Monday, October 26, 2009

ಮುಂದಿನ ಶತಮಾನಕ್ಕೆ ಮಾಸ್ತಿ ಕತೆಗಳು

ಕನ್ನಡದಲ್ಲಿ ಸಣ್ಣಕಥೆಯ ಪ್ರಕಾರವು ಹುಟ್ಟಿ, ವಿಕಾಸಗೊಂಡು ಪ್ರವರ್ಧಮಾನಕ್ಕೆ ಬಂದುದು ಇನ್ನೇನು ಮುಗಿಯುತ್ತಿರುವ ಇಪ್ಪತ್ತನೆಯ ಶತಮಾನದಲ್ಲೆ. ಒಂದು ಶತಮಾನದ ಅವಧಿಯಲ್ಲೆ ಈ ಪ್ರಕಾರದ ಸಾಧನೆ ಅದೆಷ್ಟು ಅಸಾಧಾರಣವಾಗಿದೆಯೆಂದರೆ ಅತಿ ಸಂಕೀರ್ಣವಾದ ಆಧುನಿಕ ಬದುಕಿನ ಯಾವುದೇ ಸ್ತರವನ್ನಾದರೂ ಸರಿಯೇ, ಆಯಾಮವನ್ನಾದರೂ ಸರಿಯೇ ಸಣ್ಣಕತೆಯಲ್ಲಿ ಅಭಿವ್ಯಕ್ತಿಸಬಹುದು ಎಂಬ ಆತ್ಮವಿಶ್ವಾಸ ಇದೀಗ ಹೊಸದಾಗಿ ಬರೆಯುತ್ತಿರುವ ಕತೆಗಾರರ ಬರವಣಿಗೆಯಲ್ಲು ಎದ್ದು ಕಾಣುತ್ತದೆ. ಇಂತಹ ಆತ್ಮವಿಶ್ವಾಸ ಕತೆಗಾರರೆಲ್ಲರಿಗೂ ದಕ್ಕಲು ಕಾರಣರಾದವರಲ್ಲಿ ಹೆಚ್ಚು ಕಡಿಮೆ ಈ ಶತಮಾನದುದ್ದಕ್ಕೂ (ಸುಮಾರು ೧೯೧೦ರಿಂದ ೧೯೮೫ರ ತನಕ) ಸಣ್ಣಕಥೆಗಳನ್ನು ಬರೆದುಕೊಂಡು ಬಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಮುಖರು. ಈ ಶತಮಾನದ ಸಣ್ಣಕಥೆಗಳನ್ನು ಚರ್ಚಿಸುವಾಗ ಮತ್ತೆ ಮತ್ತೆ ನಾವು ಮಾಸ್ತಿಯನ್ನು ಎದುರಾಗಲೇ ಬೇಕೆಂಬುದು ಮಾತ್ರ ಅವರ ಸಾಧನೆಯ ಹೆಗ್ಗಳಿಕೆಯಲ್ಲ. ಕತೆಗಾರಿಕೆಯ ಉದ್ದೇಶವೇನು, ಕತೆಗೂ ಕತೆಗಾರನಿಗೂ, ಕತೆಗೂ ಜೀವನಕ್ಕೂ ಇರುವ ಇರಬೇಕಾದ ಸಂಬಂಧ ಯಾವ ಸ್ವರೂಪದ್ದು ಎಂಬೆಲ್ಲ ಪ್ರಶ್ನೆಗಳ ಅರ್ಥಪೂರ್ಣ ಚರ್ಚೆಗೆ ಮಾಸ್ತಿ ಕತೆಗಳು ನೆರವಿಗೆ ಬರುವ ಹಾಗೆ ಮತ್ತ್ಯಾವ ಕತೆಗಾರರ ಬರವಣಿಗೆಯೂ ಬರುವುದಿಲ್ಲ. ಪ್ರಸಿದ್ಧ ನವ್ಯ ಕತೆಗಾರರಾದ ಚಿತ್ತಾಲರು ಮಾಸ್ತಿಯವರ ಮೂವತ್ತು ಕತೆಗಳನ್ನು ಆಯ್ದು, ಅಧ್ಯಯನಪೂರ್ಣವಾದ ಪ್ರಸ್ತಾವನೆಯೊಂದನ್ನು ಬರೆದು ಪ್ರಕಟಿಸಿರುವ ‘ಮಾಸ್ತಿ: ಮೂವತ್ತು ಕತೆಗಳು’ ಎಂಬ ಸಂಗ್ರಹ ಮಾಸ್ತಿಯವರ ಕತೆಗಾರಿಕೆಯನ್ನು ಕುರಿತು ಚರ್ಚಿಸುವುದಕ್ಕೆ ಮತ್ತೊಂದು ಅವಕಾಶವನ್ನು ಕಲ್ಪಿಸಿದಂತಾಗಿದೆ. ಇದೊಂದು ಸಾಂದರ್ಭಿಕ ಕಾರಣ ಮಾತ್ರ. ಇಂದು ನಾವು ಒಂದು ಸಮಾಜವಾಗಿ, ಸಂಸ್ಕೃತಿಯಾಗಿ ಆತ್ಮವಿಶ್ವಾಸ ಕಳೆದುಕೊಂಡು ಅನಾಥರಾಗುತ್ತಿದ್ದೇವೆ. ನಮ್ಮ ಚರಿತ್ರೆಯನ್ನು, ಬದುಕನ್ನು ನಾವೇ ರೂಪಿಸಿಕೊಳ್ಳುವ ಹಕ್ಕು ಮತ್ತು ಅವಕಾಶಗಳೆರಡನ್ನೂ ಉದಾರೀಕರಣ ಪ್ರತಿನಿಧಿಸುತ್ತಿರುವ ಹೊಸ ಆರ್ಥಿಕ ಶಕ್ತಿಗಳು ಹೊಸಕಿ ಹಾಕುತ್ತಿವೆ. ನಮ್ಮ ಸಂಸ್ಕೃತಿಗೆ, ಜನಜೀವನಕ್ಕೆ ಇದೊಂದು ಮರಣಾಂತಿಕ ಸಂದರ್ಭವೇ ಸರಿ. ನಮ್ಮ ಜನಪದರ ಜೀವನ ಸಂಸ್ಕೃತಿಯ ಜಾಣ್ಮೆಯನ್ನು, ಧಾರಣಾ ಶಕ್ತಿಯನ್ನು ಅರ್ಥಪೂರ್ಣವಾಗಿ ಹೀರಿಕೊಂಡು ಬರೆದ ಮಾಸ್ತಿ ಕತೆಗಳು ಇಂತಹ ಸಂದರ್ಭದಲ್ಲಿ ಹೇಗೆ ನೆರವಿಗೆ ಬರಬಲ್ಲವು ಎಂಬುದು ಮುಖ್ಯ ಪ್ರಶ್ನೆ. ಮಾಸ್ತಿಯಂತಹ ದೊಡ್ಡ ಲೇಖಕರ ಬರವಣಿಗೆ ಎದುರಿಸಲೇಬೇಕಾದ ಪ್ರಶ್ನೆ.

ಮಾಸ್ತಿಯವರು ಕತೆಗಳನ್ನು ಬರೆಯಲು ಪ್ರಾರಂಭಿಸಿದಾಗಲೂ ನಮಗೆ ನಮ್ಮ ಸಂಸ್ಕೃತಿಯ ಬಗ್ಗೆ, ಅದರ ಧಾರಣಾಶಕ್ತಿಯ ಬಗ್ಗೆ ಅಂತಹ ಆತ್ಮವಿಶ್ವಾಸವೇನಿರಲಿಲ್ಲ. ನಮ್ಮನ್ನು ನಾವು ಹೇಗೆ ನೋಡಿಕೊಳ್ಳಬೇಕು ನಮ್ಮ ಕತೆಗಳನ್ನು, ನಮ್ಮ ಚರಿತ್ರೆಯನ್ನು ನಾವು ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತು ಸ್ಪಷ್ಟ ಕಲ್ಪನೆಯಿರಲಿಲ್ಲ. ಹೆಚ್ಚೆಂದರೆ ಏಳೆಂಟು ನೂರು ವರ್ಷಗಳ ಇತಿಹಾಸ ಮಾತ್ರವಿರುವ ಪಶ್ಚಿಮದ ನಾಗರಿಕತೆ ತಿಳಿದಿರುವಂತೆ ಕತೆ ಮತ್ತು ಚರಿತ್ರೆ ಎರಡೂ ಭಿನ್ನ ಭಿನ್ನ ಸಂಗತಿಗಳೆಂದು ನಾವು - ಅಂದರೆ ಸುಮಾರು ನಾಲ್ಕೈದು ಸಾವಿರ ವರ್ಷಗಳ ನಾಗರಿಕತೆಯ ವಾರಸುದಾರರು - ಗ್ರಹಿಸಬೇಕೆ ಎಂಬ ಪ್ರಶ್ನೆಯು ಕೂಡ ನಮ್ಮೆದುರಿಗಿತ್ತು. ಸಾರ್ವಜನಿಕ ಜೀವನದಲ್ಲಿ ಗಾಂಧಿ ಇಂತಹ ಪ್ರಶ್ನೆಗಳನ್ನು ಎದುರಿಸಿದರೆ ಮಾಸ್ತಿಯಂತವರು ಬರವಣಿಗೆಯಲ್ಲಿ ಈ ಪ್ರಶ್ನೆಗಳನ್ನು ಎದುರಿಸಿದರು. ಸಮರ್ಪಕವಾದ ಉತ್ತರಗಳನ್ನು ಕಂಡುಕೊಂಡರು.

ನಮ್ಮನ್ನು ನಾವು ನಮ್ಮ ಕಣ್ಣುಗಳಿಂದಲೇ ನೋಡಿಕೊಳ್ಳಬೇಕು ಎಂಬುದು ಮಾಸ್ತಿಯವರಿಗೆ ಅವರ ಮೊದಲ ಕತೆ ‘ರಂಗನ ಮದುವೆ’ ಬರೆದಾಗಲೇ ಸ್ಪಷ್ಟವಾಗಿ ಹೋಗಿತ್ತೆಂದು ಕಾಣುತ್ತದೆ. ಈ ಮಾತುಗಳನ್ನು ಗಮನಿಸಿ "ನಮ್ಮೂರು ಹೊಸಹಳ್ಳಿ. ಅದರ ಹೆಸರನ್ನು ನೀವು ಕೇಳಿರುವಿರಲ್ಲವೆ? ಇಲ್ಲವೇ? ಅಯ್ಯೋ ಪಾಪ? ಅದು ನಿಮ್ಮ ತಪ್ಪಲ್ಲ. ಭೂವಿವರಣೆಗಳಲ್ಲಿ ಅದರ ಹೆಸರಿಲ್ಲ. ಇಂಗ್ಲೀಷಿನಲ್ಲಿ ಭೂವಿವರಣೆ ಬರೆಯುವ ಸಾಹೇಬು ಜನಗಳಿಗೆ ಹೊಸಹಳ್ಳಿ ಗೊತ್ತಿಲ್ಲದೆ ಅವರು ಸುಮ್ಮನಿದ್ದರೂ ಇರಬಹುದು. ನಮ್ಮ ಜನರೂ ಭೂವಿವರಣೆ ಬರೆಯುವಾಗ ಹೊಸಹಳ್ಳಿಯ ಹೆಸರನ್ನೇ ಮರೆಯುವರು. ಸರಿ ಕುರಿ ಹಿಂಡಿನ ಸಮಾಚಾರ.......ಇಂಗ್ಲೆಂಡಿನ ಸಾಹೇಬರೂ ನಮ್ಮ ಗ್ರಂಥಕರ್ತರೂ ಮರೆತ ಮೇಲೆ ಪಾಪ ಭೂಪಟ ಬರೆಯುವವನು ಅದನ್ನು ನೆನೆಯುವನೇ? ನಕ್ಷೆಯಲ್ಲಿ ನಮ್ಮೂರಿನ ನೆಲೆಯೇ ಇಲ್ಲ" ನಕ್ಷೆಯಲ್ಲಿ ನೆಲೆಯಿಲ್ಲದಿದ್ದರೇನು, ಹೊಸಹಳ್ಳಿಯಲ್ಲೇ ಬಾಳಿ ಬದುಕಿಕೊಂಡು ಬಂದ ಜನರಿಲ್ಲವೆ, ಅವರ ಜೀವನಕ್ರಮವಿಲ್ಲವೇ, ಹೊರಗಿನವರು ನೋಡಲು ನಿರಾಕರಿಸಿದ ಮಾತ್ರಕ್ಕೇ, ನೋಡಿದರೂ ಇಲ್ಲಿಯ ಜೀವನಕ್ರಮದ ಮಹತ್ವ ತಿಳಿಯಲು ನಿರಾಕರಿಸಿದ ಮಾತ್ರಕ್ಕೇ ನಾವೂ ಕುರುಡರಾಗಬೇಕೆ ಎನ್ನುವ ಪ್ರಶ್ನೆಗೆ ಮಾಸ್ತಿ ಉತ್ತರಿಸಿದ್ದು ಹೀಗೆ ".....ಏನೇ ಇರಲಿ ಇತರರ ಮಾತನ್ನು ಕೇಳಿ ನಾವು ನಿರ್ಣಯಗಳನ್ನು ತೆಗೆದುಕೊಳ್ಳಬಾರದು. ಹೊರಗಿನ ಜನ ಪಂಡಿತರೇ ಆದರೂ ಈ ದೇಶದ ಸಂಸ್ಥೆ ಸಂಸ್ಕೃತಿಗಳನ್ನು ನಿಷ್ಮಲ್ಮಶವಾದ ದೃಷ್ಟಿಯಿಂದ ನೋಡಲಾರರು.....ಈ (ಇಲ್ಲಿಯ) ಪ್ರತಿಬಿಂಬ ತಾನೊಂದು ಬಿಂಬವಾಗುವುದು ಎಂತು? ಎಂದು? ಪ್ರತಿಬಿಂಬ ಪ್ರತಿಬಿಂಬವಾಗಿಯೇ ಮುಗಿಯುತ್ತದೆ." (ಜೆ ಎಸ್ ವುಡ್‌ರೋಪ್‌ನ Shakti and Shakta ಎಂಬ ಪುಸ್ತಕದಿಂದ ಮಾಸ್ತಿ ಉದ್ಧರಿಸಿದ ಮಾತುಗಳಿವು.)

ನಮ್ಮನ್ನು ನಾವು ನಮ್ಮ ಕಣ್ಣುಗಳ ಮೂಲಕವೇ ನೋಡಿಕೊಳ್ಳಬೇಕು ಎಂಬ ದೃಷ್ಟಿಕೋನವೇನೋ ಯಾವ ಕಾಲಕ್ಕೂ ಉದಾತ್ತವಾದುದೇ ಸರಿ. ಆದರೆ ಹಾಗೆ ನೋಡಿದಾಗ, ಹೇಗೆ ನೋಡಿಕೊಳ್ಳಬೇಕು ಎಂಬ ಪ್ರಶ್ನೆಯು ಇರುತ್ತದಲ್ಲ. ನಮ್ಮ ರಾಷ್ಟ್ರೀಯವಾದಿ ಲೇಖಕರು, ನವೋದಯದ ಲೇಖಕರೆಲ್ಲ ಈ ಸಮಸ್ಯೆಯನ್ನು ಎದುರಿಸಿದವರೆ. ಅವರೆಲ್ಲರಿಗಿದ್ದ ಸುಲಭದ ದಾರಿಯೆಂದರೆ ಇಲ್ಲಿಯ ಇತಿಹಾಸವನ್ನು, ಸಂಸ್ಕೃತಿಯನ್ನು, ಸಂಘಟನೆಗಳನ್ನು ಉದಾತ್ತೀಕರಿಸುವುದು. ಈ ಉದಾತ್ತೀಕರಣಕ್ಕೆ ಪ್ರೇರಕವಾಗಿ ಅವರಿಗೆ ಇಲ್ಲಿಯ ಸನಾತನ ಧರ್ಮವಿತ್ತು. ರಾಮಕೃಷ್ಣ, ಅರಬಿಂದೋ, ವಿವೇಕಾನಂದರಂತಹ ಚಿಂತಕರಿದ್ದರು. ಮಾಸ್ತಿಯವರ ಗಮನ ಈ ಕಡೆಗೆ ಹೋಗಲೇ ಇಲ್ಲ. ಅವರು ಇಲ್ಲಿಯ ಜನಪದರು ತಮ್ಮ ತಮ್ಮ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಜೀವನದ ಸಂಘರ್ಷಗಳನ್ನು ಎದುರಿಸುವಲ್ಲಿ ತೋರಿದ ಜಾಣ್ಮೆಯನ್ನು, ಧಾರಣಾಶಕ್ತಿಯನ್ನು ಮಾತ್ರವೇ ಮತ್ತೆ ಮತ್ತೆ ಎಂಬಂತೆ ತಮ್ಮ ಕತೆಗಳಲ್ಲಿ ಪ್ರತಿನಿಧೀಕರಿಸುತ್ತ ಹೋದರು. ಎಕೆಂದರೆ ಇಂತಹ ಜಾಣ್ಮೆ, ಧಾರಣಾಶಕ್ತಿ ಮಾತ್ರ ಇಲ್ಲಿಯ ನಾಗರಿಕತೆಗೆ ಬಹುಕಾಲ ಬದುಕುಳಿಯುವ ಗುಣ ಸ್ವಭಾವವನ್ನು ತಂದುಕೊಟ್ಟಿದೆಯೆಂದು ಅವರು ನಂಬಿದ್ದರು. ಈ ಕಾರಣಕ್ಕಾಗಿಯೇ ಮಾಸ್ತಿಯವರಿಗೆ ವೆಂಕಟಿಗ, ಬೈಚೇಗೌಡ, ಗೌತಮಿ, ಉಪನಿಷದ್ ಋಷಿ, ಯುಗಪುರುಷ ಶ್ರೀಕೃಷ್ಣ - ಇವರೆಲ್ಲರನ್ನು ಒಂದೇ ತೂಕದಲ್ಲಿ ನೋಡುವುದು ಸಾಧ್ಯವಾಯಿತು. ಈಶೋಪನಿಷದ್ ಋಷಿ ಇಲ್ಲಿಯ ವಿವೇಕಕ್ಕೆ ಕಾರಣನಾಗಿರುವಷ್ಟೆ ವೆಂಕಟಿಗನು ಕಾರಣ, ಅವನ ಆಯ್ಕೆಯು ಕಾರಣ ಎಂಬುದು ಮಾಸ್ತಿಯ ನಿಲುವು.

ಈ ನಿಲುವಿನಿಂದಾಗಿಯೇ ಮಾಸ್ತಿಯವರಿಗೆ ಕಾಲವನ್ನು, ಪಾತ್ರಗಳನ್ನು ಸಾಮಾಜಿಕ, ಐತಿಹಾಸಿಕ, ಪೌರಾಣಿಕ - ಪಶ್ಚಿಮದವರಿಗೂ ಅವರನ್ನು ನೆಮ್ಮಿ ಬರೆಯುವ ವಿಮರ್ಶಕ ಪಟುಗಳಿಗೂ ಆದಂತೆ - ವೆಂದು ವಿಂಗಡಿಸಿ ನೋಡುವ ಅಗತ್ಯ ಕಂಡುಬರಲಿಲ್ಲ. ಅವರ ಕಥನ ಪ್ರತಿಭೆಯಲ್ಲಿ ಅವರ ಕತೆಗಳು ಏಕಕಾಲಕ್ಕೆ ಸಾಮಾಜಿಕ, ಐತಿಹಾಸಿಕ, ಪೌರಾಣಿಕ - ವೆಂಕಟಿಗನ ಕತೆಯನ್ನಾಗಲೀ, ವೆಂಕಟಶಾಮಿಯ ಪ್ರಣಯ ಕತೆಯನ್ನಾಗಲೀ ಕೇವಲ ವರ್ತಮಾನದ ಕತೆಯೆಂದು ಮಾತ್ರ ಓದಲು ಸಾಧ್ಯವೇ? ಈ ಕತೆಯ ಪಾತ್ರಗಳಿಗೆ, ಅವು ಎದುರಿಸುವ ಸನ್ನಿವೇಶಗಳಿಗೆ, ಮನುಷ್ಯನ ಮೂಲಭೂತ ಸ್ವಭಾವದ ಮಾದರಿಗಳನ್ನು ಪ್ರಕಟಿಸುವ ಧಾರ್ಷ್ಟ್ಯ ಮಾತ್ರವಲ್ಲ, ಪುರಾಣದ ಹೀರೋಗಳಾಗುವಷ್ಟು, ಇತಿಹಾಸದ ಸಂಧಿಕಾಲದ ಪರಿವರ್ತನಾ ಪಟುಗಳಾಗುವಷ್ಟು ಧಾರ್ಷ್ಟ್ಯವೂ ಇದೆ. ನಾವು ಯಾವ ನೆಲೆಯಲ್ಲಿ ನಿಂತು ಈ ಕತೆಗಳನ್ನು ಓದುತ್ತೇವೆ, ಓದುತ್ತಿದ್ದೇವೆ ಎಂಬಂಶದ ಮೇಲೆ ಈ ಕತೆಗಳು ಸಾಮಾಜಿಕ ಕತೆಗಳಾಗೋ, ಪೌರಾಣಿಕ ಕತೆಗಳಾಗೋ ಕಾಣಬೇಕಷ್ಟೆ. ಗೌತಮಿ ಹೇಳಿದ ಪುರಾಣದ ಕತೆಗೆ ಈವತ್ತೂ ಪ್ರತಿದಿನವೂ ಅಜ್ಜಿಯರು, ತಾಯಂದಿರು ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ಹೇಳುವ ವಿವೇಕದ ಮಾತಿನ ವರ್ತಮಾನದ ತುರ್ತಿದೆಯಲ್ಲವೆ? ಏಳೆಂಟು ನೂರು ವರ್ಷಗಳ ಹಿಂದಿನ ಮತಾಚಾರ್ಯ ರಾಮಾನುಜಾಚಾರ್ಯರ ಸಿಟ್ಟು ವರ್ತನೆಯೆಲ್ಲವೂ ನಿನ್ನೆ ಮೊನ್ನೆ ತಾನೇ ಹೆಂಡತಿಯೊಡನೆ ವಿನಾ ಕಾರಣ ಜಗಳವಾಡಿ ಸೆಟೆದುಕೊಂಡು ಹೋಗಿ ಸನ್ಯಾಸ ತೆಗೆದುಕೊಂಡಿದ್ದ ನಮ್ಮ ತಾತಮುತ್ತಾತಂದಿರ ವರ್ತನೆಯಂತೆಯೇ ಕಾಣುತ್ತದಲ್ಲ. ದೂರದೇಶದ ಗಯಟೆಯ ದಣಿವರಿಯದ ವಿಕೃತ ಕಾಮ ನಮ್ಮ ಹೊಸ ತಲೆಮಾರಿನ ಲೇಖಕರನ್ನೇ ಜ್ಞಾಪಿಸುವುದಿಲ್ಲವೇ?

ಇಂತಹ ಪಾತ್ರ ಸೃಷ್ಟಿ - ಕಾಲದ ಕಲ್ಪನೆಯಿಂದಲೇ ಮಾಸ್ತಿ ಚರಿತ್ರೆ ಮತ್ತು ನಾಗರಿಕತೆಗಳ ನಡುವೆ ಪ್ರತಿಯೊಬ್ಬ ದೊಡ್ಡ ಲೇಖಕನು ಮಾಡಲೇ ಬೇಕಾದ ಆಯ್ಕೆಗೆ ಸರಿಯಾದ ಉತ್ತರವನ್ನು ಕಂಡುಕೊಂಡಂತೆ ಕಾಣುತ್ತದೆ. ಲೇಖಕ ತಾನು ಬದುಕುವ ಕಾಲದ ಸಮಕಾಲೀನತೆಯ ಒತ್ತಡಗಳನ್ನು ಬಿಡಲಾರ, ಬಿಡಲೂಬಾರದು, ಬಿಟ್ಟರೆ ಅವನದು ರೂಪಹೀನವಾದ ವಿಶ್ವಸ್ತ ಸತ್ಯ-ಸುಭಾಷಿತವಾಗಿ ಬಿಡಬಹುದು. ಹಾಗೆಂದು ತೀರಾ ಸಮಕಾಲೀನವಾದಕ್ಕೆ ಗಂಟುಬಿದ್ದರೂ ಅವನಿಗೆ ಅಪಾಯ ತಪ್ಪಿದ್ದಲ್ಲ. ಅಖಂಡವೂ - ಅನಂತವೂ ಆದ ಕಾಲ ಪ್ರವಾಹದಲ್ಲಿ ನಮ್ಮ ಕಾಲದ ಅನುಭವಗಳು ಹಿಂದಿನ ಅನುಭವಗಳಿಂದ ಪಡೆದಿರುವುದು ಎಷ್ಟು, ಪಡೆಯಬೇಕಾದ್ದು ಎಷ್ಟು, ಮುಂದಿನ ಅನುಭವಗಳಿಗೆ ಸೇರಿಸಬೇಕಾದ್ದು ಎಷ್ಟು ಎಂಬ ದೃಷ್ಟಿಕೋನವು ತೀರಾ ಸಮಕಾಲೀನವಾದ್ದಕ್ಕೆ ಮಾತ್ರ ಗಂಟುಬೀಳಲಾರದು. ಮುಂದುವರೆಸಿ ಹೇಳುವುದಾದರೆ ಚರಿತ್ರೆಯ ಪುರಾಣಗಳ ಅನುಭವವನ್ನು ಅದು ಸಮಕಾಲೀನದ ಬೆಳಕಿನಲ್ಲೇ ಪರಿಶೀಲಿಸುತ್ತದೆ ಮತ್ತು ಸಮಕಾಲೀನವಾದ್ದನ್ನು ಚರಿತ್ರೆ - ಪುರಾಣಗಳ ಬೆಳಕಿನಲ್ಲಿ ನೋಡುತ್ತದೆ. ಹೀಗೆ ಮಾಡುವುದರ ಮೂಲಕ ಭೂತ - ಭವಿಷ್ಯ -ವರ್ತಮಾನವೆಂಬುದರ ಕಾಲದ ಕೃತಕ ವಿಂಗಡಣೆಯನ್ನು ನಿರಾಕರಿಸುತ್ತದೆ. ಕಾಲಬದ್ಧವಾದ ಚರಿತ್ರೆಯ ಕಲ್ಪನೆಯನ್ನು ನಿರಾಕರಿಸುತ್ತಾ ಮನುಷ್ಯಲೋಕದ ಅನುಭವಗಳ ಮೊತ್ತವನ್ನು ಪ್ರಕಟಿಸುವ ನಾಗರಿಕತೆಯ ಕಲ್ಪನೆಯ ಕಡೆಗೇ ಮಾಸ್ತಿಯವರ ಸಾರಿಪುತ್ರ, ಶ್ರೀಕೃಷ್ಣ, ವೆಂಕಟಿಗ, ಟಾಲ್‌ಸ್ಟಾಯ್ ಎಲ್ಲರೂ ಹೊರಟಿರುವುದು. ಇತಿಹಾಸವನ್ನು ಒಂದು Notion ಆಗಿ ಗ್ರಹಿಸುವವರಿಗೆ ಮಾಸ್ತಿಯ ಕತೆಗಳು ನಮ್ಮ ಚರಿತ್ರೆಯ ಒಂದು ಘಟ್ಟದಲ್ಲಿ ಪ್ರಕಟವಾಗುವ ನಮ್ಮ ಸಾಮಾಜಿಕ ಸನ್ನಿವೇಶದ ಸಾರಾಂಶ. ಚರಿತ್ರೆಯೆಂಬುದು ಅನುಭವಗಳ ಮೊತ್ತ ಎಂದು ನೋಡುವವರಿಗೆ ಮಾಸ್ತಿಯ ಕತೆಗಳು ನಮ್ಮ ಕಾಲಕ್ಕೂ ಪ್ರಸ್ತುತವಾಗುವಂತಹ ಅನುಭವವನ್ನು ಪ್ರಕಟಿಸುತ್ತವೆ.

ಮಾಸ್ತಿಯವರ ಈ ಆಯ್ಕೆ ಅವರ ಬರವಣಿಗೆಯ ಸಂಯಮ, ನಿರುದ್ವಿಗ್ನತೆಗೆ ಸರಿಯಾದ ಕಾರಣವನ್ನು ಸೂಚಿಸುತ್ತದೆ ಎಂದು ನನ್ನ ಅಭಿಪ್ರಾಯ. ಬರವಣಿಗೆಯ ಸಂಯಮ, ನಿರುದ್ವಿಗ್ನತೆ ಕೇವಲ ಭಾಷೆಯ ಮೇಲಿನ, ಕಥಾವಸ್ತುವಿನ ಮೇಲಿನ ಹಿಡಿತದಿಂದ ಬರುವಂತದ್ದಲ್ಲ. ನಾನೇ ಮುಖ್ಯ, ನಾನು ಬದುಕುತ್ತಿರುವ ಕಾಲವೇ ನಾಗರಿಕತೆಯ ಚಲನೆಯಲ್ಲಿ ಮುಖ್ಯ, ಎಲ್ಲ ಸಮಸ್ಯೆಗಳಿಗೂ ನನ್ನ ತಲೆಮಾರು ಕಂಡುಕೊಳ್ಳುವ ಉತ್ತರವೇ ಮುಖ್ಯ, ನನ್ನ ತಲೆಮಾರು ಬದುಕಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಕಂಡು ಹಿಡಿಯದಿದ್ದರೆ ಪ್ರಳಯ ಗ್ಯಾರಂಟಿ ಎಂದು ನಂಬುವ ಮನಸ್ಸಿಗೆ ಆತಂಕ ನ್ಯೂರೋಸಿಸ್ ಸಹಜ ಸ್ಥಿತಿ ಮಾತ್ರವಲ್ಲ, ಪ್ರಿಯವಾದ ಸ್ಥಿತಿಯೂ ಹೌದು. ಹಾಗೆಂದು ಆತಂಕ-ನ್ಯೂರೋಸಿಸ್ ತಪ್ಪಿಸಿಕೊಳ್ಳಲೆಂದು ಕೃತಕ ಭೋಳೆಯೂ ಆಗಿಬಿಡಬಾರದು. ಲೇಖಕನಿಗೆ ತಾನು ಬದುಕುತ್ತಿರುವ ಕಾಲದ ಬಗ್ಗೆ ಕುತೂಹಲವಿರಬೇಕು, ವಿನಯವಿರಬೇಕು. ಆಗಿಹೋದ ಕಾಲದ ಬಗ್ಗೆ ವಿಮರ್ಶಾತ್ಮಕ ಗೌರವವಿರಬೇಕು. ಭವಿಷ್ಯದ ಬಗ್ಗೆ ಸಕಾರಣವದ ಭರವಸೆಯಿರಬೇಕು. ಆಗ ಮಾತ್ರ ಅವನು ನೋಡುವ/ಸಾದರಪಡಿಸುವ ಅನುಭವಕ್ಕೊಂದು ವಿಶಿಷ್ಟ ಪ್ರಭೆ ಬರುತ್ತದೆ. ಆ ಪ್ರಭೆ ಮಾಸ್ತಿಯವರಲ್ಲಾದಂತೆ ಸಂಯಮ, ನಿರುದ್ವಿಗ್ನತೆ ತುಂಬಿದ ಬರವಣಿಗೆಯಲ್ಲಿ ವ್ಯಕ್ತವಾಗುತ್ತದೆ. ಸಾರಿಪುತ್ರನ ಕತೆಯಲ್ಲಿ ಬರುವ ಈ ಮಾತುಗಳನ್ನೂ ಗಮನಿಸಿ: "ಹಿರಿಯರು ಹೇಳಿದ್ದೆಂದು ನೋಡುವುದು ಒಳ್ಳೆಯದೇ. ಹಿರಿಯರು ನಮಗೆ ಹೊರಗಣ ಗುರುಗಳು. ಅವರ ಧ್ವನಿಯನ್ನು ಕೇಳಿ. ಒಳಗೂ ಒಬ್ಬ ಗುರು ಇದ್ದಾನೆ. ಅವನನ್ನು ಮುಚ್ಚಿಡಬೇಡಿ. ಎರಡೂ ಧ್ವನಿಗಳ ಶ್ರುತಿ ಸೇರಿದಾಗ ತೋರುವ ಸತ್ಯ ನಿಜವಾದ ಸತ್ಯ. ಅದುವರೆಗಿನ ಸತ್ಯ ವೇಷದ ಸತ್ಯ."

ಮನುಷ್ಯ ನಿರ್ಮಿಸುವ ಅನುಭವ ಮತ್ತು ಅವನು ನಿರ್ಮಿಸಲಾಗದ ಆದರೆ ಅಧೀನವಾಗಿರಬೇಕಾದ ಕಾಲ ಎರಡರ ಅಖಂಡತೆ ಮತ್ತು ಎರಡರ ಅಖಂಡತೆಗಿರುವ ಅವಿನಾ ಸಂಬಂಧದ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದದ್ದರಿಂದಲೇ ಮಾಸ್ತಿಗೆ ಕತೆ ಯಾವಾಗ ಚರಿತ್ರೆಯಾಗುತ್ತದೆ, ಚರಿತ್ರೆ ಯಾವಾಗ ಕತೆಯಾಗುತ್ತದೆ, ಕತೆಯನ್ನು ಯಾವಾಗ ಚರಿತ್ರೆಯಾಗಿ ನೋಡಬೇಕು, ಚರಿತ್ರೆಯನ್ನು ಯಾವಾಗ ಕತೆಯಾಗಿ ನೋಡಬೇಕು ಎಂಬ ಪ್ರಶ್ನೆ ಮುಖ್ಯವಾಗಿತ್ತು. ಗೌತಮಿ, ಶಕುಂತಳೆ, ವೆಂಕಟಶಾಮಿ, ವೆಂಕಟಿಗ ಇಂತವರ ಕತೆಗಳಲ್ಲಿ ಮನುಷ್ಯ ಚರಿತ್ರೆಯ (ಸಾಹಿತ್ಯ ಅಥವಾ ರಾಜಕೀಯ ಚರಿತ್ರೆಯಲ್ಲ) ವಿವರಗಳನ್ನು ಗಮನಿಸದೇ ಹೋಗುವ ನಿಲುವು ಅಪೂರ್ಣವಾಗುವಂತೆಯೇ ಶ್ರೀಕೃಷ್ಣ,, ಟಾಲ್‌ಸ್ಟಾಯ್, ವಾಮದೇವ - ಇಂತವರ ಚರಿತ್ರೆಗಳಲ್ಲಿ, ಇನ್ನೂ ಹತ್ತಿರವಾದ ಉದಾಹರಣೆಯಿಂದ ಹೇಳಬೇಕಾದರೆ ಚಿಕವೀರ ರಾಜೇಂದ್ರನಂತವನ ಚರಿತ್ರೆಯಲ್ಲಿ ನಮಗೆ ಪ್ರಸ್ತುತವಾದ ಕತೆಯನ್ನು ಕಾಣದೇ ಹೋಗುವ ನಿಲುವು ಕೂಡ ಅಪೂರ್ಣವಾದದ್ದು. ಕತೆಯಾಗದ ಚರಿತ್ರೆಯಿಂದ, ಚರಿತ್ರೆಯಾಗದ ಕತೆಯಿಂದ ಆಗುವ ಪ್ರಯೋಜನವಾದರೂ ಏನು ಎಂದು ಮಾಸ್ತಿ ಕೇಳುತ್ತಿರುವಂತಿದೆ. "ಸಾಮಾನ್ಯವಾಗಿ ಕತೆ ಇಲ್ಲಿಗೆ ಮುಗಿಯಬೇಕು. ಆದರೆ ವೆಂಕಟಿಗನ ಚರಿತ್ರೆ ಈ ವರ್ಷ ಮುಂದುವರೆಯಿತು" ಮತ್ತು "ಅಜ್ಜಿ ನೀನು ಹೇಳಿದ್ದು ಚರಿತ್ರೆಯಂತಿಲ್ಲ, ಒಂದು ಕತೆಯಂತಿದೆಯಲ್ಲ" ಎನ್ನುವ ಮಾತುಗಳಲ್ಲಿ ಅಡಕವಾಗಿರುವುದು ಈ ದೃಷ್ಟಿಕೋನವೇ. ಆಂಗ್ಲ ಶಕುಂತಲೆಯಲ್ಲಿ ಬರುವ ಈ ಮಾತು, "ಶಕುಂತಲೆ ಕತೆಯಲ್ಲಿ ದುಷ್ಯಂತನ ಅಪ್ಪ ಇರಲಿಲ್ಲ. ದುರ್ದೈವ, ದುಷ್ಯಂತ ಮಾತ್ರ ಇದ್ದು ಅವಳ ಮಾತನ್ನು ಒಪ್ಪಲಿಲ್ಲ. ಜೆನ್ನಿಯ ಸುದೈವ. ಇಲ್ಲಿ ದುಷ್ಯಂತ ಇರಲಿಲ್ಲ. ಅವನ ಅಪ್ಪ ಇದ್ದ, ಮಗು ತನ್ನ ಮೊಮ್ಮಗು ಎಂದು ಒಪ್ಪಿಕೊಂಡ" ಮತ್ತು ಕುಚೇಲನ ಮರಿಮಗದಂತಹ ಕತೆಗಳು, ಒಂದೇ ವಸ್ತುವಿಗೆ ಏಕಕಾಲದಲ್ಲಿ ಚರಿತ್ರೆ, ಕತೆ ಮತ್ತು ಪುರಾಣಗಳ ಸಾಧ್ಯತೆಯಿರುವುದನ್ನು ತೋರಿಸುತ್ತದೆ.

******

ಮಾಸ್ತಿಯವರ ತಾತ್ವಿಕತೆಯ ಬಗ್ಗೆಯೇ ಹೇಳುತ್ತಾ ಕತೆಗಾರರಾಗಿ ಅವರಿಗಿರುವ ವಿಶಿಷ್ಟತೆಯನ್ನು ನಾವು ಮರೆಯಬಾರದಷ್ಟೇ. ಚಿತ್ತಾಲರ ಮುನ್ನುಡಿ ಈ ವಿಶಿಷ್ಟತೆಯನ್ನು ಸವಿವರವಾಗಿ ಚರ್ಚಿಸುತ್ತದೆ. ಒಬ್ಬ ಮನುಷ್ಯನ ಕತೆಯನ್ನು ಮನುಷ್ಯನಾದ ನಾನು ಇನ್ನೊಬ್ಬ ಮನುಷ್ಯನಿಗೆ ಹೇಳುತ್ತಿದ್ದೇನೆ, ಹೇಳ ಹೊರಟಿದ್ದೇನೆ ಎಂಬುದು ಮಾಸ್ತಿಯವರ ಕತೆಗಳ ಹಿಂದಿರುವ ಮುಖ್ಯ ತುಡಿತ ಎಂದು ಚಿತ್ತಾಲರು ಹೇಳಿರುವುದು ಮಾಸ್ತಿಯವರ ಕತೆಗಾರನ ಕಲ್ಪನೆಗೆ ಗೌರವ-ಆದರ ತೋರಿಸಿರುವ ರೀತಿ. ಇಷ್ಟು ಮಾತ್ರವಲ್ಲ ಮಾಸ್ತಿ ಕತೆಗಳು ಇನ್ನೊಬ್ಬರ ಕತೆಗಳನ್ನು ನಮ್ಮ ಕತೆಗಳಂತೆಯೇ ಹೇಗೆ ನೋಡಬೇಕು, ಹೇಗೆ ಒಳಗೆ ಮಾಡಿಕೊಳ್ಳಬೇಕು, ಹಾಗೆ ಒಳಗೆ ಮಾಡಿಕೊಂಡಿದ್ದನ್ನು ನಮ್ಮ ಬದುಕಿಗೆ ಹೇಗೆ ಪ್ರಸ್ತುತಗೊಳಿಸಿಕೊಳ್ಳಬೇಕು ಎಂದು ಕೂಡ ಪಿಸುಮಾತಿನಲ್ಲೂ, ಪ್ರಿಯವಾದ ಮಾತುಗಳಲ್ಲೂ ಹೇಳಿಕೊಡುತ್ತವೆ. ಹೀಗೆ ಹೇಳಿಕೊಡುತ್ತಾ ಕತೆಗೂ ಮನುಷ್ಯನಿಗೂ ಇರುವ ಇರಬೇಕಾದ ಸಂಬಂಧದ ಸರಿಯಾದ ಸ್ವರೂಪವನ್ನು ನೆನಪಿಸುತ್ತದೆ ಕೂಡ.

ಸಣ್ಣ ಕಥೆಯ ಪ್ರಕಾರವನ್ನು ಮೈನರ್ ಪ್ರತಿಭೆಗಳಿಗೆ ಮಾತ್ರ ಸಲ್ಲುವ ಪ್ರಕಾರವೆಂದು ಜೀವನದ ವೈವಿಧ್ಯವನ್ನು ವಿಶಾಲವಾದ ವಿನ್ಯಾಸವನ್ನು ಕಾದಂಬರಿ ಪ್ರಕಾರದಲ್ಲಿ ಹಿಡಿದಿಡಲು ಸಾಧ್ಯವಾಗುವಂತೆ ಸಣ್ಣ ಕಥೆಯಲ್ಲಿ ಸಾಧ್ಯವಾಗುವುದಿಲ್ಲ ಎಂಬ ಸಾಹಿತ್ಯ ಚರಿತ್ರಕಾರರ ಮಾತುಗಳನ್ನು ಮಾಸ್ತಿ ಕತೆಗಳು ಸುಳ್ಳು ಮಾಡಿವೆ. ಜೀವನದ ಒಟ್ಟು ಅರ್ಥ ಮತ್ತು ವಿನ್ಯಾಸವನ್ನು ಪ್ರಕಟಪಡಿಸುವಂತಹ ಕಥಾ ಸಂದರ್ಭ - ಸನ್ನಿವೇಶಗಳನ್ನು (ಸಾವಿನ ಸಂದರ್ಭ, ಅಧಿಕಾರ-ಹಣ, ಸ್ವಜನ ಮೋಹ ಮತ್ತು ಜೀವನ ಸಾರ್ಥಕತೆಗಿರುವ ಸಂಬಂಧ) ಶೋಧಿಸಲು ಅನುಕೂಲವಾಗುವಂತಹ ಕಥಾವಸ್ತು - ಪಾತ್ರ ಸೃಷ್ಟಿ ಬಗ್ಗೆ ಮಾತ್ರ ಗಮನ ಕೊಟ್ಟಿದ್ದರಲ್ಲಿ ಮಾಸ್ತಿ ಕತೆಗಳ ವಿಶಿಷ್ಟತೆಯಿಲ್ಲ. ಇಂತಹ ಸಂದರ್ಭಗಳನ್ನು ನೋಡುವ ಅವರ ತಾತ್ವಿಕತೆಯಲ್ಲೆ ಅವರ ಕತೆಗಾರಿಕೆಯ ವಿಶಿಷ್ಟತೆಯೂ ಇರುವುದು. ಶ್ರೇಷ್ಠ ಲೇಖಕರಲ್ಲಾಗುವಂತೆ ಮಾಸ್ತಿಯವರಲ್ಲೂ ಅವರ ಕಲೆಗಾರಿಕೆ ಬೇರೆಯಲ್ಲ, ತಾತ್ವಿಕತೆ ಬೇರೆಯಲ್ಲ.

ಮಾಸ್ತಿಯವರ ಬಹುಪಾಲು ಉತ್ತಮ ಕತೆಗಳನ್ನೊಳಗೊಂಡ ಈ ಸಂಗ್ರಹದ ಪ್ರಕಟಣೆಯ ಮೂಲಕ ಮತ್ತೆ ಮಾಸ್ತಿ ಸಾಹಿತ್ಯ ಕಲ್ಪನೆಗಳ ಬಗ್ಗೆ ಚರ್ಚೆಗೆ ಒಂದು ಅವಕಾಶ ಕಲ್ಪಿಸಿರುವ ಪ್ರಿಸಂ ಸಂಸ್ಥೆಯವರು ಕನ್ನಡಿಗರೆಲ್ಲರ ಅಭಿನಂದನೆಗೆ ಅರ್ಹರಾಗಿದ್ದಾರೆ.
(ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ೧೯೯೯)
(ಮನೋಧರ್ಮ ಕೃತಿಯಿಂದ)
ಮುಂದೆ ಓದಿ....

Tuesday, September 29, 2009

ಗಾಂಧಿ ಮುನ್ನೋಟದಲ್ಲಿ ನವ್ಯೋತ್ತರ

ನಾವೆಲ್ಲರೂ ಮನುಷ್ಯರಾಗಿಯೂ, ಸಮುದಾಯಗಳಾಗಿಯೂ ನಿರ್ದಿಷ್ಟ ಸ್ಥಳವೊಂದರಲ್ಲಿ ವಾಸಿಸುತ್ತೇವೆ. ಈ ಸ್ಥಳಕ್ಕೆ (Place)ಮಾನಸಿಕ ಮತ್ತು ಭೌತಿಕ ಆಯಾಮಗಳಿರುತ್ತವೆ. ನೆರೆಹೊರೆ, ಬಂಧು-ಬಳಗ, ವೃತ್ತಿ-ವ್ಯಾಪಾರ, ಸಾಂಸ್ಕೃತಿಕ-ದೈವಿಕ ಚಟುವಟಿಕೆಗಳು, ಸ್ಮೃತಿ, ಸ್ವಾತಂತ್ರ್ಯ ಎಲ್ಲವೂ ಸೇರಿಕೊಂಡು ಈ ‘ಸ್ಥಳ’ ನಿರ್ಮಾಣವಾಗಿರುತ್ತದೆ. ನಮ್ಮಲ್ಲಿರುವ ‘ಸ್ಥಳವಂದಿಗ’ರೆಂಬ ಕಲ್ಪನೆಯ ಹಿಂದಿರುವುದು ಈ ಮನೋಭಾವವೇ. ಈ ‘ಸ್ಥಳ’ವೆಂಬ ಕಲ್ಪನೆ, ಭಾವನೆ ಹುಟ್ಟಲು ಶತಮಾನಗಳೇ ಬೇಕಾಗುತ್ತದೆ. ಒಮ್ಮೆಮ್ಮೆ ಹುಟ್ಟಲೂ ಹೋಗದೆ ಹೋಗಬಹುದು. ದಲಿತರ ಉದಾಹರಣೆಯನ್ನೇ ತೆಗೆದುಕೊಂಡರೆ ನೂರಾರು ವರ್ಷಗಳಿಂದ ಸಮುದಾಯವಾಗಿ ಒಂದೇ ಸ್ಥಳದಲ್ಲಿದ್ದರೂ ಗ್ರಾಮೀಣ ಚೌಕಟ್ಟಿನಲ್ಲಿ ಸಿಗದೇ ಹೋದ ಸ್ವಾತಂತ್ರ್ಯ-ಸಮಾನತೆಯಿಂದಾಗಿ ಅವರಿಗೆ ಸಾಂಪ್ರದಾಯಿಕವಾಗಿ ಸಿಕ್ಕಿದ್ದ ಸ್ಥಳದ ಬಗ್ಗೆ ಒಲವಿಲ್ಲ. ಹೊಸ ಹೊಸ ಸ್ಥಳಗಳನ್ನು ಮಾನಸಿಕವಾಗಿ, ಭೌತಿಕವಾಗಿ ಸದಾ ಹುಡುಕಲು, ಸ್ಥಾಪಿಸಲು ದಲಿತವರ್ಗದಿಂದ ಪ್ರಯತ್ನ ಮುಂದುವರೆದೇ ಇದೆ. ಯಹೂದಿಗಳು ತಮ್ಮದೆಂದು ಭಾವಿಸಿದ್ದ ‘ಸ್ಥಳ’ವನ್ನು ಮತ್ತೆ ಪಡೆಯಲು ನಡೆಸಿದ-ನಡೆಸುತ್ತಿರುವ ಪ್ರಯತ್ನ, ಯುದ್ಧ, ರಾಜಕೀಯ ತಂತ್ರಗಾರಿಕೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೇ ಯಹೂದಿಗಳು ಪ್ಯಾಲೇಸ್ತೀನಿಯರ ‘ಸ್ಥಳ’ದ ಆಕಾಂಕ್ಷೆಗಳನ್ನು ಗುರುತಿಸಲಾರರು, ಗೌರವಿಸಲಾರರು.

ಇಪ್ಪತ್ತು-ಇಪ್ಪತ್ತೊಂದನೆ ಶತಮಾನದ ಬಂಡವಾಳಶಾಹಿ, ಜಾಗತೀಕರಣ, ನಗರೀಕರಣದ ವಿದ್ಯಮಾನಗಳು ಈ ‘ಸ್ಥಳ’ ಎಂಬ ಕಲ್ಪನೆಯನ್ನು ಗೌರವಿಸುವುದಿಲ್ಲ. ಲೆಕ್ಕಕ್ಕೆ ಕೂಡ ತೆಗೆದುಕೊಳ್ಳುವುದಿಲ್ಲ. ನಮ್ಮ ಕಾಲದಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ Space - ಪ್ರದೇಶ, ಜಾಗ ಎಂಬ ಅರ್ಥದಲ್ಲಿ ಗೆ ಆಕಾರವಿಲ್ಲ, ಆಕೃತಿಯಿಲ್ಲ, ಸಂಸ್ಕೃತಿ, ಸ್ಮೃತಿಗಳ ವಾಸನೆಯಿಲ್ಲ. ಈ ಬೆಳವಣಿಗೆ ಮನುಷ್ಯನ ಸಮುದಾಯ ಪ್ರಜ್ಞೆಯನ್ನು ಗೌರವಿಸುವುದಿಲ್ಲ.

ಈ ಹಿನ್ನೆಲೆಯಲ್ಲಿ ನಾನು ಈ ಲೇಖನದಲ್ಲಿ ಎರಡು ವಿದ್ಯಮಾನಗಳನ್ನು ಪರಿಶೀಲಿಸಲು ಪ್ರಯತ್ನಿಸಿದ್ದೇನೆ.

ಮೊದಲನೆಯದು - ನಮ್ಮ ಕಾಲದಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ Spaceನ ಸ್ವರೂಪ ಎಂತಹುದು ಮತ್ತು ಇದರ ಹಿಂದಿರುವ ಸಾಂಸ್ಕೃತಿಕ - ರಾಜಕೀಯ ಲೆಕ್ಕಾಚಾರ ಮತ್ತು ಕನಸುಹೀನತೆ ಎಂತಹುದು.

ಗಾಂಧಿ ದೇಶದ ವಿಭಜನೆಯನ್ನು ವಿರೋಧಿಸಿದಾಗ ಹೇಗಾದರೂ ಸರಿ ಬೇರೆ ಬೇರೆ ಧರ್ಮಗಳಿಗೆ, ಜಾತಿಗಳಿಗೆ, ನಂಬಿಕೆಗಳಿಗೆ ಸೇರಿದವರು ಹೊಂದಿಕೊಂಡು ಬದುಕಲೇಬೇಕು ಎಂದೆಲ್ಲಾ ಹೆಣಗಾಡಿದಾಗ, ರಾಜಕೀಯ ನಿರ್ಧಾರಗಳಿಂದ ನಿರ್ಮಾಣಗೊಳ್ಳುವ ದೇಶ, ರಾಷ್ಟ್ರ ಇಂತಹ ಕಲ್ಪನೆಗಳಿಗೆ, ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದಾದ ಸ್ಥಳ -Placeನ ಮಹತ್ವವನ್ನು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಪಟ್ಟಾಗ - ಈ ಎಲ್ಲ ಹೆಣಗಾಟಾ ಪ್ರಯತ್ನಗಳ ಹಿಂದೆ ಇದ್ದ ನಾಗರಿಕತೆಯ ಕಲ್ಪನೆ ಎಷ್ಟು ಕ್ರಾಂತಿಕಾರಿಯಾದದ್ದು, ನವೀನವಾದದ್ದು ಎಂಬುದರ ವಿಶ್ಲೇಷಣೆ ಗಾಂಧಿಯವರ ಈ ಹೆಣಗಾಟಕ್ಕೆ ‘ರಾಷ್ಟ್ರ’ದ ಕಲ್ಪನೆಗೆ ಗಂಟುಬಿದ್ದಿದ್ದ ಕಾಂಗ್ರೆಸ್, ಹಿಂದೂ ಮಹಾಸಭಾವಾದಿಗಳು ಮತ್ತು ಆಧುನಿಕವಾದಿಗಳಿಂದ ಏಕೆ ಬೆಂಬಲ-ಒತ್ತಾಸೆ ಸಿಗಲಿಲ್ಲ ಎಂಬುದರ ಪರಿಶೀಲನೆ ಕೂಡ ಈ ವಿಶ್ಲೇಷಣೆಯ ಒಂದು ಭಾಗ.

ಈ ಎರಡು ವಿದ್ಯಮಾನಗಳನ್ನು ಪರಿಶೀಲಿಸಲು ನಾನು ಈ ಕೆಳಗೆ ಸೂಚಿಸಿರುವ ಬರಹಗಳಲ್ಲಿನ ಒಳನೋಟಗಳನ್ನು ಬಳಸಿಕೊಂಡಿದ್ದೇನೆ.

Julian Murphet - ಇವರ Post Modernism and Space-ಲೇಖನ
Lloyd Rudolph ಮತ್ತು Susanne Rudolph ಇವರ Post Modern Gandhi ಎಂಬ ಕೃತಿಯThe Road not Taken - The Modernist Roots of Partition ಎರಡನೆಯ ಅಧ್ಯಾಯ.


ಒಂದು, ಎರಡು ತಲೆಮಾರಿನಷ್ಟು ಕಾಲಚಕ್ರದಲ್ಲಿ ಹಿಂದಕ್ಕೆ ಹೋಗಿ ನಾವು ನಮ್ಮ ಮತ್ತು ನಮ್ಮ ಕುಟುಂಬಗಳ ಹಿನ್ನೆಲೆ ಬಗ್ಗೆ ಯೋಚಿಸಿದರೆ, ಒಂದಂಶ ತಿಳಿಯುತ್ತದೆ. ನಮ್ಮ ವಂಶಜರೆಲ್ಲರೂ ಬಹುಕಾಲ ಒಂದೇ ಸ್ಥಳದಲ್ಲಿ ವಾಸಿಸಿದವರಾಗಿರುತ್ತಾರೆ. ವಿದ್ಯೆ, ಉದ್ಯೋಗ, ಸಾಮಾಜಿಕ ಆಕಾಂಕ್ಷೆಗಳಿಂದಾಗಿ ನಾವೆಲ್ಲರೂ ಈ ‘ಸ್ಥಳ’ಗಳಿಂದ ಪಲ್ಲಟಗೊಳ್ಳುತ್ತೇವೆ. ಬಹುಪಾಲು ಸ್ವ ಇಚ್ಛೆಯಿಂದಲೇ ನಾವು ಬಯಸಿದ ವಿದ್ಯೆ, ಉದ್ಯೋಗ, ಸ್ವಾತಂತ್ರ್ಯ, ಎಲ್ಲವೂ ನಮಗೆ ಸಿಗುತ್ತದೆ. ಸ್ವಂತ ‘ಸ್ಥಳ’ವೆಂಬುದು ಮಾತ್ರ ಸಿಗುವುದಿಲ್ಲ.

ನಾವು ಕೊಳ್ಳುವ ಸೈಟು, ಮನೆ, ಸರ್ಕಾರಗಳು ನಮಗಾಗಿ ನಿರ್ಮಿಸುವ ಫ್ಲೈಓವರ್, ಟೌನ್‌ಶಿಪ್, ನೈಸ್ ರಸ್ತೆಗಳು, ಮಾಲ್‌ಗಳು ಇವೆಲ್ಲ Space ಆಗುತ್ತದೆಯೇ ಹೊರತು Place ಆಗಲಾರದು. ಈ ರೀತಿಯ Space ನಿರ್ಮಾಣದ ಹಿಂದೆ ಜನರು, ಸಮುದಾಯಗಳು ವಾಸಿಸಲು ಬೇಕಾಗುವಂತಹ ಆತ್ಮೀಯ, ಖಾಸಗಿ ಸ್ಥಳಗಳನ್ನು ನಿರ್ಮಿಸಬೇಕೆಂಬ ಆಸೆಗಿಂತ ಹೆಚ್ಚಾಗಿ ಹೆಚ್ಚು ಹೆಚ್ಚು ಬಂಡವಾಳದ ಮೊತ್ತವನ್ನು ಹೊಸ ಹೊಸ ತಾಂತ್ರಿಕತೆಯನ್ನು ನಗರ ಪ್ರದೇಶಗಳಿಗೆ ಆಹ್ವಾನಿಸುವ ತಂತ್ರವಿರುತ್ತದೆ. ಹೀಗಾಗಿ ನಗರ ಪ್ರದೇಶಗಳಲ್ಲಿ Space ನ ನಿರ್ಮಾಣವಾಗುವ ಸಂದರ್ಭದಲ್ಲಿ ಸರ್ಕಾರದ ಹಣದ ಹೂಡಿಕೆಯು ಇರುವುದಿಲ್ಲ. ಹೋಗಲೆಂದರೆ ನಮ್ಮ ಸ್ವಂತ ಹಣದ ಹೂಡಿಕೆಯೂ ಇರುವುದಿಲ್ಲ. ಕೈಗಾರಿಕೋದ್ಯಮಿಗಳ ಬೃಹತ್ ಹಣದ ಹೂಡಿಕೆ ಇರುತ್ತದೆ. ಇವರ ಗಮನ ಹೆಚ್ಚು ಲಾಭ ತರುವ ಬೃಹತ್ Spaceಗಳಾದ ಮಾಲ್, ಫ್ಲೈಓವರ್, ಟೌನ್‌ಶಿಪ್, ಕಾರಿಡಾರ್ ರಸ್ತೆಗಳ ಕಡೆಗಳಿಗಿರುತ್ತದೆ. ಸ್ಥಳ ನಿರ್ಮಾಣದ ಕಡೆಗಲ್ಲ.

ಸ್ಥಳ ನಿರ್ಮಾಣ, ಸ್ಥಳ ಪುರಾಣಗಳ ಹಿಂದೆ ನಮ್ಮ ನಮ್ಮ ವೈಯಕ್ತಿಕ ಸಾಮುದಾಯಿಕ ಆಕಾಂಕ್ಷೆಗಳಿಗೆ, ಆಶಯಗಳಿಗೆ ಸಾಮಾಜಿಕ ಗುರಿಗಳಿಗೆ ತಳುಕು ಹಾಕಿಕೊಳ್ಳುವ ಪ್ರಯತ್ನವಿರುತ್ತದೆ. Spaceನ ನಿರ್ಮಾಣದಲ್ಲಿ ಈ ಪ್ರಯತ್ನವಿರುವುದಿಲ್ಲ. ವೈಯಕ್ತಿಕವಲ್ಲದ, ಸಾಮುದಾಯಿಕವಲ್ಲದ Space ನಿರ್ಮಾಣ, ವೈಯಕ್ತಿಕವಾದ ಸಾಮುದಾಯಿಕವಾದ ಸ್ಥಳವನ್ನು ಕಬಳಿಸಲು ಪ್ರಯತ್ನಿಸುತ್ತದೆ. ಈ ಕಬಳಿಕೆಯ ಪ್ರಯತ್ನ ಕೇವಲ ಭೂ ಆಕ್ರಮಣದ ಸ್ವರೂಪದ್ದಲ್ಲ. ಸ್ಥಳವಂದಿಗರಿಗೆ ಸೇರಿದ ಕಥನಗಳು, ನಿರೂಪಣೆಗಳು, ಕಾದಂಬರಿಗಳು, ಐತಿಹ್ಯ ಎಲ್ಲವನ್ನೂ ಹಿಂಬದಿಗೆ, ಮರೆವಿಗೆ ಸರಿಸುತ್ತದೆ. ಮನುಷ್ಯರು, ಸಮುದಾಯದ ತಮ್ಮ ಕಥನ ಸ್ವಾತಂತ್ರ್ಯವನ್ನು, ನಿರೂಪಣಾ ಕೌಶಲವನ್ನು ಕಥಾಸಮೃದ್ಧಿಯನ್ನು ಕಳೆದುಕೊಂಡು ನಿರಾಕಾರ ಜೀವಿಗಳಾಗಿ ಬದುಕಬೇಕಾಗುತ್ತದೆ. ನಾವು ದಿನನಿತ್ಯವೂ ವಾಸಿಸುವ ಬದುಕುವ ಸ್ಥಳದೊಂದಿಗೆ ನಮ್ಮ ಸಂಬಂಧ ಆತ್ಮೀಯವಾಗುವ ಬದಲು ಅಮೂರ್ತವಾಗುತ್ತದೆ.

ಸ್ವಾತಂತ್ರ್ಯ ಬಂದ ಹೊಸದರಲ್ಲಿ ಜರುಗಿದ ನಗರೀಕರಣ ಹಂತಹಂತದಲ್ಲಿ ಕ್ರಮೇಣವಾಗಿ ಜರುಗುವ ಸ್ವರೂಪದ್ದಾಗಿತ್ತು. ಹೀಗಾಗಿ ನಗರೀಕರಣದಿಂದ ಉಂಟಾಗುವ ಅನಾಥಪ್ರಜ್ಞೆಯ ಬಗ್ಗೆ ಮಾತ್ರ ನಾವು ಮಾತನಾಡುತ್ತಿದ್ದೆವು. ಕಳೆದೆರಡು ದಶಕಗಳ ಬೆಳವಣಿಗೆಗಳು, ಜಾಗತೀಕರಣ, ಬಂಡವಾಳಶಾಹಿಯ ದಿಡೀರ್ ವಿಸ್ತಾರ Space ನಿರ್ಮಾಣದ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ವಸತಿಹೀನರು, ಭೂಹೀನರನ್ನು ಕುರಿತು ನಾವು ಮಾತನಾಡುವಾಗಲೆಲ್ಲ ವಿಶೇಷ ಆರ್ಥಿಕವಲಯಗಳ ನಿರ್ಮಾಣದಿಂದಾಗಿ ಕೈಗಾ, ನರ್ಮದಾಗಳಿಂದಾಗಿ ನೆಲೆ ಕಳೆದುಕೊಂಡವರ ಬಗ್ಗೆ ಮಾತ್ರ ಮಾತನಾಡುತ್ತೇವೆ. ನಗರಗಳಲ್ಲಿ, ಒಳ್ಳೊಳ್ಳೆಯ ಫ್ಲಾಟ್‌ಗಳಲ್ಲಿ ವಾಸಿಸುತ್ತ ಫ್ಲೈಓವರ್‌ಗಳ ಮೇಲೆ ವಾಹನಗಳನ್ನು ಓಡಿಸುತ್ತ, ಮಾಲ್‌ಗಳಲ್ಲಿ ಸಂಗೀತವನ್ನು ಕೇಳಿಸಿಕೊಳ್ಳುತ್ತ, ದೊಡ್ಡ ದೊಡ್ಡ ಸ್ಟೇಡಿಯಂಗಳಲ್ಲಿ ಪಂದ್ಯಾವಳಿಗಳನ್ನು ನೋಡುತ್ತ ನಾವು ಕೂಡ ಸ್ಥಳಹೀನರಾಗುತ್ತಿರುತ್ತೇವೆ. ನೆಲೆ ಕಳೆದುಕೊಳ್ಳುತ್ತಿರುತ್ತೇವೆ. ಇದು ನಮ್ಮ ಅರಿವಿಗೆ ಬರಲಾರದು. ಸ್ವಂತವಾಗಿ ಅನುಭವಿಸುತ್ತಿರುವುದೇ ನಮ್ಮ ಪ್ರಜ್ಞೆಗೆ ತಟ್ಟದೇ ಹೋದಾಗ ಇನ್ನು ಚಿಂತನೆಯ ರೂಪದಲ್ಲಿ, ಅಮೂರ್ತ ಗ್ರಹಿಕೆಯ ರೂಪದಲ್ಲಿ ನಮಗೆ ಈ ವಿದ್ಯಮಾನವೆಲ್ಲ ಗ್ರಹಿಕೆಗೆ ಬರಬಹುದೆಂದು ಊಹಿಸುವುದು ಕೂಡ ತಪ್ಪಾಗುತ್ತದೆ.


ನವ್ಯೋತ್ತರ ಕಾಲಮಾನದಲ್ಲಿ Space,Place ಪರಿಕಲ್ಪನೆಗಳು ಚಾಲ್ತಿಗೆ ಬರುತ್ತಿರುವ ರೀತಿಯನ್ನು ಈ ಬೆಳವಣಿಗೆಯ ಹಿಂದಿರುವ ದೃಷ್ಟಿಕೋನವನ್ನು ಸ್ಥೂಲವಾಗಿ ಗಮನಿಸಿದ ಮೇಲೆ ನಾವು ಎದುರಿಸಬೇಕಾದ ಪ್ರಶ್ನೆಯೆಂದರೆ ದೇಶಕ್ಕೆ ಸ್ವಾತಂತ್ರ್ಯ ಬರದೇ ಹೋದರೂ ಪರವಾಗಿಲ್ಲ, ತಡವಾಗಿ ಬಂದರೂ ಚಿಂತೆಯಿಲ್ಲ. ದೇಶವು ಒಂದಾಗಿರುವುದರ ಜೊತೆಗೆ ಹೀಗೆ ಒಂದಾಗಿರುವ ದೇಶದಲ್ಲಿ ಬಹುಸಂಖ್ಯಾತರಿಗಿಂತ ಅಲ್ಪಸಂಖ್ಯಾತರುಗಳಿಗೆ ಹೆಚ್ಚು ಹಕ್ಕು, ಅವಕಾಶಗಳಿರಬೇಕೆಂದು ವಾದಿಸುತ್ತಾ ಬಂದ ಗಾಂಧಿಯ ಗ್ರಹಿಕೆಗಳು ನವ್ಯೋತ್ತರ ಚಿಂತನಾ ಕ್ರಮಕ್ಕೆ ಎಷ್ಟು ಮತ್ತು ಹೇಗೆ ಹತ್ತಿರವಾಗಿದ್ದವು ಎಂಬುದು.

ಎಲ್ಲ ಸ್ವಾತಂತ್ರ್ಯ ಹೋರಾಟಗಾರರಂತೆ ಗಾಂಧಿಗೂ ಭಾರತವು ಒಂದು ದೇಶವಾಗಬೇಕಾಗಿತ್ತು, ರಾಷ್ಟ್ರವಾಗಬೇಕಾಗಿತ್ತು. ಆದರೆ, ಈ ದೇಶ ಮತ್ತು ರಾಷ್ಟ್ರವೆಂಬುದು ಒಂದು ರಾಜಕೀಯ ಅಥವಾ ಭೌಗೋಳಿಕ ಕಲ್ಪನೆಯಾಗುವ ಬದಲಿಗೆ, ದೇಶ ಅಥವಾ ರಾಷ್ಟ್ರದೊಳಗೆ ಇರುವ ಎಲ್ಲ ಸಮುದಾಯಗಳ, ಆ ಸಮುದಾಯಗಳ ಜೀವಂತಿಕೆಯ ಒಂದು ಮೊತ್ತವಾಗಬೇಕಾಗಿತ್ತು. ಸಮುದಾಯಗಳು ವಾಸಿಸುವುದು, ಜೀವನ ಸಾಗಿಸುವುದು ನೆನಪು - ಕ್ರಿಯಾಶೀಲತೆ, ಕನಸುಗಾರಿಕೆ ಎಲ್ಲದಕ್ಕೂ ಇಂಬುಗೊಡುವ Placeನಲ್ಲಿ, ಸ್ಥಳಗಳಲ್ಲಿ - ನಿರಾಕಾರವಾದ ಬೃಹತ್ Spaceನಲ್ಲಲ್ಲ. ದೇಶವೆಂಬುದು ಸಮುದಾಯಗಳ ಮೊತ್ತವೆಂಬ ಗಾಂಧಿಯ ಕಲ್ಪನೆಯಲ್ಲಿ ಸಮುದಾಯಗಳ ನಡುವೆ ನಿರಂತರ ಕೊಡುಕೊಳ್ಳುವಿಕೆ ಸಂವಾದವೆಲ್ಲ ಇರುತ್ತದೆ. ಈ ಕೊಡುಕೊಳ್ಳುವಿಕೆ ಮತ್ತು ಸಂವಾದಗಳು ಸಮುದಾಯಗಳ ನಡುವೆ ನಿರಂತರವಾಗಿ ನಡೆಯುತ್ತಿರಬೇಕಾದರೆ ಸರ್ಕಾರವು ತುಂಬಾ ಬಲಿಷ್ಠವಾಗಿರಬೇಕಾಗಿಲ್ಲ. ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವಷ್ಟು ಶಕ್ತಿಶಾಲಿಯಾಗಿದ್ದರೆ ಸಾಕು. ಈ ಕಾರಣಕ್ಕಾಗಿ ಗಾಂಧಿ ಪೂರ್ಣ ಸ್ವಾತಂತ್ರ್ಯಕ್ಕಿಂತಲೂ ಹೆಚ್ಚಾಗಿ Dominion Statusನ್ನು ಇಷ್ಟಪಟ್ಟರು. ನೆಹರು, ಕಾಂಗ್ರೆಸ್, ಹಿಂದೂ ಮಹಾಸಭಾವಾದಿಗಳು, ಆಧುನಿಕವಾದಿಗಳು - ಎಲ್ಲರೂ ಬಯಸುತ್ತಿದ್ದುದು ಬಲಿಷ್ಠ ರಾಷ್ಟ್ರವನ್ನು. ಸಮುದಾಯಗಳ ನಡುವೆ ಕೊಡುಕೊಳ್ಳುವಿಕೆಯೇ ಇಲ್ಲದೆ ಬಲಿಷ್ಠ ಸರ್ಕಾರವೇ ಎಲ್ಲವನ್ನೂ ನಿಯಂತ್ರಿಸುವ, ನಿರ್ಧರಿಸುವ ಸನ್ನಿವೇಶವನ್ನು ಮುಸ್ಲಿಮರಿಗೆ, ಪಾಕಿಸ್ಥಾನದ ಪರವಾಗಿ ವಾದಿಸುತ್ತಿದ್ದವರಿಗೆ ಇಂತಹದೊಂದು ಸನ್ನಿವೇಶದ ಬಗ್ಗೆ ಭಯವಿತ್ತು, ಆತಂಕವಿತ್ತು. ಇದನ್ನರಿತಿದ್ದ ಗಾಂಧಿ ಪೂರ್ಣ ಸ್ವಾತಂತ್ರ್ಯದ ಬದಲಾಗಿ Dominion Status ಒಪ್ಪಿಕೊಂಡು ನಿರಂತರ ಕೊಡುಕೊಳ್ಳುವಿಕೆ, ಸಂವಾದದ ಮೂಲಕ ಎರಡೂ ಸಮುದಾಯಗಳು ಒಟ್ಟಾಗಿ ಬದುಕುತ್ತಾ ವಿಕಾಸಗೊಳ್ಳುವುದಾದರೆ, ಇಂತಹದೊಂದು ಸ್ಥಿತಿ ಪೂರ್ಣ ಸ್ವಾತಂತ್ರ್ಯ ಬಂದು ಸಮುದಾಯಗಳು ಮಾನಸಿಕವಾಗಿ ಸದಾ ದೂರವಿದ್ದು, ಸದಾ ಕಿತ್ತಾಡುವ ಸನ್ನಿವೇಶಕ್ಕಿಂತ ಉತ್ತಮ ಎಂದು ಭಾವಿಸಿದ್ದರು.

ಇದು ಗಾಂಧಿಯ ಹಗಲುಗನಸಾಗಿರಲಿಲ್ಲ, ಆದರ್ಶ ಕಲ್ಪನೆಯಾಗಿರಲಿಲ್ಲ. ಒಂದು ಹಂತದಲ್ಲಿ ಕಾಂಗ್ರೆಸ್ ಕಾರ್ಯಕ್ರಮ, ನೀತಿಯಾಗಿಯೇ ಇತ್ತು ಎಂಬುದನ್ನು ಗಮನಿಸಬೇಕು.

ಈ ದೃಷ್ಟಿಯಿಂದ ೧೯೨೯ರ ಲಾಹೋರ್ ಕಾಂಗ್ರೆಸ್ ಸಮ್ಮೇಳನ ತುಂಬಾ ಮಹತ್ವಪೂರ್ಣವಾದದ್ದು. ಈ ಸಮ್ಮೇಳನದಲ್ಲಿ ಜವಹರಲಾಲ್‌ರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆರಿಸಲಾಯಿತು. ಮತ್ತು ಇದುವರೆಗೆ Dominion Status ಪರವಾಗಿ ವಾದಿಸುತ್ತಿದ್ದ ಕಾಂಗ್ರೆಸ್ ಈಗ ಪೂರ್ಣ ಸ್ವಾತಂತ್ರ್ಯದ ಪರವಾಗಿ ವಾದಿಸಲು, ಹೋರಾಡಲು ಪ್ರಾರಂಭಿಸಿತು. ಈ ಪರಿವರ್ತನೆಯ ಹಿಂದೆ ಒಂದು ದೊಡ್ಡ ಇತಿಹಾಸವೇ ಇದೆ. ಲಾಹೋರ್ ಸಮ್ಮೇಳನಕ್ಕೆ ಮುಂಚೆ ಕಾಂಗ್ರೆಸ್ ಚಳುವಳಿಯ ಧ್ಯೇಯ ಹೇಗಾದರೂ ಸರಿ ಹಿಂದೂ ಮುಸ್ಲಿಂ ಐಕ್ಯತೆಯನ್ನು ಉಳಿಸಿಕೊಳ್ಳಬೇಕು, ರೂಢಿಸಿಕೊಳ್ಳಬೇಕು ಎಂಬುದಾಗಿತ್ತು. ಇದಕ್ಕಾಗಿ ಗಾಂಧಿ ಒಂದು ಹಂತದಲ್ಲಿ ಜವಹಾರ್ ಲಾಲರನ್ನು ತಕ್ಷಣವೇ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಮೋತಿಲಾಲರ ಸೂಚನೆಯನ್ನು ಕೂಡ ಬದಿಗೆ ತಳ್ಳಿ ಸಾಂಕೇತಿಕವಾಗಿ ಎ.ಎಂ. ಅನ್ಸಾರಿಯವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿ, ಜವಹರಲಾಲರನ್ನು ಮಹಾಕಾರ್ಯದರ್ಶಿಯಾಗಿ ನೇಮಿಸಿದ್ದರು. ತನಗೆ ಬೇಕಾದ ಮುಸ್ಲಿಂ ಕಾಂಗ್ರೆಸ್ ಅಧ್ಯಕ್ಷನನ್ನು ನೇಮಿಸುವ ಮೂಲಕ ಗಾಂಧಿಗಿದ್ದ ಯೋಚನೆಯೆಂದರೆ ೧೯೧೬ತ ಲಕ್ನೋ ಒಪ್ಪಂದಕ್ಕೆ ಹಿಂದೂ ಮುಸ್ಲಿಂ ಸಮುದಾಯಗಳ ಬೆಂಬಲವನ್ನು ಸಂಪಾದಿಸುವುದಾಗಿತ್ತು. ಲಕ್ನೋ ಒಪ್ಪಂದದ ಪ್ರಕಾರ ಹಿಂದೂ ಮುಸ್ಲಿಂ ಸಮುದಾಯಗಳು ಪಾರ್ಲಿಮೆಂಟರಿ ಪ್ರಜಾಪ್ರಭುತ್ವವನ್ನು ದೇಶೀಯ ಸರ್ಕಾರವನ್ನು ಬ್ರಿಟಿಷರಿಂದ ಒತ್ತಾಯಿಸುವುದರ ಜೊತೆಗೆ ಅಲ್ಪಸಂಖ್ಯಾತರಿಗೆ ದೇಶದಲ್ಲಿ ಅವರ ಜನಸಂಖ್ಯೆಯ ಪ್ರಮಾಣವನ್ನು ಮೀರಿ ಕೂಡ ಪ್ರಾತಿನಿಧ್ಯವಿರಬೇಕೆಂಬ ಸೂಚನೆಯನ್ನು ಕೂಡ ಒಪ್ಪಲಾಗಿತ್ತು. ಕಾಂಗ್ರೆಸ್‌ನಲ್ಲಿದ್ದ ಉದಾರವಾದಿಗಳು ಈ ಸೂಚನೆಯ ಪರವಾಗೇ ಇದ್ದರು. ಜವಹರಲಾಲ್‌ರಂತಹ ಕಾಂಗ್ರೆಸ್ಸಿಗರು ಮತ್ತು ಹಿಂದೂ ಮಹಾಸಭಾವಾದಿಗಳು ಮುಸ್ಲಿಮರಿಗೆ ಜನಸಂಖ್ಯೆಯ ಪ್ರಮಾಣಕ್ಕಿಂತ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವ ಅಗತ್ಯವನ್ನು ಒಪ್ಪಲಿಲ್ಲ. ಹೀಗೆಲ್ಲ ಇದ್ದರೂ ೧೯೨೮ರ ತನಕ ಮೋತಿಲಾಲ್, ಜಿನ್ನ ಎಲ್ಲರೂ ದೇಶವು ಒಡೆಯಕೂಡದು, ಹಿಂದು ಮುಸಲ್ಮಾನರು ಒಗ್ಗಟ್ಟಾಗಿಯೇ ಇರಬೇಕು ಎಂದು ವಾಸಿಸುತ್ತಿದ್ದರು, ಚಿಂತಿಸುತ್ತಿದ್ದರು. ಮೊದಲೇ ಹೇಳಿದಂತೆ ಈ ಒಗ್ಗಟ್ಟಿನ ಆಶಯಕ್ಕನುಗುಣವಾಗಿ ಸಮುದಾಯಗಳು ಒಟ್ಟಾಗಿ ಬದುಕುತ್ತಾ ನಿರಂತರ ಸಂವಾದ ಕೊಡುಕೊಳ್ಳುವಿಕೆ ಸಾಧ್ಯವಾಗಿಸುವ ಯತ್ನ Dominion Statusನ್ನೇ ಪ್ರತಿಪಾದಿಸಲಾಗುತ್ತಿತ್ತು.

ಈ ಮಧ್ಯೆ ೧೯೨೭ರಲ್ಲಿ ಜವಹಾರ್‌ಲಾಲ್ ನಡೆಸಿದ ಯೂರೋಪು ಮತ್ತು ರಷ್ಯಾ ಪ್ರವಾಸ ಆತನ ದೃಷ್ಟಿಕೋನವನ್ನು ಪೂರ್ತಿಯಾಗಿ ಬದಲಾಯಿಸಿತು. ರಷ್ಯಾದ ಬಲಿಷ್ಠ ಕೇಂದ್ರ ಸರ್ಕಾರ, ಬ್ರಸೆಲ್ ಸಮ್ಮೇಳನದಲ್ಲಿ ವಸಾಹತುಶಾಹಿ ಶೋಷಣೆಯ ವಿರುದ್ಧ ಕಂಡುಬಂದ ಪ್ರಖರ ವಿರೋಧ ಜವಹಾರ್‌ಲಾಲ್‌ರನ್ನು ಪೂರ್ಣ ಸ್ವಾತಂತ್ರ್ಯ, ಬಲಿಷ್ಠ ದೇಶೀ ಸರ್ಕಾರದ ಪರವಾಗಿ ಪರಿವರ್ತಿಸಿತು. ಮಧು ಲಿಮೆಯೆ ಪ್ರಕಾರ ಯೂರೋಪಿನಿಂದ ಹಿಂದಿರುಗಿದ ಜವಾಹಾರ್‌ಲಾಲ್ ಇಡಿಯಾಗಿ ಬೇರೆ ಮನುಷ್ಯರೇ ಆಗಿದ್ದರು. ಮಾರ್ಕ್ಸ್‌ವಾದದ ಕಾರಂಜಿಯಲ್ಲಿ ಸಿಕ್ಕ ಜಲಪಾನದಿಂದಾಗಿ ಉನ್ಮತ್ತರಾಗಿದ್ದರು. ಜವಹಾರ್‌ಲಾಲ್‍ರಲ್ಲಾದ ಈ ಬದಲಾವಣೆಯನ್ನು ಗಾಂಧಿ ಬಹು ನೊಂದುಕೊಂಡು ವಿರೋಧಿಸಿದರು. ಪೂರ್ಣ ಸ್ವಾತಂತ್ರ್ಯದ ಕಲ್ಪನೆ, ಬಲಿಷ್ಠ ಸರ್ಕಾರದ ಕಲ್ಪನೆ ಭಾರತದ ವಿಶಿಷ್ಟ ಸಾಂಸ್ಕೃತಿಕ ಸನ್ನಿವೇಶವನ್ನು - ಇತಿಹಾಸವನ್ನು ಪರಿಗಣಿಸುತ್ತಿಲ್ಲ. ಹಾಗಾಗಿ ಆ ಬೇಡಿಕೆ ತುಂಬಾ ಆತುರದಿಂದ ಕೂಡಿದೆ ಎಂದು ಮತ್ತೆ ಮತ್ತೆ ನೆಹರೂಗೆ ಬರೆದರು. ನೆಹರೂ ೧೯೨೨-೧೯೨೯ರ ನಡುವೆ ಗಾಂಧಿಗೆ ಬರೆದ ಪತ್ರಗಳಲ್ಲಿ ತೀವ್ರವಾಗಿ, ಖಾರವಾಗಿ ಗಂಧಿಯ ಕಾರ್ಯವೈಖರಿ, ಸೀಮಿತ ಸ್ವಾತಂತ್ರ್ಯದ ಕಲ್ಪನೆ, ಹಿಂದ್ ಸ್ವರಾಜ್ ಕೃತಿಯ ಆಶಯಗಳು ಎಲ್ಲವನ್ನು ವಿರೋಧಿಸಿದರು. ಈ ಗುರುಶಿಷ್ಯರ ನಡುವೆ ನಡೆದ ಪತ್ರವ್ಯವಹಾರದಲ್ಲಿ ಇಬ್ಬರೂ ಆರೋಪ - ಪ್ರತ್ಯಾರೋಪಗಳನ್ನು ಮಾಡುವ ಹಂತಕ್ಕೂ ಹೋದರು. ನಂತರದ ಎಲ್ಲ ಬೆಳವಣಿಗೆಗಳನ್ನು ಇಲ್ಲಿ ವಿವರವಾಗಿ ನಮೂದಿಸುವ ಅಗತ್ಯವಿಲ್ಲ. ೧೯೩೭ರ ತನಕವು ದೇಶದ ವಿಭಜನೆ ಅನಿವಾರ್ಯವಾಗಿ ಕಂಡಿರಲಿಲ್ಲ. ಸ್ವಾತಂತ್ರ್ಯ ಚಳವಳಿ ತೀವ್ರವಾಗುತ್ತಿದ್ದಂತೆ, ಬ್ರಿಟಿಷರ ನಿರ್ಗಮನ ಖಚಿತವಾಗುತ್ತಿದ್ದಂತೆ ಆಧುನಿಕತೆಯ ಬಲಿಷ್ಠ ರಾಷ್ಟ್ರದ ಕನಸು ಹೆಚ್ಚಾಗುತ್ತಿದ್ದಂತೆ, ಅಲ್ಪಸಂಖ್ಯಾತರು ಬೇರೆಯೇ ಕಾರ್ಯಕ್ರಮಗಳನ್ನು ರೀತಿನೀತಿಗಳನ್ನು ಮಂಡಿಸಬೇಕಾದ್ದು ಅನಿವಾರ್ಯವಾಯಿತು. ಸಮುದಾಯಗಳು ಒಟ್ಟಿಗೇ ಹೊಂದಿಕೊಂಡು ಕೊಡುಕೊಳ್ಳುತ್ತ ಬದುಕುವ ಸಾಮಾಜಿಕ-ರಾಜಕೀಯ ವ್ಯವಸ್ಥೆಗೆ ಗಾಂಧಿ ಎಷ್ಟು ಒತ್ತುಕೊಟ್ಟರೆಂದರೆ ಹರಿಜನರಿಗಾಗಿ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಕೂಡ ಅವರು ಒಪ್ಪಲಿಲ್ಲವೆಂಬುದನ್ನು ಗಮನಿಸಬೇಕು. ಗಾಂಧಿಯ ಈ ನಿರ್ಧಾರದ ಬಗ್ಗೆ ಈವತ್ತಿಗೂ ಸಾಕಷ್ಟು ದಲಿತರಿಗೆ ವಿರೋಧವಿದೆ, ಸಿಟ್ಟಿದೆ. ಆದರೆ ಗಾಂಧಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒಂದು ಸಮುದಾಯದ ಬಗ್ಗೆ ಮಾತ್ರ ಯೋಚಿಸುತ್ತಿರಲಿಲ್ಲ. ಒಟ್ಟು ಸಮಾಜ ಮತ್ತು ನಾಗರೀಕತೆಯ ಕಲ್ಪನೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದರು ಎಂಬುದನ್ನು ಯಾರೂ ಮರೆಯಬಾರದಷ್ಟೇ.

ಗಾಂಧಿಯ ಹಿಂದ್ ಸ್ವರಾಜ್ ಕೃತಿಯ ಹಿಂದಾಗಲೀ, ಉಳಿದ ಕಲ್ಪನೆಗಳ ಹಿಂದಾಗಲೀ ಇದ್ದದ್ದು ಇಲ್ಲಿಯ ಜನಸಮುದಾಯ ಸಾಂಪ್ರದಾಯಿಕವಾಗಿ ರೂಢಿಸಿಕೊಂಡು ಬಂದಿದ್ದ ನೆಮ್ಮದಿ, ಜೀವನಪ್ರೀತಿ ಮತ್ತು ಸಮುದಾಯಪ್ರಜ್ಞೆ ಸಾವಿರಾರು ವರ್ಷ ರಾಜಕೀಯವಾಗಿಯಲ್ಲದಿದ್ದರೂ ಸಾಂಸ್ಕೃತಿಕವಾಗಿಯೂ ಜೀವನ ವಿಧಾನದಲ್ಲಿಯೂ ಒಟ್ಟಾಗಿ ಬದುಕಿಕೊಂಡು ಬಂದ ಸಮುದಾಯದ ಕಲ್ಪನೆಯನ್ನು ಗಾಂಧಿ ‘ದೇಶ’, ‘ರಾಷ್ಟ್ರ’ ಇಂತಹ ಅಮೂರ್ತ ಕಲ್ಪನೆಗಳ ಪರವಾಗಿ ಬಿಟ್ಟುಕೊಡಲು ತಯಾರಿರಲಿಲ್ಲ. ‘ದೇಶ’ ಮತ್ತು ‘ರಾಷ್ಟ್ರ’ದ ಕಲ್ಪನೆ ಹುಟ್ಟಿದ್ದೇ ಯೂರೋಪಿನ ಆಧುನಿಕತೆಯ - ವಸಾಹತುಶಾಹಿಯ ಚಿಂತನೆಯ ಒಂದು ಭಾಗವಾಗಿ. ಈ ಚಿಂತನೆ ಪ್ರೇರೇಪಿಸಿದ ಬಲಿಷ್ಠ ರಾಷ್ಟ್ರ, ಮಿಲಿಟರಿ ವ್ಯವಸ್ಥೆ, ನಗರೀಕರಣ, ಕೈಗಾರೀಕರಣ, ವಸಾಹತುಶಾಹಿ ಎಲ್ಲವನ್ನೂ ನಾವು ಕಂಡಿದ್ದೇವೆ. ಅದರ ವ್ಯಾಮೋಹಕ್ಕೆ ಒಳಗಾಗಿದ್ದೇವೆ. ನಮ್ಮ ಸ್ವಾತಂತ್ರ್ಯ ಚಳುವಳಿಯ ಹಿಂದಿನ ಪ್ರೇರಣೆ ಕೂಡ ಈ ಆಧುನಿಕ ಸಾಕ್ಷಾತ್ಕಾರವೇ. ಈ ಆಧುನಿಕತೆಯ ವ್ಯಾಮೋಹವೇ ದೇಶ ವಿಭಜನೆಯಲ್ಲಿ ಪರ್ಯಾವಸಾನಗೊಂಡಿತಷ್ಟೆ.

ಈ ದೃಷ್ಟಿಯಿಂದ ಗಾಂಧಿ ನವ್ಯೋತ್ತರ, ನವ್ಯದ ಆಧುನಿಕರ ತೀವ್ರ ಕಾಲದಲ್ಲಿ ಬದುಕಿ ಕೂಡ ಅದರಿಂದಾಚೆಗೆ ಯೋಚಿಸಿದವರು. ಸ್ವಾತಂತ್ರ್ಯ ಬಂದ ನಂತರ ಕಳೆದ ಆರೇಳು ದಶಕಗಳ ಉಪಖಂಡದ ವಿದ್ಯಮನಗಳು ಗಾಂಧಿಯ ಚಿಂತನೆಯ ದೂರಗಾಮಿತನವನ್ನು ತೋರಿಸಿವೆ.

ಭಾರತ-ಪಾಕಿಸ್ಥಾನ, ಬಾಂಗ್ಲಾವನ್ನು ತನ್ನ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಈ ದೇಶಗಳ ನಿರ್ಮಾಣವೇ ರಾಜಕೀಯ ನಿರ್ಧಾರವಾಗಿತ್ತು. ಗಡಿ ವಿಭಜನೆ, ಜನರ ವಲಸೆ, ಹಿಂಸೆ, ದೇಶಗಳ ನಡುವೆ ಇರುವ ಓಡಾಟಕ್ಕೆ ಇರುವ ಕೃತಕ ನಿಯಮಗಳು ಇದ್ಯಾವುದಕ್ಕೂ ಇತಿಹಾಸದ - ಸಂಸ್ಕೃತಿಯ ಒತ್ತಾಸೆಯಿರಲಿಲ್ಲ. ಏಕೆಂದರೆ ಸಾವಿರಾರು ವರ್ಷ ಇದೇ ನೆಲದಲ್ಲಿ ಇದೇ ಜನ ತಮ್ಮೆಲ್ಲ ವೈವಿಧ್ಯ, ಭಿನ್ನತೆಗಳ ನಡುವೆ ಬದುಕಿಕೊಂಡು ಬಂದಿದ್ದರು. ಧರ್ಮದ ಅಥವಾ ರಾಜಕೀಯದ ಕಾರಣಕ್ಕೂ ಈ ವೈವಿಧ್ಯ, ಭಿನ್ನತೆಯನ್ನು ಬದಿಗಿಟ್ಟು ‘ದೇಶ’ ‘ರಾಷ್ಟ್ರ’ದ ಕಲ್ಪನೆಯನ್ನು ಒಪ್ಪಿಕೊಂಡಿದ್ದರಿಂದ ಮೊದಲನೆಯದಾಗಿ ಮೂರೂ ದೇಶಗಳು ನಿರಂತರ ರಾಜತಾಂತ್ರಿಕ-ಮಿಲಿಟರಿ -ರಾಜಕೀಯ ಸಂಘರ್ಷದಲ್ಲಿರಬೇಕಾಯಿತು. ಭಾರತ-ಪಾಕಿಸ್ಥಾನ ಎರಡೂ ದೇಶಗಳಲ್ಲೂ ಬುಡಕಟ್ಟು ಜನಾಂಗಗಳಿಗೆ, ಧಾರ್ಮಿಕ ಅಲ್ಪಸಂಖ್ಯಾತರಿಗೆ ನೆಮ್ಮದಿಯಿಲ್ಲ. ಬಲೂಚಿಸ್ಥಾನ, ಸಿಂದ್, ಕಾಶ್ಮೀರ, ಅಸ್ಸಾಮ್, ಪೂರ್ವ ಬಾಂಗ್ಲಾ ಎಲ್ಲ ಕಡೆಯೂ ಇದೇ ಕಥೆ. ಈ ಭಾಗಗಳಲ್ಲಿ ವಾಸಿಸುವ ಜನರ ಸ್ವಯಂ ನಿರ್ಧಾರದ ಹಕ್ಕು ಭಾರತಕ್ಕೂ, ಪಾಕಿಸ್ಥಾನಕ್ಕೂ, ಬಾಂಗ್ಲಾ ದೇಶಕ್ಕೂ ಎಂದಿನಿಂದಲೂ ದೇಶವಿರೋಧಿ ಚಟುವಟಿಕೆಯಾಗಿಯೇ ಕಂಡುಬಂದಿದೆ. ಈ ದೇಶಗಳ ಮಿಲಿಟರಿ, ಅಣುವ್ಯವಸ್ಥೆಗಳು ಬಲಿಷ್ಠವಾದಂತೆಲ್ಲ ಸಮುದಾಯಗಳು, ವಿಶೇಷವಾಗಿ ಆಧುನಿಕತೆಯ ತೆಕ್ಕೆಗೆ ಪ್ರವೇಶಿಸಲಾರದಂತಹ ಗುಂಪುಗಳು ನೆಲೆ ಕಳೆದುಕೊಂಡಿವೆ, ಅನಾಥವಾಗಿವೆ. ಶ್ರೀಲಂಕಾ, ಬರ್ಮಾ, ಅಫ್ಘಾನಿಸ್ಥಾನದ ಪರಿಸ್ಥಿತಿ ಕೂಡ ಭಿನ್ನವಾಗೇನಿಲ್ಲ.

ಇತಿಹಾಸದ, ಪುರಾಣದ ಬೇರೆ ಬೇರೆ ಘಟ್ಟಗಳಲ್ಲಿ ಈ ಎಲ್ಲ ಪ್ರದೇಶಗಳು ಒಂದಾಗಿದ್ದವು. ದಿನನಿತ್ಯದ ಜೀವನದ ಲಯದಲ್ಲಿ, ಸಾಂಸ್ಕೃತಿಕವಾಗಿ, ಕೃಷಿ, ಕೈಗಾರಿಕೆಯ ವಿಶಿಷ್ಟತೆಯಲ್ಲಿ, ಆದರೆ ರಾಜಕೀಯವಾಗಿ ಈ ಪ್ರದೇಶಗಳು ಯಾವಾಗಲೂ ‘ಅಖಂಡ’ವಾಗಿರಲಿಲ್ಲ. ಗಾಂಧೀಜಿ ಬಯಸಿದ್ದು ರಾಜಕೀಯ, ಮಿಲಿಟರಿ ಅಖಂಡತೆಯನ್ನಲ್ಲ. ಸಮುದಾಯಗಳಿಗೆ ಹೆಚ್ಚಿನ ಸ್ವಾತಂತ್ರ್ಯ, ಜೀವನಾವಕಾಶಗಳಿರುವಂತಹ ಅಖಂಡತೆಯನ್ನು. ಈ ರೀತಿಯ ‘ಅಖಂಡತೆ’ಯ ಕಲ್ಪನೆಯನ್ನು ಭಾರತ ಮತ್ತು ಪಾಕಿಸ್ಥಾನದಲ್ಲಿರುವ ಮೂಲಭೂತವಾದಿಗಳು ಒಪ್ಪುವುದಿಲ್ಲ.

ಇಷ್ಟೆಲ್ಲ ಹೇಳಿದ ಮೇಲೂ ಗಾಂಧಿ ನಮಗೆ ಭಾವನಾತ್ಮಕವಾಗಿ, ವೈಚಾರಿಕವಾಗಿ ಆತ್ಮೀಯರಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರ ಆಳದ ಒಲವಿರುವುದೇ ಆಧುನಿಕತೆ ಮತ್ತು ಬಲಿಷ್ಠ ರಾಷ್ಟ್ರದ ಪರವಾಗಿ. ಇದರಿಂದ ನಾವೆಲ್ಲರೂ ಒಂದು ದಿನ ನಾಶವಾಗುವ, ಅನಾಥವಾಗುವ ಸಾಧ್ಯತೆ ಇದ್ದರೂ ಇರಬಹುದು ಎಂಬುದು ಗೊತ್ತಿದ್ದರೂ ಈ ಕಾರಣಕ್ಕಾಗಿಯೇ ಬಲಿಷ್ಠ ರಾಷ್ಟ್ರದ ಕಲ್ಪನೆಯನ್ನು ಒಪ್ಪುವಂತಹ, ಹಿಂದೂ ಮಹಾಸಭಾವಾದಿಯಂತಹ ಸಂಘಟನೆಗಳನ್ನು ನಾವು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದೇವೆ.

ಈ ರೀತಿಯ ಆಯ್ಕೆಗೆ ಕಾರಣ ಪ್ರಾಯಶಃ ನಾವೆಲ್ಲರೂ ಹೆಚ್ಚಾಗಿ ಸಮಕಾಲೀನತೆ ಮತ್ತು ಚರಿತ್ರೆಗೆ ಹೆಚ್ಚು ಹೆಚ್ಚು ಪ್ರತಿಕ್ರಿಯಿಸುವುದರಿಂದ. ಗಾಂಧಿ ಕೂಡ ಪ್ರತಿಕ್ರಿಯಿಸುತ್ತಿದ್ದುದು ಸಮಕಾಲೀನತೆ ಮತ್ತು ಚರಿತ್ರೆಗೇ. ಆದರೆ ಹಾಗೆ ಪ್ರತಿಕ್ರಿಯಿಸುವಾಗ ನಾವು ಯಾವ ರೀತಿಯ ನಾಗರೀಕತೆಯ ಪರವಾಗಿರಬೇಕು ಎಂಬುದು ಕೂಡ ಅವರ ಕಾಳಜಿಯಾಗಿತ್ತು. ಈ ರೀತಿಯ ಕಾಳಜಿಯನ್ನು ಗಾಂಧಿಯವರ ಮತ್ತ್ಯಾವ ಸಮಕಾಲೀನರಲ್ಲಿಯೂ ಕಾಣಲಾರೆವು ಎಂಬುದರಿಂದಲೇ ಗಾಂಧಿ ನವ್ಯ ಮತ್ತು ಆಧುನಿಕತೆಯ ತೀವ್ರ ಸಂದರ್ಭದಲ್ಲಿ ತೀವ್ರವಾಗಿ ಬದುಕಿಯೂ ಕೂಡ, ಮುಂದೆಂದೋ ಯೂರೋಪಿನಲ್ಲಿ ಚಿಂತನಾರೂಪಿಯಾಗಿ ಮಾತ್ರ ಕಾಣಿಸಿಕೊಂಡ ನವ್ಯೋತ್ತರ - ಆಧುನಿಕೋತ್ತರ ಪರಿಕಲ್ಪನೆ-ಆಶಯಗಳೆಲ್ಲವನ್ನೂ ಬಹು ಹಿಂದೆಯೇ ಇನ್ನೂ ಹೆಚ್ಚು ಸಮಗ್ರತೆಯಿಂದಲೂ, ಜೀವಂತಿಕೆಯಿಂದಲೂ ಒಳಗೊಂಡಿದ್ದರು.

ಹಿಂದ್ ಸ್ವರಾಜ್‌ನ ಈವತ್ತಿನ ಹೊಸ ಮತ್ತು ಮರು ಓದು ಈ ಹಿನ್ನೆಲೆಯಲ್ಲೇ ಜರುಗಬೇಕು.

ಸಂಚಯ ದ್ವೈಮಾಸಿಕ ಸಾಹಿತ್ಯ-ಸಾಂಸ್ಕೃತಿಕ ಪತ್ರಿಕೆಯ ಜುಲೈ ಅಗಸ್ಟ್ ೨೦೦೯ರ ೮೧ನೇ ವಿಶೇಷ ಸಂಚಿಕೆ (ನೂರರ ಹಿಂದ್ ಸ್ವರಾಜ್)ಯಲ್ಲಿ ಪ್ರಕಟಿತ.
ಮುಂದೆ ಓದಿ....

Monday, August 10, 2009

ನನ್ನ ಒಂದೆರಡು ಮಾತು

ಆಸಕ್ತಿ (೧೯೯೧), ಮನೋಧರ್ಮ (೨೦೦೧) ನನ್ನ ವಿಮರ್ಶಾತ್ಮಕ, ಸಾಂಸ್ಕೃತಿಕ ಬರಹಗಳ ಹಿಂದಿನ ಸಂಕಲನಗಳು. ಈಗ ಈ ಸಂಕಲನವನ್ನು ಹೊರತರಲು ನನಗೆ ಹಿಂಜರಿಕೆಯಿತ್ತು. ಈ ಹಿಂಜರಿಕೆ ಬೇಡವೆಂದು ಸೂಚಿಸಿ ಪ್ರೋತ್ಸಾಹಿಸಿದ ಸ್ನೇಹಿತರನ್ನೆಲ್ಲ ನೆನೆಯಬೇಕಾದ್ದು ನನ್ನ ಕರ್ತವ್ಯ.

ಶ್ರೀ ಎಂ.ವಿ.ವೆಂಕಟೇಶಮೂರ್ತಿಯವರು ಇಲ್ಲಿಯ ಕೆಲವು ಬರಹಗಳನ್ನು ತುಂಬಾ ಇಷ್ಟಪಟ್ಟು ಸಂಕಲನ ಹೊರತರಲು ಪ್ರೋತ್ಸಾಹಿಸುವುದರ ಜೊತೆಗೆ ವಸಂತ ಪ್ರಕಾಶನದ ಮಿತ್ರರಾದ ಶ್ರೀಮುರಳಿಯವರಿಗೆ ಫೋನ್ ಮಾಡಿ ಕೃತಿಯನ್ನು ಪ್ರಕಟಿಸುವಂತೆ ಕೋರಿದರು. ಶ್ರೀ ಮೂರ್ತಿಯವರ ಪ್ರೋತ್ಸಾಹ ಮತ್ತು ಶ್ರೀ ಮುರಳಿಯವರ ನೆರವು ಇಲ್ಲದಿದ್ದರೆ ಈ ಸಂಕಲನ ಹೊರಬರುತ್ತಿರಲಿಲ್ಲ. ಈ ಇಬ್ಬರು ಹಿತೈಷಿಗಳಿಗೆ ಮೊದಲ ವಂದನೆ.

ನನ್ನೆಲ್ಲ ಬರವಣಿಗೆಗಳನ್ನು ಪರಿಶೀಲಿಸಿ ಪ್ರೋತ್ಸಾಹಿಸುವ ಶ್ರೀ ಗಿರೀಶ್ ವಾಘ್ ಈ ಸಂಕಲನದ ಹಿಂದೆ ಕೂಡ ಒತ್ತಾಸೆಯಾಗಿದ್ದಾರೆ. ಪ್ರೂಫ್ ನೋಡುವುದರಲ್ಲು ನೆರವಾಗಿದ್ದಾರೆ.

ಕರ್ನಾಟಕದ ಹೊರಗಿರುವುದರಿಂದ, ಯಾವುದೇ ವಿಶ್ವವಿದ್ಯಾಲಯದ ವಿಮರ್ಶಕರ ಗುಂಪುಗಳ ಬೆಂಬಲವು ನನಗಿಲ್ಲದೆ ಇರುವುದರಿಂದ ಬರಹಗಳ ಪ್ರಕಟಣೆಗೆ ನಾನು ಕಿರುಪತ್ರಿಕೆಗಳನ್ನು, ಸಮೂಹಮಾಧ್ಯಮಗಳನ್ನು ನೆಚ್ಚಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಂತೂ ಸಂಪಾದಕರುಗಳನ್ನು ನಾನೇ ಪೀಡಿಸಿದ್ದೇನೆ. ಇಲ್ಲಿಯ ಬರಹಗಳನ್ನು ಪ್ರಕಟಿಸಿದ ದೇಶಕಾಲ, ಸಂಚಯ, ಹೊಸತು, ಒಂದಲ್ಲಾ ಒಂದೂರಿನಲ್ಲಿ, ಶೂದ್ರ, ಕನ್ನಡ ಅಧ್ಯಯನ, ಕನ್ನಡಪ್ರಭ, ಉದಯವಾಣಿ, ವಿಜಯಕರ್ನಾಟಕ, ವಿಕ್ರಾಂತ ಕರ್ನಾಟಕ - ಪತ್ರಿಕೆಗಳ ಸಂಪಾದಕರುಗಳಿಗೆ ಕೃತಜ್ಞ.

ಕೆಲವು ಲೇಖನಗಳು ಈಗಾಗಲೇ ಬೇರೆ ಬೇರೆ ಸಂಪುಟ-ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಇದರಿಂದಾಗಿ ನನ್ನ ಆತ್ಮವಿಶ್ವಾಸ ಹೆಚ್ಚಿದೆ. ಪುತಿನ, ಕುಸುಮಾಕರರ ಬರಹವನ್ನು ಆಯ್ಕೆ ಮಾಡಿದ ಡಾ||ಎಚ್.ಎಸ್.ರಾಘವೇಂದ್ರ ರಾವ್, ಕುವೆಂಪು, ಕನ್ನಡ ಕಾದಂಬರಿ ಪರಂಪರೆ ಬಗ್ಗೆ ಬರೆಯುವಂತೆ ಪ್ರೇರೇಪಿಸಿದ ಶ್ರೀ ಡಿ.ಎಸ್.ನಾಗಭೂಷಣ, ವಿ.ಸೀ. ಮತ್ತು ಬಿ.ಪಿ.ರಾಧಾಕೃಷ್ಣರನ್ನು ಕುರಿತು ಬರೆಯುವಂತೆ ಮಾಡಿದ ಶ್ರೀ ಎಂ.ವಿ.ವೆಂಕಟೇಶಮೂರ್ತಿ, ಆವರಣದ ಬಗ್ಗೆ ಬರೆಯಲು ಕಾರಣರಾದ ಶ್ರೀ ಗಿರೀಶ್ ರಾವ್, ಶ್ರೀ ಚಂದ್ರಶೇಖರಯ್ಯ, ಲಂಕೇಶ್ ಕತೆಗಳ ಬಗ್ಗೆ ಬರೆಸಿದ ಜಿ.ರಾಜಶೇಖರ, ಫಣಿರಾಜ್ ಮತ್ತು ವಿವೇಕ ಶಾನಭಾಗ ಇವರೆಲ್ಲರಿಗೆ ವಂದನೆಗಳು.

"ಗಾಂಧಿ ಬಜಾರ್" ಪತ್ರಿಕೆಯ ಸಂಪಾದಕರಾದ ಶ್ರೀ ಬಾಕಿನರವರು ಬಹುವರ್ಷಗಳಿಂದ ನನ್ನ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಶ್ರೀಯುತರ ನಿರಂತರ ಪ್ರೋತ್ಸಾಹಕ್ಕೆ ಕೃತಜ್ಞನಾಗಿದ್ದೇನೆ.

ಹಿರಿಯರಾದ ಡಾ||ಯು.ಆರ್.ಅನಂತಮೂರ್ತಿಯವರು ಈಚಿನ ದಿನಗಳ ಬರಹಗಳಿಗೆ ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವುದರ ಜೊತೆಗೆ ಎಷ್ಟೋ ವಿಷಯಗಳ ಬಗ್ಗೆ ಮತ್ತೆ ಯೋಚಿಸುವಂತೆ ಮಾಡಿದ್ದಾರೆ. ಇವರೊಡನೆ ಒಡನಾಟ ಹೆಚ್ಚಲು ಇಲ್ಲಿಯ ಕೆಲವು ಬರಹಗಳಾದರೂ ಕಾರಣವಾಗಿವೆ ಎನ್ನುವುದೇ ನನಗೆ ಸಂತೋಷದ ಸಂಗತಿ. ಮೇಷ್ಟರ ಪ್ರೀತಿ ಮತ್ತು ಗಮನಕ್ಕೆ ಥ್ಯಾಂಕ್ಸ್.

ಈ ಸಂಕಲನದ ಒಂದು ಹೆಚ್ಚುಗಾರಿಕೆಯೆಂದರೆ ನನ್ನದಲ್ಲದ ಬರವಣಿಗೆಯು ಸೇರಿರುವುದು. ಜಿ.ರಾಜಶೇಖರ್, ಗಿರೀಶ್ ವಾಘ್, ಲಂಕೇಶ್ - ಇವರ ಪತ್ರಗಳು, ಜಿ.ಎನ್.ರಂಗನಾಥರಾವ್, ಲಕ್ಷ್ಮಣ ಕೂಡಸೆ ಇವರ ಬರಹಗಳೂ ಇಲ್ಲಿ ಸೇರಿವೆ. ಇವರೆಲ್ಲರ ಬರಹಗಳಿಂದಾಗಿ ಸಂಕಲನದ ಮೌಲಿಕತೆಗೊಂದು ಮೆರುಗು ಬಂದಿದೆ. ಇವರೆಲ್ಲರಿಗೂ, ಈ ಕೆಲಸದಲ್ಲಿ ನೆರವಾದ ಗೌರಿ ಲಂಕೇಶ್ ಮತ್ತು ಡಾ||ಎಂ.ಎಸ್.ಆಶಾದೇವಿಯವರಿಗೂ ವಂದನೆಗಳು.

ಸಾರಾಪುರದ ಶ್ರೀ ವಸಂತ ವಿ.ಬೆಳಗಾಂವ್‌ಕರ್ ಮತ್ತು ಕೊಲ್ಲಾಪುರ ಶ್ರೀಮತಿ ನಾಗರತ್ನ ಗ್ಯಾಲ್ ನನಗೆ ಪುಸ್ತಕಗಳು, ಪತ್ರಿಕೆಗಳನ್ನು ಒದಗಿಸುತ್ತಾ ನೆರವಾಗಿದ್ದಾರೆ. ಕೊಲ್ಲಾಪುರದಲ್ಲಿ ಮಾಡಿದ ಬಹುಪಾಲು ಬರವಣಿಗೆಯ ಮೊದಲ ಓದುಗರಾಗಿ ಶ್ರೀಮತಿ ನಾಗರತ್ನ ತುಂಬಾ ಸಮಯ ಮತ್ತು ಪ್ರೀತಿಯನ್ನು ನೀಡಿದ್ದಾರೆ.

ಈ ಬರಹಗಳ ಬರಹಗಾರ ನಾನೆಂಬುದು ಪೂರ್ಣಸತ್ಯವಾಗಲಾರದು. ಈ ಬರಹಗಳು ಸ್ನೇಹಿತರ ಜೊತೆ ನಡೆಸುತ್ತಲೇ ಇರುವ ಮಾತುಕತೆ, ವಿಚಾರ ವಿನಿಮಯದ ಒಂದು ಭಾಗವಷ್ಟೆ. ಎನ್.ವಿದ್ಯಾಶಂಕರ್, ಡಾ||ಎಚ್.ಎಸ್.ರಾಘವೇಂದ್ರ ರಾವ್, ಗಿರೀಶ್ ವಾಘ್ - ಇವರೆಲ್ಲರ ಒಳನೋಟ, ವಿಶ್ಲೇಷಣೆಗಳೆಲ್ಲ ಈ ಬರಹದಲ್ಲಿ ಬೆರೆತು ಹೋಗಿದೆ. ಗೆಳೆತನದ ಸಲಿಗೆಯಿಂದಾಗಿ ಇವರೆಲ್ಲರೂ ಇದನ್ನು ಮನ್ನಿಸುತ್ತಾರೆಂದು ನಂಬುತ್ತೇನೆ.

****

೧೯೬೫-೧೯೭೦ ಈ ಕಾಲಾವಧಿಯಲ್ಲಿ ನಾನು ಕನ್ನಡ-ಇಂಗ್ಲೀಷ್ ಸಾಹಿತ್ಯವನ್ನು ಓದಲು ಪ್ರಾರಂಭಿಸಿದ್ದು. ಬಹುಪಾಲು ಪುಸ್ತಕಗಳನ್ನು ಓದಿದ್ದು ನಮ್ಮ ಕಾಲೇಜು-ಸ್ಕೂಲ್ ಮೇಷ್ಟರುಗಳ ಸೂಚನೆಯ ಮೇರೆಗೆ. ಎಲ್ಲ ಪಂಥಗಳ ಎಲ್ಲ ಭಾಷೆಗಳ, ಎಲ್ಲ ಮನೋಧರ್ಮದ ಕೃತಿಗಳನ್ನು ಓದಲು ಈ ಮೇಷ್ಟರುಗಳು ಪ್ರೋತ್ಸಾಹಿಸುತ್ತಿದ್ದರು. ನನ್ನ ಓದುವಿಕೆ ಈವತ್ತೂ ಕೂಡ ಇದೇ ದಾರಿಯದು.

ನಾನೇ ಬರವಣಿಗೆಯ ಗೀಳನ್ನು ಹಚ್ಚಿಕೊಂಡ ಮೇಲೆ ಒಂದು ಸಂಗತಿ ನನಗೆ ಸ್ಪಷ್ಟವಾಯಿತು. ಸಾಹಿತ್ಯ ವಲಯದಿಂದ ಪ್ರೇರೇಪಣೆ ಪಡೆಯುವ ಓದು ಬಹುಪಾಲು ಒಂದು ಚಳುವಳಿಗೆ, ಒಂದು ಮನೋಧರ್ಮಕ್ಕೆ ಒಂದು ಲೇಖಕರ ಗುಂಪಿಗೆ ಮಾತ್ರ ಸೀಮಿತವಾಗಿರುತ್ತದೆ. ೧೯೬೫-೭೦ರ ಕಾಲಾವಧಿಯನ್ನೇ ತೆಗೆದುಕೊಂಡರೆ ಕಾರಂತ, ಕುವೆಂಪು, ಮಾಸ್ತಿ ಇಂತಹವರನ್ನು ಕುರಿತು ನವ್ಯ ಚಳುವಳಿಯ ತೀವ್ರ ದಿನಗಳಲ್ಲಿ ಒಳ್ಳೆಯ ಭಾವನೆಯೇನಿರಲಿಲ್ಲ. ಆದರೂ ನಮ್ಮ ಮೇಷ್ಟರುಗಳು ಇವರ ಕೃತಿಗಳನ್ನು ಓದಲು ಸೂಚಿಸುತ್ತಿದ್ದಂತೆಯೇ ಹೊಸ ಸಾಹಿತ್ಯ ಸಂವೇದನೆಯ ಸಂಸ್ಕಾರ, ತುಘಲಕ್ Outsiderನಂತಹ ಕೃತಿಗಳನ್ನು ಕೂಡ ಓದಲು ಸೂಚಿಸುತ್ತಿದ್ದರು. ಸಾಹಿತ್ಯ ವಲಯದೊಡನೆ ನನ್ನ ಎರಡು-ಮೂರು ದಶಕಗಳ ಒಡನಾಟದಿಂದ ಮೂಡಿರುವ ತಿಳುವಳಿಕೆಯೆಂದರೆ ನಮ್ಮ ಓದುವಿಕೆ ಈ ವಲಯದಿಂದ ಪ್ರೇರೇಪಣೆ ಪಡೆದಷ್ಟು ಪಾರ್ಶ್ವ ನೋಟದ್ದಾಗಿರುತ್ತದೆಂಬುದು. ಈ ಸಂಕಲನದ ಎಷ್ಟೋ ಬರಹಗಳ ಬಗ್ಗೆ ಕೆಲವರಾದರೂ ನನ್ನನ್ನು ಇದನ್ನೆಲ್ಲ ಈಗ ಓದುವ-ಬರೆಯುವ ತುರ್ತಾದರೂ ಏನಿತ್ತು ಎಂದು ಕೇಳಿದ್ದಾರೆ. ನನಗೆ ಸ್ಪಷ್ಟವಾಗಿ ಉತ್ತರ ಗೊತ್ತಿಲ್ಲ. ಈ ಕಾರಣಕ್ಕಾಗಿಯೂ ಈ ಸಂಕಲನಕ್ಕೆ "ಖಾಸಗಿ ವಿಮರ್ಶೆ" ಎಂಬ ಹೆಸರಿಟ್ಟಿದ್ದೇನೆ. ಇದಕ್ಕಿಂತ ಮುಖ್ಯವಾಗಿ ನನ್ನ ಮೆಚ್ಚಿನ ಲೇಖಕನೊಬ್ಬ ತನ್ನ ವಿಮರ್ಶಾ ಸಂಕಲನಕ್ಕೆ "INNER WORKING" ಎಂದು ಹೆಸರಿಟ್ಟಿರುವುದು ಕೂಡ ನನ್ನ ಪ್ರೇರಣೆಗಳಲ್ಲೊಂದು. ಎಷ್ಟೋ ಜನ ಸಮಕಾಲೀನ ವಿಮರ್ಶಕರ ಬರಹಗಳನ್ನು ಓದುವಾಗ ಅವರ ಬರಹಗಳಲ್ಲಿ ಗೈರುಹಾಜರಾಗಿರುವ ಒಳವ್ಯಕ್ತಿತ್ವ ನನಗೆ ಆಶ್ಚರ್ಯ ಹುಟ್ಟಿಸುತ್ತದೆ.
(ಹೊಸ ಕೃತಿ ಖಾಸಗಿ ವಿಮರ್ಶೆಗೆ ಬರೆದ ಮುನ್ನುಡಿ)

ಪರಿವಿಡಿ

ಭಾಗ -1
ನನ್ನ ಬರವಣಿಗೆಯ ಸ್ವರೂಪ ಮತ್ತು ಆಕಾಂಕ್ಷೆ
೧. ಸಾಹಿತ್ಯದಲ್ಲಿ ಸಮೀಕರಣಗಳು
೨. ಒಂದು ಸಂದರ್ಶನ
೩. ಓದುಗನ ಏಕಾಂತ
೪. ಬರಹಗಾರನ ತಲ್ಲಣಗಳು

ಭಾಗ -2
ಕತೆ, ಕಾದಂಬರಿ, ಕಾವ್ಯ, ಪ್ರಬಂಧ
೧. ನಮ್ಮ ಕಾದಂಬರಿ ಪರಿಸರ
೨. ಕುವೆಂಪು ಮತ್ತು ಮತಾಂತರ
೩. ಕುವೆಂಪು - ಬಹುಶಿಸ್ತೀಯ ನೋಟ
೪. ವಂದೇ ಮಾತರಂ ಕಾದಂಬರಿ
೫. ಕಂಡದ್ದು ಕಾಣದ್ದು
೬. ‘ಆವರಣ’ - ಕೃತಿ ಮತ್ತು ವಿದ್ಯಮಾನ
೭. ಬಯಲು ಬಸಿರು
೮. ಬಿಳಿ ಹುಲಿ
೯. ಹಾಲೂಡಿಸುವ ಪ್ರಸಂಗ
೧೦. ಲಂಕೇಶ್ ಹೇಳಿಕೊಂಡ ಕತೆಗಳು
೧೧. ಇಲಿಚ್ ಮತ್ತು ಮಂತ್ರೋದಯ
೧೨. ನೆಲೆಯಿಲ್ಲದ ಸಂಪಾದನೆ
೧೩. ನಿಧಾನ ಶ್ರುತಿ
೧೪. ಪುತಿನ ಪ್ರಬಂಧಗಳು
೧೫. ಗೋಕುಲಾಷ್ಟಮಿ
೧೬. ನೂರು ವರ್ಷದ ಏಕಾಂತ

ಭಾಗ -3
ವ್ಯಕ್ತಿಚಿತ್ರ - ಜೀವನ ಚರಿತ್ರೆ

೧. ದೊಡ್ಡ ಬದುಕಿನ ಸೂಕ್ಷ್ಮ ಚರಿತ್ರೆ
೨. ರಾಧಾಕೃಷ್ಣರ ‘ನನ್ನ ತಂದೆ’
೩. ವಿಜಯಶಂಕರ್ ಒಡನಾಟ
೪. ತಾಯಿಗುಣದ ಗೆಳೆಯ
೫. ರಿಲ್ಕೆ ಕಂಡ ಕಿರಂ
೬. ವೈ.ಎನ್.ಕೆ. ಪ್ರಸಂಗಗಳು
೭. ಬರೆದರೆ ಜಿ.ರಾಜಶೇಖರ್ ಹಾಗೆ

ಭಾಗ -4
ಪತ್ರ ಸಾಹಿತ್ಯ

೧. ಜಿ.ರಾಜಶೇಖರ್ ಪತ್ರಗಳು
೨. ಗಿರೀಶ್ ವಾಘ್ ಪತ್ರಗಳು
೩. ಉತ್ತರಿಸಲಾಗದ ಪತ್ರ
೪. ಸಂಪಾದಕರ ಅಪರೂಪದ ಪತ್ರ
೫. ಲಂಕೇಶ್ ಪತ್ರಗಳು

ಭಾಗ -5
ವೈವಿಧ್ಯ

೧. ಗಾಂಧಿ - ಓದುಗನಾಗಿ
೨. ಪುಸ್ತಕ ಸಮೀಕ್ಷೆ - ಲೋಹಿಯಾ
೩. ಪತ್ರಿಕೆಗಳು ಮತ್ತು ಸಾಹಿತ್ಯ
೪. ಜಿ.ಎನ್.ರಂಗನಾಥರಾವ್
೫. ಲಕ್ಷ್ಮಣ ಕೂಡಸೆ
೬. ನಮ್ಮ ಕನಸುಗಳಲ್ಲಿ ಕನ್ನಡ
೭. ಕನ್ನಡದ ನಿನ್ನೆಗಳು
೮. ನಮ್ಮ ಆಧ್ಯಾತ್ಮಿಕತೆ
೯. ಜೆ.ಕೆ.ಚಿಂತನೆ
೧೦. ನಮ್ಮವರಂತೆಯೇ ಕಾಣುವ ನೈಪಾಲ್
೧೧. ಇದೊಂದು ಜೀವನ ಶೈಲಿಯ ವಾಙ್ಮಯ
೧೨. ಕ್ರಿಕೆಟ್ ಅಲ್ಲದ ಕ್ರಿಕೆಟ್
೧೩. ಗೂಡಿಗೆ ಸೇರದ ಹಕ್ಕಿಗಳು
೧೪. ಪಂಪಾಯಾತ್ರೆ

ಪುಟಗಳು : 328
ಪ್ರಕಾಶಕರು: ವಸಂತ ಪ್ರಕಾಶನ
ನಂ. 360. 10‘ಬಿ’ ಮೇನ್
(ಕಾಸ್ಮೋಪಾಲಿಟನ್ ಕ್ಲಬ್ ಎದುರು ರಸ್ತೆ)
ಜಯನಗರ 3ನೇ ಬ್ಲಾಕ್
ಬೆಂಗಳೂರು 560 011
ದೂರವಾಣಿ : 22443996
ಬೆಲೆ: ನೂರ ಎಪ್ಪತ್ತು ರೂಪಾಯಿ.
ISBN 81-89818-71-6

ಮುಂದೆ ಓದಿ....

Thursday, July 30, 2009

ಕತೆಗಳು ಇರುತ್ತವೆ; ಕಾಣಬೇಕಷ್ಟೆ


ಗೃಹಕೃತ್ಯಕ್ಕೆ ಸಂಬಂಧಿಸಿದಂತಹ ಒಂದು ಸಂಗತಿಯನ್ನು ನಮ್ಮ ತಾಯಿ ನನಗೆ ಹೇಳುತ್ತಿದ್ದಾಗ, ನಾನು ಅನ್ಯಮನಸ್ಕನಾಗಿ ಕೇಳಿಸಿಕೊಳ್ಳುತ್ತಿದ್ದೆ. ನನ್ನ ಅನ್ಯಮನಸ್ಕತೆಯಿಂದ ನಮ್ಮ ತಾಯಿಗೆ ರೇಗಿ ಹೀಗೆಂದು ಬೈದರು. "ಏನು ಯಾವಾಗಲೂ ನಿನಗೆ ಕತೆಗಳ ಗುಂಗು. ಕತೆಗಳಿಗೇನು ಯಾವಾಗಲೂ ಇರುತ್ತವೆ. ಸಾಯೋತನಕ ಇರುತ್ತವೆ...." ಇತ್ಯಾದಿ. ನಮ್ಮ ತಾಯಿ ಆಡಿದ ಮಾತಿನ ಎಳೆಯನ್ನು ಹಿಡಿದು, ಕತೆಗಳ ರಚನೆಯನ್ನು ಕುರಿತು ನನ್ನ ನಿಲುವನ್ನೂ ವಿವರಿಸುತ್ತೇನೆ.

ಆಧುನಿಕತೆ, ವಿಶೇಷವಾಗಿ, ನವ್ಯತೆ ನಮ್ಮ ಕಥಾಸಾಹಿತ್ಯದಲ್ಲಿ ಪ್ರವೇಶಿಸಿದ ಮೇಲೆ ಕತೆಗಳೆಂದರೆ ಅದೇನೋ ವಿಶೇಷ ಪದಾರ್ಥವೆಂಬಂತೆ, ಕತೆಗಾರನೆಂದರೆ ಒಬ್ಬ ಅದ್ಭುತ ವ್ಯಕ್ತಿಯಂತೆ ಕಾಣುವ ಪರಿಪಾಠ ನಮ್ಮಲ್ಲಿ ರೂಢಿಗೆ ಬಂದಿದೆ. ಇದಕ್ಕನುಗುಣವಾಗಿ ಕತೆಗಾರರು ಕೂಡ ತಾವು ಇತರರಿಗಿಂತ ಬಹು ಭಿನ್ನರೆಂಬಂತೆ ‘ಶೈಲೀಕೃತ ಅಹಂ’ನಿಂದಲೇ ವರ್ತಿಸುತ್ತಾರೆ. ನನಗೆ ಯಾವತ್ತೂ ಹಾಗನಿಸಿಲ್ಲ. ಕ್ಯಾಥರೀನ್ ಪೋರ್ಟರಳ ಪ್ರಕಾರ ಬರಹಗಾರ ಸಮಾಜದಿಂದ, ಸಮಾಜದಲ್ಲಿ ಯಾವ ವಿಶಿಷ್ಟ ಸ್ಥಾನವನ್ನೂ ಬೇಡಕೂಡದು. ಎಲ್ಲರಂತಿದ್ದು, ಎಲ್ಲರ ಬದುಕಿನ ಬಗ್ಗೆ ಬರೆಯುವುದನ್ನು ಓದಲು ಉಳಿದೆಲ್ಲರಿಗೂ ಆಸಕ್ತಿಯಿರುತ್ತದೆಯೇ ಹೊರತು ತಾನೊಬ್ಬ ಮಹಾ, ತಾನೊಬ್ಬ ವಿಶೇಷ ಎಂದು ಭಾವಿಸಿಕೊಂಡು ಇತರರ ಬಗ್ಗೆ ‘ಧೋರಣೆ’ಯಿಂದ ಬರೆದ ಬರವಣಿಗೆಯನ್ನು ಉಳಿದವರು ಏಕೆ ಓದಬೇಕೆಂಬುದು ಅವಳ ಪ್ರಶ್ನೆಯಿದ್ದಂತೆ ಕಾಣುತ್ತದೆ.

ಕತೆಗಳು ಇರುತ್ತವೆ ಹಾಗೆಂದರೇನು ವಿವರಿಸಿ ಎಂದು ನೀವು ಕೇಳಿದರೆ ಸ್ವಲ್ಪ ಕಷ್ಟವೇ. ವಾತಾವರಣದಲ್ಲಿ ಗಾಳಿ ಇದೆ ಎಂದು ಹೇಳಿದಾಗ ನೀವು ಸಾಧಿಸಿ ತೋರಿಸಲೇ ಬೇಕಿಲ್ಲವಷ್ಟೆ. ಹಾಗೆಯೇ ಕತೆಗಳು ಕೂಡ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಕತೆ, ಕತೆಗಾರಿಕೆ ಎನ್ನುವುದು ಊಟ, ನಿದ್ರೆ, ಪ್ರೀತಿ, ಮೈಥುನಗಳಷ್ಟೆ ಸಹಜವಾದ್ದು, ನೈಸರ್ಗಿಕವಾದ್ದು.

ಕತೆ ಬರೆಯುವವರು ಮಾತ್ರ ಕತೆಗಾರರೆಂದು ಪೋಸು ಕೊಟ್ಟರೆ ನನಗೆ ನಗು ಬರುತ್ತದೆ. ನಾವೆಲ್ಲರೂ ನಮ್ಮ ಬದುಕಿನ ಬಹಳ ಕಾಲವನ್ನು ಕತೆ ಹೇಳುವುದರಲ್ಲಿ ಕೇಳಿಸಿಕೊಂಡ ಕತೆಯನ್ನು ಇನ್ನೊಬ್ಬರಿಗೆ ನಮ್ಮ ನಮಗೆ ಬೇಕಾದ ರೀತಿಯಲ್ಲಿ ಹೇಳುವುದರಲ್ಲಿ ಕತೆ ಕೇಳಿಸಿಕೊಳ್ಳುವುದರಲ್ಲೇ ಕಳೆಯುತ್ತೇವೆ. ಕತೆಗಳೇ ಹೀಗೆ. ನಾವು ಎಚ್ಚರವಾಗಿದ್ದಾಗ, ನಿದ್ರೆಯಲ್ಲಿದ್ದಾಗ, ಕನಸಿನಲ್ಲಿದ್ದಾಗ, ಒಂಟಿಯಾಗಿದ್ದಾಗ, ಗುಂಪಿನಲ್ಲಿದ್ದಾಗ ಯಾವಾಗಲೂ ತಮ್ಮ ಪಾಡಿಗೆ ತಾವು ಬೆಳೆಯುತ್ತಿರುತ್ತವೆ. ಒಂದು ಉಚ್ಛ್ವಾಸ, ಒಂದು ನಿಶ್ಶ್ವಾಸದ ನಡುವೆ ಕಾಲ ಸರಿದು ವಯಸ್ಸಾಗುವಂತೆ ಕತೆಗಳಿಗೂ ಕೂಡಾ ವಯಸ್ಸಾಗಿ ಬೆಳೆಯುತ್ತಾ ಹೋಗುತ್ತವೆ.

ಮಿತ್ರರಾದ ಶ್ರೀ ಜಿ.ರಾಜಶೇಖರ್, ನನ್ನ ‘ನಿಮ್ಮ ಮೊದಲ ಪ್ರೇಮದ ಕತೆ’ ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ, ನಾನು ಬರೆಯುವ ಶೈಲಿಯಲ್ಲಿ ಪಕ್ಕದ ಮನೆಯವರ ಕಷ್ಟ ಸುಖಗಳನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ ಕತೆ ಮಾಡಿಬಿಡಬಹುದು ಎಂದು ಹೇಳಿದರು. ನನಗಿರುವ ಆಸೆ ಅದೆ. ಆದರೆ ಈ ಕೆಲಸಕ್ಕೆ ಬಹಳ ಪ್ರತಿಭೆ, ಪ್ರೀತಿ ಬೇಕು. ಆಸೆಯಿದ್ದರೆ ಮಾತ್ರ ಸಾಲದು.

ಮನುಷ್ಯನ, ಇನ್ನೊಬ್ಬ ಮನೆಯವರ ಕಷ್ಟವನ್ನು ನಮ್ಮದು, ನಮ್ಮದೇ ಎಂದು ತಿಳಿಯುವುದು ನಾವು ಪರಿಭಾವಿಸಿದಷ್ಟು ಸುಲಭವಲ್ಲ. ಸುಲಭವೇನು ಸಾಧ್ಯವೇ ಇಲ್ಲ ಎಂದು ನಂಬಿದವರು ನಾವು. ಅವರ ಕಷ್ಟ ಅವರಿಗೆ ನಮ್ಮ ಕಷ್ಟ ನಮಗೆ ಎಂಬ ಮಾತೇ ಇದೆಯಲ್ಲ. ಏಕೆಂದರೆ ಮನುಷ್ಯನ ಪ್ರೀತಿಸುವ ಶಕ್ತಿ ಬಹು ಸೀಮಿತವಾದದ್ದು. ನಾನು, ನನ್ನ ಹೆಂಡತಿ ಮಕ್ಕಳು, ನಮ್ಮ ಜಾತಿ, ನಮ್ಮ ದೇಶ ಇವುಗಳ ಗಡಿಯಿಂದಾಚೆಗೆ ಮನುಷ್ಯ ಹೋಗಲು ನಿರಾಕರಿಸುತ್ತಾನೆ. ನಿರಾಕರಿಸುತ್ತಾನೆ ಏನು, ಸಾಧ್ಯವೂ ಆಗುವುದಿಲ್ಲ. ಪ್ರಪಂಚದ ಬಹುತೇಕ ಮನುಷ್ಯರಿಗೂ, ಬಹುತೇಕ ಘಟನೆಗಳಿಗೂ ನಮಗೂ ಏನೂ ಸಂಬಂಧವೇ ಇಲ್ಲವೆಂದು ತಿಳಿಯುವ ನಮಗೆ ಕತೆಗಳು ಹೇಗೆ ಕಾಣಿಸಿಯಾವು. ಅಂದರೆ ನೀವು ಎಷ್ಟು ಕತೆಗಳನ್ನು ಕಾಣಬಲ್ಲಿರಿ ಎಂಬುದು ನಿಮ್ಮ ಪ್ರೀತಿಸುವ ಶಕ್ತಿಯನ್ನು, ನೀವು ಪ್ರಪಂಚದೊಡನೆ, ಪದಾರ್ಥಗಳೊಡನೆ ಇಟ್ಟುಕೊಳ್ಳುವ ಸಂಬಂಧದ ಸ್ವರೂಪವನ್ನು ಅವಲಂಬಿಸಿದೆ. ಈ ಜಗತ್ತಿನಲ್ಲಿ ನಡೆಯುವುದಕ್ಕೆಲ್ಲ ನೀವು ಹೊಣೆಗಾರರೆಂದು ಒಪ್ಪಿಕೊಳ್ಳುವುದಾದರೆ ನಿಮ್ಮ ಪಕ್ಕದ ಮನೆಯವರ ಕತೆಗೂ, ನಿಮ್ಮ ಕತೆಗೂ ಸಂಬಂಧವಿದೆ ಎಂದು ಒಪ್ಪಿಕೊಳ್ಳುವುದಾದರೆ ಮಾತ್ರ. ಹಾಗೆ ಒಪ್ಪಿಕೊಂಡು ವ್ಯಾಸ, ವಾಲ್ಮೀಕಿ, ಮಾಸ್ತಿ, ಟಾಲ್‌ಸ್ಟಾಯ್, ಕ್ಯಾಥರೀನ್, ಆನ್ ಪೋರ್ಟರ್ ಅಂತಹವರು ಬರೆದಿದ್ದರಿಂದಲೇ ಈಗ ನಮ್ಮೆದುರಿಗೆ ಒಂದಿಷ್ಟು ಒಳ್ಳೆಯ ಕಥಾ ಸಾಹಿತ್ಯವಾದರೂ ಇದೆ. ಹಾಗಲ್ಲದೆ ಆಧುನಿಕರಂತೆ, ನವ್ಯರಂತೆ ಅವರೆಲ್ಲರೂ ಅವರವರ ಬಾಲ್ಯದ ಅನುಭವಗಳನ್ನೋ, ಅವರವರ ಜಾತಿಯ ಕಷ್ಟ ಸುಖಗಳನ್ನೋ ಅವರವರ ಭ್ರಮೆಗಳನ್ನೋ ಮಾತ್ರವೇ ಹಿಡಿದು ಬರೆಯುತ್ತಾ ಕೂತಿದ್ದರೆ ಏನಾಗುತ್ತಿತ್ತು ನೀವು ಊಹಿಸಿಕೊಳ್ಳಬಹುದು.

ಕತೆಗಾರರೊಬ್ಬರು ಹೇಳಿದ ಮಾತು ನೆನಸಿಕೊಂಡರೆ ಭಯವಾಗುತ್ತದೆ. ಹೇಳಬೇಕಾದ ಕತೆಗಳನ್ನು ಈಗಾಗಲೇ ಹೇಳಿಯಾಗಿದೆ. ಇನ್ನು ಹೊಸ ಕತೆಗಳೇ ಇಲ್ಲ ಎಂದು ಅಪ್ಪಣೆ ಕೊಡಿಸಿದವರು ಅವರು. ಬೇರೆ ಮಾತುಗಳಲ್ಲಿ ಅವರು ಹೇಳಿದ್ದೇನೆಂದರೆ ‘ಇನ್ನು ನಾವು ಕಾಣುವ ಅಗತ್ಯವಿಲ್ಲ’ವೆಂದು. ನಮ್ಮ ಸುತ್ತಮುತ್ತಲ ಪ್ರಪಂಚವನ್ನು, ಪದಾರ್ಥಗಳನ್ನು ಕಾಣದೆ, ಕಾಣಿಸದೇ ನಾವು ಬದುಕುವುದೆಂದರೆ ಆಯಸ್ಸು ಎಂಬುದು ಒಂದು ಶಿಕ್ಷೆಯಲ್ಲದೆ ಮತ್ತೇನು?

ಬರೆಯುತ್ತಿರುವಾಗ ಕಣ್ಣೆದುರಿಗೆ ಬಣ್ಣ ಬಣ್ಣದ ಚಿಟ್ಟೆಗಳು ಕಾಣಿಸಿಕೊಳ್ಳುತ್ತಿವೆ. ಅವು ಪಾರ್ಥೇನಿಯಂ ಗಿಡದ ಮೇಲೆ ಕೂರುತ್ತಿವೆ. ಅದಕ್ಕೂ ನನಗೂ ಏನು ಸಂಬಂಧವೆನ್ನಲೇ ಅಥವಾ ಪಾರ್ಥೇನಿಯಂ ಗಿಡಗಳನ್ನ ಮನೆ ಸುತ್ತ ಬೆಳೆಸಿಕೊಂಡು ಅದಕ್ಕೂ ತನಗೂ ಸಂಬಂಧವಿಲ್ಲವೆನ್ನುವಂತೆ ಆ ಮನೆಯ ಒಡೆಯ ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಉಳಿಸಿ, ಮಕ್ಕಳನ್ನು ಕಾನ್ವೆಂಟಿಗೆ ಕಳಿಸಿ ಓದಿಸುತ್ತಾ ನಾಳೆಯ ಭವಿಷ್ಯ ಬಹು ಸುಂದರವಾಗಿರುತ್ತದೆ ಎಂದು ಕನಸು ಕಾಣುವ ದುರಂತದ ಬಗ್ಗೆ ಮಾತ್ರ ಬರೆಯಬೇಕೆ? ಚಿಟ್ಟೆಗಳು ಪಾರ್ಥೇನಿಯಂ ಗಿಡಗಳ ಮೇಲೆ ಕೂರಬೇಕಾಗಿ ಬಂದದ್ದು, ಕುಳಿತಾಗ ಏನಾಗಬಹುದೆಂಬ ಸಂಗತಿ, ಆ ಮನೆ ಒಡೆಯನ ಚಿಂತನೆಯ ದುರಂತಕ್ಕಿಂತ ಯಾವ ರೀತಿ ಕಡಿಮೆ. ಈಗ ಚಾಲ್ತಿಯಲ್ಲಿರುವ ಕಥನ ಕ್ರಮದ ಪ್ರಕಾರ ಮನೆ ಒಡೆಯನ ದುರಂತಕ್ಕೆ ನಾನು ಹೆಚ್ಚು ಗಮನ ಕೊಡಬೇಕು. ಚಿಟ್ಟೆ ಪಾರ್ಥೇನಿಯಂಗಳನ್ನೆಲ್ಲ ಸಸ್ಯಶಾಸ್ತ್ರಜ್ಞರಿಗೆ, ಛಾಯಾಗ್ರಾಹಕರಿಗೆ ಬಿಡಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ನನ್ನದೂ ಒಂದು ಕಾಣ್ಕೆಯಿದೆಯಲ್ಲ ದುರಂತಕ್ಕೆ; ಈ ಚಿಟ್ಟೆಗಳು, ಈ ಪಾರ್ಥೇನಿಯಂ ಇವೆಲ್ಲ ಈಗ ಬರೆಯುವಾಗ ಮಾತ್ರ ಕಾಣುತ್ತಿವೆ; ಎಷ್ಟೋ ವರ್ಷಗಳಿಂದ ಹೀಗೆ ಎದುರಿಗೇ ಇದ್ದರೂ ಮೊದಲು ಯಾಕೆ ಇವು ನನಗೆ ಕಾಣಲಿಲ್ಲ. ಈ ಸಂಗತಿಗಳಿಗೂ ನನಗೂ ಸಂಬಂಧವಿಲ್ಲವೆಂದೇ ನನ್ನ ಪ್ರಜ್ಞೆ ನನಗೇ ಹೇಳಿಕೊಂಡಿರಬೇಕು.

ನಾನು ಕತೆಗಳನ್ನು, ಕತೆಗಾರಿಕೆಯನ್ನು ಸರಳೀಕರಿಸುತ್ತಿಲ್ಲ. ಹಾಗಂತ ಇದೆಲ್ಲವನ್ನು ಏನೋ ವಿಶೇಷವಾದದ್ದು ಎಂದು ನೋಡುವುದರಲ್ಲೂ ನನಗೆ ನಂಬಿಕೆಯಿಲ್ಲ. ನನ್ನ ಮಟ್ಟಿಗಂತೂ ಒಬ್ಬ ಕತೆಗಾರ ಅದೆಷ್ಟು ಕತೆಗಳನ್ನು ಬರೆಯುತ್ತಾನೆ, ಅದೆಷ್ಟು ಕಲಾತ್ಮಕವಾಗಿ ಬರೆಯುತ್ತಾನೆ ಎಂಬುದು ಮುಖ್ಯ ಸಂಗತಿಯೇ ಅಲ್ಲ. ಮನುಷ್ಯನಾಗಿ ಅವನು ಎಷ್ಟನ್ನು ಕಾಣುತ್ತಾನೆ, ಕಂಡ ಪದಾರ್ಥಗಳ ಸಂಗತಿಗಳ ಪರಸ್ಪರ ಸಂಬಂಧವನ್ನು ಎಷ್ಟರ ಮಟ್ಟಿಗೆ ತಿಳಿಯುತ್ತಾನೆ ಎಂಬುದು ನನಗೆ ಮುಖ್ಯ. ಇದಕ್ಕೂ ಕತೆಗಾರಿಕೆಗೂ ಸಂಬಂಧವಿಲ್ಲವೆನ್ನಬೇಡಿ. ಹಾಗೆ ಕಾಣುವವನು ನಮಗೂ ಕಾಣಿಸದೆ ಬಿಟ್ಟಾನೆ. ಆದರೆ ಅವನು ಕಾಣುವುದು, ಕಾಣಿಸುವುದು ಎಲ್ಲವೂ ಉಸಿರಾಟದಂತೆ, ಪ್ರೀತಿಯಂತೆ, ಚಿಟ್ಟೆಯ ಹಾರಾಟದಂತೆ, ಸಹಜವಾಗಿರುತ್ತದೆ, ಪ್ರಾಸಂಗಿಕವಾಗಿರುತ್ತದೆ. ತುಂಬಾ Elemental ಕೂಡಾ ಆಗಿರುತ್ತದೆ. "ಏನು ನೀನು ಹೇಳುವುದು, ಜಗತ್ತಿನಲ್ಲಿರುವವರೆಲ್ಲರೂ ಕತೆಗಾರರೋ, ಹಾಗಾದರೆ ನಮ್ಮ ಪ್ರತಿಭೆ, ಸೃಜನಶೀಲತೆ ಇವುಗಳಿಗೇನು ಬೆಲೆಯೇ ಇಲ್ಲವೆ" ಎಂದು ಕತೆಗಾರ ಮಿತ್ರರು ಮುನಿಯುವುದು ಬೇಡ. ಏಕೆಂದರೆ ಕೇವಲ ರಚಿಸುವ, ಶಿಲ್ಪಿಸುವ ಕತೆಗಳ ಬಗ್ಗೆ ನನಗೆ ಕೊಂಚವೂ ಆಸಕ್ತಿಯಿಲ್ಲ. ನನ್ನ ಆಸಕ್ತಿ ಏನಿದ್ದರೂ ನಮ್ಮಗಳ ಜೊತೆಯೇ ಬೆಳೆಯುವ, ಬದುಕುವ ಕತೆಗಳ ಬಗ್ಗೆಯೇ. ನಿಮಗಾಗಿ ನೀವು ಬರೆಯುವ ಕತೆಗಳನ್ನು ನಾನು ಓದದಿದ್ದರೂ ನಡೆದೀತು. ನನ್ನ ಜೊತೆಯೇ ಇರುವ, ನನ್ನೆದುರಿಗೆ ಇರುವ ಕತೆಗಳನ್ನ ಕಾಣದಿದ್ದರೆ ಹೇಗೆ.

ಎದುರಿಗಿದ್ದ ಚಿಟ್ಟೆ ಆಗಲೇ ಎಲ್ಲಿಗೋ ಹಾರಿ ಹೋಗಿದೆ. ಈಗ ನೀವೇ ಹೇಳಿ, ನೀವು ಬರೆದಿರುವ ಕತೆ ಓದುತ್ತಾ ಕೂರಲೋ ಅಥವಾ ಆ ಚಿಟ್ಟೆಗಳಿಗೆ ಪಾರ್ಥೇನಿಯಂ ಮೇಲೆ ಬಂದಿರುವ ಮುನಿಸನ್ನೂ, ಬೇಸರವನ್ನೂ ತಿಳಿಯಲು ಅವುಗಳನ್ನು ಹಿಂಬಾಲಿಸಲೋ.
(‘ಸಂಚಯ’ ಬೆಂಗಳೂರು, 1994.)
ಮುಂದೆ ಓದಿ....

Sunday, June 28, 2009

ಪುಸ್ತಕಗಳ ಪುನರ್ಜನ್ಮ

ಪುನರ್ಜನ್ಮದ ಕಲ್ಪನೆಯಲ್ಲಿ ನಂಬಿಕೆಯಿಲ್ಲದವರು ಕೂಡ ವಯಸ್ಸಾಗುತ್ತಿದ್ದಂತೆ ಪುನರ್ಜನ್ಮದ ಬಗ್ಗೆ ಆಸೆ ಪಡುತ್ತಾರೆ. ಮತ್ತೆ ತಾವು ಹುಟ್ಟಲು ಸಾಧ್ಯವಾಗುವುದಾದರೆ ಪ್ರಿಯರಾದವರ ಜೊತೆ, ಬಂಧುಗಳ ಜೊತೆ, ಶತ್ರು-ಹಿತ ಶತ್ರುಗಳ ಜೊತೆ ಹೇಗೆ ವ್ಯವಹರಿಸಬೇಕು ಎಂದೆಲ್ಲ ಲೆಕ್ಕ ಹಾಕುತ್ತಾರೆ. ಪುನರ್ಜನ್ಮದ ಕಲ್ಪನೆಯ ಬಗ್ಗೆಯೆ ಮನುಷ್ಯನಿಗೆ ಅದೇಕೆ ಅಷ್ಟೊಂದು ಆಸೆಯೆಂದರೆ ಅಮರತ್ವದ ಅವನ ಬಯಕೆಯನ್ನು ಅದು ಪೂರೈಸುತ್ತದೆ. ಮನುಷ್ಯ ಪುನರ್ಜನ್ಮದ ಸಂಬಂಧ ತುಂಬಾ ಗಹನವಾದ ವಿಷಯ, ತಾತ್ವಿಕರಿಗೆ, ಧರ್ಮಭೀರುಗಳಿಗೆ. ಅದನ್ನು ಬಿಟ್ಟು ಅಮರತ್ವ ಬಯಸದ, ನಿರ್ಲಿಪ್ತವಾಗಿ ನಿರುಪದ್ರವಿಯಾಗಿ ಗ್ರಂಥಾಲಯದ ಮೂಲೆಯಲ್ಲೋ, ಮನೆಯ ಅಟ್ಟದಲ್ಲೋ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯ ಬಿಕರಿ ವಸ್ತುವಾಗಿ ಫುಟ್‌ಪಾತ್ ಮೇಲೋ ಪುಸ್ತಕವೊಂದು ತಾನು ಬಯಸದೆ ಕೂಡ ಪುನರ್ಜನ್ಮ ಪಡೆಯುವ ಬಗೆ ಸೋಜಿಗವಾದದ್ದು.

ವರ್ಜೀನಿಯಾ ವೂಲ್ಫ್‌ದು ಒಂದು ಮಾತಿದೆ. `ನಿನ್ನ ಬರವಣಿಗೆಗೆ ಸಮಕಾಲೀನರಿಂದ ಬರುವ ಪ್ರತಿಕ್ರಿಯೆ, ಮೆಚ್ಚುಗೆ, ಪ್ರಶಸ್ತಿ ಇದೆಲ್ಲ ಸಾಕಾಗುತ್ತಿಲ್ಲವೆಂದು ನೀನು ತಲೆ ಕೆಡಿಸಿಕೊಳ್ಳಬೇಡ. ನಿಜಕ್ಕೂ ನೀನು ಪ್ರತಿಭಾವಂತನಾಗಿದ್ದರೆ, ಅದೃಷ್ಟವಂತನಾಗಿದ್ದರೆ, ಮುಂದೆಂದೋ ಒಂದು ದಿನ, ಒಬ್ಬ ಓದುಗ, ಕೇವಲ ಒಬ್ಬ ಓದುಗ ನಿನಗೆ ಪುನರ್ಜನ್ಮ ಕೊಡುತ್ತಾನೆ.' ಈ ಮಾತು ಎಷ್ಟು ಸತ್ಯ ಎಂಬುದು ಪ್ರತಿಯೊಬ್ಬ ಓದುಗನ ಅನುಭವಕ್ಕೂ ಬಂದಿರುತ್ತದೆ. ಅಪ್ರಜ್ಞಾಪೂರ್ವಕವಾಗಿ, ಅಸ್ಪಷ್ಟವಾಗಿ.

ದೊಡ್ಡ ಗ್ರಂಥಾಲಯವೊಂದಕ್ಕೆ ನೀವು ಪ್ರವೇಶಿಸುತ್ತೀರಿ. ಹಲವು ಅಂತಸ್ತುಗಳ ಕಟ್ಟಡ ಅದು. ಲಕ್ಷಾಂತರ ಪುಸ್ತಕಗಳು, ಮನುಷ್ಯನಾದವನು ನೂರಾರು ಜನ್ಮವೆತ್ತಿ, ಹತ್ತಾರು ದೇಶಗಳಲ್ಲಿ ಹುಟ್ಟಿ ಬರೆದ ಪುಸ್ತಕಗಳವು. ಒಂದು, ಒಂದೇ ಒಂದು ಪುಸ್ತಕವನ್ನು ನೀವು ಕೈಗೆತ್ತಿಕೊಳ್ಳುತ್ತೀರಿ. ಕತೆಯೋ, ಕಾದಂಬರಿಯೋ, ಜೀವನ ಚರಿತ್ರೆಯೋ, ಪ್ರವಾಸ ಕಥನವೋ, ಅದು ನಿಮ್ಮ ಮನಸ್ಸಿಗೆ ಪ್ರಿಯವಾಗುತ್ತದೆ. ಎಂದೋ, ಎಲ್ಲೋ, ಯಾರೋ ಬರೆದದ್ದು. ನಿಮ್ಮ ಅನುಭವಕ್ಕೆ, ಚಿಂತನೆಗೆ ಹೊಂದಿಕೆಯಾಗುವಂತಿರುತ್ತದೆ. ಆ ಕತೆ, ಆ ಚರಿತ್ರೆ, ಆ ಸನ್ನಿವೇಶ, ನಿಮ್ಮೆದುರಿಗೆ ನಡೆದಂತಾಗುತ್ತದೆ. ಮೆಚ್ಚಿ ನೀವು ಸುಮ್ಮನಿರುವುದಿಲ್ಲ. ನಿಮ್ಮ ಗೆಳೆಯರಿಗೆ, ಆಪ್ತರಿಗೆ ಹೇಳುತ್ತೀರಿ. ಕೃತಿ, ಅದರ ಲೇಖಕ, ಅವನ ಅನುಭವ, ಅವನ ಕಾಣ್ಕೆ, ಎಲ್ಲವೂ ನಿಮ್ಮಿಂದ ಪುನರ್ಜನ್ಮ ಪಡೆದು ಮತ್ತೆ ಚಾಲ್ತಿಗೆ ಬಂದು ಬಿಡುತ್ತದೆ. ನೀವು ಲೇಖಕರಾಗಿದ್ದು, ಸಾಹಿತ್ಯ ವಲಯದಲ್ಲಿದ್ದರೆ ಆ ಕೃತಿಯ ಬಗ್ಗೆ ಲೇಖನವನ್ನು, ವಿಮರ್ಶೆಯನ್ನೂ ಬರೆದು ಆ ಕೃತಿಯನ್ನು, ಆ ಲೇಖಕನನ್ನು ಸಮಕಾಲೀನ ಕೃತಿ-ಲೇಖಕನನ್ನಾಗಿ ಪರಿವರ್ತಿಸಿ ಬಿಡುತ್ತೀರಿ.

ಇದೆಲ್ಲವೂ ನಮಗೆ ಸ್ಥೂಲವಾಗಿ ಅನುಭವಕ್ಕೆ ಬಂದಿರುವಂಥದ್ದೆ. ನನ್ನ ಅನುಭವದ ಒಂದೆರಡು ಪ್ರಸಂಗಗಳನ್ನು ಹೇಳುತ್ತೇನೆ. ವರ್ಷಗಳ ಹಿಂದೆ ನಡುರಾತ್ರಿಯಲ್ಲಿ ಎಚ್ಚರವಾಯಿತು. ನೀರವತೆ, ಆದರೂ ಏನೋ ಹವಣಿಕೆಯ ವಾಸನೆ, ತಹತಹ. ಏನೆಂದೂ ನನಗೂ ತಿಳಿಯುತ್ತಿಲ್ಲ. ಇಡೀ ಕೋಣೆಯೆಲ್ಲ ಯಾರದೋ ಆಗಮನಕ್ಕೆ, ಯಾರದೋ ಕಾಂತಿಗೆ ಸಿದ್ಧವಾಗುತ್ತಿರುವಂತಿದೆ. ನಡುರಾತ್ರಿಯಲ್ಲಿ ಯಾರು ಬರಬೇಕು. ನನಗೆ ದೆವ್ವ ಪ್ರೇತಗಳಲ್ಲಿ ನಂಬಿಕೆ ಕಡಿಮೆ, ನಂಬಲು ಆಸೆಯಿದ್ದರೂ. ಏನು ಮಾಡಿದರೂ ನಿದ್ದೆ ಬಾರದೆ ಶೆಲ್ಫ್‌ನಿಂದ ಒಂದು ಪುಸ್ತಕ ತೆಗೆದೆ. ಮಾಸ್ತಿಯವರ ಕತೆಗಳ ಸಂಗ್ರಹ ಅದು. ಪೂರ್ವಾಪರ ಯೋಚನೆಯಿಲ್ಲದೆ `ಹೇಮಕೂಟದಿಂದ ಬಂದ ಮೇಲೆ' ಕತೆಯನ್ನು ಓದಲು ಪ್ರಾರಂಭಿಸಿದೆ. ಎಷ್ಟೋ ಸಲ ಓದಿದ್ದು, ಆದರೆ ಆ ಕತೆ ಆ ನೀರವತೆಯಲ್ಲಿ ಮತ್ತೆ ಹುಟ್ಟಿದ ಬಗೆಯೇ ಬೇರೆ. ಕತೆ ಮುಗಿಸಿದ ತಕ್ಷಣ ಶಕುಂತಲೆ, ದುಷ್ಯಂತ, ಪ್ರಿಯಂವದೆ, ಅನಸೂಯ ಎಲ್ಲರೂ ನನ್ನೆದುರಿಗೆ ಬಂದು ಕೂತುಕೊಂಡ ಹಾಗೆ, ಶಕುಂತಲೆಯ ಪ್ರೇಮದ ವಿರಹದ ನೋವಿನ ಕತೆಯನ್ನು ಅವರವರ ದೃಷ್ಟಿಕೋನದಿಂದ ಬೆಳಗಾಗುವ ತನಕವೂ ಹೇಳಿದ ಹಾಗೆ. ಸುತ್ತಮುತ್ತಲ ವಾತಾವರಣದಲ್ಲಿದ್ದ ಹವಣಿಕೆ ಯಾವುದೋ ಅತಿಥಿಗಳ ಆಗಮನದ ಸೂಚನೆಯೆಂದು ನನಗೆ ಆಮೇಲೆ ಅರ್ಥವಾಯಿತು. ಮಾರನೆ ದಿನ ಬೆಳಿಗ್ಗೆಯಿಂದ ನನ್ನನ್ನು ಇಡಿಯಾಗಿ ಬೆನ್ನು ಹತ್ತಿದ ಈ ಕತೆಯನ್ನು ಹೊತ್ತುಕೊಂಡೇ ಇಡೀ ಬೆಂಗಳೂರು ನಗರದಲ್ಲಿದ್ದ ಸ್ನೇಹಿತರಿಗೆಲ್ಲ ತೋರಿಸಿ,ಅವರೆಲ್ಲರೂ ಕತೆಯನ್ನು ಓದುವಂತೆ ಮಾಡಿದೆ. ಶಕುಂತಲೆ, ಅವಳ ಕತೆ, ಎಲ್ಲವೂ ಮತ್ತೆ ನಮ್ಮೊಡನೆ ಬದುಕಲು ಪ್ರಾರಂಭಿಸಿದವು. ಆ ಕತೆಯ ಮೇಲೆ ನಾನು ಟಿಪ್ಪಣಿಯೊಂದನ್ನು ಕೂಡ ಬರೆದದ್ದುಂಟು.

ಸಾಹಿತ್ಯ ವಲಯದ ವಾತಾವರಣ, ಜೀವಂತವಾಗಿರಬೇಕಾದರೆ ಈ ರೀತಿ ಕೃತಿಗಳು, ಲೇಖಕರು ದಿನವೂ ಓದುಗರ ಮನೆಗಳಲ್ಲಿ, ಮನಸ್ಸಿನಲ್ಲಿ, ಲೇಖಕರ ಕಲ್ಪನೆಗಳಲ್ಲಿ ಪುನರ್ಜನ್ಮ ಪಡೆಯುತ್ತಿರಲೇಬೇಕು. ವೈಯಕ್ತಿಕವಾಗಿ ನಮಗೆ ಹೀಗೆಲ್ಲ ಆಗುತ್ತಿರಬಹುದೇನೋ, ಆದರೆ ಉತ್ಸಾಹದಿಂದ, ಸಂಭ್ರಮದಿಂದ ನಾವು ಹಂಚಿಕೊಳ್ಳುವ, ಸಾಂಕ್ರಾಮಿಕಗೊಳಿಸಿರುವ ಉದಾಹರಣೆಗಳು ತೀರಾ ಕಡಿಮೆ. ಕನ್ನಡದ ಯಾವ ದಿನಪತ್ರಿಕೆಗಳೂ, ಸಾಹಿತ್ಯ ಪತ್ರಿಕೆಗಳೂ, ಇಂತಹ ಪುನರ್ಜನ್ಮದ ಅನುಭವವನ್ನು, ಅದರಿಂದ ಅನುಭವಿಸಿದ ಉತ್ಸಾಹವನ್ನು ದಾಖಲಿಸಿದ ಉದಾಹರಣೆಗಳು ಕಡಿಮೆ. ಶತಮಾನೋತ್ಸವ, ದಶಮಾನೋತ್ಸವ ಸಂದರ್ಭಗಳಲ್ಲೋ, ಸೆಮಿನಾರು ಸಂಕಿರಣದ ಸಂಕಷ್ಟದ ಸಮಯದಲ್ಲೋ ಹಿಂದಿನ ಲೇಖಕರ, ಕೃತಿಗಳ ಬಗ್ಗೆ ಲೇಖನಗಳು, ಪರಿಚಯ ಪ್ರಕಟವಾದರೂ ಇಂತಹ ಲೇಖನಗಳಲ್ಲೆಲ್ಲ ಸಾಂದರ್ಭಿಕ ಕೆಲಸವೊಂದನ್ನು ನಿರ್ವಹಿಸಿದ ಅಚ್ಚುಕಟ್ಟುತನ ಇರುತ್ತದೆಯೆ ಹೊರತು, ಮನುಷ್ಯರಾಗಿ, ಓದುಗರಾಗಿ ನಾವೇ ಅನುಭವಿಸಿದ ಸಂತೋಷ, ಪುಳಕ ಇರುವುದಿಲ್ಲ. ನನಗೆ ತಿಳಿದ ಮಟ್ಟಿಗೆ ಈ ರೀತಿಯ ಅಂಕಣ ಇರುವುದು ಹಿಂದೂ ಪತ್ರಿಕೆಯಲ್ಲಿ ಮಾತ್ರ. ಪ್ರತಿ ತಿಂಗಳಿಗೊಮ್ಮೆ ಪ್ರಕಟವಾಗುವ Classics Revisited ಅನ್ನುವ ಅಂಕಣದಲ್ಲಿ ರವಿ ವ್ಯಾಸ್ ಎನ್ನುವವರು ಹಳೆಯ ಪುಸ್ತಕಗಳ ಓದಿನ ಅನುಭವದಿಂದ ಸಿಗುವ ಸಂತೋಷವನ್ನು, ಆ ಪುಸ್ತಕಗಳು ನಮ್ಮ ಜೀವನಕ್ಕೆ ಹೇಗೆ ಪ್ರಸ್ತುತವೆಂಬುದನ್ನು ಪಂಡಿತ, ಪಾಮರರಿಬ್ಬರಿಗೂ ಪ್ರಿಯವಾಗುವಂತೆ ಸರಳ, ನೇರ, ವಿದ್ವತ್ಪೂರ್ಣ ಶೈಲಿಯಲ್ಲಿ ಹಂಚಿಕೊಳ್ಳುತ್ತಾರೆ. ಆ ಅಂಕಣವನ್ನು ಪ್ರತಿ ಸಲ ಓದುವಾಗಲೂ ಕನ್ನಡದಲ್ಲಿ ಇಂತಹದೊಂದು ಅಂಕಣವಿಲ್ಲದ್ದರ ಬಗ್ಗೆ ಬೇಸರವಾಗುತ್ತದೆ.

ಲಕ್ಷಾಂತರ, ಕೋಟ್ಯಾಂತರ ಪುಸ್ತಕಗಳು ನಾವು ಹುಟ್ಟುವುದಕ್ಕೆ ಮುಂಚೆಯೆ ಪ್ರಕಟವಾಗಿ ಬಿಟ್ಟಿರುವುದರಿಂದ ಯಾವ ಪುಸ್ತಕಕ್ಕೆ ನಮ್ಮ ಮೂಲಕ ಪುನರ್ಜನ್ಮದ ಅದೃಷ್ಟ ಎಂಬುದನ್ನು ನಿರ್ಧರಿಸುವ ಸಂಗತಿ ಯಾವುದು? ಎಲ್ಲ ಹಳೆಯ ಪುಸ್ತಕಗಳಿಗೂ, ಪುರಾತನ ಹಸ್ತಪ್ರತಿಗಳಿಗೂ ಇಂತಹ ಅದೃಷ್ಟವಿರುವುದಿಲ್ಲ. ಗ್ರಂಥಾಲಯದಿಂದ ನಮ್ಮ ಮನೆಗೆ ಬರುತ್ತವೆ. ಅನಪೇಕ್ಷಿತ ಅತಿಥಿಗಳಂತೆ ನಮ್ಮೊಡನೆ ಇದ್ದು ಬಂದ ದಾರಿಗೆ ಸುಂಕವಿಲ್ಲದಂತೆ ಮತ್ತೆ ಗ್ರಂಥಾಲಯಕ್ಕೆ ವಾಪಸ್ಸಾಗುತ್ತವೆ. ಒಂದು ಕೃತಿ ನಮ್ಮಿಂದ ಪುನರ್ಜನ್ಮ ಪಡೆಯಬೇಕಾದರೆ, ಆ ಕೃತಿಯ ಆಕೃತಿಯಲ್ಲೋ, ಅನುಭವದಲ್ಲೋ, ಸನ್ನಿವೇಶ ವಿನ್ಯಾಸದಲ್ಲೋ, ಆ ಪುಸ್ತಕವನ್ನು ಎತ್ತಿಕೊಂಡ ಕ್ಷಣದಲ್ಲಿ ನಮ್ಮ ಮನಸ್ಸಿನ ಒಳತೋಟಿಗೆ, ಹಸಿವಿಗೆ ತಾಳೆಯಾಗುವಂತಹ ಸಂಗತಿ ಮತ್ತು ಕಾಂತಿಯಿರಬೇಕು. ಆವಾಗ ಮಾತ್ರ ಆ ಕೃತಿ ನಮ್ಮ ಒಳಗನ್ನು ಪ್ರವೇಶಿಸಿ ಕ್ಷಣಮಾತ್ರದಲ್ಲಿ ನವಮಾಸ ಧರಿಸಿ! ವ್ಯಾಸನ ಮಹಾಭಾರತವೋ, ಅದರ ಪ್ರಸಂಗಗಳೋ ನಮ್ಮದಾಗುವುದು ಹೀಗೆ. ಇವು ಪ್ರಸಿದ್ಧ ಕೃತಿಗಳ ಉದಾಹರಣೆಗಳು. ಹೀಗೆ ಪ್ರಸಿದ್ಧವಾಗದ ಎಷ್ಟೋ ಕೃತಿಗಳು ಕೂಡ ಒಬ್ಬ ಓದುಗನಿಂದ ಪುನರ್ಜನ್ಮ ಪಡೆಯಬಹುದು. ನಿಖರವಾಗಿ ಹೇಳಬೇಕೆಂದರೆ ಪ್ರಸಿದ್ಧವಾದ ಕೃತಿಗಳ ಪುನರ್ಜನ್ಮಕ್ಕೆ ಸಾಂಸ್ಕೃತಿಕ ವಾತಾವರಣದಲ್ಲೆ ನಾನಾ ರೀತಿಯ ಪರಿಕರಗಳಿರುತ್ತವೆ. ಪುರಾಣಗಳ ಪಾರಾಯಣವಾಗಬಹುದು, ಪಠ್ಯಪುಸ್ತಕಗಳ ಮೂಲಕವಾಗಬಹುದು. ಸಂಘ ಸಂಸ್ಥೆಗಳಿಂದ ಪುನರ್ಮುದ್ರಣದ ಅವಕಾಶವಾಗಬಹುದು, ಹೇಗೋ ಅವು ನಮ್ಮನ್ನು ತಲುಪಿಬಿಡುತ್ತವೆ. ನನ್ನ ಆಸಕ್ತಿಯಿರುವುದು ಅಂತಹ ಕೃತಿಗಳ ಪುನರ್ಜನ್ಮದಲ್ಲಲ್ಲ. ಮನುಷ್ಯರಾಗಿ, ಓದುಗರಾಗಿ ನಾವೇ ಖುದ್ದಾಗಿ ಆಯ್ಕೆ ಮಾಡಿ ಪುನರ್ಜನ್ಮ ಕೊಟ್ಟ ಕೃತಿಗಳಲ್ಲಿ.

ಪುಸ್ತಕಕ್ಕೆ ಮಾತ್ರ ಪುನರ್ಜನ್ಮವೆಂದು ತಿಳಿದರೆ ತಪ್ಪಾಗುತ್ತದೆ. ಪುಸ್ತಕಕ್ಕೆ ಪುನರ್ಜನ್ಮ ಕೊಡುವ ಪ್ರಕ್ರಿಯೆಯಲ್ಲಿ, ನಾವೂ, ನಮ್ಮ ಅನುಭವ ಚಿಂತನೆಗಳು ಕೂಡ ಪುನರ್ಜನ್ಮ ಪಡೆಯುತ್ತವೆ. ಹೆಣ್ಣಿನ ಜೀವನ, ದೃಷ್ಟಿಕೋನ ಕುರಿತಂತೆ ನಮ್ಮಲ್ಲಿರುವ ಬಹುಪಾಲು ಕೃತಿಗಳು ಆಕೆಯನ್ನು ತಾಯಿಯಂತೆ ಮಾತ್ರ ನೋಡಿ ಆಕೆಯ ಪಾಲನಾ ಪ್ರವೃತ್ತಿಗೆ ಮಾತ್ರ ಒತ್ತು ನೀಡಿವೆ. ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ ಎಲ್ಲರ ಬಹುತೇಕ ಸ್ತ್ರೀ ಪಾತ್ರಗಳು ಮಾತೃ ಕಲ್ಪನೆಗೆ, ಪಾಲನಾ ಪ್ರವೃತ್ತಿಗೆ ಹತ್ತಿರವಾದವು. ನಂತರದ ಲೇಖಕಿಯರು ಹೆಂಗಸರಲ್ಲಿರುವ ಪ್ರತಿಭಟನೆ, ಬಂಡಾಯ, ಜೀವಂತಿಕೆಯ ಅಂಶಕ್ಕೆ ಒತ್ತುಕೊಟ್ಟರು. ಹೀಗೆಲ್ಲ ಅಲ್ಲದೆ ಹೆಂಗಸನ್ನು ಬೇರೊಂದು ದೃಷ್ಟಿಯಿಂದ ಕೂದ ನೋಡಬಹುದೆಂಬುದನ್ನು ಮಹಾಶ್ವೇತಾದೇವಿಯವರ `1084 ತಾಯಿ' ಕಾದಂಬರಿ ತೋರಿಸಿಕೊಡುತ್ತದೆ. ಸ್ವಂತ ಮಗನನ್ನೆ ರಾಜಕೀಯ ಕಾರಣಕ್ಕಾಗಿ ಕಳೆದುಕೊಂಡ ತಾಯಿ, ತನ್ನ ಮಗನಂತಹ ಬಂಡಾಯಗಾರರನ್ನು, ಅವರ ಮೂಲಕ ಸಮಾಜವನ್ನು ಪ್ರೀತಿಸುವುದು, ಅರ್ಥ ಮಾಡಿಕೊಳ್ಳುವುದು, ಈ ಕಾದಂಬರಿಯ ವಿನ್ಯಾಸದಲ್ಲಿದೆ. ಹೆಂಗಸಿನ ಎಲ್ಲ ಗುಣಗಳನ್ನು, ಮಾತೃ ಕಲ್ಪನೆಯನ್ನು, ಪಾಲನಾ ಪ್ರವೃತ್ತಿಯನ್ನು ಹೊಸ ದೃಷ್ಟಿಕೋನದಿಂದ ನೋಡಬಹುದೆಂಬುದನ್ನು, ತಾಯಿಯ ಕಲ್ಪನೆಯೇ ಸಾಮಾಜಿಕವಾದಾಗ ಆಧ್ಯಾತ್ಮಿಕ ಆಯಾಮವನ್ನು ಕೂಡ ಪಡೆಯಬಹುದೆಂಬುದನ್ನು ಈ ಕೃತಿ ತೋರಿಸಿಕೊಟ್ಟಿದೆ. ಈ ಕಾದಂಬರಿ ಓದಿ ಮುಗಿಸಿದ ಮೇಲೆ ಒಂದಷ್ಟು ದಿನ ನಾನು ಅದರ ಗುಂಗಿನಲ್ಲೇ ಇದ್ದೆ. ದಿನ ಕಳೆದಂತೆ ಈ ಗುಂಗು ಒಂದು ರೀತಿಯ ಅನುಮಾನಕ್ಕೆ ಕಾರಣವಾಯಿತು. ಇಷ್ಟೊಂದು ಉದಾತ್ತವಾದ ಪಾತ್ರವನ್ನು, ಕಲ್ಪನೆಯನ್ನು ಮಾತ್ರವೇ ನಾವೇಕೆ ಮೆಚ್ಚಿಕೊಳ್ಳಬೇಕು. ಹೆಂಗಸು ನಮ್ಮ ತಾಯಂದಿರಂತೆ, ಹೆಂಡತಿಯರಂತೆ, ಸೋದರಿಯರಂತೆ, ಒಂದೇ ಕಾಲದಲ್ಲಿ ಎಲ್ಲ ಆಯಾಮಗಳನ್ನೊಳಗೊಂಡಿರಬಹುದಲ್ಲವೆ? ಸಾಧಾರಣ ಹೆಂಗಸರಲ್ಲೂ ಪಾಲನಾ ಪ್ರವೃತ್ತಿ, ಕನಸುಗಾರಿಕೆ, ಬಂಡುಕೋರತನ, ಜೀವನ ಪ್ರೀತಿ, ವ್ಯಾವಹಾರಿಕತೆ, ಜಿಗುಟುತನ, ಸೌಂದರ್ಯಾರಾಧನೆ, ಎಲ್ಲವೂ ಇರುತ್ತದಲ್ಲ. ಹಾಗಾದರೆ ಮಹಾಶ್ವೇತಾದೇವಿಯವರ ಉದಾತ್ತ ಕಲ್ಪನೆ ಮತ್ತು ಅದನ್ನು ನಾನು ಇಷ್ಟಪಟ್ಟಿದ್ದು ಸುಳ್ಳೆ.

ಈ ಗೊಂದಲದಲ್ಲಿರುವಾಗ ನನಗೆ ಆಕಸ್ಮಿಕವಾಗಿ ಸಿಕ್ಕಿದ್ದು ಹಿಂದಿ ಲೇಖಕಿ ಕೃಷ್ಣಾ ಸೋಬತಿಯವರ `ವಾಯ್ ಲಡಕಿ' ಕಿರುಕಾದಂಬರಿಯ ಇಂಗ್ಲೀಷ್ ಅನುವಾದ. ಈ ಕಾದಂಬರಿಯ ನಾಯಕಿ ನಮಗೆ ನಿಮಗೆ ಗೊತ್ತಿರುವ ಸಾಮಾನ್ಯ ಹೆಂಗಸಿನ ಎಲ್ಲ ಗುಣ ಸ್ವಭಾವಗಳನ್ನು ಒಳಗೊಂಡಿದ್ದಾಳೆ. ಹಾಗೆ ಸಾಮಾನ್ಯ ಹೆಂಗಸಾಗಿರುವುದರಲ್ಲೇ ವಿಶಿಷ್ಟವಾಗಿದ್ದಾಳೆ. ಈಕೆ ಸಾವನ್ನು ಸಮೀಪಿಸುತ್ತಿದ್ದು ತೀವ್ರವಾದ ಅನಾರೋಗ್ಯವನ್ನು ಅನುಭವಿಸುತ್ತಿದ್ದಾಳೆ. ಸಿಂಹಾವಲೋಕನದ ಕ್ರಮದಲ್ಲಿ ಅವಳ ಬಾಲ್ಯ, ಯೌವನ, ಕಾಮ ಜೀವನ, ಗಂಡನೊಡನೆ ಜೀವನ, ಅತೃಪ್ತಿ, ಕೌಟುಂಬಿಕ ಬಯಕೆ, ಮುಂದಿನ ಪೀಳಿಗೆಗೆ ಹೊಂದಿಕೊಳ್ಳುವ ಕಷ್ಟ, ಹೆಂಗಸರಿಗೆ ವಿಶಿಷ್ಟವಾಗಿರುವ ಜೀವನ ವಿವರಗಳ ಕಕ್ಕುಲಾತಿ, ಬಂಡಾಯದ ಆಸೆ, ಆತ್ಮಜ್ಞಾನ, ದೈವದ ಬಯಕೆ - ಏನುಂಟು, ಏನಿಲ್ಲ ಅನ್ನುವಂತೆ, ಎಲ್ಲವೂ ಸೇರಿಕೊಂಡಿವೆ. ಈ ಕಾದಂಬರಿಯನ್ನು ಓದಲು ಕೊಟ್ಟಿದ್ದ ಸ್ನೇಹಿತರು ಕೃತಿಯ ಬಗ್ಗೆ ಬಹಳ ಶಿಫಾರಸ್ ಮಾಡಿದ್ದರು. ಹಾಗಾಗಿ ಒಂದು ರೀತಿಯ ಅನುಮಾನದಿಂದ ನಾನು ಕೃತಿಯನ್ನು ಕೆಲದಿನ ತಡೆದೇ ಓದಿದೆ. ಒಂದು ಸಲ, ಎರಡು ಸಲ, ಮೂರು ಸಲ ಓದಿ, ಒಳಗಡೆ ಇಳಿದ ಮೇಲೆ ಒಂದು ರೀತಿಯ ರಿಲೀಸ್ ಭಾವನೆಯನ್ನು ಅನುಭವಿಸಿದೆ. ನನ್ನ ಇದುವರೆಗಿನ ಜೀವನದಲ್ಲಿ ನನ್ನ ಅನುಭವಕ್ಕೆ ಬಂದ ಹೆಂಗಸರೆಲ್ಲರೂ ತಾಯಿ, ತಂಗಿ, ಹೆಂಡತಿ, ಗೆಳತಿ, ಸಹೋದ್ಯೋಗಿಗಳು ತೀರಾ ಸಾಧಾರಣದವರು - ಎಲ್ಲರೂ ಹೊಸ ಪ್ರಭೆಯಲ್ಲಿ, ಹೊಸ ಸಾರ್ಥಕ ರೂಪದಲ್ಲಿ ಕಾಣತೊಡಗಿದರು. ಮಹಾಶ್ವೇತಾದೇವಿಯವರ ಉದಾತ್ತ ಪಾತ್ರದ ಕಲ್ಪನೆಯ ನೆರವಿಲ್ಲದೆಯೂ. ಕೃಷ್ಣಾ ಸೋಬತಿಯವರ ಕೃತಿ ನಾನು ಓದಿದ್ದರಿಂದ ಆ ಕೃತಿ ಅದರಿಂದ ಮೂಡಿದ ಉತ್ಸಾಹದಿಂದಾಗಿ ನನ್ನ ಮತ್ತು ಸ್ನೇಹಿತರ ವಲಯದಲ್ಲಿ ಪುನರ್ಜನ್ಮ ಪಡೆದದ್ದು ಮಾತ್ರವಲ್ಲ ಅದರ ಮೂಲಕ ನನ್ನ ಇದುವರೆಗಿನ ಅನುಭವ ಚಿಂತನೆಗಳು ಪುನರ್ಜನ್ಮ ಪಡೆದದ್ದು ಕೂಡ ಅಷ್ಟೇ ನಿಜ. ಹೀಗೆ ಪುಸ್ತಕಗಳಿಗೆ ಪುನರ್ಜನ್ಮ ಕೊಡಲು ಹೋಗಿ ನಾವೇ ಪುನರ್ಜನ್ಮ ಪಡೆಯುವುದು ಎಷ್ಟು ಅದೃಷ್ಟವಲ್ಲವೆ?

(`ಬಿಸಿಲ ಬದುಕು' ಮಾಸಿಕ ಬೆಂಗಳೂರು-೨೦೦೦)

("ಮನೋಧರ್ಮ - ವಿಮರ್ಶಾ ಲೇಖನಗಳ ಸಂಗ್ರಹ" ಕೃತಿಯಲ್ಲಿ ಪ್ರಕಟಿತ.)

(ರೇಖಾಚಿತ್ರ: ನಾಡಿನ ಖ್ಯಾತ ಚಿತ್ರಕಲಾವಿದ ಶ್ರೀ ಬಿ.ಕೆ.ಎಸ್.ವರ್ಮಾ, ಮಾಸ್ತಿಯವರ `ಹೇಮಕೂಟದಿಂದ ಬಂದಮೇಲೆ' ಕತೆಗಾಗಿ ಬಿಡಿಸಿದ್ದನ್ನು ಕೃತಜ್ಞತಾಪೂರ್ವಕ ಬಳಸಿಕೊಳ್ಳಲಾಗಿದೆ.)
ಮುಂದೆ ಓದಿ....

Tuesday, May 26, 2009

ಆತಂಕ, ತಲ್ಲಣ, ಸೃಜನಶೀಲತೆ: ಉಸಿರಾಟದಷ್ಟೇ ನಿರಂತರ

ಬರಹಗಾರನಾಗಿ ನನಗಿರುವ ಆತಂಕಗಳು-ತಲ್ಲಣಗಳು ಈ ಸಮಾಜದ ನಾಗರೀಕನಾಗಿ, ಗೃಹಸ್ಥನಾಗಿ ನನಗಿರುವ ಆತಂಕಗಳಿಗಿಂತ ಭಿನ್ನವಾಗೇನಿಲ್ಲ, ಇರಲೂ ಕೂಡದು. ಒಂದು ಕಾಲಘಟ್ಟದಲ್ಲಿ ಬದುಕುವ ಎಲ್ಲ ಮನುಷ್ಯರಿಗಿರುವ ಆತಂಕ ನೋವುಗಳು ಬರಹಗಾರನಿಗೂ ಇರುತ್ತವೆ. ಹೆಚ್ಚೆಂದರೆ ಇಂತಹ ತಲ್ಲಣಗಳ ಬಗ್ಗೆ ಬರಹಗಾರ ಕೊಂಚ ಹೆಚ್ಚು ಸಂವೇದನಾಶೀಲನಾಗಿರಬಹುದು; ಅಷ್ಟೇ. ಸಮಕಾಲೀನ ಜಗತ್ತಿನ ಬಗ್ಗೆ ಹೆಚ್ಚು ಬರೆಯುವ ನನ್ನ ವಿಷಯದಲ್ಲಂತೂ ಈ ಮಾತು, ನೋಟ ಇನ್ನೂ ಹೆಚ್ಚು ನಿಚ್ಚಳ. ಇಂತಹ ಆತಂಕಗಳಲ್ಲಿ ಒಂದೆರಡನ್ನು ಇಲ್ಲಿ ಚರ್ಚಿಸಬಯಸುತ್ತೇನೆ.

ಈಗ ನನಗೆ 55 ವರ್ಷ. ನಾನು ವ್ಯಕ್ತಿಯಾಗಿ ಬರಹಗಾರನಾಗಿ ರೂಪುಗೊಳ್ಳಲು ಕಾರಣವಾದ ಸಂದರ್ಭದಲ್ಲಿ ಇದ್ದ ಜಗತ್ತಿಗೂ ಈವತ್ತಿಗೂ ತುಂಬಾ ವ್ಯತ್ಯಾಸವಿದೆ. ತಂತ್ರಜ್ಞಾನ, ಜಾಗತೀಕರಣ, ಮಾಧ್ಯಮದ ಆಕ್ರಮಣ ಇವುಗಳ ಜೊತೆಗೆ ಈವತ್ತಿನ ಸಂದರ್ಭದಲ್ಲಿ ಹಿಂದೆ ಇದ್ದದ್ದಕ್ಕಿಂತಲೂ ಹೆಚ್ಚು ಜನ ವರ್ಗಗಳು, ಸಮುದಾಯಗಳು ಕ್ರಿಯಾಶೀಲವಾಗಿವೆ. ಸಮಾಜದ ಅಧಿಕಾರದಲ್ಲಿ, ಅವಕಾಶಗಳಲ್ಲಿ, ಪ್ರಭಾವದಲ್ಲಿ ಹೆಚ್ಚು ಹೆಚ್ಚು ಸ್ಥಾನವನ್ನು ಪಡೆದಿವೆ, ಪಡೆಯುತ್ತಿವೆ. ಸಮಾಜದಲ್ಲಿ ಆದರ್ಶವಾದದ ನೊಗ ಹೊತ್ತು ಇಡೀ ಬದುಕನ್ನು ಅದಕ್ಕಾಗಿ ಮೀಸಲಿಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ನಮ್ಮ ನಮ್ಮ ಜಾತಿಗಳ ಸಮುದಾಯಗಳ ವಿಶಿಷ್ಟತೆಯನ್ನು ಸ್ಥಾಪಿಸುವುದರಲ್ಲಿರುವಷ್ಟು ನಮಗಿರುವ ಆಸಕ್ತಿ ಒಟ್ಟು ಸಮಾಜವನ್ನು ಕಾಡುವ ಸಮಸ್ಯೆಗಳ ಬಗ್ಗೆ ಇಲ್ಲ. ಹೀಗೆ ಹೇಳುತ್ತಾ ಹೋಗಬಹುದು. ಇದನ್ನೆಲ್ಲ ನಾವು ಹೇಗೆ ಗ್ರಹಿಸುತ್ತೇವೆ, ಅಭಿವ್ಯಕ್ತಗೊಳಿಸುತ್ತೇವೆ ಎಂಬುದೇ ಮುಖ್ಯ.

ಕಾಲಧರ್ಮಕ್ಕನುಗುಣವಾಗಿ ನಾವು ಗ್ರಹಿಸುವ ವಿವರಗಳು ಹೊಸದಾಗಿವೆ, ಭಿನ್ನವಾಗಿವೆ. ಆದರೆ ಈ ವಿವರಗಳ ಹಿಂದಿರುವ ಗ್ರಹಿಕೆಯ ಕ್ರಮ, ತಾತ್ವಿಕ ಭಿತ್ತಿ ಮಾತ್ರ ಎಪ್ಪತ್ತು-ಎಂಭತ್ತರ ದಶಕದಲ್ಲಿ ರೂಪುಗೊಂಡದ್ದೆ ಎನಿಸುತ್ತದೆ. ನಾಲಿಗೆ, ತಲೆ ನಮ್ಮದಾದರೂ ಮೆದುಳು ಹಿಂದಿನವರದು. ಚರ್ಮ ನಮ್ಮದಾದರೂ ಹೃದಯ ಹಿಂದಿನವರದು. ಗಾಂಧಿಯ ಉತ್ತರಗಳು, ಮಾರ್ಕ್ಸ್‌ನ ಪರಿಹಾರಗಳನ್ನು ಕುರಿತು ಇನ್ನೂ ಸಂಭ್ರಮಿಸುವ ನಾವು ಸಮಾಜದ ಆರೋಗ್ಯ-ನೆಮ್ಮದಿ ಕುರಿತಂತೆ ಈ ಮಹನೀಯರು ಕೇಳಿದ ಪ್ರಶ್ನೆಗಳನ್ನು, ಪ್ರಶ್ನೆಗಳ ಹಿಂದಿನ ತುರ್ತನ್ನು ಮರೆತು ಬಿಟ್ಟಿದ್ದೇವೆ. ಈ ಚಿಂತಕರ ಮಹತ್ವವಿರುವುದು ಅವರು ಕೇಳಿಕೊಂಡ ಪ್ರಶ್ನೆಗಳಲ್ಲಿ, ಪ್ರಶ್ನೆಗಳನ್ನು ಕೇಳುತ್ತಿದ್ದ ಧೀಮಂತಿಕೆಯಲ್ಲಿ. ಇದನ್ನೆಲ್ಲ ಹಿನ್ನೆಲೆಗೆ ಸರಿಸಿ ಈ ಮಾನ್ಯರ ಉತ್ತರಗಳ ಆಸರೆಯಲ್ಲೇ ಮಾತನಾಡುತ್ತಿದ್ದರೆ ನಮ್ಮ ಗ್ರಹಿಕೆ ಸ್ಥೂಲವಾಗಿರುತ್ತದೆ. ಆಗ ನಮಗೆ, ಮನಸ್ಸಿಗೆ, ಯೋಚಿಸಿದ ಸುಖ, ಸಮಾಧಾನ ಸಿಗಬಹುದೇ ಹೊರತು, ನಿಜವಾಗಿಯೂ ನಾವು ಯೋಚಿಸುತ್ತಿರುವುದಿಲ್ಲ, ಗಿಳಿಪಾಠ ಹೇಳುತ್ತಿರುತ್ತೇವೆ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಹೇಳುವುದಾದರೆ ನವ್ಯ ಚಳುವಳಿಯವರು ಚಿಂತನಾ ಕ್ರಮದಲ್ಲಿ ತಂದ ಹೊಸ ಪಲ್ಲಟ ನಂತರ ಕಂಡುಬರಲಿಲ್ಲ. ಕಂಡು ಬಂದದ್ದೇನಿದ್ದರೂ ಹೊಸ ವಿವರಗಳು, ಆಶಯಗಳು, ಆಕಾಂಕ್ಷೆಗಳು.

ಈ ಬಿಕ್ಕಟ್ಟಿನಿಂದ ದೂರವುಳಿಯಲು ನಾನು ನನ್ನ ಪ್ರತಿಭೆ-ಸ್ವಭಾವಕ್ಕನುಗುಣವಾಗಿ ನನಗೆ ಗೊತ್ತಿಲ್ಲದೇ ಬೇರೆ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು. ನವ್ಯ ಚಳುವಳಿಯಿಂದಾದ ಒಂದು ದೊಡ್ಡ ತಪ್ಪೆಂದರೆ ರೂಪಕ ಪ್ರತಿಭೆಯನ್ನು ಬರವಣಿಗೆಯ ಶಿಖರ ಸಾಧನೆ ಎಂಬ ನಂಬಿಕೆಯನ್ನು ಚಾಲ್ತಿಗೆ ತಂದದ್ದು. ಈ ನಂಬಿಕೆಗನುಗುಣವಾಗಿ ನವ್ಯರು ಇತರ ಸಾಹಿತ್ಯ ಮಾರ್ಗದಲ್ಲಿ ಬಂದ ಕೃತಿಗಳನ್ನು ಓದುತ್ತಾ ಹೋದರು, ಅರ್ಥೈಸುತ್ತಾ ಹೋದರು. ಎಲ್ಲ ಘಟನೆಗಳು, ವ್ಯಕ್ತಿಗಳು, ವಿದ್ಯಮಾನಗಳು ರೂಪಕಗಳೇ ಆಗಬೇಕೆ? ಪ್ರಾತಿನಿಧಿಕತೆ, ಸಾಂಕೇತಿಕತೆಯೆಂಬುದು ನಾವೆಲ್ಲ ನಂಬಿರುವಷ್ಟು ಅನಿವಾರ್ಯವೇ? ನಾವಾಗಲೀ, ನೀವಾಗಲೀ, ನನ್ನ ಬದುಕಾಗಲೀ ನಿಮ್ಮ ಬದುಕಾಗಲೀ ಇರುವುದು ಕೇವಲ ಅರ್ಥವಾಹಕವಾಗುವುದಕ್ಕೆ ಮತ್ತು ರೂಪಕವಾಗುವುದಕ್ಕೆ ಮಾತ್ರವೇ? ನಮಗೆ ನಾವೇ ವಿಶಿಷ್ಟ ಮಾನಸಿಕ ಘಟಕಗಳಾಗಿ, ಸ್ವತಂತ್ರ ಜೀವಗಳಾಗಿ ಬದುಕುವ ಸಾಧ್ಯತೆ, ಹಕ್ಕಿಲ್ಲವೇ? ಈ ಪ್ರಶ್ನೆಗಳನ್ನು ಕೇಳಿಕೊಳ್ಳುವಾಗ ನನಗಿರುವ ನಿಸ್ಸಹಾಯಕತೆಯಲ್ಲಿ ನಾನು ಸಾಹಿತ್ಯ-ಸಂಸ್ಕೃತಿ, ಚಿಂತನೆಯಲ್ಲಿ ಅಡಕವಾಗಿರುವ ಮೂಲ ಮಾದರಿ (Arche Types)ಗಳ ಅಗತ್ಯವನ್ನು ವಿರೋಧಿಸುತ್ತಿದ್ದೇನೆಂದು ತಪ್ಪು ತಿಳಿಯಬಾರದು.

ಕತೆ-ಕಾದಂಬರಿಗಳನ್ನು ಬರೆಯುವ ಸಂದರ್ಭದಲ್ಲಿ ನಾನು ಕಾಣುವುದು, ಕಾಣಿಸಲು ಪ್ರಯತ್ನಿಸುವುದು ಆದಷ್ಟೂ ದಿಗಂಬರವಾದ ಮನುಷ್ಯರನ್ನು. ಎಲ್ಲರಿಗೂ ಸಾಮಾಜಿಕ ಕವಚಗಳಿರುತ್ತವೆ, ಮುಖವಾಡಗಳಿರುತ್ತವೆ, ಚಹರೆಗಳಿರುತ್ತವೆ. ಇದನ್ನೆಲ್ಲ ಹೊರ ತೆಗೆದು ಬೇರ್ಪಡಿಸಿದ ನಂತರ ನಮಗೆ ಸಿಗುವ ನಾವು ಮತ್ತು ಇತರರೇ ನಿಜವಾದ ವ್ಯಕ್ತಿಗಳು/ಮನುಷ್ಯರು. ಇದು "ಸಾಮಾಜಿಕತೆ"ಗೆ ವಿರೋಧವಾದ ನಿಲುವಲ್ಲ. ಸಾಮಾಜಿಕತೆಯ ಹೆಸರಿನಲ್ಲಿ ಕಾಣುವ ಸ್ಥೂಲ ಗ್ರಹಿಕೆ, ಮೇಲು ಮೇಲು ನೋಟಗಳನ್ನು ನಿರಾಕರಿಸಿ ಇನ್ನೂ ಅರ್ಥಪೂರ್ಣವಾಗಿ ಸಾಮಾಜಿಕವಾಗುವ ಕ್ರಮವಿದು. ಕೊನೆಗೂ ನಾವು ಸೃಜನಶೀಲ ಬರವಣಿಗೆಯಲ್ಲಿ ಮಾಡಬೇಕಾಗಿರುವುದು ಸಾಮಾಜಿಕ-ರಾಜಕೀಯ ಚರಿತ್ರೆಯ ನಿರ್ಮಾಣವನ್ನಲ್ಲ. ಈ ಚರಿತ್ರೆಗಳಿಗೆ, ಇಂತಹ ಚರಿತ್ರೆಗಳಿಗೆ ಕಿಂಚಿತ್ತೂ ಆಸಕ್ತಿಯಿಲ್ಲದ ಮನುಷ್ಯ ಚರಿತ್ರೆಯ ನಿರ್ಮಾಣವನ್ನು.

ಕತೆಯ ಕೇಂದ್ರಶಿಲ್ಪಕ್ಕಿಂತ ಹೆಚ್ಚಾಗಿ ನನಗೆ ಆತ್ಮೀಯವಾಗುವುದು ಕತೆಯೇ ಇನ್ನೊಂದು ಕತೆಯಾಗಿ, ಇನ್ನೊಂದು ಕತೆಯೇ ಉಪಕತೆಯಾಗಿ ‘ಕಥಾಜಾಲ’ವು ವಿಸ್ತಾರವಾಗುತ್ತಾ ಹೋಗುವ ಕ್ರಮ. ಒಂದೇ ದೃಷ್ಟಿ ಕೋನದಿಂದ ಒಂದು ಕತೆ ಅಥವಾ ಅನುಭವವನ್ನು ನೋಡುವುದಕ್ಕಿಂತ, ಕಾಣಿಸುವುದಕ್ಕಿಂತ ‘ಕಥಾಜಾಲ’ದ ಮೂಲಕ ನನ್ನನ್ನು, ಓದುಗರನ್ನು ಹೆಚ್ಚು ಹೆಚ್ಚು ದೃಷ್ಟಿಕೋನದ ಸಾಧ್ಯತೆಗಳಿಗೆ ತೆರೆಯುವ ಕ್ರಮವನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ನನ್ನ ಸ್ವಭಾವ-ಪ್ರತಿಭೆಯ ಜಾಯಮಾನಕ್ಕೆ ಸಾಧ್ಯವಾಗುವುದು ಈ ರೀತಿಯ ಬರವಣಿಗೆಯೇ. ನವ್ಯರ ನಂತರದ ಅವರ ಹಿಂಬಾಲಕರು ತಂದ ವಿಮರ್ಶಾ ಕ್ರಮ ಕಥನದ ಬರವಣಿಗೆ ಮತ್ತು ಓದಿನಲ್ಲಿ ದೃಷ್ಟಿಕೋನವು ಸ್ಥಾಯಿಯಾಗಿರಬೇಕೆಂದು ಬಯಸುತ್ತದೆ, ಒತ್ತಾಯಿಸುತ್ತದೆ. ಇಂತಹ ಬಯಕೆ, ಒತ್ತಾಯಗಳನ್ನು ಪ್ರಶ್ನಿಸುವುದು, ನಿರಾಕರಿಸುವುದು ಕೂಡ ನನ್ನ ಬರವಣಿಗೆಯ ಉದ್ದೇಶಗಳಲ್ಲೊಂದು. ಕತೆಯೆಂಬುದು ಯಾವಾಗಲೂ ಒಂದೇ ಕತೆಯಾಗಿರುವುದಿಲ್ಲ. ಹಲವು ಕತೆಗಳನ್ನು ಏಕಕಾಲಕ್ಕೆ ಹೇಳುವ ಕಥನವಾಗಿರುತ್ತದೆ. ಬರೆಯುವಾಗ ಓದುವಾಗಲೇ ನಮ್ಮ ಗ್ರಹಿಕೆ ಮತ್ತು ದೃಷ್ಟಿಕೋನದಲ್ಲಿ ಚಲನಶೀಲತೆಯನ್ನು ತರಲಾರದ ಕತೆಗಳ ಬಗ್ಗೆ ನನಗೆ ಆದರವಿಲ್ಲ. ದೃಷ್ಟಿಕೋನದ ಎಷ್ಟು ಎಷ್ಟು ಪಲ್ಲಟಗಳಿಗೆ ಓದುವಾಗ ಕತೆ ಓದುಗನನ್ನು ತೆರೆಯುತ್ತದೋ ಅಷ್ಟರಮಟ್ಟಿಗೆ ಕತೆ ಹೆಚ್ಚು ಸಾರ್ಥಕವೆಂದು ನಾನು ನಂಬುತ್ತೇನೆ. ನಂಬಿ ಬರೆಯಲು ಪ್ರಯತ್ನಿಸಿದ್ದೇನೆ. ಈ ರೀತಿಯ ಭಿನ್ನ ಕತೆಗಾರಿಕೆಗೆ ಓದುಗರು ತೆರೆದ ಮನಸ್ಸಿನವರೇ ಆಗಿದ್ದಾರೆ ಎಂಬುದು ನನ್ನ ತಿಳುವಳಿಕೆ. ತೊಂದರೆಯಿರುವುದು ನವ್ಯರು ಚಾಲ್ತಿಗೆ ತಂದ ರೂಪಕಾರ್ಥ ಮತ್ತು ಆಕೃತಿ ಹಠದಿಂದ ಹೊರಬರಲಾರದ ಕತೆಗಾರರ ಗುಂಪಿನಿಂದ ಮತ್ತು ವಿಮರ್ಶಕರಿಂದ. ಇದು ಬರವಣಿಗೆಗೆ ಸಂಬಂಧಪಟ್ಟ ತೊಂದರೆಯಲ್ಲ. (not a writing problem) ಜೊತೆ ಬರಹಗಾರರು ವಿಮರ್ಶಕರು ಬೇರೆ ರೀತಿಯ ಬರವಣಿಗೆಯ ಕ್ರಮಗಳ ಬಗ್ಗೆ ಸಂವೇದನಾ ಶೂನ್ಯರಾಗಿದ್ದಾಗ ಅಥವಾ ಹಾಗೆ ನಟಿಸಿದಾಗ ಹುಟ್ಟು ಹಾಕುವ ಬರಹಗಾರರ ಸಮಸ್ಯೆಗಳು. (writers problem)

ವೃತ್ತಿ ತಿರುಗಾಟ, ಹಿನ್ನೆಲೆಯೇ ಕಾರಣವಾಗಿ ಬರೆಯಲಿ, ಬರೆಯದೆ ಇರಲಿ ಯಾವಾಗಲೂ ನನ್ನನ್ನು ಕತೆಗಳ ಮಹಾಪೂರವೇ ಕಾಡುತ್ತಿರುತ್ತದೆ. ಯಾವ ಕತೆಗಾರನು ತನಗೆ ದಕ್ಕಿದ, ಕಂಡ ಎಲ್ಲ ಕತೆಗಳನ್ನು ಒಂದು ಜೀವಮಾನದಲ್ಲಿ ಬರೆದು ಪೂರೈಸಲು ಸಾಧ್ಯವಾಗುವುದಿಲ್ಲ. ಕತೆ ಬರೆಯಲಿ ಕಾದಂಬರಿ ಬರೆಯಲಿ, ಬರೆಯದೆ ಇರಲಿ ಕಥನಕಾರರಾದ ಮೇಲೆ ಕತೆಗಳನ್ನಂತೂ ನಾವು ಅನುಭವಿಸುತ್ತಲೇ ಇರಬೇಕು. ಕತೆಗಳಲ್ಲಿ ಭಾಗಿಯಾಗುತ್ತಲೇ ಇರಬೇಕು. ಕತೆಗಳ ಮಹಾಪೂರದ ದೆಸೆಯಿಂದಾಗಿಯೇ ನನ್ನಲ್ಲಿ ಹಲವು ದೃಷ್ಟಿಕೋನಗಳನ್ನು ಒಟ್ಟಿಗೆ ಮಂಡಿಸುವ ಸಾಧ್ಯತೆ, ದೃಷ್ಟಿಕೋನದಲ್ಲಿ ಪಲ್ಲಟಗಳನ್ನು ಓದಿನ ಹಂತದಲ್ಲಿ ಪ್ರಚೋದಿಸುವ ಕತೆಗಾರಿಕೆ ಅನಿವಾರ್ಯವಾಗಿರಬಹುದು. ಹೀಗಾಗಿ ನನ್ನದು ನಾನೇ ರೂಢಿಸಿಕೊಂಡ ಒಂಟಿ ದನಿ, ವಿಶಿಷ್ಟ ಧ್ವನಿ.

ಯಾವುದೇ ಬರಹಗಾರನು ಬರೆಯುವುದರಿಂದ ಮಾತ್ರವೇ ಬರಹಗಾರನಾಗುವುದಿಲ್ಲ. ಹಾಗೆ ಬರಹಗಾರನಾಗುವುದೆಂದರೆ ಇನ್ನೊಬ್ಬರನ್ನು ಓದುವ ಕ್ರಮವನ್ನು ಹಾಗೆ ಓದುವುದರಿಂದ ಪಡೆಯುವ ಕ್ರಮವನ್ನು ಕೂಡ ಸೂಚಿಸುವುದಾಗಿರುತ್ತದೆ. ಮಾಸ್ತಿ, ಕಾರಂತ, ಕುವೆಂಪು ಇಂತಹ ಸಮೃದ್ಧ ಕಥನಕಾರರನ್ನು ನಿರಂತರವಾಗಿ ಮತ್ತೆ ಮತ್ತೆ ಎಂಬಂತೆ ಓದುವ ನನಗೆ ಈ ಲೇಖಕರ ಬರವಣಿಗೆಯ ಕ್ರಮದ ಬಗ್ಗೆ ಇನ್ನೂ ನಿಖರವಾದ ಅಧ್ಯಯನಗಳು ನಡೆದೇ ಇಲ್ಲವೆನ್ನಿಸುತ್ತದೆ. ಕತೆಗಾರರಿಂದಲೂ ವಿಮರ್ಶಕರಿಂದಲೂ, ಈ ಮಹಾನ್ ಕಥನಕಾರರು ಬರವಣಿಗೆಯ ವೈವಿಧ್ಯದಲ್ಲಿ, ಸಮೃದ್ಧಿಯಲ್ಲಿ ಎಷ್ಟೊಂದು ಭಿನ್ನ, ಎತ್ತರ. ನವ್ಯರು ಮತ್ತು ನವ್ಯೋತ್ತರ ಕತೆಗಾರರು, ನನ್ನ ಸಮಕಾಲೀನ ಕತೆಗಾರರೆಲ್ಲರನ್ನು ಒಟ್ಟಿಗೇ ಗಮನದಲ್ಲಿಟ್ಟುಕೊಂಡು ನೋಡಿದಾಗಲೂ ಈ ರೀತಿಯ ಸಮೃದ್ಧಿ ಮತ್ತು ವೈವಿಧ್ಯ ಕಂಡುಬರುವುದಿಲ್ಲ. ಕೆಲವು ಕತೆಗಾರರ ಬರವಣಿಗೆಯಲ್ಲಿ flourish ಇರಬಹುದು, ಮೋಹಕತೆ ಇರಬಹುದು. ಇದು ಸುಳ್ಳು ವೈವಿಧ್ಯ, ಸಮೃದ್ಧಿ. ಈ ರೀತಿಯ ವೈವಿಧ್ಯ ಮತ್ತು ಸಮೃದ್ಧಿಯನ್ನು ಸಾಧಿಸಲು ಎಲ್ಲ ಮುಖ್ಯ ಲೇಖಕರು ತಾವೇ ರೂಢಿಸಿಕೊಂಡ ರೂಪಕ ನಿಷ್ಠೆ, ಆಕೃತಿ ಇಕ್ಕಟ್ಟಿನ ಜತೆಗೆ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ತೇಜಸ್ವಿಯವರಿಗೆ ಅನುವಾದಗಳಿರಬಹುದು, ಲಂಕೇಶರಿಗೆ ಪತ್ರಿಕೋದ್ಯಮವಿರಬಹುದು, ಅನಂತಮೂರ್ತಿಯವರಿಗೆ ಭಾಷಣಗಳು, ಅಂಕಣಗಳು ಇರಬಹುದು. ಇಲ್ಲೆಲ್ಲಾ ಈ ಬರಹಗಾರರು ಪೂರೈಸಿಕೊಳ್ಳುತ್ತಿರುವುದು ತಮ್ಮ ಕಥನದ ಆಕಾಂಕ್ಷೆಗಳನ್ನು. ಹಾಗೆಂದು ಹೇಳುವುದಿಲ್ಲ ಅಷ್ಟೇ. ಆದರೆ ತಮಗಿಂತ ಭಿನ್ನ ಕ್ರಮದಲ್ಲಿ ಬರೆಯುವ ಕಥನಕಾರರನ್ನು ಬೆಲೆಕಟ್ಟುವಾಗ ಮಾತ್ರ ಒಂದು ಕಾಲದಲ್ಲಿ ತಮ್ಮದಾಗಿದ್ದ ಪುರಾತನ ಮಾನದಂಡಗಳನ್ನು ಬಳಸುತ್ತಾರೆ.

ಕಾವ್ಯ ಕೇಂದ್ರಿತ ಮತ್ತು ರೂಪಕ ಪ್ರಣೀತ ಮಾನದಂಡಗಳು ಎಲ್ಲ ಪ್ರಕಾರಕ್ಕೂ ಅನ್ವಯಿಸುವುದಿಲ್ಲ. ಸಣ್ಣಕತೆಗೂ ಕೂಡ. ಹೀಗೆ ಅನ್ವಯಗೊಳಿಸಲು ಹೋಗಿದ್ದರಿಂದಲೇ ಮಾಸ್ತಿಯವರ ಕಥಾಲೋಕದಲ್ಲಿರುವ ಭಿನ್ನ ಭಿನ್ನ ಸ್ವರೂಪಗಳ ಪತ್ತೆ ನಮಗೆ ಸಿಗಲೇ ಇಲ್ಲ. ಕುವೆಂಪು ಸಮೃದ್ಧಿಯೂ, ಕಾರಂತ ವೈವಿಧ್ಯವೂ ಕೂಡ. ಪ್ರಬಂಧವೆಂಬ ಪ್ರಕಾರವಂತೂ ಸೊರಗೇ ಹೋಯಿತು. ಬರವಣಿಗೆಯಲ್ಲಿ ಮುಖ್ಯವಾಗಿ ಸಾಧಿತವಾಗಬೇಕಾದ್ದು ಸ್ವಚ್ಛಂದತೆ, ನಿರರ್ಗಳತೆ ಮತ್ತು ಜೀವಂತಿಕೆ. ಆಕೃತಿಯನ್ನು ಇದಕ್ಕಾಗಿ ಮುರಿಯುವುದೇ, ಮುರಿದು ಕಟ್ಟುವುದೇ ಸೃಜನಶೀಲತೆಯ ಲಕ್ಷಣ ಮತ್ತು ಮುರಿಯುವುದು-ಕಟ್ಟುವುದು ಬೇರೆ ಬೇರೆ ಅಲ್ಲ. ಇದನ್ನು ತಿಳಿಯದವರು ಪ್ರಬಂಧ ಪ್ರಕಾರವನ್ನು ಉಪೇಕ್ಷೆಗೆ ಅರ್ಹವಾದ ಬರವಣಿಗೆಯೆಂದು ತಿಳಿದು ಪ್ರತಿಕ್ರಿಯಿಸುವುದು ಕಂಡಾಗ ನಗೆ ಬರುತ್ತದೆ. ನನ್ನ ಮಟ್ಟಿಗಂತೂ ಕತೆಗಳಲ್ಲಿ ನಾನು ಸಾಧಿಸಲು ಯತ್ನಿಸುವ ಕಥಾಜಾಲ, ದೃಷ್ಟಿಕೋನಗಳ ಬಾಹುಳ್ಯತೆ, ತೆರೆದ ಧ್ವನಿ - ಈ ಎಲ್ಲ ಪ್ರಯತ್ನಗಳನ್ನು ಪ್ರಬಂಧದಲ್ಲೂ ಮಾಡಲು ಪ್ರಯತ್ನಿಸುತ್ತಿದ್ದೇನೆನಿಸುತ್ತದೆ. ಪ್ರಬಂಧ ಪ್ರಕಾರವೇ ತನ್ನ ಸ್ವಭಾವದಿಂದಾಗಿ ನವ್ಯರು ಚಾಲ್ತಿಗೆ ತಂದ ಕಾವ್ಯಾತಿ ನಿಷ್ಠೆ, ರೂಪಕ ಪ್ರಣೀತಿ ಇದೆಲ್ಲವನ್ನೂ ತನ್ನ ನಿರರ್ಗಳತೆ ಮತ್ತು ವೈವಿಧ್ಯಮಯತೆಯಿಂದ ಪ್ರಶ್ನಿಸುವಂತದು. ಕತೆ ಮತ್ತು ಪ್ರಬಂಧಗಳು ಮಾತ್ರವಲ್ಲ, ಪ್ರತಿಯೊಂದು ವಿವರಗಳಿಗೂ ಸಾಂಕೇತಿಕ ಮಹತ್ವ ಮಾತ್ರವಲ್ಲದೆ ತನ್ನದೇ ಆದ ಸ್ವತಂತ್ರ ವ್ಯಕ್ತಿತ್ವ, ಅಸ್ತಿತ್ವವೊಂದಿದೆಯೆಂಬುದನ್ನು ಮತ್ತೆ ಮತ್ತೆ ನೆನಪಿಸುವುದೇ ಬರವಣಿಗೆಯ ಉದ್ದೇಶವಾಗಬೇಕು.

ಬರಹದ ಪ್ರಾರಂಭದಲ್ಲಿ ನಮ್ಮ ಕಾಲದ ಮಾನಸಿಕ ಬಿಕ್ಕಟ್ಟು ಇಕ್ಕಟ್ಟುಗಳ ಬಗ್ಗೆ ಹೇಳಿದೆ. ಇದೆಲ್ಲಕ್ಕೂ ಉತ್ತರವೆಂಬಂತೆ ನನ್ನ ಬರವಣಿಗೆಯಿದೆ ಎಂಬ ಧ್ವನಿ ಈ ಬರಹದಿಂದ ಮೂಡಿದ್ದರೆ ನನ್ನ ಉದ್ದೇಶವು ಖಂಡಿತ ಅದಲ್ಲ. ನಾನು ಬರವಣಿಗೆಯ ಮೂಲಕ ಈ ಬಿಕ್ಕಟ್ಟುಗಳಿಗೆ ಸ್ಪಂದಿಸಲು ನಾನು ಕಂಡುಕೊಂಡ ನನ್ನದೇ ಹಾದಿಯಿದು. ನಮ್ಮ ಕಾಲದ ಬಿಕ್ಕಟ್ಟುಗಳಿಗೇ ಕಾರಣವಾಗಿಯೋ ಇಲ್ಲ ಬಿಕ್ಕಟ್ಟೇ ಪರಿಣಾಮವಾಗಿಯೋ ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಪ್ರತಿ ಕುಟುಂಬದಲ್ಲೂ ಕಾರ್ಖಾನೆ, ಕಛೇರಿಗಳಲ್ಲೂ ಪ್ರೀತಿ ಸಹನೆ ಮತ್ತು ಇನ್ನೊಬ್ಬರ ತಿಳಿದುಕೊಳ್ಳುವ ತಾಳ್ಮೆ-ವ್ಯವಧಾನವೇ ಕಡಿಮೆಯಾಗುತ್ತಿದೆ. ನಮ್ಮನ್ನಲ್ಲದೆ ಇನ್ನೊಬ್ಬರನ್ನು ಪ್ರೀತಿಸುವುದು ಈ ಕಾಲದಲ್ಲಿ ತುಂಬಾ ಕಷ್ಟ. ನಾವು ಪ್ರೀತಿಸುತ್ತಿದ್ದೇವೆಂದು ತಿಳಿದುಕೊಂಡಿರುವವರು ಕೂಡ ನಮ್ಮ ವ್ಯಕ್ತಿತ್ವದ - ಸ್ವಾರ್ಥದ ಹೊರ ಚಾಚುಗಳೇ ಆಗಿರುತ್ತಾರೆ. ಇನ್ನೊಬ್ಬರ ಬಗ್ಗೆ ನಮಗಿರುವ ಪ್ರೇಮವೂ ಈಗ ಸ್ವಪ್ರೇಮದ ಒಂದು ಭಾಗವೇ ಆಗಿರುತ್ತದೆ. ಹೀಗಿರುವಾಗ ಬರಹಗಾರನೊಬ್ಬ ಏನನ್ನು ನಿರೀಕ್ಷಿಸಬಹುದು? ನನ್ನ ಬರವಣಿಗೆ ಓದುಗರ ಮನಸ್ಸಿಗೆ ಹೊರೆಯಾಗದಿರಲಿ, ಕಾಲಹರಣವಾಗದಿರಲಿ, ಮನಸ್ಸಿನ ನಿರಾಳತೆಗೆ ವಿರಾಮಕ್ಕೆ ಕಾರಣವಾಗಲಿ, ಬರವಣಿಗೆಯಲ್ಲಿ ಕಾಣುವವರ ಬಗ್ಗೆಯು, ಹಾಗೆ ಕಂಡವರ ಹಿಂದೆ ಇರುವವರ ಬಗ್ಗೆಯೂ ಸಹನೆ, ಪ್ರೀತಿಯನ್ನು ಕಿಂಚಿತ್ತಾದರೂ ಹೆಚ್ಚಿಸಲಿ. ಆತಂಕ, ತಲ್ಲಣ, ಸೃಜನಶೀಲ ಬರಹಗಾರನಿಗೆ ಉಸಿರಾಟದಷ್ಟೇ ನಿರಂತರ ಒಡನಾಡಿ. ಈ ಆತಂಕ - ತಲ್ಲಣ ಮುಖ ಮಾಡಿರುವುದು ಮಾತ್ರ ಇನ್ನೊಂದಿಷ್ಟು ಪ್ರೀತಿಯ ಕಡೆಗೇ!
(ಶೂದ್ರ ಪತ್ರಿಕೆಯ ವಿಶೇಷಾಂಕದಲ್ಲಿ (ಲೇಖಕನಾಗಿ ನನ್ನ ತಲ್ಲಣಗಳು) ಪ್ರಕಟಿತ ಲೇಖನ)
ಮುಂದೆ ಓದಿ....

Monday, April 27, 2009

ಗೋಕುಲಾಷ್ಟಮಿ - ಒಂದು ಮರು ಓದು

ಜೀನ್ ಪಾಲ್ ಸಾತ್ರೆಯ "ನಿರಂತರವಾಗಿ ವಿಕಾಸಗೊಳ್ಳುತ್ತಲೇ ಇರುವ ದೇವರ ಕಲ್ಪನೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. - ಪುತಿನ.

"ಗೋಕುಲಾಷ್ಟಮಿ" ಪುತಿನರ ಮತ್ತು ಕನ್ನಡದ ಉತ್ತಮ ಪ್ರಬಂಧಗಳಲ್ಲೊಂದು. ಓದಿನ ಮತ್ತು ಬದುಕಿನ ಬೇರೆ ಬೇರೆ ಸನ್ನಿವೇಶಗಳಲ್ಲಿ ಈ ಪ್ರಬಂಧವನ್ನು ಮತ್ತೆ ಮತ್ತೆ ಓದುತ್ತಲೇ ಬಂದಿರುವ ನನಗೆ, ಪ್ರಬಂಧದ ಇತ್ತೀಚಿನ ಓದು ನಮ್ಮ ಕಾಲಮಾನದ ಮುಖ್ಯ ಸಾಂಸ್ಕೃತಿಕ ಪ್ರಶ್ನೆಗಳನ್ನು ಬೇರೊಂದು ರೀತಿಯಲ್ಲು ನೋಡಬಹುದಲ್ಲವೇ ಎಂಬ ಪ್ರಚೋದನೆಯನ್ನು, ನಿರಾಳವನ್ನು ನೀಡಿತು. ಮೊದಲಿಗೆ ಪ್ರಬಂಧದ ಸ್ವರೂಪದ ಬಗ್ಗೆ.

ಈ ಪ್ರಬಂಧದ ಚೌಕಟ್ಟನ್ನು ಇಂತಹದೇ ಎಂದು ಗುರುತಿಸಿ ಕಟ್ಟು ಹಾಕುವುದು ಕಷ್ಟ. ವರ್ಣನಾತ್ಮಕ, ಲಹರಿ, ಚಿಂತನಶೀಲ, ಆಧ್ಯಾತ್ಮಿಕ - ಇಂತಹ ಎಲ್ಲ ಗುಣಸ್ವಭಾವಗಳನ್ನು ಪ್ರಬಂಧ ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಈ ಗುಣವಿಶೇಷಗಳು ಒಂದರೊಡನೊಂದು ಪ್ರಬಂಧದ ಸಹಜ ಓಘದಲ್ಲಿ ನಿರಾಯಾಸವಾಗಿ ಬೆರೆಯುತ್ತ ಬರಹದ ಧ್ವನಿಶಕ್ತಿಯನ್ನು ಹೆಚ್ಚಿಸಿವೆ. ಹಾಗಾಗಿ ಈ ಪ್ರಬಂಧ ಇಂತದೇ ಜಾತಿಯದು ಎಂದು ವರ್ಗೀಕರಿಸುವುದು ಕಷ್ಟ ಮತ್ತು ತಪ್ಪು.

ಎಲ್ಲ ಒಳ್ಳೆಯ ಪ್ರಬಂಧಗಳಲ್ಲು ಇರುವಂತೆ ಇಲ್ಲು ಒಂದು ಪ್ರಸಂಗ ಯಾ ವಿದ್ಯಮಾನವಿದೆ, ಸ್ವಾನುಭಾವವಿದೆ, ಕೀಟಲೆಯಿದೆ, ಚಿಂತನೆಯಿದೆ, ಮೀರುವಿಕೆಯಿದೆ. ಇದೆಲ್ಲವೂ ಮನೆ ಮತ್ತು ಕುಟುಂಬ ವಾತಾವರಣದಲ್ಲಿ ದಿನನಿತ್ಯದ ಆವರಣದಲ್ಲಿ ನಡೆಯುವುದರಿಂದ ಪ್ರಬಂಧವು ನಿರೂಪಿಸುವ ಅನುಭವ-ಚಿಂತನೆ-ಕಾಣ್ಕೆ ನಮ್ಮಂತಹ ಸಾಧಾರಣ ಗೃಹಸ್ಥರದು ಕೂಡ ಎಂದೆನಿಸಿಬಿಡುತ್ತದೆ.

ಗೋಕುಲಾಷ್ಟಮಿಯ ಆಚರಣೆ ಶ್ರೀವೈಷ್ಣವ ಕುಟುಂಬದ ವಾತಾವರಣದಲ್ಲಿ ಹೇಗೆ ಜರುಗಿತು, ಜರುಗುತ್ತಿದೆ ಮತ್ತು ಜರುಗುತ್ತಲೇ ಇರುತ್ತದೆ ಎಂಬುದು ನಿರೂಪಣೆಯ ತಿರುಳು. ಶ್ರೀಕೃಷ್ಣ ಒಂದು ಭಾವವಾಗಿ ಹೇಗೆ ಹುಟ್ಟುತ್ತಾನೆ ಮತ್ತು ಏಕೆ ಹುಟ್ಟಬೇಕು ಎನ್ನುವುದು ನಿರೂಪಣೆಯ ಹೃದಯ.
ನನ್ನ ಓದಿಗೆ ಭೂಮಿಕೆಯಾಗಿ ಪುತಿನರ ಕೆಲವು ಮಾತುಗಳನ್ನು ಉಲ್ಲೇಖಿಸುತ್ತೇನೆ:

"ನಾನು ತಾತ್ವಿಕವಾಗಿಯಾಗಲೀ ಅಥವಾ ಭಾವನಾತ್ಮಕವಾಗಿಯಾಗಲೀ ಯಾವುದೋ ಒಂದು ವೈಯಕ್ತಿಕ ದೇವರೊಡನೆ ಅಥವಾ ಒಂದು ನಿರ್ದಿಷ್ಟ ಪರಂಪರೆಯೊಡನೆ ನನ್ನನ್ನು ಗುರುತಿಸಿಕೊಂಡಿಲ್ಲ. ನನಗೆ ಯಾವಾಗಲೂ ಒಬ್ಬ ಮುಕ್ತ ಮನುಷ್ಯನ ಪೂಜೆಯೇ ಮುಖ್ಯವೆನಿಸಿದೆ. (ನೋಡಿ: ಮಲೆ ದೇಗುಲ) ಒಬ್ಬ ವ್ಯಕ್ತಿ ಸಂಪೂರ್ಣ ಸ್ವಾತಂತ್ರ್ಯದ ಸ್ಥಿತಿಯಲ್ಲಿ ಪೂಜೆಗೈಯಬೇಕು ಎಂದು ನನಗನ್ನಿಸುತ್ತದೆ.

ನಾನು ಪೂಜೆಯನ್ನೇನಾದರೂ ಮಾಡುವುದಾದರೆ ಅದು ನನ್ನದೇ ರೀತಿಯಲ್ಲಿ ಸ್ವಯಂ ಶುದ್ಧೀಕರಣಗೊಳ್ಳುವುದಕ್ಕೆ ಅಷ್ಟೆ. ನನ್ನನ್ನು ನಾನು ಶುದ್ಧಗೊಳಿಸಬೇಕೆಂಬ ತೀವ್ರವಾದ ಹಂಬಲ ನನಗೆ ಚಾಲನೆ ನೀಡುತ್ತದೆ. ನಾನು ಮಾಡುವ ಆಚರಣೆಗಳು ಆಳವಾದ ಸಾಂಕೇತಿಕತೆಯನ್ನು ಪಡೆದುಕೊಳ್ಳುತ್ತದೆ. ಆ ಆಚರಣೆಗಳು ಯಾವುದೇ ಸಾಂಪ್ರದಾಯಿಕ ಚೌಕಟ್ಟಿನಿಂದ ಬರುವುದಿಲ್ಲ. ನಾನವುಗಳಲ್ಲಿ ಅರ್ಥವನ್ನು ಹುಡುಕಿಕೊಳ್ಳುತ್ತೇನೆ." (ಶ್ರೀ ಎನ್.ಮನು ಚರ್ಕವರ್ತಿಯವರಿಗೆ ನೀಡಿದ ಸಂದರ್ಶನ, ಭೃಂಗಮಾರ್ಗ - ಪುಟ 450, ಸಂ.ಡಾಎಚ್.ಎಸ್.ರಾಘವೇಂದ್ರ ರಾವ್.)

ಈ ದೃಷ್ಟಿಕೋನದಿಂದಾಗಿಯೇ ಪ್ರಬಂಧದ ಸ್ವರೂಪ ಮತ್ತು ಅದು ಕಾಣಿಸುವ ಭಾವಲೋಕ ಎರಡೂ ಹೊಸ ಎತ್ತರಕ್ಕೆ ತಲುಪುತ್ತವೆ. ನಿಜವಾದ ಆಧ್ಯಾತ್ಮಿಕ ಹುಡುಕಾಟದಲ್ಲಿರುವ ಎಲ್ಲ ಸಂವೇದನಾಶೀಲರಂತೆ ಪುತಿನರು ಕೂಡ ಒಂದು ವೈಯಕ್ತಿಕ ಧರ್ಮ (Personal Religion)ದ ಹುಡುಕಾಟದಲ್ಲಿದ್ದಾರೆ. ಇಂತಹ ಸಂವೇದನಾಶೀಲರಿಗೆ ಸಾಂಸ್ಥಿಕ ಧರ್ಮ ಮತ್ತು ಅದರ ಚೌಕಟ್ಟು ಆಶಯಗಳಲ್ಲಿ ನಂಬಿಕೆಯಿರುವುದಿಲ್ಲ, ಉತ್ಸಾಹವಿರುವುದಿಲ್ಲ. ತಾನು ಹುಟ್ಟಿದ ಧರ್ಮ, ಜಾತಿ ಮತ್ತು ಹಿನ್ನೆಲೆಯ ಬಗ್ಗೆ ಸಂಕೋಚವಿರುವುದಿಲ್ಲ, ಮುಜುಗರವಿರುವುದಿಲ್ಲ. ಆದರೆ ಅದನ್ನು ವೈಭವೀಕರಿಸುವುದು ಇಲ್ಲ. ಬದಲಾಗಿ ವಿಮರ್ಶಾತ್ಮಕ ಧೋರಣೆ ಹೊಂದಿದ್ದು ಉಳಿದ ಧರ್ಮಗಳ, ವಿಚಾರಗಳ ಮೂಲತಿರುಳನ್ನು, ಸದಾಶಯಗಳನ್ನು ತಮ್ಮ ವಿಚಾರದ, ನಂಬಿಕೆಗಳ, ಆಚರಣೆಗಳ ಚೌಕಟ್ಟಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಮನೋಭಾವಕ್ಕೆ ಗಾಂಧಿ ನಮ್ಮ ಕಾಲದಲ್ಲಿ ಉತ್ತಮ ಉದಾಹರಣೆ. ಇದನ್ನೆಲ್ಲ ವಿವರಿಸಲು "ಆತ್ಮೀಕರಣ" ಎನ್ನುವ ಪದವನ್ನು ಪುತಿನ ಬಳಸುತ್ತಾರೆ.

ಈ ಮನೋಧರ್ಮದಿಂದಾಗಿ ಪ್ರಬಂಧದ ವಿವರಗಳು ಒಂದು ಶ್ರೀವೈಷ್ಣವ ಮನೆಯ ವಿವರಗಳಾಗಿದ್ದು ನಮಗೆ ಬೇರೊಂದು ಬೆಳಕಿನಲ್ಲಿ ಕಾಣುತ್ತದೆ. ವಿವರಗಳ ಸಾಂಕೇತಿಕತೆ, ಧ್ವನಿಶಕ್ತಿ ಮತ್ತು ಜೀವಂತಿಕೆಯ ಕಡೆ ನಾವು ಗಮನ ನೀಡುವಂತೆ ಒತ್ತಾಯಿಸುತ್ತವೆ. ಇದಕ್ಕಾಗಿ ಪುತಿನ ಪುರಾಣದ ಕೃಷ್ಣನ ಕಡೆಗೆ ಗಮನ ಕೊಟ್ಟಷ್ಟೇ, ಪ್ರತಿ ಮನೆಯಲ್ಲೂ ಇರುವ ಬಾಲಕೃಷ್ಣನ ಕುರಿತಂತೆ ಕೂಡ ನಮ್ಮ ಗಮನ ಸೆಳೆಯುತ್ತಾರೆ. ಪುರಾಣದ ಕೃಷ್ಣ, ಮನೆಯ ಮಗು ಬಾಲಕೃಷ್ಣ ಇಬ್ಬರೂ ಒಟ್ಟಿಗೇ ಇರುವ ಪ್ರಬಂಧದಲ್ಲಿ ಇವರಿಬ್ಬರು ಬೇರೆಬೇರೆಯಲ್ಲ ಎಂಬ ಸೂಚನೆಯೂ ಇದೆ. ಮನೆಯ ಮಗು ಬಾಲಕೃಷ್ಣ, ಪುರಾಣದ ಕೃಷ್ಣನನ್ನು ನಮ್ಮವನನ್ನಾಗಿಸುತ್ತಾನೆ, ಸಜೀವಗೊಳಿಸುತ್ತಾನೆ. ಈ ಜೀವಂತಿಕೆಯನ್ನು ಓದುಗರಲ್ಲಿ ಉದ್ದೀಪುಸುವುದೇ ಮನೆಯೊಳಗೆ ಇರುವ ಹಬ್ಬದ ವಾತಾವರಣ, ಸಂಭ್ರಮ, ಸಲಿಗೆ, ಕಾಯುವಿಕೆ - ಇವೆಲ್ಲವೂ ಪ್ರಬಂಧದ ವಿವರಗಳಲ್ಲಿ ನಮಗೆ ಸಿಗುತ್ತದೆ.

ಈ ಪ್ರಬಂಧವನ್ನು ಓದಿದಾಗ ನನ್ನಲ್ಲಿ ಹುಟ್ಟುವ ಮುಖ್ಯ ಪ್ರಶ್ನೆಯೆಂದರೆ "ಪಾವಿತ್ರ್ಯವನ್ನು ನಾಶಮಾಡುವುದು" ಹಾಗೆ ನಾಶಮಾಡುವುದರ ಮೂಲಕವೇ ಆಧುನಿಕರಾಗುವುದು ಮತ್ತು ಜಾತ್ಯಾತೀತವಾಗುವುದು ನಾವೆಲ್ಲ ತಿಳಿದುಕೊಂಡಷ್ಟು ಅನಿವಾರ್ಯವೇ ಎಂಬುದು. ಪುತಿನ ಪ್ರಬಂಧವನ್ನು ಓದಿದಾಗ ಆಧುನಿಕರಾದ ನಮ್ಮ ಚಿಂತನ ಕ್ರಮ ಎಲ್ಲೋ ಹಳಿತಪ್ಪಿದೆಯನ್ನಿಸಿತು. "ಪಾವಿತ್ರ್ಯ" ಎನ್ನುವುದನ್ನು ನಾವು ಧಾರ್ಮಿಕ, ಮತೀಯ ಪರಿಭಾಷೆಯಲ್ಲೇ ಗ್ರಹಿಸಬೇಕಿಲ್ಲ. ಧರ್ಮ ಮತ್ತು ಮತೀಯ ಚಹರೆಗಳನ್ನು ಮೀರಿದ "ಪಾವಿತ್ರ್ಯ" ಎನ್ನುವುದು ಕೂಡ ಬದುಕಿನಲ್ಲಿರುತ್ತದೆ. ಇಂತಹ ಪಾವಿತ್ರ್ಯದ ಕಲ್ಪನೆಯ ತಳಹದಿಯಿಲ್ಲದೆ ನಮ್ಮ ವೈಯಕ್ತಿಕ ಜೀವನವು ಸಾಮಾಜಿಕ ಜೀವನವು ನಡೆಯುವುದಿಲ್ಲ. ನಮ್ಮ ನಮ್ಮ ಅನುಭವ, ವೈಯಕ್ತಿಕ ಬದುಕಿನ ಹಿನ್ನೆಲೆಯಿಲ್ಲದೆ ಬರೆಯುವುದಾದರೆ, ಮಾತನಾಡುವುದಾದರೆ "ಪಾವಿತ್ರ್ಯ"ದ ಅಗತ್ಯ ನಮಗೆ ಕಾಣಲಾರದು. ಇದಲ್ಲದೆ ನಿಜವನ್ನೇ ಹೇಳಬೇಕಾದರೆ ನಾವೆಲ್ಲರೂ ನಮ್ಮ ನಮ್ಮ ಸ್ತರದಲ್ಲೇ "ಪಾವಿತ್ರ್ಯ"ದ ಹುಡುಕಾಟದಲ್ಲಿರುತ್ತೇವೆ. "ಪಾವಿತ್ರ್ಯ"ಕ್ಕಿರುವ ಇದ್ದ ನಿರ್ದಿಷ್ಟ ಮತ್ತು ಸೀಮಿತ ಅರ್ಥ, ಈ ಅರ್ಥಕ್ಕಿದ್ದ ಯಜಮಾನಿಕೆಯನ್ನು ಪ್ರಶ್ನಿಸುವುದು ಸರಿ. ಆದರೆ ಹೀಗೆ ಪ್ರಶ್ನಿಸುವ ಆತುರ ಮತ್ತು ಒರಟುತನದಲ್ಲಿ ಬದುಕಿನಲ್ಲಿ ಪಾವಿತ್ರ್ಯಕ್ಕಿರುವ ಮಹತ್ವವನ್ನು ಅಲ್ಲಗಳೆಯಬಾರದು. ಪಾವಿತ್ರ್ಯವನ್ನು ನಾಶಮಾಡಿ ಹೊಸ ಸಂಸ್ಕೃತಿಯನ್ನು ಕಟ್ಟುತ್ತೇನೆಂದು ಹೊರಟಿರುವವರು ಕೂಡ ಹುಡುಕಾಡುತ್ತಿರುವುದು ಪಾವಿತ್ರ್ಯದ ಪರ್ಯಾಯ ನೆಲೆಗಳನ್ನು ಮತ್ತು ಸ್ಥಾಪಿಸಲು ಪ್ರಯತ್ನಿಸುತ್ತಿರುವುದು ತಮ್ಮ "ಪಾವಿತ್ರ್ಯ"ದ ಕಲ್ಪನೆಯನ್ನು. ನಾಜೂಕಿಗೆಂದು, ಪ್ರಗತಿಪರರೆಂದು ಕಾಣಿಸಿಕೊಳ್ಳಲೆಂದು "ಪಾವಿತ್ರ್ಯ" ಪದವನ್ನು ಇಂತವರು ಬಳಸದೆ ಹೋಗಬಹುದು ಅಷ್ಟೇ.

ಪಾವಿತ್ರ್ಯ ನಾಶ ಮಾಡುವವರು ಮೊದಲಿಗೆ ಮತ್ತು ಕೊನೆಯದಾಗಿ ಪ್ರಶ್ನಿಸುವುದು ವಿದ್ಯುಕ್ತ ಆಚರಣೆಗಳನ್ನೂ ಮತ್ತು ಇದನು ಪ್ರತಿನಿಧಿಸುವ ಮೂರ್ತಿಗಳನ್ನು (Rituals and Icons). ಇವರಿಗೆ ಕಾಣಿಸುವುದು ಆಚರಣೆಯ ಬಾಹ್ಯ ವಿವರಗಳು ಮತ್ತು ವಾಚ್ಯಾರ್ಥ ಮಾತ್ರ. ಗೋಕುಲಾಷ್ಟಮಿ ಕೂಡ ಒಂದು ಆಚರಣೆಯೇ, ಕೃಷ್ಣನು ಕೂಡ ಒಬ್ಬ ಮೂರ್ತಿಯೇ. ಇದನ್ನು ನೋಡುವ, ಒಳಗು ಮಾಡಿಕೊಳ್ಳುವ ಕ್ರಮ ಮಾತ್ರ ಈ ಪ್ರಬಂಧದಲ್ಲಿ ಬೇರೆ.

ಪ್ರಬಂಧದ ಎರಡನೇ ವಾಕ್ಯದಲ್ಲೇ "ಪವಿತ್ರತಮ" ಎನ್ನುವ ಪದವಿದೆ. ನಂತರ ಕಾಲಮಾನದ ಯಾವುದೇ ದಿನವಾಗಬಹುದಾದ ದಿನವೊಂದರ ಪ್ರಕೃತಿಯ ಸಣ್ಣ ವಿವರವೊಂದಿದೆ. ಪುರಾಣದ ಕೃಷ್ಣನನ್ನು ಮನೆಯ ಕೃಷ್ಣ, ಇಲ್ಲೇ ಹೀಗೇ ಕೃಷ್ಣ ಎಂದು ತೋರಿಸಿ ನಿರ್ದಿಷ್ಟಗೊಳಿಸುತ್ತದೆ. ಹಣತೆಯ ಬೆಳಕು ಫಲವಸ್ತ್ರದ ನೆಳಲಿನೊಡನೆ ಹಾಸುಹೊಕ್ಕಾಗಿ ಬೆರೆತಿದ್ದ ವಿವರ. ನೆಳಲು-ಬೆಳಕಿನಾಟ, ಕೃಷ್ಣನ ಮೇಲೆ ಬೀಳುತ್ತಿರುವ ಹಣತೆಯ ಬೆಳಕಿನ ವಿವರ ಇದೆಲ್ಲವೂ ಪ್ರಬಂಧಕ್ಕೆ ಬೇಕಾದ ಸದ್ಯದ ಮತ್ತು ಪೌರಾಣಿಕದ ಎರಡೂ ಪ್ರಪಂಚಗಳನ್ನು ಒಟ್ಟಿಗೇ ಸೂಚಿಸುತ್ತವೆ. ಮುಂದಿನ ಪ್ಯಾರಾಗಳ ವಿವರಗಳು ಕೂಡ ಕಾಲಾತೀತವಾದ ಒಂದು ಆಚರಣೆಯನ್ನು, ನಿರ್ದಿಷ್ಟ ದೇಶ ಕಾಲದ ಚೌಕಟ್ಟಿನೊಳಗೆ, ಕುಟುಂಬದ ಆವರಣದೊಳಗೆ ತರುವ ಪ್ರಯತ್ನವೇ ಆಗಿರುತ್ತದೆ. ಕೃಷ್ಣ ಮತ್ತು ಗೋಕುಲಾಷ್ಟಮಿ ಮನೆವಾರ್ತೆಯ ಒಂದು ಭಾಗವೇ ಆಗುತ್ತಾನೆ/ದೆ.

ಪ್ರಬಂಧಕಾರರ ತಂದೆಯ ಭಕ್ತಿಯಲ್ಲಿ ಪೂಜೆ ಮಾತ್ರವಿಲ್ಲ. ಪ್ರಾರ್ಥನೆ ಕೂಡ ಇದೆ. ಹಣತೆಯ ಬೆಳಕು ಇವರ ಮುಖದ ಮೇಲೆ ಕೂಡ ಬೀಳುವ ವಿವರವಿದೆ. ಪ್ರಾರ್ಥನೆಗೆ ಶಕ್ತಿ ಬರುವುದು, ತೇಜಸ್ಸು ಬರುವುದು ಏನನ್ನು ಪ್ರಾರ್ಥಿಸುತ್ತೇವೆ ಎಂಬುದರ ಮೇಲಲ್ಲ, ಪ್ರಾರ್ಥಿಸುವವನ ವ್ಯಕ್ತಿತ್ವ ಎಂತಹದೆಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಗಾಂಧಿಯ ಕೈಯಲ್ಲಿ ಪ್ರಾರ್ಥನೆ ಮತ್ತು ಉಪವಾಸಗಳು ಪಡೆದ ಅರ್ಥವನ್ನು ಇತರ ನಾಯಕರ ಕೈಯಲ್ಲಿ ಪಡೆಯಲಿಲ್ಲ. ಪ್ರಾರ್ಥನೆಗು ಆತ್ಮಶುದ್ಧಿಗು ಇರುವ ಅವಿನಾ ಸಂಬಂಧವನ್ನು ಸೂಚಿಸುವ ಈ ಸಾಲುಗಳನ್ನು ನೋಡಿ:

"ಜ್ಞಾನದಿಂದ ಓಜಸ್ವಿಯಾದ, ವ್ರತನೇಮಗಳಿಂದ ತೇಜಸ್ವಿಯಾದ, ಶಮದಮ ದಯಾದಿ ಗುಣಗಳಿಂದ ಪ್ರಸನ್ನವಾದ, ವಯಸ್ಸಿನ ಆಧಿಕ್ಯದಿಂದ ಗೌರವಾಧಿಷ್ಠನರಾದ, ಅಂದಿನ ಉಪವಾಸದಿಂದ ಶುಷ್ಕವಾದ ಮುಖವದು.....ನನ್ನ ತಂದೆಯವರ ಧ್ಯಾನಾಸಕ್ತವಾದ, ಪುರಾತನ ಆರ್ಯ ಸಂಸ್ಕೃತಿಯ ಅಕಳಂಕಿತ ಪಕ್ವ ಫಲದಂತಿರುವ, ಮುಖದ ಮುದ್ರೆ ಆ ಸಂಸ್ಕೃತಿಯ ಪಾತ್ರದಲ್ಲಿ ಹರಿದು, ಶ್ರದ್ಧೆಯ ನೆಲೆಗೊಂಡು, ವೈದಿಕ ಧರ್ಮ, ಕರ್ಮಗಳ ಕೂಲಗಳಿಂದ ನಿಯಮಿತವಾಗಿ, ಜ್ಞಾನಾರ್ಜನೆಯ ವೇಗದಿಂದ ನಿಷ್ಕಲ್ಮಶವಾಗಿ ಹಾದಿ ಸಾಗುತ್ತಾ ಸಾಗುತ್ತಾ ಕ್ರಮೇಣ ತಿಳಿದು, ಅನಂತದಲ್ಲಿ ಆತ್ಮ ನಿವೇದನ ಮಾಡಲು ಅಣಿಯಾದ ಜೀವನದಿಯ ಚಿತ್ರವಿದು."

ಪುರಾಣ ಶ್ರವಣ ಇಲ್ಲಿ ಯಾಂತ್ರಿಕ ವಿದ್ಯುಕ್ತ ಕ್ರಿಯೆಯಾಗುವ ಬದಲು ಅಂತರಂಗದ ಕೋಮಲತೆಗೆ, ಮನಸ್ಸಿನ ಮೃದುತ್ವಕ್ಕೆ ಪ್ರೇರಕವಾಗುತ್ತಿರುವುದು ಮುಖ್ಯ. ಪ್ರಬಂಧಕಾರನ ತಂದೆ-ತಾಯಿ ಇಬ್ಬರ ಹೃದಯದಲ್ಲೂ ನಚ್ಚಳಿದು ಇರುಳು ಮೂಡಿದೆ. ಪುರಾಣ ಶ್ರವಣದ ಸಂದರ್ಭದಲ್ಲೇ ಪ್ರಬಂಧಕಾರನ ತಂದೆಯ ಗೃಹಕೃತ್ಯದ ಜವಾಬ್ದಾರಿಯ ನೆನಪುಗಳಿಂದ ಪ್ರೇರಿತವಾಗುವ ಪ್ರಶ್ನೆಗಳು, ಮಧ್ಯಪ್ರವೇಶ, ಅಧಿಕಪ್ರಸಂಗದಂತೆ ಕಾಣುವ ಬದಲು ಕೃಷ್ಣ ಜನನದ ಕತೆಯ ಭಾವಕ್ಕೆ ಸಂಬಂಧ ಪಡೆದಿದೆ ಎನ್ನುವ ಸೂಚನೆ ಪ್ರಬಂಧಕಾರನ ಮಾಗಿದ ದೃಷ್ಟಿಕೋನಕ್ಕೆ ದ್ಯೋತಕ. ಸಾಮಾನ್ಯ ಮನೆಯೊಂದರ ಕೂಸೆ ತನ್ನ ಆಟ-ನೋಟಗಳಿಂದ ಇಷ್ಟೊಂದು ಮುದ್ದಾಗಿರ ಬಹುದಾದರೆ ದೇವಶಿಶು ಕೃಷ್ಣ ಇನ್ನು ಎಷ್ಟೊಂದು ಮುದ್ದಾಗಿರಬಹುದು, ಮೋಹಕವಾಗಿರಬಹುದು ಎಂಬ ಪ್ರಶ್ನೆ ಮನೆಯ ಹೊಸ ಪ್ರಭೆಯಲ್ಲಿ ಕಾಣಿಸುತ್ತದೆಂಬುದು ಗಮನಾರ್ಹ.

ಕೃಷ್ಣನ ಹುಟ್ಟು ಕಾಲಪ್ರವಾಹದ ದೃಷ್ಟಿಯಿಂದ ನಿರಂತರ. ದೇಶದ ಚೌಕಟ್ಟಿನ ಹಿನ್ನೆಲೆಯಲ್ಲಿ ಸರ್ವಾಂತರ್ಯಾಮಿ. ಈತನ ಜನನ "ಭಾರತ ಧರ್ಮವು ಭಾರತ ವರ್ಷದಲ್ಲಿ ಉಳಿದಿರುವವರೆಗೂ" ನಿರಂತರವೆಂಬುದು ಪುತಿನರ ಮಾತು. ಇಲ್ಲಿ ಪುತಿನ ಬಳಸುವ "ಭಾರತಧರ್ಮ"ವೆಂಬ ಮಾತು ಕುತೂಹಲಕರವಾಗಿದೆ. ಓದುಗರೇ, ಇಲ್ಲಿ ನೋಡಿ ಪುತಿನ "ಹಿಂದೂ ಧರ್ಮ" ಎಂಬ ಪದವನ್ನು ಬಳಸುತ್ತಿಲ್ಲ. ಆದ್ದರಿಂದ ಅವರು ಪ್ರಗತಿಪರರು, ಜಾತ್ಯಾತೀತರು ಎಂಬ Politically correct ಆದ Stance Reading ಮಾಡುವ ದುರುಳತನ ನನ್ನಲ್ಲಿಲ್ಲ. ಮಹಾಭಾರತದ ಆಗುಹೋಗುಗಳ ಹಿನ್ನೆಲೆಯಲ್ಲೇ ಹುಟ್ಟುವ ತಾತ್ವಿಕತೆ, ವಿಷಾದ, ಜೀವನ ಧರ್ಮದ ಬಗ್ಗೆ ಪುತಿನ ಗಮನವಿರಬಹುದೆಂದು ನನ್ನ ಊಹೆ.

ಈ ಪ್ರಬಂಧಕ್ಕೊಂದು ಬೆರಗಿದೆ, ಪ್ರಭೆಯಿದೆ (AURA). ಇದರ ಮೂಲವೇನು? ಪ್ರಬಂಧದ ವಿವರಗಳೇ, ಪೌರಾಣಿಕ ಪಾತ್ರವಾದ ಕೃಷ್ಣನೇ, ಪುತಿನರ ಗಮನ ಯಾವುದರ ಕಡೆಗಿದೆ? ಬದುಕಿನಲ್ಲಿ ಸೌಂದರ್ಯದ ನೆಲೆಗಳನ್ನು ಹುಡುಕುವ ಪುತಿನ ದೃಷ್ಟಿಕೋನದಿಂದ ಈ AURA ಸೃಷ್ಟಿಯಾಗಿದೆಯೆನಿಸುತ್ತದೆ. ಈ ಮಾತುಗಳನ್ನು ಗಮನಿಸಿ:

"ನನ್ನ ಕಾವ್ಯದ ಮೂಲಕ ಮತ್ತು ನನ್ನ ಧಾರ್ಮಿಕ ಅನುಭವದ ಮೂಲಕ ನಾನು ಇಡೀ ಮಾನವ ಕುಲವನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದೇನೆ. ಸೌಂದರ್ಯಾತ್ಮಕತೆಯ ಮೂಲಕ ನಾನು ಮಾನವತಾವಾದವನ್ನು ಕಂಡುಕೊಳ್ಳಲು ಶ್ರಮಿಸಿದ್ದೇನೆ. ರಾಮಾಯಣವನ್ನು ನೋಡುವ ಸಾಂಪ್ರದಾಯಿಕ ದೃಷ್ಟಿಕೋನವು ಭಕ್ತಿಭಾವಕ್ಕೆ ಕಿಂಕರವಾಗಿದೆ. ರಾಮಾಯಣ ಮತ್ತು ಭಗವದ್ಗೀತೆಗಳನ್ನು ಪವಿತ್ರ ಗ್ರಂಥಗಳಾಗಿಯಲ್ಲ, ಬದಲಾಗಿ ಅದ್ಭುತ ಕಲಾಕೃತಿಗಳು ಎಂಬಂತೆ ನೋಡುವುದನ್ನು ಪಶ್ಚಿಮವು ನನಗೆ ಕಲಿಸಿದೆ. ಅವುಗಳೆಡೆಗಿನ ನನ್ನ ಪ್ರತಿಕ್ರಿಯೆ ಸೌಂದರ್ಯಾತ್ಮಕವಾದುದು. ನಾನು ರಾಮಾಯಣವನ್ನು ಶೇಕ್ಸ್‌ಪಿಯರ್ ಅಥವಾ ಗಯಟೆಯನ್ನು ಓದಿದ ಹಾಗೆಯೇ ಓದುತ್ತೇನೆ. ಅದು ಒಬ್ಬ ಮಹಾಕವಿಯ ಮಹಾನ್ ಕಾವ್ಯ. ಒಂದು ಸಾಂಪ್ರದಾಯಿಕ ಮನಸ್ಸಿಗೆ ರಾಮಾಯಣವನ್ನು ಈ ರೀತಿ ನೋಡಲು ಸಾಧ್ಯವಾಗುವುದಿಲ್ಲ." (ಭೃಂಗಮಾರ್ಗ - ಪುಟಗಳು 450-452). ಒಂದು ಪುರಾಣ ಪ್ರಸಂಗವನ್ನು ಕಾಲಾತೀತವಾದ ಸೌಂದರ್ಯಾನುಭವವಾಗಿ ಸೃಷ್ಟಿಸಲು ಹೊರಟಿರುವುದರಿಂದಲೇ ಪ್ರಬಂಧದ ವಿವರಗಳು ಸ್ಥಾನಿಕ-ಕಾಲಬದ್ಧ ವಿವರಗಳಾಗಿದ್ದು ಕೂಡ ದೇಶಕಾಲದಿಂದ ಬಿಡುಗಡೆ ಪಡೆದಿವೆ, ಚಿಮ್ಮಿವೆ. ಪುರಾಣ ಪ್ರಸಂಗಗಳನ್ನು ಓದುವಾಗ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುವ ಪಾವಿತ್ರ್ಯ-ದೈವಿಕ ಭಾವನೆಗಳ ಚೌಕಟ್ಟು ಮಾತ್ರವೇ ಈ ಪ್ರಬಂಧ ಓದುವಾಗ ನಮ್ಮಲ್ಲಿ ಜಾಗೃತವಾಗುವುದಿಲ್ಲ ಎಂಬುದು ಮುಖ್ಯ. ಈವತ್ತಿನ ಮತೀಯ ವಾತಾವರಣದಲ್ಲಿ ನಮ್ಮ ಪುರಾಣ ಪ್ರಸಂಗಗಳನ್ನು, ಮಹಾಕಾವ್ಯಗಳನ್ನು ಈ ದೃಷ್ಟಿಯಿಂದಲೂ ಓದಲು (ವ್ಯಾಖ್ಯಾನಿಸಲು ಮಾತ್ರವಲ್ಲ) ಅನುಭವಿಸಲು ಸಾಧ್ಯವಾಗಬೇಕೆಂಬ ಆಸೆ ನನ್ನ ಮರುಓದಿನ ಹಿಂದಿದೆ. ಆದರೆ ಹೀಗೆ ಓದುವಾಗ ನಮ್ಮ ಆಧುನಿಕ-ಪ್ರಗತಿಪರ ಓದಿನ ಮುಖ್ಯ ಶಾಪವಾದ Stance Reading (ನಿಲುವು ಪ್ರೇರಿತ ಓದು) ನ ಅಪಾಯಗಳ ಬಗ್ಗೆ ಕೂಡ ನಮಗೆ ಎಚ್ಚರವಿರಬೇಕು-ನಮ್ಮ ಬಗ್ಗೆಯೇ.

ನಮ್ಮ ಕಾಲದಲ್ಲಿ ಗಾಂಧಿ ಮಾತ್ರ ನಮ್ಮ ಆಧ್ಯಾತ್ಮಿಕ ಪರಂಪರೆಯ ಮಹೋನ್ನತ ಅಂಶಗಳನ್ನು ಪ್ರತಿನಿಧಿಸುತ್ತಾರೆ ಎಂದು ತಿಳಿದಿದ್ದ ಪುತಿನರಿಗೆ ಪಶ್ಚಿಮದ ಬಗ್ಗೆ ಭಯವಿರಲಿಲ್ಲ, ಆತಂಕವಿರಲಿಲ್ಲ. ಪಶ್ಚಿಮ, ಆಧುನಿಕತೆ, ನವ್ಯತೆ ಕುರಿತಂತೆ ಪುತಿನರ ನಿಲುವು ಸ್ಥೂಲವಾಗಿರಲಿಲ್ಲ, ಏಕಮುಖವಾಗಿರಲಿಲ್ಲ.

ಆದರೆ ಒಂದು ಸ್ತರದ ನವ್ಯತೆ ಮತ್ತು ಆಧುನಿಕತೆ ಮಾತ್ರ ಪಾವಿತ್ರ್ಯ ನಾಶವಾಗದೆ ಪರ್ಯಾಯ ಸಂಸ್ಕೃತಿಯೂ, ಹೊಸಕಾಲಕ್ಕೆ ಬೇಕಾದ ಆಧುನಿಕತೆಯೂ ನಮ್ಮ ಸಮಾಜದಲ್ಲಿ ಮೂಡಲಾರದೆಂದು ಖಚಿತವಾಗಿ ನಂಬಿತ್ತು. ಇಂತಹವರ ಸಾಹಿತ್ಯ ಕೃತಿಗಳಲ್ಲಿ ಧಾಂದಲೆಗೆ ಒಳಗಾಗಿದ್ದು Rituals. Ritualsಗಳ ಸಾಂಕೇತಿಕತೆಗೇ ಇವರೆಲ್ಲ ಹೆಚ್ಚು ಪ್ರತಿಕ್ರಿಯಿಸಿದರು ಎಂದು ಈಗ ಅನಿಸುತ್ತದೆ. Ritualsಗಳ ಸಾಂಸ್ಕೃತಿಕ ಆಯಾಮ, ಶ್ರೀಮಂತಿಕೆ ಮತ್ತು ಧ್ವನಿ ಇವರಿಗೆ ತಿಳಿಯಲೇ ಇಲ್ಲ. ರೂಪಕಗಳು, ಸಂಕೇತಗಳು ಎಂದು ನಾವು ಭಾವಿಸುವ Ritualsಗಳು ಸಂದೇಶ - ಅರ್ಥವಾಹಕಗಳು ಮಾತ್ರವಲ್ಲ ಅಥವಾ ಅಲ್ಲವೇ ಅಲ್ಲ. ಇದನ್ನೆಲ್ಲ ಆಚರಿಸುವವರ/ಪ್ರತಿಯೊಬ್ಬರ ನಡಾವಳಿ, ಉತ್ಸವ, ವ್ಯಕ್ತಿತ್ವಗಳ ಹಿನ್ನೆಲೆಯಲ್ಲಿ ಪ್ರತಿಸಲವೂ ಈ Ritualsಗಳು ನಿತ್ಯ ನೂತನವಾದ ಅರ್ಥ ಪಡೆಯುತ್ತವೆ ಎಂಬುದನ್ನು ಇವರು ಗ್ರಹಿಸಲಾರದೆ ಹೋದರು. ರೂಪಕ ಸಂಕೇತಗಳೇ ಕೊನೆಯ ಸತ್ಯವೆಂದು ತಿಳಿದವರ ದುರಂತವಿದು. "ಗೋಕುಲಾಷ್ಟಮಿ" ಪ್ರಬಂಧದ ಹಿಂದಿರುವ ತಾತ್ವಿಕತೆ ನನ್ನ ಮಾತನ್ನೇ ಸಮರ್ಥಿಸುತ್ತದೆಂದು ಭಾವಿಸುತ್ತೇನೆ. ಪಾವಿತ್ರ್ಯವೆನ್ನುವುದು ಕೊನೆಗೂ ಇರುವುದು ವಿಧ್ಯುಕ್ತ ಆಚರಣೆಗಳಲ್ಲೂ ಅಲ್ಲ, ಪ್ರತಿಮೆಗಳಲ್ಲೂ ಅಲ್ಲ. ಅದನ್ನು ಆಚರಿಸುತ್ತಿರುವವರ ಕೈಯಲ್ಲಿ. ಒಂದು ಕಾಲದಲ್ಲಿ Ritualsಗಳು ಗೊಡ್ಡುಗಳ ಕೈಯಲ್ಲಿ ಮತ್ತು ಶುಷ್ಕ ವಿಶ್ಲೇಷಕರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಈಗ ಸಮೂಹಸನ್ನಿಗಳ ಪುಂಡರ ಗುಂಪಿನ ಕೈಲಿ ಸಿಕ್ಕಿಹಾಕಿಕೊಂಡಿದೆ.

"ಗೋಕುಲಾಷ್ಟಮಿ" ಪ್ರಬಂಧದಲ್ಲಿ ನನಗೆ ತುಂಬಾ ಇಷ್ಟವಾದ ಇನ್ನೊಂದು ಸಂಗತಿಯೆಂದರೆ ಪ್ರಬಂಧದೊಳಗೆ ಅಡಕವಾಗಿರುವ ಮೌನದ ಸೂಚನೆಗಳು. ಈ ಮೌನ ಕೂಡ ಪ್ರಬಂಧಕಾರ ನಿರೂಪಿಸದೆ ಹೋದ ಆದರೆ ಪ್ರಬಂಧದ ಭಾಗವೇ ಆಗಿರುವ ಜಗತ್ತಿನ ಇನ್ನೂ ಹಲವು ಕೋನಗಳ ಕಡೆ ನಮ್ಮ ಗಮನ ಸೆಳೆಯುತ್ತದೆ. ಎಲ್ಲ ಉತ್ತಮ ಸಾಹಿತ್ಯ ಕೃತಿಗಳು ಎಷ್ಟೇ ಮಾತನಾಡಿದರೂ ಕೊನೆಗೆ ಆಶ್ರಯಿಸುವುದು ಮೌನವನ್ನೇ. ಇಂತಹ ಮೌನದ ಕೆಲವು ಕೋನಗಳ ಬಗ್ಗೆಯಾದರೂ ನಮ್ಮ ಗಮನವು ಮರು ಓದಿನ ಸಂದರ್ಭದಲ್ಲಿ ಜಾಗೃತವಾಗಬಹುದೆಂದು ನನ್ನ ಭಾವನೆ.

ಪುತಿನ ಸಮಕಾಲೀನರು ಬದುಕಿನಲ್ಲಿ ಪಾವಿತ್ರ್ಯದ ನೆಲೆಗಳನ್ನು ಹುಡುಕುವ ರೀತಿ ಕೂಡ ಒಬ್ಬರಿಂದ ಒಬ್ಬರಿಗೆ ಭಿನ್ನ. ನಾಸ್ತಿಕರು, ವಿಚಾರವಾದಿಗಳೂ ಆದ ಕಾರಂತರಂತವರ ಹುಡುಕಾಟ- ಎಲ್ಲಿ ಹೇಗೆ? ಪಾವಿತ್ರ್ಯವನ್ನು ಕಾರಂತರು ವ್ಯಕ್ತಿಯ ಚಾರಿತ್ರ್ಯ, ಮೌಲ್ಯನಿಷ್ಠೆ ಮತ್ತು ಪ್ರತಿಯೊಬ್ಬ ಮನುಷ್ಯನ ಸಮಾಜೋಪಯೋಗಿ ಆಯಾಮಗಳಲ್ಲಿ ಕಾಣುತ್ತಾರೆ. ವ್ಯಕ್ತಿಯ ಸಾಮಾಜಿಕ ಹಿನ್ನೆಲೆ, ಸ್ಥಾನಮಾನಗಳಿಗೆ ಕಾರಂತರು ಪ್ರಾಮುಖ್ಯತೆ ನೀಡುವುದಿಲ್ಲ. ಮಾಸ್ತಿಯಂತವರಿಗೆ ವೆಂಕಟಶಾಮಿಯ ಪ್ರಣಯದ ಕತೆ - ಪ್ರಸಂಗ ನಡೆಯುವ ಕುಗ್ರಾಮವೇ Spiritual Place ಆಗಿ ಕಾಣಿಸುತ್ತದೆ. ಕುವೆಂಪುಗೆ ಮದುಮಗಳು ಕಾದಂಬರಿಯ ಘೋಷವಾಕ್ಯದಲ್ಲಿ ಸೂಚಿಸುವಂತೆ ಪಾವಿತ್ರ್ಯವೆನ್ನುವುದು ಕಾಲ-ದೇಶ ಎರಡರ ದೃಷ್ಟಿಯಿಂದಲೂ ಸರ್ವವ್ಯಾಪಿ. ಇದನ್ನು ಹುಡುಕುವುದೇ ಕಲಾವಿದನ ಕರ್ತವ್ಯ. ಬೇಂದ್ರೆಯವರಿಗೆ ಬದುಕಿನ ಲೀಲಾ ಸ್ವಭಾವವೇ ಪಾವಿತ್ರ್ಯದ ಉಗಮ ಮತ್ತು ನಿತ್ಯ ನರ್ತನ. ಸಣ್ಣ ಸೋಮವಾರದಂತಹ ಪದ್ಯದಲ್ಲಿ ವ್ಯಕ್ತವಾಗುವ ಹಾಗೆ ಹಳಹಳಿಕೆಯಿಲ್ಲದಾಗ ಭೂತವು ವರ್ತಮಾನದಲ್ಲಿ ಪ್ರಕಟವಾಗುವ, ನಿಜವಾಗುವ ರೀತಿಯಲ್ಲೇ ಪಾವಿತ್ರ್ಯ ಉಂಟು.

ನವ್ಯ ತಲೆಮಾರಿನ ಲೇಖಕರು ಸ್ವಘೋಷಿತ ಪಾವಿತ್ರ್ಯ ನಾಶದ ವಕ್ತಾರರು-ಬರವಣಿಗೆಯ ಒಂದು ಹಂತದಲ್ಲಿ ಬರವಣಿಗೆ, ಕಾಲಮಾಗಿದಂತೆ ಇವರು ಕೂಡ ಪಾವಿತ್ರ್ಯದ ನೆಲೆಗಳನ್ನು ಹುಡುಕಿದವರೇ. ನವ್ಯ ಲೇಖಕರ ಸಂದರ್ಭದಲ್ಲಿ ಪಾವಿತ್ರ್ಯದ ಹುಡುಕಾಟ-ಬರವಣಿಗೆಯ ಕೊನೆ ಕೊನೆ ಹಂತಗಳಲ್ಲಿ ಹೇಗೆ ಜರುಗಿತು ಎಂಬುದು ಪ್ರತ್ಯೇಕ ಲೇಖನ-ಚರ್ಚೆಗೆ ವಸ್ತುವಾಗಬಲ್ಲದು.

(ಗಾಂಧಿಬಜಾರ್ ಸಾಹಿತ್ಯ ಪತ್ರಿಕೆಯ ಮಾರ್ಚ್ 2009ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)
(ಚಿತ್ರಗಳು: ವಿಜಯ ಕರ್ನಾಟಕ ಮತ್ತು ಉದಯವಾಣಿಯ ಸಾಪ್ತಾಹಿಕ ಪುರವಣಿಗಳಿಂದ ಕೃತಜ್ಞತಾಪೂರ್ವಕ )
ಮುಂದೆ ಓದಿ....