, ಎಲ್ಲ ಸಮಸ್ಯೆಗಳಿಗೂ ನನ್ನ ತಲೆಮಾರು ಕಂಡುಕೊಳ್ಳುವ ಉತ್ತರವೇ ಮುಖ್ಯ, ನನ್ನ ತಲೆಮಾರು ಬದುಕಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಕಂಡು ಹಿಡಿಯದಿದ್ದರೆ ಪ್ರಳಯ ಗ್ಯಾರಂಟಿ ಎಂದು ನಂಬುವ ಮನಸ್ಸಿಗೆ ಆತಂಕ ನ್ಯೂರೋಸಿಸ್ ಸಹಜ ಸ್ಥಿತಿ ಮಾತ್ರವಲ್ಲ, ಪ್ರಿಯವಾದ ಸ್ಥಿತಿಯೂ ಹೌದು. ಹಾಗೆಂದು ಆತಂಕ-ನ್ಯೂರೋಸಿಸ್ ತಪ್ಪಿಸಿಕೊಳ್ಳಲೆಂದು ಕೃತಕ ಭೋಳೆಯೂ ಆಗಿಬಿಡಬಾರದು. ಲೇಖಕನಿಗೆ ತಾನು ಬದುಕುತ್ತಿರುವ ಕಾಲದ ಬಗ್ಗೆ ಕುತೂಹಲವಿರಬೇಕು, ವಿನಯವಿರಬೇಕು. ಆಗಿಹೋದ ಕಾಲದ ಬಗ್ಗೆ ವಿಮರ್ಶಾತ್ಮಕ ಗೌರವವಿರಬೇಕು. ಭವಿಷ್ಯದ ಬಗ್ಗೆ ಸಕಾರಣವದ ಭರವಸೆಯಿರಬೇಕು. ಆಗ ಮಾತ್ರ ಅವನು ನೋಡುವ/ಸಾದರಪಡಿಸುವ ಅನುಭವಕ್ಕೊಂದು ವಿಶಿಷ್ಟ ಪ್ರಭೆ ಬರುತ್ತದೆ. ಆ ಪ್ರಭೆ ಮಾಸ್ತಿಯವರಲ್ಲಾದಂತೆ ಸಂಯಮ, ನಿರುದ್ವಿಗ್ನತೆ ತುಂಬಿದ ಬರವಣಿಗೆಯಲ್ಲಿ ವ್ಯಕ್ತವಾಗುತ್ತದೆ. ಸಾರಿಪುತ್ರನ ಕತೆಯಲ್ಲಿ ಬರುವ ಈ ಮಾತುಗಳನ್ನೂ ಗಮನಿಸಿ: "ಹಿರಿಯರು ಹೇಳಿದ್ದೆಂದು ನೋಡುವುದು ಒಳ್ಳೆಯದೇ. ಹಿರಿಯರು ನಮಗೆ ಹೊರಗಣ ಗುರುಗಳು. ಅವರ ಧ್ವನಿಯನ್ನು ಕೇಳಿ. ಒಳಗೂ ಒಬ್ಬ ಗುರು ಇದ್ದಾನೆ. ಅವನನ್ನು ಮುಚ್ಚಿಡಬೇಡಿ. ಎರಡೂ ಧ್ವನಿಗಳ ಶ್ರುತಿ ಸೇರಿದಾಗ ತೋರುವ ಸತ್ಯ ನಿಜವಾದ ಸತ್ಯ. ಅದುವರೆಗಿನ ಸತ್ಯ ವೇಷದ ಸತ್ಯ."

ಮನುಷ್ಯ ನಿರ್ಮಿಸುವ ಅನುಭವ ಮತ್ತು ಅವನು ನಿರ್ಮಿಸಲಾಗದ ಆದರೆ ಅಧೀನವಾಗಿರಬೇಕಾದ ಕಾಲ ಎರಡರ ಅಖಂಡತೆ ಮತ್ತು ಎರಡರ ಅಖಂಡತೆಗಿರುವ ಅವಿನಾ ಸಂಬಂಧದ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದದ್ದರಿಂದಲೇ ಮಾಸ್ತಿಗೆ ಕತೆ ಯಾವಾಗ ಚರಿತ್ರೆಯಾಗುತ್ತದೆ, ಚರಿತ್ರೆ ಯಾವಾಗ ಕತೆಯಾಗುತ್ತದೆ, ಕತೆಯನ್ನು ಯಾವಾಗ ಚರಿತ್ರೆಯಾಗಿ ನೋಡಬೇಕು, ಚರಿತ್ರೆಯನ್ನು ಯಾವಾಗ ಕತೆಯಾಗಿ ನೋಡಬೇಕು ಎಂಬ ಪ್ರಶ್ನೆ ಮುಖ್ಯವಾಗಿತ್ತು. ಗೌತಮಿ, ಶಕುಂತಳೆ, ವೆಂಕಟಶಾಮಿ, ವೆಂಕಟಿಗ ಇಂತವರ ಕತೆಗಳಲ್ಲಿ ಮನುಷ್ಯ ಚರಿತ್ರೆಯ (ಸಾಹಿತ್ಯ ಅಥವಾ ರಾಜಕೀಯ ಚರಿತ್ರೆಯಲ್ಲ) ವಿವರಗಳನ್ನು ಗಮನಿಸದೇ ಹೋಗುವ ನಿಲುವು ಅಪೂರ್ಣವಾಗುವಂತೆಯೇ ಶ್ರೀಕೃಷ್ಣ,, ಟಾಲ್‌ಸ್ಟಾಯ್, ವಾಮದೇವ - ಇಂತವರ ಚರಿತ್ರೆಗಳಲ್ಲಿ, ಇನ್ನೂ ಹತ್ತಿರವಾದ ಉದಾಹರಣೆಯಿಂದ ಹೇಳಬೇಕಾದರೆ ಚಿಕವೀರ ರಾಜೇಂದ್ರನಂತವನ ಚರಿತ್ರೆಯಲ್ಲಿ ನಮಗೆ ಪ್ರಸ್ತುತವಾದ ಕತೆಯನ್ನು ಕಾಣದೇ ಹೋಗುವ ನಿಲುವು ಕೂಡ ಅಪೂರ್ಣವಾದದ್ದು. ಕತೆಯಾಗದ ಚರಿತ್ರೆಯಿಂದ, ಚರಿತ್ರೆಯಾಗದ ಕತೆಯಿಂದ ಆಗುವ ಪ್ರಯೋಜನವಾದರೂ ಏನು ಎಂದು ಮಾಸ್ತಿ ಕೇಳುತ್ತಿರುವಂತಿದೆ. "ಸಾಮಾನ್ಯವಾಗಿ ಕತೆ ಇಲ್ಲಿಗೆ ಮುಗಿಯಬೇಕು. ಆದರೆ ವೆಂಕಟಿಗನ ಚರಿತ್ರೆ ಈ ವರ್ಷ ಮುಂದುವರೆಯಿತು" ಮತ್ತು "ಅಜ್ಜಿ ನೀನು ಹೇಳಿದ್ದು ಚರಿತ್ರೆಯಂತಿಲ್ಲ, ಒಂದು ಕತೆಯಂತಿದೆಯಲ್ಲ" ಎನ್ನುವ ಮಾತುಗಳಲ್ಲಿ ಅಡಕವಾಗಿರುವುದು ಈ ದೃಷ್ಟಿಕೋನವೇ. ಆಂಗ್ಲ ಶಕುಂತಲೆಯಲ್ಲಿ ಬರುವ ಈ ಮಾತು, "ಶಕುಂತಲೆ ಕತೆಯಲ್ಲಿ ದುಷ್ಯಂತನ ಅಪ್ಪ ಇರಲಿಲ್ಲ. ದುರ್ದೈವ, ದುಷ್ಯಂತ ಮಾತ್ರ ಇದ್ದು ಅವಳ ಮಾತನ್ನು ಒಪ್ಪಲಿಲ್ಲ. ಜೆನ್ನಿಯ ಸುದೈವ. ಇಲ್ಲಿ ದುಷ್ಯಂತ ಇರಲಿಲ್ಲ. ಅವನ ಅಪ್ಪ ಇದ್ದ, ಮಗು ತನ್ನ ಮೊಮ್ಮಗು ಎಂದು ಒಪ್ಪಿಕೊಂಡ" ಮತ್ತು ಕುಚೇಲನ ಮರಿಮಗದಂತಹ ಕತೆಗಳು, ಒಂದೇ ವಸ್ತುವಿಗೆ ಏಕಕಾಲದಲ್ಲಿ ಚರಿತ್ರೆ, ಕತೆ ಮತ್ತು ಪುರಾಣಗಳ ಸಾಧ್ಯತೆಯಿರುವುದನ್ನು ತೋರಿಸುತ್ತದೆ.

******

ಮಾಸ್ತಿಯವರ ತಾತ್ವಿಕತೆಯ ಬಗ್ಗೆಯೇ ಹೇಳುತ್ತಾ ಕತೆಗಾರರಾಗಿ ಅವರಿಗಿರುವ ವಿಶಿಷ್ಟತೆಯನ್ನು ನಾವು ಮರೆಯಬಾರದಷ್ಟೇ. ಚಿತ್ತಾಲರ ಮುನ್ನುಡಿ ಈ ವಿಶಿಷ್ಟತೆಯನ್ನು ಸವಿವರವಾಗಿ ಚರ್ಚಿಸುತ್ತದೆ. ಒಬ್ಬ ಮನುಷ್ಯನ ಕತೆಯನ್ನು ಮನುಷ್ಯನಾದ ನಾನು ಇನ್ನೊಬ್ಬ ಮನುಷ್ಯನಿಗೆ ಹೇಳುತ್ತಿದ್ದೇನೆ, ಹೇಳ ಹೊರಟಿದ್ದೇನೆ ಎಂಬುದು ಮಾಸ್ತಿಯವರ ಕತೆಗಳ ಹಿಂದಿರುವ ಮುಖ್ಯ ತುಡಿತ ಎಂದು ಚಿತ್ತಾಲರು ಹೇಳಿರುವುದು ಮಾಸ್ತಿಯವರ ಕತೆಗಾರನ ಕಲ್ಪನೆಗೆ ಗೌರವ-ಆದರ ತೋರಿಸಿರುವ ರೀತಿ. ಇಷ್ಟು ಮಾತ್ರವಲ್ಲ ಮಾಸ್ತಿ ಕತೆಗಳು ಇನ್ನೊಬ್ಬರ ಕತೆಗಳನ್ನು ನಮ್ಮ ಕತೆಗಳಂತೆಯೇ ಹೇಗೆ ನೋಡಬೇಕು, ಹೇಗೆ ಒಳಗೆ ಮಾಡಿಕೊಳ್ಳಬೇಕು, ಹಾಗೆ ಒಳಗೆ ಮಾಡಿಕೊಂಡಿದ್ದನ್ನು ನಮ್ಮ ಬದುಕಿಗೆ ಹೇಗೆ ಪ್ರಸ್ತುತಗೊಳಿಸಿಕೊಳ್ಳಬೇಕು ಎಂದು ಕೂಡ ಪಿಸುಮಾತಿನಲ್ಲೂ, ಪ್ರಿಯವಾದ ಮಾತುಗಳಲ್ಲೂ ಹೇಳಿಕೊಡುತ್ತವೆ. ಹೀಗೆ ಹೇಳಿಕೊಡುತ್ತಾ ಕತೆಗೂ ಮನುಷ್ಯನಿಗೂ ಇರುವ ಇರಬೇಕಾದ ಸಂಬಂಧದ ಸರಿಯಾದ ಸ್ವರೂಪವನ್ನು ನೆನಪಿಸುತ್ತದೆ ಕೂಡ.

ಸಣ್ಣ ಕಥೆಯ ಪ್ರಕಾರವನ್ನು ಮೈನರ್ ಪ್ರತಿಭೆಗಳಿಗೆ ಮಾತ್ರ ಸಲ್ಲುವ ಪ್ರಕಾರವೆಂದು ಜೀವನದ ವೈವಿಧ್ಯವನ್ನು ವಿಶಾಲವಾದ ವಿನ್ಯಾಸವನ್ನು ಕಾದಂಬರಿ ಪ್ರಕಾರದಲ್ಲಿ ಹಿಡಿದಿಡಲು ಸಾಧ್ಯವಾಗುವಂತೆ ಸಣ್ಣ ಕಥೆಯಲ್ಲಿ ಸಾಧ್ಯವಾಗುವುದಿಲ್ಲ ಎಂಬ ಸಾಹಿತ್ಯ ಚರಿತ್ರಕಾರರ ಮಾತುಗಳನ್ನು ಮಾಸ್ತಿ ಕತೆಗಳು ಸುಳ್ಳು ಮಾಡಿವೆ. ಜೀವನದ ಒಟ್ಟು ಅರ್ಥ ಮತ್ತು ವಿನ್ಯಾಸವನ್ನು ಪ್ರಕಟಪಡಿಸುವಂತಹ ಕಥಾ ಸಂದರ್ಭ - ಸನ್ನಿವೇಶಗಳನ್ನು (ಸಾವಿನ ಸಂದರ್ಭ, ಅಧಿಕಾರ-ಹಣ, ಸ್ವಜನ ಮೋಹ ಮತ್ತು ಜೀವನ ಸಾರ್ಥಕತೆಗಿರುವ ಸಂಬಂಧ) ಶೋಧಿಸಲು ಅನುಕೂಲವಾಗುವಂತಹ ಕಥಾವಸ್ತು - ಪಾತ್ರ ಸೃಷ್ಟಿ ಬಗ್ಗೆ ಮಾತ್ರ ಗಮನ ಕೊಟ್ಟಿದ್ದರಲ್ಲಿ ಮಾಸ್ತಿ ಕತೆಗಳ ವಿಶಿಷ್ಟತೆಯಿಲ್ಲ. ಇಂತಹ ಸಂದರ್ಭಗಳನ್ನು ನೋಡುವ ಅವರ ತಾತ್ವಿಕತೆಯಲ್ಲೆ ಅವರ ಕತೆಗಾರಿಕೆಯ ವಿಶಿಷ್ಟತೆಯೂ ಇರುವುದು. ಶ್ರೇಷ್ಠ ಲೇಖಕರಲ್ಲಾಗುವಂತೆ ಮಾಸ್ತಿಯವರಲ್ಲೂ ಅವರ ಕಲೆಗಾರಿಕೆ ಬೇರೆಯಲ್ಲ, ತಾತ್ವಿಕತೆ ಬೇರೆಯಲ್ಲ.

ಮಾಸ್ತಿಯವರ ಬಹುಪಾಲು ಉತ್ತಮ ಕತೆಗಳನ್ನೊಳಗೊಂಡ ಈ ಸಂಗ್ರಹದ ಪ್ರಕಟಣೆಯ ಮೂಲಕ ಮತ್ತೆ ಮಾಸ್ತಿ ಸಾಹಿತ್ಯ ಕಲ್ಪನೆಗಳ ಬಗ್ಗೆ ಚರ್ಚೆಗೆ ಒಂದು ಅವಕಾಶ ಕಲ್ಪಿಸಿರುವ ಪ್ರಿಸಂ ಸಂಸ್ಥೆಯವರು ಕನ್ನಡಿಗರೆಲ್ಲರ ಅಭಿನಂದನೆಗೆ ಅರ್ಹರಾಗಿದ್ದಾರೆ.
(ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ೧೯೯೯)
(ಮನೋಧರ್ಮ ಕೃತಿಯಿಂದ)
ಮುಂದೆ ಓದಿ....