ಕನ್ನಡದಲ್ಲಿ ಈಗ ಹಿಂದೆಂದೂ ಪ್ರಕಟವಾಗದಷ್ಟು ಸಂಖ್ಯೆಯಲ್ಲಿ ಪ್ರತಿವರ್ಷವೂ ಪುಸ್ತಕಗಳು ಹೊರಬರುತ್ತಿವೆ. ಬರೇ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲದೆ, ಗುಣ, ಸ್ವಭಾವ, ವೈವಿಧ್ಯಗಳ ದೃಷ್ಟಿಯಿಂದಲೂ ಕನ್ನಡ ಪುಸ್ತಕಗಳ ಪ್ರಪಂಚದಲ್ಲಿ ನಿರಂತರ ಬದಲಾವಣೆಯಾಗುತ್ತಿದೆ. ಹತ್ತಾರು ಅಕಾಡೆಮಿಗಳು, ಪ್ರಾಧಿಕಾರ, ಪರಿಷತ್ತು, ವಿಶ್ವವಿದ್ಯಾಲಯಗಳು ಮಾತ್ರವಲ್ಲದೆ ಬರಹಗಾರರು, ಬರಹಗಾರರ ಗುಂಪುಗಳು ಕೂಡ ತಮ್ಮ ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.
ಈ ಪುಸ್ತಕಗಳೆಲ್ಲ ಓದುಗರ ಗಮನ ಸೆಳೆಯಲು, ಓದುಗರನ್ನು ತಲುಪಲು ನಮ್ಮಲ್ಲಿ ಯಾವ ರೀತಿಯ ವ್ಯವಸ್ಥೆಯೂ ಇಲ್ಲ. ದಿನಪತ್ರಿಕೆಗಳು/ವಾರಪತ್ರಿಕೆಗಳಲ್ಲಿ ಪ್ರಕಟವಾಗುವ ಪುಸ್ತಕ ಸಮೀಕ್ಷೆಗಳು ಬಹುಪಾಲು ಲೇಖಕ ಕೇಂದ್ರಿತವಾಗಿರುತ್ತವೆ. ಒಂದು ಪುಸ್ತಕ ಓದುಗನೊಬ್ಬನ ಆಸಕ್ತಿಗೆ, ಸದ್ಯದ ಆತನ ಬದುಕಿಗೆ ಹೇಗೆ ಮುಖ್ಯ ಎಂದು ತಿಳಿಸಬೇಕಾದ್ದು ಸಮೀಕ್ಷೆಗಳ ಕರ್ತವ್ಯ. ಬದಲಿಗೆ ನಮ್ಮಲ್ಲಿ ಬಹುಪಾಲು ಸಮೀಕ್ಷೆಗಳು ಲೇಖಕನ ಬಗ್ಗೆ, ಕೃತಿಯ ಬಗ್ಗೆ ತೀರ್ಪು ನೀಡುವುದಕ್ಕೆ, ಬರಹಗಾರನ ಸ್ಥಾನಮಾನವನ್ನು ನಿರ್ದೇಶಿಸುವುದಕ್ಕೆ, ಕೃತಿಕಾರನ ಜೊತೆ ಇರುವ ಸ್ನೇಹ-ಪ್ರೀತಿ, ಕೋಪ, ತಿರಸ್ಕಾರಗಳನ್ನು ತೋರುವುದಕ್ಕೆ ತೋರುಗಂಬಗಳಾಗುತ್ತವೆ. ಇನ್ನೂ ಮುಖ್ಯವಾದ ಸಂಗತಿಯೆಂದರೆ ಬಹುಪಾಲು ಸಮೀಕ್ಷೆಗಳು ಸಾಹಿತ್ಯ ಕೃತಿ ಕೇಂದ್ರಿತವಾಗಿರುತ್ತವೆ. ಸಾಧಾರಣ ಸುಮಾರು ಮಟ್ಟದ ಕತೆ, ಕಾದಂಬರಿ, ಕವನಗಳು, ಸಂಗ್ರಹಗಳು ಪಡೆಯುವ ಸಮೀಕ್ಷಾ ಗಮನವನ್ನು ಕನ್ನಡದಲ್ಲಿ ಒಂದು ಶಾಸ್ತ್ರಗ್ರಂಥ, ವೈಜ್ಞಾನಿಕ ಗ್ರಂಥ ಪಡೆಯುವುದು ಅಪರೂಪ.
ಈ ಹಿನ್ನೆಲೆಯಲ್ಲಿ ಡಾ. ರಾಮಮನೋಹರ ಲೋಹಿಯಾ ತಮ್ಮ Mankind ಪತ್ರಿಕೆಯಲ್ಲಿ ಮಾಡುತ್ತಿದ್ದ ಪುಸ್ತಕಗಳ ಸಮೀಕ್ಷೆಯ ರೀತಿಯನ್ನು ಕನ್ನಡ ಓದುಗರ ಗಮನಕ್ಕೆ ತರಬೇಕೆನ್ನಿಸಿತು. ಈ ಎಲ್ಲ ಸಮೀಕ್ಷೆಗಳು ಕರ್ನಾಟಕ ಸರ್ಕಾರ ಪ್ರಕಟಿಸಿರುವ ಸಮಗ್ರ ಲೋಹಿಯಾ ಸಾಹಿತ್ಯದ ಎರಡನೆಯ ಸಂಪುಟವಾದ `ಉತ್ತರ ದಕ್ಷಿಣ' (ಪುಟಗಳು 225-228)ರಲ್ಲಿ ಇವೆ. ಈ ಎಲ್ಲ ಸಮೀಕ್ಷೆಗಳು ಓದುಗನನ್ನು ಕೆಣಕುತ್ತವೆ. ಆತನ ಆಸಕ್ತಿಗೆ ಕಾರಣವಾಗುತ್ತವೆ. ಪುಸ್ತಕ/ವಿಷಯಗಳ ಬಗ್ಗೆ ಓದುಗ ಸಮೀಕ್ಷೆಯಾಗುತ್ತಿರುವ ಕೃತಿಯಿಂದಾಚೆಗೂ ಮತ್ತೆ ಮತ್ತೆ ಯಾವ ಕೃತಿಗಳನ್ನು/ಯಾವ ಲೇಖಕನನ್ನು ಗಮನಿಸಬೇಕು ಎಂಬ ಸೂಚನೆಗಳನ್ನು ಕೂಡ ಕೊಡುತ್ತವೆ. ಪುಸ್ತಕವು ಓದುಗನ ಪ್ರಜ್ಞಾವಂತಿಕೆಗೂ, ಸಮಾಜದ ಬದುಕಿಗೂ ಆರೋಗ್ಯಕ್ಕೂ ಹೇಗೆ ಪ್ರಸ್ತುತ ಎಂಬುದನ್ನೂ ಕೂಡ ಸಮೀಕ್ಷೆ ಪರಿಶೀಲಿಸುತ್ತದೆ.
ಮೊದಲಿಗೆ ಗಮನ ಸೆಳೆಯುವುದು ಲೋಹಿಯಾ ಆಯ್ಕೆ ಮಾಡುವ ಪುಸ್ತಕಗಳ ವೈವಿಧ್ಯ. ಇತಿಹಾಸ, ರಾಜಕೀಯ, ಆಧ್ಯಾತ್ಮ, ಭಾಷಾಶಾಸ್ತ್ರ, ಜೀವನಚರಿತ್ರೆ, ಕಾವ್ಯ, ಅನುವಾದ, ಕತೆಗಳು, ಪುಟ್ಟ ಹುಡುಗಿಯೊಬ್ಬಳ ಕವನ ಸಂಕಲನ. ಬರೇ ಪುಸ್ತಕಗಳನ್ನು ಮಾತ್ರ ಲೋಹಿಯಾ ಆಯ್ಕೆ ಮಾಡುವುದಿಲ್ಲ. ಕಲ್ಲಚ್ಚಿನ ಪ್ರತಿಯೊಂದನ್ನೂ, ಮಾಸಿಕ ಪತ್ರಿಕೆಗಳು, ವಾರಪತ್ರಿಕೆಗಳನ್ನು ಕೂಡ ಆಯ್ಕೆ ಮಾಡಿಕೊಳ್ಳುತ್ತಾರೆ. ಪತ್ರಿಕೆಗಳ ವಿಶೇಷ ಸಂಚಿಕೆಗಳಿಗೆ/ಸಾಮಾನ್ಯ ಸಂಚಿಕೆಗಳಿಗೆ, ಸಂಶೋಧನಾ ಗ್ರಂಥಗಳಿಗೆ ನೀಡುವಷ್ಟು ಮಹತ್ವವನ್ನು ನೀಡುತ್ತಾರೆ. ಹಂಗೇರಿ ಕ್ರಾಂತಿ, ಚೈತನ್ಯದೇವನ ಬರಹ, ಚಿಂತನೆ, ಒರಿಸ್ಸಾದ ಸಂಖ್ಯಾಶಾಸ್ತ್ರ ಸಂಪುಟ, ಮಕ್ಕಳಿಗೆಂದು ಬರೆದ ಚರಿತ್ರೆಯ ಪಾಠಗಳ ಪುಸ್ತಕ, ಉರ್ದುಕವಿ ಇಲಹಾಬಾದಿ, ಹಿಂದಿ ಮಾತೃಭಾಷೆಯಲ್ಲದವನೊಬ್ಬನು ಹಿಂದಿಯಲ್ಲಿ ಬರೆದ ಕಥಾಸಂಕಲನ, ಇನ್ನೂ ಮುದ್ರಣವಾಗದೇ ಕಲ್ಲಚ್ಚಿನ ಪ್ರತಿಯಾಗೇ ಸಿಕ್ಕಿರುವ ನಾಗರಿಕ ಅಸಹಕಾರದ ಬಗ್ಗೆ ಚಿಂತನಾ ಸರಣಿ - ಹೀಗೆ ವೈವಿಧ್ಯ ಬೆಳೆಯುತ್ತಲೇ ಹೋಗುತ್ತದೆ. ಹೆರಾಲ್ಡ್ ಬ್ಲೂಮ್ ಮತ್ತು ಜಾರ್ಜ್ ಆರ್ವೆಲ್ ಇಂತಹವರ ಸಮೀಕ್ಷೆಗಳಲ್ಲಿ ಮಾತ್ರ ಇಂತಹ ವೈವಿಧ್ಯ ಮತ್ತು ದಿಟ್ಟತನ ಕಾಣುತ್ತದೆ.
ತಮ್ಮ ಓದುಗಾರಿಕೆ, ಸಮೀಕ್ಷಾ ರೀತಿಯ ಬಗ್ಗೆ ಲೋಹಿಯಾ ಹೀಗೆ ಬರೆದುಕೊಳ್ಳುತ್ತಾರೆ:
"ನಾನೇನು ಇಂಥದ್ದೇ ಪುಸ್ತಕ ಎಂದು ಸರಿಯಾಗಿ ಆಯ್ದು ಓದುವ ಓದುಗನಲ್ಲ. ಅಂಥ ಓದುಗರು ಎಲ್ಲಿರುತ್ತಾರೆ? ವಾಷಿಂಗ್ಟನ್ ಕಾಂಗ್ರೆಸ್‌ನ ಗ್ರಂಥ ಭಂಡಾರವನ್ನು ಬಳಸುವ ಅವಕಾಶವಿರುವವರು ಕೂಡ ಹೀಗೆ ಪಕ್ಕಾ ಆಯ್ಕೆಯ ಓದುಗರಲ್ಲ. ಕಡೆಯ ಪಕ್ಷ ಈ `ಆಯ್ಕೆ' ಎಂಬುದರ ಪೂರ್ಣ ಅರ್ಥದಲ್ಲಿ ಈ ತನಕ ಅಚ್ಚಾಗಿರುವ ಹಾಗೂ ಇದೀಗ ಅಚ್ಚಾಗುತ್ತಿರುವ ಎಲ್ಲವೂ ಈ ಗ್ರಂಥಾಲಯದಲ್ಲಿ ದೊರಕಲಾರದು. ಯಾರೋ ಒಬ್ಬರು ಇವನ್ನು ಆಯ್ದು ಇಲ್ಲಿಟ್ಟಿದ್ದಾರೆ. ಪೂರ್ವಾಗ್ರಹಗಳಿಂದಾಗಿಯೋ, ಅವರಿಗೆ ದೊರೆತ ಅಧಿಕಾರದಿಂದಾಗಿಯೋ ಈ ಬಗೆಯ ಆಯ್ಕೆ ಒಮ್ಮೊಮ್ಮೆ ತಪ್ಪಾಗಿರುತ್ತದೆ. ಹಾಗೆಯೇ ಸಂವಹನ, ಭಾಷೆ, ಮುಂತಾದ ನಿಜವಾದ ಸಮಸ್ಯೆಗಳ ಕಾರಣಕ್ಕಾಗಿಯೂ ಇಂಥ ತಪ್ಪುಗಳಾಗಿರಬಹುದು. ಶಸ್ತ್ರಾಸ್ತ್ರಗಳ ಅಥವಾ ಆರ್ಥಿಕ ಬಲವಿಲ್ಲದ ದೇಶಗಳ ಪುಸ್ತಕಗಳು, ಪತ್ರಿಕೆಗಳು ಹಾಗೂ ಇನ್ನಿತರ ಮುದ್ರಿತ ಸಾಹಿತ್ಯ ಸಾಮಾನ್ಯವಾಗಿ ಇಂಥ ಕಡೆ ದೊರೆಯುವುದಿಲ್ಲ. ಈ ಬಗೆಯ ಜಾಗತಿಕ ಸ್ಥಿತಿಯ ಹಿನ್ನೆಲೆಯಲ್ಲಿ ನಾನು ನನ್ನ ಪುಸ್ತಕಗಳನ್ನು ಆಯ್ಕೆಯಲ್ಲಿ ತೀರಾ ತರತಮ ವ್ಯತ್ಯಾಸ ಮಾಡದಿರುವುದರಿಂದ ನನ್ನ ಆಯ್ಕೆಗಳು ತೀರಾ ತಪ್ಪಾಗಿರಲಾರವು. ನನ್ನ ಗೆಳೆಯನೊಬ್ಬನಿದ್ದಾನೆ. ಅವನಿಗೆ ಓದುವುದೆಂದರೆ ಅಫೀಮು ಸೇವಿಸಿದ ಹಾಗೆ. ಹೀಗಾಗಿ ನಗರದಲ್ಲಿ ಸಿಕ್ಕ ಕಸವನ್ನೆಲ್ಲ ಕೊಂಡು ತರುತ್ತಾನೆ. ನಾನು ಅವನ ಮನೆಗೆ ಹೋದಾಗಲೆಲ್ಲ ಈ ಕಸದಿಂದ ಆಯ್ದ ಪತ್ರಿಕೆಗಳು ಹಾಗೂ ಓದಬಲ್ಲ ಸಾಹಿತ್ಯವನ್ನು ಹೆಕ್ಕಿ ತರುತ್ತೇನೆ. ಜೊತೆಗೆ ಕೆಲವರು ತಮ್ಮ ಪುಸ್ತಕಗಳನ್ನು, ಪ್ರಚಾರ ಸಾಹಿತ್ಯವನ್ನು ನನಗೆ ಕಳಿಸುತ್ತಿರುತ್ತಾರೆ. ಹೀಗಾಗಿ ಇಲ್ಲಿ ಯಶಸ್ವಿ ಪುಸ್ತಕಗಳಂತೆ ಅಷ್ಟು ಯಶಸ್ವಿಯಲ್ಲದ ಮುದ್ರಿತ ಸಾಹಿತ್ಯ ಕೂಡ ನನ್ನ ಮಟ್ಟಿಗೆ ಲಾಭದಾಯಕವೇ."
ಶ್ರೀ ಚೈತನ್ಯ ದೇವರನ್ನು ಕುರಿತ ಪುಸ್ತಕವನ್ನು ತಾನೇಕೆ ಸಮೀಕ್ಷೆ ಮಾಡುತ್ತಿದ್ದೇನೆಂದು ಗುರುತಿಸುವಾಗ ಹೀಗೆ ಬರೆಯುತ್ತಾರೆ:
"ತತ್‌ಕ್ಷಣದ ವಿದ್ಯಮಾನಗಳಿಂದ ಧಾರ್ಮಿಕ ಪುಸ್ತಕಗಳು ಹಾಗೂ ಮತ್ತಿತರ ಕಲಾತೀತವೆನಿಸುವ ವಿಷಯಗಳೆಡೆಗೆ ಚಲಿಸುವುದು ಕುತೂಹಲಕರವಾಗಿರಬಲ್ಲದು. ಇದು ಅವುಗಳ ಮೌಲ್ಯ ಕುರಿತ ವ್ಯಾಖ್ಯಾನವಲ್ಲ. ಹೊಡೆದಾಟ, ಬಡಿದಾಟಗಳ ಈ ಜಗತ್ತಿನಲ್ಲಿ ವಿವಿಧ ಪಂಗಡಗಳ ಭಕ್ತರಿಗೆ ಆಧ್ಯಾತ್ಮಿಕ ಅನುಭವಗಳು ಮನಶ್ಶಾಂತಿಯನ್ನು ಕೊಡುವ ಹಾಗೆ ಕಾಣುತ್ತದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಅನೇಕ ಸಲ ಇಂತಹ ಮನಶ್ಶಾಂತಿ ಜೀವನದ ಬಗೆಗಿನ ತಪ್ಪು ಕಲ್ಪನೆ ಮತ್ತು ಮೌಢ್ಯದ ತಳಹದಿಯ ಮೇಲೆ ನಿಂತಿರುತ್ತದೆ ಎಂಬುದು ಮಾತ್ರ ಅತ್ಯಂತ ವಿಷಾದನೀಯ..."
"ತತ್‌ಕ್ಷಣದ ವಿದ್ಯಮಾನಗಳಿಂದ ಧಾರ್ಮಿಕ ಪುಸ್ತಕಗಳು ಹಾಗೂ ಮತ್ತಿತರ ಕಲಾತೀತವೆನಿಸುವ ವಿಷಯಗಳೆಡೆಗೆ ಚಲಿಸುವುದು ಕುತೂಹಲಕರವಾಗಿರಬಲ್ಲದು. ಇದು ಅವುಗಳ ಮೌಲ್ಯ ಕುರಿತ ವ್ಯಾಖ್ಯಾನವಲ್ಲ. ಹೊಡೆದಾಟ, ಬಡಿದಾಟಗಳ ಈ ಜಗತ್ತಿನಲ್ಲಿ ವಿವಿಧ ಪಂಗಡಗಳ ಭಕ್ತರಿಗೆ ಆಧ್ಯಾತ್ಮಿಕ ಅನುಭವಗಳು ಮನಶ್ಶಾಂತಿಯನ್ನು ಕೊಡುವ ಹಾಗೆ ಕಾಣುತ್ತದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಅನೇಕ ಸಲ ಇಂತಹ ಮನಶ್ಶಾಂತಿ ಜೀವನದ ಬಗೆಗಿನ ತಪ್ಪು ಕಲ್ಪನೆ ಮತ್ತು ಮೌಢ್ಯದ ತಳಹದಿಯ ಮೇಲೆ ನಿಂತಿರುತ್ತದೆ ಎಂಬುದು ಮಾತ್ರ ಅತ್ಯಂತ ವಿಷಾದನೀಯ..."
ಲೋಹಿಯಾ ಸಮೀಕ್ಷೆಗಳ ವೈಶಿಷ್ಟ್ಯವೆಂದರೆ ಪಂಡಿತರಂಜಕತೆಯಿಂದ ಪೂರ್ತಿ ತಪ್ಪಿಸಿಕೊಂಡಿರುವುದು. ಎಲ್ಲೂ ಎಡಬಿಡಂಗಿ ನಿಲುವುಗಳಿಲ್ಲ. ಅಡ್ಡಗೋಡೆಯ ಮೇಲೆ ದೀಪವಿಡುವ ಪ್ರವೃತ್ತಿಯೂ ಇಲ್ಲ. ಭಾಷೆ ಕೂಡ ನೇರ, ಹರಿತ, ಸರಳ ಮತ್ತು ನಿರ್ದಿಷ್ಟ. ಕೆಲವು ಉದಾಹರಣೆಗಳನ್ನು ನೋಡಿ:
"ಇಲಹಾಬಾದಿ ಅಕ್ಬರ್ ದೊಡ್ಡ ಕವಿಯೆಂದಾಗಲೀ, ಶ್ರೇಷ್ಠ ಕವಿಯೆಂದಾಗಲೀ ಕರೆಯುವುದು ತಪ್ಪು. ಆದರೆ ಆಧುನಿಕ ಭಾರತದ ಒಳ್ಳೆಯ ಮೈನರ್ ಕವಿಗಳ ಸಾಲಿನಲ್ಲಿ ಅಕ್ಬರ್‌ಗೆ ಸ್ಥಾನವಿದೆ ಎಂಬುದರಲ್ಲಿ ಅನುಮಾನವಿಲ್ಲ."
"ಟ್ವೆಂಟಿಯತ್ ಸೆಂಚುರಿಯಂಥ ನಿಯತ ಕಾಲಿಕ ಕೂಡ ಎಂಥ ವ್ಯಾಕರಣ ತಪ್ಪು ಮಾಡುತ್ತದೆ ನೋಡಿ; between ಹಾಗೂ or ಜೊತೆಗೂಡಿರುವುದನ್ನು ಗಮನಿಸಿ."
"ಯಾವ ಭಾಷೆ ತನ್ನ ಕೃತಿ ನಿರ್ಮಿತಿಗೆ ಒಗ್ಗಿ ಬರುವಂತೆ ಅತ್ಯಂತ ಆತ್ಮೀಯವಾಗಿರಲಾರದೋ ಅಂಥ ಭಾಷೆಯ ಸೆರೆಯಿಂದಲೂ ಲೇಖಕ ಮೊದಲು ಬಿಡಿಸಿಕೊಳ್ಳಬೇಕು."
"ಕವಿ ಅರುಣ್ ಅತ್ಯಂತ ಪರಿಶ್ರಮ ಪಟ್ಟು ಕೊನೆಗೊಮ್ಮೆ ಚಿನ್ನದಂಥ ಸಾಲು ಬರೆಯಬಲ್ಲ ಕವಿ."
"ಹೀಗೆ ಇತಿಹಾಸ ಎರಡು ರೀತಿಯ ಅಶಾಸ್ತ್ರೀಯತೆಗೆ ಮತ್ತು ಅಸತ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಒಂದು ಇಲ್ಲಿಂದ ಹಿಂದೆ ನೋಡುವುದು. ಇನ್ನೊಂದು ಹಿಂದೆ ನಿಂತು ಅಲ್ಲಿ ಕಂಡದ್ದನ್ನೇ ಮುಂದೆ ಚಾಚುವುದು. ಇತಿಹಾಸವನ್ನು ಅದು ಹೇಗೆ ಅಭಿನೀತವಾಗುತ್ತದೋ ಹಾಗೇ ಯಥಾವತ್ ನೋಡದಿರುವ ಒಂದೇ ದೋಷವೇ ಈ ಅಸತ್ಯಗಳೆಲ್ಲಕ್ಕೂ ಮೂಲ. ಇಡೀ ಪ್ರಪಂಚವನ್ನೇ ಕಣ್ಣಲ್ಲಿಟ್ಟುಕೊಂಡು ಈ ವಿಷಯವನ್ನು ಇನ್ನೊಮ್ಮೆ ಪ್ರತಿಪಾದಿಸಬೇಕೆಂದು ನನಗೆ ಆಸೆಯಿದೆ."
"......ಅತ್ಯಂತ ಚೆನ್ನಾಗಿ ಬರೆದು ಅಂಥ ಒಳ್ಳೆಯದೇನನ್ನೂ ಹೇಳದಿರುವ ಕಲೆ ಇಂಗ್ಲೀಷ್ ಲೇಖಕರಿಗೆ ಚೆನ್ನಾಗಿ ಗೊತ್ತು. ಹೆಚ್ಚು ನೀರಿಲ್ಲದಿದ್ದರೂ ಝುಳುಝುಳು ಹರಿವ ಹಳ್ಳದ ಹಾಗೆ ಅವರ ಬರವಣಿಗೆ."
ಕನ್ನಡ ಓದುಗರಿಗೂ ಸಮೀಕ್ಷಾ ಪಟುಗಳಿಗೂ ಆಸಕ್ತಿ ಕೆರಳಿಸಬಲ್ಲ ಒಂದು ಸಮೀಕ್ಷೆಯನ್ನು ಈ ಟಿಪ್ಪಣಿಗಳೊಡನೆ ಗಮನಿಸಬಹುದು.
ಇದು ಸರ್ ಎಂವಿಯವರ ವೃತ್ತಿಜೀವನದ ನೆನಪುಗಳು. ಲೋಹಿಯಾ ಎಂವಿಯವರನ್ನು ಭೇಟಿ ಮಾಡಿದ್ದರು. ಈ ಸಮೀಕ್ಷೆ ಎಂವಿಯವರ ಪುಸ್ತಕದ ಮೊದಲ ಆವೃತ್ತಿ ಬಂದಾಗಲೇ ಪ್ರಕಟವಾಗಿದ್ದರೂ, ಕನ್ನಡಾನುವಾದ ಕೂಡ ಮೂವತ್ತು ಮೂವತ್ತೈದು ವರ್ಷಗಳಿಂದ ಲಭ್ಯವಾಗಿದ್ದರೂ, ಎಂವಿ ಕುರಿತಂತೆ ಕನ್ನಡದ ಯಾವ ಪುಸ್ತಕಗಳಲ್ಲೂ ಇಂತಹ ಬಹುಶ್ರುತ ಸಂವೇದನಾಶೀಲ ಸಮೀಕ್ಷೆಯ ಉಲ್ಲೇಖವಿಲ್ಲ.(ಸಮೀಕ್ಷೆಯ ಅನುವಾದ ಮುಂದಿನ ಸಾರಿ)
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 19,2008ರ ಸಂಚಿಕೆಯಲ್ಲಿ ಪ್ರಕಟಿತ)
ಇದು ಸರ್ ಎಂವಿಯವರ ವೃತ್ತಿಜೀವನದ ನೆನಪುಗಳು. ಲೋಹಿಯಾ ಎಂವಿಯವರನ್ನು ಭೇಟಿ ಮಾಡಿದ್ದರು. ಈ ಸಮೀಕ್ಷೆ ಎಂವಿಯವರ ಪುಸ್ತಕದ ಮೊದಲ ಆವೃತ್ತಿ ಬಂದಾಗಲೇ ಪ್ರಕಟವಾಗಿದ್ದರೂ, ಕನ್ನಡಾನುವಾದ ಕೂಡ ಮೂವತ್ತು ಮೂವತ್ತೈದು ವರ್ಷಗಳಿಂದ ಲಭ್ಯವಾಗಿದ್ದರೂ, ಎಂವಿ ಕುರಿತಂತೆ ಕನ್ನಡದ ಯಾವ ಪುಸ್ತಕಗಳಲ್ಲೂ ಇಂತಹ ಬಹುಶ್ರುತ ಸಂವೇದನಾಶೀಲ ಸಮೀಕ್ಷೆಯ ಉಲ್ಲೇಖವಿಲ್ಲ.(ಸಮೀಕ್ಷೆಯ ಅನುವಾದ ಮುಂದಿನ ಸಾರಿ)
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 19,2008ರ ಸಂಚಿಕೆಯಲ್ಲಿ ಪ್ರಕಟಿತ)
3 comments:
Very interesting to see K Satyanarayana in the Blog space.
The two articles are good. I presume we can look forward to see articles written for exclusively this blog. Vivek Shanbhag
Sir
Very happy to see you in the blogosphere.
Will be eagerly waiting to see new posts.
Guruprasad Kaginele
ಸರ್ ನಮಸ್ಕಾರ.
ಅಕಸ್ಮಾತ್ತಾಗಿ ನಿಮ್ಮ ಬ್ಲಾಗ್ ಕಣ್ಣಿಗೆ ಬಿತ್ತು.
ನಿಜಕ್ಕೂ ಖುಷಿಯಾಯಿತು. ಬ್ಲಾಗ್ ಲೋಕದಲ್ಲೂ
ನಿಮ್ಮ ಅಕ್ಷರಗಳನ್ನು ನೋಡಲು ಅವಕಾಶ
ಮಾಡಿಕೊಟ್ಟಿದ್ದಕ್ಕೆ ಥ್ಯಾಂಕ್ಸ್.
ಇನ್ನು ಮುಂದೆ ನಿಯಮಿತವಾಗಿ
ನಿಮ್ಮ ಬ್ಲಾಗ್ ಗಮನಿಸುವೆ.
-ವೆಂಕಟ್ರಮಣ ಗೌಡ
Post a Comment