ಕನ್ನಡದ ಓದು ಬಹಳ ವರ್ಷಗಳಿಂದ ಟಾಲ್ಸ್ಟಾಯ್ನನ್ನ ಸಂಸ್ಕೃತಿಯ ಒಳಗಿನವನನ್ನಾಗಿಯೇ ಸ್ವೀಕರಿಸಿದ. ಈ ಸ್ವೀಕಾರ 1934ರಲ್ಲಿ ಎಲ್.ಗುಂಡಪ್ಪನವರ ಟಾಲ್ಸ್ಟಾಯ್ ಕಥೆಗಳ ಕನ್ನಡಾನುವಾದದಿಂದ ಪ್ರಾರಂಭವಾಗುತ್ತದೆ. ಕುವೆಂಪು ಮಹಾ ಕಾದಂಬರಿಗಳ ಸ್ವರೂಪದ ಹಿಂದೆ ಟಾಲ್ಸ್ಟಾಯ್ ಎರಡೂ ಕಾದಂಬರಿಗಳ ಸ್ವರೂಪದ ಪ್ರಭಾವವಿದೆ. ಕುವೆಂಪುವಿನಲ್ಲಿ ಕಾಣುವ ಬೇಟೆ ಪ್ರಸಂಗಗಳು, ಮಗುವಿಗೆ ಮೊಲೆಯ ಹಾಲೂಡಿಸುವ ಪ್ರಸಂಗಗಳು ಟಾಲ್ಸ್ಟಾಯ್ ಕಾದಂಬರಿಗಳಲ್ಲೂ ಇವೆ. ಮಾಸ್ತಿ ತಮ್ಮ ಚಿಕವೀರ ರಾಜೇಂದ್ರ ಕಾದಂಬರಿ ಬರವಣಿಗೆಯ ಗುಣಮಟ್ಟದ ದೃಷ್ಟಿಯಿಂದ ಟಾಲ್‌ಸ್ಟಾಯ್‌ನ War and Peaceಗಿಂತ ಉತ್ತಮವೆಂದು ನಂಬಿದ್ದರು. "ಟಾಲ್ಸ್ಟಾಯ್ ಮಹರ್ಷಿಯ ಭೂರ್ಜ ವೃಕ್ಷಗಳು" ಎಂಬ ಪ್ರಸಿದ್ಧ ಕತೆಯೂ ಇದೆ. ಭೀಮಸೇನ ಜೋಶಿಯವರ ತಂದೆ ಗುರುರಾಜ ಜೋಶಿಯವರು "Anna Karenina" ಕಾದಂಬರಿಯನ್ನು "ಪ್ರೇಮಾಹುತಿ" ಎಂದು ಕನ್ನಡೀಕರಿಸಿದ್ದರು. ಕುವೆಂಪು - ಸೂಚನೆ - ಮಾರ್ಗದರ್ಶನದ ಮೇಲೆ ದೇಜಗೌ ಟಾಲ್ಸ್ಟಾಯ್ರ ಎರಡೂ ಕಾದಂಬರಿಗಳನ್ನು ಕುವೆಂಪು ನುಡಿಗಟ್ಟಿನಲ್ಲೇ ಅನುವಾದಿಸಿದರು. ಟಿ.ಪಿ. ಅಶೋಕ "ಫಾದರ್ ಸೆರ್ಗಿಯಸ್", ಜಿ.ಎನ್.ರಂಗನಾಥರಾವ್ ಟಾಲ್ಸ್ಟಾಯ್ ನೀಳ್ಗತೆಗಳು, ಓ.ಎಲ್.ನಾಗಭೂಷಣಸ್ವಾಮಿ - ಟಾಲ್ಸ್ಟಾಯ್ ನೀಳ್ಗತೆಗಳು - ಹೀಗೇ ಈ ಪರಂಪರೆ ಮುಂದುವರೆಯುತ್ತಲೇ ಇದೆ. ಓ.ಎಲ್.ಎನ್. War and Peace ಅನುವಾದ ಮುಗಿಸಿದ್ದರೆ, ಎಚ್.ಎಸ್.ರಾಘವೇಂದ್ರರಾವ್ "Anna Karenina"ದ ಅನುವಾದವನ್ನು ಮುಗಿಸುತ್ತಿದ್ದಾರೆ. ಪಿ.ಲಂಕೇಶ್ ಕೆಲವು ಕತೆಗಳನ್ನು ರೂಪಾಂತರಿಸಿದ್ದಾರೆ. ಬಹು ಹಿಂದೆಯೇ ಕತೆಗಾರ ಆನಂದರು ಟಾಲ್‌ಸ್ಟಾಯ್‌ನ ಆತ್ಮಕತೆಯನ್ನು ಕನ್ನಡಕ್ಕೆ ತಂದಿದ್ದರು. ಈ ಎಲ್ಲ ಬರವಣಿಗೆಗಳಿಂದಾಗಿಯೂ ಟಾಲ್‌ಸ್ಟಾಯ್‌ನ ಪ್ರಸಿದ್ಧ ಕತೆಯನ್ನು ಮಾಸ್ತಿಯವರ ಕತೆಯೊಡನೆ ಒಟ್ಟಾಗಿ ಓದಲು ನನಗೆ ಪ್ರೇರಣೆ ಸಿಕ್ಕಿರಬಹುದು.
ಎರಡೂ ಕತೆಗಳು ಸಾವನ್ನು ಕುರಿತದ್ದೇ. ಆ ಕಾರಣಕ್ಕೇ ಬದುಕನ್ನು ಕುರಿತದ್ದು ಕೂಡ. ಸಾವನ್ನು ಒಪ್ಪಿಕೊಳ್ಳುವ, ಗೆಲ್ಲುವ, ವಿವರಿಸಿಕೊಳ್ಳುವ ಪ್ರಯತ್ನದಲ್ಲಿ ಎರಡು ಕತೆಗಳಲ್ಲಿ ಬದುಕನ್ನು ಕುರಿತ ದರ್ಶನವಿದೆ. ಹೀಗಾಗಿ ಇವುಗಳ ಜೊತೆ ಓದು ತಪ್ಪಿಲ್ಲದೆ ಇರಬಹುದೆಂದು ನನ್ನ ಭಾವನೆ.
ಇವಾನ್ ಇಲಿಚ್ ಕತೆಯನ್ನು ಟಾಲ್ಸ್ಟಾಯ್ 1884-1886ರ ಕಾಲಾವಧಿಯಲ್ಲಿ ಬರೆದರು. ಈ ಹೊತ್ತಿಗಾಗಲೇ ಇವರ ಎರಡು ಮಹಾ ಕಾದಂಬರಿಗಳು ಪ್ರಕಟವಾಗಿದ್ದವು. Anna ಕಾದಂಬರಿ ಬರೆದ ಏಳೆಂಟು ವರ್ಷಗಳ ನಂತರವೂ ಅವರು ಮತ್ತೆ ಸೃಜನಶೀಲ ಕಾದಂಬರಿ ರಚನೆಗೆ ಕೈಹಾಕಿರಲಿಲ್ಲ. ಮೇಲಾಗಿ ಟಾಲ್ಸ್ಟಾಯ್ ತಮ್ಮ ಬದುಕಿನ ಈ ಘಟ್ಟದಲ್ಲಿ ಸಾಹಿತ್ಯ - ಕಲೆಯ ಉದ್ದೇಶಗಳ ಕುರಿತಂತೆ ಬೇರೆಯೆ ರೀತಿಯಲ್ಲಿ ಯೋಚಿಸುತ್ತಿದ್ದರು. ಜೀವನದಲ್ಲಿ ಧರ್ಮ, ನೀತಿ, ಪ್ರೀತಿ, ದೈವಿಕತೆ ಇವುಗಳ ಸ್ಥಾನಮಾನವನ್ನು ಕುರಿತು ಚರ್ಚಿಸುವಂತಹ ನೀತಿ-ಧಾರ್ಮಿಕ ಕತೆಗಳು, ಲೇಖನಗಳ ಕಡೆಗೇ ಹೆಚ್ಚಾಗುತ್ತಿತ್ತು. ಆತ್ಮ ಜಿಜ್ಞಾಸೆ, ಒಳತೋಟಿ, ಆತ್ಮಪರೀಕ್ಷೆಗಳು ತೀವ್ರವಾಗಿದ್ದ ಬದುಕಿನ ಸಂದರ್ಭದಲ್ಲಿ ತನ್ನ ಜೀವನದ ಪರಮೋದ್ದೇಶವೇನು, ತನ್ನ ಜೀವನ ಸಾರ್ಥಕವಾಗಿದೆಯೇ ಇಲ್ಲವೇ ಎಂಬ ತಹತಹದಲ್ಲಿ ಬರೆದ ಘಟ್ಟದ ನೀಳ್ಗತೆಯಲ್ಲಿ ಮುಖ್ಯವಾದದ್ದು - ಇವಾನ್ ಇಲಿಚ್.
ಸಾಮಾಜಿಕವಾಗಿ, ಸಾಂಸಾರಿಕವಾಗಿ ಯಶಸ್ಸನ್ನು ಕಂಡಿದ್ದೇನೆಂದು ಭಾವಿಸಿದ್ದ ನ್ಯಾಯಾಂಗ ಇಲಾಖೆಯ ಅಧಿಕಾರಿಯೊಬ್ಬನ ಕೊನೆಯ ದಿನಗಳ ಕತೆ ಇಲಿಚ್. ಒಟ್ಟಾರೆಯಾಗಿ ಇಲಿಚ್ನ ಜೀವನ ವಿಫಲವಾಗಿತ್ತೆಂಬ ಧ್ವನಿಯಿಂದಲೇ ಕತೆ ಪ್ರಾರಂಭವಾಗುತ್ತದೆ. Appalling ಎಂಬ ಪದದಿಂದಲೇ ಕತೆ ಪ್ರಾರಂಭ. ಈ ಪದ ಈ ಕತೆಯಲ್ಲು Father Sergius ಕತೆಯಲ್ಲು ಮತ್ತೆ ಮತ್ತೆ ಎದುರಾಗುತ್ತದೆ. ಈ ಪದದ ಅರ್ಥವನ್ನು ಮೂಡಿಸುವಂತಹ Befell, Dismal, Aggravated ಇಂತಹ ಪದಗಳು ಕತೆಯುದ್ದಕ್ಕೂ ಎದುರಾಗುತ್ತವೆ. ಇಂತಹ ಪದಗಳಿಂದ ಮಾತ್ರ ವರ್ಣಿಸಲು ಸಾಧ್ಯವಿರುವ ಜೀವನ ನಡೆಸಿರುವ ಇಲಿಚ್ ತನ್ನ ದೇಹದ ಮಿತಿಯನ್ನು, ಕಾಯಿಲೆಯನ್ನು, ರೋಗರುಜಿನವನ್ನು ಕೂಡ ಪ್ರಾಮಾಣಿಕವಾಗಿ ಒಪ್ಪಲಾರ, ಎದುರಿಸಲಾರ. ತನ್ನ ದೇಹ, ತನ್ನ ರೋಗದ ಬಗ್ಗೆ ಕೂಡ ಆತನದು ಭಯಭೀತ, ಭ್ರಮಾದಿತ ಸ್ಥಿತಿ. ಸೋರಿಹೋಗುತ್ತಿರುವ ಜೀವನ, ಆರಿಹೋಗುತ್ತಿರುವ ಸಾಂಸಾರಿಕ-ಸಾಮಾಜಿಕ ಸಂಬಂಧಗಳನ್ನು ಕಂಡು, ತಿಳಿದು ಕೂಡ ಆತ ಭಯಭೀತ. ಸಾವಿನ ಭಯವಿದೆ ಆತನಿಗೆ. ಆದರೆ ಮೃತ್ಯುಪ್ರಜ್ಞೆಯ ಅರಿವಿನಿಂದ ಮೂಡಿಬರುವ ತಿಳುವಳಿಕೆ, ಸಮಾಧನವಿಲ್ಲ. ಇಡೀ ಬದುಕೆ `ನಿಜ'ದಿಂದ ದೂರ ಬಂದು ನಡೆಸಿದ ಘಟನಾವಳಿಗಳ ಸರಮಾಲೆಯಾಗಿ ಕಾಣುತ್ತದೆ. ಬಾಲ್ಯಜೀವನದ ದಿನಗಳು, ಸಂಬಂಧಗಳು ಮಾತ್ರ ನಿಜವಾಗಿದ್ದವು ಎನಿಸುತ್ತದೆ. ಟಾಲ್ಸ್ಟಾಯ್ ಪ್ರಕಾರ ಇದಕ್ಕೆಲ್ಲ ಇಲಿಚ್ನ ಜೀವನ ಶೈಲಿಯ ಜೊತೆಗೆ ಆತನಲ್ಲಿ ದೈವದ ಅಸ್ತಿತ್ವದಲ್ಲಿ ನಂಬುಗೆ ಇಲ್ಲದೆ ಹೋದದ್ದು ಕೂಡ ಕಾರಣ. ಇದಕ್ಕಿಂತ ಮುಖ್ಯವಾಗಿ ಇಲಿಚ್ ಬದುಕಿನುದ್ದಕ್ಕು ಮಾತಿನ ಧ್ವನಿ (Voice of Speaking)ಯನ್ನ ಕೇಳಿಸಿಕೊಳ್ಳುತ್ತಾ ಬಂದವನು, ಆತ್ಮದ ಧ್ವನಿ (Voice of Soul)ಯನ್ನಲ್ಲ. ಇಂತಹ ಇಲಿಚ್ ನಿಜದಿಂದ ದೂರಾಗಿ ತಾನು ನಡೆಸಿದ ತನ್ನ ಜೀವನದ ಬಗ್ಗೆ ನಿಜವನ್ನು ತಿಳಿದುಕೊಳ್ಳುವುದು, ಒಪ್ಪಿಕೊಳ್ಳುವುದು, ಸಾವನ್ನು ಕೂಡ ಸಾವಿನ ಭಯದಿಂದ ಗೆಲ್ಲುವುದು - ಈ ದಿಕ್ಕಿನಲ್ಲಿ ನಡೆಸಿದ ಪಯಣವನ್ನು ಕತೆ ನಮ್ಮದೆ ಪಯಣವೆನ್ನುವಂತೆ ನಮಗೆ ಸಾಕ್ಷಾತ್ಕಾರ ಮಾಡಿಕೊಡುತ್ತದೆ. ಸಾರ್ಥಕ ಜೀವನವೆಂದರೇನು ಎಂಬುದರ ಕಲ್ಪನೆ, ವಿಫಲ ಜೀವನದ ಚಿತ್ರಣವನ್ನು ಓದುವುದರ ಮೂಲಕ ನಮಗೆ ತಿಳಿಯುತ್ತದೆ. ತನ್ನ ಒಳತೋಟಿಯನ್ನು ಬರವಣಿಗೆಯನ್ನಾಗಿ ಪರಿವರ್ತಿಸುತ್ತಿದ್ದ ಟಾಲ್ಸ್ಟಾಯ್ ಈ ಕತೆಯ ನಂತರ ಬರೆದ ಕತೆ ಬರವಣಿಗೆಗಳಲ್ಲೆಲ್ಲ ಜೀವನದ ಸಾರ್ಥಕತೆಯ ಬಗ್ಗೆ ಜಿಜ್ಞಾಸೆ ಮುಂದುವರಿಯುತ್ತದೆ. ಒಟ್ಟಾರೆಯಾಗಿ ಆತನ ನಿಲುವು ನೀತಿಪರ-ಧಾರ್ಮಿಕ ಬರವಣಿಗೆ, ಸಸ್ಯಾಹಾರ, ಅಹಿಂಸೆ, ರಾಜ್ಯಾಧಿಕಾರವನ್ನು ವಿರೋಧಿಸುವುದು - ಈ ದಿಕ್ಕಿನಲ್ಲೇ ಸಾಗುತ್ತದೆ. ಮೊದಲೇ ಹೇಳಿದ ಹಾಗೆ Anna ಕಾದಂಬರಿ ಬರೆದ ಏಳೆಂಟು ವರ್ಷಗಳ ನಂತರ ಬರೆದ ನೀಳ್ಗತೆ ಇದು. ಈ ಕಾಲಾವಧಿಯಲ್ಲಿ ತತ್ವಶಾಸ್ತ್ರವನ್ನು ಬಹಳವಾಗಿ ಓದುತ್ತಿದ್ದ ಟಾಲ್‌ಸ್ಟಾಯ್‌ನ ದಿನಚರಿಯ ನೆರವಿನಿಂದ ಕೆಲವು ಉಲ್ಲೇಖಗಳನ್ನು, ಟಾಲ್‌ಸ್ಟಾಯ್‌ನ ಜೀವನ ಚರಿತ್ರಕಾರರು ಗುರುತಿಸಿದ್ದಾರೆ. ಇಲಿಚ್ ಕತೆಯ ಹಿಂದಿರುವ ಒಳತೋಟಿಯನ್ನು ಸ್ಪಷ್ಟ ಮಾಡಿಕೊಳ್ಳಲು ಇವು ನೆರವಾಗುವುದರಿಂದ ಕೆಲವನ್ನು ಇಲ್ಲಿ ಸೂಚಿಸುತ್ತಿದ್ದೇನೆ.
The life of body is an Evil and lie. And that is why we should desire its destruction as a blessiing.
- Socrates
Man will die and nothing will remain of him-Solomon
We must free ourselves from life, from all possibilities of life-Buddha
ಮಾಸ್ತಿಯವರ "ಮಂತ್ರೋದಯ" ಕತೆ ಈಶಾವ್ಯಾಸ ಉಪನಿಷತ್‌ನ ರಚನೆಗೆ ಕಾರಣನಾದ ವಾಮದೇವ ದ್ವೈಪಾಯನನ ಜೀವನ ಶೈಲಿ-ದರ್ಶನವನ್ನು ಕುರಿತದ್ದು. ಕತೆಯ ಶೀರ್ಷಿಕೆಯ ಜೊತೆಯೇ ಆವರಣದಲ್ಲಿ "ಕರ್ಮಯೋಗದ ಕೊನೆಯ ದಿನ" ಎಂದು ಸೂಚಿಸಲಾಗಿದೆ. ಕತೆಯ ಮೊದಲ ವಾಕ್ಯವೇ ಹೀಗಿದೆ.
"ಮಹರ್ಷಿ ವಾಮದೇವ ದ್ವೈಪಾಯನ ಅರುಣೇಯ ಆ ದಿನ ನೂರು ವರ್ಷದ ಬಾಳನ್ನು ಪೂರ್ಣ ಮಾಡುವರೆಂದು"
ಸೇವೆ, ತ್ಯಾಗ, ಆತ್ಮಜ್ಞಾನ, ಪ್ರಕೃತಿಯೊಡನೆ ತಾದ್ಯಾತ್ಮ-ಇದೆಲ್ಲವನ್ನು ತುಂಬಿಕೊಂಡವನು ಜೀವನವನ್ನು, ಹಾಗಾಗಿ ಸಾವನ್ನೂ ಹೀಗೆ ಸ್ವೀಕರಿಸುತ್ತಾನೆಯೆಂಬುದು ಕತೆಯ ತಿರುಳು. ಈ ಕತೆಯಲ್ಲಿ ಬರುವ ಪ್ರಕೃತಿಯ ಉಲ್ಲಾಸ ತುಂಬಿದ ವಿವರಗಳಾಗಲೀ, ಸಸ್ಯಲೋಕದ, ಸಣ್ಣ ಪುಟ್ಟ ಪ್ರಾಣಿಗಳ ವಿವರಗಳಾಗಲೀ ಆತ್ಮ ಜಿಜ್ಞಾಸೆಯಿಂದ ತುಂಬಿದ ಇಲಿಚ್ ಕತೆಯಲ್ಲಿ ಇಲ್ಲವೆಂಬುದನ್ನು ಗಮನಿಸಬೇಕು. ಸೂರ್‍ಯ, ಚಂದ್ರರು ಕೂಡ ಈ ಕತೆಯ ಭಾಗ. ತುಂಬಿದ ಸಾರ್ಥಕ ಜೀವನ ನಡೆಸಿದ ದ್ವೈಪಾಯನಿಗೆ ಸಾವಿನ ಭಯವೇ ಇಲ್ಲ. ತಾನು ಕಂಡದ್ದನ್ನೂ, ಬದುಕಿದ್ದನ್ನೂ ಸ್ಮರಿಸುತ್ತಲೇ ಜೀವನದ ಕೊನೆಯನ್ನು ಒಪ್ಪುವ ಈ ದರ್ಶನದಲ್ಲಿ ದ್ವೈಪಾಯನನ ಕೊನೆ ಕೊನೆಯ ಮಾತುಗಳು ಹೀಗಿವೆ.
"ಕೃತುವನ್ನು ಸ್ಮರಿಸು, ಕೃತವನ್ನು ಸ್ಮರಿಸು, ಧ್ಯೇಯವನ್ನು ಸ್ಮರಿಸು. ಸಾಧಿಸಿದ್ದನ್ನು ಸ್ಮರಿಸು"
"ಕೃತು ಯಾವುದು"
"ನೆಲವೆಲ್ಲ ನಂದನವನವಾಗಬೇಕು, ಇದರಂತೆ ಒಳಬಾಳು ಸುಂದರ ಸಫಲ ಆಗಬೇಕು"
ಸಾವನ್ನು ಒಪ್ಪುವ, ಗೆಲ್ಲುವ, ಸ್ವೀಕರಿಸುವ ಈ ದರ್ಶನದಲ್ಲಿ ಜೀವನದ ಸೃಷ್ಟಿಯ ನಿತ್ಯನೂತನತೆಯನ್ನೂ ಚರಾಚರ ಸ್ವಭಾವವನ್ನು ನಂಬಿದ ಧೋರಣೆಯು ತುಂಬಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಉಪನಿಷತ್‌ಗಳಲ್ಲೇ ತುಂಬ ಕಿರಿದಾದ, ಕೇವಲ ಹದಿನೆಂಟು ಶ್ಲೋಕಗಳನ್ನು ಮಾತ್ರ ಹೊಂದಿದ ಈ ಉಪನಿಷತ್ ದರ್ಶನವನ್ನೇ ಏಕೆ ತಮ್ಮ ಕತೆಯಲ್ಲಿ ಮತ್ತೆ ಪೃಥಕ್ಕರಿಸಲು ಮಾಸ್ತಿ ಆಯ್ಕೆ ಮಾಡಿಕೊಂಡರು? ಕತೆಯ ವಿವರಗಳು ಸೂಚಿಸುವಂತೆ ಉಪನಿಷತ್‌ನ ಈ ದರ್ಶನವೆಲ್ಲ ದ್ವೈಪಾಯನನ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿದೆ.
1. ಪೂರ್ಣತೆಯನ್ನು ಒಪ್ಪಿಕೊಳ್ಳುವುದು, ಪೂರ್ಣವಾಗಿ ಬಾಳುವುದೆಂದರೆ ಜಗತ್ತೆಂಬ ವಸ್ತು ಮತ್ತು ಬದುಕೆಂಬುದರ ಹಿಂದಿರುವ ತತ್ವವನ್ನು ಒಪ್ಪಿಕೊಳ್ಳುವುದು.
2. ಜಗತ್ತನ್ನು, ಬದುಕನ್ನು, ತ್ಯಾಗದಿಂದ, ಸೇವೆಯಿಂದ ಒಳಗು ಮಾಡಿಕೊಳ್ಳಲು ಪ್ರಯತ್ನಿಸುವುದು. ("ತೇನ ತ್ಯಕ್ತೇನ ಭುಂಜೀಥಾ')
3. ತಿಳಿಯುವುದು ಎಂದರೆ ಬೌದ್ಧಿಕವಾಗಿ ತಿಳಿಯುವುದಲ್ಲ. ಅನುಭವದಿಂದ ತಿಳಿಯುವುದು. ಎಲ್ಲ ಜೀವರಾಶಿಗಳಲ್ಲಿಯೂ ಜೀವನದ ಹಿಂದಿರುವ, ಸತ್ಯವನ್ನು ತಿಳಿದಾಗ ಅನುಭವ ಅನುಭಾವವಾಗುತ್ತದೆ. ಕೇವಲ ಅನುಭವದಿಂದ ಏನೂ ಪ್ರಯೋಜನವಾಗದು.
ಈ ಉಪನಿಷತ್‌ನ ವಿಶೇಷವೆಂದರೆ ಬದುಕಿನ ವಿಸರ್ಜನೆಗೆ ನಡೆಸುವ ಪ್ರಾರ್ಥನೆ, ಅಮೃತತ್ವಕ್ಕೆ ನಡೆಸುವ ಪ್ರಾರ್ಥನೆ, ಜೀವನದ ಸಾರ್ಥಕತೆಯ ಬಗ್ಗೆ ನಂಬುಗೆ, ಇವೆಲ್ಲ ಬೇರೆ ಬೇರೆಯಲ್ಲವೆಂದು ಸೃಷ್ಟಿಯನ್ನೇ ಪ್ರಾರ್ಥಿಸುವುದು.
17ನೆಯ ಶ್ಲೋಕದ ಕನ್ನಡಾನುವಾದವನ್ನು ನೋಡಿ.
"ನನ್ನ ಪ್ರಾಣ ಸರ್ವವ್ಯಾಪಿಯಾದ ಅಮೃತಾತ್ಮವನ್ನು ಸೇರಲಿ. ಈ ದೇಹ ಬೂದಿಯಾಗಲಿ. ಓಂ ಮನಸ್ಸೆ ಸ್ಮರಿಸು. ಮಾಡಿರುವುದನ್ನು ಸ್ಮರಿಸು. ಓಂ ಮನಸ್ಸೆ ಸ್ಮರಿಸು. ಮಾಡಿರುವುದನ್ನು ಸ್ಮರಿಸು"
ಪ್ರಾಸಂಗಿಕವಾಗಿ ಇಲ್ಲಿ ಹೇಳಬಹುದಾದ ಒಂದು ಮಾತೆಂದರೆ ಗಾಂಧಿಯ ದಿನನಿತ್ಯದ ಪ್ರಾರ್ಥನೆಯಲ್ಲಿ ಈ ಉಪನಿಷತ್ ಕೂಡ ಒಂದು ಭಾಗವಾಗಿತ್ತೆಂಬುದು. ಟಾಲ್‌ಸ್ಟಾಯ್ ಕತೆಯಲ್ಲಿ ಜಿಜ್ಞಾಸೆಯಿದೆ, ಪ್ರಾರ್ಥನೆಯಿಲ್ಲ. ತೀವ್ರತೆಯಿದೆ, ಸಮಾಧಾನವಿಲ್ಲ. ಶಾಂತಿಯಿಲ್ಲ, ಭರವಸೆಯಿಲ್ಲ.
ಎಲ್ಲ ಶ್ರೇಷ್ಠ ಲೇಖಕರು ಸಾವು, ದೈವ, ಕಾಮವನ್ನು ಕುರಿತು ತಮ್ಮದೇ ಆದ ದರ್ಶನವನ್ನು ಮಂಡಿಸುತ್ತಾರೆ. ಈ ಮೂರಂಶಗಳಲ್ಲಿ ಯಾವುದಾದರೂ ಒಂದಂಶದ ಗೈರುಹಾಜರಿಯಾದರೂ ಲೇಖಕನ ದರ್ಶನದಲ್ಲೇ ಏನೋ ಚ್ಯುತಿಯಿದೆಯೆಂದೇ ಲೆಕ್ಕ ಎಂಬುದೊಂದು ಈವತ್ತಿನ ಸಾಹಿತ್ಯಿಕ ನಂಬಿಕೆ. ಯಾವ ದರ್ಶನ ನಮಗೆ ಹೆಚ್ಚು ಪ್ರಸ್ತುತ, ಆತ್ಮೀಯವೆಂಬ ಪ್ರಶ್ನೆ ಈ ಎರಡೂ ಕತೆಗಳ ಜೊತೆ ಓದಿನಿಂದ ಜಾಗೃತವಾಗುತ್ತಲೇ ಇರುತ್ತದೆ.
ಆಧುನಿಕ ಸಾಹಿತ್ಯ ಚಿಂತನೆ, ಬಹುಪಾಲು ಮನುಷ್ಯ ಕೇಂದ್ರಿತ. ಹಾಗಾಗಿ ಸಾವಿನ ಅನುಭವ, ತಿಳುವಳಿಕೆಯೆಲ್ಲ ನಮಗೆ ನೆರವಾಗುವುದು ನಮ್ಮ ಮತ್ತು ಬದುಕಿನ ಸೀಮಿತತೆಯನ್ನು ಸೂಚಿಸಲು, ಬದುಕಿನ ಅಸಾಂಗತ್ಯವನ್ನು, ಅಪೂರ್ಣತೆಯನ್ನು ತಿಳಿಯಲು ಮಾತ್ರ. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಬಂದ ಬಹುತೇಕ ಕಥನಗಳು ನಾಟಕಗಳಲ್ಲಿ ಈ ನೋಟವೇ ಪ್ರಧಾನ. ಓದುಗನಾಗಿ ಮಾಸ್ತಿ ಕತೆಯ ದರ್ಶನವನ್ನು ಒಪ್ಪುವ ನನಗೂ ಸಾವನ್ನು ಕುರಿತು ಬರೆಯುವಾಗಲೆಲ್ಲ, ಚಿಂತಿಸುವಾಗಲೆಲ್ಲ ಹೆಚ್ಚು ಹತ್ತಿರವೆನಿಸುವುದು ಟಾಲ್‌ಸ್ಟಾಯ್‌ನ ಒಳತೋಟಿಯೇ. ಈ ವಿಪರ್ಯಾಸಕ್ಕೆ ನಮ್ಮ ತಲೆಮಾರಿನಲ್ಲಿ ಬದುಕಿನ ನಿರಂತರತೆ ಮತ್ತು ದೈವಿಕತೆಯ ಬಗ್ಗೆ ನಂಬಿಕೆ ಕಡಿಮೆಯಾಗಿರುವುದು ಕಾರಣವಿರಬಹುದು. ದೈವಿಕತೆ ಕುರಿತಂತೆ ನಾವು ಸ್ವತಂತ್ರವಾಗಿ ಯೋಚಿಸಿ, ತೀರ್ಮಾನಕ್ಕೆ ಬರುವುದಕ್ಕಿಂತಲೂ ಹೆಚ್ಚಾಗಿ ಇತರರು ಹೇಳಿದ್ದನ್ನು, ಬರೆದದ್ದನ್ನು ಓದಿ ಹಾಗೆ ಬಂದ ತಿಳುವಳಿಕೆಯನ್ನೆಲ್ಲ ಗೃಹೀತ ಸತ್ವವೆಂದು ನಂಬಿಬಿಟ್ಟಿದ್ದೇವೆ. ಧರ್ಮವೆಂದರೆ ಸಂಸ್ಕೃತಿ ಮಾತ್ರ, ಸಂಸ್ಕೃತಿಯೆಂದರೆ ಧಾರ್ಮಿಕ ಆಚರಣೆಗಳು ಮಾತ್ರ ಎಂಬ ತೆಳುನಂಬುಗೆ ಕೂಡ ನಮ್ಮನ್ನು ದಾರಿ ತಪ್ಪಿಸಿರಬಹುದು.
ಈ ಎರಡೂ ಕತೆಗಳನ್ನು ಕುರಿತು ಹೊಸ ಕಾಲದ ಹೊಸ ಸಂವೇದನೆಯ ಮಿತ್ರರೊಡನೆ ಚರ್ಚಿಸುವಾಗಲೆಲ್ಲ ಮಾಸ್ತಿಯವರ ಕತೆಯನ್ನು ಒಪ್ಪದವರೇ ಹೆಚ್ಚು. ಇಂತಹ ಮಿತ್ರರ ಪ್ರಕಾರ ಈ ಕತೆಯಲ್ಲಿ ವೈಯಕ್ತಿಕ ದರ್ಶನವಿಲ್ಲ, ಕತೆಯ ದರ್ಶನ ಲೇಖಕನ ಅನುಭವ, ವೈಯಕ್ತಿಕತೆಯಿಂದ ಒಡಮೂಡಿದ್ದಲ್ಲ. ಕಡ ಪಡೆದದ್ದು, ಆರೋಪಿಸಿಕೊಂಡದ್ದು. "ಮಂತ್ರೋದಯ" ರಾಚನಿಕವಾಗಿ ಕೂಡ ಕತೆಯೆನಿಸಿಕೊಳ್ಳಲಾಗದು. ಉಪನಿಷತ್ ವಾಕ್ಯಗಳ ಕನ್ನಡೀಕರಣದ ಸರಣಿಯದು. ಇದು ಓದುಗರಲ್ಲಿ ಸ್ವೀಕೃತವಾಗಲೆಂದು ದ್ವೈಪಾಯನನ ಜೀವನದ ವಿವರಗಳು ಕತೆಯಲ್ಲಿ ತುಂಬಿವೆಯಷ್ಟೆ. ಈ ಆಪಾದನೆಗಳು ಕೇಳುವಾಗ ನಿಜವೆನ್ನಿಸುವ ಭಾವನೆಯನ್ನು ಹುಟ್ಟಿಸಿದರೂ, ಕತೆ ಓದುವಾಗ ಮಾತ್ರ ನಿಜವೆನ್ನಿಸುವುದಿಲ್ಲ. ನಮ್ಮ ಮನಸ್ಸಿನ ಒಳಗಡೆ ಈ ದರ್ಶನದ ಬಗ್ಗೆ ಇರುವ ಗೌರವದಿಂದ ಹೀಗಾಗುತ್ತದೆಯೇ? ಎಲ್ಲ ಕತೆಗಳು ವೈಯಕ್ತಿಕ ತೀವ್ರತೆಯಿಂದಲೇ ಹುಟ್ಟಬೇಕು ಎಂಬ ನಿರೀಕ್ಷೆ ಸರಿಯೇ? ಈ ಕತೆಯ ದರ್ಶನ ಮಾಸ್ತಿಯವರು ಆರೋಪಿಸಿಕೊಂಡದ್ದು ಎಂಬುದು ನಿಜವಾದರೆ, ಮಾಸ್ತಿಯವರ ಇತರ ಕತೆಗಳ ದರ್ಶನಕ್ಕಿಂತ ಈ ಕತೆ ನೀಡುವ ದರ್ಶನ ನಿಜವಾಗಲೂ ತುಂಬ ಭಿನ್ನವಾಗಿದೆಯೇ? ಕತೆಯೊಂದು ನಮಗೆ ನಿಜವೆನ್ನಿಸಿ - ಪ್ರಸ್ತುತವಾಗಬೇಕಾದರೆ ಕತೆಯು ಆಧುನಿಕ-ನವ್ಯ-ಪರಿಭಾಷೆ-ಸ್ವರೂಪದಲ್ಲಿರುವುದು ಅನಿವಾರ್ಯವೇ! ಮಾನಸಿಕವಾಗಿ ಆಧುನಿಕ ಸಂವೇದನೆಯ ಹೊರಗಿರುವ ಓದುಗನ ಸ್ಪಂದನಕ್ಕೆ ಯಾವ ಬೆಲೆಯೂ ಇಲ್ಲವೇ? ಸಾಮಾಜಿಕ ಅಸ್ಮಿತೆ ಮತ್ತು ಇತಿಹಾಸದ ಚಲನೆ - ಇದೇ ಮುಖ್ಯವಾದ ಈವತ್ತಿನ ಸಾಂಸ್ಕೃತಿಕ ಸಂದರ್ಭದಲ್ಲಿ "ಮಂತ್ರೋದಯ"ದಂತಹ ಕತೆಗಳು ಕೇವಲ ದಾರ್ಶನಿಕ luxuryಯಲ್ಲವೇ?
ಮೇಲಿನ ಯಾವ ಪ್ರಶ್ನೆಗಳಿಗೂ ನನಗೆ ಉತ್ತರ ಗೊತ್ತಿಲ್ಲ. ಪ್ರಶ್ನೆಗಳಲ್ಲಿ ಸತ್ಯವಿದೆಯೆಂಬುದಕ್ಕೂ ಕೂಡ ಉತ್ತರವಿಲ್ಲ? ಅಭಿಪ್ರಾಯವಿಲ್ಲ. ಹೀಗಾಗಿ ಮತ್ತೆ ನಾನು ಎರಡೂ ಕತೆಗಳ ಜೊತೆ ಓದಿಗೇ ಹಿಂದಿರುಗುತ್ತೇನೆ. ಓದುಗರನ್ನು ಕೂಡ ಇಂತಹ ಓದಿಗೆ ಆಹ್ವಾನಿಸುತ್ತಾ. ಯಾವ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲವೆಂಬ ಆಶ್ವಾಸನೆಯೊಡನೆ.
(ಮೇಲಿನ ಚರ್ಚೆಗೆ ಪೂರಕವಾಗಿ ಈ ಎರಡೂ ಪುಸ್ತಕಗಳನ್ನು ಓದುಗರು ಗಮನಿಸಬಹುದು: ಎ.ಎನ್.ವಿಲ್ಸನ್‌ರ ಟಾಲ್‌ಸ್ಟಾಯ್ ಜೀವನಚರಿತ್ರೆ ಮತ್ತು ಸೋಮನಾಥಾನಂದರ ಉಪನಿಷತ್ ಭಾವಧಾರೆ (ರಾಮಕೃಷ್ಣ ಆಶ್ರಮದ ಪ್ರಕಟಣೆ). ನನ್ನ ಟಿಪ್ಪಣಿಯಲ್ಲಿ ನಮೂದಿಸಿರುವ ಬಹುತೇಕ ವಿಚಾರಗಳು ಈ ಎರಡೂ ಪುಸ್ತಕಗಳಿಂದ ಪಡೆದದ್ದು.)
(ಈ ಲೇಖನ ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ "ಒಂದಲ್ಲಾ ಒಂದೂರಿನಲ್ಲಿ" ತ್ರೈಮಾಸಿಕದ ನಾಲ್ಕನೇ ಸಂಚಿಕೆ (ನವೆಂಬರ್'೦೮-ಜನವರಿ'೦೯)ಯಲ್ಲಿ ಪ್ರಕಟಿತ.)
No comments:
Post a Comment