
ಗೃಹಕೃತ್ಯಕ್ಕೆ ಸಂಬಂಧಿಸಿದಂತಹ ಒಂದು ಸಂಗತಿಯನ್ನು ನಮ್ಮ ತಾಯಿ ನನಗೆ ಹೇಳುತ್ತಿದ್ದಾಗ, ನಾನು ಅನ್ಯಮನಸ್ಕನಾಗಿ ಕೇಳಿಸಿಕೊಳ್ಳುತ್ತಿದ್ದೆ. ನನ್ನ ಅನ್ಯಮನಸ್ಕತೆಯಿಂದ ನಮ್ಮ ತಾಯಿಗೆ ರೇಗಿ ಹೀಗೆಂದು ಬೈದರು. "ಏನು ಯಾವಾಗಲೂ ನಿನಗೆ ಕತೆಗಳ ಗುಂಗು. ಕತೆಗಳಿಗೇನು ಯಾವಾಗಲೂ ಇರುತ್ತವೆ. ಸಾಯೋತನಕ ಇರುತ್ತವೆ...." ಇತ್ಯಾದಿ. ನಮ್ಮ ತಾಯಿ ಆಡಿದ ಮಾತಿನ ಎಳೆಯನ್ನು ಹಿಡಿದು, ಕತೆಗಳ ರಚನೆಯನ್ನು ಕುರಿತು ನನ್ನ ನಿಲುವನ್ನೂ ವಿವರಿಸುತ್ತೇನೆ.
ಆಧುನಿಕತೆ, ವಿಶೇಷವಾಗಿ, ನವ್ಯತೆ ನಮ್ಮ ಕಥಾಸಾಹಿತ್ಯದಲ್ಲಿ ಪ್ರವೇಶಿಸಿದ ಮೇಲೆ ಕತೆಗಳೆಂದರೆ ಅದೇನೋ ವಿಶೇಷ ಪದಾರ್ಥವೆಂಬಂತೆ, ಕತೆಗಾರನೆಂದರೆ ಒಬ್ಬ ಅದ್ಭುತ ವ್ಯಕ್ತಿಯಂತೆ ಕಾಣುವ ಪರಿಪಾಠ ನಮ್ಮಲ್ಲಿ ರೂಢಿಗೆ ಬಂದಿದೆ. ಇದಕ್ಕನುಗುಣವಾಗಿ ಕತೆಗಾರರು ಕೂಡ ತಾವು ಇತರರಿಗಿಂತ ಬಹು ಭಿನ್ನರೆಂಬಂತೆ ‘ಶೈಲೀಕೃತ ಅಹಂ’ನಿಂದಲೇ ವರ್ತಿಸುತ್ತಾರೆ. ನನಗೆ ಯಾವತ್ತೂ ಹಾಗನಿಸಿಲ್ಲ. ಕ್ಯಾಥರೀನ್ ಪೋರ್ಟರಳ ಪ್ರಕಾರ ಬರಹಗಾರ ಸಮಾಜದಿಂದ, ಸಮಾಜದಲ್ಲಿ ಯಾವ ವಿಶಿಷ್ಟ ಸ್ಥಾನವನ್ನೂ ಬೇಡಕೂಡದು. ಎಲ್ಲರಂತಿದ್ದು, ಎಲ್ಲರ ಬದುಕಿನ ಬಗ್ಗೆ ಬರೆಯುವುದನ್ನು ಓದಲು ಉಳಿದೆಲ್ಲರಿಗೂ ಆಸಕ್ತಿಯಿರುತ್ತದೆಯೇ ಹೊರತು ತಾನೊಬ್ಬ ಮಹಾ, ತಾನೊಬ್ಬ ವಿಶೇಷ ಎಂದು ಭಾವಿಸಿಕೊಂಡು ಇತರರ ಬಗ್ಗೆ ‘ಧೋರಣೆ’ಯಿಂದ ಬರೆದ ಬರವಣಿಗೆಯನ್ನು ಉಳಿದವರು ಏಕೆ ಓದಬೇಕೆಂಬುದು ಅವಳ ಪ್ರಶ್ನೆಯಿದ್ದಂತೆ ಕಾಣುತ್ತದೆ.
ಕತೆಗಳು ಇರುತ್ತವೆ ಹಾಗೆಂದರೇನು ವಿವರಿಸಿ ಎಂದು ನೀವು ಕೇಳಿದರೆ ಸ್ವಲ್ಪ ಕಷ್ಟವೇ. ವಾತಾವರಣದಲ್ಲಿ ಗಾಳಿ ಇದೆ ಎಂದು ಹೇಳಿದಾಗ ನೀವು ಸಾಧಿಸಿ ತೋರಿಸಲೇ ಬೇಕಿಲ್ಲವಷ್ಟೆ. ಹಾಗೆಯೇ ಕತೆಗಳು ಕೂಡ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಕತೆ, ಕತೆಗಾರಿಕೆ ಎನ್ನುವುದು ಊಟ, ನಿದ್ರೆ, ಪ್ರೀತಿ, ಮೈಥುನಗಳಷ್ಟೆ ಸಹಜವಾದ್ದು, ನೈಸರ್ಗಿಕವಾದ್ದು.
ಕತೆ ಬರೆಯುವವರು ಮಾತ್ರ ಕತೆಗಾರರೆಂದು ಪೋಸು ಕೊಟ್ಟರೆ ನನಗೆ ನಗು ಬರುತ್ತದೆ. ನಾವೆಲ್ಲರೂ ನಮ್ಮ ಬದುಕಿನ ಬಹಳ ಕಾಲವನ್ನು ಕತೆ ಹೇಳುವುದರಲ್ಲಿ ಕೇಳಿಸಿಕೊಂಡ ಕತೆಯನ್ನು ಇನ್ನೊಬ್ಬರಿಗೆ ನಮ್ಮ ನಮಗೆ ಬೇಕಾದ ರೀತಿಯಲ್ಲಿ ಹೇಳುವುದರಲ್ಲಿ ಕತೆ ಕೇಳಿಸಿಕೊಳ್ಳುವುದರಲ್ಲೇ ಕಳೆಯುತ್ತೇವೆ. ಕತೆಗಳೇ ಹೀಗೆ. ನಾವು ಎಚ್ಚರವಾಗಿದ್ದಾಗ, ನಿದ್ರೆಯಲ್ಲಿದ್ದಾಗ, ಕನಸಿನಲ್ಲಿದ್ದಾಗ, ಒಂಟಿಯಾಗಿದ್ದಾಗ, ಗುಂಪಿನಲ್ಲಿದ್ದಾಗ ಯಾವಾಗಲೂ ತಮ್ಮ ಪಾಡಿಗೆ ತಾವು ಬೆಳೆಯುತ್ತಿರುತ್ತವೆ. ಒಂದು ಉಚ್ಛ್ವಾಸ, ಒಂದು ನಿಶ್ಶ್ವಾಸದ ನಡುವೆ ಕಾಲ ಸರಿದು ವಯಸ್ಸಾಗುವಂತೆ ಕತೆಗಳಿಗೂ ಕೂಡಾ ವಯಸ್ಸಾಗಿ ಬೆಳೆಯುತ್ತಾ ಹೋಗುತ್ತವೆ.
ಮಿತ್ರರಾದ ಶ್ರೀ ಜಿ.ರಾಜಶೇಖರ್, ನನ್ನ ‘ನಿಮ್ಮ ಮೊದಲ ಪ್ರೇಮದ ಕತೆ’ ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ, ನಾನು ಬರೆಯುವ ಶೈಲಿಯಲ್ಲಿ ಪಕ್ಕದ ಮನೆಯವರ ಕಷ್ಟ ಸುಖಗಳನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ ಕತೆ ಮಾಡಿಬಿಡಬಹುದು ಎಂದು ಹೇಳಿದರು. ನನಗಿರುವ ಆಸೆ ಅದೆ. ಆದರೆ ಈ ಕೆಲಸಕ್ಕೆ ಬಹಳ ಪ್ರತಿಭೆ, ಪ್ರೀತಿ ಬೇಕು. ಆಸೆಯಿದ್ದರೆ ಮಾತ್ರ ಸಾಲದು.
ಕತೆಗಾರರೊಬ್ಬರು ಹೇಳಿದ ಮಾತು ನೆನಸಿಕೊಂಡರೆ ಭಯವಾಗುತ್ತದೆ. ಹೇಳಬೇಕಾದ ಕತೆಗಳನ್ನು ಈಗಾಗಲೇ ಹೇಳಿಯಾಗಿದೆ. ಇನ್ನು ಹೊಸ ಕತೆಗಳೇ ಇಲ್ಲ ಎಂದು ಅಪ್ಪಣೆ ಕೊಡಿಸಿದವರು ಅವರು. ಬೇರೆ ಮಾತುಗಳಲ್ಲಿ ಅವರು ಹೇಳಿದ್ದೇನೆಂದರೆ ‘ಇನ್ನು ನಾವು ಕಾಣುವ ಅಗತ್ಯವಿಲ್ಲ’ವೆಂದು. ನಮ್ಮ ಸುತ್ತಮುತ್ತಲ ಪ್ರಪಂಚವನ್ನು, ಪದಾರ್ಥಗಳನ್ನು ಕಾಣದೆ, ಕಾಣಿಸದೇ ನಾವು ಬದುಕುವುದೆಂದರೆ ಆಯಸ್ಸು ಎಂಬುದು ಒಂದು ಶಿಕ್ಷೆಯಲ್ಲದೆ ಮತ್ತೇನು?

ನಾನು ಕತೆಗಳನ್ನು, ಕತೆಗಾರಿಕೆಯನ್ನು ಸರಳೀಕರಿಸುತ್ತಿಲ್ಲ. ಹಾಗಂತ ಇದೆಲ್ಲವನ್ನು ಏನೋ ವಿಶೇಷವಾದದ್ದು ಎಂದು ನೋಡುವುದರಲ್ಲೂ ನನಗೆ ನಂಬಿಕೆಯಿಲ್ಲ. ನನ್ನ ಮಟ್ಟಿಗಂತೂ ಒಬ್ಬ ಕತೆಗಾರ ಅದೆಷ್ಟು ಕತೆಗಳನ್ನು ಬರೆಯುತ್ತಾನೆ, ಅದೆಷ್ಟು ಕಲಾತ್ಮಕವಾಗಿ ಬರೆಯುತ್ತಾನೆ ಎಂಬುದು ಮುಖ್ಯ ಸಂಗತಿಯೇ ಅಲ್ಲ. ಮನುಷ್ಯನಾಗಿ ಅವನು ಎಷ್ಟನ್ನು ಕಾಣುತ್ತಾನೆ, ಕಂಡ ಪದಾರ್ಥಗಳ ಸಂಗತಿಗಳ ಪರಸ್ಪರ ಸಂಬಂಧವನ್ನು ಎಷ್ಟರ ಮಟ್ಟಿಗೆ ತಿಳಿಯುತ್ತಾನೆ ಎಂಬುದು ನನಗೆ ಮುಖ್ಯ. ಇದಕ್ಕೂ ಕತೆಗಾರಿಕೆಗೂ ಸಂಬಂಧವಿಲ್ಲವೆನ್ನಬೇಡಿ. ಹಾಗೆ ಕಾಣುವವನು ನಮಗೂ ಕಾಣಿಸದೆ ಬಿಟ್ಟಾನೆ. ಆದರೆ ಅವನು ಕಾಣುವುದು, ಕಾಣಿಸುವುದು ಎಲ್ಲವೂ ಉಸಿರಾಟದಂತೆ, ಪ್ರೀತಿಯಂತೆ, ಚಿಟ್ಟೆಯ ಹಾರಾಟದಂತೆ, ಸಹಜವಾಗಿರುತ್ತದೆ, ಪ್ರಾಸಂಗಿಕವಾಗಿರುತ್ತದೆ. ತುಂಬಾ Elemental ಕೂಡಾ ಆಗಿರುತ್ತದೆ. "ಏನು ನೀನು ಹೇಳುವುದು, ಜಗತ್ತಿನಲ್ಲಿರುವವರೆಲ್ಲರೂ ಕತೆಗಾರರೋ, ಹಾಗಾದರೆ ನಮ್ಮ ಪ್ರತಿಭೆ, ಸೃಜನಶೀಲತೆ ಇವುಗಳಿಗೇನು ಬೆಲೆಯೇ ಇಲ್ಲವೆ" ಎಂದು ಕತೆಗಾರ ಮಿತ್ರರು ಮುನಿಯುವುದು ಬೇಡ. ಏಕೆಂದರೆ ಕೇವಲ ರಚಿಸುವ, ಶಿಲ್ಪಿಸುವ ಕತೆಗಳ ಬಗ್ಗೆ ನನಗೆ ಕೊಂಚವೂ ಆಸಕ್ತಿಯಿಲ್ಲ. ನನ್ನ ಆಸಕ್ತಿ ಏನಿದ್ದರೂ ನಮ್ಮಗಳ ಜೊತೆಯೇ ಬೆಳೆಯುವ, ಬದುಕುವ ಕತೆಗಳ ಬಗ್ಗೆಯೇ. ನಿಮಗಾಗಿ ನೀವು ಬರೆಯುವ ಕತೆಗಳನ್ನು ನಾನು ಓದದಿದ್ದರೂ ನಡೆದೀತು. ನನ್ನ ಜೊತೆಯೇ ಇರುವ, ನನ್ನೆದುರಿಗೆ ಇರುವ ಕತೆಗಳನ್ನ ಕಾಣದಿದ್ದರೆ ಹೇಗೆ.

(‘ಸಂಚಯ’ ಬೆಂಗಳೂರು, 1994.)
ಮುಂದೆ ಓದಿ....