Thursday, December 25, 2008

ಒಳನೋಟ, ಕಳಕಳಿ, ಬುದ್ಧಿವಾದ, ಪುನರುಕ್ತಿ...


ನಾಗಭೂಷಣರ ಈ ಸಮಾಜವಾದಿ ಸಂಕಥನಗಳು ಉದ್ದೇಶದಲ್ಲಿ ಸಮಾಜವೈದ್ಯನೊಬ್ಬನು ರೋಗಿಯ ನಿರಂತರ ಕಾಯಿಲೆ-ಕಸಾಲೆಯಿಂದ ಕೊಂಚವೂ ವಿಚಲಿತಗೊಳ್ಳದೆ ಪ್ರತಿದಿನವೂ ನೀಡುವ ಔಷಧಿ ಮತ್ತು ಕಷಾಯದ ಟಿಪ್ಪಣಿಗಳಂತಿವೆ. ಸಮಕಾಲೀನ ಕರ್ನಾಟಕಕ್ಕೆ, ಭಾರತಕ್ಕೆ, ಜಾಗತಿಕ ವಿದ್ಯಮಾನಗಳಿಗೆ ಗಾಂಧಿ-ಲೋಹಿಯಾ ವೈಚಾರಿಕತೆಯ ಚೌಕಟ್ಟಿನಲ್ಲಿ ಸಂವೇದನಾಶೀಲ ಬರಹಗಾರನೊಬ್ಬ ನೀಡಿದ ಕಳಕಳಿಯ ಪ್ರತಿಕ್ರಿಯೆಯಾಗಿ ಈ ಬರಹಗಳನ್ನು ಗಮನಿಸಬೇಕು.

`ಇದು ಭಾರತ! ಇದು ಭಾರತ!!' ಎಂಬ ಬರಹದಲ್ಲಿ ನಾಗಭೂಷಣ ಸಮಕಾಲೀನ ಕರ್ನಾಟಕದ ಸಮಾಜದ ಬಹುಪಾಲು ವಿಸಂಗತಿಗಳನ್ನು ಕರಾರುವಾಕ್ಕಾಗಿ ನಮೂದಿಸುತ್ತಾರೆ. ಈ ಬರಹದಲ್ಲಿ ನಮೂದಿಸಿರುವ ವಿಸಂಗತಿಗಳ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಇವೆಲ್ಲ ವಿಸಂಗತಿಯನ್ನು ಸೂಚಿಸುವುದರ ಜೊತೆಗೆ ಸದ್ಯದ ತಳಮಳ, ಬದಲಾವಣೆಯ ದಿಕ್ಕನ್ನು ಕೂಡ ಸೂಚಿಸುತ್ತದೆಂಬುದು ಮುಖ್ಯ. ಹೆಚ್ಚಾಗಿ ಸಾಮಾಜಿಕ-ರಾಜಕೀಯ ಜೀವನಕ್ಕೆ, ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವುದೇ ನಾಗಭೂಷಣರ ಉದ್ದೇಶದಂತಿದೆ. ಇದು ಬರಹದ ವ್ಯಾಪ್ತಿಗೆ-ಹರವಿಗೆ ನಾಗಭೂಷಣ ಹಾಕಿಕೊಂಡಿರುವ ಚೌಕಟ್ಟು. ಆದರೆ ಅಂಕಣಕಾರನೊಬ್ಬ ಬದುಕಿನ ವೈವಿಧ್ಯಗಳಿಗೂ ಸ್ಪಂದಿಸಬೇಕಾಗುತ್ತದೆ. ಡಿವಿಜಿ, ಪಿ.ಲಂಕೇಶ್-ಇಂತಹವರ ಬರಹಗಳಲ್ಲಿ ಈ ವೈವಿಧ್ಯವನ್ನೂ ನಾವು ಕಾಣುತ್ತೇವೆ. ನಾಗಭೂಷಣ್‌ಗೆ ಇದು ಗೊತ್ತಿಲ್ಲವೆಂದಲ್ಲ. ಈ ಸಂಗ್ರಹದಲ್ಲಿಲ್ಲದ, ಆದರೆ ನಂತರದ ಪತ್ರಿಕೆಯ ಸಂಚಿಕೆಗಳಲ್ಲಿ ನಾಗಭೂಷಣರೇ ತಮ್ಮ ತಂದೆ ಮತ್ತು ಬೆಕ್ಕನ್ನು ಕುರಿತ ಬರಹಗಳಲ್ಲಿ ತೀರಾ ಸಾರ್ವಜನಿಕ ವಿಷಯಗಳಾಚೆಗೂ ಕೈಚಾಚುವುದನ್ನು ಕಾಣಬಹುದು. ಇಂತಹ ಬರಹಗಳು ಹೆಚ್ಚಾದಷ್ಟು ಓದುಗ ನಾಗಭೂಷಣರ ಸಾಮಾಜಿಕ-ರಾಜಕೀಯ ವಿಶ್ಲೇಷಣೆಯನ್ನು ಇನ್ನೂ ವಿಶ್ವಾಸದಿಂದ, ಸಾವಧಾನದಿಂದ ಗಮನಿಸುತ್ತಾನೆ. ಸ್ವತಃ ಲೋಹಿಯಾರ ಬರಹಗಳಲ್ಲಿರುವ ಸಾಂಸ್ಕೃತಿಕ ವೈವಿಧ್ಯ-ಶ್ರೀಮಂತಿಕೆ ಮತ್ತು ನಾಗಭೂಷಣ ಮೂಲಭೂತವಾಗಿ ವಿಜ್ಞಾನ-ಗಣಿತಶಾಸ್ತ್ರದ ಹಿನ್ನೆಲೆಯಿಂದ ಬಂದವರಾದ್ದರಿಂದ ಈ ಮಾತು.

ಇಲ್ಲಿಯ ಬರಹಗಳನ್ನು ಓದುತ್ತಿದ್ದರೆ ನಾಗಭೂಷಣ ನಮ್ಮ ಸಮಕಾಲೀನ ಜೀವನದಲ್ಲಿ ನಿರಾಶೆ, ಹತಾಶೆ, ಕ್ಷುದ್ರತೆಗಳನ್ನು ಮಾತ್ರ ಗಮನಿಸುತ್ತಿರುವರೇನೋ ಎಂಬ ಭಾವ ಓದುಗರಲ್ಲಿ ಮೂಡಬಹುದು. ರಾಮದಾಸರನ್ನು ಕುರಿತ ಎರಡು ಬರಹಗಳು, ಬಿಹಾರದ ಕಾರ್ಮಿಕ-ಚಿಂತಕ ದಶರಥರನ್ನು ಕುರಿತ ಬರಹದಲ್ಲಿ ನಾಗಭೂಷಣ ಈ ಕಾಲದಲ್ಲಿ ನಿರೀಕ್ಷಿಸುವ ಕ್ರಿಯಾಶೀಲತೆಯ, ವ್ಯಕ್ತಿಚಾರಿತ್ರ್ಯದ ಸ್ವರೂಪದ ರೀತಿ ಯಾವುದಿರಬೇಕೆಂಬ ಸೂಚನೆ ನಮಗೆ ಸಿಗುತ್ತದೆ. ಇದೇ ರೀತಿಯ ಕ್ರಿಯಾಶೀಲತೆ-ಸಾಧನೆಯ ಸ್ವರೂಪವನ್ನು ನಾಗಭೂಷಣ, ಕ್ರೀಡೆ, ಉದ್ಯಮ, ಸಂಗೀತ, ವಿಜ್ಞಾನ ಕ್ಷೇತ್ರಗಳಲ್ಲೂ ಗುರುತಿಸುವುದಾದರೆ, ಎನ್.ಎಸ್.ಶಂಕರ್ ಹಿನ್ನುಡಿಯಲ್ಲಿ ಪರೋಕ್ಷವಾಗಿ ಸೂಚಿಸಿರುವಂತೆ ಓದುಗನ ವೈವಿಧ್ಯಮಯ ಭಾವಸ್ತರಗಳನ್ನು ಮೀಟಲು ಸಾಧ್ಯವಾಗಬಹುದು.

ಬರಹದುದ್ದಕ್ಕೂ ನಾಗಭೂಷಣ ಸೂಚಿಸುವ ಔಷಧಿ-ಕಷಾಯ ಒಂದೇ ರೀತಿಯದು, ಸಮಾಜವಾದಿ ಹಿನ್ನೆಲೆಯದು ಎಂಬ ಕಾರಣಕ್ಕೆ ಬರವಣಿಗೆಯ ಮಹತ್ವ ಕಡಿಮೆಯಾಗುವುದಿಲ್ಲ. ಗಾಂಧಿ-ಲೋಹಿಯಾರ ನಿರ್ದಿಷ್ಟ ತಾತ್ವಿಕ ಹಿನ್ನೆಲೆಯಲ್ಲಿಯೇ ವಿಶ್ಲೇಷಣೆ ನಡೆಯುವುದರಿಂದ ಹೀಗನ್ನಿಸಬಹುದು. ಸೂಚನೆಗಳ ಪುನರಾವರ್ತನೆಯಿದೆ ಎನ್ನಿಸಬಹುದು. ಆದರೆ ತಾತ್ವಿಕ ನಿರ್ದಿಷ್ಟತೆಯನ್ನು ಭಿತ್ತಿಯಾಗಿಟ್ಟುಕೊಂಡ ಎಲ್ಲ ಬರಹಗಳಲ್ಲೂ ಈ ಮಿತಿ ಇದ್ದೇ ಇರುತ್ತದೆ. ಈ ಮಿತಿಯ ಹೊರತಾಗಿಯೂ ನಾವು ಈ ಬರಹಗಳಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಪುಸ್ತಕದುದ್ದಕ್ಕೂ ಸ್ಥಾಯಿಯಾಗಿರುವ ನೈತಿಕ ತೀವ್ರತೆ, ಸಾತ್ವಿಕ ಸಿಟ್ಟು ಮತ್ತು ಮನಸ್ಸಿನ ಆರ್ದ್ರತೆ.

ಸಂವಾದ-ವಾಗ್ವಾದ ಸಂಸ್ಕೃತಿಯೆ ನಮ್ಮಲ್ಲಿ ಕ್ಷೀಣಿಸುತ್ತಿರುವುದನ್ನು ಖೇದದಿಂದ ಗುರುತಿಸುವ ನಾಗಭೂಷಣ ನೇರವಾಗಿಯೇ, ಆದರೆ ಪ್ರಚೋದಕವಾಗಿಯೇ ಬರೆಯುತ್ತಾರೆ. ತನ್ನ ವಿಚಾರ ಕುರಿತಂತೆ ಇನ್ನೊಬ್ಬರು ಎತ್ತುವ ಪ್ರಶ್ನೆಗಳನ್ನು ಕ್ಷುಲ್ಲಕವಾಗಿ ಪರಿಗಣಿಸದೆ ಉತ್ತರ, ಸ್ಪಷ್ಟನೆ ನೀಡುತ್ತಾರೆ. ಈ ಮನೋಭಾವ ಸುಪ್ರೀತ್ ಎಂಬ ಓದುಗರೊಬ್ಬರಿಗೆ ಹೆಚ್ಚಿನ ಓದಿಗೆ ಸೂಚನೆಗಳನ್ನು ಮಾತ್ರ ನೀಡುವುದಿಲ್ಲ, ತಾನು ಬರಹ ಮಾಡುತ್ತಿರುವ ಪತ್ರಿಕೆಯ ಸಂಪಾದಕರೊಡನೆ ಕೂಡ ಭಿನ್ನಮತವನ್ನು ಸೂಚಿಸುತ್ತದೆ. ಇದನ್ನು ಮೆಚ್ಚುತ್ತಲೇ ನಾಗಭೂಷಣ್‌ಗೆ ಇರುವ ಬುದ್ಧಿವಾದವನ್ನು ಮತ್ತೆ ಮತ್ತೆ ಹೇಳುತ್ತಲೇ ಹೋಗುವ ಪ್ರವೃತ್ತಿಯನ್ನು ಕೂಡ ಸೂಚಿಸಬೇಕು. ಪುಟ 97-99ರಲ್ಲಿ ಬಂಜಗೆರೆ ಜಯಪ್ರಕಾಶರಿಗೆ ಬರಹದುದ್ದಕ್ಕೂ ನೀಡುತ್ತಲೇ ಹೋಗುವ ಸೂಚನೆ-ಬುದ್ಧಿವಾದದಲ್ಲಿರುವ ಪುನರುಕ್ತಿಯನ್ನು ಓದುವಾಗ ಯಾರಿಗಾದರೂ ಬೇಸರವಾಗುತ್ತದೆ. ಬುದ್ಧಿವಾದ ಹೇಳುವುದು ಸಂವಾದ-ವಾಗ್ವಾದವನ್ನು ಬೆಳೆಸುವ ಸರಿಯಾದ ಕ್ರಮವಲ್ಲ.

ನಾಗಭೂಷಣರ ಕಾಳಜಿಯ ಸ್ವರೂಪ ಮತ್ತು ಅಧ್ಯಯನದ ಹರವು ಅಂಕಣ ಬರಹದ ವ್ಯಾಪ್ತಿಯನ್ನು ಮೀರಿದ್ದು. ಇಂತಹ ಕಡೆ ನಾಗಭೂಷಣರ ಶಕ್ತಿ ಚೆನ್ನಾಗಿ ಗೊತ್ತಾಗುತ್ತದೆ. ಮುಖ್ಯವಾಗಿ ನಾಗಭೂಷಣ್ ಅಕಾಡೆಮಿಕ್ ಸ್ವಭಾವದವರಲ್ಲವಾದ್ದರಿಂದ ಒಂದು ವಿದ್ಯಮಾನ, ಒಂದು ವಿಚಾರ-ಇವೆಲ್ಲವೂ ಸಮಾಜ ಜೀವನದಲ್ಲಿ ಹೇಗೆ ವ್ಯಕ್ತವಾಗುತ್ತವೆ ಎಂಬುದನ್ನೇ ಗಮನಿಸುತ್ತಾರೆ. ಸಾಮಾಜಿಕ ಚಳುವಳಿಗಳನ್ನು ಕುರಿತಂತೆ ಹೇಳುವ `ಒಂದು ಚಳುವಳಿ ಸಾಮಾಜಿಕ ಚಳುವಳಿ ಅನ್ನಿಸಿಕೊಳ್ಳಬೇಕಾದರೆ ಅದು ಜಾತಿ-ವರ್ಗಗಳನ್ನು ಮೀರಿ ಇಡೀ ಸಮಾಜವನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನ ತಾತ್ವಿಕತೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ ಹಾಗೂ ಅದರ ಆಧಾರದ ಮೇಲೆ ತನ್ನ ಹೋರಾಟವನ್ನು ಕಟ್ಟಿಕೊಳ್ಳಬೇಕಾಗುತ್ತದೆ' (ಪು.19) ಮಾತಿನಲ್ಲಿ ಸದ್ಯದ ಎಲ್ಲ ಚಳುವಳಿಗಳ ಮಿತಿಗಳನ್ನು ಗುರುತಿಸುವ ನೋಟವಿದೆ, ನೋವಿದೆ.

ಹೆಸರು ಹೇಳಿದರೆ ಸಾಕು. ಯಾರು ಏನು ಹೇಳುತ್ತಾರೆಂದು, ಬರೆಯುತ್ತಾರೆಂದು ಊಹಿಸಬಹುದು. ಈ ಹಿನ್ನೆಲೆಯಲ್ಲಿ ಈ ಸಂಪುಟದ ಉತ್ತಮ ಲೇಖನಗಳಲ್ಲೊಂದಾದ "ಬುದ್ಧ ಮತ್ತು ಹಿಂದೂ ಧರ್ಮ" ವನ್ನು ಗಮನಿಸಬೇಕು.

ಇದೇ ಸ್ವರೂಪದ ಇನ್ನೆರಡು ಬರಹಗಳು: `ಮೈ ಮರೆತಂತಿರುವ ನಮ್ಮ ಸೆಕ್ಯುಲರ್ ರಾಜಕಾರಣ' ಮತ್ತು `ಹಿಂದೂ ಕೋಮುವಾದ ಮತ್ತು ಬುದ್ಧಿಜೀವಿಗಳ ಪೀಕಲಾಟ'. ಕೋಮುವಾದಿಗಳ ಹಿಂಸೆ ಮತ್ತು ದುರುದ್ದೇಶ ಮತ್ತು ಸೆಕ್ಯುಲರ್‌ವಾದಿಗಳ ಸೀಮಿತ ಸಾಂಸ್ಕೃತಿಕ ಗ್ರಹಿಕೆ ಎರಡನ್ನೂ ಒಟ್ಟಿಗೇ ತರಾಟೆಗೆ ತೆಗೆದುಕೊಳ್ಳುವ ಬರಹಗಳು ಇವು. ಈ ಬರಹಗಳಲ್ಲಿ ವ್ಯಕ್ತವಾಗಿರುವ ವಿಚಾರಗಳ ಹಿನ್ನೆಲೆಯಲ್ಲಿ ಧರ್ಮ-ಸಂಸ್ಕೃತಿ-ರಾಜಕಾರಣಕ್ಕಿರುವ -ಇರಲೇಬೇಕಾದ ಸಂಬಂಧ, ಒತ್ತಾಸೆಗಳನ್ನು ಕುರಿತು ಮುಕ್ತಮನಸ್ಸಿನ ಚರ್ಚೆ ನಡೆಯುವುದಾದರೆ ಮತಾಂತರ ಕುರಿತಂತೆ ಈವತ್ತು ನಡೆಯುತ್ತಿರುವ ರೂಕ್ಷ ಸಂವಾದಕ್ಕೆ ಹೊಸ ದಿಕ್ಕು ತೋರಿದಂತಾಗುತ್ತದೆ.

ಸಂವಾದ ಪತ್ರಿಕೆ, ಆಕಾಶವಾಣಿಯಲ್ಲೆಲ್ಲ ಕ್ರಿಯಾಶೀಲರಾಗಿದ್ದಾಗ, ಸಾಹಿತ್ಯ ವಿಮರ್ಶೆ ನಾಗಭೂಷಣರ ಮುಕ್ತ ಆಸಕ್ತಿಗಳಲ್ಲೊಂದಾಗಿತ್ತು. ಇಲ್ಲಿಯ ಬರಹಗಳನ್ನು ಗಮನಿಸಿದರೆ ಅದು ಪ್ರಾಸಂಗಿಕವಾದಂತಿದೆ. ಈ ಬದಲಾವಣೆ ನಾಗಭೂಷಣರ ಬಗ್ಗೆಯೂ, ನಮ್ಮ ಸಾಂಸ್ಕೃತಿಕ ವಾತಾವರಣದ ಬಗ್ಗೆಯೂ ಏನನ್ನು ಹೇಳುತ್ತದೆ!?
(ವಾರಪತ್ರಿಕೆ `ವಿಕ್ರಾಂತ ಕರ್ನಾಟಕ' ಡಿಸೆಂಬರ್ 26 ಸಂಚಿಕೆಯಲ್ಲಿ ಪ್ರಕಟಿತ. ಚಿತ್ರಗಳು ಪತ್ರಿಕೆಯ ಕೃಪೆ.)

ಇದು ಭಾರತ! ಇದು ಭಾರತ!! (ಸಮಾಜವಾದಿ ಸಂಕಥನಗಳು-2)
ಲೇ: ಡಿ.ಎಸ್.ನಾಗಭೂಷಣ
ಪುಟ:296, ಬೆಲೆ:150 ರೂ.
ಪ್ರ: ರೂಪ ಪ್ರಕಾಶನ, ಮೈಸೂರು ಮುಂದೆ ಓದಿ....

Sunday, November 30, 2008

ಇವಾನ್ ಇಲಿಚ್ ಮತ್ತು ಮಂತ್ರೋದಯ - ಒಂದು ಜೊತೆ ಓದು

ನಮಗೆ ಗೊತ್ತಿಲ್ಲದೆ ನಾವು ಕೆಲವು ಕತೆಗಳನ್ನು ಒಟ್ಟಿಗೇ ಓದುತ್ತಿರುತ್ತೇವೆ. ಮಾಸ್ತಿಯವರ ಮಂತ್ರೋದಯ ಮತ್ತು ಟಾಲ್ಸ್ಟಾಯ್ Death of Ivan Ilyich ಕತೆಗಳನ್ನು ನಾನು ಹೀಗೇ ಬಹಳ ವರ್ಷಗಳಿಂದ ಒಟ್ಟೋಟ್ಟಿಗೇ ಓದಿಕೊಂಡು ಬಂದಿದ್ದೇನೆ. ಸ್ನೇಹಿತರಿಗೂ ಓದಲು ಸೂಚಿಸುತ್ತಿರುತ್ತೇನೆ. ಕನ್ನಡ ಬಾರದ ಗೆಳೆಯರಿಗೆ ಮಾಸ್ತಿಯವರ ಕತೆಯ ಸಾರಾಂಶ ಮತ್ತು ದರ್ಶನವನ್ನು ನಾನೇ ಹೇಳುತ್ತೇನೆ. ಕಾಲಾಂತರದಲ್ಲಿ ಕೂಡ ನನಗೆ ಎರಡು ಕತೆಗಳ ಜೊತೆ ಓದಿನಲ್ಲಿ ಶ್ರದ್ಧೆ-ಆಸಕ್ತಿ ಕಡಿಮೆಯಾಗಿಲ್ಲ. ಅನುಭವವನ್ನು ಓದುಗರೊಂದಿಗೆ ಹಂಚಿಕೊಳ್ಳುವುದು ಟಿಪ್ಪಣಿಗಳ ಉದ್ದೇಶ. ಇವೆರಡು ಕತೆಗಳನ್ನು ಹೋಲಿಸುವ, ಮೌಲ್ಯಮಾಪನ ಮಾಡುವ ವಿಮರ್ಶಾತ್ಮಕ ಉದ್ದೇಶ ನನ್ನದಲ್ಲವೆಂದು ಮೊದಲೇ ಸ್ಪಷ್ಟಪಡಿಸಿಬಿಡುತ್ತೇನೆ.

ಕನ್ನಡದ ಓದು ಬಹಳ ವರ್ಷಗಳಿಂದ ಟಾಲ್ಸ್ಟಾಯ್ನನ್ನ ಸಂಸ್ಕೃತಿಯ ಒಳಗಿನವನನ್ನಾಗಿಯೇ ಸ್ವೀಕರಿಸಿದ. ಸ್ವೀಕಾರ 1934ರಲ್ಲಿ ಎಲ್.ಗುಂಡಪ್ಪನವರ ಟಾಲ್ಸ್ಟಾಯ್ ಕಥೆಗಳ ಕನ್ನಡಾನುವಾದದಿಂದ ಪ್ರಾರಂಭವಾಗುತ್ತದೆ. ಕುವೆಂಪು ಮಹಾ ಕಾದಂಬರಿಗಳ ಸ್ವರೂಪದ ಹಿಂದೆ ಟಾಲ್ಸ್ಟಾಯ್ ಎರಡೂ ಕಾದಂಬರಿಗಳ ಸ್ವರೂಪದ ಪ್ರಭಾವವಿದೆ. ಕುವೆಂಪುವಿನಲ್ಲಿ ಕಾಣುವ ಬೇಟೆ ಪ್ರಸಂಗಗಳು, ಮಗುವಿಗೆ ಮೊಲೆಯ ಹಾಲೂಡಿಸುವ ಪ್ರಸಂಗಗಳು ಟಾಲ್ಸ್ಟಾಯ್ ಕಾದಂಬರಿಗಳಲ್ಲೂ ಇವೆ. ಮಾಸ್ತಿ ತಮ್ಮ ಚಿಕವೀರ ರಾಜೇಂದ್ರ ಕಾದಂಬರಿ ಬರವಣಿಗೆಯ ಗುಣಮಟ್ಟದ ದೃಷ್ಟಿಯಿಂದ ಟಾಲ್ಸ್ಟಾಯ್ War and Peaceಗಿಂತ ಉತ್ತಮವೆಂದು ನಂಬಿದ್ದರು. "ಟಾಲ್ಸ್ಟಾಯ್ ಮಹರ್ಷಿಯ ಭೂರ್ಜ ವೃಕ್ಷಗಳು" ಎಂಬ ಪ್ರಸಿದ್ಧ ಕತೆಯೂ ಇದೆ. ಭೀಮಸೇನ ಜೋಶಿಯವರ ತಂದೆ ಗುರುರಾಜ ಜೋಶಿಯವರು "Anna Karenina" ಕಾದಂಬರಿಯನ್ನು "ಪ್ರೇಮಾಹುತಿ" ಎಂದು ಕನ್ನಡೀಕರಿಸಿದ್ದರು. ಕುವೆಂಪು - ಸೂಚನೆ - ಮಾರ್ಗದರ್ಶನದ ಮೇಲೆ ದೇಜಗೌ ಟಾಲ್ಸ್ಟಾಯ್ ಎರಡೂ ಕಾದಂಬರಿಗಳನ್ನು ಕುವೆಂಪು ನುಡಿಗಟ್ಟಿನಲ್ಲೇ ಅನುವಾದಿಸಿದರು. ಟಿ.ಪಿ. ಅಶೋಕ "ಫಾದರ್ ಸೆರ್ಗಿಯಸ್", ಜಿ.ಎನ್.ರಂಗನಾಥರಾವ್ ಟಾಲ್ಸ್ಟಾಯ್ ನೀಳ್ಗತೆಗಳು, .ಎಲ್.ನಾಗಭೂಷಣಸ್ವಾಮಿ - ಟಾಲ್ಸ್ಟಾಯ್ ನೀಳ್ಗತೆಗಳು - ಹೀಗೇ ಪರಂಪರೆ ಮುಂದುವರೆಯುತ್ತಲೇ ಇದೆ. .ಎಲ್.ಎನ್. War and Peace ಅನುವಾದ ಮುಗಿಸಿದ್ದರೆ, ಎಚ್.ಎಸ್.ರಾಘವೇಂದ್ರರಾವ್ "Anna Karenina" ಅನುವಾದವನ್ನು ಮುಗಿಸುತ್ತಿದ್ದಾರೆ. ಪಿ.ಲಂಕೇಶ್ ಕೆಲವು ಕತೆಗಳನ್ನು ರೂಪಾಂತರಿಸಿದ್ದಾರೆ. ಬಹು ಹಿಂದೆಯೇ ಕತೆಗಾರ ಆನಂದರು ಟಾಲ್ಸ್ಟಾಯ್ ಆತ್ಮಕತೆಯನ್ನು ಕನ್ನಡಕ್ಕೆ ತಂದಿದ್ದರು. ಎಲ್ಲ ಬರವಣಿಗೆಗಳಿಂದಾಗಿಯೂ ಟಾಲ್ಸ್ಟಾಯ್ ಪ್ರಸಿದ್ಧ ಕತೆಯನ್ನು ಮಾಸ್ತಿಯವರ ಕತೆಯೊಡನೆ ಒಟ್ಟಾಗಿ ಓದಲು ನನಗೆ ಪ್ರೇರಣೆ ಸಿಕ್ಕಿರಬಹುದು.

ಎರಡೂ ಕತೆಗಳು ಸಾವನ್ನು ಕುರಿತದ್ದೇ. ಕಾರಣಕ್ಕೇ ಬದುಕನ್ನು ಕುರಿತದ್ದು ಕೂಡ. ಸಾವನ್ನು ಒಪ್ಪಿಕೊಳ್ಳುವ, ಗೆಲ್ಲುವ, ವಿವರಿಸಿಕೊಳ್ಳುವ ಪ್ರಯತ್ನದಲ್ಲಿ ಎರಡು ಕತೆಗಳಲ್ಲಿ ಬದುಕನ್ನು ಕುರಿತ ದರ್ಶನವಿದೆ. ಹೀಗಾಗಿ ಇವುಗಳ ಜೊತೆ ಓದು ತಪ್ಪಿಲ್ಲದೆ ಇರಬಹುದೆಂದು ನನ್ನ ಭಾವನೆ.

ಇವಾನ್ ಇಲಿಚ್ ಕತೆಯನ್ನು ಟಾಲ್ಸ್ಟಾಯ್ 1884-1886 ಕಾಲಾವಧಿಯಲ್ಲಿ ಬರೆದರು. ಹೊತ್ತಿಗಾಗಲೇ ಇವರ ಎರಡು ಮಹಾ ಕಾದಂಬರಿಗಳು ಪ್ರಕಟವಾಗಿದ್ದವು. Anna ಕಾದಂಬರಿ ಬರೆದ ಏಳೆಂಟು ವರ್ಷಗಳ ನಂತರವೂ ಅವರು ಮತ್ತೆ ಸೃಜನಶೀಲ ಕಾದಂಬರಿ ರಚನೆಗೆ ಕೈಹಾಕಿರಲಿಲ್ಲ. ಮೇಲಾಗಿ ಟಾಲ್ಸ್ಟಾಯ್ ತಮ್ಮ ಬದುಕಿನ ಘಟ್ಟದಲ್ಲಿ ಸಾಹಿತ್ಯ - ಕಲೆಯ ಉದ್ದೇಶಗಳ ಕುರಿತಂತೆ ಬೇರೆಯೆ ರೀತಿಯಲ್ಲಿ ಯೋಚಿಸುತ್ತಿದ್ದರು. ಜೀವನದಲ್ಲಿ ಧರ್ಮ, ನೀತಿ, ಪ್ರೀತಿ, ದೈವಿಕತೆ ಇವುಗಳ ಸ್ಥಾನಮಾನವನ್ನು ಕುರಿತು ಚರ್ಚಿಸುವಂತಹ ನೀತಿ-ಧಾರ್ಮಿಕ ಕತೆಗಳು, ಲೇಖನಗಳ ಕಡೆಗೇ ಹೆಚ್ಚಾಗುತ್ತಿತ್ತು. ಆತ್ಮ ಜಿಜ್ಞಾಸೆ, ಒಳತೋಟಿ, ಆತ್ಮಪರೀಕ್ಷೆಗಳು ತೀವ್ರವಾಗಿದ್ದ ಬದುಕಿನ ಸಂದರ್ಭದಲ್ಲಿ ತನ್ನ ಜೀವನದ ಪರಮೋದ್ದೇಶವೇನು, ತನ್ನ ಜೀವನ ಸಾರ್ಥಕವಾಗಿದೆಯೇ ಇಲ್ಲವೇ ಎಂಬ ತಹತಹದಲ್ಲಿ ಬರೆದ ಘಟ್ಟದ ನೀಳ್ಗತೆಯಲ್ಲಿ ಮುಖ್ಯವಾದದ್ದು - ಇವಾನ್ ಇಲಿಚ್.

ಸಾಮಾಜಿಕವಾಗಿ, ಸಾಂಸಾರಿಕವಾಗಿ ಯಶಸ್ಸನ್ನು ಕಂಡಿದ್ದೇನೆಂದು ಭಾವಿಸಿದ್ದ ನ್ಯಾಯಾಂಗ ಇಲಾಖೆಯ ಅಧಿಕಾರಿಯೊಬ್ಬನ ಕೊನೆಯ ದಿನಗಳ ಕತೆ ಇಲಿಚ್. ಒಟ್ಟಾರೆಯಾಗಿ ಇಲಿಚ್ ಜೀವನ ವಿಫಲವಾಗಿತ್ತೆಂಬ ಧ್ವನಿಯಿಂದಲೇ ಕತೆ ಪ್ರಾರಂಭವಾಗುತ್ತದೆ. Appalling ಎಂಬ ಪದದಿಂದಲೇ ಕತೆ ಪ್ರಾರಂಭ. ಪದ ಕತೆಯಲ್ಲು Father Sergius ಕತೆಯಲ್ಲು ಮತ್ತೆ ಮತ್ತೆ ಎದುರಾಗುತ್ತದೆ. ಪದದ ಅರ್ಥವನ್ನು ಮೂಡಿಸುವಂತಹ Befell, Dismal, Aggravated ಇಂತಹ ಪದಗಳು ಕತೆಯುದ್ದಕ್ಕೂ ಎದುರಾಗುತ್ತವೆ. ಇಂತಹ ಪದಗಳಿಂದ ಮಾತ್ರ ವರ್ಣಿಸಲು ಸಾಧ್ಯವಿರುವ ಜೀವನ ನಡೆಸಿರುವ ಇಲಿಚ್ ತನ್ನ ದೇಹದ ಮಿತಿಯನ್ನು, ಕಾಯಿಲೆಯನ್ನು, ರೋಗರುಜಿನವನ್ನು ಕೂಡ ಪ್ರಾಮಾಣಿಕವಾಗಿ ಒಪ್ಪಲಾರ, ಎದುರಿಸಲಾರ. ತನ್ನ ದೇಹ, ತನ್ನ ರೋಗದ ಬಗ್ಗೆ ಕೂಡ ಆತನದು ಭಯಭೀತ, ಭ್ರಮಾದಿತ ಸ್ಥಿತಿ. ಸೋರಿಹೋಗುತ್ತಿರುವ ಜೀವನ, ಆರಿಹೋಗುತ್ತಿರುವ ಸಾಂಸಾರಿಕ-ಸಾಮಾಜಿಕ ಸಂಬಂಧಗಳನ್ನು ಕಂಡು, ತಿಳಿದು ಕೂಡ ಆತ ಭಯಭೀತ. ಸಾವಿನ ಭಯವಿದೆ ಆತನಿಗೆ. ಆದರೆ ಮೃತ್ಯುಪ್ರಜ್ಞೆಯ ಅರಿವಿನಿಂದ ಮೂಡಿಬರುವ ತಿಳುವಳಿಕೆ, ಸಮಾಧನವಿಲ್ಲ. ಇಡೀ ಬದುಕೆ `ನಿಜ'ದಿಂದ ದೂರ ಬಂದು ನಡೆಸಿದ ಘಟನಾವಳಿಗಳ ಸರಮಾಲೆಯಾಗಿ ಕಾಣುತ್ತದೆ. ಬಾಲ್ಯಜೀವನದ ದಿನಗಳು, ಸಂಬಂಧಗಳು ಮಾತ್ರ ನಿಜವಾಗಿದ್ದವು ಎನಿಸುತ್ತದೆ. ಟಾಲ್ಸ್ಟಾಯ್ ಪ್ರಕಾರ ಇದಕ್ಕೆಲ್ಲ ಇಲಿಚ್ ಜೀವನ ಶೈಲಿಯ ಜೊತೆಗೆ ಆತನಲ್ಲಿ ದೈವದ ಅಸ್ತಿತ್ವದಲ್ಲಿ ನಂಬುಗೆ ಇಲ್ಲದೆ ಹೋದದ್ದು ಕೂಡ ಕಾರಣ. ಇದಕ್ಕಿಂತ ಮುಖ್ಯವಾಗಿ ಇಲಿಚ್ ಬದುಕಿನುದ್ದಕ್ಕು ಮಾತಿನ ಧ್ವನಿ (Voice of Speaking)ಯನ್ನ ಕೇಳಿಸಿಕೊಳ್ಳುತ್ತಾ ಬಂದವನು, ಆತ್ಮದ ಧ್ವನಿ (Voice of Soul)ಯನ್ನಲ್ಲ. ಇಂತಹ ಇಲಿಚ್ ನಿಜದಿಂದ ದೂರಾಗಿ ತಾನು ನಡೆಸಿದ ತನ್ನ ಜೀವನದ ಬಗ್ಗೆ ನಿಜವನ್ನು ತಿಳಿದುಕೊಳ್ಳುವುದು, ಒಪ್ಪಿಕೊಳ್ಳುವುದು, ಸಾವನ್ನು ಕೂಡ ಸಾವಿನ ಭಯದಿಂದ ಗೆಲ್ಲುವುದು - ದಿಕ್ಕಿನಲ್ಲಿ ನಡೆಸಿದ ಪಯಣವನ್ನು ಕತೆ ನಮ್ಮದೆ ಪಯಣವೆನ್ನುವಂತೆ ನಮಗೆ ಸಾಕ್ಷಾತ್ಕಾರ ಮಾಡಿಕೊಡುತ್ತದೆ. ಸಾರ್ಥಕ ಜೀವನವೆಂದರೇನು ಎಂಬುದರ ಕಲ್ಪನೆ, ವಿಫಲ ಜೀವನದ ಚಿತ್ರಣವನ್ನು ಓದುವುದರ ಮೂಲಕ ನಮಗೆ ತಿಳಿಯುತ್ತದೆ. ತನ್ನ ಒಳತೋಟಿಯನ್ನು ಬರವಣಿಗೆಯನ್ನಾಗಿ ಪರಿವರ್ತಿಸುತ್ತಿದ್ದ ಟಾಲ್ಸ್ಟಾಯ್ ಕತೆಯ ನಂತರ ಬರೆದ ಕತೆ ಬರವಣಿಗೆಗಳಲ್ಲೆಲ್ಲ ಜೀವನದ ಸಾರ್ಥಕತೆಯ ಬಗ್ಗೆ ಜಿಜ್ಞಾಸೆ ಮುಂದುವರಿಯುತ್ತದೆ. ಒಟ್ಟಾರೆಯಾಗಿ ಆತನ ನಿಲುವು ನೀತಿಪರ-ಧಾರ್ಮಿಕ ಬರವಣಿಗೆ, ಸಸ್ಯಾಹಾರ, ಅಹಿಂಸೆ, ರಾಜ್ಯಾಧಿಕಾರವನ್ನು ವಿರೋಧಿಸುವುದು - ದಿಕ್ಕಿನಲ್ಲೇ ಸಾಗುತ್ತದೆ. ಮೊದಲೇ ಹೇಳಿದ ಹಾಗೆ Anna ಕಾದಂಬರಿ ಬರೆದ ಏಳೆಂಟು ವರ್ಷಗಳ ನಂತರ ಬರೆದ ನೀಳ್ಗತೆ ಇದು. ಕಾಲಾವಧಿಯಲ್ಲಿ ತತ್ವಶಾಸ್ತ್ರವನ್ನು ಬಹಳವಾಗಿ ಓದುತ್ತಿದ್ದ ಟಾಲ್ಸ್ಟಾಯ್ ದಿನಚರಿಯ ನೆರವಿನಿಂದ ಕೆಲವು ಉಲ್ಲೇಖಗಳನ್ನು, ಟಾಲ್ಸ್ಟಾಯ್ ಜೀವನ ಚರಿತ್ರಕಾರರು ಗುರುತಿಸಿದ್ದಾರೆ. ಇಲಿಚ್ ಕತೆಯ ಹಿಂದಿರುವ ಒಳತೋಟಿಯನ್ನು ಸ್ಪಷ್ಟ ಮಾಡಿಕೊಳ್ಳಲು ಇವು ನೆರವಾಗುವುದರಿಂದ ಕೆಲವನ್ನು ಇಲ್ಲಿ ಸೂಚಿಸುತ್ತಿದ್ದೇನೆ.

The life of body is an Evil and lie. And that is why we should desire its destruction as a blessiing.
- Socrates
Man will die and nothing will remain of him
-Solomon
We must free ourselves from life, from all possibilities of life
-Buddha

ಮಾಸ್ತಿಯವರ "ಮಂತ್ರೋದಯ" ಕತೆ ಈಶಾವ್ಯಾಸ ಉಪನಿಷತ್‌ನ ರಚನೆಗೆ ಕಾರಣನಾದ ವಾಮದೇವ ದ್ವೈಪಾಯನನ ಜೀವನ ಶೈಲಿ-ದರ್ಶನವನ್ನು ಕುರಿತದ್ದು. ಕತೆಯ ಶೀರ್ಷಿಕೆಯ ಜೊತೆಯೇ ಆವರಣದಲ್ಲಿ "ಕರ್ಮಯೋಗದ ಕೊನೆಯ ದಿನ" ಎಂದು ಸೂಚಿಸಲಾಗಿದೆ. ಕತೆಯ ಮೊದಲ ವಾಕ್ಯವೇ ಹೀಗಿದೆ.

"ಮಹರ್ಷಿ ವಾಮದೇವ ದ್ವೈಪಾಯನ ಅರುಣೇಯ ಆ ದಿನ ನೂರು ವರ್ಷದ ಬಾಳನ್ನು ಪೂರ್ಣ ಮಾಡುವರೆಂದು"

ಸೇವೆ, ತ್ಯಾಗ, ಆತ್ಮಜ್ಞಾನ, ಪ್ರಕೃತಿಯೊಡನೆ ತಾದ್ಯಾತ್ಮ-ಇದೆಲ್ಲವನ್ನು ತುಂಬಿಕೊಂಡವನು ಜೀವನವನ್ನು, ಹಾಗಾಗಿ ಸಾವನ್ನೂ ಹೀಗೆ ಸ್ವೀಕರಿಸುತ್ತಾನೆಯೆಂಬುದು ಕತೆಯ ತಿರುಳು. ಈ ಕತೆಯಲ್ಲಿ ಬರುವ ಪ್ರಕೃತಿಯ ಉಲ್ಲಾಸ ತುಂಬಿದ ವಿವರಗಳಾಗಲೀ, ಸಸ್ಯಲೋಕದ, ಸಣ್ಣ ಪುಟ್ಟ ಪ್ರಾಣಿಗಳ ವಿವರಗಳಾಗಲೀ ಆತ್ಮ ಜಿಜ್ಞಾಸೆಯಿಂದ ತುಂಬಿದ ಇಲಿಚ್ ಕತೆಯಲ್ಲಿ ಇಲ್ಲವೆಂಬುದನ್ನು ಗಮನಿಸಬೇಕು. ಸೂರ್‍ಯ, ಚಂದ್ರರು ಕೂಡ ಈ ಕತೆಯ ಭಾಗ. ತುಂಬಿದ ಸಾರ್ಥಕ ಜೀವನ ನಡೆಸಿದ ದ್ವೈಪಾಯನಿಗೆ ಸಾವಿನ ಭಯವೇ ಇಲ್ಲ. ತಾನು ಕಂಡದ್ದನ್ನೂ, ಬದುಕಿದ್ದನ್ನೂ ಸ್ಮರಿಸುತ್ತಲೇ ಜೀವನದ ಕೊನೆಯನ್ನು ಒಪ್ಪುವ ಈ ದರ್ಶನದಲ್ಲಿ ದ್ವೈಪಾಯನನ ಕೊನೆ ಕೊನೆಯ ಮಾತುಗಳು ಹೀಗಿವೆ.

"ಕೃತುವನ್ನು ಸ್ಮರಿಸು, ಕೃತವನ್ನು ಸ್ಮರಿಸು, ಧ್ಯೇಯವನ್ನು ಸ್ಮರಿಸು. ಸಾಧಿಸಿದ್ದನ್ನು ಸ್ಮರಿಸು"

"ಕೃತು ಯಾವುದು"

"ನೆಲವೆಲ್ಲ ನಂದನವನವಾಗಬೇಕು, ಇದರಂತೆ ಒಳಬಾಳು ಸುಂದರ ಸಫಲ ಆಗಬೇಕು"

ಸಾವನ್ನು ಒಪ್ಪುವ, ಗೆಲ್ಲುವ, ಸ್ವೀಕರಿಸುವ ಈ ದರ್ಶನದಲ್ಲಿ ಜೀವನದ ಸೃಷ್ಟಿಯ ನಿತ್ಯನೂತನತೆಯನ್ನೂ ಚರಾಚರ ಸ್ವಭಾವವನ್ನು ನಂಬಿದ ಧೋರಣೆಯು ತುಂಬಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಉಪನಿಷತ್‌ಗಳಲ್ಲೇ ತುಂಬ ಕಿರಿದಾದ, ಕೇವಲ ಹದಿನೆಂಟು ಶ್ಲೋಕಗಳನ್ನು ಮಾತ್ರ ಹೊಂದಿದ ಈ ಉಪನಿಷತ್ ದರ್ಶನವನ್ನೇ ಏಕೆ ತಮ್ಮ ಕತೆಯಲ್ಲಿ ಮತ್ತೆ ಪೃಥಕ್ಕರಿಸಲು ಮಾಸ್ತಿ ಆಯ್ಕೆ ಮಾಡಿಕೊಂಡರು? ಕತೆಯ ವಿವರಗಳು ಸೂಚಿಸುವಂತೆ ಉಪನಿಷತ್‌ನ ಈ ದರ್ಶನವೆಲ್ಲ ದ್ವೈಪಾಯನನ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿದೆ.

1. ಪೂರ್ಣತೆಯನ್ನು ಒಪ್ಪಿಕೊಳ್ಳುವುದು, ಪೂರ್ಣವಾಗಿ ಬಾಳುವುದೆಂದರೆ ಜಗತ್ತೆಂಬ ವಸ್ತು ಮತ್ತು ಬದುಕೆಂಬುದರ ಹಿಂದಿರುವ ತತ್ವವನ್ನು ಒಪ್ಪಿಕೊಳ್ಳುವುದು.

2. ಜಗತ್ತನ್ನು, ಬದುಕನ್ನು, ತ್ಯಾಗದಿಂದ, ಸೇವೆಯಿಂದ ಒಳಗು ಮಾಡಿಕೊಳ್ಳಲು ಪ್ರಯತ್ನಿಸುವುದು. ("ತೇನ ತ್ಯಕ್ತೇನ ಭುಂಜೀಥಾ')

3. ತಿಳಿಯುವುದು ಎಂದರೆ ಬೌದ್ಧಿಕವಾಗಿ ತಿಳಿಯುವುದಲ್ಲ. ಅನುಭವದಿಂದ ತಿಳಿಯುವುದು. ಎಲ್ಲ ಜೀವರಾಶಿಗಳಲ್ಲಿಯೂ ಜೀವನದ ಹಿಂದಿರುವ, ಸತ್ಯವನ್ನು ತಿಳಿದಾಗ ಅನುಭವ ಅನುಭಾವವಾಗುತ್ತದೆ. ಕೇವಲ ಅನುಭವದಿಂದ ಏನೂ ಪ್ರಯೋಜನವಾಗದು.

ಈ ಉಪನಿಷತ್‌ನ ವಿಶೇಷವೆಂದರೆ ಬದುಕಿನ ವಿಸರ್ಜನೆಗೆ ನಡೆಸುವ ಪ್ರಾರ್ಥನೆ, ಅಮೃತತ್ವಕ್ಕೆ ನಡೆಸುವ ಪ್ರಾರ್ಥನೆ, ಜೀವನದ ಸಾರ್ಥಕತೆಯ ಬಗ್ಗೆ ನಂಬುಗೆ, ಇವೆಲ್ಲ ಬೇರೆ ಬೇರೆಯಲ್ಲವೆಂದು ಸೃಷ್ಟಿಯನ್ನೇ ಪ್ರಾರ್ಥಿಸುವುದು.

17ನೆಯ ಶ್ಲೋಕದ ಕನ್ನಡಾನುವಾದವನ್ನು ನೋಡಿ.

"ನನ್ನ ಪ್ರಾಣ ಸರ್ವವ್ಯಾಪಿಯಾದ ಅಮೃತಾತ್ಮವನ್ನು ಸೇರಲಿ. ಈ ದೇಹ ಬೂದಿಯಾಗಲಿ. ಓಂ ಮನಸ್ಸೆ ಸ್ಮರಿಸು. ಮಾಡಿರುವುದನ್ನು ಸ್ಮರಿಸು. ಓಂ ಮನಸ್ಸೆ ಸ್ಮರಿಸು. ಮಾಡಿರುವುದನ್ನು ಸ್ಮರಿಸು"

ಪ್ರಾಸಂಗಿಕವಾಗಿ ಇಲ್ಲಿ ಹೇಳಬಹುದಾದ ಒಂದು ಮಾತೆಂದರೆ ಗಾಂಧಿಯ ದಿನನಿತ್ಯದ ಪ್ರಾರ್ಥನೆಯಲ್ಲಿ ಈ ಉಪನಿಷತ್ ಕೂಡ ಒಂದು ಭಾಗವಾಗಿತ್ತೆಂಬುದು. ಟಾಲ್‌ಸ್ಟಾಯ್ ಕತೆಯಲ್ಲಿ ಜಿಜ್ಞಾಸೆಯಿದೆ, ಪ್ರಾರ್ಥನೆಯಿಲ್ಲ. ತೀವ್ರತೆಯಿದೆ, ಸಮಾಧಾನವಿಲ್ಲ. ಶಾಂತಿಯಿಲ್ಲ, ಭರವಸೆಯಿಲ್ಲ.

ಎಲ್ಲ ಶ್ರೇಷ್ಠ ಲೇಖಕರು ಸಾವು, ದೈವ, ಕಾಮವನ್ನು ಕುರಿತು ತಮ್ಮದೇ ಆದ ದರ್ಶನವನ್ನು ಮಂಡಿಸುತ್ತಾರೆ. ಈ ಮೂರಂಶಗಳಲ್ಲಿ ಯಾವುದಾದರೂ ಒಂದಂಶದ ಗೈರುಹಾಜರಿಯಾದರೂ ಲೇಖಕನ ದರ್ಶನದಲ್ಲೇ ಏನೋ ಚ್ಯುತಿಯಿದೆಯೆಂದೇ ಲೆಕ್ಕ ಎಂಬುದೊಂದು ಈವತ್ತಿನ ಸಾಹಿತ್ಯಿಕ ನಂಬಿಕೆ. ಯಾವ ದರ್ಶನ ನಮಗೆ ಹೆಚ್ಚು ಪ್ರಸ್ತುತ, ಆತ್ಮೀಯವೆಂಬ ಪ್ರಶ್ನೆ ಈ ಎರಡೂ ಕತೆಗಳ ಜೊತೆ ಓದಿನಿಂದ ಜಾಗೃತವಾಗುತ್ತಲೇ ಇರುತ್ತದೆ.

ಆಧುನಿಕ ಸಾಹಿತ್ಯ ಚಿಂತನೆ, ಬಹುಪಾಲು ಮನುಷ್ಯ ಕೇಂದ್ರಿತ. ಹಾಗಾಗಿ ಸಾವಿನ ಅನುಭವ, ತಿಳುವಳಿಕೆಯೆಲ್ಲ ನಮಗೆ ನೆರವಾಗುವುದು ನಮ್ಮ ಮತ್ತು ಬದುಕಿನ ಸೀಮಿತತೆಯನ್ನು ಸೂಚಿಸಲು, ಬದುಕಿನ ಅಸಾಂಗತ್ಯವನ್ನು, ಅಪೂರ್ಣತೆಯನ್ನು ತಿಳಿಯಲು ಮಾತ್ರ. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಬಂದ ಬಹುತೇಕ ಕಥನಗಳು ನಾಟಕಗಳಲ್ಲಿ ಈ ನೋಟವೇ ಪ್ರಧಾನ. ಓದುಗನಾಗಿ ಮಾಸ್ತಿ ಕತೆಯ ದರ್ಶನವನ್ನು ಒಪ್ಪುವ ನನಗೂ ಸಾವನ್ನು ಕುರಿತು ಬರೆಯುವಾಗಲೆಲ್ಲ, ಚಿಂತಿಸುವಾಗಲೆಲ್ಲ ಹೆಚ್ಚು ಹತ್ತಿರವೆನಿಸುವುದು ಟಾಲ್‌ಸ್ಟಾಯ್‌ನ ಒಳತೋಟಿಯೇ. ಈ ವಿಪರ್ಯಾಸಕ್ಕೆ ನಮ್ಮ ತಲೆಮಾರಿನಲ್ಲಿ ಬದುಕಿನ ನಿರಂತರತೆ ಮತ್ತು ದೈವಿಕತೆಯ ಬಗ್ಗೆ ನಂಬಿಕೆ ಕಡಿಮೆಯಾಗಿರುವುದು ಕಾರಣವಿರಬಹುದು. ದೈವಿಕತೆ ಕುರಿತಂತೆ ನಾವು ಸ್ವತಂತ್ರವಾಗಿ ಯೋಚಿಸಿ, ತೀರ್ಮಾನಕ್ಕೆ ಬರುವುದಕ್ಕಿಂತಲೂ ಹೆಚ್ಚಾಗಿ ಇತರರು ಹೇಳಿದ್ದನ್ನು, ಬರೆದದ್ದನ್ನು ಓದಿ ಹಾಗೆ ಬಂದ ತಿಳುವಳಿಕೆಯನ್ನೆಲ್ಲ ಗೃಹೀತ ಸತ್ವವೆಂದು ನಂಬಿಬಿಟ್ಟಿದ್ದೇವೆ. ಧರ್ಮವೆಂದರೆ ಸಂಸ್ಕೃತಿ ಮಾತ್ರ, ಸಂಸ್ಕೃತಿಯೆಂದರೆ ಧಾರ್ಮಿಕ ಆಚರಣೆಗಳು ಮಾತ್ರ ಎಂಬ ತೆಳುನಂಬುಗೆ ಕೂಡ ನಮ್ಮನ್ನು ದಾರಿ ತಪ್ಪಿಸಿರಬಹುದು.

ಈ ಎರಡೂ ಕತೆಗಳನ್ನು ಕುರಿತು ಹೊಸ ಕಾಲದ ಹೊಸ ಸಂವೇದನೆಯ ಮಿತ್ರರೊಡನೆ ಚರ್ಚಿಸುವಾಗಲೆಲ್ಲ ಮಾಸ್ತಿಯವರ ಕತೆಯನ್ನು ಒಪ್ಪದವರೇ ಹೆಚ್ಚು. ಇಂತಹ ಮಿತ್ರರ ಪ್ರಕಾರ ಈ ಕತೆಯಲ್ಲಿ ವೈಯಕ್ತಿಕ ದರ್ಶನವಿಲ್ಲ, ಕತೆಯ ದರ್ಶನ ಲೇಖಕನ ಅನುಭವ, ವೈಯಕ್ತಿಕತೆಯಿಂದ ಒಡಮೂಡಿದ್ದಲ್ಲ. ಕಡ ಪಡೆದದ್ದು, ಆರೋಪಿಸಿಕೊಂಡದ್ದು. "ಮಂತ್ರೋದಯ" ರಾಚನಿಕವಾಗಿ ಕೂಡ ಕತೆಯೆನಿಸಿಕೊಳ್ಳಲಾಗದು. ಉಪನಿಷತ್ ವಾಕ್ಯಗಳ ಕನ್ನಡೀಕರಣದ ಸರಣಿಯದು. ಇದು ಓದುಗರಲ್ಲಿ ಸ್ವೀಕೃತವಾಗಲೆಂದು ದ್ವೈಪಾಯನನ ಜೀವನದ ವಿವರಗಳು ಕತೆಯಲ್ಲಿ ತುಂಬಿವೆಯಷ್ಟೆ. ಈ ಆಪಾದನೆಗಳು ಕೇಳುವಾಗ ನಿಜವೆನ್ನಿಸುವ ಭಾವನೆಯನ್ನು ಹುಟ್ಟಿಸಿದರೂ, ಕತೆ ಓದುವಾಗ ಮಾತ್ರ ನಿಜವೆನ್ನಿಸುವುದಿಲ್ಲ. ನಮ್ಮ ಮನಸ್ಸಿನ ಒಳಗಡೆ ಈ ದರ್ಶನದ ಬಗ್ಗೆ ಇರುವ ಗೌರವದಿಂದ ಹೀಗಾಗುತ್ತದೆಯೇ? ಎಲ್ಲ ಕತೆಗಳು ವೈಯಕ್ತಿಕ ತೀವ್ರತೆಯಿಂದಲೇ ಹುಟ್ಟಬೇಕು ಎಂಬ ನಿರೀಕ್ಷೆ ಸರಿಯೇ? ಈ ಕತೆಯ ದರ್ಶನ ಮಾಸ್ತಿಯವರು ಆರೋಪಿಸಿಕೊಂಡದ್ದು ಎಂಬುದು ನಿಜವಾದರೆ, ಮಾಸ್ತಿಯವರ ಇತರ ಕತೆಗಳ ದರ್ಶನಕ್ಕಿಂತ ಈ ಕತೆ ನೀಡುವ ದರ್ಶನ ನಿಜವಾಗಲೂ ತುಂಬ ಭಿನ್ನವಾಗಿದೆಯೇ? ಕತೆಯೊಂದು ನಮಗೆ ನಿಜವೆನ್ನಿಸಿ - ಪ್ರಸ್ತುತವಾಗಬೇಕಾದರೆ ಕತೆಯು ಆಧುನಿಕ-ನವ್ಯ-ಪರಿಭಾಷೆ-ಸ್ವರೂಪದಲ್ಲಿರುವುದು ಅನಿವಾರ್ಯವೇ! ಮಾನಸಿಕವಾಗಿ ಆಧುನಿಕ ಸಂವೇದನೆಯ ಹೊರಗಿರುವ ಓದುಗನ ಸ್ಪಂದನಕ್ಕೆ ಯಾವ ಬೆಲೆಯೂ ಇಲ್ಲವೇ? ಸಾಮಾಜಿಕ ಅಸ್ಮಿತೆ ಮತ್ತು ಇತಿಹಾಸದ ಚಲನೆ - ಇದೇ ಮುಖ್ಯವಾದ ಈವತ್ತಿನ ಸಾಂಸ್ಕೃತಿಕ ಸಂದರ್ಭದಲ್ಲಿ "ಮಂತ್ರೋದಯ"ದಂತಹ ಕತೆಗಳು ಕೇವಲ ದಾರ್ಶನಿಕ luxuryಯಲ್ಲವೇ?

ಮೇಲಿನ ಯಾವ ಪ್ರಶ್ನೆಗಳಿಗೂ ನನಗೆ ಉತ್ತರ ಗೊತ್ತಿಲ್ಲ. ಪ್ರಶ್ನೆಗಳಲ್ಲಿ ಸತ್ಯವಿದೆಯೆಂಬುದಕ್ಕೂ ಕೂಡ ಉತ್ತರವಿಲ್ಲ? ಅಭಿಪ್ರಾಯವಿಲ್ಲ. ಹೀಗಾಗಿ ಮತ್ತೆ ನಾನು ಎರಡೂ ಕತೆಗಳ ಜೊತೆ ಓದಿಗೇ ಹಿಂದಿರುಗುತ್ತೇನೆ. ಓದುಗರನ್ನು ಕೂಡ ಇಂತಹ ಓದಿಗೆ ಆಹ್ವಾನಿಸುತ್ತಾ. ಯಾವ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲವೆಂಬ ಆಶ್ವಾಸನೆಯೊಡನೆ.

(ಮೇಲಿನ ಚರ್ಚೆಗೆ ಪೂರಕವಾಗಿ ಈ ಎರಡೂ ಪುಸ್ತಕಗಳನ್ನು ಓದುಗರು ಗಮನಿಸಬಹುದು: ಎ.ಎನ್.ವಿಲ್ಸನ್‌ರ ಟಾಲ್‌ಸ್ಟಾಯ್ ಜೀವನಚರಿತ್ರೆ ಮತ್ತು ಸೋಮನಾಥಾನಂದರ ಉಪನಿಷತ್ ಭಾವಧಾರೆ (ರಾಮಕೃಷ್ಣ ಆಶ್ರಮದ ಪ್ರಕಟಣೆ). ನನ್ನ ಟಿಪ್ಪಣಿಯಲ್ಲಿ ನಮೂದಿಸಿರುವ ಬಹುತೇಕ ವಿಚಾರಗಳು ಈ ಎರಡೂ ಪುಸ್ತಕಗಳಿಂದ ಪಡೆದದ್ದು.)

( ಲೇಖನ ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ "ಒಂದಲ್ಲಾ ಒಂದೂರಿನಲ್ಲಿ" ತ್ರೈಮಾಸಿಕದ ನಾಲ್ಕನೇ ಸಂಚಿಕೆ (ನವೆಂಬರ್'೦೮-ಜನವರಿ'೦೯)ಯಲ್ಲಿ ಪ್ರಕಟಿತ.) ಮುಂದೆ ಓದಿ....

Sunday, October 5, 2008

ಲೋಹೀಯಾರ ಪುಸ್ತಕ ಸಮೀಕ್ಷೆಯ ಒಂದು ಮಾದರಿ

ಸರ್ ಎಂ.ವಿ.ಅವರ ವೃತ್ತಿಜೀವನ - ಲೋಹಿಯಾ
ಪುಸ್ತಕ:Memories of my working life:
ನನ್ನ ವೃತ್ತಿ ಜೀವನದ ನೆನಪುಗಳು
ಲೇ:ಸರ್. ಎಂ.ವಿಶ್ವೇಶ್ವರಯ್ಯ
ಪ್ರ: ಲೇಖಕರು, ಅಪ್‌ಲ್ಯಾಂಡ್ಸ್, ಹೈಗ್ರೌಂಡ್ಸ್, ಬೆಂಗಳೂರು
ಬೆಲೆ: ಆರು ರೂ.

ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಿಗೆ ಈಗ ತೊಂಬತ್ತಾರು ವರ್ಷ. ಅವರು ಈ ಕಾಲದಲ್ಲಿ ದೇಶದಲ್ಲೇ ಅತ್ಯುನ್ನತರಾದ ಯಂತ್ರಶಿಲ್ಪಿಯಾಗಿದ್ದಾರೆ. ಕೊಂಚ ಬೇರೆ ರೀತಿಯಲ್ಲಿ ಪಾಲಿತವಾಗಿದ್ದರೆ, ಮಹಾತ್ಮಗಾಂಧಿಯವರ ಅನಂತರ ದೇಶದಲ್ಲಿ ಎರಡನೆಯ ಮಹಾವ್ಯಕ್ತಿಯಾಗಿ ಪರಿಗಣಿಸಲ್ಪಡಬಹುದಾಗಿದ್ದಂಥ ವ್ಯಕ್ತಿದ್ರವ್ಯ ಪಡೆದಿದ್ದವರು ಇವರು. ಕೆಲವೇ ವಾರಗಳ ಹಿಂದೆ ನಾವು ಅವರ ಜೊತೆ ಸುಮಾರು ನೂರು ನಿಮಿಷಗಳಷ್ಟು ದೀರ್ಘ ಮಾತನಾಡಿದ್ದೆವು. ಆ ಸುದೀರ್ಘ ಮಾತುಕತೆಯಲ್ಲಿ ಅವರು ಒಮ್ಮೆಯಾದರೂ ನೆನಪು ಸೋತು ವಾಕ್ಯವನ್ನು ಅರ್ಧಕ್ಕೆ ಮುರಿದದ್ದಿಲ್ಲ. ಮಾತಿನಲ್ಲಿ ಅನೇಕ ವಿಷಯಗಳು ಹೆಣೆದು ಬಂದಾಗ ಮಾತ್ರ ಒಂದಕ್ಕೊಂದಕ್ಕೆ ಸಂಬಂಧ ತಪ್ಪಿದಂತಾಗುತ್ತಿತ್ತು. ಆದರೆ ಅವರಿಗಿಂತ ಎಷ್ಟೋ ಎಳಸೆನ್ನುವ ಪ್ರಾಯದಲ್ಲೇ ನಮಗೆ ಹಾಗಾಗುತ್ತದಲ್ಲ. ಅಂಥ ಹರಿತವಾದ ಬುದ್ಧಿಮತ್ತೆ, ಅಂಥ ಅಸಾಧ್ಯ ಶ್ರಮದ ಬದುಕು, ಅಂಥ ಸುದೀರ್ಘವಾದ ಜೀವನ ಇವುಗಳನ್ನು ಪಡೆದು ನಮ್ಮೆದುರಿದ್ದ ಒಬ್ಬ ಮನುಷ್ಯನ ಜೀವನ ಸ್ಮೃತಿಗಳು, ಈ ವಿಶಿಷ್ಟಕಾಲದ ಪರಿಚಯ ಅಷ್ಟಿಷ್ಟಾದರೂ ಇರುವಂಥ ಓದುಗರಿಗೆ ನಿಜವಾಗಿ ರೋಮಾಂಚಕವಾಗಬಲ್ಲವು.

1886ರಲ್ಲಿ ಅವರು ಖಾನ್ ದೇಶದ ಧುಲಿಯಾ ಎಂಬಲ್ಲಿಗೆ ನೀರು ಸರಬರಾಜು ಯೋಜನೆಯನ್ನು ತಯಾರಿಸಿ ಕೊಟ್ಟಾಗಿನಿಂದ ಮೊದಲು ಮಾಡಿ, 1908ರಲ್ಲಿ ಪೂನಾ ನಗರಕ್ಕೆ ಕೊಳಚೆ ನೀರನ್ನು ನಳಿಕೆಗಳಲ್ಲಿ ಪಂಪ್ ಮಾಡಿ ಹೊರ ಸಾಗಿಸುವ ಆಧುನಿಕ ಒಳಚರಂಡಿ ಯೋಜನೆಯನ್ನು ನಿರ್ಮಿಸಿಕೊಡುವಲ್ಲಿನ ತನಕ, ಪಶ್ಚಿಮ ಹಾಗೂ ದಕ್ಷಿಣ ಇಂಡಿಯಾದ ಹೆಚ್ಚು ಕಡಿಮೆ ಎಲ್ಲಾ ನೀರು ಸರಬರಾಜು ಮತ್ತು ಚರಂಡಿ ಯೋಜನೆಗಳಲ್ಲಿಯೂ ಶ್ರೀ ವಿಶ್ವೇಶ್ವರಯ್ಯ ಭಾಗವಹಿಸಿದ್ದಾರೆ. ಇಷ್ಟೇ ಅಲ್ಲ, ತನ್ನ ಕಾಲದ ಎಂಜಿನಿಯರ್‌ಗಳಲ್ಲೆ ಪ್ರಪ್ರಥಮ ಗಣ್ಯರಾಗಿದ್ದ ಈತ ದೇಶದ ಪ್ರತಿಯೊಂದು ಎಂಜಿನಿಯರಿಂಗ್ ಸಮಸ್ಯೆಗಳಲ್ಲೂ ತೀವ್ರ ಆಸಕ್ತಿ ತಾಳಿದ್ದರು. 1925ರಲ್ಲೇ ಅವರು ಒಂದು ಅಟೊಮೊಬಾಯಿಲ್ (ಮೋಟಾರು ವಾಹನ) ಕಾರ್ಖಾನೆಯ ಯೋಜನೆಯನ್ನು ಸಿದ್ಧಗೊಳಿಸಿದ್ದರು ಮತ್ತು ಈ ಉದ್ಯಮದ ನಿರ್ಮಾಣದಲ್ಲಿ ಪಾಲುಗೊಳ್ಳುವಂತೆ ಅಮೆರಿಕಾದ ಕ್ರಿಸ್‌ಲರ್ ಕಾರ್ಪೊರೇಶನ್ನನ್ನು ಒಪ್ಪಿಸಿದ್ದರು. ಆದರೆ ಬ್ರಿಟಿಷರು ಮೈಸೂರಿನ ಮಹರಾಜರನ್ನು ಒತ್ತಾಯಿಸಿ ಈ ಯೋಜನೆಯನ್ನು ರದ್ದುಗೊಳಿಸಿದರು. ಅದೇ 1935ರಲ್ಲಿ ನಡೆದ ಒಂದು ಕಥೆಯನ್ನು ಶ್ರೀ ವಿಶ್ವೇಶ್ವರಯ್ಯ ಹೇಳಿದ್ದಾರೆ: ಆ ಕಾಲದಲ್ಲೆ ನ್ಯೂಯಾರ್ಕಿನಲ್ಲಿ ಅವರಿಗೆ ಒಬ್ಬ ರಷ್ಯನ್ ಇಂಜಿನಿಯರ್ ಭೇಟಿಯಾಗಿದ್ದನಂತೆ. ಅಮೆರಿಕದ ಮಾದರಿಯಲ್ಲೇ ರಷ್ಯಾದಲ್ಲೂ ಆಟೋಮೊಬೈಲ್ ವಾಹನಗಳನ್ನು ಇಡೀ ಉತ್ಪಾದಿಸುವ ದೃಷ್ಟಿಯಿಂದ ಅಗತ್ಯವಾದ ತಾಂತ್ರಿಕ ಹಾಗೂ ಇನ್ನಿತರ ಮಾಹಿತಿಗಳನ್ನು ತಾನು ಮತ್ತು ಇತರ ನಲ್ವತ್ತು ರಷ್ಯನ್ ಎಂಜಿನಿಯರ್‌ಗಳು ಇಲ್ಲೂ ಸಂಗ್ರಹಿಸುತ್ತಿರುವುದಾಗಿ ಆತ ಹೇಳಿದ್ದನಂತೆ. ಕುಶಲತೆ, ಸಂಪನ್ಮೂಲ ಮತ್ತು ಸಾಹಸ ಇವೇ ಒಂದು ದೇಶವನ್ನು ಕಟ್ಟುವಂಥವಾಗಿದ್ದರೆ, ನಮಗೂ ಇವೆಲ್ಲ ಇತ್ತು; ನಾವು ರಷ್ಯಾದ ಜೊತೆಯಲ್ಲೇ ಅದೇ ಸಾಮರ್ಥ್ಯ ಹಾಗೂ ಅದೇ ಸ್ಥಾಪತ್ಯವಿರುವ ಆಟೋಮೊಬೈಲ್ ಉದ್ಯಮವನ್ನು ಮತ್ತು ಅದಕ್ಕೆ ಸಂಬಂಧಿಸಿದ ಮತ್ತೆಲ್ಲವನ್ನೂ ಪಡೆದುಕೊಂಡಿರಬಹುದಿತ್ತು. ರಷ್ಯಾಕ್ಕೆ ಸಮಸಮವಾಗಿರಬಹುದಿತ್ತು. ಮತ್ತೆ ಅಲ್ಲಿ ವಾಷಿಂಗ್ಟನ್‌ನಲ್ಲಿನ ಫೆಡರಲ್ ರಿಸರ್ವ್ ಬೋರ್ಡ್‌ನ ಪ್ರಧಾನಾಧಿಕಾರಿಯನ್ನು ಭೇಟಿಮಾಡಿದ್ದರ ಬಗ್ಗೆ ಅವರು ಹೇಳುತ್ತಾರೆ. ವಿಶ್ವೇಶ್ವರಯ್ಯ ಭಾರತದ ಆರ್ಥಿಕತೆಯ ಬಗ್ಗೆ ಆತನ ಸಲಹೆ ಕೇಳಿದಾಗ ಆತ ಆ ಪ್ರಶ್ನೆಯನ್ನೇ ತಪ್ಪಿಸಿಕೊಂಡು ಬಿಟ್ಟರಂತೆ; ಆ ಬಗ್ಗೆ ಆತನಿಗೆ ಮಾತಾಡಲು ಇಚ್ಛೆಯೇ ಇಲ್ಲದ ಹಾಗೆ ಕಾಣಿಸಿತು ಎಂದು ದೂರಿಕೊಂಡಿದ್ದಾರೆ. ಅಮೆರಿಕದ ಅರ್ಥ ಕ್ಷೇತ್ರದ ಅಂಥ ಪರಮಾಧಿಕಾರಿಗೆ ಕೂಡಾ ಇಷ್ಟು ದೊಡ್ಡ ದೇಶವಾದ ಭಾರತದ ಆರ್ಥಿಕತೆಯನ್ನು ತಿಳಿದುಕೊಳ್ಳುವುದು ಸಾಧ್ಯವಿರಲಿಲ್ಲ. ಶ್ರೀ ವಿಶ್ವೇಶ್ವರಯ್ಯನವರು ಹೀಗೆ ಬರೆಯುತ್ತಾರೆ: "ನನ್ನ ಜೊತೆ ಬುದ್ಧಿವಂತನಾದ ಒಬ್ಬ ಮಾರ್ಗದರ್ಶಿ ಇದ್ದ. ಆ ಆರ್ಥಿಕ ತಜ್ಞ ಈ ನನ್ನ ಮಾರ್ಗದರ್ಶಿಯನ್ನು ಪಕ್ಕಕ್ಕೆ ಕರೆದು ಹೇಳಿದರಂತೆ, `ಈ ಮನುಷ್ಯನಿಗೆ ತನ್ನ ದೇಶಕ್ಕೆ ಹಿಂತಿರುಗಿ ಅಲ್ಲಿನ ಆಡಳಿತ ರಾಷ್ಟ್ರೀಯ ಸರಕಾರದ ಕೈಗೆ ಸಿಕ್ಕಿದ ಮೇಲೆ ಇಲ್ಲಿಗೆ ಬರುವುದಕ್ಕೆ ಹೇಳು. ಆಗ ನಾನು ಏನಾದರೂ ಸೂಚನೆಗಳನ್ನು ಕೊಟ್ಟೇನು ಎಂದು'. ಆಗ ಅಲ್ಲಿನ ಉದ್ಯಮ ಕಾರ್ಯದರ್ಶಿಯಾಗಿದ್ದ ಹೆರ್ಬರ್ಟ್ ಹೂವರ್ ಕೂಡಾ " ನಿಮ್ಮ ಜನರಲ್ಲಿ ನುಗ್ಗುವ ಸಾಹಸವೇ ಇಲ್ಲ. ಎಂದರಂತೆ.

ಇವೊತ್ತಿಗೆ ಕೂಡಾ ರಾಜಕೀಯ ಪರಿಸ್ಥಿತಿ ಬದಲಾಗದೆ ಉಳಿದುಬಿಟ್ಟಿದೆ. "ಮುಂಬೈ ಸರಕಾರಕ್ಕೆ ಆ ಪ್ರಾಂತ್ಯದಲ್ಲಿ ಉನ್ನತ ತಾಂತ್ರಿಕ ಶಿಕ್ಷಣವನ್ನು ರೂಪಿಸಬೇಕೆಂಬ ಇಚ್ಛೆಯೇ ಕಾಣುವುದಿಲ್ಲ" ಎಂದು ವಿಶ್ವೇಶ್ವರಯ್ಯ ಆಗಿನ ಗೌರ್ನರ್ ಲಾರ್ಡ್ ಲಾಯ್ಡ್‌ರನ್ನು ಆಕ್ಷೇಪಿಸುತ್ತಾರೆ. ಆ ಮಾತು ಇವತ್ತಿಗೂ ಅನ್ವಯಿಸುತ್ತದೆ. ಪ್ರಾಯಶಃ ನಿರುದ್ಯೋಗದ ಹೆದರಿಕೆಯಿಂದ ಇರಬಹುದು, ಅಂತೂ ರಾಷ್ಟ್ರೀಯ ಸರಕಾರ ಕೂಡ ಉನ್ನತ ತಾಂತ್ರಿಕ ಶಿಕ್ಷಣಕ್ಕೆ ತಡೆ ಹಾಕುತ್ತಿದೆ ಎಂಬ ಮಾತನ್ನು ಅವರು ಮುಖತಃ ಹೇಳುತ್ತಾರೆ, ಕಾಗದದ ಮೇಲೆ ಬರೆದಿಲ್ಲ ಅಷ್ಟೆ. ಅಲ್ಲದೆ, ನಮ್ಮದೇ ರಾಷ್ಟ್ರೀಯ ಸರಕಾರವು ಜನರು ತಮ್ಮ ತಮ್ಮ ವ್ಯಕ್ತಿತ್ವದ ಪರಮೋನ್ನತಿಗೆ ಏರುವುದಕ್ಕೆ ಅವಕಾಶ ಕೊಡುತ್ತಿಲ್ಲ; ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿ ಜನಪ್ರಸಿದ್ಧಿ ಪಡೆದು ತಮ್ಮ ಪ್ರಸಿದ್ಧಿಗೇ ಮುಳುವಾಗಿ ಬಿಟ್ಟಾರು ಎಂದು ನಮ್ಮ ಆಡಳಿತಗಾರರಿಗೆ ಹೆದರಿಕೆಯೋ ಎನ್ನಿಸುತ್ತದೆ. ಭಧ್ರಾವತಿಯ ಕಬ್ಬಿಣ ಕಾರ್ಖಾನೆ ವಿಶ್ವೇಶ್ವರಯ್ಯನವರ ಎಂಜಿನಿಯರಿಂಗ್ ಕೌಶಲ್ಯದ, ಅದಕ್ಕಿಂತ ಹೆಚ್ಚಾಗಿ ಸಾಹಸಬುದ್ಧಿಯ ಫಲ. ಮೈಸೂರಿನ ಗಣ್ಯ ನಾಗರಿಕರೊಬ್ಬರು 1925 ಮೇ 22ರಂದು ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನಲ್ಲಿ ಈ ಸಾಹಸದ ಬಗ್ಗೆ ಮಾತನಾಡುತ್ತ, "ಈ ಅದೃಷ್ಟಹೀನ ಸಾಹಸಕ್ಕೆ ಈಗ ಮುಚ್ಚಬೇಕಾದ ಕಾಲ ಬಂದಿದೆ" ಎಂದು ವಿಷಾದಿಸಿದ್ದರು. ಇಂಡಿಯಾಕ್ಕೆ ಆ ಕಾಲದಲ್ಲಿ ಅಂಥ ಸಾಹಸ ಪ್ರವೃತ್ತಿಯ ಅಗತ್ಯ ಎಷ್ಟಿತ್ತು ಎಂಬುದನ್ನು ಮೇಲಿನ ಗಣ್ಯರ ಮಾತು ಸ್ಪಷ್ಟಗೊಳಿಸುತ್ತದೆ. 1927 ಫೆಬ್ರವರಿ 12ರಂದು ಮೈಸೂರು ಮಹಾರಾಜರು ವಿಶ್ವೇಶ್ವರಯ್ಯನವರಿಗೆ ಹೀಗೆ ಬರೆದಿದ್ದರು: "ನೀವು ಅಮೆರಿಕನ್ ಸಿಬ್ಬಂದಿಯೆಲ್ಲವನ್ನೂ ಕೈಬಿಟ್ಟು ಕಾರ್ಖಾನೆಯನ್ನು ಪೂರಾ ನಮ್ಮ ಜನಗಳಿಂದಲೇ ನಡೆಸಿಕೊಂಡು ಹೋಗುತ್ತಿದ್ದೀರಿ. ಈ ಸಂಸ್ಥಾನವೇ ಹೆಮ್ಮೆಪಟ್ಟುಕೊಳ್ಳಬೇಕಾದ ಸಾಧನೆ ಇದು." ಯಾವುದೇ ಒಂದು ಅವಕಾಶ ಪ್ರಾಪ್ತವಾಯಿತೆಂದರೆ ಅದೇ ತನ್ನ ಪೂರೈಕೆಗೆ ಬೇಕಾದ ಜನಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಇಂಡಿಯಾದ ಎಂಜಿನಿಯರ್‌ಗಳು ಮೂವತ್ತು ವರ್ಷಗಳ ಹಿಂದೆ ಎಂಥದೇ ಸಾಹಸಕ್ಕೂ ಸಾಕಷ್ಟು ಸಮರ್ಥರಿದ್ದರು, ಮತ್ತು ಈಗ ಕೂಡಾ ಅವರು ಸಮರ್ಥರೇ ಇದ್ದಾರೆ. ಅವರಲ್ಲಿ ವಿಶ್ವಾಸವಿಡಬೇಕಾದ್ದು ಮುಖ್ಯ. ಒಮ್ಮೊಮ್ಮೆ ತೀರಾ ವಿಶೇಷ ಸಂದರ್ಭಗಳಲ್ಲಿ ಸಮಾಲೋಚನೆಗಾಗಿ ಹೊರದೇಶದ ಕೆಲವರು ಬೇಕಾದೀತು. ಇವೊತ್ತಿನ ಸರಕಾರ ಅಸಾಮಾನ್ಯ ಸಾಹಸ ಎಂದು ತಾನು ನಂಬುವಂಥ ಯೋಜನೆಗಳಲ್ಲಿ ಇವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿದೇಶಿ ಎಂಜಿನಿಯರುಗಳನ್ನು ಅವಲಂಬಿಸಿದರೆ, ಯಾವ ಅವಕಾಶ ನಮ್ಮ ಎಂಜಿನಿಯರುಗಳಿಗೆ ಸಿಕ್ಕು ಅವರು ಅದಕ್ಕೆ ತಕ್ಕುದಾಗಿ ಬೆಳೆಯಬಹುದಿತ್ತೋ ಅದು ತಪ್ಪಿ ನಮ್ಮ ಜನ ತಮ್ಮ ಸಹಜ ಔನ್ನತ್ಯಕ್ಕೆ ಏರಿಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ. ಅಷ್ಟೇ ಅಲ್ಲದೆ, ಎಂಜಿನಿಯರುಗಳೂ ಮನುಷ್ಯರೇ ತಾನೇ. ರಾಜಕಾರಣಿಗಳು ಯಾವಾಗಲೂ ತಮ್ಮ ಗೂಡಿಗೇ ಗರಿ ಸಿಕ್ಕಿಸಿಕೊಳ್ಳುತ್ತ ಕೂತರೆ ಇವರೂ ಅವರನ್ನೆ ಅನುಕರಿಸಲು ತೊಡಗುತ್ತಾರೆ.

ಸುಮಾರು ನೂರುವರ್ಷಗಳ ಹಿಂದೆ ಇಂಡಿಯಾದ ಉಕ್ಕು ಗ್ಲಾಸ್ಗೋದಲ್ಲಿ ಮಾರಾಟವಾಗುತ್ತಿದ್ದುದನ್ನು ವಿಶ್ವೇಶ್ವರಯ್ಯನವರು ನಮಗೆ ತಿಳಿಸಿದರು. ಇದನ್ನು ಅವರು ತಮ್ಮ ಪುಸ್ತಕದಲ್ಲಿ ಹೇಳಿಲ್ಲ. ಆದರೆ ಈ ಸಂಗತಿ ತುಂಬಾ ಕುತೂಹಲದ್ದಾಗಿದೆ. ಅತ್ಯುನ್ನತ ದರ್ಜೆಯ ಅಥವಾ ಯಾವುದೇ ದರ್ಜೆಯ ಉಕ್ಕನ್ನಾಗಲೀ ಕಬ್ಬಿಣವನ್ನಾಗಲೀ ಗೃಹಕೈಗಾರಿಕೆಯ ಮಟ್ಟದ ಸಾಧನ ವ್ಯವಸ್ಥೆಗಳಲ್ಲೇ ತಯಾರಿಸಲು ಸಾಧ್ಯ. ಡೆಲ್ಲಿಯ ರಾಯ್ ಪೀಠೋರಾದಲ್ಲಿರುವ ಮೌರ್ಯರ ಕಾಲದ ಕಬ್ಬಿಣದ ಸ್ತಂಭಗಳೇ ಅದನ್ನು ಸ್ಪಷ್ಟಗೊಳಿಸುತ್ತವೆ. ಗೃಹಕೈಗಾರಿಕೆ-ಬೃಹತ್ ಉದ್ಯಮಗಳ ನಡುವಣ ಸಮಸ್ಯೆಯನ್ನು ಚರ್ಚೆಗೆತ್ತಿಕೊಳ್ಳುವುದು ನನ್ನ ಪ್ರಸ್ತುತ ಉದ್ದೇಶವಲ್ಲ. ಆದರೆ ವಾಸ್ತವ ಸಂಗತಿ ಹೀಗಿದೆ - ಭಾರತಕ್ಕೆ ವಿದೇಶೀ ಉಕ್ಕನ್ನು ಆಮದು ಮಾಡಿಕೊಳ್ಳಲಾಗುತ್ತಿದೆ, ಸ್ಥಳೀಯವಾದ ಬೆಲೆಗಿಂತ ಹೊರಗಿನ ಬೆಲೆ ಟನ್ನಿಗೆ ಸುಮಾರು ನೂರು ರೂಪಾಯಿಗಳಷ್ಟು ಹೆಚ್ಚಿದ್ದರೂ ಈ ದುಬಾರಿ ಬೆಲೆ ತೆರುತ್ತಿದ್ದೇವೆ. ಸ್ಥಳೀಯ ಕ್ರಮಗಳಲ್ಲಿ ಅದೇ ಮಾಲನ್ನು ಅದಕ್ಕಿಂತ ಕಡಿಮೆ ಬೆಲೆಗೆ ಅಥವಾ ಕನಿಷ್ಠ ಅದೇ ಬೆಲೆಗೆ ಉತ್ಪಾದಿಸುವುದು ಸಾಧ್ಯವಿರುವಾಗಲೂ ದುಬಾರಿಯಲ್ಲಿ ಆಮದು ಮಾಡುವುದನ್ನೇ ಮುಂದುವರಿಸುತ್ತಿರುವವರನ್ನು ಏನೆನ್ನಬೇಕು?

ಇದೇ ಈಗ ಈಜಿಪ್ಟ್ ಕೈಗೊಂಡ ಸೂಯೆಜ್ ಕಾಲುವೆಯ ರಾಷ್ಟ್ರೀಕರಣ ವರ್ಣೀಯ ಜನರೆಲ್ಲರ ಕಾರ್ಪಣ್ಯರಾಶಿಯನ್ನೂ ಅವರ ಐಕ್ಯಮತ್ಯದ ಅಗತ್ಯವನ್ನೂ ಅನಿವಾರ್ಯವೆನ್ನಿಸುವಂತೆ ಎದುರೆತ್ತಿ ತೋರಿಸಿಕೊಟ್ಟಿದೆ. ಸುಮಾರು ನಲವತ್ತು ವರ್ಷಗಳಿಗೂ ಹಿಂದೆ ಕೂಡ ಇಂಥ ಕ್ರಿಯಾತ್ಮಕ ಐಕ್ಯಮತ್ಯ ತನ್ನ ಹೊಳಹು ಕಾಣಿಸಿತ್ತು ಎಂಬುದು ಕುತೂಹಲಕರವಾದ ಅಂಶ. ಶ್ರೀವಿಶ್ವೇಶ್ವರಯ್ಯನವರು ಬರೆದಿದ್ದಾರೆ: "ನಾನು ಈಜಿಪ್ಟ್‌‌ನಲ್ಲಿನ ಆಸ್ವಾನ್‌ನಂಥ ಬೃಹತ್ ನೀರಾವರಿ ಆಣೆಕಟ್ಟುಗಳನ್ನು ನೋಡಿಕೊಂಡು ಬಂದಿದ್ದೇನಾದ್ದರಿಂದ ಮೈಸೂರಿನ ಕಾವೇರಿ ಕಣಿವೆಯ ಅಗತ್ಯಗಳಿಗೆ ತಕ್ಕ ನಕ್ಷೆ ಸಿದ್ಧಮಾಡಲು ಹೆಚ್ಚು ಕಾಲ ಬೇಕಾಗಲಿಲ್ಲ."
ಹಿಂದುಳಿದ ಜಾತಿಗಳನ್ನು ಓಲೈಸುವ ಬಗ್ಗೆ ಮೈಸೂರು ಮಹಾರಾಜರಿಗಿದ್ದ ತವಕದ ವಿಷಯದಲ್ಲಿ ತಾವು ಅವರ ಜೊತೆ ವಾದ ವಿವಾದ ಮಾಡಿದ್ದನ್ನು ಕೂಡಾ ಶ್ರೀ ವಿಶ್ವೇಶ್ವರಯ್ಯನವರು ತುಂಬ ಸೂಕ್ಷ್ಮನಯವಂತಿಕೆಯಿಂದ ನಿರೂಪಿಸಿದ್ದಾರೆ. ಮುಂದುವರಿದು ಜಾತಿಯನ್ನು ಎತ್ತಿಕಟ್ಟುವುದು ಆಮೇಲೆ ಆ ಜಾತಿ ತಮ್ಮ ಹತೋಟಿ ಮೀರಿ ಹೋಗಿಬಿಟ್ಟಂಥ ಸಂದರ್ಭದಲ್ಲಿ ಅದಕ್ಕಿಂತ ಕೊಂಚ ಕಡಿಮೆ ಜಾತಿಯ ಜನರನ್ನು ಎತ್ತಿ ಹುರಿಗೊಳಿಸುವುದು - ಇದೇ ಉಪಾಯದಿಂದ ಬ್ರಿಟಿಷರು ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಮುಂದುವರಿಸಿಕೊಂಡು ಹೋಗಲು ಯತ್ನಿಸುತ್ತಿದ್ದರು ಎಂಬುದನ್ನು ನಾವು ತಿಳಿದಿರಬೇಕು. ಹೀಗೆ ಮೈಸೂರಲ್ಲೂ ಬ್ರಾಹ್ಮಣರ ಮೇಲೆ ಬ್ರಾಹ್ಮಣೇತರರನ್ನು ಎತ್ತಿಕಟ್ಟುವುದಕ್ಕೆ ಹವಣಿಸಿ ಅವರು ಒಂದು ಸಮಿತಿಯನ್ನು ನೇಮಕ ಮಾಡಿದರು. ವಿವಿಧ ಜಾತಿಗಳ ದೃಷ್ಟಿಯಿಂದ ಶಿಕ್ಷಣದ ಸಾಧ್ಯತೆಗಳನ್ನು ಪರಿಶೀಲಿಸುವುದು ಈ ಸಮಿತಿಯ ಉದ್ದೇಶವಾಗಿತ್ತು. ಇದನ್ನು ವಿಶ್ವೇಶ್ವರಯ್ಯ ವಿರೋಧಿಸಿದ್ದರು. ಆಗಲೆ ವಿಶ್ವೇಶ್ವರಯ್ಯನವರು ತಮ್ಮ ದಿವಾನ್ ಪದವಿಗೆ 1918ರ ಎಪ್ರಿಲ್‌ನಲ್ಲಿ ರಾಜೀನಾಮೆ ಕೊಡುವುದಾಗಿ ತಿಳಿಸಿ ಅದಕ್ಕೆ ಮಹಾರಾಜರಿಂದ ಗುಪ್ತವಾಗಿ ಒಪ್ಪಿಗೆ ಪಡೆದುಕೊಂಡಿದ್ದರು. ಆಮೇಲೆ 1918ರ ಡಿಸೆಂಬರ್ 9ರಂದು ಅವರು ಬೆಂಗಳೂರಿನ ಕೇಂದ್ರ ಹಾಗೂ ರೆವಿನ್ಯೂ ಸೆಕ್ರೆಟರಿಯೆಟ್ ಗೆ ಹೀಗೆ ತಿಳಿಸಿದ್ದರು: "ಖಾಸಗಿ ವಲಯಗಳಲ್ಲಿ ಆಗಾಗ ನಾನು ಆ ಜಾತಿಯ ಪರ, ಈ ಜಾತಿಯ ವಿರೋಧಿ ಮುಂತಾಗಿ ಹೇಳುತ್ತಿರುವುದುಂಟು; ಯಾವಾಗಲೂ ನಾನು ತಕ್ಕಡಿಯನ್ನು ಪೇರಿಲ್ಲದೆ ಹಿಡಿದಿದ್ದೇನೆಂಬುದನ್ನು ಕಾಲವೆ ತೋರಿಸಿಕೊಡುತ್ತದೆ." ಇವರು ಮುಂಚಿನ ಕಾಲದ ಹಾಗೂ ಐರೋಪ್ಯ ಶಿಕ್ಷಣದ ಚಿಂತನ ಕ್ರಮವನ್ನು ರೂಢಿಸಿಕೊಂಡವರು; ತಕ್ಕಡಿಯನ್ನು ನೇರ ಹಿಡಿದಿರಬೇಕೆಂಬ ನಿಷ್ಠೆಯಲ್ಲಿ, ಖಾಸಗಿ ಬದುಕಿನಲ್ಲೂ ನಿಷ್ಠುರ ಪ್ರಾಮಾಣಿಕತೆಯನ್ನು ಪಾಲಿಸಿಕೊಂಡವರು. ಆದರೆ ಹೀಗೆ ತಕ್ಕಡಿಯನ್ನು ಪೇರಿಲ್ಲದೆ ನೇರ ಹಿಡಿಯುವುದೇ ಕೆಲವು ಸಂದರ್ಭಗಳಲ್ಲಿ ಅನ್ಯಾಯವಾಗುತ್ತದೆ ಎಂಬುದನ್ನು ಅವರು ಅರಿತಿರಲಿಲ್ಲ, ಅಥವಾ ಹಾಗೆ ತಿಳಿಯುವುದೇ ಅವರಿಗೆ ಸಾಧ್ಯವಿರಲಿಲ್ಲ.

ಉತ್ತರಪ್ರದೇಶದಲ್ಲಿ 1951ರ ಜನಗಣತಿಯ ಪ್ರಕಾರ ಕಾಣುವ ಆರು ಕೋಟಿ ಮುವ್ವತ್ತೆರಡು ಲಕ್ಷ ಜನಸಂಖ್ಯೆಯಲ್ಲಿ ಉತ್ತಮ ಜಾತಿಯವರು ಒಂದು ಕೋಟಿ ಇಪ್ಪತ್ತು ಲಕ್ಷ ಮತ್ತು ವಿಧಾನಸಭೆಯಲ್ಲಿ ಆ ಜಾತಿಯ ಸದಸ್ಯರ ಸಂಖ್ಯೆ 260; ಮುಸ್ಲಿಮರು ಅರವತ್ತು ಲಕ್ಷ ಮತ್ತು ಅವರ ಸದಸ್ಯರ ಸಂಖ್ಯೆ 43; ಹರಿಜನರು ಒಂದು ಕೋಟಿ ಇಪ್ಪತ್ತಾರು ಲಕ್ಷ, ಸದಸ್ಯರು 84. ಹಿಂದುಳಿದ ಕೋಮಿನವರು ಮೂರು ಕೋಟಿ ಇಪ್ಪತ್ತಾರು ಲಕ್ಷ; ಅವರ ಶಾಸಕರು 43; ಇಡೀ ದೇಶದಲ್ಲೂ ಇಂಥದೇ ಒಂದು ಸ್ಥಿತಿ ಕಾಣಸಿಗುತ್ತದೆ. ಆಯ್ಕೆಯಲ್ಲಾಗಲೀ ನೇಮಕಗಳಲ್ಲಾಗಲೀ ಯೋಗ್ಯತೆ ಮತ್ತು ನ್ಯಾಯತಕ್ಕಡಿಯೇ ಏಕೈಕ ನಿರ್ಣಾಯಕ ಅಂಶವಾಗುವುದಾದರೆ ಸುಮಾರು ಐದುಸಾವಿರ ವರ್ಷಗಳ ಮನಸ್ಸಂಸ್ಕಾರದ ಪೂರ್ವಪರಂಪರೆಯಿಂದ ವಿಶೇಷ ಸಿದ್ಧಿಪಡೆದುಕೊಂಡಿರುವ ಮೇಲು ಜಾತಿಯವರನ್ನು ಬೇರೆ ಯಾವ ಜಾತಿಯವರೂ ಗೆಲ್ಲಲು ಸಾಧ್ಯವಾಗುವುದಿಲ್ಲ. ಹಿಂದುಳಿದ ಜಾತಿಗಳಿಗೆ ಮತ್ತು ಆ ಮೂಲಕ ಇಂಡಿಯಾ ದೇಶಕ್ಕೇ ನ್ಯಾಯ ದೊರಕಿಸಿಕೊಡುವ ಸಲುವಾಗಿ ಉತ್ತಮ ಜಾತಿಗಳಿಗೆ ತಾತ್ಕಾಲಿಕ ಅನ್ಯಾಯ ಮಾಡಲೇಬೇಕಾಗುತ್ತದೆ.

`ರಾಜಕೀಯ ಹಾಗೂ ಮತ್ತಿತರ ಸಮ್ಮೇಳನಗಳು' ಎಂಬ ಅಧ್ಯಾಯದಲ್ಲಿ ವಿಶ್ವೇಶ್ವರಯ್ಯನವರು ತಮಗೆ ಮಹಾತ್ಮ ಗಾಂಧಿ ಬಗ್ಗೆಯೂ ಸ್ವಾತಂತ್ರ್ಯ ಚಳವಳಿಯ ಬಗ್ಗೆಯೂ ಇದ್ದ ಸಹಾನುಭೂತಿಯನ್ನು ಅಡಗಿಸಿಡಲಾರದೆ ಹೋಗಿದ್ದಾರೆ. "ನಮ್ಮ ದೇಶದ ಜನ ಸಾಕಷ್ಟು ನೋವು ಅನುಭವಿಸಿದವರಲ್ಲ. ಅದಕ್ಕೇ ನನಗೆ ಇವರ ಶಕ್ತಿಯ ಬಗ್ಗೆ ಕಡಿಮೆ ವಿಶ್ವಾಸ" ಎಂಬ ಗಾಂಧೀಜಿಯ ಮಾತನ್ನು ಅವರು ಉದ್ಧರಿಸಿದ್ದಾರೆ. ವಿಶ್ವೇಶ್ವರಯ್ಯ ನೋವು ಅನುಭವಿಸಿದ್ದಾರೆ, ವಾಸ್ತವವಾಗಿ ಮಹತ್ತರವಾದ ನೋವುಗಳನ್ನೇ ಅನುಭವಿಸಿದ್ದಾರೆ. ಈ ಬಗ್ಗೆ ತಮ್ಮ ನೆನಪುಗಳಲ್ಲಿ ಅವರು ಪ್ರಸ್ತಾಪಿಸುವುದಿಲ್ಲ. ಹಾಗಿದ್ದರೂ, ತಮ್ಮ ಪತ್ನಿ ಕೈಬಿಟ್ಟಾಗ ಅವರು ತೋರಿದ ಘನವಂತಿಕೆ ಇಂಡಿಯಾದ ಪ್ರತಿಯೊಬ್ಬರೂ ತಿಳಿದಿರಬೇಕಾದ್ದು. ವಿಶಾಖಪಟ್ಟಣದ ಬಂದರಿಗೆ ಸಂಬಂಧಿಸಿದ ಒಂದು ಕತೆಯನ್ನು ಕೂಡ ಅವರು ಇಲ್ಲಿ ಹೇಳಿಲ್ಲ. ಆದರೆ ಐತಿಹ್ಯದಿಂದ ತಿಳಿಯುವ ಹಾಗೆ, ಈ ಬಂದರನ್ನು ಹತೋಟಿಗೆ ತಂದುಕೊಳ್ಳುವುದಕ್ಕೆ ಮೊದಲಲ್ಲಿ ಬೇಕಂತಲೇ ಕೆಲವು ಹಡಗುಗಳನ್ನು ಅದರಲ್ಲಿ ಮುಳುಗಿಸಿದರು; ಹಾಗೆ ಮಡಲು ಯೋಚಿಸಿದ ಪ್ರಪಂಚದ ಮೊತ್ತ ಮೊದಲ ಎಂಜಿನಿಯರ್ ಈತ. ವೈಯಕ್ತಿಕ ನೋವುಗಳನ್ನು ಹೇಳುವುದಾದರೆ ಪ್ರಾಯಶಃ ಅನೇಕ ಪ್ರಸಿದ್ಧ ಹುತಾತ್ಮರಿಗಿಂತ ಹೆಚ್ಚಾಗಿ ನೋವು ತಿಂದವರು ಇವರು. ಆದರೆ ಅವರಿಗೆ ರಾಜಕೀಯವಾದ ಅಥವಾ ಜನಸಾಮಾನ್ಯರಿಗಾಗಿ ನಿರ್ವೈಯಕ್ತಿಕವಾದ ನೋವು ತಿಂದ ಅನುಭವ ಅಷ್ಟಾಗಿ ಇರಲಾರದು. ಒಮ್ಮೆ ಅವರಿಗೆ ಅಂಥ ಸ್ವಂತಿಕೆಯನ್ನು ಮೀರಿದ ಶೋಕ, ಆರ್ತತೆಯ ಅನುಭವ ಇದ್ದಿದ್ದೇ ಆಗಿದ್ದರೆ ದೇಶದ ಈಚಿನ ಇತಿಹಾಸದಲ್ಲಿ ಅವರು ಮಹಾತ್ಮ ಗಾಂಧಿಯ ಪಕ್ಕದಲ್ಲೇ ಹತ್ತಿರ ಕೂತಿರುತ್ತಿದ್ದರು. ರಾಜಕೀಯ ಅಥವಾ ಸಾಧಾರಣೀಕೃತ ಸಂಕಷ್ಟಗಳನ್ನು ಅನುಭವಿಸಬಲ್ಲ ಸಾಮರ್ಥ್ಯ ದಕ್ಷಿಣ ಇಂಡಿಯಾದ ನಾಯಕಮಂದಿಯಲ್ಲಿ ಕೊಂಚ ತಣ್ಣಗಾಗಿಬಿಟ್ಟಿದೆ ಎಂಬುದೂ ನಿಜವಿರಬಹುದು. ಶ್ರೀ ಸಿ. ರಾಜಗೋಪಾಲಾಚಾರಿಯವರು ಕಾಂಗ್ರೆಸ್ ಪಕ್ಷದಲ್ಲೇ ನಿಸ್ಸಂಶಯವಾಗಿ ಅತ್ಯಂತ ಸಮರ್ಥರೂ ಅತ್ಯಂತ ಬುದ್ಧಿಶಾಲಿಯೂ ಆಗಿರುವವರು ಮತ್ತು ಅದೇ ಏಕೈಕ ಅರ್ಹತೆಯಾಗಿದ್ದರೆ ಸ್ವತಂತ್ರ ಭಾರತದ ಪ್ರಧಾನಿಯಾಗಲು ಅವರಿಗಿಂತ ಉತ್ತಮರು ಬೇರೆ ಇರಲಿಲ್ಲ. ಆದರೆ ಅವರು ಎಂದೂ ಆ ದರ್ಜೆಗೆ ಏರಲು ಶಕ್ತರಾಗಿರುವುದಿಲ್ಲವೆಂಬುದನ್ನು ಸೂಕ್ಷ್ಮ ಮನಸ್ಸಿನ ಜನ 1923-24ರಲ್ಲಾಗಲೇ ತಿಳಿದುಕೊಂಡು ಬಿಡಬಹುದಿತ್ತು. ಆ ಕಾಲದಲ್ಲಿ ಇಡೀ ದೇಶ ಮತ್ತು ಕಾಂಗ್ರೆಸ್ ಪಕ್ಷ ಅವರ ಕಾಲಿಗೆ ಎರಗಿತ್ತು; ಆಗ ಅವರಿಗೂ ಗುರುವಾದ ಗಾಂಧೀಜಿ ಸೆರೆಯಲ್ಲಿದ್ದರು, ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ದೊಡ್ಡ ಜನರೆಲ್ಲರ ಏಕೀಕೃತ ಶಕ್ತಿಯನ್ನೂ ಕೂಡಾ ಇವರು ಹೆಚ್ಚು ಕಡಿಮೆ ಏಕಹಸ್ತರಾಗಿಯೇ ಸೋಲಿಸಿ ಚೆಲ್ಲಲು ಶಕ್ತರಾಗಿದ್ದರು. ಆದರೆ ಎದುರ್ಗೊಂಡು ಬಂದ ಅಂಥ ವಿಜಯಮಾಲಿಕೆಯನ್ನೇ ಅವರು ಸೋಲಿನ ಸರವಾಗಿ ಮಾಡಿಕೊಂಡರು. ಆ ಕಾಲದಲ್ಲಿ ಕಾಯಿದೆ ನಿರೋಧದ ಚಳವಳಿಯನ್ನು ನೇರ ಆರಂಭಿಸುವುದು ಬಿಟ್ಟು ಅವರು ಚಳುವಳಿಯ ಸಾಧ್ಯತೆಗಳನ್ನು ತನಿಖೆ ಮಾಡುವುದಕ್ಕೆ ಒಂದು ಸಮಿತಿಯನ್ನು ನೇಮಿಸಿ ಕೂತರು. ದಕ್ಷಿಣ ಇಂಡಿಯಾದ ಎಲ್ಲ ಸಮರ್ಥ ತರುಣರೂ, ಅದರಲ್ಲೂ ಮುಖ್ಯವಾಗಿ ಬಡವರ್ಗಗಳಿಗೆ ಸೇರಿದಂಥವರು, ಇತ್ತೀಚಿನ ಇತಿಹಾಸದ ಈ ಘಟನೆಗಳನ್ನು ಕುರಿತು ತೀವೃ ಆಲೋಚಿಸಬೇಕು ಮತ್ತು ಬೌದ್ಧಿಕತೆಯ ವೇದಿಕೆಯ ಮೇಲೆ ಕ್ರಿಯಾಶೀಲತೆ ಬಲಿಯಾಗಿ ಹೋಗದಂಥ ಸಂಭಾವಿತ ಜೀವನ ಕ್ರಮವನ್ನು ರೂಪಿಸಿಕೊಳ್ಳಬೇಕು.


(ಚಿತ್ರಗಳು ವಿಕ್ರಾಂತ ಕರ್ನಾಟಕ, ಕನ್ನಡ ವಾರಪತ್ರಿಕೆಯ ಸೌಜನ್ಯ.) ಮುಂದೆ ಓದಿ....

Monday, September 22, 2008

ಕಿರಂ ಬಗ್ಗೆ ಡಾ|| ಯು.ಆರ್.ಅನಂತಮೂರ್ತಿ...


On Mon, 22 Sep 2008 U R Ananthamurthy wrote :
Dear Satya
You are movingly excellent on Kiram. I have felt this in him. He considers me a guru but more truly I consider him a guru- for I have learnt from him. My reading in Kannada is not as wide as his. I find it difficult to tell him what you have written and I also feel, because all praise embarrasses him. He is a mad lover of literature- particularly poetry- and these days he has become more coherent to listeners in meetings. But he was always original in small circles.Ananthamurthy

On Mon, Sep 22, 2008 at 5:29 PM, satyanarayana krishnamurthy <satya_k_21@rediffmail.com> wrote:
My Dear Sir,If my piece on kiram is good all the credit goes to kiram only. I am yet to see a person who has internalised such vast reading and convert the same into passion. His rereading and unlearning is very inspiring and in this regard he scores Kurthakoti too. I also feel embarrassed to tell all these things to him. I avoided meeting him after writing this piece.
This is first part. In second part I intend to write on personal aspects.

Thirumalesh’s translation of Rilke novel is very good. It opens new vistas. The feelings you have expressed about kiram needs circulation atleast among close friends. If you permit I will circulate your letter.
Regards
- Satyanarayana
U R Ananthamurthy wrote :
Yes. I want all my friends to know how unique is Kiram in the world of letters-- I do mean in the WORLD of letters. After Dr Johnson in England the oral tradition has almost disappeared. Kiram speaks and he feels it is as good or better than writing. His vinaya is endless.
afflyAnanthamurthy
(ಫೋಟೋ ಕೃಪೆ : ಸಂಪದ.ನೆಟ್ )
ಮುಂದೆ ಓದಿ....

Sunday, September 21, 2008

ಪುಸ್ತಕ ಸಮೀಕ್ಷೆ - ಲೋಹಿಯಾ ರೀತಿ


ಕನ್ನಡದಲ್ಲಿ ಈಗ ಹಿಂದೆಂದೂ ಪ್ರಕಟವಾಗದಷ್ಟು ಸಂಖ್ಯೆಯಲ್ಲಿ ಪ್ರತಿವರ್ಷವೂ ಪುಸ್ತಕಗಳು ಹೊರಬರುತ್ತಿವೆ. ಬರೇ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲದೆ, ಗುಣ, ಸ್ವಭಾವ, ವೈವಿಧ್ಯಗಳ ದೃಷ್ಟಿಯಿಂದಲೂ ಕನ್ನಡ ಪುಸ್ತಕಗಳ ಪ್ರಪಂಚದಲ್ಲಿ ನಿರಂತರ ಬದಲಾವಣೆಯಾಗುತ್ತಿದೆ. ಹತ್ತಾರು ಅಕಾಡೆಮಿಗಳು, ಪ್ರಾಧಿಕಾರ, ಪರಿಷತ್ತು, ವಿಶ್ವವಿದ್ಯಾಲಯಗಳು ಮಾತ್ರವಲ್ಲದೆ ಬರಹಗಾರರು, ಬರಹಗಾರರ ಗುಂಪುಗಳು ಕೂಡ ತಮ್ಮ ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.

ಈ ಪುಸ್ತಕಗಳೆಲ್ಲ ಓದುಗರ ಗಮನ ಸೆಳೆಯಲು, ಓದುಗರನ್ನು ತಲುಪಲು ನಮ್ಮಲ್ಲಿ ಯಾವ ರೀತಿಯ ವ್ಯವಸ್ಥೆಯೂ ಇಲ್ಲ. ದಿನಪತ್ರಿಕೆಗಳು/ವಾರಪತ್ರಿಕೆಗಳಲ್ಲಿ ಪ್ರಕಟವಾಗುವ ಪುಸ್ತಕ ಸಮೀಕ್ಷೆಗಳು ಬಹುಪಾಲು ಲೇಖಕ ಕೇಂದ್ರಿತವಾಗಿರುತ್ತವೆ. ಒಂದು ಪುಸ್ತಕ ಓದುಗನೊಬ್ಬನ ಆಸಕ್ತಿಗೆ, ಸದ್ಯದ ಆತನ ಬದುಕಿಗೆ ಹೇಗೆ ಮುಖ್ಯ ಎಂದು ತಿಳಿಸಬೇಕಾದ್ದು ಸಮೀಕ್ಷೆಗಳ ಕರ್ತವ್ಯ. ಬದಲಿಗೆ ನಮ್ಮಲ್ಲಿ ಬಹುಪಾಲು ಸಮೀಕ್ಷೆಗಳು ಲೇಖಕನ ಬಗ್ಗೆ, ಕೃತಿಯ ಬಗ್ಗೆ ತೀರ್ಪು ನೀಡುವುದಕ್ಕೆ, ಬರಹಗಾರನ ಸ್ಥಾನಮಾನವನ್ನು ನಿರ್ದೇಶಿಸುವುದಕ್ಕೆ, ಕೃತಿಕಾರನ ಜೊತೆ ಇರುವ ಸ್ನೇಹ-ಪ್ರೀತಿ, ಕೋಪ, ತಿರಸ್ಕಾರಗಳನ್ನು ತೋರುವುದಕ್ಕೆ ತೋರುಗಂಬಗಳಾಗುತ್ತವೆ. ಇನ್ನೂ ಮುಖ್ಯವಾದ ಸಂಗತಿಯೆಂದರೆ ಬಹುಪಾಲು ಸಮೀಕ್ಷೆಗಳು ಸಾಹಿತ್ಯ ಕೃತಿ ಕೇಂದ್ರಿತವಾಗಿರುತ್ತವೆ. ಸಾಧಾರಣ ಸುಮಾರು ಮಟ್ಟದ ಕತೆ, ಕಾದಂಬರಿ, ಕವನಗಳು, ಸಂಗ್ರಹಗಳು ಪಡೆಯುವ ಸಮೀಕ್ಷಾ ಗಮನವನ್ನು ಕನ್ನಡದಲ್ಲಿ ಒಂದು ಶಾಸ್ತ್ರಗ್ರಂಥ, ವೈಜ್ಞಾನಿಕ ಗ್ರಂಥ ಪಡೆಯುವುದು ಅಪರೂಪ.

ಈ ಹಿನ್ನೆಲೆಯಲ್ಲಿ ಡಾ. ರಾಮಮನೋಹರ ಲೋಹಿಯಾ ತಮ್ಮ Mankind ಪತ್ರಿಕೆಯಲ್ಲಿ ಮಾಡುತ್ತಿದ್ದ ಪುಸ್ತಕಗಳ ಸಮೀಕ್ಷೆಯ ರೀತಿಯನ್ನು ಕನ್ನಡ ಓದುಗರ ಗಮನಕ್ಕೆ ತರಬೇಕೆನ್ನಿಸಿತು. ಈ ಎಲ್ಲ ಸಮೀಕ್ಷೆಗಳು ಕರ್ನಾಟಕ ಸರ್ಕಾರ ಪ್ರಕಟಿಸಿರುವ ಸಮಗ್ರ ಲೋಹಿಯಾ ಸಾಹಿತ್ಯದ ಎರಡನೆಯ ಸಂಪುಟವಾದ `ಉತ್ತರ ದಕ್ಷಿಣ' (ಪುಟಗಳು 225-228)ರಲ್ಲಿ ಇವೆ. ಈ ಎಲ್ಲ ಸಮೀಕ್ಷೆಗಳು ಓದುಗನನ್ನು ಕೆಣಕುತ್ತವೆ. ಆತನ ಆಸಕ್ತಿಗೆ ಕಾರಣವಾಗುತ್ತವೆ. ಪುಸ್ತಕ/ವಿಷಯಗಳ ಬಗ್ಗೆ ಓದುಗ ಸಮೀಕ್ಷೆಯಾಗುತ್ತಿರುವ ಕೃತಿಯಿಂದಾಚೆಗೂ ಮತ್ತೆ ಮತ್ತೆ ಯಾವ ಕೃತಿಗಳನ್ನು/ಯಾವ ಲೇಖಕನನ್ನು ಗಮನಿಸಬೇಕು ಎಂಬ ಸೂಚನೆಗಳನ್ನು ಕೂಡ ಕೊಡುತ್ತವೆ. ಪುಸ್ತಕವು ಓದುಗನ ಪ್ರಜ್ಞಾವಂತಿಕೆಗೂ, ಸಮಾಜದ ಬದುಕಿಗೂ ಆರೋಗ್ಯಕ್ಕೂ ಹೇಗೆ ಪ್ರಸ್ತುತ ಎಂಬುದನ್ನೂ ಕೂಡ ಸಮೀಕ್ಷೆ ಪರಿಶೀಲಿಸುತ್ತದೆ.

ಮೊದಲಿಗೆ ಗಮನ ಸೆಳೆಯುವುದು ಲೋಹಿಯಾ ಆಯ್ಕೆ ಮಾಡುವ ಪುಸ್ತಕಗಳ ವೈವಿಧ್ಯ. ಇತಿಹಾಸ, ರಾಜಕೀಯ, ಆಧ್ಯಾತ್ಮ, ಭಾಷಾಶಾಸ್ತ್ರ, ಜೀವನಚರಿತ್ರೆ, ಕಾವ್ಯ, ಅನುವಾದ, ಕತೆಗಳು, ಪುಟ್ಟ ಹುಡುಗಿಯೊಬ್ಬಳ ಕವನ ಸಂಕಲನ. ಬರೇ ಪುಸ್ತಕಗಳನ್ನು ಮಾತ್ರ ಲೋಹಿಯಾ ಆಯ್ಕೆ ಮಾಡುವುದಿಲ್ಲ. ಕಲ್ಲಚ್ಚಿನ ಪ್ರತಿಯೊಂದನ್ನೂ, ಮಾಸಿಕ ಪತ್ರಿಕೆಗಳು, ವಾರಪತ್ರಿಕೆಗಳನ್ನು ಕೂಡ ಆಯ್ಕೆ ಮಾಡಿಕೊಳ್ಳುತ್ತಾರೆ. ಪತ್ರಿಕೆಗಳ ವಿಶೇಷ ಸಂಚಿಕೆಗಳಿಗೆ/ಸಾಮಾನ್ಯ ಸಂಚಿಕೆಗಳಿಗೆ, ಸಂಶೋಧನಾ ಗ್ರಂಥಗಳಿಗೆ ನೀಡುವಷ್ಟು ಮಹತ್ವವನ್ನು ನೀಡುತ್ತಾರೆ. ಹಂಗೇರಿ ಕ್ರಾಂತಿ, ಚೈತನ್ಯದೇವನ ಬರಹ, ಚಿಂತನೆ, ಒರಿಸ್ಸಾದ ಸಂಖ್ಯಾಶಾಸ್ತ್ರ ಸಂಪುಟ, ಮಕ್ಕಳಿಗೆಂದು ಬರೆದ ಚರಿತ್ರೆಯ ಪಾಠಗಳ ಪುಸ್ತಕ, ಉರ್ದುಕವಿ ಇಲಹಾಬಾದಿ, ಹಿಂದಿ ಮಾತೃಭಾಷೆಯಲ್ಲದವನೊಬ್ಬನು ಹಿಂದಿಯಲ್ಲಿ ಬರೆದ ಕಥಾಸಂಕಲನ, ಇನ್ನೂ ಮುದ್ರಣವಾಗದೇ ಕಲ್ಲಚ್ಚಿನ ಪ್ರತಿಯಾಗೇ ಸಿಕ್ಕಿರುವ ನಾಗರಿಕ ಅಸಹಕಾರದ ಬಗ್ಗೆ ಚಿಂತನಾ ಸರಣಿ - ಹೀಗೆ ವೈವಿಧ್ಯ ಬೆಳೆಯುತ್ತಲೇ ಹೋಗುತ್ತದೆ. ಹೆರಾಲ್ಡ್ ಬ್ಲೂಮ್ ಮತ್ತು ಜಾರ್ಜ್ ಆರ್ವೆಲ್ ಇಂತಹವರ ಸಮೀಕ್ಷೆಗಳಲ್ಲಿ ಮಾತ್ರ ಇಂತಹ ವೈವಿಧ್ಯ ಮತ್ತು ದಿಟ್ಟತನ ಕಾಣುತ್ತದೆ.

ತಮ್ಮ ಓದುಗಾರಿಕೆ, ಸಮೀಕ್ಷಾ ರೀತಿಯ ಬಗ್ಗೆ ಲೋಹಿಯಾ ಹೀಗೆ ಬರೆದುಕೊಳ್ಳುತ್ತಾರೆ:
"ನಾನೇನು ಇಂಥದ್ದೇ ಪುಸ್ತಕ ಎಂದು ಸರಿಯಾಗಿ ಆಯ್ದು ಓದುವ ಓದುಗನಲ್ಲ. ಅಂಥ ಓದುಗರು ಎಲ್ಲಿರುತ್ತಾರೆ? ವಾಷಿಂಗ್ಟನ್ ಕಾಂಗ್ರೆಸ್‌ನ ಗ್ರಂಥ ಭಂಡಾರವನ್ನು ಬಳಸುವ ಅವಕಾಶವಿರುವವರು ಕೂಡ ಹೀಗೆ ಪಕ್ಕಾ ಆಯ್ಕೆಯ ಓದುಗರಲ್ಲ. ಕಡೆಯ ಪಕ್ಷ ಈ `ಆಯ್ಕೆ' ಎಂಬುದರ ಪೂರ್ಣ ಅರ್ಥದಲ್ಲಿ ಈ ತನಕ ಅಚ್ಚಾಗಿರುವ ಹಾಗೂ ಇದೀಗ ಅಚ್ಚಾಗುತ್ತಿರುವ ಎಲ್ಲವೂ ಈ ಗ್ರಂಥಾಲಯದಲ್ಲಿ ದೊರಕಲಾರದು. ಯಾರೋ ಒಬ್ಬರು ಇವನ್ನು ಆಯ್ದು ಇಲ್ಲಿಟ್ಟಿದ್ದಾರೆ. ಪೂರ್ವಾಗ್ರಹಗಳಿಂದಾಗಿಯೋ, ಅವರಿಗೆ ದೊರೆತ ಅಧಿಕಾರದಿಂದಾಗಿಯೋ ಈ ಬಗೆಯ ಆಯ್ಕೆ ಒಮ್ಮೊಮ್ಮೆ ತಪ್ಪಾಗಿರುತ್ತದೆ. ಹಾಗೆಯೇ ಸಂವಹನ, ಭಾಷೆ, ಮುಂತಾದ ನಿಜವಾದ ಸಮಸ್ಯೆಗಳ ಕಾರಣಕ್ಕಾಗಿಯೂ ಇಂಥ ತಪ್ಪುಗಳಾಗಿರಬಹುದು. ಶಸ್ತ್ರಾಸ್ತ್ರಗಳ ಅಥವಾ ಆರ್ಥಿಕ ಬಲವಿಲ್ಲದ ದೇಶಗಳ ಪುಸ್ತಕಗಳು, ಪತ್ರಿಕೆಗಳು ಹಾಗೂ ಇನ್ನಿತರ ಮುದ್ರಿತ ಸಾಹಿತ್ಯ ಸಾಮಾನ್ಯವಾಗಿ ಇಂಥ ಕಡೆ ದೊರೆಯುವುದಿಲ್ಲ. ಈ ಬಗೆಯ ಜಾಗತಿಕ ಸ್ಥಿತಿಯ ಹಿನ್ನೆಲೆಯಲ್ಲಿ ನಾನು ನನ್ನ ಪುಸ್ತಕಗಳನ್ನು ಆಯ್ಕೆಯಲ್ಲಿ ತೀರಾ ತರತಮ ವ್ಯತ್ಯಾಸ ಮಾಡದಿರುವುದರಿಂದ ನನ್ನ ಆಯ್ಕೆಗಳು ತೀರಾ ತಪ್ಪಾಗಿರಲಾರವು. ನನ್ನ ಗೆಳೆಯನೊಬ್ಬನಿದ್ದಾನೆ. ಅವನಿಗೆ ಓದುವುದೆಂದರೆ ಅಫೀಮು ಸೇವಿಸಿದ ಹಾಗೆ. ಹೀಗಾಗಿ ನಗರದಲ್ಲಿ ಸಿಕ್ಕ ಕಸವನ್ನೆಲ್ಲ ಕೊಂಡು ತರುತ್ತಾನೆ. ನಾನು ಅವನ ಮನೆಗೆ ಹೋದಾಗಲೆಲ್ಲ ಈ ಕಸದಿಂದ ಆಯ್ದ ಪತ್ರಿಕೆಗಳು ಹಾಗೂ ಓದಬಲ್ಲ ಸಾಹಿತ್ಯವನ್ನು ಹೆಕ್ಕಿ ತರುತ್ತೇನೆ. ಜೊತೆಗೆ ಕೆಲವರು ತಮ್ಮ ಪುಸ್ತಕಗಳನ್ನು, ಪ್ರಚಾರ ಸಾಹಿತ್ಯವನ್ನು ನನಗೆ ಕಳಿಸುತ್ತಿರುತ್ತಾರೆ. ಹೀಗಾಗಿ ಇಲ್ಲಿ ಯಶಸ್ವಿ ಪುಸ್ತಕಗಳಂತೆ ಅಷ್ಟು ಯಶಸ್ವಿಯಲ್ಲದ ಮುದ್ರಿತ ಸಾಹಿತ್ಯ ಕೂಡ ನನ್ನ ಮಟ್ಟಿಗೆ ಲಾಭದಾಯಕವೇ."
ಶ್ರೀ ಚೈತನ್ಯ ದೇವರನ್ನು ಕುರಿತ ಪುಸ್ತಕವನ್ನು ತಾನೇಕೆ ಸಮೀಕ್ಷೆ ಮಾಡುತ್ತಿದ್ದೇನೆಂದು ಗುರುತಿಸುವಾಗ ಹೀಗೆ ಬರೆಯುತ್ತಾರೆ:
"ತತ್‌ಕ್ಷಣದ ವಿದ್ಯಮಾನಗಳಿಂದ ಧಾರ್ಮಿಕ ಪುಸ್ತಕಗಳು ಹಾಗೂ ಮತ್ತಿತರ ಕಲಾತೀತವೆನಿಸುವ ವಿಷಯಗಳೆಡೆಗೆ ಚಲಿಸುವುದು ಕುತೂಹಲಕರವಾಗಿರಬಲ್ಲದು. ಇದು ಅವುಗಳ ಮೌಲ್ಯ ಕುರಿತ ವ್ಯಾಖ್ಯಾನವಲ್ಲ. ಹೊಡೆದಾಟ, ಬಡಿದಾಟಗಳ ಈ ಜಗತ್ತಿನಲ್ಲಿ ವಿವಿಧ ಪಂಗಡಗಳ ಭಕ್ತರಿಗೆ ಆಧ್ಯಾತ್ಮಿಕ ಅನುಭವಗಳು ಮನಶ್ಶಾಂತಿಯನ್ನು ಕೊಡುವ ಹಾಗೆ ಕಾಣುತ್ತದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಅನೇಕ ಸಲ ಇಂತಹ ಮನಶ್ಶಾಂತಿ ಜೀವನದ ಬಗೆಗಿನ ತಪ್ಪು ಕಲ್ಪನೆ ಮತ್ತು ಮೌಢ್ಯದ ತಳಹದಿಯ ಮೇಲೆ ನಿಂತಿರುತ್ತದೆ ಎಂಬುದು ಮಾತ್ರ ಅತ್ಯಂತ ವಿಷಾದನೀಯ..."
ಲೋಹಿಯಾ ಸಮೀಕ್ಷೆಗಳ ವೈಶಿಷ್ಟ್ಯವೆಂದರೆ ಪಂಡಿತರಂಜಕತೆಯಿಂದ ಪೂರ್ತಿ ತಪ್ಪಿಸಿಕೊಂಡಿರುವುದು. ಎಲ್ಲೂ ಎಡಬಿಡಂಗಿ ನಿಲುವುಗಳಿಲ್ಲ. ಅಡ್ಡಗೋಡೆಯ ಮೇಲೆ ದೀಪವಿಡುವ ಪ್ರವೃತ್ತಿಯೂ ಇಲ್ಲ. ಭಾಷೆ ಕೂಡ ನೇರ, ಹರಿತ, ಸರಳ ಮತ್ತು ನಿರ್ದಿಷ್ಟ. ಕೆಲವು ಉದಾಹರಣೆಗಳನ್ನು ನೋಡಿ:
"ಇಲಹಾಬಾದಿ ಅಕ್ಬರ್ ದೊಡ್ಡ ಕವಿಯೆಂದಾಗಲೀ, ಶ್ರೇಷ್ಠ ಕವಿಯೆಂದಾಗಲೀ ಕರೆಯುವುದು ತಪ್ಪು. ಆದರೆ ಆಧುನಿಕ ಭಾರತದ ಒಳ್ಳೆಯ ಮೈನರ್ ಕವಿಗಳ ಸಾಲಿನಲ್ಲಿ ಅಕ್ಬರ್‌ಗೆ ಸ್ಥಾನವಿದೆ ಎಂಬುದರಲ್ಲಿ ಅನುಮಾನವಿಲ್ಲ."
"ಟ್ವೆಂಟಿಯತ್ ಸೆಂಚುರಿಯಂಥ ನಿಯತ ಕಾಲಿಕ ಕೂಡ ಎಂಥ ವ್ಯಾಕರಣ ತಪ್ಪು ಮಾಡುತ್ತದೆ ನೋಡಿ; between ಹಾಗೂ or ಜೊತೆಗೂಡಿರುವುದನ್ನು ಗಮನಿಸಿ."
"ಯಾವ ಭಾಷೆ ತನ್ನ ಕೃತಿ ನಿರ್ಮಿತಿಗೆ ಒಗ್ಗಿ ಬರುವಂತೆ ಅತ್ಯಂತ ಆತ್ಮೀಯವಾಗಿರಲಾರದೋ ಅಂಥ ಭಾಷೆಯ ಸೆರೆಯಿಂದಲೂ ಲೇಖಕ ಮೊದಲು ಬಿಡಿಸಿಕೊಳ್ಳಬೇಕು."
"ಕವಿ ಅರುಣ್ ಅತ್ಯಂತ ಪರಿಶ್ರಮ ಪಟ್ಟು ಕೊನೆಗೊಮ್ಮೆ ಚಿನ್ನದಂಥ ಸಾಲು ಬರೆಯಬಲ್ಲ ಕವಿ."
"ಹೀಗೆ ಇತಿಹಾಸ ಎರಡು ರೀತಿಯ ಅಶಾಸ್ತ್ರೀಯತೆಗೆ ಮತ್ತು ಅಸತ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಒಂದು ಇಲ್ಲಿಂದ ಹಿಂದೆ ನೋಡುವುದು. ಇನ್ನೊಂದು ಹಿಂದೆ ನಿಂತು ಅಲ್ಲಿ ಕಂಡದ್ದನ್ನೇ ಮುಂದೆ ಚಾಚುವುದು. ಇತಿಹಾಸವನ್ನು ಅದು ಹೇಗೆ ಅಭಿನೀತವಾಗುತ್ತದೋ ಹಾಗೇ ಯಥಾವತ್ ನೋಡದಿರುವ ಒಂದೇ ದೋಷವೇ ಈ ಅಸತ್ಯಗಳೆಲ್ಲಕ್ಕೂ ಮೂಲ. ಇಡೀ ಪ್ರಪಂಚವನ್ನೇ ಕಣ್ಣಲ್ಲಿಟ್ಟುಕೊಂಡು ಈ ವಿಷಯವನ್ನು ಇನ್ನೊಮ್ಮೆ ಪ್ರತಿಪಾದಿಸಬೇಕೆಂದು ನನಗೆ ಆಸೆಯಿದೆ."
"......ಅತ್ಯಂತ ಚೆನ್ನಾಗಿ ಬರೆದು ಅಂಥ ಒಳ್ಳೆಯದೇನನ್ನೂ ಹೇಳದಿರುವ ಕಲೆ ಇಂಗ್ಲೀಷ್ ಲೇಖಕರಿಗೆ ಚೆನ್ನಾಗಿ ಗೊತ್ತು. ಹೆಚ್ಚು ನೀರಿಲ್ಲದಿದ್ದರೂ ಝುಳುಝುಳು ಹರಿವ ಹಳ್ಳದ ಹಾಗೆ ಅವರ ಬರವಣಿಗೆ."
ಕನ್ನಡ ಓದುಗರಿಗೂ ಸಮೀಕ್ಷಾ ಪಟುಗಳಿಗೂ ಆಸಕ್ತಿ ಕೆರಳಿಸಬಲ್ಲ ಒಂದು ಸಮೀಕ್ಷೆಯನ್ನು ಈ ಟಿಪ್ಪಣಿಗಳೊಡನೆ ಗಮನಿಸಬಹುದು.
ಇದು ಸರ್ ಎಂವಿಯವರ ವೃತ್ತಿಜೀವನದ ನೆನಪುಗಳು. ಲೋಹಿಯಾ ಎಂವಿಯವರನ್ನು ಭೇಟಿ ಮಾಡಿದ್ದರು. ಈ ಸಮೀಕ್ಷೆ ಎಂವಿಯವರ ಪುಸ್ತಕದ ಮೊದಲ ಆವೃತ್ತಿ ಬಂದಾಗಲೇ ಪ್ರಕಟವಾಗಿದ್ದರೂ, ಕನ್ನಡಾನುವಾದ ಕೂಡ ಮೂವತ್ತು ಮೂವತ್ತೈದು ವರ್ಷಗಳಿಂದ ಲಭ್ಯವಾಗಿದ್ದರೂ, ಎಂವಿ ಕುರಿತಂತೆ ಕನ್ನಡದ ಯಾವ ಪುಸ್ತಕಗಳಲ್ಲೂ ಇಂತಹ ಬಹುಶ್ರುತ ಸಂವೇದನಾಶೀಲ ಸಮೀಕ್ಷೆಯ ಉಲ್ಲೇಖವಿಲ್ಲ.(ಸಮೀಕ್ಷೆಯ ಅನುವಾದ ಮುಂದಿನ ಸಾರಿ)
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 19,2008ರ ಸಂಚಿಕೆಯಲ್ಲಿ ಪ್ರಕಟಿತ)
ಮುಂದೆ ಓದಿ....

Saturday, September 20, 2008

ಕವಿ ರಿಲ್ಕೆ ಕಂಡ ನಮ್ಮ ಕಿರಂ


ಸಾಂಸ್ಕೃತಿಕ ಲೋಕದ ಪೂರ್ವಪಕ್ಷ ಪ್ರವೀಣ

ಕಾವ್ಯದ ಸಮಗ್ರ ಮತ್ತು ಅಧಿಕೃತ ಓದುಗರು ಕರ್ನಾಟಕದಲ್ಲಿ ಯಾರು ಎಂಬ ಪ್ರಶ್ನೆ ಬಂದಾಗಲೆಲ್ಲ ಕುರ್ತಕೋಟಿ ಮತ್ತು ಅನಂತಮೂರ್ತಿಯವರ ಹೆಸರುಗಳ ಜೊತೆಯಲ್ಲೇ ಕಿರಂ ಹೆಸರು ಪ್ರಸ್ತಾಪಕ್ಕೆ ಬರುತ್ತದೆ. ಈ ಇಬ್ಬರು ಹಿರಿಯರಲ್ಲೂ ಇಲ್ಲದ ಒಂದು ವಿಶೇಷ ಶಕ್ತಿ ಕಿರಂ ನಾಗರಾಜರಲ್ಲಿ ಇದೆ. ಈ ಹಿರಿಯರಿಬ್ಬರು ಓದುಗರು, ಸೂಕ್ಷ್ಮ ವಿಮರ್ಶಕರು. ಆದರೆ ಕಿರಂ ವಿಶೇಷವಿರುವುದು ಕಾವ್ಯದೊಡನೆ ಇರುವ ಸಂಬಂಧದಲ್ಲಿ. ಕಾವ್ಯಮಂಡಲದ ಮಾಂಡಲೀಕರಾದ ಕಿರಂ ತಮಗೆ ಬೇಕಾದ ಕಾವ್ಯವನ್ನು ಬೇಕಾದಾಗ ಆವಾಹಿಸಿ ಮಂಡಲದೊಳಗೆ ದಿಗ್ಬಂಧನ ಹಾಕಿ ಕೂರಿಸಿ ತಮಗೆ ಬೇಕಾದಂತೆ ವರ್ತಿಸುವ ಹಾಗೆ ಮಾಡಬಲ್ಲರು. ಕೆಲವು ಕಾವ್ಯವನ್ನು ಭಕ್ತರ ರೀತಿಯಲ್ಲಿ ಆರ್ದ್ರವಾಗಿ ವಿನೀತವಾಗಿ ಬೇಡಿ ಪರಿತಪಿಸಬಲ್ಲರು. ಇನ್ನೂ ಕೆಲವು ರೀತಿಯ ಕಾವ್ಯಗಳನ್ನು ಸಖಿಯೊಬ್ಬಳು ಪ್ರಿಯಕರನ ಮೋಹಿಸುವಂತೆ, ಮುನಿಸಿನಿಂದ, ಕೆಣಕುವಿಕೆಯಿಂದ, ಪ್ರೀತಿಯಿಂದ, ಸ್ಪರ್ಶದಿಂದ ಒಳಗು ಮಾಡಿಕೊಳ್ಳುವರು. ಕಿರಂ ಮಂಡಲದಲ್ಲಿ ದಿಗ್ಬಂಧನದಲ್ಲಿ ಕೂತ ಕಾವ್ಯದ ಸಾಲುಗಳು, ಮಂಡಲದ ಆರಾಧನೆ - ಪೂಜೆ ಮುಂದುವರೆದಂತೆ ಹೊಸ ಹೊಸ ಕಾಣ್ಕೆ-ಅರ್ಥಗಳಿಂದ ಬೆಳಗುವುದನ್ನೂ, ಇಲ್ಲ ಕಿರಂ ಉತ್ಕಟವಾಗಿ ಬೆಳಗಿಸುವುದನ್ನು ಯಾರು ತಾನೇ ಕಂಡಿಲ್ಲ! ಮಾಂತ್ರಿಕ, ಭಕ್ತ, ಸಖಿ - ಈ ಮೂರೂ ಸ್ತರಗಳಲ್ಲಿ ಲೀಲಾಜಾಲವಾಗಿ ಓಡಾಡುತ್ತಾ ಕಾವ್ಯವನ್ನು ಕಿರಂ ಮೀಟುವ ರೀತಿಯನ್ನೂ ಯಾರಾದರೂ ಚಿತ್ರೀಕರಿಸಿ ದಾಖಲು ಮಾಡಿಕೊಳ್ಳಬೇಕು.

ಕಿರಂ ಓದು ಎಷ್ಟು ವ್ಯಾಪಕವಾದದ್ದು, ಆಳವಾದದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಕಿರಂರ ಎಷ್ಟೋ ಜನ ಸಹೋದ್ಯೋಗಿಗಳು ಸಮಕಾಲೀನರಲ್ಲಾದಂತೆ ಈ ಓದು ಒಣ ಜ್ಞಾನದರ್ಪವಾಗಲೀ, ಠೇಂಕಾರವಾಗಲೀ, ಪಾಂಡಿತ್ಯ ಪ್ರದರ್ಶನವಾಗಲೀ ಆಗಲಿಲ್ಲ. ಜನಪ್ರಿಯ ಮೇಷ್ಟ್ರಾಗಿದ್ದು ಕಿರಂ ಉಪದೇಶರತ್ನಿಯಾಗಲಿಲ್ಲ. ಕಿರಂರಲ್ಲಿ ಎಡೆಬಿಡದ ಓದುವಿಕೆ ಇರುವಂತೆ ನಿರಂತರವಾದ Unlearning ಕೂಡ ಇದೆ. ಈ Unlearningನ್ನು ಕಿರಂ ಸಾಧಿಸಿರುವುದಕ್ಕೆ ಎರಡು ಮುಖ್ಯ ಕಾರಣಗಳನ್ನು ಕೊಡಬಹುದು. ಒಂದು ಕಿರಂ ಸ್ವಭಾವದಲ್ಲೇ ಇರುವ ಇನ್ನಿಲ್ಲದ ಮುಗ್ಧತೆ ಮತ್ತು ಅಸಾಧಾರಣ ವಿನಯಶೀಲತೆ. ಇದು ಸ್ವಭಾವದ ಮಾತಾಯಿತು. ಇದಕ್ಕಿಂತ ಮುಖ್ಯವಾದದ್ದು ಕಿರಂರಿಗೇ ವಿಶಿಷ್ಟವಾದ ಪಠ್ಯಗಳ ಮರುಓದು (Rereading) ಪಠ್ಯವೊಂದರ ಮತ್ತೆ ಮತ್ತೆ ಎನ್ನುವಂತೆ ಕಿರಂ ಒಳಹೋಗುತ್ತಲೇ ಇರುವುದರಿಂದ ಪ್ರತಿ ಓದಿನ ಸಂದರ್ಭದಲ್ಲೂ ಒಟ್ಟಿಗೇ Learning ಮತ್ತು Unlearningನ್ನು ಕಿರಂ ಸಾಧಿಸುತ್ತಾರೆ. ಕಿರಂ ನೆನಪಿನ ಶಕ್ತಿ ಅಗಾಧವಾಗಿದ್ದು ಕೂಡ ಮತ್ತೆ ಮತ್ತೆ ಪಠ್ಯವನ್ನು ಮರುಪ್ರವೇಶಿಸುವುದರ ಮಹತ್ವವನ್ನು ನಾವು ಮರೆಯಬಾರದು. ಪಠ್ಯವೊಂದನ್ನು ಎಂದೋ ಓದಿದಾಗ ಸಿಕ್ಕಿದ ಭಾವ - ನೋಟ, ಇಲ್ಲಿ ಓದಿನ ನೆನಪಿಗೆ ನಾವು ಬದ್ಧವಾಗಿ ಬಿಟ್ಟರೆ ಕಲಿಯುವಿಕೆ ನಿಂತೇ ಹೋಗಿಬಿಡುತ್ತದೆ. ಕಾಲಾಂತರದಲ್ಲಿ ಪಠ್ಯವು ಕೂಡ ನಮ್ಮಂತೆ ಒಳಗೊಳಗೇ ಬೆಳೆದಿರುತ್ತದೆ. ಮಾಗಿರುತ್ತದೆ. ಹೀಗೆ ತಿಳಿಯಬೇಕಾದರೆ ಹಿಂದೆ ಕಲಿತದ್ದರ Unlearningಗೆ ನಾವು ಸಿದ್ಧರಾಗಬೇಕಾಗುತ್ತದೆ. ಇದರಿಂದ ಕಿರಂಗೆ ಒಂದು ಪಠ್ಯ ನೀಡುವ ಅರ್ಥದ ಬಗ್ಗೆ ಮಾತ್ರವೇ ತಲೆ ಕೆಡಿಸಿಕೊಳ್ಳದೆ, ಅದು ನೀಡುವ ಅನುಭವದ ಕಡೆಗೇ ಮುಖಮಾಡಲು ಸಾಧ್ಯವಾಗಿದೆ. ಕುರ್ತಕೋಟಿಯಂತಹವರ ವಿಶಾಲ ಓದು ನೆನಪಿನ ಭಾರದಿಂದ ಬಿಡುಗಡೆ ಪಡೆಯಲೇ ಇಲ್ಲ. ಎಸ್.ದಿವಾಕರರಂತವರ ಓದುಗಾರಿಕೆ, ಸಂವೇದನೆ-ಸೃಜನಶೀಲತೆಯಾಗಿ ಪರಿವರ್ತನೆಯಾಗಲೇ ಇಲ್ಲ. ಕೆ.ವಿ.ತಿರುಮಲೇಶರ ಈಚಿನ ಅಂಕಣ ಬರಹಗಳಲ್ಲಿ ಶ್ರೀಯುತರ ವಿಶಾಲವಾದ ಓದುವಿಕೆಯ ಜೊತೆಗೆ ಓದು, ಕೃತಿ ಮತ್ತು ಬದುಕಿನ ಬಗ್ಗೆ ಒಂದು ರೀತಿಯ ದಿಗ್ಭ್ರಮೆಯೂ ಇರುವುದರಿಂದ ಬರಹವು ಉಪದೇಶಾತ್ಮಕತೆ ಮತ್ತು ಮಾಹಿತಿಗಳಿಂದಾಚೆಗೆ ಸಂವಾದದ ಕಡೆಗೂ ಚಲಿಸುವುದನ್ನು ಗಮನಿಸಬಹುದು. ಕಿರಂ ಕಾವ್ಯಪ್ರೇಮವನ್ನು ಮಾತ್ರ ಕಲಿಯದೆ ಈ Unlearning ಗುಣವನ್ನು ಕೂಡ ನಾವೆಲ್ಲ ರೂಢಿಸಿಕೊಂಡರೆ ಎಷ್ಟು ಚೆನ್ನ.

ಈ ಹಿನ್ನೆಲೆಯಲ್ಲೇ ಕಿರಂಗೆ ಮೌಖಿಕ ಸಂಸ್ಕೃತಿ (oral culture) ಕಡೆಗೆ ಇರುವ ಒಲವನ್ನು ವಿಶ್ಲೇಷಿಸಬೇಕು. ಬರವಣಿಗೆಯ ತುಂಬಾ ಒಳ್ಳೆಯ ಮತ್ತು ತುಂಬಾ ಕೆಟ್ಟ ಗುಣವೆಂದರೆ ದಾಖಲಾಗುವ ಸ್ವಭಾವ. ಯಾವ ಭಾವ, ಯಾವ ವಿಚಾರವೂ ನಿರ್ದಿಷ್ಟವಲ್ಲ, ಅಂತಿಮವಲ್ಲ. ಪ್ರತಿ ಮರುಓದಿನಲ್ಲೂ ನಿರ್ಮಾಣವಾಗುವ ಭಾವ-ವಿಚಾರಗಳ ವಿನ್ಯಾಸವೇ ನಿಜವಾದದ್ದು ಎಂದು ನಂಬುವವರಿಗೆ ಬರವಣಿಗೆಯ ಮಿತಿಗಳು ಕೂಡ ಗೊತ್ತಿರುತ್ತವೆ. ಸಂಗೀತಗಾರನಿಗೆ ಪಠ್ಯವು ನಿರ್ದಿಷ್ಟವೆಂಬುದು ನಮ್ಮ ತಪ್ಪು ಕಲ್ಪನೆ. ಪ್ರತಿಸಲದ ಹಾಡುಗಾರಿಕೆಯಲ್ಲೂ, ಪ್ರತಿಸಲದ ಆಲಾಪನೆಯಲ್ಲೂ, ಪ್ರತಿ ವಿಳಂಬಿತ್‌ನಲ್ಲೂ ಪಠ್ಯಕ್ಕೆ ಹೊಸ ಜೀವ, ಹೊಸ ಭಾವ. ಕಿರಂ ಓದುಗಾರಿಕೆ, ಹಾಡುಗಾರಿಕೆಗೆ ತನ್ನನ್ನೇ ತೆತ್ತುಕೊಂಡ ಸಂಗೀತಗಾರನ ರೀತಿಯದು. ಈ ರೀತಿಯ ವೈಶಿಷ್ಟ್ಯವೆಂದರೆ ಓದುವಾಗ ತನ್ನೆಲ್ಲ ಒಳತೋಟಿಯೊಡನೆ ಓದಿ ಪಠ್ಯವನ್ನೇ ಉದ್ದೀಪಿಸುವುದು. ದ.ರಾ.ಬೇಂದ್ರೆ, ಗೋಪಾಲಕೃಷ್ಣ ಅಡಿಗರ ಎಷ್ಟೋ ಕವನಗಳ ಕಿರಂರ ಮರುಓದಿಗೆ ಸಾಕ್ಷಿಯಾಗಿರುವ ನಾನು ಪ್ರತಿ ಓದಿನಲ್ಲೂ ಕವನಗಳು ಹೊಸ ಅರ್ಥ, ಹೊಸ ಭಾವಗಳಲ್ಲಿ ಬೆಳಗಲು ಕಿರಂರ ಆವಾಹನೆಗೆ ಕಾಯುತ್ತಿರುವುದನ್ನು ಕಂಡು ಬೆರಗಾಗಿದ್ದೇನೆ. ಕಿರಂರ ಎರಡೂ ನಾಟಕಗಳು ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ - ಒಳತೋಟಿಯನ್ನೇ ಮೀಟುವುದನ್ನು, ಮೀಟಿದಾಗ ದಕ್ಕುವುದನ್ನೇ ಹಿಡಿಯಲು ಪ್ರಯತ್ನಿಸುತ್ತದೆಂದು ನನ್ನ ನೆನಪು. ಬರವಣಿಗೆ ವಿಪುಲವಾಗಿ, ಪ್ರವಾಹದೋಪಾದಿಯಲ್ಲಿ ಬರುತ್ತಿರುವ ಕನ್ನಡದ ಇಂದಿನ ಸಂದರ್ಭದಲ್ಲಿ ಕಿರಂರ ಮೌಖಿಕ ಸಂಸ್ಕೃತಿಯ ಒಲವು - ನಂಬಿಕೆಗಳ ಹಿಂದಿರುವ ಪ್ರೇರಣೆಗಳನ್ನು ಕುರಿತು ನಾವು ಗಂಭೀರವಾಗಿ ಯೋಚಿಸಬೇಕಿದೆ. ಅಕ್ಷರ ಜ್ಞಾನ ಮತ್ತು ಲಿಖಿತ ಸಂಸ್ಕೃತಿ - ಇವೆರಡನ್ನೂ ಕೂಡ ಹೆಚ್ಚಾಗಿ ಆಶ್ರಯಿಸದೆಯೂ ಪರಂಪರೆ, ತಿಳಿವಳಿಕೆ, ಜ್ಞಾನದ ವೃತ್ತಿ ಕೌಶಲ್ಯಗಳ ಸಾತತ್ಯವನ್ನು ಬಹುಕಾಲ ಕಾಪಾಡಿಕೊಂಡು ಬಂದ ನಮ್ಮ ಜೀವನ ಶೈಲಿಯ ಬಗ್ಗೆಯೂ ಕಿರಂರ ಹಿನ್ನೆಲೆಯಲ್ಲಿ ಯೋಚಿಸಬಹುದು.

ಕಾವ್ಯ ಮಂಡಲವೆಂಬುದು ಕಿರಂ ತಾವೇ ತಮ್ಮ ಸಂಸ್ಥೆಗೆ ಕೊಟ್ಟುಕೊಂಡಿರುವ ಹೆಸರು. ಆದರೆ ಕಿರಂರ ಜೀವನ ಶೈಲಿ ಚಾವಡಿಯಲ್ಲಿ ಹರಟೆ ಹೊಡೆಯುವವರ ಯಜಮಾನನ ಗತ್ತು, ಬಿಡುಬೀಸುತನ, ದರ್ಪಕ್ಕೆ ಹತ್ತಿರವಾದದ್ದು. ಕಾವ್ಯಮಂಡಲದ ನಿರ್ದಿಷ್ಟ ಮತ್ತು ಪೂಜನೀಯ ಆವರಣಕ್ಕಿಂತ ಚಾವಡಿಯ ವೈಶಾಲ್ಯ ಮತ್ತು ಅನೌಪಚಾರಿಕತೆಯೇ ಕಿರಂಗೆ ಹತ್ತಿರವಾದದ್ದು. ಕಿರಂ ನೋಡಿದಾಗಲೆಲ್ಲ ಮಂಡಲದ ಆಚಾರ್ಯ, ಅವಧಾನಿಗಳಿಗಿಂತ ಹೆಚ್ಚಾಗಿ ನೆನಪಿಗೆ ಬರುವುದು ಕಾವ್ಯ ಪ್ರಚಾರ-ಪ್ರಸಾರಕ್ಕೇ ತಮ್ಮನ್ನು ತೆತ್ತುಕೊಂಡು ಬದುಕುತ್ತಿದ್ದ ಕೀರ್ತನಕಾರರು, ತಂಬೂರಿದಾಸರು (BAROS) ಈ ಕಾರಣಕ್ಕೇ.

ಕಿರಂರಲ್ಲಿರುವ ಇನ್ನೊಂದು ಗುಣವನ್ನು ನನಗೆ ಅನುಕರಿಸಲು ಇಷ್ಟ. ಆದರೆ ಅಂತಹ ಅನುಕರಣೆಗೆ ಬೇಕಾದ ಸ್ವಭಾವ-ಪ್ರತಿಭೆ ನನ್ನದಲ್ಲ. ಮೇಲುನೋಟಕ್ಕೆ ಬಂಡುಕೋರನಾಗಿ, ಅರಾಜ್ಯ ಜೀವನಶೈಲಿಯ ಪ್ರತಿಪಾದಕನಾಗಿ ಕಾಣುವ ಕಿರಂರಲ್ಲಿರುವ ಆಂತರಿಕ ಸಂಯೋಜನೆ, ಶಿಸ್ತು ತುಂಬಾ ಅಪರೂಪದ್ದು. ಪುಸ್ತಕಗಳನ್ನು ಕ್ರಮಬದ್ಧವಾಗಿಯೂ, ಶಿಸ್ತಾಗಿಯೂ ಜೋಡಿಸಿಕೊಂಡು, ಬೇಕೆಂದಾಗ ವಿಚಾರಗಳನ್ನು ಅಡಿಟಿಪ್ಪಣಿಗಳ ಮೂಲಕ ಉಲ್ಲೇಖಿಸುವ ಶಿಸ್ತು ಕಿರಂದಲ್ಲ. ಎಲ್ಲ ತಿಳುವಳಿಕೆ, ವಿಚಾರಗಳು ಆಂತರಿಕವಾಗಿ ಸಂಯೋಜನೆಗೊಂಡಿರುವ ರೀತಿ ಕಿರಂರ ವಾಕ್‌ಪ್ರವಾಹದಲ್ಲಿ ಯಾರಿಗಾದರೂ ಗೋಚರಿಸುತ್ತದೆ. ನಮ್ಮಲ್ಲಿ ಕ್ಲೀಷೆಯಾಗಿರುವ ಮಾತಿನ ನೆರವಿನಿಂದಲೇ ಹೇಳುವುದಾದರೆ ಕಿರಂರ ಪ್ರತಿಭೆ ಸಂಶ್ಲೇಷಣಾ ರೀತಿಯದು, ವಿಶ್ಲೇಷಣಾತ್ಮಕವಾದದ್ದಲ್ಲ.

ಪ್ರಸಿದ್ಧ ಜರ್ಮನ್ ಕವಿ ರೈನ್‌‌ರ್ ಮರಿಯಾ ರಿಲ್ಕೆ ಬರೆದಿರುವ ಒಂದೇ ಒಂದು ಕಾದಂಬರಿ `ಮಾಲ್ಟ್ ಅಲೌಂಡ್ಸ್ ಬ್ರಿಗ್ಗನ ಟಿಪ್ಪಣಿ ಪುಸ್ತಕ' ಈಚೆಗೆ ಕೆ.ವಿ.ತಿರುಮಲೇಶರಿಂದ ಕನ್ನಡದಲ್ಲಿ ಅನುವಾದಗೊಂಡು ಪ್ರಕಟವಾಗಿದೆ. (ಅಭಿನವ ಪ್ರಕಾಶನ ಬೆಂಗಳೂರು 2008). ರಿಲ್ಕೆ ಕಿರಂರನ್ನು ಕಂಡು ಭೇಟಿ ಮಾಡಿ, ಸಾಕಷ್ಟು ಒಡನಾಡಿ ಈ ಕೆಳಗಿನ ಸಾಲುಗಳನ್ನು ಬರೆದಂತಿದೆ.
ರಾಷ್ಟ್ರೀಯ ಗ್ರಂಥಾಲಯ
ಇಲ್ಲಿ ನಾನು ಕೂತಿದ್ದೇನೆ. ಒಬ್ಬ ಕವಿಯನ್ನು ಓದುತ್ತ. ಓದುವ ಕೊಠಡಿಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆದರೆ ನನಗವರ ಅರಿವಿಲ್ಲ. ಅವರು ಗ್ರಂಥಗಳ ಒಳಗಿದ್ದಾರೆ. ಕೆಲವು ಸಲ ಅವರು ಆಚೀಚೆ ಸರಿಯುತ್ತಾರೆ. ಪುಟಗಳ ಒಳಗಡೆ, ಎರಡು ಕನಸುಗಳ ನಡುವೆ ಮಗ್ಗಲು ಬದಲಿಸುವ ನಿದ್ರಾಧೀನರಂತೆ. ಆಹಾ! ಓದುವವರ ಮಧ್ಯೆ ಇರುವುದೆಂದರೆ ಅದೆಷ್ಟು ಸೊಗಸು. ಜನ ಯಾವಾಗಲೂ ಯಾಕೆ ಹಾಗಿಲ್ಲ?
****
ಮತ್ತು ನಾನಿಲ್ಲಿ ಕವಿಯ ಜೊತೆ ಕೂತಿದ್ದೇನೆ. ಎಂಥ ಅದೃಷ್ಟ ನನ್ನದು. ಸದ್ಯ ಇಲ್ಲಿ ಮುನ್ನೂರು ಮಂದಿ ಇದ್ದಾರು. ಎಲ್ಲರೂ ಓದುವವರೇ. ಆದರೆ ಪ್ರತಿಯೊಬ್ಬನಿಗೂ ಒಬ್ಬ ಕವಿಯಿರಬೇಕೆಂದರೆ ಅಸಾಧ್ಯ. (ಅವರಿಗೇನಿದೆಯೋ ದೇವರಿಗೇ ವೇದ್ಯ). ಮುನ್ನೂರು ಮಂದಿ ಕವಿಗಳಿಲ್ಲ. ಆದರೆ ಯೋಚಿಸಿ ನೋಡಿ, ಬಹುಶಃ ಈ ಓದುಗರಲ್ಲೆಲ್ಲಾ ಅತ್ಯಂತ ದೈನೇಸಿಯೂ ಹಾಗೂ ವಿದೇಶಿಯನೂ ಆದ ನನಗೆ ದೈವ ಏನು ಬಗೆದಿದೆ ಎಂಬುದನ್ನು. ನನಗೊಬ್ಬ ಕವಿಯಿದ್ದಾನೆ. ನಾನು ದರಿದ್ರನಾಗಿದ್ದೂ ನಾನು ದಿನಂಪ್ರತಿ ತೊಡುವ ಸೂಟು ಕೆಲವು ಕಡೆ ತೇಪೆಯಾಗಿರಲು ತೊಡಗಿದ್ದರೂ ಮತ್ತು ಕೆಲವು ವಿಧಗಳಲ್ಲಿ ನನ್ನ ಶೂಗಳು ಖಂಡನಾತೀತವಾಗಿರದೆ ಇದ್ದರೂ.' (ಪುಟ 26-27).

(ದಿನಾಂಕ 31ಆಗಸ್ಟ್ 2008ರ ಸಾಪ್ತಾಹಿಕ ಪ್ರಭ (ಕನ್ನಡಪ್ರಭದ ಭಾನುವಾರದ ಪುರವಣಿ)ದಲ್ಲಿ ಪ್ರಕಟಿತ.)
ಮುಂದೆ ಓದಿ....