Sunday, January 25, 2009

ಗಾಂಧಿ ಓದಿದ್ದು ಬರೆದಿದ್ದು


ಗಾಂಧಿಯವರ ವ್ಯಕ್ತಿತ್ವಕ್ಕೆ ನಾನಾ ಆಯಾಮಗಳು. ಸಂತ, ರಾಜಕಾರಣಿ, ಸಂಘಟನಾ ಚತುರ, ಪಟ್ಟುಬಿಡದ ಮೌಲ್ಯಾನ್ವೇಷಕ, ರಾಜಕಾರಣದಲ್ಲಿದ್ದೂ ಅಧ್ಯಾತ್ಮದ ಹುಡುಕಾಟದಲ್ಲಿ ನಿರತನಾದವ - ಹೀಗೆ ಪಟ್ಟಿ ಬೆಳೆಸುತ್ತಲೇ ಹೋಗಬಹುದು. ಈ ಎಲ್ಲ ಆಯಾಮಗಳನ್ನು ಬಂಧಿಸಿದ್ದ ಏಕಸೂತ್ರವೆಂದರೆ ಗಾಂಧಿಯವರ ವ್ಯಕ್ತಿತ್ವದ ನಿರಂತರ ವಿಕಾಸ. ಈ ವಿಕಾಸಕ್ಕೆ ಬೆನ್ನೆಲುಬಾಗಿದ್ದುದು ಗಾಂಧಿಯವರಿಗೆ ವಿಶಿಷ್ಟವಾಗಿದ್ದ ನಿರಂತರ ಓದು ಮತ್ತು ಬರವಣಿಗೆ. ನಾವು ಗಾಂಧಿ ಕುರಿತ ಚರ್ಚೆಯಲ್ಲಿ ಅವರಿಗೆ ವಿಶಿಷ್ಟವಾಗಿದ್ದ, ಅವರೇ ರೂಪಿಸಿಕೊಂಡಿದ್ದ ಓದು ಮತ್ತು ಬರವಣಿಗೆಯ ರೀತಿಯ ಬಗ್ಗೆ ಹೆಚ್ಚು ಗಮನ ಕೊಟ್ಟಂತಿಲ್ಲ.

ನಿಜ, ಗಾಂಧಿ ಸಾಹಿತಿಯಲ್ಲ, ಕವಿಯಲ್ಲ, ಬರೆದಿರುವುದು ಕೂಡ ಎರಡೇ ಪುಸ್ತಕಗಳು - ಮೊದಲನೆಯದು ಹಿಂದ್ ಸ್ವರಾಜ್ ಮತ್ತು ಎರಡನೆಯದು ಆತ್ಮ ಚರಿತ್ರೆ. ಆದರೆ ಅವರ ಪತ್ರಿಕಾ ಬರಹಗಳು, ಕರಪತ್ರ, ಪತ್ರಸಾಹಿತ್ಯ - ಇವೆಲ್ಲವನ್ನೂ ಸೇರಿಸಿದರೆ ಸುಮಾರು 55 ಸಾವಿರ ಪುಟಗಳಾಗುತ್ತವೆ. ಈ ಕಾರಣಕ್ಕೆ ಮಾತ್ರವಲ್ಲದೆ ಇನ್ನೂ ಎರಡು ಮುಖ್ಯ ಕಾರಣಗಳಿಗಾಗಿ ಗಾಂಧಿಯವರ ಓದುಗಾರಿಕೆ-ಬರವಣಿಗೆಯ ರೀತಿಯನ್ನು ಗಮನಿಸಬೇಕಾಗಿದೆ. ಗಾಂಧಿಯವರ ಹಿಂದ್ ಸ್ವರಾಜ್ ಗೆ ಮುಂದಿನ ವರ್ಷ ನೂರು ವರ್ಷ ತುಂಬುತ್ತದೆ. ಶತಮಾನೋತ್ಸವಕ್ಕೆ ಸಿದ್ಧತೆಗಳಾಗುತ್ತಿವೆ. ಸಮೂಹ ಮಾಧ್ಯಮಗಳ ಪ್ರಭಾವದ ದೆಸೆಯಿಂದಾಗಿ ಓದುವ, ಬರೆಯುವ ಆಸಕ್ತಿ ಕಡಿಮೆಯಾಗುತ್ತಿದೆ. ಜತೆಗೆ ಸಾಹಿತ್ಯ-ಸಾಂಸ್ಕೃತಿಕ ವಲಯಗಳಲ್ಲಿ ನಡೆಯುತ್ತಿರುವ ಓದು, ಬರವಣಿಗೆಯು ಬಹುಪಾಲು ವೃತ್ತಿಪರ ವ್ಯಸನವಾಗಿಯೋ, ಹಾಗಲ್ಲದೆ ಹೋದಾಗ ಹವ್ಯಾಸಿಶೀಲರ ವಾರಾಂತ್ಯದ ಮನರಂಜನೆ-ಸಮಾರಂಭಗಳ ಶೋಕಿಯಾಗಿಯೋ ಆಗುವ ಹಂತಕ್ಕೆ ಬಂದು ನಿಂತಿದೆ. ತಾನೊಬ್ಬ ಸಾಹಿತಿ-ಪಂಡಿತನೆಂದು ತಿಳಿಯದ ಒಬ್ಬ ಮನುಷ್ಯ, ತನ್ನ ಅಂತರಂಗದ ವಿಕಾಸಕ್ಕೆ ಪೂರಕವಾಗಿ ಓದಲು-ಬರೆಯಲು ಹೊರಟಾಗ ಹೇಗಿರುತ್ತದೆ ಎಂಬುದನ್ನು ಗಾಂಧಿಯವರ ವ್ಯಕ್ತಿತ್ವದಿಂದ ತಿಳಿಯಬಹುದು. ಹೀಗೆ ತಿಳಿಯುವ ಮೂಲಕ ಶಿಥಿಲವಾಗುತ್ತಿರುವ ಓದು ಸಂಸ್ಕೃತಿಗೆ ಹೊಸ ಚಾಲನೆ ಕೊಡಬಹುದು.

ಟ್ಯಾಗೋರರಂತೆ ನಾನು ಕವಿಯಲ್ಲ!
ಗಾಂಧಿ ಹೆಚ್ಚು ಪುಸ್ತಕಗಳನ್ನು ಓದಿದವರಲ್ಲ. ಓದಲು ಆಸೆಪಟ್ಟವರೂ ಅಲ್ಲ. ಕವಿ, ಸಾಹಿತಿಯಾಗಬೇಕೆಂಬ ಹುಚ್ಚು ಕೂಡ ಇರಲಿಲ್ಲ. ರವೀಂದ್ರರಂತೆ ತಾನೇನು ಕವಿಯಲ್ಲ. ಹೊಸದೇನನ್ನೂ ಸೃಷ್ಟಿಸಲಾರೆ. ಹಾಗಾಗಿ ಸತ್ಯ, ಅಹಿಂಸೆಯಂತಹ ಪುರಾತನ ಕಲ್ಪನೆಗಳನ್ನು ತಾನು ಮತ್ತೆ ಮತ್ತೆ ಶೋಧಿಸಬೇಕೆಂದು ಗಾಂಧಿ ಪದೇ ಪದೆ ಹೇಳಿಕೊಳ್ಳುತ್ತಿದ್ದರು - ಸ್ವಲ್ಪ ತಮಾಷೆಯಿಂದ, ಸ್ವಲ್ಪ ಗಾಂಭೀರ್ಯದಿಂದ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಓದಿದ್ದು ಕೂಡ ಕೆಲವೇ ಪುಸ್ತಕಗಳು. ರಾಮಾಯಣವನ್ನು ಓದಲು ಪ್ರಾರಂಭಿಸಿದ್ದು - ಭೂತ, ಪಿಶಾಚಿಗಳ ಭಯದಿಂದ ಪಾರಾಗಲು ಪಾರಾಯಣವೊಂದೇ ದಾರಿಯೆಂದು ಬಂಧುಗಳೊಬ್ಬರು ಹೇಳಿಕೊಟ್ಟಿದ್ದರಿಂದ! ವಿದ್ಯಾಭ್ಯಾಸದ ದಿನಗಳಲ್ಲಿ ಪಠ್ಯಪುಸ್ತಕಗಳಿಂದಾಚೆಗೆ ಓದಲಿಲ್ಲ. ಸಕ್ರಿಯವಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿದ ಮೇಲೆ ಓದಲು ಸಮಯವೇ ಸಿಗಲಿಲ್ಲ. ಹಾಗಾಗಿ ನನ್ನ ಪುಸ್ತಕ ಜ್ಞಾನ ತುಂಬಾ ಕಡಿಮೆಯಾಯಿತು. ಆದರೆ ಇದರಿಂದಾಗಿ ತನಗೇನೂ ನಷ್ಟವಾಗಲಿಲ್ಲ. ಸೀಮಿತ ಓದಿನಿಂದಾಗಿ ಓದಿದ ಪುಸ್ತಕಗಳನ್ನೆಲ್ಲ ಚೆನ್ನಾಗಿ ಮನನಮಾಡಲು ಸಾಧ್ಯವಾಯಿತು ಎಂದೇ ಆತ್ಮಚರಿತ್ರೆಯಲ್ಲಿ ಗಾಂಧಿ ಬರೆದುಕೊಂಡಿದ್ದಾರೆ. ಇಂಗ್ಲೆಂಡಿಗೆ ಓದುವುದಕ್ಕೆ ಹೋದ ಮೇಲೆ ತಾಯಿಗೆ ವಚನಕೊಟ್ಟಿದ್ದಂತೆ ಸಸ್ಯಾಹಾರಿಯಾಗಿ ಉಳಿಯಲು ಸಸ್ಯಾಹಾರಿ ಸಂಘಟನೆಯವರು ಪ್ರಕಟಿಸುತ್ತಿದ್ದ ಪುಸ್ತಕಗಳನ್ನೇ, ಕರಪತ್ರಗಳನ್ನೇ ಓದುತ್ತಿದ್ದುದು. ಬರೆಯುತ್ತಿದ್ದುದು ಕೂಡ ಸಂಘಟನೆಯ ಪತ್ರಿಕೆಗಳಿಗೇ. ಒಳಮನಸ್ಸಿನ, ಒಳಹಸಿವಿನ ತೀವ್ರತೆಗೆ, ಅಗತ್ಯಕ್ಕೆ ಬೇಕಾದಷ್ಟು ಓದುವುದನ್ನು, ಬರೆಯುವುದನ್ನು ಗಾಂಧಿ ಇಲ್ಲಿಂದಲೇ ಪ್ರಾರಂಭಿಸಿದಂತೆ ಕಾಣುತ್ತದೆ. 19ನೇ ವರ್ಷದಲ್ಲಿ ದಿನಚರಿ ಬರೆಯಲು ಶುರುವಿಟ್ಟುಕೊಂಡ ಗಾಂಧಿಯ ಆ ದಿನದ ದಿನಚರಿಗಳಲ್ಲೂ ಕಾಣುವುದು ಒಳಮನಸ್ಸಿನ ತಾಕಲಾಟದ ದಾಖಲೆಯೆ. ಜೀವನದಲ್ಲಿ ಯಾರನ್ನೂ ಯಾರೂ ಆಕಸ್ಮಿಕವಾಗಿ ಭೇಟಿ ಮಾಡುವುದಿಲ್ಲ ಎಂಬ ಗಾದೆ ಮಾತಿನಂತೆ ಸಸ್ಯಾಹಾರಿಗಳ ಸಂಘಟನೆಯ ಮೂಲಕವೇ ಗಾಂಧಿ ಬುದ್ಧ-ಭಗವದ್ಗೀತೆಯ ಬಗ್ಗೆ ಬರೆದಿದ್ದ ಎಡ್ವಿನ್ ಆರ್ನಾಲ್ಡ್, ಭಾರತೀಯ ತತ್ತ್ವಶಾಸ್ತ್ರದಲ್ಲಿ ಆಸಕ್ತಿಯಿದ್ದ ಆನಿಬೆಸೆಂಟ್ - ಇಂಥವರೊಡನೆ ಸಂಪರ್ಕಕ್ಕೆ ಬಂದುದು.

ಓದಬೇಕು ಮೂಲಪಠ್ಯ
ಯಾವುದೇ ಸಂಗತಿ, ವಿದ್ಯಮಾನ ಕುರಿತಂತೆ ಮೂಲಪಠ್ಯವನ್ನೇ ಓದಬೇಕು. ಎರಡನೆ ಮೂರನೆ ದರ್ಜೆಯ ಪುಸ್ತಕಗಳನ್ನು ಓದಬಾರದು ಎಂಬುದು ಗಾಂಧಿ ಈ ಹಂತದಲ್ಲಿ ರೂಢಿಸಿಕೊಂಡ ಇನ್ನೊಂದು ನಿಯಮ. ಗಾಂಧಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಕೆಲವು ಮಿತ್ರರು ಪ್ರಯತ್ನಿಸಿದಾಗ ಓದಿದ್ದು ಕ್ರಿಶ್ಚಿಯನ್ ಧರ್ಮದ ಇತಿಹಾಸವನ್ನು, ಬೈಬಲ್‌ನ ಮೂಲಪಠ್ಯವನ್ನು. ಎಲ್ಲ ಧರ್ಮಗಳ ಮೂಲತಿರುಳು ಒಂದೆ ಎಂಬ ನಂಬಿಕೆ ಜಾಗೃತವಾದದ್ದು ಇಂತಹ ಮೂಲ ಪಠ್ಯಗಳ ಓದಿನಿಂದಲೇ. ಎಡ್ವರ್ಡ್ ಮೈಟ್‌ಲ್ಯಾಂಡ್ ಎಂಬ ಕ್ರಿಶ್ಚಿಯನ್ ಗುರುವೊಬ್ಬನ ಚಿಂತನೆ ಮಾತ್ರ ಗಾಂಧಿಯ ಮೇಲೆ ತುಂಬಾ ಪರಿಣಾಮ ಬೀರಿತು. ಈಗ ನಮಗೆ ಬೇಕಾಗಿರುವುದು ಇನ್ನೊಂದು ಧರ್ಮವಲ್ಲ. ಈಗಾಗಲೇ ಇರುವ ಧರ್ಮಗಳ ಸರಿಯಾದ ಮತ್ತು ಪ್ರಾಮಾಣಿಕ ವ್ಯಾಖ್ಯಾನ ಎಂಬ ಮೈಟ್‌ಲ್ಯಾಂಡ್ ಚಿಂತನೆ ಮತ್ತು ಯಾವ ಧಾರ್ಮಿಕ ಗ್ರಂಥಗಳನ್ನೂ ಚಾರಿತ್ರಿಕ ದಾಖಲೆಗಳೆಂದು ಓದಬಾರದೆಂಬ ಆತನ ಸೂಚನೆ, ಧರ್ಮ ಮತ್ತು ಧಾರ್ಮಿಕ ಗ್ರಂಥಗಳನ್ನು ಕುರಿತಂತೆ ಗಾಂಧಿ ಯೋಚಿಸುವ ದಿಕ್ಕನ್ನೇ ಬದಲಾಯಿಸಿತು. ಇಲ್ಲೂ ಕೂಡ ನಾವು ಕಾಣುವುದು ಓದಿದ್ದನ್ನ ತನ್ನ ಅಂತರಂಗದ ಆಳಕ್ಕೆ ತೆಗೆದುಕೊಂಡು ತನ್ನ ನಂಬಿಕೆಗಳನ್ನೇ ಪರಿಶೀಲಿಸಿಕೊಳ್ಳುವ ಪ್ರವೃತ್ತಿಯನ್ನು.

ರಾಮಾಯಣ ಮಹಾಭಾರತಗಳು ಚಾರಿತ್ರಿಕ ಕೃತಿಗಳಲ್ಲ. ಆ ಕೃತಿಗಳಲ್ಲಿ ಚಾರಿತ್ರಿಕ ಸತ್ಯಗಳನ್ನು ಹುಡುಕುವುದು ತಪ್ಪು. ಬದಲಾಗಿ ಈ ಕೃತಿಗಳು ಮುಖ್ಯವಾಗಿ ತಾತ್ತ್ವಿಕ ಕಾವ್ಯ. ಇಂತಹ ಕಾವ್ಯಕ್ಕೊಂದು ಸುಮ್ಮನೆ ನಿರ್ದಿಷ್ಟ ಸನ್ನಿವೇಶ ಎಂಬ ನಂಬಿಕೆಗನುಗುಣವಾಗಿ ಈ ಮಹಾಕಾವ್ಯಗಳ ಮೂಲ ಆಶಯದ ಕಡೆಗೇ ನಾವು ಮನಸ್ಸು ಕೊಡಬೇಕೆಂದು ಗಾಂಧಿ ಪರಿಭಾವಿಸಿದರು. ಈ ನಂಬಿಕೆಗನುಗುಣವಾಗಿಯೇ ಗಾಂಧಿಗೆ ಚಾರಿತ್ರಿಕ ರಾಮನಲ್ಲಿ ಯಾವತ್ತೂ ಆಸಕ್ತಿಯಿರಲಿಲ್ಲ. ನಿರಂತರ ರಾಮ, ಇನ್ನೂ ಆಗುತ್ತಿರುವ ರಾಮನ ಬಗ್ಗೆಯೇ ಗಮನ. ಮಹಾಭಾರತವನ್ನು ಕೂಡ ಗಾಂಧಿ ಇದೇ ರೀತಿ ವ್ಯಾಖ್ಯಾನಿಸಿದರು. ಪಶ್ಚಿಮದವರ ಚರಿತ್ರೆಯ ಕಲ್ಪನೆಯೇ ಮೂಲಭೂತವಾಗಿ ತಪ್ಪು. ದಿನನಿತ್ಯದ ಬದುಕಿನ ಸಣ್ಣಪುಟ್ಟ ಘಟನೆಗಳು- ಬೆಳವಣಿಗೆಯ ಆಧಾರದ ಮೇಲೆಯೇ ತತ್ತ್ವಶಾಸ್ತ್ರವನ್ನು ನಿರ್ಮಿಸಬೇಕೆಂಬ ಮಹಾಭಾರತದ ತಿಳಿವಳಿಕೆಯೇ ರೋಮನ್ ಇತಿಹಾಸ ಬರೆದ ಗಿಬ್ಬನ್ ಪುಸ್ತಕಗಳ ಒಳನೋಟಕ್ಕಿಂತ ದೊಡ್ಡದು ಎಂದು ಗಾಂಧಿ ವಾದಿಸಿದರು. ಈ ರೀತಿಯ ಖಚಿತ ಮತ್ತು ವಿನೂತನ ನಿಲುವುಗಳಿಗೆ ಇವತ್ತಿನ ಚಿಂತನಕಾರರು ಬರುವುದು ಎಷ್ಟು ಕಷ್ಟ ಮತ್ತು ಯಾಕೆ ಇವರಿಗೆಲ್ಲ ಇಂತಹ ಕಷ್ಟವಾಗುತ್ತಿದೆ ಎಂದು ಯೋಚಿಸಿದಾಗ ಗಾಂಧಿ ತಮ್ಮ ಸೀಮಿತ ಓದನ್ನು ಸ್ವಂತಕ್ಕೆ ಅನ್ವಯಿಸಿಕೊಂಡು ಓದಿ-ಬರೆದು-ಚಿಂತಿಸುತ್ತಿದ್ದ ರೀತಿಯ ಮಹತ್ವ ಅರ್ಥವಾಗುತ್ತದೆ.

ರಸ್ಕಿನ್ ತಂದಿತ್ತ ಪ್ರೇರಣೆ
ಗಾಂಧಿ ಓದುತ್ತಿದ್ದ ಪುಸ್ತಕಗಳೇ ಹಾಗಿರುತ್ತಿದ್ದವೋ, ಇಲ್ಲ ಅವರು ಓದುತ್ತಿದ್ದ ರೀತಿಯಿಂದಾಗಿ ಪುಸ್ತಕಗಳು ಹಾಗೆ ಪ್ರಭಾವ ಬೀರುತ್ತಿದ್ದವೋ? ಈ ಪ್ರಶ್ನೆ ಗಾಂಧಿಯ ವ್ಯಕ್ತಿತ್ವದ ದೃಷ್ಟಿಯಿಂದ ಮಾತ್ರವಲ್ಲ, ಓದುಗನ ಸ್ಪಂದನಶೀಲತೆ ಕುರಿತಂತೆ ಇರುವ ನೂರಾರು ನವ್ಯೋತ್ತರ ಚಿಂತನೆಗಳ ದೃಷ್ಟಿಯಿಂದಲೂ ಮುಖ್ಯವಾದದ್ದು. ಸರ್ವೋದಯದ ಕಲ್ಪನೆ, ದೈಹಿಕ ಶ್ರಮದ ಮಹತ್ವ, ಜೀವರಾಶಿಗಳಲ್ಲೆಲ್ಲ ಅಂತರ್ಗತವಾಗಿರುವ ಆಧ್ಯಾತ್ಮಿಕ ಸಮಾನತೆ - ಇವನ್ನೆಲ್ಲ ಗಾಂಧಿ ತಮಗೆ ತಾವೇ ಸ್ಪಷ್ಟಗೊಳಿಸಿಕೊಂಡದ್ದು ಜಾನ್ ರಸ್ಕಿನ್‌ನ Unto this last ಎಂಬ ಕೃತಿಯ ಒಂದೇ ದಿನದ ಒಂದೇ ಪಟ್ಟಿನ ಓದಿನಿಂದ. ಹೆನ್ರಿ ಪೊಲಾಕ್ ಎಂಬ ಗೆಳೆಯ ಕೊಟ್ಟ ಈ ಪುಸ್ತಕವನ್ನು ಜೊಹಾನ್ಸ್‌ಬರ್ಗ್‌ನಿಂದ ದರ್ಬಾನ್‌ಗೆ ರೈಲಿನಲ್ಲಿ ಪ್ರಯಾಣಿಸುವಾಗ ಇಪ್ಪತ್ತನಾಲ್ಕು ಗಂಟೆಗಳಲ್ಲೇ ಓದಿ ಪುಸ್ತಕ ಮುಗಿಸುವ ಹೊತ್ತಿಗೇ ತಮ್ಮ ಜೀವನ ಶೈಲಿಯನ್ನು ಕೃತಿಗನುಗುಣವಾಗಿ ಪರಿವರ್ತಿಸಿಕೊಳ್ಳಲು ನಿರ್ಧರಿಸಿಬಿಟ್ಟರು. ಫೀನಿಕ್ಸ್ ಆಶ್ರಮದ ಸ್ಥಾಪನೆ, ಈ ಓದಿನ ಹಿನ್ನೆಲೆಯಲ್ಲೇ ಜರುಗಿದ್ದು. ಗಾಂಧಿ ಮತ್ತು ಮಿತ್ರರು ಸರಳ ಮತ್ತು ಋಜು ಜೀವನ ಪ್ರಾರಂಭಿಸಿದ್ದು ಇಲ್ಲೇ.

ಗಾಂಧಿಯ ಚರಿತ್ರೆ ಬರೆದ ಲೂಯಿ ಫಿಶರ್ ಈ ಬಗ್ಗೆ ಹೇಳುವ ಮಾತು ಕುತೂಹಲಕರವಾಗಿದೆ. ಗಾಂಧಿ ತಮ್ಮ ಇಡೀ ಜೀವನವನ್ನೆ ಪರಿವರ್ತಿಸಿಕೊಳ್ಳುವಂತದ್ದು ಜಾನ್ ರಸ್ಕಿನ್‌ನ ಪುಸ್ತಕದಲ್ಲಿ ಇದ್ದಿರಲಾರದು. ಮುಖ್ಯವಾದ ಮಾತೆಂದರೆ ಪ್ರಕೃತಿಯ ನಿಯಮ ಮತ್ತು ಲಯಕ್ಕನುಗುಣವಾಗಿ ಬದುಕಲು ಗಾಂಧಿಯಲ್ಲೇ ತುಡಿತ ಈಗಾಗಲೇ ಪ್ರಾರಂಭವಾಗಿದ್ದು ರಸ್ಕಿನ್‌ನ ಪುಸ್ತಕದ ಓದು ಗಾಂಧಿಯನ್ನು ಆ ಕಡೆ ಚಲಿಸುವಂತೆ ಮಾಡಿತಷ್ಟೆ. ಫಿಶರ್ ಹೀಗೆ ಹೇಳುತ್ತಾರೆ `ಪಠ್ಯಗಳು ತನಗೆ ಏನು ಹೇಳಬೇಕೆಂದು ಬಯಸುತ್ತಿದ್ದವೋ ಅದನ್ನೇ ಪಠ್ಯಕ್ಕೆ, ಪಠ್ಯದಿಂದ ಗಾಂಧಿ ಓದಿ ಬಿಡುತ್ತಿದ್ದರು. ಸೃಜನಶೀಲ ಓದುಗರಾಗಿದ್ದ ಗಾಂಧಿ ತಾವು ಓದುತ್ತಿದ್ದ ಪುಸ್ತಕದ ಸಹಲೇಖಕನಾಗಿ ಬಿಡುತ್ತಿದ್ದರು. ಪಠ್ಯಕ್ಕೆ ತಾನು ಕೊಡುವುದನ್ನೆಲ್ಲ ಕೊಟ್ಟು ತನಗೆ ಬೇಕಾದ್ದನ್ನು ಬಡ್ಡಿಯ ಸಮೇತ ವಾಪಾಸ್ ಪಡೆಯುತ್ತಿದ್ದರು.' ಸೆರೆಮನೆಯಲ್ಲಿ ಓದಿದ ಹೆನ್ರಿ ಡೇವಿಡ್ ಡೋರೋನ ನಾಗರಿಕ ಅಸಹಕಾರ ಕುರಿತ ಪ್ರಬಂಧಕ್ಕೆ ಕೂಡ ಗಾಂಧಿ ತೆರೆದುಕೊಂಡದ್ದು ಈ ರೀತಿಯಲ್ಲೇ. ಈ ಎರಡೂ ಕೃತಿಗಳನ್ನು ಗಾಂಧಿ ನಂತರದ ದಿನಗಳಲ್ಲಿ ಗುಜರಾತಿ ಭಾಷೆಗೆ ತರ್ಜುಮೆ ಮಾಡಿದರು.

ಛೆ ಛೆ, ಕತೆ, ಕಾದಂಬರಿ ಓದೋದೇ?!

ಗಾಂಧಿ ಓದುಗಾರಿಕೆಯ ಇನ್ನೊಂದು ವೈಶಿಷ್ಟ್ಯವೆಂದರೆ ಲಲಿತ ಬರವಣಿಗೆ ಅಥವಾ ಸೃಜನಶೀಲ ಬರವಣಿಗೆಯ ಬಗ್ಗೆ ಇದ್ದ ಕಡಿಮೆಯೆನ್ನುವಷ್ಟು ಒಲವು. ಹಿಂದ್ ಸ್ವರಾಜ್ ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ಒಂದು ಪಟ್ಟಿಯಲ್ಲಿ ಯಾವುದೇ ಕತೆ-ಕಾದಂಬರಿ ನಾಟಕಗಳಿಲ್ಲ. ಟಾಲ್‌ಸ್ಟಾಯ್‌ಯ ಆರು ಕೃತಿಗಳಿವೆ. ಆತನ ಪ್ರಸಿದ್ಧ ಕಾದಂಬರಿಗಳಿಲ್ಲ. ಆತ್ಮಕತೆ ಮತ್ತು ಸ್ವೇಚ್ಛಾ ಮನೋಭಾವವನ್ನು ಪ್ರೇರೇಪಿಸುವ ಪಶ್ಚಿಮದ ಸಾಹಿತ್ಯವನ್ನು ಯುವಕರು ಓದಬಾರದು, ಸಂಯಮ ಮತ್ತು ಚಾರಿತ್ರ್ಯವನ್ನು ಬೋಧಿಸುವ ಟಾಲ್‌ಸ್ಟಾಯ್‌ನ ನೀತಿಪರ, ಧಾರ್ಮಿಕ ಸಾಹಿತ್ಯವನ್ನು ಓದಬೇಕೆಂದು ಗಾಂಧಿ ಕರೆಕೊಟ್ಟಿದ್ದರು. ಕವಿಗಳಿಗೆ, ಲೇಖಕರಿಗೆ ತಮ್ಮ ವಾದವನ್ನು ಮಂಡಿಸಲು ಉತ್ಪ್ರೇಕ್ಷೆಯ, ಅಲಂಕಾರಗಳ ಹಕ್ಕು ಮತ್ತು ಅಗತ್ಯವಿದೆ ನಿಜ, ಹಾಗೆಂದು ನಾನು ಅವರ ವಾದವನ್ನು ಯಾವಾಗಲೂ ಒಪ್ಪಬೇಕಿಲ್ಲ ಎಂದು ರವೀಂದ್ರರನ್ನು ಕುರಿತು ತಮಾಷೆ ಮಾಡಿದ್ದರು. `ಗಗನದಲ್ಲಿ ಹಾಡುತ್ತಾ ಹಾರಾಡುತ್ತಾ ಸಂತಸದಿಂದಿರುವ ಹಕ್ಕಿಗಳ ಸುಂದರ ಚಿತ್ರವನ್ನು ಕವಿಗಳು ನೀಡುತ್ತಾರೆ. ಈ ಹಕ್ಕಿಗಳು ಈಗಾಗಲೇ ದಿನದ ಊಟ ಮುಗಿಸಿವೆ. ಹಿಂದಿನ ರಾತ್ರಿ ನಿದ್ರಿಸುವಾಗ ಧಮನಿಗಳಲ್ಲಿ ಹೊಸ ರಕ್ತ ಹರಿದಿದೆ. ಚೈತನ್ಯವೇ ಇಲ್ಲದ ಮಾನವ ಹಕ್ಕಿಗಳು ರೆಕ್ಕೆಗಳನ್ನು ಪಟಪಟ ಬಡಿಯಲು ಕೂಡ ಕಷ್ಟಪಡುವುದನ್ನು ನಾನು ನೋಡಿದ್ದೇನೆ, ನರಳುತ್ತಿರುವ ರೋಗಿಗಳಿಗೆ ಕಬೀರನ ಪದ್ಯದಿಂದೇನಾಗಬೇಕು? ಹಸಿದವರಿಗೆ ಬೇಕಾಗಿರುವುದು ಚೈತನ್ಯ ತುಂಬಲು ಬೇಕಾದ ಶಕ್ತಿಯುತ ಆಹಾರವೆಂಬ ಒಂದೇ ಒಂದು ಕವನ. ಹಸಿದವರೇ ಅದನ್ನು ಸಂಪಾದಿಸಬೇಕು. ತಮ್ಮ ಶ್ರಮದಿಂದಲೇ ಸಂಪಾದಿಸಬೇಕು.'

ಬ್ರಿಟಿಷರ ಓದುಗಾರಿಕೆಯ ರೀತಿಯ ಬಗ್ಗೆ ಗಾಂಧಿ ಗೇಲಿ ಮಾಡುತ್ತಿದ್ದರು. ದಿನಪತ್ರಿಕೆಯ ಓದೇ ಬ್ರಿಟಿಷರ ಪರಮಗುರಿ, ದಿನಪತ್ರಿಕೆಯೇ ಬ್ರಿಟಿಷರಿಗೆ ಬೈಬಲ್ ಇದ್ದಂತೆ ಎಂದೆಲ್ಲ ತಮಾಷೆ ಮಾಡುತ್ತಿದ್ದ ಗಾಂಧಿ ಶಿಸ್ತುಬದ್ಧವಾಗಿ ಓದಿದ್ದು ಯರವಾಡ ಸೆರೆಮನೆಯಲ್ಲಿ ಇದ್ದಾಗ ಮಾತ್ರ. ಎರಡು ವರ್ಷಗಳ ಕಾಲ. ಸೆರೆಮನೆಯ ಗ್ರಂಥಾಲಯದಲ್ಲಿ ಸಿಕ್ಕ ಸುಮಾರು ನೂರೈವತ್ತು ಪುಸ್ತಕಗಳಲ್ಲಿ ತತ್ತ್ವಶಾಸ್ತ್ರ, ಬೇರೆ ಬೇರೆ ಧರ್ಮದ ಗ್ರಂಥಗಳು, ನಾಗರಿಕತೆಯ ಇತಿಹಾಸ ಕುರಿತ ಪುಸ್ತಕಗಳು ಈ ಓದಿನಲ್ಲಿ ಸೇರಿವೆ. ರವೀಂದ್ರರು, ಗಯಟೆ, ಬರ್ನಾಡ್ ಶಾ, ಕಿಪ್ಲಿಂಗ್‌ರ ಕೆಲವು ಸಾಹಿತ್ಯ ಕೃತಿಗಳು ಈ ಓದಿನಲ್ಲಿ ಸೇರಿವೆ. ಗಾಂಧಿ ಯಾವ ಪುಸ್ತಕವನ್ನೂ ಕೇವಲ ಓದುತ್ತಿರಲಿಲ್ಲವಂತೆ. ಪ್ರತಿ ಪುಸ್ತಕವನ್ನು `ಅಧ್ಯಯನ' ಮಾಡುತ್ತಿದ್ದರಂತೆ. ಪ್ರತಿ ಪುಟವೂ, ಪ್ರತಿ ವಿಚಾರವೂ ಮನಸ್ಸಿನ ಆಳವನ್ನು ಪ್ರವೇಶಿಸಿ, ಮೌಲ್ಯಮಾಪನಗೊಂಡು ಸ್ವೀಕೃತವಾಗಿಯೋ, ತಿರಸ್ಕೃತವಾಗಿಯೋ, ಹೊಸದಾಗಿಯೋ ಪರಿವರ್ತನೆಗೊಂಡು ಗಾಂಧಿ ಮುದ್ರೆಯೊಡನೆ ಹೊರಬರುತ್ತಿದ್ದುವಂತೆ. ಹೀಗೆ ಹೊರಬಂದ ಸಂಗತಿಗಳಲ್ಲಿ ತನ್ನದೇನಿದೆ, ತಾನೇನಿದ್ದರೂ ಕೇವಲ ಪುಸ್ತಕದ ಪ್ರತಿಧ್ವನಿ-ಪ್ರತಿಬಿಂಬ ಎಂದು ಗಾಂಧಿ ತೇಲಿಸಿಬಿಡುತ್ತಿದ್ದರಂತೆ.

ಗಾಂಧಿ ವಿವರವಾಗಿ ಬರೆದ ಒಂದೇ ಒಂದು ಪುಸ್ತಕ ವಿಮರ್ಶೆ ಕೂಡ ಓದು-ಬರವಣಿಗೆ ಬಗ್ಗೆ ನಿರ್ದಿಷ್ಟ ಒಳನೋಟಗಳನ್ನು ನೀಡುತ್ತದೆ. ಕ್ಯಾಥರೀನ್ ಮೇಯೋ ಭಾರತದ ಸ್ಥಿತಿ ಕೊಳಕಾಗಿದೆಯೆಂದು ದರಿದ್ರವಾಗಿದೆಯೆಂದು ಆರೋಪಿಸಿ ಬರೆದ ಪುಸ್ತಕ Mother India. Young India ಪತ್ರಿಕೆಯಲ್ಲಿ ಇದನ್ನು ವಿಮರ್ಶಿಸಿ ಗಾಂಧಿ ಪುಸ್ತಕವನ್ನು ಚರಂಡಿ ಇನ್‌ಸ್ಪೆಕ್ಟರ್‌ನ ವರದಿಯಂತಿದೆಯೆಂದು ಬರೆದರು. ಪುಸ್ತಕದಲ್ಲಿರುವ ವಿಷಯ-ಮಾಹಿತಿ, ಸಂಖ್ಯಾ ವಿವರಣೆ ಎಲ್ಲವೂ ನಿಜವಾದವು, ಆದರೆ ಪುಸ್ತಕ ಮಾತ್ರ ಒಟ್ಟಾರೆಯಾಗಿ ಅಪ್ರಾಮಾಣಿಕವಾದ್ದು, ಏಕೆಂದರೆ ಭಾರತದ ಪರವಾಗಿರುವ ಒಂದೇ ಒಂದು ಸಂಗತಿಯ ಕಡೆ ಕೂಡ ಲೇಖಕಿ ಗಮನ ಕೊಟ್ಟಿಲ್ಲವೆಂದು ಸೂಚಿಸಿದರು. ಕೃತಿಯೊಂದು ವಿವರಗಳಲ್ಲಿ ಪ್ರಾಮಾಣಿಕವಾಗಿದ್ದರೂ ಒಟ್ಟಾರೆಯಾಗಿ ಅಪ್ರಾಮಾಣಿಕ ಧ್ವನಿ ಹೊಂದಿರಬಹುದೆಂಬುದು ಮಹತ್ವದ ಒಳನೋಟ.

ದಿವ್ಯ ಗದ್ಯ
ತಾನು ತನ್ನ ಒಳಚೈತನ್ಯ ಸೂಚಿಸಿದಂತೆ ಅದರ ನಿರ್ದೇಶನದಂತೆ ಬರೆಯುತ್ತಾ ಹೋಗುತ್ತೇನೆ ಎಂದು ಗಾಂಧಿ ಬರೆದುಕೊಂಡಿದ್ದರೂ, ಬರವಣಿಗೆಯಲ್ಲಿ ಕಂಡು ಬರುವ ಇನ್ನಿಲ್ಲದ ಸಂಯಮ, ಕರಾರುವಾಕ್ ಪದಗಳ ಬಳಕೆ, ಭಾಷೆಯ ನೇರ ಸ್ಪಷ್ಟ ಗುಣದ ಕಾರಣಗಳನ್ನು ಕುರಿತು ಗಾಂಧಿ ಚಿಂತಕರು ವಿಶ್ಲೇಷಿಸುತ್ತ ಬಂದಿದ್ದಾರೆ.

ಸತ್ಯ ಮತ್ತು ಅಹಿಂಸೆಯ ಶೋಧಕರು, ಆರಾಧಕರೂ ಆಗಿದ್ದ ಗಾಂಧಿಯ ಒಳ ಜೀವನ ತುಂಬಾ ತಳಮಳದಿಂದ ಕೂಡಿದುದಾಗಿತ್ತು. ಈ ತಳಮಳವನ್ನು ನಿಯಂತ್ರಿಸಲು ಆತ್ಮ ಸಂಯಮವನ್ನು ಸಾಧಿಸಲು ಗಾಂಧಿ ಮಾಡುತ್ತಿದ್ದ ನಿರಂತರ ಪ್ರಯೋಗ-ಪ್ರಯತ್ನಗಳ ಇನ್ನೊಂದು ರೂಪವೇ ಬರವಣಿಗೆಯಲ್ಲೂ ಕಾಣುತ್ತಿದ್ದ ಸಂಯಮ, ನಿಗ್ರಹ, ಸ್ಪಷ್ಟತೆ. ಸೃಜನಶೀಲ ಕಲಾವಿದರಲ್ಲಾದರೆ ಪರಿವರ್ತನೆಗೊಳ್ಳುತ್ತದೆ. `ಸತ್ಯಶೋಧನೆ'ಯೆಂಬ ಆತ್ಮಚರಿತ್ರೆ ಬರೆದಾಗಲೂ ಗಾಂಧಿ ತಮ್ಮ ಎಲ್ಲ ಅನುಭವಗಳನ್ನು ಓದುಗರ ಮೇಲೆ ಹೇರಲಿಲ್ಲ. ಯಾವ ಯಾವ ಘಟನೆಗಳನ್ನು ಹೇಗೆ, ಎಷ್ಟು ಹೇಳಬೇಕು ಎಂಬ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಕೃತಿಯುದ್ದಕ್ಕೂ ನಾವು ಕಾಣುತ್ತೇವೆ. ತನ್ನೊಳಗಿರುವುದನ್ನೆಲ್ಲ ಹೇಳಿಬಿಡುತ್ತೇನೆಂದು ಹೊರಟು ಓದುಗನನ್ನು ಸೆಳೆಯುವ, ರಂಜಿಸುವ ಪ್ರಯತ್ನ ತನ್ನ ಬರವಣಿಗೆಯಾಗಬಾರದೆಂಬ ಎಚ್ಚರ ಗಾಂಧಿಯವರಲ್ಲಿ ನಿರಂತರವಾಗಿತ್ತು. ಹೀಗೆಯೇ ಆತ್ಮಚರಿತ್ರೆಯ ಬರವಣಿಗೆ ಬೇರೆ, ಆತ್ಮರತಿ-ಸ್ವಪ್ರೇಮ ಪ್ರದರ್ಶನ ಬೇರೆ ಎಂಬ ಖಚಿತ ತಿಳಿವಳಿಕೆ ಕೂಡ. ಒಳ ಮನಸ್ಸಿನ ಕ್ಷೋಭೆ, ಒತ್ತಾಯ, ತೀವ್ರತೆ ಮತ್ತು ಸಂದೇಶಕ್ಕನುಗುಣವಾಗಿ ಮಾತ್ರವೇ ಗಾಂಧಿ ಬರೆಯುತ್ತಿದ್ದುದು. ಲಂಡನ್‌ನಿಂದ ದಕ್ಷಿಣ ಆಫ್ರಿಕಾಕ್ಕೆ ಹಡಗಿನಲ್ಲಿ ಹಿಂದಿರುಗುತಿದ್ದಾಗ ಕೇವಲ ಹತ್ತೇ ದಿನಗಳಲ್ಲಿ `ಹಿಂದ್ ಸ್ವರಾಜ್' ನಂತಹ ಮಹತ್ವದ ಕೃತಿಯನ್ನು (15ನವೆಂಬರ್‌ನಿಂದ 22ನವೆಂಬರ್1990) ಬರೆದರು - ಹಡಗಿನಲ್ಲಿ ಸಿಕ್ಕ ಕಾಗದದ ಮೇಲೆಯೇ. ಇದಕ್ಕೆ ಮುಂಚೆ ಲಂಡನ್‌ನಲ್ಲಿ ಗಾಂಧಿ ಸಾವರ್ಕರ್‌ರನ್ನು ಭೇಟಿ ಮಾಡಿದ್ದರು. ಇತರ ಹಿಂದೂ ರಾಷ್ಟ್ರೀಯವಾದಿ ಮತ್ತು ಉಗ್ರಗಾಮಿಗಳನ್ನು ಕೂಡ. ಗಾಂಧಿಯ ಮನಪರಿವರ್ತನೆಗೆ ಇವರೆಲ್ಲ ಪ್ರಯತ್ನಿಸಿದ್ದರು. ವಾದ ವಿವಾದ ನಡೆದಿತ್ತು. ಮದನ್‌ಲಾಲ್ ಧಿಂಗ್ರಾ ಉನ್ನತ ಬ್ರಿಟಿಷ್ ಆಧಿಕಾರಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದ. ತನ್ನಷ್ಟೇ ಪ್ರಾಮಾಣಿಕರೂ, ದೇಶಪ್ರೇಮಿಗಳೂ ಆದವರಾದರೂ ಹಿಂಸೆಯಲ್ಲಿ ನಂಬಿಕೆ ಇಟ್ಟವರನ್ನು ಹೇಗೆ ತನ್ನೆಡೆಗೆ ಒಲಿಸಿಕೊಳ್ಳಬೇಕೆಂಬ ಒಳತೋಟಿಯಲ್ಲಿ ಇದನ್ನು ಬರೆದರು ಗಾಂಧಿ.

ತನ್ನೊಡನೆ ವಾದ ಮಾಡುತ್ತಿರುವವರು, ತನ್ನನ್ನು ಓದುತ್ತಿರುವವನು ಕೂಡ ತನಗೆ ಸಮಾನ ಮತ್ತು ತನ್ನಷ್ಟೇ ಪ್ರಾಮಾಣಿಕ ಎನ್ನುವುದು ಬಹುತೇಕ ಕಲಾವಿದರಿಗೆ, ಬರಹಗಾರರಿಗೆ ಗೊತ್ತಿರುವುದಿಲ್ಲ. ಪ್ರತಿಯೊಬ್ಬ ಓದುಗನನ್ನು ಹೀಗೆ ಆಧ್ಯಾತ್ಮಿಕವಾಗಿ ಸಮಾನವಾಗಿ ಬಗೆಯುವ ಒಳನೋಟವು ಈವತ್ತಿನ ನಿರಚನಾವಾದಿಗಳು ಮತ್ತು ನವ್ಯೋತ್ತರ ಚಿಂತಕರು ಹೇಳುವ ಪಠ್ಯದ ತೆರೆದ ಗುಣ ಮತ್ತು ಓದುಗನ ಸ್ವಾಯತ್ತತೆಯೆ ಕಲ್ಪನೆಗಿಂತ ಎಷ್ಟೋ ಮುಂದಿದೆಯೆಂಬುದನ್ನು ಇಲ್ಲಿ ಹೇಳಲೇ ಬೇಕು.

ಚರಿತ್ರೆಗಿಂತ ನಾಗರಿಕತೆಯ ಕಲ್ಪನೆಗೆ ಹೆಚ್ಚು ಒತ್ತು ಕೊಡುತ್ತಿದ್ದ ಗಾಂಧಿ ಕ್ಷಣಕ್ಷಣವೂ ಬದುಕಿದವರು, ಬದಲಾದವರು. ಇಂಥವರ ಒಳ ಜೀವನದ ವಿವರಗಳು ಯಾವುದೇ ರೀತಿಯ ಓದು ಮತ್ತು ಬರವಣಿಗೆಯಲ್ಲೂ ಸಮಗ್ರವಾಗಿ ದಾಖಲಾಗುವುದು ಕಷ್ಟವೇ ಸರಿ. ಏಕೆಂದರೆ ಗಾಂಧಿಗೆ ಬದುಕಿನಲ್ಲಿ ನಿರರ್ಥಕ ಕ್ಷಣವೆಂಬುದೆ ಇರಲಿಲ್ಲ. 1905ರ ಮಾರ್ಚ್ 25ರ ಇಂಡಿಯನ್ ಒಪೀನಿಯನ್ ಪತ್ರಿಕೆಯ ಸಂಚಿಕೆಯಲ್ಲಿ The value of stray moments ಎಂಬ ಟಿಪ್ಪಣಿಯಲ್ಲಿ ಗಾಂಧಿ ಯಾವುದೇ ಕೆಲಸ ಮಾಡದೆ, ಕೆಲಸವನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ಕೆಲಸದ ಬಗ್ಗೆಯೇ ಸುಮ್ಮನೆ ಯೋಚಿಸುತ್ತಾ ಕಳೆದುಹೋಗುವ ನಿರರ್ಥಕ ಸಮಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಬದುಕು ಮತ್ತು ಸಮಯ ಹೀಗೆ ಸುಮ್ಮನೆ ಕಳೆದು ಹೋಗಬಾರದೆಂಬ ನಿಲುವು ಕೂಡಾ ಗಾಂಧಿಯ ಓದು ಮತ್ತು ಬರವಣಿಗೆಯ ಸ್ವರೂಪವನ್ನು ನಿರ್ಧರಿಸಿದಂತಿದೆ.

ಗ್ರಂಥ ಋಣ: Gandhi - The Writer ಭವಾನಿ ಭಟ್ಟಾಚಾರ್ಯ
The Mahatma and the poet ಸವ್ಯಸಾಚಿ ಭಟ್ಟಾಚಾರ್ಯ
Gandhi's Truth ಏರಿಕ್ ಏರಿಕ್‌ಸನ್
Content and Communication in Hind Swaraj ಡಾ.ಕೆ.ರಾಘವೇಂದ್ರ ರಾವ್ ಪ್ರಬಂಧ.

(ವಿಜಯಕರ್ನಾಟಕ ಸಾಪ್ತಾಹಿಕದ ಅಕ್ಟೋಬರ್ ಐದರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)
ಚಿತ್ರಗಳು: ವಿಕ್ರಾಂತ ಕರ್ನಾಟಕ ಕನ್ನಡ ವಾರಪತ್ರಿಕೆಯ ಕೃಪೆ.

1 comment:

ಡಿ.ಎಸ್.ರಾಮಸ್ವಾಮಿ said...

ಪ್ರಿಯ ಸತ್ಯನಾರಾಯಣ ಅವರಲ್ಲಿ, ನಮಸ್ಕಾರ. ಎಷ್ಟೋ ದಿವಸಗಳ ನಂತರ ಹೀಗೆ ನಮ್ಮ ಭೇಟಿ! ನಿಮ್ಮ ಮಗಳ ಮದುವೆ ಅಂತ ಕಂಜರ್ಪಣೆ ಹೇಳಿದರು. ಅಭಿನಂದನೆ, ಸರ್.
ನಿಮ್ಮ ಬ್ಲಾಗಿನ ಪರಿಚಯ ಇವತ್ತು ಏನೋ ಹುಡುಕುತ್ತಿದ್ದಾಗ ಅಕಸ್ಮಾತ್ ಸಿಕ್ಕಿತು. ನಿಮ್ಮ email ಕಳಿಸಿಕೊಡಿ
ds.ramaswamy@gmail.com