ಜೀನ್ ಪಾಲ್ ಸಾತ್ರೆಯ "ನಿರಂತರವಾಗಿ ವಿಕಾಸಗೊಳ್ಳುತ್ತಲೇ ಇರುವ ದೇವರ ಕಲ್ಪನೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. - ಪುತಿನ.
"ಗೋಕುಲಾಷ್ಟಮಿ" ಪುತಿನರ ಮತ್ತು ಕನ್ನಡದ ಉತ್ತಮ ಪ್ರಬಂಧಗಳಲ್ಲೊಂದು. ಓದಿನ ಮತ್ತು ಬದುಕಿನ ಬೇರೆ ಬೇರೆ ಸನ್ನಿವೇಶಗಳಲ್ಲಿ ಈ ಪ್ರಬಂಧವನ್ನು ಮತ್ತೆ ಮತ್ತೆ ಓದುತ್ತಲೇ ಬಂದಿರುವ ನನಗೆ, ಪ್ರಬಂಧದ ಇತ್ತೀಚಿನ ಓದು ನಮ್ಮ ಕಾಲಮಾನದ ಮುಖ್ಯ ಸಾಂಸ್ಕೃತಿಕ ಪ್ರಶ್ನೆಗಳನ್ನು ಬೇರೊಂದು ರೀತಿಯಲ್ಲು ನೋಡಬಹುದಲ್ಲವೇ ಎಂಬ ಪ್ರಚೋದನೆಯನ್ನು, ನಿರಾಳವನ್ನು ನೀಡಿತು. ಮೊದಲಿಗೆ ಪ್ರಬಂಧದ ಸ್ವರೂಪದ ಬಗ್ಗೆ.
ಈ ಪ್ರಬಂಧದ ಚೌಕಟ್ಟನ್ನು ಇಂತಹದೇ ಎಂದು ಗುರುತಿಸಿ ಕಟ್ಟು ಹಾಕುವುದು ಕಷ್ಟ. ವರ್ಣನಾತ್ಮಕ, ಲಹರಿ, ಚಿಂತನಶೀಲ, ಆಧ್ಯಾತ್ಮಿಕ - ಇಂತಹ ಎಲ್ಲ ಗುಣಸ್ವಭಾವಗಳನ್ನು ಪ್ರಬಂಧ ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಈ ಗುಣವಿಶೇಷಗಳು ಒಂದರೊಡನೊಂದು ಪ್ರಬಂಧದ ಸಹಜ ಓಘದಲ್ಲಿ ನಿರಾಯಾಸವಾಗಿ ಬೆರೆಯುತ್ತ ಬರಹದ ಧ್ವನಿಶಕ್ತಿಯನ್ನು ಹೆಚ್ಚಿಸಿವೆ. ಹಾಗಾಗಿ ಈ ಪ್ರಬಂಧ ಇಂತದೇ ಜಾತಿಯದು ಎಂದು ವರ್ಗೀಕರಿಸುವುದು ಕಷ್ಟ ಮತ್ತು ತಪ್ಪು.
ಎಲ್ಲ ಒಳ್ಳೆಯ ಪ್ರಬಂಧಗಳಲ್ಲು ಇರುವಂತೆ ಇಲ್ಲು ಒಂದು ಪ್ರಸಂಗ ಯಾ ವಿದ್ಯಮಾನವಿದೆ, ಸ್ವಾನುಭಾವವಿದೆ, ಕೀಟಲೆಯಿದೆ, ಚಿಂತನೆಯಿದೆ, ಮೀರುವಿಕೆಯಿದೆ. ಇದೆಲ್ಲವೂ ಮನೆ ಮತ್ತು ಕುಟುಂಬ ವಾತಾವರಣದಲ್ಲಿ ದಿನನಿತ್ಯದ ಆವರಣದಲ್ಲಿ ನಡೆಯುವುದರಿಂದ ಪ್ರಬಂಧವು ನಿರೂಪಿಸುವ ಅನುಭವ-ಚಿಂತನೆ-ಕಾಣ್ಕೆ ನಮ್ಮಂತಹ ಸಾಧಾರಣ ಗೃಹಸ್ಥರದು ಕೂಡ ಎಂದೆನಿಸಿಬಿಡುತ್ತದೆ.
ಗೋಕುಲಾಷ್ಟಮಿಯ ಆಚರಣೆ ಶ್ರೀವೈಷ್ಣವ ಕುಟುಂಬದ ವಾತಾವರಣದಲ್ಲಿ ಹೇಗೆ ಜರುಗಿತು, ಜರುಗುತ್ತಿದೆ ಮತ್ತು ಜರುಗುತ್ತಲೇ ಇರುತ್ತದೆ ಎಂಬುದು ನಿರೂಪಣೆಯ ತಿರುಳು. ಶ್ರೀಕೃಷ್ಣ ಒಂದು ಭಾವವಾಗಿ ಹೇಗೆ ಹುಟ್ಟುತ್ತಾನೆ ಮತ್ತು ಏಕೆ ಹುಟ್ಟಬೇಕು ಎನ್ನುವುದು ನಿರೂಪಣೆಯ ಹೃದಯ.
ನನ್ನ ಓದಿಗೆ ಭೂಮಿಕೆಯಾಗಿ ಪುತಿನರ ಕೆಲವು ಮಾತುಗಳನ್ನು ಉಲ್ಲೇಖಿಸುತ್ತೇನೆ:
"ನಾನು ತಾತ್ವಿಕವಾಗಿಯಾಗಲೀ ಅಥವಾ ಭಾವನಾತ್ಮಕವಾಗಿಯಾಗಲೀ ಯಾವುದೋ ಒಂದು ವೈಯಕ್ತಿಕ ದೇವರೊಡನೆ ಅಥವಾ ಒಂದು ನಿರ್ದಿಷ್ಟ ಪರಂಪರೆಯೊಡನೆ ನನ್ನನ್ನು ಗುರುತಿಸಿಕೊಂಡಿಲ್ಲ. ನನಗೆ ಯಾವಾಗಲೂ ಒಬ್ಬ ಮುಕ್ತ ಮನುಷ್ಯನ ಪೂಜೆಯೇ ಮುಖ್ಯವೆನಿಸಿದೆ. (ನೋಡಿ: ಮಲೆ ದೇಗುಲ) ಒಬ್ಬ ವ್ಯಕ್ತಿ ಸಂಪೂರ್ಣ ಸ್ವಾತಂತ್ರ್ಯದ ಸ್ಥಿತಿಯಲ್ಲಿ ಪೂಜೆಗೈಯಬೇಕು ಎಂದು ನನಗನ್ನಿಸುತ್ತದೆ.
ನಾನು ಪೂಜೆಯನ್ನೇನಾದರೂ ಮಾಡುವುದಾದರೆ ಅದು ನನ್ನದೇ ರೀತಿಯಲ್ಲಿ ಸ್ವಯಂ ಶುದ್ಧೀಕರಣಗೊಳ್ಳುವುದಕ್ಕೆ ಅಷ್ಟೆ. ನನ್ನನ್ನು ನಾನು ಶುದ್ಧಗೊಳಿಸಬೇಕೆಂಬ ತೀವ್ರವಾದ ಹಂಬಲ ನನಗೆ ಚಾಲನೆ ನೀಡುತ್ತದೆ. ನಾನು ಮಾಡುವ ಆಚರಣೆಗಳು ಆಳವಾದ ಸಾಂಕೇತಿಕತೆಯನ್ನು ಪಡೆದುಕೊಳ್ಳುತ್ತದೆ. ಆ ಆಚರಣೆಗಳು ಯಾವುದೇ ಸಾಂಪ್ರದಾಯಿಕ ಚೌಕಟ್ಟಿನಿಂದ ಬರುವುದಿಲ್ಲ. ನಾನವುಗಳಲ್ಲಿ ಅರ್ಥವನ್ನು ಹುಡುಕಿಕೊಳ್ಳುತ್ತೇನೆ." (ಶ್ರೀ ಎನ್.ಮನು ಚರ್ಕವರ್ತಿಯವರಿಗೆ ನೀಡಿದ ಸಂದರ್ಶನ, ಭೃಂಗಮಾರ್ಗ - ಪುಟ 450, ಸಂ.ಡಾಎಚ್.ಎಸ್.ರಾಘವೇಂದ್ರ ರಾವ್.)
ಈ ದೃಷ್ಟಿಕೋನದಿಂದಾಗಿಯೇ ಪ್ರಬಂಧದ ಸ್ವರೂಪ ಮತ್ತು ಅದು ಕಾಣಿಸುವ ಭಾವಲೋಕ ಎರಡೂ ಹೊಸ ಎತ್ತರಕ್ಕೆ ತಲುಪುತ್ತವೆ. ನಿಜವಾದ ಆಧ್ಯಾತ್ಮಿಕ ಹುಡುಕಾಟದಲ್ಲಿರುವ ಎಲ್ಲ ಸಂವೇದನಾಶೀಲರಂತೆ ಪುತಿನರು ಕೂಡ ಒಂದು ವೈಯಕ್ತಿಕ ಧರ್ಮ (Personal Religion)ದ ಹುಡುಕಾಟದಲ್ಲಿದ್ದಾರೆ. ಇಂತಹ ಸಂವೇದನಾಶೀಲರಿಗೆ ಸಾಂಸ್ಥಿಕ ಧರ್ಮ ಮತ್ತು ಅದರ ಚೌಕಟ್ಟು ಆಶಯಗಳಲ್ಲಿ ನಂಬಿಕೆಯಿರುವುದಿಲ್ಲ, ಉತ್ಸಾಹವಿರುವುದಿಲ್ಲ. ತಾನು ಹುಟ್ಟಿದ ಧರ್ಮ, ಜಾತಿ ಮತ್ತು ಹಿನ್ನೆಲೆಯ ಬಗ್ಗೆ ಸಂಕೋಚವಿರುವುದಿಲ್ಲ, ಮುಜುಗರವಿರುವುದಿಲ್ಲ. ಆದರೆ ಅದನ್ನು ವೈಭವೀಕರಿಸುವುದು ಇಲ್ಲ. ಬದಲಾಗಿ ವಿಮರ್ಶಾತ್ಮಕ ಧೋರಣೆ ಹೊಂದಿದ್ದು ಉಳಿದ ಧರ್ಮಗಳ, ವಿಚಾರಗಳ ಮೂಲತಿರುಳನ್ನು, ಸದಾಶಯಗಳನ್ನು ತಮ್ಮ ವಿಚಾರದ, ನಂಬಿಕೆಗಳ, ಆಚರಣೆಗಳ ಚೌಕಟ್ಟಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಮನೋಭಾವಕ್ಕೆ ಗಾಂಧಿ ನಮ್ಮ ಕಾಲದಲ್ಲಿ ಉತ್ತಮ ಉದಾಹರಣೆ. ಇದನ್ನೆಲ್ಲ ವಿವರಿಸಲು "ಆತ್ಮೀಕರಣ" ಎನ್ನುವ ಪದವನ್ನು ಪುತಿನ ಬಳಸುತ್ತಾರೆ.
ಈ ಮನೋಧರ್ಮದಿಂದಾಗಿ ಪ್ರಬಂಧದ ವಿವರಗಳು ಒಂದು ಶ್ರೀವೈಷ್ಣವ ಮನೆಯ ವಿವರಗಳಾಗಿದ್ದು ನಮಗೆ ಬೇರೊಂದು ಬೆಳಕಿನಲ್ಲಿ ಕಾಣುತ್ತದೆ. ವಿವರಗಳ ಸಾಂಕೇತಿಕತೆ, ಧ್ವನಿಶಕ್ತಿ ಮತ್ತು ಜೀವಂತಿಕೆಯ ಕಡೆ ನಾವು ಗಮನ ನೀಡುವಂತೆ ಒತ್ತಾಯಿಸುತ್ತವೆ. ಇದಕ್ಕಾಗಿ ಪುತಿನ ಪುರಾಣದ ಕೃಷ್ಣನ ಕಡೆಗೆ ಗಮನ ಕೊಟ್ಟಷ್ಟೇ, ಪ್ರತಿ ಮನೆಯಲ್ಲೂ ಇರುವ ಬಾಲಕೃಷ್ಣನ ಕುರಿತಂತೆ ಕೂಡ ನಮ್ಮ ಗಮನ ಸೆಳೆಯುತ್ತಾರೆ. ಪುರಾಣದ ಕೃಷ್ಣ, ಮನೆಯ ಮಗು ಬಾಲಕೃಷ್ಣ ಇಬ್ಬರೂ ಒಟ್ಟಿಗೇ ಇರುವ ಪ್ರಬಂಧದಲ್ಲಿ ಇವರಿಬ್ಬರು ಬೇರೆಬೇರೆಯಲ್ಲ ಎಂಬ ಸೂಚನೆಯೂ ಇದೆ. ಮನೆಯ ಮಗು ಬಾಲಕೃಷ್ಣ, ಪುರಾಣದ ಕೃಷ್ಣನನ್ನು ನಮ್ಮವನನ್ನಾಗಿಸುತ್ತಾನೆ, ಸಜೀವಗೊಳಿಸುತ್ತಾನೆ. ಈ ಜೀವಂತಿಕೆಯನ್ನು ಓದುಗರಲ್ಲಿ ಉದ್ದೀಪುಸುವುದೇ ಮನೆಯೊಳಗೆ ಇರುವ ಹಬ್ಬದ ವಾತಾವರಣ, ಸಂಭ್ರಮ, ಸಲಿಗೆ, ಕಾಯುವಿಕೆ - ಇವೆಲ್ಲವೂ ಪ್ರಬಂಧದ ವಿವರಗಳಲ್ಲಿ ನಮಗೆ ಸಿಗುತ್ತದೆ.
ಈ ಪ್ರಬಂಧವನ್ನು ಓದಿದಾಗ ನನ್ನಲ್ಲಿ ಹುಟ್ಟುವ ಮುಖ್ಯ ಪ್ರಶ್ನೆಯೆಂದರೆ "ಪಾವಿತ್ರ್ಯವನ್ನು ನಾಶಮಾಡುವುದು" ಹಾಗೆ ನಾಶಮಾಡುವುದರ ಮೂಲಕವೇ ಆಧುನಿಕರಾಗುವುದು ಮತ್ತು ಜಾತ್ಯಾತೀತವಾಗುವುದು ನಾವೆಲ್ಲ ತಿಳಿದುಕೊಂಡಷ್ಟು ಅನಿವಾರ್ಯವೇ ಎಂಬುದು. ಪುತಿನ ಪ್ರಬಂಧವನ್ನು ಓದಿದಾಗ ಆಧುನಿಕರಾದ ನಮ್ಮ ಚಿಂತನ ಕ್ರಮ ಎಲ್ಲೋ ಹಳಿತಪ್ಪಿದೆಯನ್ನಿಸಿತು. "ಪಾವಿತ್ರ್ಯ" ಎನ್ನುವುದನ್ನು ನಾವು ಧಾರ್ಮಿಕ, ಮತೀಯ ಪರಿಭಾಷೆಯಲ್ಲೇ ಗ್ರಹಿಸಬೇಕಿಲ್ಲ. ಧರ್ಮ ಮತ್ತು ಮತೀಯ ಚಹರೆಗಳನ್ನು ಮೀರಿದ "ಪಾವಿತ್ರ್ಯ" ಎನ್ನುವುದು ಕೂಡ ಬದುಕಿನಲ್ಲಿರುತ್ತದೆ. ಇಂತಹ ಪಾವಿತ್ರ್ಯದ ಕಲ್ಪನೆಯ ತಳಹದಿಯಿಲ್ಲದೆ ನಮ್ಮ ವೈಯಕ್ತಿಕ ಜೀವನವು ಸಾಮಾಜಿಕ ಜೀವನವು ನಡೆಯುವುದಿಲ್ಲ. ನಮ್ಮ ನಮ್ಮ ಅನುಭವ, ವೈಯಕ್ತಿಕ ಬದುಕಿನ ಹಿನ್ನೆಲೆಯಿಲ್ಲದೆ ಬರೆಯುವುದಾದರೆ, ಮಾತನಾಡುವುದಾದರೆ "ಪಾವಿತ್ರ್ಯ"ದ ಅಗತ್ಯ ನಮಗೆ ಕಾಣಲಾರದು. ಇದಲ್ಲದೆ ನಿಜವನ್ನೇ ಹೇಳಬೇಕಾದರೆ ನಾವೆಲ್ಲರೂ ನಮ್ಮ ನಮ್ಮ ಸ್ತರದಲ್ಲೇ "ಪಾವಿತ್ರ್ಯ"ದ ಹುಡುಕಾಟದಲ್ಲಿರುತ್ತೇವೆ. "ಪಾವಿತ್ರ್ಯ"ಕ್ಕಿರುವ ಇದ್ದ ನಿರ್ದಿಷ್ಟ ಮತ್ತು ಸೀಮಿತ ಅರ್ಥ, ಈ ಅರ್ಥಕ್ಕಿದ್ದ ಯಜಮಾನಿಕೆಯನ್ನು ಪ್ರಶ್ನಿಸುವುದು ಸರಿ. ಆದರೆ ಹೀಗೆ ಪ್ರಶ್ನಿಸುವ ಆತುರ ಮತ್ತು ಒರಟುತನದಲ್ಲಿ ಬದುಕಿನಲ್ಲಿ ಪಾವಿತ್ರ್ಯಕ್ಕಿರುವ ಮಹತ್ವವನ್ನು ಅಲ್ಲಗಳೆಯಬಾರದು. ಪಾವಿತ್ರ್ಯವನ್ನು ನಾಶಮಾಡಿ ಹೊಸ ಸಂಸ್ಕೃತಿಯನ್ನು ಕಟ್ಟುತ್ತೇನೆಂದು ಹೊರಟಿರುವವರು ಕೂಡ ಹುಡುಕಾಡುತ್ತಿರುವುದು ಪಾವಿತ್ರ್ಯದ ಪರ್ಯಾಯ ನೆಲೆಗಳನ್ನು ಮತ್ತು ಸ್ಥಾಪಿಸಲು ಪ್ರಯತ್ನಿಸುತ್ತಿರುವುದು ತಮ್ಮ "ಪಾವಿತ್ರ್ಯ"ದ ಕಲ್ಪನೆಯನ್ನು. ನಾಜೂಕಿಗೆಂದು, ಪ್ರಗತಿಪರರೆಂದು ಕಾಣಿಸಿಕೊಳ್ಳಲೆಂದು "ಪಾವಿತ್ರ್ಯ" ಪದವನ್ನು ಇಂತವರು ಬಳಸದೆ ಹೋಗಬಹುದು ಅಷ್ಟೇ.
ಪಾವಿತ್ರ್ಯ ನಾಶ ಮಾಡುವವರು ಮೊದಲಿಗೆ ಮತ್ತು ಕೊನೆಯದಾಗಿ ಪ್ರಶ್ನಿಸುವುದು ವಿದ್ಯುಕ್ತ ಆಚರಣೆಗಳನ್ನೂ ಮತ್ತು ಇದನು ಪ್ರತಿನಿಧಿಸುವ ಮೂರ್ತಿಗಳನ್ನು (Rituals and Icons). ಇವರಿಗೆ ಕಾಣಿಸುವುದು ಆಚರಣೆಯ ಬಾಹ್ಯ ವಿವರಗಳು ಮತ್ತು ವಾಚ್ಯಾರ್ಥ ಮಾತ್ರ. ಗೋಕುಲಾಷ್ಟಮಿ ಕೂಡ ಒಂದು ಆಚರಣೆಯೇ, ಕೃಷ್ಣನು ಕೂಡ ಒಬ್ಬ ಮೂರ್ತಿಯೇ. ಇದನ್ನು ನೋಡುವ, ಒಳಗು ಮಾಡಿಕೊಳ್ಳುವ ಕ್ರಮ ಮಾತ್ರ ಈ ಪ್ರಬಂಧದಲ್ಲಿ ಬೇರೆ.
ಪ್ರಬಂಧದ ಎರಡನೇ ವಾಕ್ಯದಲ್ಲೇ "ಪವಿತ್ರತಮ" ಎನ್ನುವ ಪದವಿದೆ. ನಂತರ ಕಾಲಮಾನದ ಯಾವುದೇ ದಿನವಾಗಬಹುದಾದ ದಿನವೊಂದರ ಪ್ರಕೃತಿಯ ಸಣ್ಣ ವಿವರವೊಂದಿದೆ. ಪುರಾಣದ ಕೃಷ್ಣನನ್ನು ಮನೆಯ ಕೃಷ್ಣ, ಇಲ್ಲೇ ಹೀಗೇ ಕೃಷ್ಣ ಎಂದು ತೋರಿಸಿ ನಿರ್ದಿಷ್ಟಗೊಳಿಸುತ್ತದೆ. ಹಣತೆಯ ಬೆಳಕು ಫಲವಸ್ತ್ರದ ನೆಳಲಿನೊಡನೆ ಹಾಸುಹೊಕ್ಕಾಗಿ ಬೆರೆತಿದ್ದ ವಿವರ. ನೆಳಲು-ಬೆಳಕಿನಾಟ, ಕೃಷ್ಣನ ಮೇಲೆ ಬೀಳುತ್ತಿರುವ ಹಣತೆಯ ಬೆಳಕಿನ ವಿವರ ಇದೆಲ್ಲವೂ ಪ್ರಬಂಧಕ್ಕೆ ಬೇಕಾದ ಸದ್ಯದ ಮತ್ತು ಪೌರಾಣಿಕದ ಎರಡೂ ಪ್ರಪಂಚಗಳನ್ನು ಒಟ್ಟಿಗೇ ಸೂಚಿಸುತ್ತವೆ. ಮುಂದಿನ ಪ್ಯಾರಾಗಳ ವಿವರಗಳು ಕೂಡ ಕಾಲಾತೀತವಾದ ಒಂದು ಆಚರಣೆಯನ್ನು, ನಿರ್ದಿಷ್ಟ ದೇಶ ಕಾಲದ ಚೌಕಟ್ಟಿನೊಳಗೆ, ಕುಟುಂಬದ ಆವರಣದೊಳಗೆ ತರುವ ಪ್ರಯತ್ನವೇ ಆಗಿರುತ್ತದೆ. ಕೃಷ್ಣ ಮತ್ತು ಗೋಕುಲಾಷ್ಟಮಿ ಮನೆವಾರ್ತೆಯ ಒಂದು ಭಾಗವೇ ಆಗುತ್ತಾನೆ/ದೆ.
ಪ್ರಬಂಧಕಾರರ ತಂದೆಯ ಭಕ್ತಿಯಲ್ಲಿ ಪೂಜೆ ಮಾತ್ರವಿಲ್ಲ. ಪ್ರಾರ್ಥನೆ ಕೂಡ ಇದೆ. ಹಣತೆಯ ಬೆಳಕು ಇವರ ಮುಖದ ಮೇಲೆ ಕೂಡ ಬೀಳುವ ವಿವರವಿದೆ. ಪ್ರಾರ್ಥನೆಗೆ ಶಕ್ತಿ ಬರುವುದು, ತೇಜಸ್ಸು ಬರುವುದು ಏನನ್ನು ಪ್ರಾರ್ಥಿಸುತ್ತೇವೆ ಎಂಬುದರ ಮೇಲಲ್ಲ, ಪ್ರಾರ್ಥಿಸುವವನ ವ್ಯಕ್ತಿತ್ವ ಎಂತಹದೆಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಗಾಂಧಿಯ ಕೈಯಲ್ಲಿ ಪ್ರಾರ್ಥನೆ ಮತ್ತು ಉಪವಾಸಗಳು ಪಡೆದ ಅರ್ಥವನ್ನು ಇತರ ನಾಯಕರ ಕೈಯಲ್ಲಿ ಪಡೆಯಲಿಲ್ಲ. ಪ್ರಾರ್ಥನೆಗು ಆತ್ಮಶುದ್ಧಿಗು ಇರುವ ಅವಿನಾ ಸಂಬಂಧವನ್ನು ಸೂಚಿಸುವ ಈ ಸಾಲುಗಳನ್ನು ನೋಡಿ:
"ಜ್ಞಾನದಿಂದ ಓಜಸ್ವಿಯಾದ, ವ್ರತನೇಮಗಳಿಂದ ತೇಜಸ್ವಿಯಾದ, ಶಮದಮ ದಯಾದಿ ಗುಣಗಳಿಂದ ಪ್ರಸನ್ನವಾದ, ವಯಸ್ಸಿನ ಆಧಿಕ್ಯದಿಂದ ಗೌರವಾಧಿಷ್ಠನರಾದ, ಅಂದಿನ ಉಪವಾಸದಿಂದ ಶುಷ್ಕವಾದ ಮುಖವದು.....ನನ್ನ ತಂದೆಯವರ ಧ್ಯಾನಾಸಕ್ತವಾದ, ಪುರಾತನ ಆರ್ಯ ಸಂಸ್ಕೃತಿಯ ಅಕಳಂಕಿತ ಪಕ್ವ ಫಲದಂತಿರುವ, ಮುಖದ ಮುದ್ರೆ ಆ ಸಂಸ್ಕೃತಿಯ ಪಾತ್ರದಲ್ಲಿ ಹರಿದು, ಶ್ರದ್ಧೆಯ ನೆಲೆಗೊಂಡು, ವೈದಿಕ ಧರ್ಮ, ಕರ್ಮಗಳ ಕೂಲಗಳಿಂದ ನಿಯಮಿತವಾಗಿ, ಜ್ಞಾನಾರ್ಜನೆಯ ವೇಗದಿಂದ ನಿಷ್ಕಲ್ಮಶವಾಗಿ ಹಾದಿ ಸಾಗುತ್ತಾ ಸಾಗುತ್ತಾ ಕ್ರಮೇಣ ತಿಳಿದು, ಅನಂತದಲ್ಲಿ ಆತ್ಮ ನಿವೇದನ ಮಾಡಲು ಅಣಿಯಾದ ಜೀವನದಿಯ ಚಿತ್ರವಿದು."
ಪುರಾಣ ಶ್ರವಣ ಇಲ್ಲಿ ಯಾಂತ್ರಿಕ ವಿದ್ಯುಕ್ತ ಕ್ರಿಯೆಯಾಗುವ ಬದಲು ಅಂತರಂಗದ ಕೋಮಲತೆಗೆ, ಮನಸ್ಸಿನ ಮೃದುತ್ವಕ್ಕೆ ಪ್ರೇರಕವಾಗುತ್ತಿರುವುದು ಮುಖ್ಯ. ಪ್ರಬಂಧಕಾರನ ತಂದೆ-ತಾಯಿ ಇಬ್ಬರ ಹೃದಯದಲ್ಲೂ ನಚ್ಚಳಿದು ಇರುಳು ಮೂಡಿದೆ. ಪುರಾಣ ಶ್ರವಣದ ಸಂದರ್ಭದಲ್ಲೇ ಪ್ರಬಂಧಕಾರನ ತಂದೆಯ ಗೃಹಕೃತ್ಯದ ಜವಾಬ್ದಾರಿಯ ನೆನಪುಗಳಿಂದ ಪ್ರೇರಿತವಾಗುವ ಪ್ರಶ್ನೆಗಳು, ಮಧ್ಯಪ್ರವೇಶ, ಅಧಿಕಪ್ರಸಂಗದಂತೆ ಕಾಣುವ ಬದಲು ಕೃಷ್ಣ ಜನನದ ಕತೆಯ ಭಾವಕ್ಕೆ ಸಂಬಂಧ ಪಡೆದಿದೆ ಎನ್ನುವ ಸೂಚನೆ ಪ್ರಬಂಧಕಾರನ ಮಾಗಿದ ದೃಷ್ಟಿಕೋನಕ್ಕೆ ದ್ಯೋತಕ. ಸಾಮಾನ್ಯ ಮನೆಯೊಂದರ ಕೂಸೆ ತನ್ನ ಆಟ-ನೋಟಗಳಿಂದ ಇಷ್ಟೊಂದು ಮುದ್ದಾಗಿರ ಬಹುದಾದರೆ ದೇವಶಿಶು ಕೃಷ್ಣ ಇನ್ನು ಎಷ್ಟೊಂದು ಮುದ್ದಾಗಿರಬಹುದು, ಮೋಹಕವಾಗಿರಬಹುದು ಎಂಬ ಪ್ರಶ್ನೆ ಮನೆಯ ಹೊಸ ಪ್ರಭೆಯಲ್ಲಿ ಕಾಣಿಸುತ್ತದೆಂಬುದು ಗಮನಾರ್ಹ.
ಕೃಷ್ಣನ ಹುಟ್ಟು ಕಾಲಪ್ರವಾಹದ ದೃಷ್ಟಿಯಿಂದ ನಿರಂತರ. ದೇಶದ ಚೌಕಟ್ಟಿನ ಹಿನ್ನೆಲೆಯಲ್ಲಿ ಸರ್ವಾಂತರ್ಯಾಮಿ. ಈತನ ಜನನ "ಭಾರತ ಧರ್ಮವು ಭಾರತ ವರ್ಷದಲ್ಲಿ ಉಳಿದಿರುವವರೆಗೂ" ನಿರಂತರವೆಂಬುದು ಪುತಿನರ ಮಾತು. ಇಲ್ಲಿ ಪುತಿನ ಬಳಸುವ "ಭಾರತಧರ್ಮ"ವೆಂಬ ಮಾತು ಕುತೂಹಲಕರವಾಗಿದೆ. ಓದುಗರೇ, ಇಲ್ಲಿ ನೋಡಿ ಪುತಿನ "ಹಿಂದೂ ಧರ್ಮ" ಎಂಬ ಪದವನ್ನು ಬಳಸುತ್ತಿಲ್ಲ. ಆದ್ದರಿಂದ ಅವರು ಪ್ರಗತಿಪರರು, ಜಾತ್ಯಾತೀತರು ಎಂಬ Politically correct ಆದ Stance Reading ಮಾಡುವ ದುರುಳತನ ನನ್ನಲ್ಲಿಲ್ಲ. ಮಹಾಭಾರತದ ಆಗುಹೋಗುಗಳ ಹಿನ್ನೆಲೆಯಲ್ಲೇ ಹುಟ್ಟುವ ತಾತ್ವಿಕತೆ, ವಿಷಾದ, ಜೀವನ ಧರ್ಮದ ಬಗ್ಗೆ ಪುತಿನ ಗಮನವಿರಬಹುದೆಂದು ನನ್ನ ಊಹೆ.
ಈ ಪ್ರಬಂಧಕ್ಕೊಂದು ಬೆರಗಿದೆ, ಪ್ರಭೆಯಿದೆ (AURA). ಇದರ ಮೂಲವೇನು? ಪ್ರಬಂಧದ ವಿವರಗಳೇ, ಪೌರಾಣಿಕ ಪಾತ್ರವಾದ ಕೃಷ್ಣನೇ, ಪುತಿನರ ಗಮನ ಯಾವುದರ ಕಡೆಗಿದೆ? ಬದುಕಿನಲ್ಲಿ ಸೌಂದರ್ಯದ ನೆಲೆಗಳನ್ನು ಹುಡುಕುವ ಪುತಿನ ದೃಷ್ಟಿಕೋನದಿಂದ ಈ AURA ಸೃಷ್ಟಿಯಾಗಿದೆಯೆನಿಸುತ್ತದೆ. ಈ ಮಾತುಗಳನ್ನು ಗಮನಿಸಿ:
"ನನ್ನ ಕಾವ್ಯದ ಮೂಲಕ ಮತ್ತು ನನ್ನ ಧಾರ್ಮಿಕ ಅನುಭವದ ಮೂಲಕ ನಾನು ಇಡೀ ಮಾನವ ಕುಲವನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದೇನೆ. ಸೌಂದರ್ಯಾತ್ಮಕತೆಯ ಮೂಲಕ ನಾನು ಮಾನವತಾವಾದವನ್ನು ಕಂಡುಕೊಳ್ಳಲು ಶ್ರಮಿಸಿದ್ದೇನೆ. ರಾಮಾಯಣವನ್ನು ನೋಡುವ ಸಾಂಪ್ರದಾಯಿಕ ದೃಷ್ಟಿಕೋನವು ಭಕ್ತಿಭಾವಕ್ಕೆ ಕಿಂಕರವಾಗಿದೆ. ರಾಮಾಯಣ ಮತ್ತು ಭಗವದ್ಗೀತೆಗಳನ್ನು ಪವಿತ್ರ ಗ್ರಂಥಗಳಾಗಿಯಲ್ಲ, ಬದಲಾಗಿ ಅದ್ಭುತ ಕಲಾಕೃತಿಗಳು ಎಂಬಂತೆ ನೋಡುವುದನ್ನು ಪಶ್ಚಿಮವು ನನಗೆ ಕಲಿಸಿದೆ. ಅವುಗಳೆಡೆಗಿನ ನನ್ನ ಪ್ರತಿಕ್ರಿಯೆ ಸೌಂದರ್ಯಾತ್ಮಕವಾದುದು. ನಾನು ರಾಮಾಯಣವನ್ನು ಶೇಕ್ಸ್‌ಪಿಯರ್ ಅಥವಾ ಗಯಟೆಯನ್ನು ಓದಿದ ಹಾಗೆಯೇ ಓದುತ್ತೇನೆ. ಅದು ಒಬ್ಬ ಮಹಾಕವಿಯ ಮಹಾನ್ ಕಾವ್ಯ. ಒಂದು ಸಾಂಪ್ರದಾಯಿಕ ಮನಸ್ಸಿಗೆ ರಾಮಾಯಣವನ್ನು ಈ ರೀತಿ ನೋಡಲು ಸಾಧ್ಯವಾಗುವುದಿಲ್ಲ." (ಭೃಂಗಮಾರ್ಗ - ಪುಟಗಳು 450-452). ಒಂದು ಪುರಾಣ ಪ್ರಸಂಗವನ್ನು ಕಾಲಾತೀತವಾದ ಸೌಂದರ್ಯಾನುಭವವಾಗಿ ಸೃಷ್ಟಿಸಲು ಹೊರಟಿರುವುದರಿಂದಲೇ ಪ್ರಬಂಧದ ವಿವರಗಳು ಸ್ಥಾನಿಕ-ಕಾಲಬದ್ಧ ವಿವರಗಳಾಗಿದ್ದು ಕೂಡ ದೇಶಕಾಲದಿಂದ ಬಿಡುಗಡೆ ಪಡೆದಿವೆ, ಚಿಮ್ಮಿವೆ. ಪುರಾಣ ಪ್ರಸಂಗಗಳನ್ನು ಓದುವಾಗ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುವ ಪಾವಿತ್ರ್ಯ-ದೈವಿಕ ಭಾವನೆಗಳ ಚೌಕಟ್ಟು ಮಾತ್ರವೇ ಈ ಪ್ರಬಂಧ ಓದುವಾಗ ನಮ್ಮಲ್ಲಿ ಜಾಗೃತವಾಗುವುದಿಲ್ಲ ಎಂಬುದು ಮುಖ್ಯ. ಈವತ್ತಿನ ಮತೀಯ ವಾತಾವರಣದಲ್ಲಿ ನಮ್ಮ ಪುರಾಣ ಪ್ರಸಂಗಗಳನ್ನು, ಮಹಾಕಾವ್ಯಗಳನ್ನು ಈ ದೃಷ್ಟಿಯಿಂದಲೂ ಓದಲು (ವ್ಯಾಖ್ಯಾನಿಸಲು ಮಾತ್ರವಲ್ಲ) ಅನುಭವಿಸಲು ಸಾಧ್ಯವಾಗಬೇಕೆಂಬ ಆಸೆ ನನ್ನ ಮರುಓದಿನ ಹಿಂದಿದೆ. ಆದರೆ ಹೀಗೆ ಓದುವಾಗ ನಮ್ಮ ಆಧುನಿಕ-ಪ್ರಗತಿಪರ ಓದಿನ ಮುಖ್ಯ ಶಾಪವಾದ Stance Reading (ನಿಲುವು ಪ್ರೇರಿತ ಓದು) ನ ಅಪಾಯಗಳ ಬಗ್ಗೆ ಕೂಡ ನಮಗೆ ಎಚ್ಚರವಿರಬೇಕು-ನಮ್ಮ ಬಗ್ಗೆಯೇ.
ನಮ್ಮ ಕಾಲದಲ್ಲಿ ಗಾಂಧಿ ಮಾತ್ರ ನಮ್ಮ ಆಧ್ಯಾತ್ಮಿಕ ಪರಂಪರೆಯ ಮಹೋನ್ನತ ಅಂಶಗಳನ್ನು ಪ್ರತಿನಿಧಿಸುತ್ತಾರೆ ಎಂದು ತಿಳಿದಿದ್ದ ಪುತಿನರಿಗೆ ಪಶ್ಚಿಮದ ಬಗ್ಗೆ ಭಯವಿರಲಿಲ್ಲ, ಆತಂಕವಿರಲಿಲ್ಲ. ಪಶ್ಚಿಮ, ಆಧುನಿಕತೆ, ನವ್ಯತೆ ಕುರಿತಂತೆ ಪುತಿನರ ನಿಲುವು ಸ್ಥೂಲವಾಗಿರಲಿಲ್ಲ, ಏಕಮುಖವಾಗಿರಲಿಲ್ಲ.
ಆದರೆ ಒಂದು ಸ್ತರದ ನವ್ಯತೆ ಮತ್ತು ಆಧುನಿಕತೆ ಮಾತ್ರ ಪಾವಿತ್ರ್ಯ ನಾಶವಾಗದೆ ಪರ್ಯಾಯ ಸಂಸ್ಕೃತಿಯೂ, ಹೊಸಕಾಲಕ್ಕೆ ಬೇಕಾದ ಆಧುನಿಕತೆಯೂ ನಮ್ಮ ಸಮಾಜದಲ್ಲಿ ಮೂಡಲಾರದೆಂದು ಖಚಿತವಾಗಿ ನಂಬಿತ್ತು. ಇಂತಹವರ ಸಾಹಿತ್ಯ ಕೃತಿಗಳಲ್ಲಿ ಧಾಂದಲೆಗೆ ಒಳಗಾಗಿದ್ದು Rituals. Ritualsಗಳ ಸಾಂಕೇತಿಕತೆಗೇ ಇವರೆಲ್ಲ ಹೆಚ್ಚು ಪ್ರತಿಕ್ರಿಯಿಸಿದರು ಎಂದು ಈಗ ಅನಿಸುತ್ತದೆ. Ritualsಗಳ ಸಾಂಸ್ಕೃತಿಕ ಆಯಾಮ, ಶ್ರೀಮಂತಿಕೆ ಮತ್ತು ಧ್ವನಿ ಇವರಿಗೆ ತಿಳಿಯಲೇ ಇಲ್ಲ. ರೂಪಕಗಳು, ಸಂಕೇತಗಳು ಎಂದು ನಾವು ಭಾವಿಸುವ Ritualsಗಳು ಸಂದೇಶ - ಅರ್ಥವಾಹಕಗಳು ಮಾತ್ರವಲ್ಲ ಅಥವಾ ಅಲ್ಲವೇ ಅಲ್ಲ. ಇದನ್ನೆಲ್ಲ ಆಚರಿಸುವವರ/ಪ್ರತಿಯೊಬ್ಬರ ನಡಾವಳಿ, ಉತ್ಸವ, ವ್ಯಕ್ತಿತ್ವಗಳ ಹಿನ್ನೆಲೆಯಲ್ಲಿ ಪ್ರತಿಸಲವೂ ಈ Ritualsಗಳು ನಿತ್ಯ ನೂತನವಾದ ಅರ್ಥ ಪಡೆಯುತ್ತವೆ ಎಂಬುದನ್ನು ಇವರು ಗ್ರಹಿಸಲಾರದೆ ಹೋದರು. ರೂಪಕ ಸಂಕೇತಗಳೇ ಕೊನೆಯ ಸತ್ಯವೆಂದು ತಿಳಿದವರ ದುರಂತವಿದು. "ಗೋಕುಲಾಷ್ಟಮಿ" ಪ್ರಬಂಧದ ಹಿಂದಿರುವ ತಾತ್ವಿಕತೆ ನನ್ನ ಮಾತನ್ನೇ ಸಮರ್ಥಿಸುತ್ತದೆಂದು ಭಾವಿಸುತ್ತೇನೆ. ಪಾವಿತ್ರ್ಯವೆನ್ನುವುದು ಕೊನೆಗೂ ಇರುವುದು ವಿಧ್ಯುಕ್ತ ಆಚರಣೆಗಳಲ್ಲೂ ಅಲ್ಲ, ಪ್ರತಿಮೆಗಳಲ್ಲೂ ಅಲ್ಲ. ಅದನ್ನು ಆಚರಿಸುತ್ತಿರುವವರ ಕೈಯಲ್ಲಿ. ಒಂದು ಕಾಲದಲ್ಲಿ Ritualsಗಳು ಗೊಡ್ಡುಗಳ ಕೈಯಲ್ಲಿ ಮತ್ತು ಶುಷ್ಕ ವಿಶ್ಲೇಷಕರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಈಗ ಸಮೂಹಸನ್ನಿಗಳ ಪುಂಡರ ಗುಂಪಿನ ಕೈಲಿ ಸಿಕ್ಕಿಹಾಕಿಕೊಂಡಿದೆ.
"ಗೋಕುಲಾಷ್ಟಮಿ" ಪ್ರಬಂಧದಲ್ಲಿ ನನಗೆ ತುಂಬಾ ಇಷ್ಟವಾದ ಇನ್ನೊಂದು ಸಂಗತಿಯೆಂದರೆ ಪ್ರಬಂಧದೊಳಗೆ ಅಡಕವಾಗಿರುವ ಮೌನದ ಸೂಚನೆಗಳು. ಈ ಮೌನ ಕೂಡ ಪ್ರಬಂಧಕಾರ ನಿರೂಪಿಸದೆ ಹೋದ ಆದರೆ ಪ್ರಬಂಧದ ಭಾಗವೇ ಆಗಿರುವ ಜಗತ್ತಿನ ಇನ್ನೂ ಹಲವು ಕೋನಗಳ ಕಡೆ ನಮ್ಮ ಗಮನ ಸೆಳೆಯುತ್ತದೆ. ಎಲ್ಲ ಉತ್ತಮ ಸಾಹಿತ್ಯ ಕೃತಿಗಳು ಎಷ್ಟೇ ಮಾತನಾಡಿದರೂ ಕೊನೆಗೆ ಆಶ್ರಯಿಸುವುದು ಮೌನವನ್ನೇ. ಇಂತಹ ಮೌನದ ಕೆಲವು ಕೋನಗಳ ಬಗ್ಗೆಯಾದರೂ ನಮ್ಮ ಗಮನವು ಮರು ಓದಿನ ಸಂದರ್ಭದಲ್ಲಿ ಜಾಗೃತವಾಗಬಹುದೆಂದು ನನ್ನ ಭಾವನೆ.
ಪುತಿನ ಸಮಕಾಲೀನರು ಬದುಕಿನಲ್ಲಿ ಪಾವಿತ್ರ್ಯದ ನೆಲೆಗಳನ್ನು ಹುಡುಕುವ ರೀತಿ ಕೂಡ ಒಬ್ಬರಿಂದ ಒಬ್ಬರಿಗೆ ಭಿನ್ನ. ನಾಸ್ತಿಕರು, ವಿಚಾರವಾದಿಗಳೂ ಆದ ಕಾರಂತರಂತವರ ಹುಡುಕಾಟ- ಎಲ್ಲಿ ಹೇಗೆ? ಪಾವಿತ್ರ್ಯವನ್ನು ಕಾರಂತರು ವ್ಯಕ್ತಿಯ ಚಾರಿತ್ರ್ಯ, ಮೌಲ್ಯನಿಷ್ಠೆ ಮತ್ತು ಪ್ರತಿಯೊಬ್ಬ ಮನುಷ್ಯನ ಸಮಾಜೋಪಯೋಗಿ ಆಯಾಮಗಳಲ್ಲಿ ಕಾಣುತ್ತಾರೆ. ವ್ಯಕ್ತಿಯ ಸಾಮಾಜಿಕ ಹಿನ್ನೆಲೆ, ಸ್ಥಾನಮಾನಗಳಿಗೆ ಕಾರಂತರು ಪ್ರಾಮುಖ್ಯತೆ ನೀಡುವುದಿಲ್ಲ. ಮಾಸ್ತಿಯಂತವರಿಗೆ ವೆಂಕಟಶಾಮಿಯ ಪ್ರಣಯದ ಕತೆ - ಪ್ರಸಂಗ ನಡೆಯುವ ಕುಗ್ರಾಮವೇ Spiritual Place ಆಗಿ ಕಾಣಿಸುತ್ತದೆ. ಕುವೆಂಪುಗೆ ಮದುಮಗಳು ಕಾದಂಬರಿಯ ಘೋಷವಾಕ್ಯದಲ್ಲಿ ಸೂಚಿಸುವಂತೆ ಪಾವಿತ್ರ್ಯವೆನ್ನುವುದು ಕಾಲ-ದೇಶ ಎರಡರ ದೃಷ್ಟಿಯಿಂದಲೂ ಸರ್ವವ್ಯಾಪಿ. ಇದನ್ನು ಹುಡುಕುವುದೇ ಕಲಾವಿದನ ಕರ್ತವ್ಯ. ಬೇಂದ್ರೆಯವರಿಗೆ ಬದುಕಿನ ಲೀಲಾ ಸ್ವಭಾವವೇ ಪಾವಿತ್ರ್ಯದ ಉಗಮ ಮತ್ತು ನಿತ್ಯ ನರ್ತನ. ಸಣ್ಣ ಸೋಮವಾರದಂತಹ ಪದ್ಯದಲ್ಲಿ ವ್ಯಕ್ತವಾಗುವ ಹಾಗೆ ಹಳಹಳಿಕೆಯಿಲ್ಲದಾಗ ಭೂತವು ವರ್ತಮಾನದಲ್ಲಿ ಪ್ರಕಟವಾಗುವ, ನಿಜವಾಗುವ ರೀತಿಯಲ್ಲೇ ಪಾವಿತ್ರ್ಯ ಉಂಟು.
ನವ್ಯ ತಲೆಮಾರಿನ ಲೇಖಕರು ಸ್ವಘೋಷಿತ ಪಾವಿತ್ರ್ಯ ನಾಶದ ವಕ್ತಾರರು-ಬರವಣಿಗೆಯ ಒಂದು ಹಂತದಲ್ಲಿ ಬರವಣಿಗೆ, ಕಾಲಮಾಗಿದಂತೆ ಇವರು ಕೂಡ ಪಾವಿತ್ರ್ಯದ ನೆಲೆಗಳನ್ನು ಹುಡುಕಿದವರೇ. ನವ್ಯ ಲೇಖಕರ ಸಂದರ್ಭದಲ್ಲಿ ಪಾವಿತ್ರ್ಯದ ಹುಡುಕಾಟ-ಬರವಣಿಗೆಯ ಕೊನೆ ಕೊನೆ ಹಂತಗಳಲ್ಲಿ ಹೇಗೆ ಜರುಗಿತು ಎಂಬುದು ಪ್ರತ್ಯೇಕ ಲೇಖನ-ಚರ್ಚೆಗೆ ವಸ್ತುವಾಗಬಲ್ಲದು.
(ಗಾಂಧಿಬಜಾರ್ ಸಾಹಿತ್ಯ ಪತ್ರಿಕೆಯ ಮಾರ್ಚ್ 2009ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)
(ಚಿತ್ರಗಳು: ವಿಜಯ ಕರ್ನಾಟಕ ಮತ್ತು ಉದಯವಾಣಿಯ ಸಾಪ್ತಾಹಿಕ ಪುರವಣಿಗಳಿಂದ ಕೃತಜ್ಞತಾಪೂರ್ವಕ )
ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.
-
ಜಿ ಎನ್ ಮೋಹನ್ ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ
ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ
ಸಮ್ಮೇಳನ. ನಾನು ಮ...
7 years ago
No comments:
Post a Comment