Saturday, September 20, 2008

ಕವಿ ರಿಲ್ಕೆ ಕಂಡ ನಮ್ಮ ಕಿರಂ


ಸಾಂಸ್ಕೃತಿಕ ಲೋಕದ ಪೂರ್ವಪಕ್ಷ ಪ್ರವೀಣ

ಕಾವ್ಯದ ಸಮಗ್ರ ಮತ್ತು ಅಧಿಕೃತ ಓದುಗರು ಕರ್ನಾಟಕದಲ್ಲಿ ಯಾರು ಎಂಬ ಪ್ರಶ್ನೆ ಬಂದಾಗಲೆಲ್ಲ ಕುರ್ತಕೋಟಿ ಮತ್ತು ಅನಂತಮೂರ್ತಿಯವರ ಹೆಸರುಗಳ ಜೊತೆಯಲ್ಲೇ ಕಿರಂ ಹೆಸರು ಪ್ರಸ್ತಾಪಕ್ಕೆ ಬರುತ್ತದೆ. ಈ ಇಬ್ಬರು ಹಿರಿಯರಲ್ಲೂ ಇಲ್ಲದ ಒಂದು ವಿಶೇಷ ಶಕ್ತಿ ಕಿರಂ ನಾಗರಾಜರಲ್ಲಿ ಇದೆ. ಈ ಹಿರಿಯರಿಬ್ಬರು ಓದುಗರು, ಸೂಕ್ಷ್ಮ ವಿಮರ್ಶಕರು. ಆದರೆ ಕಿರಂ ವಿಶೇಷವಿರುವುದು ಕಾವ್ಯದೊಡನೆ ಇರುವ ಸಂಬಂಧದಲ್ಲಿ. ಕಾವ್ಯಮಂಡಲದ ಮಾಂಡಲೀಕರಾದ ಕಿರಂ ತಮಗೆ ಬೇಕಾದ ಕಾವ್ಯವನ್ನು ಬೇಕಾದಾಗ ಆವಾಹಿಸಿ ಮಂಡಲದೊಳಗೆ ದಿಗ್ಬಂಧನ ಹಾಕಿ ಕೂರಿಸಿ ತಮಗೆ ಬೇಕಾದಂತೆ ವರ್ತಿಸುವ ಹಾಗೆ ಮಾಡಬಲ್ಲರು. ಕೆಲವು ಕಾವ್ಯವನ್ನು ಭಕ್ತರ ರೀತಿಯಲ್ಲಿ ಆರ್ದ್ರವಾಗಿ ವಿನೀತವಾಗಿ ಬೇಡಿ ಪರಿತಪಿಸಬಲ್ಲರು. ಇನ್ನೂ ಕೆಲವು ರೀತಿಯ ಕಾವ್ಯಗಳನ್ನು ಸಖಿಯೊಬ್ಬಳು ಪ್ರಿಯಕರನ ಮೋಹಿಸುವಂತೆ, ಮುನಿಸಿನಿಂದ, ಕೆಣಕುವಿಕೆಯಿಂದ, ಪ್ರೀತಿಯಿಂದ, ಸ್ಪರ್ಶದಿಂದ ಒಳಗು ಮಾಡಿಕೊಳ್ಳುವರು. ಕಿರಂ ಮಂಡಲದಲ್ಲಿ ದಿಗ್ಬಂಧನದಲ್ಲಿ ಕೂತ ಕಾವ್ಯದ ಸಾಲುಗಳು, ಮಂಡಲದ ಆರಾಧನೆ - ಪೂಜೆ ಮುಂದುವರೆದಂತೆ ಹೊಸ ಹೊಸ ಕಾಣ್ಕೆ-ಅರ್ಥಗಳಿಂದ ಬೆಳಗುವುದನ್ನೂ, ಇಲ್ಲ ಕಿರಂ ಉತ್ಕಟವಾಗಿ ಬೆಳಗಿಸುವುದನ್ನು ಯಾರು ತಾನೇ ಕಂಡಿಲ್ಲ! ಮಾಂತ್ರಿಕ, ಭಕ್ತ, ಸಖಿ - ಈ ಮೂರೂ ಸ್ತರಗಳಲ್ಲಿ ಲೀಲಾಜಾಲವಾಗಿ ಓಡಾಡುತ್ತಾ ಕಾವ್ಯವನ್ನು ಕಿರಂ ಮೀಟುವ ರೀತಿಯನ್ನೂ ಯಾರಾದರೂ ಚಿತ್ರೀಕರಿಸಿ ದಾಖಲು ಮಾಡಿಕೊಳ್ಳಬೇಕು.

ಕಿರಂ ಓದು ಎಷ್ಟು ವ್ಯಾಪಕವಾದದ್ದು, ಆಳವಾದದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಕಿರಂರ ಎಷ್ಟೋ ಜನ ಸಹೋದ್ಯೋಗಿಗಳು ಸಮಕಾಲೀನರಲ್ಲಾದಂತೆ ಈ ಓದು ಒಣ ಜ್ಞಾನದರ್ಪವಾಗಲೀ, ಠೇಂಕಾರವಾಗಲೀ, ಪಾಂಡಿತ್ಯ ಪ್ರದರ್ಶನವಾಗಲೀ ಆಗಲಿಲ್ಲ. ಜನಪ್ರಿಯ ಮೇಷ್ಟ್ರಾಗಿದ್ದು ಕಿರಂ ಉಪದೇಶರತ್ನಿಯಾಗಲಿಲ್ಲ. ಕಿರಂರಲ್ಲಿ ಎಡೆಬಿಡದ ಓದುವಿಕೆ ಇರುವಂತೆ ನಿರಂತರವಾದ Unlearning ಕೂಡ ಇದೆ. ಈ Unlearningನ್ನು ಕಿರಂ ಸಾಧಿಸಿರುವುದಕ್ಕೆ ಎರಡು ಮುಖ್ಯ ಕಾರಣಗಳನ್ನು ಕೊಡಬಹುದು. ಒಂದು ಕಿರಂ ಸ್ವಭಾವದಲ್ಲೇ ಇರುವ ಇನ್ನಿಲ್ಲದ ಮುಗ್ಧತೆ ಮತ್ತು ಅಸಾಧಾರಣ ವಿನಯಶೀಲತೆ. ಇದು ಸ್ವಭಾವದ ಮಾತಾಯಿತು. ಇದಕ್ಕಿಂತ ಮುಖ್ಯವಾದದ್ದು ಕಿರಂರಿಗೇ ವಿಶಿಷ್ಟವಾದ ಪಠ್ಯಗಳ ಮರುಓದು (Rereading) ಪಠ್ಯವೊಂದರ ಮತ್ತೆ ಮತ್ತೆ ಎನ್ನುವಂತೆ ಕಿರಂ ಒಳಹೋಗುತ್ತಲೇ ಇರುವುದರಿಂದ ಪ್ರತಿ ಓದಿನ ಸಂದರ್ಭದಲ್ಲೂ ಒಟ್ಟಿಗೇ Learning ಮತ್ತು Unlearningನ್ನು ಕಿರಂ ಸಾಧಿಸುತ್ತಾರೆ. ಕಿರಂ ನೆನಪಿನ ಶಕ್ತಿ ಅಗಾಧವಾಗಿದ್ದು ಕೂಡ ಮತ್ತೆ ಮತ್ತೆ ಪಠ್ಯವನ್ನು ಮರುಪ್ರವೇಶಿಸುವುದರ ಮಹತ್ವವನ್ನು ನಾವು ಮರೆಯಬಾರದು. ಪಠ್ಯವೊಂದನ್ನು ಎಂದೋ ಓದಿದಾಗ ಸಿಕ್ಕಿದ ಭಾವ - ನೋಟ, ಇಲ್ಲಿ ಓದಿನ ನೆನಪಿಗೆ ನಾವು ಬದ್ಧವಾಗಿ ಬಿಟ್ಟರೆ ಕಲಿಯುವಿಕೆ ನಿಂತೇ ಹೋಗಿಬಿಡುತ್ತದೆ. ಕಾಲಾಂತರದಲ್ಲಿ ಪಠ್ಯವು ಕೂಡ ನಮ್ಮಂತೆ ಒಳಗೊಳಗೇ ಬೆಳೆದಿರುತ್ತದೆ. ಮಾಗಿರುತ್ತದೆ. ಹೀಗೆ ತಿಳಿಯಬೇಕಾದರೆ ಹಿಂದೆ ಕಲಿತದ್ದರ Unlearningಗೆ ನಾವು ಸಿದ್ಧರಾಗಬೇಕಾಗುತ್ತದೆ. ಇದರಿಂದ ಕಿರಂಗೆ ಒಂದು ಪಠ್ಯ ನೀಡುವ ಅರ್ಥದ ಬಗ್ಗೆ ಮಾತ್ರವೇ ತಲೆ ಕೆಡಿಸಿಕೊಳ್ಳದೆ, ಅದು ನೀಡುವ ಅನುಭವದ ಕಡೆಗೇ ಮುಖಮಾಡಲು ಸಾಧ್ಯವಾಗಿದೆ. ಕುರ್ತಕೋಟಿಯಂತಹವರ ವಿಶಾಲ ಓದು ನೆನಪಿನ ಭಾರದಿಂದ ಬಿಡುಗಡೆ ಪಡೆಯಲೇ ಇಲ್ಲ. ಎಸ್.ದಿವಾಕರರಂತವರ ಓದುಗಾರಿಕೆ, ಸಂವೇದನೆ-ಸೃಜನಶೀಲತೆಯಾಗಿ ಪರಿವರ್ತನೆಯಾಗಲೇ ಇಲ್ಲ. ಕೆ.ವಿ.ತಿರುಮಲೇಶರ ಈಚಿನ ಅಂಕಣ ಬರಹಗಳಲ್ಲಿ ಶ್ರೀಯುತರ ವಿಶಾಲವಾದ ಓದುವಿಕೆಯ ಜೊತೆಗೆ ಓದು, ಕೃತಿ ಮತ್ತು ಬದುಕಿನ ಬಗ್ಗೆ ಒಂದು ರೀತಿಯ ದಿಗ್ಭ್ರಮೆಯೂ ಇರುವುದರಿಂದ ಬರಹವು ಉಪದೇಶಾತ್ಮಕತೆ ಮತ್ತು ಮಾಹಿತಿಗಳಿಂದಾಚೆಗೆ ಸಂವಾದದ ಕಡೆಗೂ ಚಲಿಸುವುದನ್ನು ಗಮನಿಸಬಹುದು. ಕಿರಂ ಕಾವ್ಯಪ್ರೇಮವನ್ನು ಮಾತ್ರ ಕಲಿಯದೆ ಈ Unlearning ಗುಣವನ್ನು ಕೂಡ ನಾವೆಲ್ಲ ರೂಢಿಸಿಕೊಂಡರೆ ಎಷ್ಟು ಚೆನ್ನ.

ಈ ಹಿನ್ನೆಲೆಯಲ್ಲೇ ಕಿರಂಗೆ ಮೌಖಿಕ ಸಂಸ್ಕೃತಿ (oral culture) ಕಡೆಗೆ ಇರುವ ಒಲವನ್ನು ವಿಶ್ಲೇಷಿಸಬೇಕು. ಬರವಣಿಗೆಯ ತುಂಬಾ ಒಳ್ಳೆಯ ಮತ್ತು ತುಂಬಾ ಕೆಟ್ಟ ಗುಣವೆಂದರೆ ದಾಖಲಾಗುವ ಸ್ವಭಾವ. ಯಾವ ಭಾವ, ಯಾವ ವಿಚಾರವೂ ನಿರ್ದಿಷ್ಟವಲ್ಲ, ಅಂತಿಮವಲ್ಲ. ಪ್ರತಿ ಮರುಓದಿನಲ್ಲೂ ನಿರ್ಮಾಣವಾಗುವ ಭಾವ-ವಿಚಾರಗಳ ವಿನ್ಯಾಸವೇ ನಿಜವಾದದ್ದು ಎಂದು ನಂಬುವವರಿಗೆ ಬರವಣಿಗೆಯ ಮಿತಿಗಳು ಕೂಡ ಗೊತ್ತಿರುತ್ತವೆ. ಸಂಗೀತಗಾರನಿಗೆ ಪಠ್ಯವು ನಿರ್ದಿಷ್ಟವೆಂಬುದು ನಮ್ಮ ತಪ್ಪು ಕಲ್ಪನೆ. ಪ್ರತಿಸಲದ ಹಾಡುಗಾರಿಕೆಯಲ್ಲೂ, ಪ್ರತಿಸಲದ ಆಲಾಪನೆಯಲ್ಲೂ, ಪ್ರತಿ ವಿಳಂಬಿತ್‌ನಲ್ಲೂ ಪಠ್ಯಕ್ಕೆ ಹೊಸ ಜೀವ, ಹೊಸ ಭಾವ. ಕಿರಂ ಓದುಗಾರಿಕೆ, ಹಾಡುಗಾರಿಕೆಗೆ ತನ್ನನ್ನೇ ತೆತ್ತುಕೊಂಡ ಸಂಗೀತಗಾರನ ರೀತಿಯದು. ಈ ರೀತಿಯ ವೈಶಿಷ್ಟ್ಯವೆಂದರೆ ಓದುವಾಗ ತನ್ನೆಲ್ಲ ಒಳತೋಟಿಯೊಡನೆ ಓದಿ ಪಠ್ಯವನ್ನೇ ಉದ್ದೀಪಿಸುವುದು. ದ.ರಾ.ಬೇಂದ್ರೆ, ಗೋಪಾಲಕೃಷ್ಣ ಅಡಿಗರ ಎಷ್ಟೋ ಕವನಗಳ ಕಿರಂರ ಮರುಓದಿಗೆ ಸಾಕ್ಷಿಯಾಗಿರುವ ನಾನು ಪ್ರತಿ ಓದಿನಲ್ಲೂ ಕವನಗಳು ಹೊಸ ಅರ್ಥ, ಹೊಸ ಭಾವಗಳಲ್ಲಿ ಬೆಳಗಲು ಕಿರಂರ ಆವಾಹನೆಗೆ ಕಾಯುತ್ತಿರುವುದನ್ನು ಕಂಡು ಬೆರಗಾಗಿದ್ದೇನೆ. ಕಿರಂರ ಎರಡೂ ನಾಟಕಗಳು ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ - ಒಳತೋಟಿಯನ್ನೇ ಮೀಟುವುದನ್ನು, ಮೀಟಿದಾಗ ದಕ್ಕುವುದನ್ನೇ ಹಿಡಿಯಲು ಪ್ರಯತ್ನಿಸುತ್ತದೆಂದು ನನ್ನ ನೆನಪು. ಬರವಣಿಗೆ ವಿಪುಲವಾಗಿ, ಪ್ರವಾಹದೋಪಾದಿಯಲ್ಲಿ ಬರುತ್ತಿರುವ ಕನ್ನಡದ ಇಂದಿನ ಸಂದರ್ಭದಲ್ಲಿ ಕಿರಂರ ಮೌಖಿಕ ಸಂಸ್ಕೃತಿಯ ಒಲವು - ನಂಬಿಕೆಗಳ ಹಿಂದಿರುವ ಪ್ರೇರಣೆಗಳನ್ನು ಕುರಿತು ನಾವು ಗಂಭೀರವಾಗಿ ಯೋಚಿಸಬೇಕಿದೆ. ಅಕ್ಷರ ಜ್ಞಾನ ಮತ್ತು ಲಿಖಿತ ಸಂಸ್ಕೃತಿ - ಇವೆರಡನ್ನೂ ಕೂಡ ಹೆಚ್ಚಾಗಿ ಆಶ್ರಯಿಸದೆಯೂ ಪರಂಪರೆ, ತಿಳಿವಳಿಕೆ, ಜ್ಞಾನದ ವೃತ್ತಿ ಕೌಶಲ್ಯಗಳ ಸಾತತ್ಯವನ್ನು ಬಹುಕಾಲ ಕಾಪಾಡಿಕೊಂಡು ಬಂದ ನಮ್ಮ ಜೀವನ ಶೈಲಿಯ ಬಗ್ಗೆಯೂ ಕಿರಂರ ಹಿನ್ನೆಲೆಯಲ್ಲಿ ಯೋಚಿಸಬಹುದು.

ಕಾವ್ಯ ಮಂಡಲವೆಂಬುದು ಕಿರಂ ತಾವೇ ತಮ್ಮ ಸಂಸ್ಥೆಗೆ ಕೊಟ್ಟುಕೊಂಡಿರುವ ಹೆಸರು. ಆದರೆ ಕಿರಂರ ಜೀವನ ಶೈಲಿ ಚಾವಡಿಯಲ್ಲಿ ಹರಟೆ ಹೊಡೆಯುವವರ ಯಜಮಾನನ ಗತ್ತು, ಬಿಡುಬೀಸುತನ, ದರ್ಪಕ್ಕೆ ಹತ್ತಿರವಾದದ್ದು. ಕಾವ್ಯಮಂಡಲದ ನಿರ್ದಿಷ್ಟ ಮತ್ತು ಪೂಜನೀಯ ಆವರಣಕ್ಕಿಂತ ಚಾವಡಿಯ ವೈಶಾಲ್ಯ ಮತ್ತು ಅನೌಪಚಾರಿಕತೆಯೇ ಕಿರಂಗೆ ಹತ್ತಿರವಾದದ್ದು. ಕಿರಂ ನೋಡಿದಾಗಲೆಲ್ಲ ಮಂಡಲದ ಆಚಾರ್ಯ, ಅವಧಾನಿಗಳಿಗಿಂತ ಹೆಚ್ಚಾಗಿ ನೆನಪಿಗೆ ಬರುವುದು ಕಾವ್ಯ ಪ್ರಚಾರ-ಪ್ರಸಾರಕ್ಕೇ ತಮ್ಮನ್ನು ತೆತ್ತುಕೊಂಡು ಬದುಕುತ್ತಿದ್ದ ಕೀರ್ತನಕಾರರು, ತಂಬೂರಿದಾಸರು (BAROS) ಈ ಕಾರಣಕ್ಕೇ.

ಕಿರಂರಲ್ಲಿರುವ ಇನ್ನೊಂದು ಗುಣವನ್ನು ನನಗೆ ಅನುಕರಿಸಲು ಇಷ್ಟ. ಆದರೆ ಅಂತಹ ಅನುಕರಣೆಗೆ ಬೇಕಾದ ಸ್ವಭಾವ-ಪ್ರತಿಭೆ ನನ್ನದಲ್ಲ. ಮೇಲುನೋಟಕ್ಕೆ ಬಂಡುಕೋರನಾಗಿ, ಅರಾಜ್ಯ ಜೀವನಶೈಲಿಯ ಪ್ರತಿಪಾದಕನಾಗಿ ಕಾಣುವ ಕಿರಂರಲ್ಲಿರುವ ಆಂತರಿಕ ಸಂಯೋಜನೆ, ಶಿಸ್ತು ತುಂಬಾ ಅಪರೂಪದ್ದು. ಪುಸ್ತಕಗಳನ್ನು ಕ್ರಮಬದ್ಧವಾಗಿಯೂ, ಶಿಸ್ತಾಗಿಯೂ ಜೋಡಿಸಿಕೊಂಡು, ಬೇಕೆಂದಾಗ ವಿಚಾರಗಳನ್ನು ಅಡಿಟಿಪ್ಪಣಿಗಳ ಮೂಲಕ ಉಲ್ಲೇಖಿಸುವ ಶಿಸ್ತು ಕಿರಂದಲ್ಲ. ಎಲ್ಲ ತಿಳುವಳಿಕೆ, ವಿಚಾರಗಳು ಆಂತರಿಕವಾಗಿ ಸಂಯೋಜನೆಗೊಂಡಿರುವ ರೀತಿ ಕಿರಂರ ವಾಕ್‌ಪ್ರವಾಹದಲ್ಲಿ ಯಾರಿಗಾದರೂ ಗೋಚರಿಸುತ್ತದೆ. ನಮ್ಮಲ್ಲಿ ಕ್ಲೀಷೆಯಾಗಿರುವ ಮಾತಿನ ನೆರವಿನಿಂದಲೇ ಹೇಳುವುದಾದರೆ ಕಿರಂರ ಪ್ರತಿಭೆ ಸಂಶ್ಲೇಷಣಾ ರೀತಿಯದು, ವಿಶ್ಲೇಷಣಾತ್ಮಕವಾದದ್ದಲ್ಲ.

ಪ್ರಸಿದ್ಧ ಜರ್ಮನ್ ಕವಿ ರೈನ್‌‌ರ್ ಮರಿಯಾ ರಿಲ್ಕೆ ಬರೆದಿರುವ ಒಂದೇ ಒಂದು ಕಾದಂಬರಿ `ಮಾಲ್ಟ್ ಅಲೌಂಡ್ಸ್ ಬ್ರಿಗ್ಗನ ಟಿಪ್ಪಣಿ ಪುಸ್ತಕ' ಈಚೆಗೆ ಕೆ.ವಿ.ತಿರುಮಲೇಶರಿಂದ ಕನ್ನಡದಲ್ಲಿ ಅನುವಾದಗೊಂಡು ಪ್ರಕಟವಾಗಿದೆ. (ಅಭಿನವ ಪ್ರಕಾಶನ ಬೆಂಗಳೂರು 2008). ರಿಲ್ಕೆ ಕಿರಂರನ್ನು ಕಂಡು ಭೇಟಿ ಮಾಡಿ, ಸಾಕಷ್ಟು ಒಡನಾಡಿ ಈ ಕೆಳಗಿನ ಸಾಲುಗಳನ್ನು ಬರೆದಂತಿದೆ.
ರಾಷ್ಟ್ರೀಯ ಗ್ರಂಥಾಲಯ
ಇಲ್ಲಿ ನಾನು ಕೂತಿದ್ದೇನೆ. ಒಬ್ಬ ಕವಿಯನ್ನು ಓದುತ್ತ. ಓದುವ ಕೊಠಡಿಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆದರೆ ನನಗವರ ಅರಿವಿಲ್ಲ. ಅವರು ಗ್ರಂಥಗಳ ಒಳಗಿದ್ದಾರೆ. ಕೆಲವು ಸಲ ಅವರು ಆಚೀಚೆ ಸರಿಯುತ್ತಾರೆ. ಪುಟಗಳ ಒಳಗಡೆ, ಎರಡು ಕನಸುಗಳ ನಡುವೆ ಮಗ್ಗಲು ಬದಲಿಸುವ ನಿದ್ರಾಧೀನರಂತೆ. ಆಹಾ! ಓದುವವರ ಮಧ್ಯೆ ಇರುವುದೆಂದರೆ ಅದೆಷ್ಟು ಸೊಗಸು. ಜನ ಯಾವಾಗಲೂ ಯಾಕೆ ಹಾಗಿಲ್ಲ?
****
ಮತ್ತು ನಾನಿಲ್ಲಿ ಕವಿಯ ಜೊತೆ ಕೂತಿದ್ದೇನೆ. ಎಂಥ ಅದೃಷ್ಟ ನನ್ನದು. ಸದ್ಯ ಇಲ್ಲಿ ಮುನ್ನೂರು ಮಂದಿ ಇದ್ದಾರು. ಎಲ್ಲರೂ ಓದುವವರೇ. ಆದರೆ ಪ್ರತಿಯೊಬ್ಬನಿಗೂ ಒಬ್ಬ ಕವಿಯಿರಬೇಕೆಂದರೆ ಅಸಾಧ್ಯ. (ಅವರಿಗೇನಿದೆಯೋ ದೇವರಿಗೇ ವೇದ್ಯ). ಮುನ್ನೂರು ಮಂದಿ ಕವಿಗಳಿಲ್ಲ. ಆದರೆ ಯೋಚಿಸಿ ನೋಡಿ, ಬಹುಶಃ ಈ ಓದುಗರಲ್ಲೆಲ್ಲಾ ಅತ್ಯಂತ ದೈನೇಸಿಯೂ ಹಾಗೂ ವಿದೇಶಿಯನೂ ಆದ ನನಗೆ ದೈವ ಏನು ಬಗೆದಿದೆ ಎಂಬುದನ್ನು. ನನಗೊಬ್ಬ ಕವಿಯಿದ್ದಾನೆ. ನಾನು ದರಿದ್ರನಾಗಿದ್ದೂ ನಾನು ದಿನಂಪ್ರತಿ ತೊಡುವ ಸೂಟು ಕೆಲವು ಕಡೆ ತೇಪೆಯಾಗಿರಲು ತೊಡಗಿದ್ದರೂ ಮತ್ತು ಕೆಲವು ವಿಧಗಳಲ್ಲಿ ನನ್ನ ಶೂಗಳು ಖಂಡನಾತೀತವಾಗಿರದೆ ಇದ್ದರೂ.' (ಪುಟ 26-27).

(ದಿನಾಂಕ 31ಆಗಸ್ಟ್ 2008ರ ಸಾಪ್ತಾಹಿಕ ಪ್ರಭ (ಕನ್ನಡಪ್ರಭದ ಭಾನುವಾರದ ಪುರವಣಿ)ದಲ್ಲಿ ಪ್ರಕಟಿತ.)

No comments: